ಆಂದೋಲನದಲ್ಲಿ ಶಿವ

ಉತ್ತರಾಖಂಡವೇ ಪುರಾಣ ಪುಣ್ಯಕಥೆಗೆ ಹಿಡಿದ ಕನ್ನಡಿ. ಪ್ರಕೃತಿ ಮೈಹರವಿಕೊಂಡು ಸೌಂದರ್ಯವನ್ನು ಕೊಡವಿಕೊಳ್ಳುತ್ತಿರುವ ಈ ಭೂಮಿಯಲ್ಲಿ ಸ್ವಯಂಭುಗೊಂಡಿದ್ದಾನೆ ಕೇದಾರನಾಥ. ಅವನನ್ನು ಮುಟ್ಟಲು ಮಾರ್ಗ ಹಲವು. ನಾನು ಆಯ್ಕೆ ಮಾಡಿಕೊಂಡಿದ್ದು ರಿಷಿಕೇಶದಿಂದ ರಸ್ತೆ ಪ್ರಯಾಣ. ರಾಂಪುರವೆನ್ನುವ ಊರು ತಲುಪುವಷ್ಟರಲ್ಲಿ ರಾತ್ರಿಯಾಗಿತ್ತು. ಮಾರನೆಯ ದಿನದ ಪ್ರಯಾಣದಲ್ಲಿ ಸಿಕ್ಕಿದ್ದು ಅಲಕಾನಂದ-ಮಂದಾಕಿನಿಯರ ಸಂಗಮವಾದ ರುದ್ರಪ್ರಯಾಗವು ಶ್ರೀರಾಮಚಂದ್ರ ಪೂರ್ವಿಕರಿಗೆ ತರ್ಪಣಕೊಟ್ಟ ಸ್ಥಳ. ನಂತರ ಸಿಕ್ಕಿದ್ದು ಭಾಗೀರಥಿ-ಮಂದಾಕಿನಿಯರ ಸಂಗಮದ ದೇವಪ್ರಯಾಗ. ಇಲ್ಲಿ ಬ್ರಹ್ಮ ತಪಸ್ಸು ಮಾಡಿದ ಗುರುತಿಗೊಂದು ಶ್ರೀರಾಮ ಮಂದಿರವಿದೆ. ಇನ್ನೊಂದಷ್ಟು ದೂರದಲ್ಲಿ ತ್ರಿಯುಗ ನಾರಾಯಣನ ಸ್ಥಾನ. ಪಾರ್ವತಿ ಕಲ್ಯಾಣ ನಡೆದದ್ದು ಎಂದು ಹೇಳಲಾಗುವ ಮನಮೋಹಕ ಮಂದಿರವದು. ಶಿವ ಪಾರ್ವತಿಯರು ಸಪ್ತಪದಿ ತುಳಿದುದರ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಅದೇ ಅಗ್ನಿಯನ್ನು ಅಂದಿನಿಂದ ಈ ಘಳಿಗೆಯವರೆಗೂ ಆರದಂತೆ ಕಾಯುತ್ತಿದ್ದಾರೆ ಅಲ್ಲಿನ ಭಕ್ತರು. ಅಲ್ಲಿಂದ ತಲುಪಿದ್ದು ಕೇದಾರನಾಥನ ತಪ್ಪಲಿಗೆ. ಭಕ್ತರನ್ನು ಮೀಯಿಸಿ ಶುಚಿಗೊಳಿಸುವ ಬಿಸಿನೀರಿನ ಬುಗ್ಗೆಯ ಗೌರಿಕುಂಡ ಈ ತಪ್ಪಲಿಗೆ ಆತುಕೊಂಡಿದೆ. ಇಲ್ಲಿಂದ ಮುಂದೆ ದುರ್ಗಮ ದಾರಿ. ಕೋಲೂರಿ ಹತ್ತಿ ಹೋಗಬೇಕು ಇಲ್ಲವೇ ಅಲ್ಲಿನ ಕುದುರೆ ಏರಿ ಹೋಗಬೇಕು. ಅದೂ ಸಾಧ್ಯವಿಲ್ಲವೆನಿಸಿದರೆ ಇಬ್ಬರು ಪಾಳಿ ಬದಲಿಸುತ್ತಾ ಹೊತ್ತು ಸಾಗುವ ಪಲ್ಲಕ್ಕಿಯಂಥ...