Livin Relationship ಬಗ್ಗೆ ಸಮಗ್ರ ಕಾನೂನು ಮಾಹಿತಿ
ಒಮ್ಮೆ ಪದವಿ ಕಾಲೇಜಿನ ವಿದ್ಯಾರ್ಥಿಗಳ ಜೊತೆಗಿನ ಸಂವಾದದ ವಿಷಯ ’ಮದುವೆಗೆ ಮುನ್ನ. . . ’ ಎಂದಿತ್ತು. ಹದಿಹರೆಯಕ್ಕೂ ಮೊದಲೇ ಪ್ರೀತಿ ಪ್ರೇಮ ಎನ್ನುವ ಭಾವ ಸ್ಫುರಣೆಯಿಂದ ಹಿಡಿದು ಐವತ್ತು ವರ್ಷಗಳ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವವರೆಗೂ ಯುವಕ ಯುವತಿಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದರು. ಒಬ್ಬಳು ಯುವತಿ ’ನೋಡಿ ಮೇಡಮ್ ಯಾವುದೇ ಮದುವೆ ಮುರಿದು ಬಿದ್ದರೂ ಸಾಮಾನ್ಯವಾಗಿ ಹುಡುಗಿಯದ್ದೇ ತಪ್ಪು ಎನ್ನುವ ಮಾತೇ ಕೇಳಿ ಬರುತ್ತದೆ. ಆದರೆ ವಾಸ್ತವದಲ್ಲಿ ಅದು ಲವ್ ಮ್ಯಾರೇಜ್ ಇರಲಿ ಅಥವಾ ಅರೇಂಜ್ಡ್ ಮದುವೆಯೇ ಆಗಿರಲಿ ಆ ಹುಡುಗ ಹುಡುಗಿಯ ಮಧ್ಯೆ ಏನು ನಡೆದಿರುತ್ತದೆ ಎನ್ನುವುದು ಅವರಿಬ್ಬರಿಗೆ ಮಾತ್ರ ಗೊತ್ತಿರುತ್ತದೆ. ಸ್ವಭಾವದಲ್ಲಿ ಏನಾದರೂ ಹೆಚ್ಚು ಕಡಿಮೆ ಇದ್ದರೆ ಈಗೆಲ್ಲಾ ಆಪ್ತಸಮಾಲೋಚನೆ ಪಡೆಯುವ ಅನುಕೂಲ ಇದೆ ಹಾಗಾಗಿ ಸರಿಪಡಿಸಿಕೊಳ್ಳಬಹುದು. ಆದರೆ ದೈಹಿಕ ಹೊಂದಾಣಿಕೆ (Compatibility) ಇಲ್ಲದಿದ್ದರೆ ಯಾರಿಗೂ ಹೇಳಿಕೊಳ್ಳಲೂ ಆಗುವುದಿಲ್ಲ ಹಾಗಂತ ಜೀವನ ಪೂರ್ತೀ ಅನುಭವಿಸಲೂ ಆಗಲ್ಲ. ಅದಕ್ಕೆ ಮದುವೆಗೆ ಮುನ್ನ ಲಿವಿನ್ ರಿಲೇಷನ್‍ಶಿಪ್‍ನಲ್ಲಿ ಇದ್ದು ನಂತರ ಮದುವೆ ಆಗುವುದೇ ಒಳ್ಳೆಯದು’ ಎಂದಳು. ಆಕೆಯ ಮಾತುಗಳನ್ನು ಕೇಳಿದಾರಭ್ಯ ಈ ಸಂಬಂಧವನ್ನು ಹೊಸದೊಂದು ಆಯಾಮದಿಂದ ಅರ್ಥೈಸಿಕೊಳ್ಳುವ ಅವಕಾಶ ಸಿಕ್ಕಿತು. ಮದುವೆ ಎನ್ನುವುದು ಜೀವನದ ಅಂತಿಮ ಗುರಿ ಎನ್ನುವ ಮನೋಭಾವದಿಂದ ಸಮಾಜವು ಅದೊಂದು ಆಯ್ಕೆ ಎನ್ನುವಲ್ಲಿಗ...