ಶಾಲೆಗಳ ಆರಂಭ, ಹೂಂ ಅಂತೀರಾ?!




ಈ ಸಭೆಯಲ್ಲಿ ನನ್ನ ಅಭಿಪ್ರಾಯವನ್ನು ಮಂಡಿಸುವ ದೃಷ್ಟಿಯಿಂದ ಕಳೆದ ಮೂರು ದಿನಗಳಿಂದ  ಬೆಂಗಳೂರಿನಲ್ಲಿ ಬೇರೆ ಬೇರೆ ತರಗತಿಗಳಲ್ಲಿ , ಬೇರೆ ಬೇರೆ ಸ್ತರದ ಪ್ರೈವೇಟ್ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಒಟ್ಟು 64 ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ಅಭಿಪ್ರಾಯ ಸಂಗ್ರಹಣೆ ಮಾಡಿದ್ದೇನೆ.

ಎಲ್ಲರ ಒಟ್ಟಾರೆ ಅಭಿಪ್ರಾಯ ಸದ್ಯದ ಪರಿಸ್ಥಿತಿಯಲ್ಲಿ ಶಾಲೆಗಳನ್ನು ತೆರೆಯುವುದು ಬೇಡ ಅನ್ನುವುದೇ ಆಗಿದೆ. ಇದಕ್ಕೆ ಅವರುಗಳು ನೀಡುವ ಕಾರಣ ಆನ್ ಲೈನ್ ಎಜುಕೇಷನ್ ಅನುಕೂಲವಾಗಿದೆ, ತಂದೆ ತಾಯಿಯರ ಜೊತೆಯಲ್ಲಿ ಹೆಚ್ಚು ಸಮಯ ಕಳೆಯಬಹುದು ಹೀಗೆ ಕೆಲವಾರು.

ಇನ್ನೊಂದು ಗಮನಿಸಬೇಕಾದ ವಿಷಯ ಎಂದರೆ ಬಹಪಾಲು ಮಕ್ಕಳು ಜೂನ್ ಒಂದನೆಯ ತಾರೀಖು ಹೊಸ ಸಮವಸ್ತ್ರ, ಹೊಸ ಪುಸ್ತಕ ಇವೆಲ್ಲವನ್ನು ತೆಗೆದುಕೊಂಡು ಶಾಲೆಗೆ ಹೋಗಬೇಕು ಎನ್ನುವ ಆಕರ್ಷಣೆಯನ್ನು ಹೊಂದಿಲ್ಲ.

ಆದರೆ 10ನೆಯ ತರಗತಿಯ ಮತ್ತು ಎರಡನೆಯ ಪಿಯೂಸಿ ಮಕ್ಕಳು ಪರೀಕ್ಷೆ ಮುಗಿಸಿ ಕಾಲೇಜಿಗೆ ಹೋಗಬೇಕು ಎನ್ನುವ ಉತ್ಸಾಹ ತೋರಿಸಿದ್ದಾರೆ.

ದೇಶದಲ್ಲಿ ಈವರೆಗೂ ಮಕ್ಕಳಿಗೆ ಕೋವಿಡ್ ಸೋಂಕು ತಗುಲಿರುವುದು ವಿರಳ. ಆದರೆ ವಿಶ್ವಸಂಸ್ಥೆಯು ನೀಡಿರುವ ಒಂದು ಅಂಕಿಅಂಶದಲ್ಲಿ ಶಾಲೆಯನ್ನು ಪುನರಾರಂಭ ಮಾಡಿರುವ ಕೆಲವು ದೇಶಗಳಲ್ಲಿ ಮಕ್ಕಳಿಗೆ ಮತ್ತು ಶಾಲಾ ಸಿಬ್ಬಂದಿಗಳಿಗೆ ಸೋಂಕು ತಗುಲುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಹೀಗೆ ಶಾಲೆಗಳ ಪುನರಾರಂಭ ಮಾಡಿದ ನಂತರ ಸೋಂಕಿತರ ಸಂಖ್ಯೆ ಹೆಚ್ಚಿಸಿಕೊಂಡಿರುವ ದೇಶಗಳು ನಮಗಿಂತ ಅಭಿವೃದ್ಧಿ ಹೊಂದಿರುವ ಮತ್ತು ಮಕ್ಕಳಿಗೆ ನಮಗಿಂತ ಉತ್ತಮ ಮಟ್ಟದ ಸವಲತ್ತುಗಳನ್ನು ಒದಗಿಸಿಕೊಡುವ ದೇಶಗಳಾಗಿವೆ. 

ಅಲ್ಲಿಯೇ ಇಂತಹ ಪರಿಸ್ಥಿತಿ ಆದರೆ ನಮ್ಮ ದೇಶದ ಜನಸಂಖ್ಯೆಯ ಸಾಂಧ್ರತೆ ಮತ್ತು ಇರುವ ಕನಿಷ್ಠ ಅನುಕೂಲಗಳನ್ನು ಗಮನಿಸಿದಾಗ ಲಾಕ್ಡೌನ್ ಸಮಯದಲ್ಲಿ ಮಕ್ಕಳಿಗೆ ಊಟವನ್ನು ಒದಗಿಸಿಕೊಡಲೂ ಸೋತಿರುವ ನಮ್ಮ ದೇಶದ ವ್ಯವಸ್ಥೆಯಲ್ಲಿ ಮಕ್ಕಳನ್ನು ಶಾಲೆಗಳಲ್ಲಿ ಸುರಕ್ಷಿತವಾಗಿ ನೋಡಿಕೊಳ್ಳುವ ವ್ಯವಸ್ಥೆ ಏನಿದೆ ಮತ್ತು ಅದು ಎಷ್ಟು ಪರಿಣಾಮಕಾರಿಯಾಗಿದೆ?

ಮನೆಯಲ್ಲಿ ಮಕ್ಕಳು ಸುರಕ್ಷಿತರು ಎನ್ನುವ ಹಾಗೆ ಶಾಲೆಯಲ್ಲಿಯೂ ಮಕ್ಕಳು ಸುರಕ್ಷಿತರು ಎನ್ನುವುದನ್ನು ಈ ಕ್ಷಣಕ್ಕೆ ನಂಬುವುದೇ ಆದರೂ ಮನೆಯಿಂದ ಶಾಲೆ ಗೆ ಹೋಗುವ transit ಸಮಯದಲ್ಲಿ ಮಕ್ಕಳ ರಕ್ಷಣೆ ಯಾರ ಹೊಣೆ? ಅದರ ಬಗೆಗಿನ  Logistics ಅನ್ನು ನಾವು ನಿರ್ವಹಣೆ ಮಾಡಬಲ್ಲೆವಾ?

     ಮನೆಕೆಲಸಕ್ಕೆ ಬರುವ ಒಟ್ಟು 19 ಹೆಂಗಸರೊಂದಿಗೆ ಮಾತನಾಡಿದಾಗ ಅವರಲ್ಲಿ ಬಹುಪಾಲು ಜನ ಮಕ್ಕಳು ಸ್ಕೂಲಿಗೆ ಹೋದರೆ ನಿಶ್ಚಿಂತೆ ಎನ್ನುವ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಈ ಎರಡೂ ಸಂಧರ್ಭದಲ್ಲಿ ಗಮಿಸಬೇಕಾದ ಮುಖ್ಯ ಅಂಶ ಎಂದರೆ ಪರ್ಯಾಯ ವ್ಯವಸ್ಥೆ ಇರುವ ಮಕ್ಕಳು ಶಾಲೆ ಬೇಡ ಎನ್ನುತ್ತಿದ್ದರೆ , ಯಾವುದೇ ಸವಲತ್ತು ಇಲ್ಲದವರು ಶಾಲೆ ಬೇಕು ಎನ್ನುತ್ತಿದ್ದಾರೆ. ಹಾಗಾದರೆ ಈ ಎರಡು ವರ್ಗಗಳ ನಡುವಿನ ಅಂತರವನ್ನು ಸರಿ ಪಡಿಸುವುದು ಹೇಗೆ?
 Right to Education and Right to Life ಇವೆರಡೂ ಮಕ್ಕಳ ಮೂಲಭೂತ ಹಕ್ಕುಗಳು. ಆದರೆ ಈಗ ಜೀವ ಮುಖ್ಯವೋ, ಶಿಕ್ಷಣ ಮುಖ್ಯವೋ ಎನ್ನುವ ಗೊಂದಲ ಉಂಟಾಗಿದೆ ಎನ್ನುವ ಮಾತುಗಳೂ ಕೇಳಿ ಬರುತ್ತಿದೆ. Right to Life ಎಂದರೆ ಕೇವಲ ಉಸಿರಾಡಿಕೊಂಡು ಇರುವುದು ಎಂತಲ್ಲ. ಘನತೆಯುಳ್ಳ ಬದುಕನ್ನು ನಮ್ಮ ಮಕ್ಕಳಿಗೆ ಕೊಡಬೇಕು ಎಂದು ಹೇಳುತ್ತದೆ ಸಂವಿಧಾನ. ಘನತಯುಳ್ಳ ಬದುಕನ್ನು ಮಕ್ಕಳಿಗೆ ನೀಡಬೇಕು ಎಂದರೆ ಅದಕ್ಕೆ ಪೂರಕವಾದದ್ದು ಶಿಕ್ಷಣ ಮತ್ತು ಜೀವನ ಕೌಶಲ್ಯ. ಹಾಗಾಗಿ ಮಕ್ಕಳ ವಿಷಯದಲ್ಲಿ ಜೀವನ ಮತ್ತು ಶಿಕ್ಷಣ ಇವೆರಡನ್ನು ಬೇರೆಬೇರೆಯಾಗಿ ನೋಡಲು ಸಾಧ್ಯವಿಲ್ಲ. 

ಜೀವದ ರಕ್ಷಣೆಯ ಜವಾಬ್ದಾರಿ ಇರುವಂತೆ ಜೀವನಕ್ಕೆ ಬೇಕಾದ್ದೆಲ್ಲವನ್ನೂ ಏಕಕಾಲದಲ್ಲಿ ಒದಗಿಸಿ ಕೊಡಬೇಕಿರುವುದು ನಮ್ಮ ಜವಾಬ್ದಾರಿ. ಈ ಸಮಾನತೆಯನ್ನು ಜಾರಿಗೆ ಗೊಳಿಸಬೇಕು ಎನ್ನುವ ಉದ್ದೇಶದಿಂದಲೇ ಮೂರು ದಿನಗಳ ಹಿಂದೆ ಕೇರಳದ ಉಚ್ಛನ್ಯಾಯಾಲಯದಲ್ಲಿ ಸಿ. ಗಿರಿಜ ಎನ್ನುವವರು ಎಲ್ಲಾ ಮಕ್ಕಳಿಗೂ ಒಂದೇ ರೀತಿಯ ಸವಲತ್ತು ಮತ್ತು ಸಮನಾದ ಪರ್ಯಾಯ ಒದಗಿಸಿಕೊಡುವವರೆಗೆ ತಮ್ಮ ಮಕ್ಕಳ ಶಾಲೆಯನ್ನೂ ತೆರೆಯಬಾರದು ಹಾಗೆಯೇ ಆನ್ಲೈನ್ ಶಿಕ್ಷಣವನ್ನೂ ನೀಡಬಾರದು ಎಂದು ದಾವೆ ಹೂಡಿದ್ದಾರೆ. ಇದರ ಬಗ್ಗೆ ನ್ಯಾಯಾಲಯ ಏನು ಹೇಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

 ಮಾನ್ಯ ಶಿಕ್ಷಣ ಸಚಿವರು ಹೇಳಿದ್ದಾರೆ ಮಕ್ಕಳ ಶಿಕ್ಷಣಕ್ಕಾಗಿಯೇ ಒಂದು  ಟಿವಿ ಚ್ಯಾನೆಲ್ ಅನ್ನು ಮೀಸಲಿಡಲಿದೆ ಸರ್ಕಾರ ಎಂದು ಇದು ಒಂದು ಒಳ್ಳೆಯ ಕೆಲಸ. ಆದರೆ ಅದರ ಜೊತೆಜೊತೆಯಲ್ಲಿಯೇ ಶಿಕ್ಷಣ ಪದ್ಧತಿ ವಿಕೇಂದ್ರೀಕರಣ ಆಗಬೇಕಿರುವ ಸಮಯ ಈಗ ಬಂದಿದೆ. ಗ್ರಾಮಪಂಚಾಯತಿಗಳ ಮಟ್ಟದಲ್ಲಿ , ಅಲ್ಲಿನ ಸಾಮಾಜಿಕ ಹಿನ್ನಲೆಗೆ ತಕ್ಕಂತೆ ಬೋಧನಾ ಕ್ರಮವನ್ನು ಮತ್ತು ಪಠ್ಯವನ್ನು ಅಳವಡಿಸಕೊಳ್ಳಬೇಕಿದೆ. ಮಕ್ಕಳಿಗೆ ನಾವೆಲ್ಲರೂ ಸಹಬಾಳ್ವೆ ನಡೆಸುವ ಜೀವಿಗಳೊಂದಿಗೆ ಮತ್ತು ಪರಿಸರದೊಂದಿಗೆ Inter linked ಎನ್ನುವುದನ್ನು ಕಲಿಸಬೇಕಿದೆ.

ಆನ್ ಲೈನ್ ಶಿಕ್ಶಣವನ್ನು ಬಲಪಡಿಸುವುದು, ಇತರೆ ತಂತ್ರಜ್ಞಾನವನ್ನು ಬಳಸುವುದು, ಟಿವಿ ಮೂಲಕ ಪಠ್ಯಗಳನ್ನು ಮಕ್ಕಳಿಗೆ ತಲುಪಿಸುವುದು, ಓಪನ್ ಬುಕ್ ಪರೀಕ್ಷಾ ಪದ್ಧತಿ ಅಳವಡಿಸಿಕೊಳ್ಳುವುದು, NIOS ಪದ್ಧತಿಯನ್ನು ಬಲಪಡಿಸುವುದು, Nature Class ಸೌಲಭ್ಯದಂತಹ ಪರ್ಯಾಯ ವ್ಯವಸ್ಥೆಗಳ ಗುಣಮಟ್ಟ ಮತ್ತು ವಿಸ್ತಾರವನ್ನು ಹೆಚ್ಚಿಸಿಕೊಳ್ಳಬೇಕಿದೆ.

ನಗರ ಪ್ರದೇಶಗಳಲ್ಲಿ ಈಗಾಗಲೇ ಪೋಷಕರು ಒಂದಷ್ಟು ಮಕ್ಕಳ ಗುಂಪು ಕಟ್ಟಿ ಅವರಿಗೆ ತಾವೇ ವಿದ್ಯಾಭ್ಯಾಸ ನೀಡಿ ಪರೀಕ್ಷೆಗೆ ಕಟ್ಟಿಸುತ್ತಿರುವ ಒಂದು ವಿಧಾನ ಗ್ರಾಮಾಂತರ ಪ್ರದೇಶಗಳಿಗೂ ಹಬ್ಬಬೇಕು. ಸಾಧ್ಯವಿರುವ ಕಡೆ ಅಧ್ಯಾಪಕರು ಮನೆಗಳನ್ನು ಭೇಟಿ ನೀಡಿ ಮಕ್ಕಳಿಗೆ ಹೆಚ್ಚುವರಿ ಸಮಸ್ಯೆಗಳಿದ್ದರೆ ಬಗೆ ಹರಿಸಿಕೊಡುವ ಒಂದು ವ್ಯವಸ್ಥೆಯನ್ನು ಹುಟ್ಟುಹಾಕಬೇಕು. 

ಹಾಗೆಯೇ ಈವರೆಗೂ ಶಾಲೆಗಳಲ್ಲಿ ದೊರೆಯುತ್ತಿದ್ದ ಊಟದ ಸೌಲಭ್ಯವನ್ನು ಮಕ್ಕಳ ಮನೆಗೇ ತಲುಪಿಸುವಂತಹ ವ್ಯವಸ್ಥೆ ಆಗಬೇಕು. ಇಂತಹ ಪರ್ಯಾಯ ವ್ಯವಸ್ಥೆಗಳ ಮೂಲಕ ಅರ್ಧ ವಾರ್ಷಿಕ ಗಣನೆ ಬರುವವರೆಗೂ ಶಾಲೆಗಳನ್ನು ಮುಂದಡುವುದು ಮಕ್ಕಳ ಹಿತದೃಷ್ಟಿಯಿಂದ ಒಳ್ಳೆಯದು.

ಆರನೆಯ ವಯಸ್ಸಿನ ಮಗುವನ್ನು ಒಂದನೆಯ ತರಗತಿಗೆ ನೊಂದಾಯಿಸಿಕೊಳ್ಳಬೇಕು ಎನ್ನುತ್ತದೆ ಕಾನೂನು. ಆದರೆ ಶಾಲೆಗಳು ಮುಚ್ಚಿರುವ ಈ ಸಂಧರ್ಭದಲ್ಲಿ ಹೊಸ ಮಕ್ಕಳನ್ನು ನೋದಾಯಿಸಿಕೊಳ್ಳಬೇಕೇ ಬೇಡವೇ ಎನ್ನುವ ಗೊಂದಲ ಸಾಕಷ್ಟು ಶಾಲೆಗಳಲ್ಲಿ ಮೂಡಿದೆ. ಶಾಲೆಗಳನ್ನು ತೆರೆಯುವುದು ಮುಂದೂಡ ಬೇಕಿದೆಯೇ ಹೊರತು ಹೊಸ ಮಕ್ಕಳ ನೋಂದಾವಣೆಯನ್ನು  ತಡೆಗಟ್ಟಿದರೆ ಅಥವಾ ಮುಂದೂಡಿದರೆ ಒಂದು ತಲೆಮಾರಿನವರ ಬದುಕನ್ನೇ  ಮುಂದೂಡಿದಂತೆ ಆಗುತ್ತದೆ. ಅದು ಮಕ್ಕಳ ಹಕ್ಕುಗಳ ಉಲ್ಲಂಘನೆಯೂ ಹೌದು. ಅದಕ್ಕಾಗಿ ಈ ಕೂಡಲೆಯೇ ಸರ್ಕಾರ ಹೊಸ ಮಕ್ಕಳನ್ನು ನೊಂದಾಯಿಸಿಕೊಳ್ಳಲು ಶಾಲೆಗಳಿಗೆ ಆದೇಶ ನೀಡಬೇಕು.

ಮನೆಯಲ್ಲಿಯೇ ಹಲವು ರೀತಿಯ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಮಕ್ಕಳಿಗೆ ಮತ್ತು ಸದಾ ಕಾಲವೂ ಕೌಟುಂಬಿಕ ದೌರ್ಜನ್ಯವನ್ನು ನೋಡಿಕೊಂಡು ನಾಲ್ಕು ಗೋಡೆಯೊಳಗೆ ಇರಬೇಕಾದ ಮಕ್ಕಳಿಗೆ ಶಾಲೆ ಆರಂಭವಾಗುವವರೆಗೂ ಯಾವ ರೀತಿಯ ಪರಿಹಾರ ಕೊಡಬೇಕು?

ಈ ಎಲ್ಲಾ ವಿಷಯಗಳಲ್ಲಿ ಖಚಿತತೆ ಕಂಡುಕೊಂಡ ನಂತರವಷ್ಟೇ ಶಾಲೆಗಳನ್ನು ಪುನರಾರಂಭ ಮಾಡುವುದು ಸರಿಯಾದ ಕ್ರಮವಾಗಲಿದೆ. ಅಂತೆಯೇ ಶಿಕ್ಷಣ ಇಲಾಖೆಯು ಮಕ್ಕಳ ಅಭಿವೃದ್ಧಿ ಇಲಾಖೆಯೊಡನೆ ಸಮನ್ವಯದಿಂದ ಸಮಾಲೋಚನೆ ನಡೆಸಿ ವಾಸ್ತವವನ್ನು ಅರಿತರೆ ಈ ವಿಷಯದಲ್ಲಿ ನಿರೀಕ್ಷಿತ ಯಶಸ್ವೀ ನಿರ್ಧಾರ ತಳೆಯಲು ಸಾಧ್ಯವಾಗುತ್ತದೆ.
05/June/2020
Zoom Session
Organised by: KCRO, RTE Task Force, CRT

Comments

Popular posts from this blog

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್