What is a family - ಕುಟುಂಬ ಎಂದರೆ
15-02-2025
ಇವತ್ತಿನ ಪ್ರಜಾವಾಣಿಯಲ್ಲಿ ಹೀಗೆ ಬರೆದಿದ್ದೇನೆ. ದಯವಿಟ್ಟು ಓದಿ ಅಭಿಪ್ರಾಯ ತಿಳಿಸಿ 🙏
********
ಎಲ್ & ಟಿ ಲಿಮಿಟೆಡ್ ಸಂಸ್ಥೆಯ ಮುಖ್ಯಸ್ಥ ಎಸ್ ಎನ್ ಸುಬ್ರಹ್ಮಣಿಯನ್ ಅವರು ಜಾಗತಿಕವಾಗಿ ಜಾಗೃತಗೊಂಡಿರುವ ಸ್ಪರ್ಧೆಯಲ್ಲಿ ಭಾರತವನ್ನು ಆರ್ಥಿಕವಾಗಿ ಮುನ್ನೆಲೆಗೆ ತರಬೇಕು ಎನ್ನುವ ಉದ್ದೇಶದಿಂದ ಕೆಲಸಗಾರರು ಭಾನುವಾರಗಳಂದೂ ರಜೆ ತೆಗೆದುಕೊಳ್ಳದೆ ವಾರಕ್ಕೆ 90 ಘಂಟೆಗಳ ಕಾಲ ಕೆಲಸ ಮಾಡಬೇಕು ’ಎಷ್ಟೆಂದು ಗಂಡ ಹೆಂಡತಿಯನ್ನು, ಹೆಂಡತಿ ಗಂಡನನ್ನು ದಿಟ್ಟಿಸುತ್ತಾ ಕೂರುವುದು’ ಎನ್ನುವ ಬೀಸು ಹೇಳಿಕೆಯನ್ನು ನೀಡಿರುವುದು ಈಗ ಕಾರ್ಮಿಕ ವಲಯದ ಕಾವೇರಿಸಿದೆ. ಅಸಮಾನ ಸಂಬಳದಿಂದ ಹಿಡಿದು, ಮಹಿಳೆಯರಿಗೆ ಮಾಡಿದ ಅವಮಾನ ಎನ್ನುವವರೆಗೂ ಚರ್ಚೆ ನಡೆಯುತ್ತಿದೆ. ಆದರೆ ಕುಟುಂಬ ಎಂದರೆ, ಸಂಬಂಧಗಳು ಎಂದರೆ ಕೇವಲ ಗಂಡ ಹೆಂಡತಿಯ ನಡುವಿನದ್ದು ಎನ್ನುವ ಭಾವವನ್ನು ಮನಸ್ಸಿನಲ್ಲಿ ಬಿತ್ತಿದಾಗ ಆಗುವ ಅಪಾಯಗಳ ಬಗ್ಗೆ ಯಾರ ಗಮನವು ಹೋಗದಿರುವುದು ವಿಪರ್ಯಾಸ.
ಹಾಸ್ಯ ಎನ್ನುತ್ತಾ ಕೆಲವು ವರ್ಷಗಳ ಹಿಂದೆ ಕಥೆಯೊಂದು ಓಡಾಡುತ್ತಿತ್ತು. ಮಹಿಳೆಯೊಬ್ಬಳು ಕಾರ್ಪೋರೇಟ್ ಕಂಪನಿಯಲ್ಲಿ ಕೆಲಸಕ್ಕಾಗಿ ಇಂಟರ್ವ್ಯೂಗೆ ಹೋದಾಗ ಒಂದು ಪ್ರಶ್ನೆಗೆ ಉತ್ತರವಾಗಿ ತನ್ನದು ಜಾಯಿಂಟ್ ಫ್ಯಾಮಿಲಿ ಎನ್ನುತ್ತಾಳೆ. ಅದಕ್ಕೆ ಅಧಿಕಾರಿಯೊಬ್ಬರು ಹಾಗಾದರೆ ನಿಮ್ಮ ಕುಟುಂಬದಲ್ಲಿ ಯಾರ್ಯಾರು ಇದ್ದೀರಾ ಎಂದು ಕೇಳಿದಾಗ ತಾನು ತನ್ನ ಗಂಡ ಜಾಯಿಂಟಾಗಿ ಇದ್ದೀವಿ ಎನ್ನುತ್ತಾಳೆ. ಈ ಕಥೆಗೂ ಸುಬ್ರಹ್ಮಣಿಯನ್ ಅವರ ಹೇಳಿಕೆಗೂ ಎಷ್ಟೊಂದು ಸಾಮ್ಯತೆ.
ಒಂದಷ್ಟು ವರ್ಷಗಳ ಹಿಂದೆ ದೊಡ್ಡ ಕೆಲಸಗಳಿಗೆ ಅಭ್ಯರ್ಥಿಯನ್ನು ತೆಗೆದುಕೊಳ್ಳುವಾಗ ಕೌಟುಂಬಿಕ ಹಿನ್ನಲೆಯನ್ನು ಹೇಳುವುದು ಕಡ್ಡಾಯವಾಗಿತ್ತು. ಕಾರಣ, ಕುಟುಂಬದ ಚಿತ್ರಣ ವ್ಯಕ್ತಿಯ ಮಾನಸಿಕ ಆರೋಗ್ಯಕ್ಕೆ ಮಾಪಕ. ಗಂಡ ಹೆಂಡತಿಯಿಂದ ಮೊದಲಿಟ್ಟು ಅಪ್ಪ, ಅಮ್ಮ, ಮ್ಮಕ್ಕಳು, ಅಜ್ಜಿ, ತಾತ, ಚಿಕ್ಕಪ್ಪ, ಅತ್ತೆ, ಭಾವ, ಅಳಿಯ ಹೀಗೆ ಬಾಂಧವ್ಯಗಳ ಒಡನಾಟ ಮನುಷ್ಯನನ್ನು ಪರಿಪೂರ್ಣ ವ್ಯಕ್ತಿಯನ್ನಾಗಿ ರೂಪಿಸುತ್ತದೆ. ಯಾವುದೂ ಬೇಡ ಯಾರೂ ಬೇಡ ಎನ್ನುವವರು ದೇಶದ ಅರ್ಥಿಕತೆಗೂ ಹೊರೆಯೇ ಹೌದು.
ಅವಿಭಕ್ತ ಕುಟುಂಬಗಳ ಕಣ್ಮರೆಯಿಂದ ಈಗಾಗಲೇ ಸಾಮಾಜಿಕ ಸಾಗುವಳಿಗೆ ಆಗಿರುವ ಹಾನಿಯನ್ನು ಸರಿಪಡಿಸುವ ನಿಟ್ಟಿನಲ್ಲಿ ನಡೆದಿರುವ ಸಂಶೋಧನೆಗಳು ಕುಟುಂಬದವರೊಡನೆ ಒಡನಾಡಿ, ಫ್ಯಾಮಿಲಿ ಟೈಮ್ ಎಂದು ನಿರ್ಧರಿಸಿಕೊಂಡು ಗುಣಮಟ್ಟದ ಸಮಯ ಕಳೆಯಿರಿ ಎಂದೆಲ್ಲಾ ಹೇಳುತ್ತಿವೆ.
ಮನುಷ್ಯನೊಬ್ಬನ ಮಾನಸಿಕ ಸಮತೋಲನ ಸುಸ್ಥಿರವಾಗಿರಬೇಕು ತನ್ಮೂಲಕ ದೇಹಾರೋಗ್ಯ ನಳನಳಿಸಬೇಕು ಎಂದರೆ ಆತ ಕುಟುಂಬ ಎನ್ನುವ ಜಾಲದಲ್ಲಿ ಹಬ್ಬಿಕೊಂಡಿರಬೇಕು. ಕೇವಲ ಗಂಡ ಮತ್ತು ಹೆಂಡತಿ ಇಬ್ಬರೇ ಎಂದಿಗೂ ಕುಟುಂಬ ಎನಿಸಿಕೊಳ್ಳುವುದಿಲ್ಲ.
ಅನಾಥಪ್ರಜ್ಞೆಯಿಂದ ನರಳಿ ಲಕ್ಷಾಂತರ ರೂಪಾಯಿಗಳ ಸಂಪಾದನೆ ಇದ್ದ ಸಾಫ್ಟ್‍ವೇರ್ ತಂತ್ರಜ್ಞರು ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳೂ ನಮ್ಮ ಕಣ್ಣ್ಮುಂದಿವೆ. ಮನೆಯಿಂದ ಓಡಿಹೋಗುವ ಮಕ್ಕಳನ್ನೋ, ಕೌಟುಂಬಿಕ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಎದುರು ನಿಲ್ಲುವ ಮಕ್ಕಳನ್ನೋ ಒಮ್ಮೆ ಮಾತನಾಡಿಸಬೇಕು ಕುಟುಂಬ ಎಂದರೆ ಏನು ಮತ್ತು ಅದರ ಮಹತ್ವ ಏನು ಎಂದು ತಿಳಿಯಲು. ತಂದೆಯೊಬ್ಬನಿಲ್ಲ ಎಂದು ಕೊರಗುವ ಮಗಳೆದುರೇ, ತಾಯಿ ತೀರಿಕೊಂಡ ಕಣ್ಣೀರು ತಡೆಯಲಾರದ ವೃದ್ಧ ವ್ಯಕ್ತಿಯೂ ಸಿಗುತ್ತಾನೆ ಇಲ್ಲಿ.
ತುಂಬು ಜೀವನ ನಡೆಸಿ ಜೀವನ ಯಾತ್ರೆ ಮುಗಿಸಿದ ಅಜ್ಜಿಗೆ ದೇವಸ್ಥಾನ ಕಟ್ಟಿಸಿದ ಮೊಮ್ಮಕ್ಕಳು ಇರುವಂತೆಯೇ, ದೊಡ್ಡಪ್ಪನ ಸೇವೆಗಾಗಿ ಕೆಲಸ ಬಿಟ್ಟು ನಿಂತ ತಮ್ಮನ ಮಕ್ಕಳೂ ಇದ್ದಾರೆ. ಒಂಟಿಯಾದ ಸೋದರತ್ತೆಯನ್ನು ಸಾಕುವ ಅಣ್ಣನ ಮಕ್ಕಳು, ಚಿಕ್ಕಮ್ಮನ ಮನೆ ತೂಗಿಸುವ ಅಕ್ಕನ ಮಕ್ಕಳು ಎಲ್ಲರೂ ಸೇರಿಯೇ ಕುಟುಂಬ. ಇವರೆಲ್ಲರ ಇರುವಿಕೆಯೇ ಬದುಕು. ಈ ಸಂಬಂಧಗಳನ್ನು ದಿಟ್ಟಿಸಿ ನೋಡುತ್ತಾ ಕೂರಬೇಕಿಲ್ಲ, ಕರ್ತವ್ಯಪ್ರಜ್ಞೆಯಲ್ಲಿ ಗಟ್ಟಿಸಿಕೊಂಡರೆ ಸಾಕು.
ಕುಟುಂಬ ಎಂದರೆ ಗಂಡ ಹೆಂಡತಿ ಮಾತ್ರ ಎಂದು ಬಿಂಬಿಸುವುದು, ಮದುವೆಯೆಂದರೆ ಸ್ವಾತಂತ್ರ್ಯ ಹರಣ ಎಂದುಕೊಳ್ಳುವುದು, ಮಕ್ಕಳನ್ನು ಹೆರುವುದೆಂದರೆ ಹೊರೆ ಎನ್ನುವುದು, ’ಸೆಲ್ಫ್ ಲವ್’ ಎನ್ನುವ ಹೆಸರಿನಲ್ಲಿ ಸ್ವಾರ್ಥವನ್ನೇ ತಲೆಗೆ ತುಂಬಿಸುವುದು, ’ವರ್ಕೋಹಾಲಿಕ್’ ಎನ್ನುವುದನ್ನು ಹೊಗಳಬೇಕಾದ ವಿಶೇಷತೆ ಎಂದು ಕಾಣುವುದು, ನೆಂಟರೆಂದರೆ ಗಂಟುಕಳ್ಳರು, ಇಷ್ಟರು ಎಂದರೆ ಅನಿಷ್ಟರು ಎನ್ನುವ ಭಾವನೆಯನ್ನು ತೊಟ್ಟುತೊಟ್ಟೇ ವಿಷದಂತೆ ಉಣಿಸಲಾಗುತ್ತಿದೆ. ಕುಟುಂಬ ವ್ಯವಸ್ಥೆಯನ್ನು ಶಿಥಿಲಗೊಳಿಸುವ ಇಂತಹ ಬೋಧನೆಗಳನ್ನು ನಂಬಿಕೊಂಡು ಮುಂದಡಿಯಿಡುವ ತಲೆಮಾರುಗಳು ಭಾವನಾತ್ಮಕವಾಗಿ ದುರ್ಬಲರಾಗುತ್ತಾರೆ.
ಸಬಲತೆ ಎಂದರೆ ಬರಿಯ ಹಣಕಾಸಿನ ಸ್ಥಿರತೆ ಅಲ್ಲ. ತನ್ನನ್ನು ತಾನು ನೋಡಿಕೊಳ್ಳಲಾಗದವ ದೇಶದ ಆರ್ಥಿಕ ಸ್ಥಿತಿಗೆ ಕೊಡುಗೆ ಕೊಡಲಾರ ಭಾರವಾಗುತ್ತಾನೆ. ವಿಶ್ವ ಆರೋಗ್ಯ ಸಂಸ್ಥೆಯೇ ನೀಡಿರುವ ವ್ಯಾಖ್ಯಾನದಂತೆ ’ಆರೋಗ್ಯ ಎಂದರೆ ದೇಹಕ್ಕೆ ಅನಾರೋಗ್ಯ ಇಲ್ಲ ಎನ್ನುವುದಲ್ಲ. ಬದಲಿಗೆ, ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸುಸ್ಥಿರತೆ ಇರುವುದು’. ಇಂತಹ ಭಾವಭದ್ರತೆ ನೀಡುವುದು ಕುಟುಂಬ ಮತ್ತು ಕುಟುಂಬದೊಡನೆ ವ್ಯಕ್ತಿಯೊಬ್ಬ ತೊಡಗಿಸಿಕೊಳ್ಳುವ ಪರಿ.
ಅತಿಯಾದದ್ದು ಅಮೃತವಾದರೂ ವಿಷವೇ ಆಗುವಂತೆ ಕುಟುಂಬದಲ್ಲಿ ತನ್ನ ಪಾತ್ರಮಿತಿಯ ಅರಿವಿಲ್ಲದೆ ಇರುವುದು ಕೂಡ ಅಪಾಯ, ಅಂತೆಯೇ ಉದ್ಯೋಗದಲ್ಲಿನ ಅತಿ ಮಗ್ನತೆಯೂ ವಿನಾಶಕಾರಿ. ಎರಡರ ನಡುವಿನ ಸಮತೋಲನ ಕಾಪಾಡಿಕೊಳ್ಳಲು ಬೆಂಬಲವಾಗಿ ನಿಲ್ಲಬೇಕಾದ್ದು ಕುಟುಂಬದ ಸದಸ್ಯರ ಹೊಣೆಗಾರಿಕೆ ಮಾತ್ರವಲ್ಲ ಉದ್ಯೋಗದಾತರ ಕರ್ತವ್ಯವೂ ಹೌದು.
__________________________
❤️
ReplyDelete