Lord Rama in Indonesia

 



ಅದು ಬಾಲಿ ದ್ವೀಪ ಪ್ರವಾಸದ ಕೊನೆಯ ದಿನ. ಉಬುದ್ ಎನ್ನುವ ಸ್ಥಳದಿಂದ ಚಾಲಕ ಪುತು ಅಲಿತ್ ಅಸ್ತಿನಪುತ್ರನ ಜೊತೆ ಪಯಣ ಶುರುವಾಗಿತ್ತು I Gusti Ngurah Rai International ವಿಮಾನ ನಿಲ್ದಾಣದ ಕಡೆಗೆ. ’ಮಹಾಮೃತ್ಯುಂಜಯ ಸ್ತೋತ್ರವನ್ನು ರೆಕಾರ್ಡ್ ಮಾಡಿ ಕೊಡಿ’ ಎನ್ನುತ್ತಾ ತನ್ನ ಮೊಬೈಲ್ ಅನ್ನು ಕೈಗಿತ್ತಿದ್ದ ಅಲಿತ್. ಸಮಯ ಜಾರಿದ ದು:ಖದಲ್ಲಿ ವಿಷಾದ ಗೀತೆಯೊಂದನ್ನು ಹಾಡಿಕೊಳ್ಳುವ ಚಣ ಮೊದಲು ಅಲಿತ್ ’ಅಲ್ಲಿ ನೋಡಿ ರಾಮ’ ಎನ್ನುತ್ತಾ ವಾಹನ ದಟ್ಟಣೆಯಿದ್ದ ಒಂದು ಹೆದ್ದಾರಿಯ ಬದಿಯಲ್ಲಿ ಕಾರ್ ನಿಲ್ಲಿಸಿದ. 


ಬಾಲಿಯ ರಸ್ತೆಗಳಲ್ಲಿ ಮಹಾಭಾರತ ಮತ್ತು ರಾಮಾಯಣದ ಹಲವಾರು ವ್ಯಕ್ತಿ ಚಿತ್ರಣಕ್ಕೆ ದೊಡ್ಡದೊಡ್ಡ ಮೂರ್ತ ರೂಪಕೊಟ್ಟು ಶಿಲ್ಪಗಳನ್ನು ಇಟ್ಟಿದ್ದಾರೆ. ರಸ್ತೆಗಳಲ್ಲಿ, ಸಿರಿವಂತರ ಮನೆಗಳ ಮುಂದೆ, ಅಲ್ಲಿನ ರಾಜನ ಅರಮನೆಯ ಹೆಬ್ಬಾಗಿಲಿನಲ್ಲಿ, ಮ್ಯೂಸಿಯಮ್ ಮತ್ತು ರಾಜಕೀಯ ಮುಖಂಡರುಗಳ ಕಚೇರಿಯ ಎದುರು ಹನುಮನ ಮೂರ್ತಿ ನೋಡಲು ಸಿಕ್ಕಿತ್ತು. ಅವನಿಗೆ ಅಲ್ಲಿ ಮನೆಯೊಳಗೆ ಜಾಗವಿಲ್ಲ. ಬ್ರಹ್ಮ ವಿಷ್ಣು ಮಹೇಶ್ವರರನ್ನು ದೇವರು ಎಂದು ಪ್ರಾರ್ಥಿಸುವ, ಪೂಜಿಸುವ ಇಂಡೋನೇಷಿಯಾ ಹಿಂದುಗಳು ಹನುಮ ದೇವರಲ್ಲ ದ್ವಾರಪಾಲಕ ಎನ್ನುತ್ತಲೇ ಮುಂದುವರೆದು ’ರಾಮಾಯಣ ಮಹಾಭಾರತ ನಮ್ಮ ಸಂಸ್ಕೃತಿ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.


ಲಂಕೆಯನ್ನು ಸುಡುವಾಗಲೂ ಸೌಮ್ಯ, ಸ್ಥಿತಪ್ರಜ್ಞನಂತೆ ಇರುವ ಹನುಮನ ಮುಖಭಾವವನ್ನು ಮೈಮನಗಳಲ್ಲಿ ತುಂಬಿಕೊಂಡ ನನಗೆ ಅಲ್ಲಿನ ಹನುಮ ಎಲ್ಲೆಡೆಯಲ್ಲಿಯೂ ಕೋರೆ ಹಲ್ಲುಗಳನ್ನು ತೋರುತ್ತಾ ಕಾಯ್ವ ಜೀವವಾಗಿ ರೂಪಿತಗೊಂಡಿರುವುದು ವಿಭಿನ್ನ ಎನ್ನಿಸಿತ್ತು.


        ಬಾಲಿಯಲ್ಲಿ ಮಹಾಭಾರತದ ಪಾತ್ರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಶಿಲ್ಪಗಳಾಗಿ ನೋಡಬಹುದಾದರೂ Jalan WR Supratman, Kesiman Kertalangu, Kecamatan Denpasar Timur ಎನ್ನುವ ಜಾಗದಲ್ಲಿ ರಾವಣನು ಸೀತೆಯನ್ನು ಹೊತ್ತೊಯ್ಯುತ್ತಿರುವ ವಿಗ್ರಹ ನಿಲ್ಲಿಸಲಾಗಿದೆ.  ಭೂಮಿಯಿಂದ ನಲವತ್ತು  ಅಡಿ ಎತ್ತರದಲ್ಲಿ ಮೂವತ್ತೈದು ಅಡಿ ಎತ್ತರ ಹದಿನಾಲ್ಕು ಅಡಿ ಅಗಲದ ರಾವಣನು ಸೀತೆಯನ್ನು ತನ್ನ ಭುಜದ ಮೇಲೆ ಹೊತ್ತೊಯ್ಯುವಂತಹ ಶಿಲ್ಪ. ಇದನ್ನು ಜ್ವಾಲಮುಖಿಯಿಂದಾದ (Palimanan and black stones) ಶಿಲೆಯಿಂದ ಮಾಡಲಾಗಿದೆ. 


ಗಣಪ, ಶಿವ, ವಿಷ್ಣು, ಬ್ರಹ್ಮ, ಲಕ್ಷ್ಮಿ ಸರಸ್ವತಿ.ಪಾರ್ವತಿ, ಗರುಡ ಇವರುಗಳನ್ನು ಕಂಡಿದ್ದೆನಾದರೂ  ರಾಮನನ್ನು ಪ್ರವಾಸದಲ್ಲಿ ನೃತ್ಯದಲ್ಲಿ ಮಾತ್ರ ನೋಡಿದ್ದು. Kabu Pateh Badung ಎನ್ನುವ ದಾರಿಯಲ್ಲಿ ಹೀಗೆ ನೂರೈವತ್ತು ಅಡಿಯಷ್ಟು ಎತ್ತರದ ಬಿಳಿ ಮತ್ತು ಹೊನ್ನ ಬಣ್ಣದ ಶಿಲ್ಪಾಕೃತಿಯಲ್ಲಿ ಎದುರಾಗಿದ್ದ. ಓಹೋ ಮೊದಲೇ ಸಿಗಬಾರದಿತ್ತೇ ಎಂದುಕೊಂಡ ಮನಸ್ಸು ’ಕೊರಳಿಗಾತ್ಮ ಸೇರುವಾಗಲಾದರೂ ಕಂಡು ಬಾರೋ ರಾಮ’ ಎಂದುಕೊಳ್ಳುತ್ತಾ ಕಾರಿನಿಂದಿಳಿದೆ.


 ಕಪಿಸೇನೆಯು ಬಂಡೆಗಳಿಂದ ಸಮುದ್ರಕ್ಕೆ ಸೇತುವೆಯನ್ನು ನಿರ್ಮಿಸುವಾಗ ಅವರುಗಳ ನಡುವೆ ಅವನ ವ್ಯಕ್ತಿತ್ವದಷ್ಟೇ ಎತ್ತರ ಅಗಲವಾಗಿ ಬಿಲ್ಲು ಬಾಣವನ್ನು ಮಾತ್ರವಲ್ಲ  ತುದಿಗಳನ್ನು ಮೃದುವಾಗಿ ತಿರುವಿಕೊಂಡಿರುವ ತೆಳುವಾದ ಮೀಸೆಯನ್ನೂ ಹೊತ್ತಿರುವ ರಾಮ ’ಇನ್ನಷ್ಟು ಬೇಕೆನ್ನ ಹೃದಯಕ್ಕೆ’ ಎನಿಸುವಂತಿದ್ದಾನೆ. 


                ಬಾಲಿಗೆ ಪ್ರವಾಸ ನಿರ್ಧಾರವಾದಾಗಲೇ ಅಲ್ಲಿನ ರಾಮಾಯಣ ನೃತ್ಯವನ್ನು ನೋಡುವುದು ಪಟ್ಟಿಯಲ್ಲಿ ಅಡಗಿತ್ತು. ಇದೊಂದು ಅಪೂರ್ವ ಅನುಭವ.  ಬಾಲಿ ದ್ವೀಪದ ಜನಗಳ ಹುಟ್ಟಿನಿಂದಲೂ ಪ್ರಸಿದ್ಧವಾಗಿರುವ ಸಾಂಪ್ರದಾಯಿಕ ನೃತ್ಯ ' ಕೆಚಕ್  ನೃತ್ಯ'ದ  ಮೂಲ ಹೆಸರು 'ಸಂಗ್ಯಾಂಗ್’  ಭಾವಾನುವಾದದಲ್ಲಿ  'ಪರವಶತೆಯ   ನೃತ್ಯ' ಎನ್ನುತ್ತಾರೆ. ಇಂಡೋನೇಷಿಯಾದ ಕವಿ ಯೋಗೀಶ್ವರ ಬರೆದ ರಾಮಾಯಣದ ಹಲವಾರು ಘಟನೆಗಳನ್ನು 1930ರಿಂದ ನೃತ್ಯರೂಪಕದಲ್ಲಿ ಪ್ರದರ್ಶಿಸುತ್ತಿದ್ದಾರೆ. ಅಲ್ಲಿನ ಅತ್ಯಂತ ದೊಡ್ಡ ಪ್ರಾಂಬಣನ್ ದೇವಾಲಯದಲ್ಲಿ ಆರಂಭವಾದ ರಾಮಾಯಣದ ನೃತ್ಯ ಇಂದು ಹಲವಾರು ದೇವಸ್ಥಾನಗಳಿಗೆ ವಿಸ್ತರಿಸಿದೆ. 


ದೇವಸ್ಥಾನಗಳ ಗೋಡೆಯ ಮೇಲೆಲ್ಲಾ  ಸೀತಾಪಹರಣದಿಂದ, ದಶಕಂಠನ ವಧೆಯವರೆಗೂ ಶಿಲ್ಪ ಕಲಾಕೃತಿಯದ್ದೇ ತೋರಣ. ಅಲ್ಲಿನ ರಾಮಾಯಣದಲ್ಲಿ ’ಸೀತಾ ಸತ್ಯ’ ಮತ್ತು ’ರಾವಣ ಜಟಾಯು ಯುದ್ಧ’ ಬಹಳ ಪ್ರಾಮುಖ್ಯತೆ ಪಡೆದಿದೆ. ಸೀತೆಯು ಅಗ್ನಿಪ್ರವೇಶ ಮಾಡುವಾಗ ಅಗ್ನಿದೇವನೇ ಮೇಲೆದ್ದು ಬಂದು ’ಸೀತೆಯು ಅಗ್ನಿಗಿಂತ ಪವಿತ್ರಳು, ಅವಳಿಂದ ಅಗ್ನಿಯದ್ದೇ ಪರೀಕ್ಷೆಯಾಗಬೇಕು’ ಎಂದು ಹೇಳುವ ಮಾತು ಜಗತ್ತಿನ ಎಲ್ಲಾ ರಾಮಾಯಣಗಳಿಗೂ ಕಳಶದಂತೆ ಎನ್ನುತ್ತಾರೆ ಪ್ರಾಜ್ಞ್ನರು. 


Pura Puseh, Desa Batubulan ಎನ್ನುವ ಬ್ರಹ್ಮ ವಿಷ್ಣುವಿನ ದೇವಾಲಯದಲ್ಲಿ ನಾನು ನೋಡಿದ ರಾಮಾಯಣ ’ಕೆಚಕ್ ನೃತ್ಯ’  ತೆರೆದಿಟ್ಟ ಲೋಕ ಮಾತಿಗೆ ನಿಲುಕದ್ದು.   


ವೇದಿಕೆಯ ನಟ್ಟನಡುವಿನಲ್ಲಿ ಒಂದು ದೀಪದ ಕಂಭ. ಸೂರ್ಯ ಮುಳುಗುತ್ತಿದ್ದಂತೆ ಹಿರಿಯರೊಬ್ಬರು ಬಂದು ಹಣತೆ ಬೆಳಗುತ್ತಾರೆ. ರಂಗದ ಅಳತೆಗೆ ತಕ್ಕಂತೆ ಎಲ್ಲಾ ವಯಸ್ಸಿನ ನೂರಾರು ಗಂಡಸರು ಕುಳಿತು ತಮ್ಮ ದನಿಪೆಟ್ಟಿಗೆಯಿಂದ ಹೊರಡಿಸುವ ಚಕ್, ಚಕಾ ಎನ್ನುವ ಧ್ವನಿ ಮತ್ತು ಅಂಗೈಗಳಿಂದ ಅವರುಗಳು ನೀಡುವ  ತಾಳಕ್ಕೆ ತಕ್ಕಂತೆ ನೃತ್ಯಗಾರರು ನೃತ್ಯ ಮಾಡುತ್ತಾರೆ. ಮತ್ತ್ಯಾವುದೇ ತಾಳ ತಂತಿ ವಾದ್ಯಗಳ ಬಳಕೆ ಇರುವುದಿಲ್ಲ. ರಂಗಸಜ್ಜಿಕೆಯೂ ಇಲ್ಲ.  ಬಣ್ಣಬಣ್ಣದ ಬೆಳಕು ಇರದೆ ಕೇವಲ ದೀಪ ಮತ್ತು ಪಂಜಿನ ಬೆಳಕಿನಲ್ಲಿ ನಡೆಯುವ ಕಲಾತ್ಮಕ ನೃತ್ಯ ಇದು.  


ಹಚ್ಚಿದ ದೀಪಗಳ  ಸುತ್ತಲೂ ಹಾಡುಗಾರರು ಕುಳಿತು ಕಾರ್ಯಕ್ರಮ ಆರಂಭಿಸುತ್ತಾರೆ. ಎರಡ್ಮೂರು ಗಂಟೆ ಸತತವಾಗಿ ನಡೆಯುವ ನೃತ್ಯ ಪರ್ಣಕುಟಿರದಲ್ಲಿ ರಾಮ ಸೀತೆಯರ ಏಕಾಂತ ಸಂಭಾಷಣೆಯೊಂದಿಗೆ ಆರಂಭವಾಗಿ, ಸ್ವರ್ಣ ಜಿಂಕೆಯನ್ನು ತರಲು ಹೋದ ರಾಮ,  ರೇಖೆ ಎಳೆದು ಅಣ್ಣನೆಡೆಗೆ ಹೋಗುವ ಲಕ್ಷ್ಮಣ , ಮಾರುವೇಷದಲ್ಲಿ ಬಂದು ಸೀತೆಯನ್ನು ಹೊತ್ತೊಯ್ಯುವ  ರಾವಣ, ಮಾರ್ಗ ಮಧ್ಯದಲ್ಲಿ ಮಾತೆಯನ್ನು ರಕ್ಷಿಸಲು ಬರುವ ಜಟಾಯು, ಹನುಮ ನೀಡುವ ಚೂಡಾಮಣಿ ಕೊನೆಗೆ ರಾವಣ ಸಂಹಾರ ಇಷ್ಟನ್ನು ಯಾವುದೇ ಸಂಭಾಷಣೆ ಇಲ್ಲದೆ ಕೇವಲ ಆಂಗಿಕ ಚಲನೆಯಲ್ಲಿಯೇ ತೋರುತ್ತಾರೆ ಕಲಾವಿದರು.


ಮೇಳದ ಸಂಖ್ಯೆ ಹೆಚ್ಚಿದ್ದು ವೇದಿಕೆಯನ್ನು ಅವರೇ ಬಹುಪಾಲು ಆಕ್ರಮಿಸಿಕೊಂಡಿರುವುದರಿಂದ ನೃತ್ಯಗಾರರಿಗೆ, ದೀಪದ ಸುತ್ತಲೂ  ವೃತ್ತಾಕಾರದಲ್ಲಿ ಒಂದಷ್ಟೇ ಅಡಿಗಳ ಜಾಗ ಸಿಗುತ್ತದೆ. ಆದರೂ ಅನೂಹ್ಯ ಲೋಕಕ್ಕೆ ಸೆಳೆದೊಯ್ಯುತ್ತದೆ ಕೆಚಕ್ ನೃತ್ಯ. ಕಿರಿದಾದ ಬಾದಾಮಿ ಆಕಾರದ  ಕಣ್ಣುಗಳು, , ಬಳುಕುವ ಕೃಶಾಂಗಿ ದೇಹ, ನೀಳವಾಗಿ ತೆಳುವಾದ  ಮತ್ತು ಅತೀ ಮೃದುವಾದ ಬೆರಳುಗಳು ಈ ಕಲಾವಿದರಿಗೆ ಇರಲೇ ಬೇಕಾದ ಮೈಕಟ್ಟು. ಮೇಳದಲ್ಲಿನ ಭಾಗವಹಿಸುವಿಕೆ ವಂಶಪಾರಂಪರ್ಯವಾಗಿ ಬಂದಿರುತ್ತದೆ.


ಅಲ್ಲಿನ ಮನೆಮನೆಗಳಲ್ಲಿ ಶಾಲೆಗಳಲ್ಲಿ ಧರ್ಮ ಬೇಧವಿಲ್ಲದೆ ರಾಮಾಯಣ, ಮಹಾಭಾರತಗಳನ್ನು ಕಲಿಸುತ್ತಾರೆ. ಕೇಸರಿ, ಹಸಿರು, ನೀಲಿ ಬಣ್ಣಗಳ ಉಡುಗೆ ತೊಡುವ ನೃತ್ಯ ಕಲಾವಿದರು ಹೊನ್ನ ಬಣ್ಣದ ಉತ್ತರೀಯವನ್ನು ಹೊದ್ದಿರುತ್ತಾರೆ. ಮೇಳದವರು ಕಪ್ಪು ಮತ್ತು ಬಿಳಿ ಚೌಕುಳಿಯುಳ್ಳ ಮುಂಡಾಸು ಧರಿಸಿರುತ್ತಾರೆ ಅಷ್ಟೇ. 


ಕಾರ್ಯಕ್ರಮದ ಕೊನೆಯಲ್ಲಿ  ದುಷ್ಟಶಕ್ತಿಯೊಡನೆ ಹೋರಾಡಿ ತನ್ನ ಗ್ರಾಮವನ್ನು ರಕ್ಷಿಸುವ ಯುವಕನ ನೃತ್ಯ.  ಇದನ್ನು ಸೆಂಗ್ಯಾಂಗ್ ದೆದರಿ ಎನ್ನುತ್ತಾರೆ.  ಸೆಂಗ್ಯಾಂಗ್  ಎಂದರೆ ದುಷ್ಟ ಶಕ್ತಿ  ದೆದರಿ ಎಂದರೆ ದೇವತೆ ಎಂದರ್ಥ.  ಕುದುರೆಯ ಮುಖವಾಡ ಹೊತ್ತು ನರ್ತಿಸುವ ಯುವಕ ರಂಗಸ್ಥಳದ ನಟ್ಟನಡುವೆ ತೆಂಗಿನ ಚಿಪ್ಪುಗಳನ್ನು ಬಳಸಿ ಎಬ್ಬಿಸುವ ಬೆಂಕಿಯ ದೊಡ್ಡ ಜ್ವಾಲೆಗಳ ಗುಂಪಿನೊಂದಿಗೆ ಸೆಣೆಸುತ್ತಾನೆ.

ಆರಂಭದಲ್ಲಿ ಪ್ರೇಕ್ಷಕರಿಗೆ ಬೆನ್ನು ಹಾಕಿ ಕೂರುವ ಹಾಡುಗಾರರು ಅದು ಯಾವಾಗ ಹೇಗೆ ದಿಕ್ಕು ಬದಲಿಸುತ್ತಾ  ಒಂದು ಹಂತದಲ್ಲಿ ನೋಡುಗರಿಗೆ ಮುಖಾಮುಖಿಯಾಗುತ್ತಾರೆ ಎನ್ನುವುದು ತಿಳಿಯದಷ್ಟು ಮೃದುವಾದ ಬದಲಾವಣೆ ಆಗುತ್ತಿರುತ್ತದೆ ಜಾದುವಿನಂತೆ ರಂಗದ ಮೇಲೆ. ಈ ನೃತ್ಯವನ್ನು ಸೆಂಗ್ಯಾಂಗ್ ಜರನ್ ಎನ್ನುತ್ತಾರೆ  ಜರನ್ ಎಂದರೆ ಕುದುರೆ ಎಂದರ್ಥ  . 


ಕೊನೆಯಲ್ಲಿ ರಾಮಾಯಣದ ಪಾತ್ರಧಾರಿಗಳೆಲ್ಲಾ ವೇದಿಕೆಯ ಮೇಲೆ ಬಂದು ರಾಮನಿಗೆ ವಂದಿಸುತ್ತಾರೆ. ’ಅವನಿಗೆ ಇವರಾಮ ; ಇವನಿಗೆ ಅವ ರಾಮ’ ಎನ್ನುವುದು ನಿಜವಾಗಬೇಕಿದ್ದ ಈ ಹೊತ್ತಿನಲ್ಲಿ ರಾಮನನ್ನು ದೇವರನ್ನಾಗಿ ಮಾಡದೆಯೂ ಅವನದ್ದೇ  ದೈವತ್ವಕ್ಕೆ ಏರಬಲ್ಲ ಮನುಷ್ಯ ಎಂದು ತೋರಿಸಿಕೊಡುವ ಬಾಲಿ ಜನಗಳ ಆಚರಣೆ ಮತ್ತು ನಂಬಿಕೆ ಬಲು ಘನವಾದದ್ದು.

************************




Comments

  1. ಇಂಡೋನೇಷಿಯಾದಲ್ಲಿ
    ರಾಮಾಯಾಣದ ಹಲವು ರೂಪಗಳ ಆಚರಣೆ, ಸಂಸ್ಕೃತಿಯ ಬಗ್ಗೆ ವಿಶೇಷ ಮಾಹಿತಿ ನೀಡುವ ಚೆಂದದ ಲೇಖನ.

    ReplyDelete
  2. ಇಂಡೋನೇಷಿಯಾದಲ್ಲೂ ರಾಮಾಯಣ ಬಗ್ಗೆ ಶ್ರೀ ರಾಮಚಂದ್ರ, ಸೀತಾಮಾತೆಯರ ಕುರಿತ

    ReplyDelete

Post a Comment

Popular posts from this blog

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್