ವೃತ್ತಿ ಬದುಕಿನ ಕಥಾನಕ Advocate Diary

ಮೊನ್ನೆ ಓದಿ ಮುಗಿಸಿದ ಪುಸ್ತಕ " ಅಡ್ವೋಕೇಟ್ ಡೈರಿ ವೃತ್ತಿ ಬದುಕಿನ ಬುತ್ತಿ... " ಲೇಖಕರು : ಪ್ರಕಾಶ್ ವಸ್ತ್ರದ ವಕೀಲರು ವಕೀಲರು ಎಂದರೆ ಎಲ್ಲಕ್ಕೂ ವಾದ ಮಾಡುವವರು, ಸುಳ್ಳುಗಳನ್ನೇ ಸತ್ಯ ಎಂದಾಗಿಸುವವರು, ದುಡ್ಡು ಮಾಡುವವರು ಎನ್ನುವ ಋಣಾತ್ಮಕ ಅಭಿಪ್ರಾಯಗಳೇ ಜನಮಾನಸದಲ್ಲಿ ಪ್ರಚಲಿತವಾಗಿರುವಾಗ ವಕೀಲರುಗಳು ಬರೆದ ಕೃತಿಯನ್ನು ಓದುವಾಗ ಮಾತ್ರ ಇದು ಎಂತಹ ದೈವೀಕ ವೃತ್ತಿ ಎನ್ನುವ ಅರಿವು ಮೂಡುತ್ತದೆ. ನ್ಯಾಯ ಪಡೆದುಕೊಂಡವನ ಕಣ್ಣಲ್ಲಿ ತುಳುಕುವ ನೆಮ್ಮದಿಯನ್ನು ನೆನೆದಾಗ ವಕೀಲ ಎಲ್ಲಾ ವಿರೋಧಗಳನ್ನು ಎದುರಿಸಿ ಮತ್ತೆ ಮತ್ತೆ ನ್ಯಾಯದ ಪರವಾಗಿ ನಿಲ್ಲುತ್ತಿರುತ್ತಾನೆ. ಈ ಪುಸ್ತಕದಲ್ಲಿ ಲೇಖಕರು ತಾವು ನಡೆಸಿದ, ನಿರ್ವಹಿಸಿದ, ಬಗೆಹರಿಸಿದ ಪ್ರಕರಣಗಳನ್ನು ಕಥೆಯ ರೂಪದಲ್ಲಿ, 30 ಅಧ್ಯಾಯಗಳಲ್ಲಿ, ಸಾಮಾನ್ಯ ಭಾಷೆಯಲ್ಲಿ ಬರೆದಿದ್ದಾರೆ. ನ್ಯಾಯಾಲಯಗಳು ಎಂದರೆ ವಾದಿ ಪ್ರತಿವಾದಗಳಿಗೆ ಇರುವ ವೇದಿಕೆಯಲ್ಲ. ಅಲ್ಲಿ ನೂರೆಂಟು ನೋವುಗಳು ಮೌನವಾಗಿರುತ್ತವೆ, ಹತ್ತಾರು ಸಂತೋಷಗಳು ಬಾಗಿಲಿನಿಂದ ಹೊರಬಂದಿರುತ್ತವೆ. ಇವುಗಳಿಗೆ ಅರ್ಥ ಏನು ಎಂದು ಹುಡುಕಹೊರಟವರು ಈ ಪುಸ್ತಕ ಮತ್ತು ಇಂತಹ ಪುಸ್ತಕಗಳನ್ನು ಓದಬೇಕು.