ಲಾಕ್ಡೌನ್ ಕಾಲಘಟ್ಟದ ದಾಂಪತ್ಯ

ಬೆಳಗಿನಲ್ಲಿ ಅವನು ಬಲು ಸುಭಗ. ರಾತ್ರಿಯಾಯಿತೆಂದರೆ ಕೀಚಕನೇ ಮೈಯೇರಿದ್ದಾನೆ ಎನ್ನುವಂತೆ ಇರುತ್ತಿದ್ದ. ಅವಳ ಮೈಮೇಲಿನ ಹಲ್ಗುರುತು, ಉಗುರ್ಗೆರೆ, ಸಿಗರೇಟಿನ ಬೊಟ್ಟು ಕತ್ತಲಲ್ಲೂ ಮಿರಮಿರ ಉರಿಯುತ್ತಿತ್ತು. ಸಹಿಸುತ್ತಲೇ ಅವಳ ದಾಂಪತ್ಯಕ್ಕೆ ಮೂರು ವರ್ಷ ಕಳೆದುಹೋಗಿತ್ತು. ಸ್ನಾನದ ನೀರು ಬಿದ್ದರೆ ಧಗಧಗ ಎನ್ನುವ ದೇಹ ದಹನಕ್ಕೆ ಹೆದರಿದ್ದ ದಾಕ್ಶಾಯಣಿ ಅವಳು ಅದೆಷ್ಟೋ ದಿನಗಳಿಗೆ ಒಮ್ಮೆ ಸ್ನಾನ ಮಾಡುತ್ತಿದ್ದಳು. ಕತ್ತಲಲ್ಲಿ ಅವಳಾತ್ಮವನ್ನು ಹೀಗೆ ಚರ್ಮದಂತೆ ಸಂಸ್ಕರಿಸುತ್ತಿದ್ದವ ಬೆಳಕಿನಲ್ಲಿ ಬೆಕ್ಕಿನ ಮರಿಯಂತೆ ಆಗುತ್ತಿದ್ದ. ಆಫೀಸಿನಲ್ಲಿ ಬಹಳವೇ ಪ್ರಾಮಾಣಿಕ. ನೆಂಟರಿಷ್ಟರ ಗೋಷ್ಠಿಯಲ್ಲಿ ಇವನೇ ಗೋಪಾಲಕೃಷ್ಣ. ಸಹಿಸಿದಳು, ಸಹಿಸಿದಳು ಅವಳು. ಸಹನೆ ಖಾಲಿಯಾಯ್ತು. ಉಪಾಯ ಒಂದು ಯಮಗಂಡಕಾಲದಂತೆ ಅವಳ ತಲೆ ಹೊಕ್ಕಿತು. ನಿತ್ಯವೂ ಅವನ ರಾತ್ರಿ ಊಟದಲ್ಲಿ ಬೇಧಿ ಮಾತ್ರೆ ಬೆರಸಿಕೊಡಲು ಶುರುವಿಟ್ಟಳು. ಆರು ತಿಂಗಳು ಮೈಯ್ಯಿನ ನೀರು ಆರಿ ಅವನು ಹೈರಾಣಾದ. ಸ್ಕ್ಯಾನಿಂಗ್ ಸೆಂಟರ್ಗಳಿಂದ ತಿಮ್ಮಪ್ಪನ ದರುಶನದವರೆಗೂ ಎಡುಕಾಡುತ್ತಾ ಮೆತ್ತಗಾದ. ಇವಳ ಮನಸ್ಸು ಉಸಿರಾಡಲು ಶುರುವಿಟ್ಟಿತು, ಶರೀರದ ಮೇಲಿನ ಗಾಯ ಒಣಗುವತ್ತ ಮುಖ ಮಾಡಿತ್ತು. ಅವಳು ಈ ಕಥೆಯನ್ನು ಮತ್ತ್ಯಾರದ್ದೋ ಜೀವನದ ಘಟನೆಯಂತೆ ಏರಿಳಿತವಿಲ್ಲದೆ ಹೇಳಿದಾಗ ಸಂಬಂಧಗಳ ನಡುವಿನ ಥಣ್ಣನೆಯ ಕ್ರೌರ್ಯಕ್ಕೆ ದಂಗಾಗಿ ಹೋಗಿದ್ದೆ. ದೌರ್ಜನ್ಯಕ್ಕ...