Garden of caves -Meghalays

ಅದೊಂದು ದಟ್ಟ ಅರಣ್ಯ. ಅರಣ್ಯ ಎಂದಮೇಲೆ ನೂರೆಂಟು ರಹಸ್ಯವೂ ಜೊತೆಯಾಗಿತ್ತು. ಎಂಟು ಎಕರೆಗಳ ಜಾಗದಲ್ಲಿ ಪರ್ವತದಿಂದ ಇಳಿದು ಪ್ರಪಾತದಲ್ಲಿ ಪ್ರಕೃತಿ ಗುಹೆಯಾಗಿ ಮೈಚಾಚಿದ್ದಳು. ಗುಹೆ ಎಂದರೆ ಬರಿಯ ಗುಹೆಯಲ್ಲವೋ ಜಾಣ ಎನ್ನುತ್ತಾ ಒಳಗೆ ಹನ್ನೊಂದು ಜಲಪಾತಗಳಲ್ಲಿ ಹರಿಯುತ್ತಿದ್ದಳು. ಎಪ್ಪತ್ತೆರಡು ಬೆಟ್ಟೇಣುಗಳಲ್ಲಿ ಗುಟ್ಟಾಗಿದ್ದಳು. ಹತ್ತಾರು ತಾಮ್ರ ಬಣ್ಣದ ಮೂಲವೇ ಕಾಣದಂತೆ ನೇತಾಡುವ ಕಲ್ಪದರುಗಳ ಜೋಕಾಲಿಯಾಗಿದ್ದಳು. ಪಕ್ಕದಲ್ಲಿ ಹಸಿರಾಗಿ ಹಬ್ಬಿದ್ದಳು. ಹಕ್ಕಿಯ ಕಲರವಕ್ಕೆ ತಾವು ನೀಡುತ್ತಾ ನಡುನಡುವೆ ಬೆಳಕಿನ ಕಿಂಡಿಯಾಗಿ ದೂರದ ಆಕಾಶ ತೋರುತ್ತಿದ್ದಳು. ನುಣುಪು ಚಿಕ್ಕ್ಬಂಡೆಯಲ್ಲಿ ತೂಕಡಿಸುತ್ತಾ ಹಾಸಿಗೆಯಾಗಿದ್ದಳು ಅದಕ್ಕೆ ಸಪೂಟಾದ ಕಲ್ಲನ್ನೇ ದಿಂಬಿನ ಆಕಾರದಲ್ಲಿ ಅರಳಿಸಿದ್ದಳು. ದುಂಬಿಗಾಗಿ ಹೂವಾಗಿದ್ದಳು. ಹೃದಯಾಕಾರದ ಹಾಸುಕಲ್ಲಿನಲ್ಲಿ ನೀರು ನಿಲ್ಲಿಸಿ ಕನ್ನಡಿಯಾಗಿದ್ದಳು. ಹೀಗೆಲ್ಲಾ ಇದ್ದ ಪ್ರಕೃತಿ ಸಿಕ್ಕಿದ್ದು ಖಸಿ ಪರ್ವತಶ್ರೇಣಿಯ ನಟ್ಟ ನಡುವಿನಲ್ಲಿ. ಚಿರಾಪುಂಜಿಯಿಂದ ಹತ್ತು ಕಿಲೋಮೀಟರ‍್ಗಳ ಅಂತರದಲ್ಲಿ. ಮೇಘಾಲಯದಲ್ಲಿ. ನೂರಕ್ಕೂ ಮಿಗಿಲಾದ ಗುಹೆಗಳನ್ನು ತನ್ನೊಳಗೆ ಇರಿಸಿಕೊಂಡಿರುವ ರಾಜ್ಯ ಮೇಘಾಲಯ. ಏಕಶಿಲಾ ಗುಹೆ ಅಂತ ಒಂದು ಜಾಗವನ್ನು ತೋರಿಸಿದ್ದ ಚಾಲಕ ಬುರಿತ್. ಯಾಕೋ ಪ್ರವಾಸಿಗರನ್ನು ಉತ್ಪ್ರೇಕ್ಷೆಯಲ್ಲಿಯೇ ಕರೆಯುತ್ತಿದೆ ಎನ್ನಿಸಿತು ಆ ಜಾಗ. “ಏನು ಬುರಿತ್ ಅಷ್ಟು ದೂರದಿಂದ ಬಂದವಳನ್ನು ಈ ಗುಹೆ ತೋರಿಸಿ ನಿರಾ...