Lord Rama in Indonesia

ಅದು ಬಾಲಿ ದ್ವೀಪ ಪ್ರವಾಸದ ಕೊನೆಯ ದಿನ. ಉಬುದ್ ಎನ್ನುವ ಸ್ಥಳದಿಂದ ಚಾಲಕ ಪುತು ಅಲಿತ್ ಅಸ್ತಿನಪುತ್ರನ ಜೊತೆ ಪಯಣ ಶುರುವಾಗಿತ್ತು I Gusti Ngurah Rai International ವಿಮಾನ ನಿಲ್ದಾಣದ ಕಡೆಗೆ. ’ಮಹಾಮೃತ್ಯುಂಜಯ ಸ್ತೋತ್ರವನ್ನು ರೆಕಾರ್ಡ್ ಮಾಡಿ ಕೊಡಿ’ ಎನ್ನುತ್ತಾ ತನ್ನ ಮೊಬೈಲ್ ಅನ್ನು ಕೈಗಿತ್ತಿದ್ದ ಅಲಿತ್. ಸಮಯ ಜಾರಿದ ದು:ಖದಲ್ಲಿ ವಿಷಾದ ಗೀತೆಯೊಂದನ್ನು ಹಾಡಿಕೊಳ್ಳುವ ಚಣ ಮೊದಲು ಅಲಿತ್ ’ಅಲ್ಲಿ ನೋಡಿ ರಾಮ’ ಎನ್ನುತ್ತಾ ವಾಹನ ದಟ್ಟಣೆಯಿದ್ದ ಒಂದು ಹೆದ್ದಾರಿಯ ಬದಿಯಲ್ಲಿ ಕಾರ್ ನಿಲ್ಲಿಸಿದ. ಬಾಲಿಯ ರಸ್ತೆಗಳಲ್ಲಿ ಮಹಾಭಾರತ ಮತ್ತು ರಾಮಾಯಣದ ಹಲವಾರು ವ್ಯಕ್ತಿ ಚಿತ್ರಣಕ್ಕೆ ದೊಡ್ಡದೊಡ್ಡ ಮೂರ್ತ ರೂಪಕೊಟ್ಟು ಶಿಲ್ಪಗಳನ್ನು ಇಟ್ಟಿದ್ದಾರೆ. ರಸ್ತೆಗಳಲ್ಲಿ, ಸಿರಿವಂತರ ಮನೆಗಳ ಮುಂದೆ, ಅಲ್ಲಿನ ರಾಜನ ಅರಮನೆಯ ಹೆಬ್ಬಾಗಿಲಿನಲ್ಲಿ, ಮ್ಯೂಸಿಯಮ್ ಮತ್ತು ರಾಜಕೀಯ ಮುಖಂಡರುಗಳ ಕಚೇರಿಯ ಎದುರು ಹನುಮನ ಮೂರ್ತಿ ನೋಡಲು ಸಿಕ್ಕಿತ್ತು. ಅವನಿಗೆ ಅಲ್ಲಿ ಮನೆಯೊಳಗೆ ಜಾಗವಿಲ್ಲ. ಬ್ರಹ್ಮ ವಿಷ್ಣು ಮಹೇಶ್ವರರನ್ನು ದೇವರು ಎಂದು ಪ್ರಾರ್ಥಿಸುವ, ಪೂಜಿಸುವ ಇಂಡೋನೇಷಿಯಾ ಹಿಂದುಗಳು ಹನುಮ ದೇವರಲ್ಲ ದ್ವಾರಪಾಲಕ ಎನ್ನುತ್ತಲೇ ಮುಂದುವರೆದು ’ರಾಮಾಯಣ ಮಹಾಭಾರತ ನಮ್ಮ ಸಂಸ್ಕೃತಿ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಲಂಕೆಯನ್ನು ಸುಡುವಾಗಲೂ ಸೌಮ್ಯ, ಸ್ಥಿತಪ್ರಜ್ಞನಂತೆ ಇರುವ ಹನುಮನ ಮುಖಭಾವವನ್ನು ಮೈಮನಗಳಲ್ಲಿ ತುಂಬಿಕೊಂಡ ನನಗೆ ಅಲ್...