ಇವತ್ತು ಮೈಸೂರಿನ ಆಂದೋಲನ ಪತ್ರಿಕೆಯಲ್ಲಿ..... ಅವತ್ತು ನನಗೆ 18 ತುಂಬಿದ ಮಾರನೆಯ ದಿನವೇ ಮತದಾರ ಗುರುತಿನ ಚೀಟಿ ಮಾಡಿಸಿಕೊಟ್ಟರು ನನ್ನ ತಂದೆ. ಇದೊಂದೇ ಗುರುತಿಗಾಗಿ 18 ಆಗುವುದನ್ನೇ ಕಾಯುತ್ತಿದ್ದೆ. ಆಗ ತಿಳಿದೇ ಇರಲಿಲ್ಲ ಕಾಲ ಮತ್ತು ಹರೆಯ ಇಬ್ಬರದ್ದೂ ಗಳಸ್ಯ ಕಂಠಸ್ಯ ಜೋಡಿ ಎಂದು ಮತ್ತು ಅವರುಗಳ ಬಂಡಿಗೆ ರಿವರ್ಸ ಗೇರ್ ಇರುವುದಿಲ್ಲ ಎಂದು. ಕೈಯಲ್ಲಿ ವೋಟರ್ಸ್ ಐಡಿ ಇತ್ತು, ಮತ ಹಾಕಲೇ ಬೇಕು ಎನ್ನುವ ಹಠವೂ ಜೊತೆಯಾಗಿತ್ತು. ಆದರೇನು ಮಾಡುವುದು ಆಗ ಮೈಸೂರಿನಲ್ಲಿ ಕಾರ್ಪೊರೇಷನ್ ಚುನಾವಣೆಯೂ ಇರಲಿಲ್ಲ. ಅಂದು ಈಗಿನಷ್ಟು ಸರಾಗವಾಗಿ ಸರ್ಕಾರ ಬೀಳುವ ಭಯವಾಗಲೀ, ಪದ್ದತಿಯಾಗಲೀ ಇರಲಿಲ್ಲ. ಹಾಗಾಗಿ ಮತ್ತೆರಡು ವರ್ಷ ಕಾದೆ ಬೆರಳು ಮಸಿ ಮಾಡಿಕೊಳ್ಳಲು. ನಂತರದ ಒಂದು ಅವಕಾಶವನ್ನೂ ಬಿಡದೆಯೇ ಮತ ಚಲಾಯಿಸಿದ್ದೇನೆ ಎನ್ನುವ ಹೆಮ್ಮೆಯೊಂದಿಗೇ ವಯಸ್ಸು ರಾಜಕೀಯ ನಿಲುವುಗಳಷ್ಟೇ ಅತಂತ್ರದಿಂದ ಓಡುತ್ತಿದೆ. ಮೊನ್ನೆಮೊನ್ನೆಯವರೆಗೂ, ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಓಡಿ ಬರುತ್ತಿದ್ದೆ ಮೈಸೂರಿಗೆ, ನನ್ನೂರಿಗೆ ಅವಳಾತ್ಮದ ಒಂದು ತುಣುಕೇ ಆದ ನಾನು ಮತಹಾಕಲು. ಈಗ ಬದುಕು ಕಲಿಸಿದೆ ತವರು ನೆಲದಲ್ಲೋ, ಅನ್ನ ಕೊಡುತ್ತಿರುವ ಭೂಮಿಯಲ್ಲೋ ರಾಜಕಾರಣಿಗಳೆಲ್ಲಾ ಒಂದೇ ಎಂದು ಹಾಗಾಗಿ ಮತಗುರುತಿನ ಚೀಟಿಯನ್ನು ಈ ಊರಿನ ವಿಳಾಸಕ್ಕೆ ಬದಲಾಯಿಸಿಕೊಂಡಿದ್ದೇನೆ ಆದರೆ ತಪ್ಪದ ಮತ ಹಾಕುವ ನನ್ನ ಚಾಳಿಯನ್ನಲ್ಲ. ಅನುಸರಿಸಿಕೊಂಡು ಬಂದ ಪದ್ದತಿಯನ್ನ...