Garden of caves -Meghalays

 

ಅದೊಂದು ದಟ್ಟ ಅರಣ್ಯ. ಅರಣ್ಯ ಎಂದಮೇಲೆ ನೂರೆಂಟು ರಹಸ್ಯವೂ ಜೊತೆಯಾಗಿತ್ತು. ಎಂಟು ಎಕರೆಗಳ ಜಾಗದಲ್ಲಿ ಪರ್ವತದಿಂದ ಇಳಿದು ಪ್ರಪಾತದಲ್ಲಿ ಪ್ರಕೃತಿ ಗುಹೆಯಾಗಿ ಮೈಚಾಚಿದ್ದಳು. ಗುಹೆ ಎಂದರೆ ಬರಿಯ ಗುಹೆಯಲ್ಲವೋ ಜಾಣ ಎನ್ನುತ್ತಾ ಒಳಗೆ ಹನ್ನೊಂದು ಜಲಪಾತಗಳಲ್ಲಿ ಹರಿಯುತ್ತಿದ್ದಳು. ಎಪ್ಪತ್ತೆರಡು ಬೆಟ್ಟೇಣುಗಳಲ್ಲಿ ಗುಟ್ಟಾಗಿದ್ದಳು. ಹತ್ತಾರು ತಾಮ್ರ ಬಣ್ಣದ ಮೂಲವೇ ಕಾಣದಂತೆ ನೇತಾಡುವ ಕಲ್ಪದರುಗಳ ಜೋಕಾಲಿಯಾಗಿದ್ದಳು. ಪಕ್ಕದಲ್ಲಿ ಹಸಿರಾಗಿ ಹಬ್ಬಿದ್ದಳು. ಹಕ್ಕಿಯ ಕಲರವಕ್ಕೆ ತಾವು ನೀಡುತ್ತಾ ನಡುನಡುವೆ ಬೆಳಕಿನ ಕಿಂಡಿಯಾಗಿ ದೂರದ ಆಕಾಶ ತೋರುತ್ತಿದ್ದಳು. ನುಣುಪು ಚಿಕ್ಕ್ಬಂಡೆಯಲ್ಲಿ ತೂಕಡಿಸುತ್ತಾ ಹಾಸಿಗೆಯಾಗಿದ್ದಳು ಅದಕ್ಕೆ ಸಪೂಟಾದ ಕಲ್ಲನ್ನೇ ದಿಂಬಿನ ಆಕಾರದಲ್ಲಿ ಅರಳಿಸಿದ್ದಳು. ದುಂಬಿಗಾಗಿ ಹೂವಾಗಿದ್ದಳು. ಹೃದಯಾಕಾರದ ಹಾಸುಕಲ್ಲಿನಲ್ಲಿ ನೀರು ನಿಲ್ಲಿಸಿ ಕನ್ನಡಿಯಾಗಿದ್ದಳು. ಹೀಗೆಲ್ಲಾ ಇದ್ದ ಪ್ರಕೃತಿ ಸಿಕ್ಕಿದ್ದು ಖಸಿ ಪರ್ವತಶ್ರೇಣಿಯ ನಟ್ಟ ನಡುವಿನಲ್ಲಿ. ಚಿರಾಪುಂಜಿಯಿಂದ ಹತ್ತು ಕಿಲೋಮೀಟರ‍್ಗಳ ಅಂತರದಲ್ಲಿ. ಮೇಘಾಲಯದಲ್ಲಿ.

ನೂರಕ್ಕೂ ಮಿಗಿಲಾದ ಗುಹೆಗಳನ್ನು ತನ್ನೊಳಗೆ ಇರಿಸಿಕೊಂಡಿರುವ ರಾಜ್ಯ ಮೇಘಾಲಯ. ಏಕಶಿಲಾ ಗುಹೆ ಅಂತ ಒಂದು ಜಾಗವನ್ನು ತೋರಿಸಿದ್ದ ಚಾಲಕ ಬುರಿತ್. ಯಾಕೋ ಪ್ರವಾಸಿಗರನ್ನು ಉತ್ಪ್ರೇಕ್ಷೆಯಲ್ಲಿಯೇ ಕರೆಯುತ್ತಿದೆ ಎನ್ನಿಸಿತು ಆ ಜಾಗ. “ಏನು ಬುರಿತ್ ಅಷ್ಟು ದೂರದಿಂದ ಬಂದವಳನ್ನು ಈ ಗುಹೆ ತೋರಿಸಿ ನಿರಾಸೆ ಮಾಡಿಬಿಟ್ಟೆಯಲ್ಲ” ಎಂದು ಅಲವತ್ತುಕೊಂಡೆ. “ಈಗ ನನಗೆ ನಿಮ್ಮ ಅಭಿರುಚಿ ಗೊತ್ತಾಗಿದೆ. ಬನ್ನಿ ಒಂದು ಸೀಕ್ರೇಟ್ ಜಾಗಕ್ಕೆ ಕರೆದುಕೊಂಡು ಹೋಗುತ್ತೆನೆ. ಅಲ್ಲಿಗೆ ಹೆಚ್ಚಿನ ಪ್ರವಾಸಿಗರು ಬರಲ್ಲ. ಅದಕ್ಕಿಂತ ಸುಂದರ ಜಾಗ ಈ ಭೂಮಿ ಮೇಲೆ ಇರಲು ಸಾಧ್ಯವೇ ಇಲ್” ಎನ್ನುತ್ತಾ ತೆಳುನಗುವಿನ ಮುಖದಲ್ಲಿ ಡ್ರೈವ್ ಮಾಡುತ್ತಾ ಕಾರು ತಂದು ನಿಲ್ಲಿಸಿದ ’ಗಾರ್ಡನ್ ಆಫ್ ಕೇವ್ಸ್’ ಎನ್ನುವ ಬೋರ್ಡಿನ ಮುಂದೆ. ನೂರು ರೂಪಾಯಿಯ ಪ್ರವೇಶ ಶುಲ್ಕ ಕೊಟ್ಟು ಒಳ ಹೊಕ್ಕಾಗ ಕಲ್ಲಿನ ಗುಡಿಸಿಲಿನಂತಹ ಕಚೇರಿಯ ಬಾಗಿಲಲ್ಲಿ ನಿಂತು ಸ್ವಾಗತಿಸಿದವಳು ರಿತ್ ರಾಣಿ. ಅಲ್ಲಿನ ಮ್ಯಾನೇಜರ್ ಎಂದು ಗುರುತಿಸಿಕೊಂಡ ಯುವತಿ ವಿಪರೀತ ಸುಂದರಿ. ಖಸಿ ಬುಡಕಟ್ಟಿನ ಹೆಂಗಸರು ಹಾಕಿಕೊಳ್ಳುವಂತೆ ದುಪ್ಪಟ್ಟಾದಂತಹ ಎರಡು ಬಟ್ಟೆಗಳನ್ನು ಮುಖಾಮುಖಿಯಾಗಿ ಸುತ್ತಿ ಎರಡು ಭುಜಗಳ ಮೇಲೆ ಗಂಟು ಹಾಕಿಕೊಳ್ಳುವ ’ಜಿಂಫಾಂಗ್’ ಧರಿಸಿದ್ದಳು.


ಆ ಸ್ಥಳದಲ್ಲಿ ಏನೇನಿದೆ ಅವುಗಳನ್ನು ನೋಡಲು ಹೇಗೆ ಹೋಗಬೇಕು ಎಷ್ಟು ಸಮಯ ಬೇಕಾಗುತ್ತದೆ ಎನ್ನುವ ವಿವರ ಒಟ್ಟು ಹನ್ನೊಂದು ಜಾಗಗಳ ಕ್ಲುಪ್ತ ಪರಿಚಯ ಮಾಡಿಸಿ ಪ್ರತೀ ಕಡೆಯಲ್ಲಿಯೂ ಸಹಾಯಕರು ಇರುತ್ತಾರೆ ಎನ್ನುವುದನ್ನೂ ಹೇಳಿ ಬೀಳ್ಕೊಟ್ಟಳು. ಆಕೆಯಿಂದ ಎಡಕ್ಕೆ ಹೊರಳಿ ಹತ್ತು ಹೆಜ್ಜೆ ಹೋದಾಗ ಸಿಕ್ಕಿದ್ದು ಬಂಡೆಯೊಳಗಿನ ಕೋಣೆಯಂತಹ ಜಾಗ ಅಲ್ಲೊಂದು ಜಲಪಾತ ಅದರ ಎಡ ನೇರಕ್ಕೆ ಎದುರಾಗಿ ಮಂಚ ದಿಂಬಿನಂತಹ ಬಂಡೆ. ಈ ಜಾಗದ ಸೌಂದರ್ಯದ ಬಗ್ಗೆ ಬುರಿತ್ ಹೇಳಿದ ಮಾತು ನಿಜವಾಗಲಿದೆ ಎನ್ನುವ ಸಾಕ್ಷಿ ಅಲ್ಲಿ ಆರಂಭವಾಯಿತು. ನಂತರ ಕಂಡ ಅಷ್ಟೂ ಜಾಗಗಳು ’ಈ ಹಸಿರು ಸಿರಿಯಲಿ ಮನಸು ಮೆರೆಯಲಿ’ ಎಂದು ರಾಗವಾಗಿ ನನ್ನನ್ನು ಕುಣಿಸುತ್ತಿತ್ತು.

ಇದರ ಮೂಲ ಹೆಸರು ’ಕ ಬ್ರಿ ಕಿ ಸ್ಯ್ಂಗ್ರಂಗ್’. ನೂರಾರು ವರ್ಷಗಳ ಹಿಂದೆ ಮಾಫೌ ಮತ್ತು ಲೈತ್ನಿಯಂ ಬಡಕಟ್ಟುಗಳ ನಡುವೆ ಕಾಡಿನ ಮೇಲಿನ ಅಧಿಕಾರಕ್ಕಾಗಿ ಸೆಣೆಸಾಟ ನಡೆದಾಗ ಲೈತ್ನಿಯಂ ಬುಡಕಟ್ಟಿನ ಜನರನ್ನು ಆ ಜನರ ರಾಜ ಭುಸಿಂಗ್ ಸಿಯೇಮ್‍ನು ಸುತ್ತಲಿನ ಮೂವತ್ತೊಂದು ಹಳ್ಳಿಗಳ ಜನರನ್ನು ಕರೆತಂದು ಈ ಗುಹೆಯಲ್ಲಿ ರಕ್ಷಿಸಿದ್ದನಂತೆ. ಗೆಲುವಿನ ನಂತರ ಈ ಗುಹೆ ಆತನ ರಾಜಾಸ್ಥಾನವಾಗಿತ್ತಂತೆ.

ಸ್ನಾನಕ್ಕೊಂದು ಗುಹೆ, ಶೌಚಕ್ಕೊಂದು, ಅಡುಗೆಗೊಂದು, ಸಚಿವಾಲಯವಾಗೊಂದು, ಶೃಂಗಾರಕ್ಕೆ ಮತ್ತೊಂದು ಹೀಗೆ ಬಂಡಗಳಲ್ಲಿ ಸಹಜ ಗುಹೆಗಳು ಅದಕ್ಕೆ ತಕ್ಕಂತೆ ಝರಿ ಜಲಪಾತಗಳು, ಎಲ್ಲೆಲ್ಲಿಗೆ ಎಷ್ಟು ಬೇಕೋ ಅಷ್ಟು ಮಾತ್ರ ಬೆಳಕಿನ ವ್ಯವಸ್ಥೆ ಎಲ್ಲವನ್ನೂ ಯಾವ ಆರ್ಕಿಟೆಕ್ಟ್ ಕೂಡ ಊಹಿಸಲಾರದಷ್ಟು ಅಚ್ಚುಕಟ್ಟಾಗಿ ಪ್ರಕೃತಿ ಕಟ್ಟಿ ಕೊಟ್ಟಿದೆ ’ಗಾರ್ಡನ್ ಆಫ್ ಕೇವ್ಸ್’ ಅನ್ನು. 
 ಮಾತು ’ಇದು ನಿನಗಾಗಿ’ ಎಂದು ಮೌನಕ್ಕೆ ಈ ಗುಹೆಯನ್ನು ಪ್ರೀತಿಯಿಂದ ಉಡುಗೊರೆ ಕೊಟ್ಟಂತೆ ಆಹ್ಲಾದದ ಮನೋಗಾಥೆ ಅಲ್ಲಿತ್ತು.

ಹೀಗಿದ್ದ ಸೌಂದರ್ಯ ಮಳೆಯಿಂದಾದ ಕೊಚ್ಚೆ, ಮರಳುಗಲ್ಲ್ಗಳ ರಾಶಿಯಲ್ಲಿ ಗುಹಾಂತರವಾಗಿಬಿಟ್ಟಿತ್ತು. ಮನುಷ್ಯ ಮಾತು ಬೆಳೆಸುತ್ತಾ ಹೋದಂತೆ ಮೌನಗುಹೆ ಭ್ರಮನಿರಸನಗೊಂಡು ಯಾರಿಗೂ ಸುಳಿವು ಬಿಡದೆ ಮಾಯವಾಗಿಬಿಟ್ಟಿತ್ತು. 2019ರಲ್ಲಿ ಮೇಘಾಲಯದಲ್ಲಿ ಬಿರುಸಿನಿಂದ ಎಡೆಬಿಡದೆ ಸುರಿದ ವರುಣ ಈ ಸುಂದರಿಯ ಒಂದು ಚುಂಗನ್ನು ಭೂಮಿಯಿಂದ ಮೇಲೆತ್ತಿಯೇ ಬಿಟ್ಟ. ಮೇಘಾಲಯದ ಪಾರ್ಕ್ ಮತ್ತು ಗುಹೆಗಳ ಸಮಿತಿಯವರು ಉತ್ಖನನ ಮಾಡಿ 24 ಏಪ್ರಿಲ್ 2019ರಂದು ಇದರ ಪರಿಚಯವನ್ನು ಮತ್ತೊಮ್ಮೆ ಮಾಡಿಸಿದ್ದಾರೆ. ಕಲ್ಪನೆಗೆ ಮಿತಿಯಿದೆ ಆದರೆ ಅಲ್ಲಿನ ಸುಂದರತೆಗೆ ಅಲ್ಲ. ಪುನರ್ಯೌವನ ಗಳಿಸಲು ರೆಸಾರ್ಟ್‍ಗೆ ಹೋಗುವ ಜನಕ್ಕೆ ಅಪರಿಮಿತ ಸೌಂದರ್ಯ ಆಸ್ವಾದಿಸಲು ಇತಿಹಾಸ ತಿಳಿಯಲು ನೀರಿನೊಡನೆ ಸಂವಾದ ಮಾಡಲು, ನೀರವತೆಯೊಡನೆ ನೆಮ್ಮದಿಯಾಗಲು ಪ್ರಕೃತಿ ಕೊಟ್ಟ ದೊಡ್ಡ ಅವಕಾಶ ಗಾರ್ಡನ್ ಆಫ್ ಕೇವ್ಸ್. ’ಇಲ್ಲಿಗೆ ಹೆಚ್ಚು ಜನರು ಬರುವುದಿಲ್ಲ’ ಎಂದ ಚಾಲಕನ ಮಾತು ನೆನಪಾಗುತ್ತಿತ್ತು ಬಹುಶಃ ಒಳಗೇ ಮನಸ್ಸು ಖುಷಿಯಾಗುತ್ತಿತ್ತು. ಬುಡಕಟ್ಟು ಜನರ ಆಚಾರ, ಜೀವನ ಶೈಲಿಯ ಬಗ್ಗೆ ಪುಸ್ತಕಗಳಲ್ಲಿ ಒಮ್ಮೊಮ್ಮೆ ರಸವತ್ತಾಗಿಯೋ ಬಹುಪಾಲು ನೀರಸವಾಗಿಯೋ ಪರಿಚಯ ಇರುವವರಿಗೆ ಸಿನೆಮಾಗಳಲ್ಲಿ ಅವರುಗಳನ್ನು ವಿಕಾರವಾಗಿ, ದಡ್ಡರಂತೆ ಚಿತ್ರಿಸಿರುವ ನೆನಪೇ ಆಗುವುದು. ಆದರೆ ಇಂತಹ ಸ್ಥಳಗಳಿಗೆ ಭೇಟಿ ಇತ್ತಾಗ ಅವರುಗಳ ಜ್ಞಾನವೂ ಅವರ ಸಂಸ್ಕೃತಿಯಷ್ಟೇ ಉತ್ಕೃಷ್ಟ ಮತ್ತು ಮನೋರಂಜಿತ ಎನ್ನುವುದು ವೇದ್ಯವಾಗುತ್ತದೆ. ಅಂದಹಾಗೆ ಹೇಳಲೇ ಬೇಕಾದ ಮತ್ತೊಂದು ವಿಷಯವೆಂದರೆ ಅಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮ್ಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಅಲ್ಲಿನ ಸರ್ಕಾರ ಎಂಭತ್ತೆರಡು ಜನರಿಗೆ ಕೆಲಸ ಕೊಟ್ಟಿದೆ. ಇಂತಹ ಅನುಪಮ ಜಾಗ ತೋರಿಸಿದ್ದಕ್ಕೆ ಥ್ಯಾಂಕ್ಸ್ ಹೇಳಬೇಕು ಬುರಿತ್‍ಗೆ ಎಂದುಕೊಂಡು ಹೊರಬಂದಾಗ ವಾತಾವರಣದಲ್ಲಿ ತಣಿವು ಏರುತ್ತಿತ್ತು, ಸೂರ್ಯ ಬೆಂಗಳೂರಿನಲ್ಲಿ ಸಿಗುತ್ತೇನೆ ಎನ್ನುವ ಷರಾ ಬರೆದು ಹೋಗಿ ನಾಲ್ಕು ದಿನವೇ ಆಗಿತ್ತು.
**************************


Comments

  1. ವಾವ್... ಪ್ರಕೃತಿ ಮಾತೆಯ ಸುಂದರ ಸೃಷ್ಟಿಯನ್ನು ನಿಮ್ಮ ಮಾತುಗಳಲ್ಲಿ ಪೋಣಿಸಿ, ಓದುಗರಿಗೆ ಉಣಬಡಿಸಿದ ನಿಮಗೆ ಧನ್ಯವಾದಗಳು ಅಂಜಲಿ.

    ReplyDelete

Post a Comment

Popular posts from this blog

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್