ಈ ವಿಷಯದಲ್ಲಿ ಎಲ್ಲರೂ ಒಂದೇ ಆದರೆ ......



ಇಲ್ಲಿನ  ನೆನ್ನೆ ರಾತ್ರಿ 10 ಗಂಟೆಗೆ ಹಿಮಪಾತವಾಗುತ್ತಿದ್ದಾಗ ಲಂಡನ್‍ನ ರೋಮನ್ ಪಾರ್ಕ್ ನಲ್ಲಿ ಪ್ಲಾಸ್ಟಿಕ್ ಕವರ್ ಒಳಗೆ ಅಳುತ್ತಿದ್ದ ನವಜಾತ ಶಿಶು ಒಂದನ್ನು ರಸ್ತೆಯಲ್ಲಿ ಹೋಗುತ್ತಿದ್ದ ತಾಯಿ ಮಗ ರಕ್ಷಿಸಿ ಆಸ್ಪತ್ರೆಗೆ ನೀಡಿರುತ್ತಾರೆ ಮಗು ಆರೋಗ್ಯವಾಗಿದೆ ಅದಕ್ಕೆ ರೋಮನ್ ಎಂದು ಹೆಸರಿಡಲಾಗಿದೆ. ಎನ್ನುವ ಸುದ್ದಿಯನ್ನು ಓದುವಾಗ ಮನಸ್ಸು  ಬಿಕ್ಕುವುದರ ಜೊತೆಗೆ ಏರಿದ ಹುಬ್ಬು ಜೊತೆಯಾಗುತ್ತಾ ಅದು ಹೆಣ್ಣು ಮಗು ಎನ್ನುವುದನ್ನೂ ಗಮನಿಸಿತ್ತು.

       ಇಲ್ಲಿನ ಸರ್ಕಾರ ಭೂಮಿಗೆ ಬರುವ ಎಲ್ಲಾ ಮಕ್ಕಳನ್ನು ಅಕ್ಷರಶಃ ತನ್ನ ಮಕ್ಕಳೆಂದೇ ಪರಿಗಣಿಸಿ ಕನಿಷ್ಠ ಮಟ್ಟದ ಮಾನವೀಯ ಬಾಳ್ವೆಗೆ ಸವಲತ್ತು ಒದಗಿಸಿದೆ.
ಆದರೂ ಹೀಗೆ ಮಗುವನ್ನು ತಿಪ್ಪೆಗೆ ಹಾಕುವುದು ಎಂದರೆ.... ಎನ್ನುವ ಕೊರೆಯುವ ಪ್ರಶ್ನೆಯನ್ನು ಹಿಂಜುತ್ತಾ ಉಪಪ್ರಶ್ನೆಗಳೊಡನೆಯೇ ಮಾತಿಗಿಳಿದೆ ಪೊಲೀಸ್ ಇನ್ಸ್ಪೆಕ್ಟರ್ ಅಲೆಕ್ಸಾಂಡರ್ ಜೊತೆ.

ಈಗ ಅಲೆಕ್ಸಾಂಡರ್ನ ಆಫೀಸ್ ರೂಮಿನಲ್ಲಿ ಇದ್ದೆ. ಹೊರಗೆ ತೆಳುವಾಗಿ ಹಿಮ ಸುರಿಯುತ್ತಿತ್ತು. ಒಳಗೆ ಹಿತವಾದ ಬಿಸಿ. ಅವನೋ ಯಾವುದೋ ಉಪನಯನ ಸಮಾರಂಭದ ಬಾಳೆಲೆ ಭೋಜನದ ನಡುವೆ ಚಿರೋಟಿ ಮೇಲೆ ಸುರುವಿಕೊಳ್ಳುವ ಹಾಲಿನಂತೆ ಕಾಣುತ್ತಿದ್ದ. ಮಕ್ಕಳ ಹಕ್ಕುಗಳ ಬಗ್ಗೆ ಅವರ ಭವಿಷ್ಯದ ಬಗ್ಗೆ ಮಾತು  ಮುಂದುವರಿಸಲೇ ಅಥವಾ ನನಗಿನ್ನೂ ಮಕ್ಕಳಾಗುವ ವಯಸ್ಸಿದೆ ಎಂದು ಹೇಳಿಬಿಡಲೇ ಎನ್ನಿಸುವಷ್ಟು ಆಕರ್ಷಣೆ ಆ ವಾತಾವರಣದಲ್ಲಿ!!!

ನೆತ್ತಿ  ಮೇಲಿನ ವುಲ್ಲನ್ ಟೊಪ್ಪಿಗೆ ಬಿಗಿಯಾಯ್ತು. ಬಿಚ್ಚಿದೆ. ಅಲ್ಲೇ ಇದ್ದ ವೆಂಡಿಂಗ್ ಮಷೀನ್ ಹಿಂದೆ ಅವನು ಎರಡು ಲೋಟಕ್ಕೆ ಚೊಂಯ್ ಅಂತ ಕಾಫಿ ತುಂಬಿಸಿದ. ಒಂದು ಲೋಟವನ್ನು ನನ್ನ ಮುಂದಿಟ್ಟು “Tell me ಯಾಂಜಲಿ” ಅಂದ. ಥತ್, ಪೊಲೀಸರು , ಲಾಯರ್ಗಳು ಇವರೆಲ್ಲಾ ಸಾಮಾನ್ಯ ಮನುಷ್ಯರು ಆಗೋದು ಯಾವಾಗ ಎಂದುಕೊಳ್ಳುತ್ತಾ ಮಾತು ಶುರು ಮಾಡಲು ಗಂಟಲು ಸರಿ ಮಾಡಿಕೊಂಡೆ. ಆಕರ್ಷಣೆ ಎಷ್ಟು ಅಲ್ಪಾಯುಷಿ ಎನಿಸಿತು!
       “ಮ್....well,  ಬೆಳಗ್ಗೆ ನ್ಯೂಸ್ ಓದಿ ತುಂಬಾ ಸಂಕಟ ಆಯ್ತು"  ಅಂದೆ. " yes  but baby is fine now" ಎಂದು ಒಂದೇ ಸಾಲಿನ ಉತ್ತರ ಕೊಟ್ಟು ಸುಮ್ಮನಾದವನನ್ನು ಮಾತಿಗೆ ಎಳೆಯಲೇ ಬೇಕೆನ್ನುವ ಹಠಕ್ಕೆ ಬಿದ್ದೆ. " ನಿಮ್ಮಲ್ಲೂ ಹೀಗೆ ಆಗುತ್ತೆ ಎನ್ನುವ ವಿಷಯವೇ ಆಶ್ಚರ್ಯ ನನಗೆ. ನಿಮ್ಮದು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಒಂದು. ಪ್ರಜೆಗಳಿಗೆ ಮಕ್ಕಳಿಗೆ ಏನೆಲ್ಲಾ ಅನುಕೂಲಗಳನ್ನು ಸರ್ಕಾರವೇ ಕೊಡುತ್ತೆ . ಆದರೂ ಇಂತಹ ಹವಾಮಾನದಲ್ಲಿ ಮಗುವನ್ನು ಹೀಗೆ ಬಿಟ್ಟು ಹೋಗುವುದು ಎಂದರೆ ಕಾರಣ ಏನಿರತ್ತೋ" ಎಂದು ಸಣ್ಣಗೆ ಗೊಣಗಿದೆ.

" ಯಾಂಜಲಿ ನೀನು ಆನರ್ ಕಿಲ್ಲಿಂಗ್ ಬಗ್ಗೆ ಕೇಳಿದ್ದೀಯಾ" ಎಂದು ದನಿಯಿಂದಲೇ ಮುಖಕ್ಕೆ ರಾಚಿದ . ಎಳೆ ಜೀವವನ್ನು ತೋಳಲ್ಲಿ ಹಿಡಿದು ಕಿವಿಯಲ್ಲಿ  ಹತ್ತಿ ಇಟ್ಟುಕೊಂಡ ಆ ಹಸಿ ಬಾಣಂತಿ ಕಣ್ಣಲ್ಲಿ ಛಾಪು ಆಗಿರುವಾಗ ಆನರ್ ಕಿಲ್ಲಿಂಗ್ ಬಗ್ಗೆ ಕೇಳಿಯೇ ಇಲ್ಲ ಎನ್ನಲೇ?!  But,  ಭಾರತದಿಂದ ಬಂದು ಇಲ್ಲಿನ ತಿಪ್ಪೆಗೆ ಮಗು ಎಸೆದು ಹೋಗುವಷ್ಟು ಮೃಗೀಯ ಸಿರಿವಂತಿಕೆ ಬಂದಿದೆಯೇ ಅಥವಾ ಜಗತ್ತಿನಲ್ಲಿ ಇಷ್ಟೆಲ್ಲಾ ವಸಾಹತುಗಳನ್ನು ಆಳಿ ಅಳಿಸಿದ ನಂತರ ಇಂಗ್ಲೀಷರಿಗೆ ಆನರ್ ಹುಟ್ಟಿಕೊಂಡಿತೇ ಈಗ ,ಎನ್ನುವ ವ್ಯಂಗ್ಯ ನನ್ನೊಳಗೆ.

"ಒಹ್ ನಿಮ್ಮಲ್ಲೂ ಆನರ್ ಅನ್ನು ಹೀಗೆಯೇ ಕೊಲ್ಲುತ್ತೀರೇನು!!" ಕೇಳಿದೆ. " No... ಇಲ್ಲ ಈ ದೇಶದಲ್ಲಿ ಹೀಗೆ ಮಾಡುವುದು ಯಾವ ದೇಶದವರು ಗೊತ್ತಾ ನಿನಗೆ?" ಕೇಳುತ್ತಲೇ ಯಾವುದೋ ಪೇಪರ್ ಒಂದನ್ನು ಫೈಲ್ ಗೆ ಹಾಕುತ್ತಿದ್ದ ಆವ.  ಇನ್ನೇನು  ಭಾರತದವರೇ ಇರುತ್ತಾರೆ ಎಂದು ತೀರ್ಮಾನಿಸಿತ್ತು ಮನಸ್ಸು.  ನಿರ್ಧಾರಗಳು ಬದಲಾಗಬೇಕು ಒಳಿತಿಗೆ ಎಂದು ಹಾತೊರೆಯುತ್ತಾ. . .

ಹಸಿವು ನನ್ನನ್ನು ಅತಿಯಾಗಿ ತಲ್ಲಣಗೊಳಿಸುವ ವಿಷಯ ಮಾತ್ರ ವಲ್ಲ ಸುಲಭ ವಾಗಿ ಮೋಸಗೊಳಿಸ ಬಹುದಾದ  ವಿಷಯವೂ ಹೌದು. ಹೊಟ್ಟೆ ತುಂಬಿದವನೂ ಹಸಿವು ಎಂದರೆ ಸಾಕು ನನ್ನಂತಹ ದಾನಶೂರ ಮತ್ತೊಬ್ಬ ಇರಲಾರ ಎನ್ನುವುದು ನನ್ನ ಹುಂಬತನ ಎಂದು ಸಾಕಷ್ಟು ಬಾರಿ ಪ್ರಮಾಣೀಕೃತಗೊಂಡಿದೆ. ಅಮ್ಮ ಹೇಳುತ್ತಾಳೆ ಊಟ ಕೊಟ್ಟವರ ಮರೆಯಬಾರದು, ಊಟ ಕೊಟ್ಟು ಬೈಯ್ಯಬಾರದು ಅಂತ. ನೆನೆದು ಸಮಾಧಾನ ಎಂದುಕೊಳ್ಳುತ್ತೇನೆ. ಈಗ ಯಾಕೆ ಈ ಮಾತು? ಏನು ಮಾಡಲಿ ಈತ ಕೊಟ್ಟ ಕರಿ ಕಾಫಿ ಕುಡಿದು ಹೊಟ್ಟೆ ತಕಪಕಿಸುತ್ತಿದೆ ಮತ್ತು ಹೀಗೆ ಹಸಿವು ಆದಾಗಲೆಲ್ಲ ನೆನಪುಗಳು ಥಕಥೈಸುತ್ತವೆ.

       ಇವನನ್ನು ಇಷ್ಟು ಬೇಗ ಬಿಟ್ಟು ಹೊರಡಲು ಕೆಲಸವೂ ಮುಗಿದಿಲ್ಲ ಮನಸ್ಸು ಇಲ್ಲ."ಸರ್ ನಿಮ್ಮ ಸರ್ಕಾರ ಮಕ್ಕಳಿಗೆ ಏನೇನು ಸಹಾಯ ಮಡುತ್ತೆ ಎನ್ನುವ ವಿವರ ಎಲ್ಲಿ ಸಿಗಬಹುದು  ಎನ್ನುವ ಶಿಫ್ಟಾಚಾರದ ಪ್ರಶ್ನೆ ತೂರಿದೆ. "ಓಹ್ ನನ್ನನ್ನು ಸರ್ ಎನ್ನಬೇಡ" ಎನ್ನುತ್ತಾ ಕಂಪ್ಯೂಟರ್ ಮೌಸ್ ಮೇಲೆ ಕೈಯಾಡಿಸಿದ ಪ್ರಿಂಟರ್ ಪತರಗುಟ್ಟಲು ಶುರುವಿಟ್ಟಿತು. ಮಾಹಿತಿಗೂ ಬೆರಳ ತುದಿಗೂ ಇರುವ ಸಂಬಂಧ ಒಮೊಮ್ಮೆ ಹರೆಯಕ್ಕೂ  ಮೆದುಳಿಗೂ ಇರಬಾರದಿತ್ತೇ ಎಂದುಕೊಳ್ಳುವಾಗ . . .

   “ಸರ್ಕಾರ ಮಕ್ಕಳಿಗೆ Pocket moneyಯನ್ನೂ ಕೊಡುತ್ತದೆ ಎಂದವನದ್ದು ಉಡಾಫೆಯ ಮಾತೇ ಇರಬಹುದು ಎಂದು ಮುಖವನ್ನು ನೋಡಿದೆ. Child Benefit ಎನ್ನುವ ತಲೆಬರಹದಲ್ಲಿ ಪೋಷಕರಿಗೆ ತೆರಿಗೆ ರಿಯಾಯಿತಿ  ಸಿಗುತ್ತದೆ. ಮಗು ಹುಟ್ಟಿದಾಗ ಗಂಡ ಹೆಂಡತಿ ಇಬ್ಬರಿಗೂ 50 ವಾರಗಳ ರಜೆ ಮತ್ತು 37 ವಾರಗಳ ಸಂಬಳ ಕೂಡ. ಈ ಅನುಕೂಲಗಳು ಹದಿಹರೆಯದ ಮಕ್ಕಳು ತಾಯಿಯಾದರೂ , ಗಂಡನನ್ನು ಕಳೆದುಕೊಂಡವರು, ನಿರ್ಗತಿಕರು,  ದತ್ತು ತೆಗೆದುಕೊಂಡರು,  surrogacy ಮೂಲಕ ಮಕ್ಕಳು ಪಡೆದವರು , ಅಂಗವಿಕಲರು ಹೀಗೆ ಎಲ್ಲರಿಗೂ ಸಿಗುತ್ತೆ. ಎಂದು ಹೇಳುತ್ತಲೇ ಮತ್ತೊಂದು ಕಾಫಿ ಲೋಟ ತುಟಿಗಿಟ್ಟುಕೊಂಡ. ಪ್ರಿಂಟರ್ ಸದ್ದು ಕಟಕ್ ಅಂತ ಒಮ್ಮೆಲೆ ಅಡಗಿತು.


      ನಿರುದ್ಯೋಗಿ ಅಮ್ಮನಿಗೆ ಮಗುವನ್ನು ಸಲಹುವ ಉದ್ದೇಶಕ್ಕೆ ತಾತ್ಕಾಲಿಕ ಕೆಲಸವನ್ನೂ ಕೊಡುತ್ತಾರೆ. ಅಂಗವಿಕಲ ಪೋಷಕರಿಗೆ ಮತ್ತೂ ಹೆಚ್ಚಿನ ಸವಲತ್ತುಗಳು ಇವೆ. ಎನ್ನುತ್ತಾ ಅಚ್ಚಾಗಿದ್ದ ಪೇಪರ್ಗಳಿಗೆ ಪಿನ್ ಹಾಕುತ್ತಿದ್ದ. ಒಳಗಿನ ಶಾಖಕ್ಕೆ ಕಿಟಕಿಯ ಗಾಜಿನ ಮೇಲೆಲ್ಲಾ ಹಬೆ. ಹೊರಗೆ ಸುರಿಯುತ್ತಿದ್ದ ಮಂಜು ಸುಮ್ಮಾನಾಗಿತ್ತೆ? ಕಾಣದಷ್ಟು ಪಾರದರ್ಶಕತೆ ಥೇಟ್ ಮಕ್ಕಳನ್ನು ಮನುಷ್ಯರನ್ನಾಗಿ ಮಾಡುವ ಪ್ರಕ್ರಿಯೆಯಷ್ಟು . . .

       ಬರೋಬರಿ 22 ಪುಟಗಳನ್ನೂ ಜೋಡಿಸಿ ಜಾರದಂತೆ ಪಿನ್ ಮಾಡಿ ಕೈಗಿತ್ತ ಅಲೆಕ್ಸಾಂಡರ್. ಆನರ್ ಕಿಲ್ಲಿಂಗ್ ಇಲ್ಲಿಯೂ ನಡೆಯುತ್ತದೆಯೇ ಎನ್ನುವುದಕ್ಕೆ ಅವನು ಕೊಟ್ಟ ಉತ್ತರಕ್ಕೆ ನನ್ನ ಸಮಾಧಾನ ಇನ್ನೂ ಮೆತ್ತಿಕೊಂಡಿರಲಿಲ್ಲ. ಕಾರಣ ಇಂಗ್ಲೆಂಡ್ ನೊಡನೆ ಒಪ್ಪಂದ ಮಾಡಿಕೊಂಡಿರುವ ಎಲ್ಲಾ ದೇಶಗಳಿಂದ ವಲಸೆ ಬರುವವರಿಗೂ ಇಲ್ಲಿ ಮಕ್ಕಳಾದರೆ ಈ ಎಲ್ಲಾ ಅನುಕೂಲಗಳು ಲಭ್ಯವಿರುತ್ತವೆ. ಮಕ್ಕಳ ತಾಯಿ ಏನಾದರೂ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದವಳು ಎಂದಾದರೆ ಆಕೆಯ ಮಕ್ಕಳಿಗೆ ಸಾಮಾಜಿಕ ಭದ್ರತೆಯ ಸೌಲಭ್ಯವನ್ನು ಸರ್ಕಾರ ಒದಗಿಸಿ ಕೊಡುತ್ತದೆ.

       ಅಂಗವಿಕಲ ಮಕ್ಕಳಾಗಿಬಿಟ್ಟರಂತೂ ಅವರುಗಳಿಗೆ ಬೇಕಾದ ಗಾಲಿ  ಖುರ್ಚಿ ಬಿಳಿಕೋಲು ಕಿವಿ ಕೇಳಿಸಿಕೊಳ್ಳಲು ಬೇಕಾದ ಉಪಕರಣ ಸಂಬಂಧ ಪಟ್ಟ ಶಸ್ತ್ರಚಿಕಿತ್ಸೆ ಎಲ್ಲವೂ ಸರ್ಕಾರೀ ಖರ್ಚಿನಿಂದಲೇ ಆಗುತ್ತದೆ. ಅಷ್ಟೇ ಅಲ್ಲ ಅಂತಹ ಮಕ್ಕಳಿಗೆ ಹೊಂದುವಂತೆ ಮನೆಯನ್ನು ರಿಪೇರಿ ಅಥವಾ ಬದಲಾಯಿಸಿ ಕೊಡುತ್ತದೆ ಸರ್ಕಾರ .

        "ಇಷ್ಟೆಲ್ಲಾ ಅನುಕೂಲ ಇರುತ್ತೆ ಅಂತ ಇಲ್ಲಿ ಮಕ್ಕಳು ಹುಟ್ಟುವ ಸಂಖ್ಯೆ ಹೆಚ್ಚಾಗುತ್ತಿದೆಯೇನೋ ಅಲ್ವ" ಅಂದೆ. ಸ್ವಲ್ಪವೇನು ಹೆಚ್ಚೇ ಮೊದ್ದುಮೊದ್ದು ಎನ್ನಿಸಿತೇನೋ ಆತ ಕೆನ್ನೆಗಳು ಅಲ್ಲಾಡುವಷ್ಟು ಜೋರಾಗಿ ನಗುತ್ತಾ "ಇಲ್ಲ ಇಲ್ಲ ನಿಜ ಹೇಳಬೇಕೆಂದರೆ ಕಡಿಮೆಯಾಗುತ್ತಿದೆ" ಎಂದ. ನನಗೆ ಮತ್ತೂ ಕನ್ಫ್ಯೂಷನ್. ಬಾಲ್ಯವಿವಾಹ ನಿಲ್ಲಿಸಬೇಕು ನಿಜ .ಅದಕ್ಕಾಗಿ ಸಂಘಟಿತರಾಗಿ ಹೋರಾಡಬೇಕು ಅದೂ ನಿಜ ಆದರೆ ಈಗಾಗಲೇ ಬಾಲ್ಯವಿವಾಹದಿಂದ ಗರ್ಭಿಣಿಯಾದವರಿಗೆ ತಾಯಿಯಾದವರಿಗೆ ಪೌಷ್ಟಿಕಾಂಶ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಬೇಕು ಎಂದು ನಮ್ಮಲ್ಲಿ ನನ್ನ ಗುರುಗಳಾದ ಶ್ರೀಯುತ ವಾಸುದೇವ ಶರ್ಮ ಮತ್ತವರ ತಂಡದವರು ಚರ್ಚೆಯ ಕಾವೇರಿಸಿದ್ದಾಗ ಅದನ್ನು ವಿರೋಧಿಸಿದ್ದವಳು ನಾನು. (ನಂತರದ ದಿನಗಳಲ್ಲಿ ಅಭಿಪ್ರಾಯ ಬದಲಾವಣೆಯೂ ಆಯಿತು) ಇಂತಹ ಅನುಕೂಲ ಒದಗಿಸಿಕೊಟ್ಟರೆ ಬಾಲ್ಯವಿವಾಹ ತಡೆಗಟ್ಟುವುದರ ಬಗ್ಗೆ ಜನರು ಗಂಭೀರ ಗಮನ ಕೊಡಲಾರರು ಎನ್ನುವುದು ನನ್ನ ನಿಲುವಾಗಿತ್ತು. ಇಲ್ಲಿ ನೋಡಿದರೆ ಅನುಕೂಲ ಹೆಚ್ಚುಹೆಚ್ಚು ಕೊಡಲು ಮುಂದಾದಷ್ಟೂ ಹುಟ್ಟುವ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿದೆ ಎನ್ನುತ್ತಿದ್ದಾನಲ್ಲ ಇವ ಫೀಲ್ಡ್‍ಗೆ ಹೊಸಬ ಇರಬೇಕು ಎಂದುಕೊಂಡು "ಅಲೆಕ್ಸಾಂಡರ್ ನಿಮಗೆ ಎಷ್ಟು ವರ್ಷ  ಸರ್ವಿಸ್ ಆಗಿದೆ"  ಎಂದೆ. ಬರಲಿರುವ ಮಾರ್ಚ್ ೧೦ಕ್ಕೆ 27 ವರ್ಷಗಳನ್ನು ಮುಗಿಸಲಿದ್ದೇನೆ ಎಂದ.

       ಆದರೆ ಅವನ ತೆಳ್ಳಗಿನ ಹೊಟ್ಟೆ ಅಗಲವಾದ ಭುಜ ಬಾಗದ ಬೆನ್ನು ಅವನು ಮಿಸುಕುತ್ತಿದ್ದಾಗಲೆಲ್ಲಾ ಪರಿಮಳ ಹಂಚುತ್ತಿದ್ದ ಜೋವಾನ್ ಮಸ್ಕ್ ಎಲ್ಲವೂ ಅವನೊಬ್ಬ ಹೊಸ ಹುಡುಗನೇನೋ ಎನ್ನುವ ಭ್ರಮೆ ಹುಟ್ಟಿಸುತ್ತಿತ್ತು. ಅಯ್ಯೋ, ಎಷ್ಟು ಹುಡುಗಿ ಹುಡುಗಿಯಂತೆ ಯೋಚಿಸುತ್ತಿದ್ದೇನೆ ಎಂದು ಮನಸ್ಸಿನಲ್ಲೇ ಬೆನ್ನಿಗೆ ಗುದ್ದಿಕೊಂಡೆ. ವಯಸ್ಸು ಹಾರ್ಮೋನುಗಳ ಆಟ ಎಂದು ತಿಳಿಯುವ ಮೂದಲೇ ಹರೆಯವೇಕೆ ಅಮ್ಮನಾಗಿಬಿಡುತ್ತೆ ಎಂದು ಕೊಳ್ಳುತ್ತಾ . . .

ಆರೋಗ್ಯ ವಿದ್ಯೆ ರಕ್ಷಣೆ ಒಂದಷ್ಟರಮಟ್ಟಿಗೆ ಉದ್ಯೋಗ ಎಲ್ಲವನ್ನೂ ಸರಕಾರವೇ ಉಚಿತವಾಗಿ ನೀಡುತ್ತಿದೆ ಎಂದ ಮೇಲೂ ಹುಟ್ಟುವ ಮಕ್ಕಳ ಸಂಖ್ಯೆ ಹೆಚ್ಚುತ್ತಿಲ್ಲ. ಆನರ್ ಕಿಲ್ಲಿಂಗ್ ಇಲ್ಲಿನವರು ಮಾಡುವುದಿಲ್ಲ ಆದರೂ ಇಲ್ಲಿ ಆಗುತ್ತಿದೆ. ಈ ಎರಡೂ ವಿಷಯಗಳು ಭೇಧ್ಯದ ಹತ್ತಿರ ಹತ್ತಿರಕ್ಕೆ ಬಂದು ನಿಂತಿದ್ದವು. ಆತನ ಫೋನ್ ಟ್ರಿಣ್ಗುಟ್ಟಿತು. ಅವನ ಮಾತು ಅಲ್ಲಿ ನಡೀತಿತ್ತು, ನನ್ನ ನೆನಪು ಹಿಂದಕ್ಕೆ ಹಿಂದಹಿಂದಕ್ಕೆ.

ಅವತ್ತು  ಮಸ್ಕಟ್ ಏರ್ಪೋರ್ಟ್ನಲ್ಲಿ ತಿನ್ನುತ್ತಾ ಕೂತಿದ್ದೆ. ಮುಂದೆಯೇ ಒಬ್ಬಾತ ತನ್ನ ಊಟ ಹಿಡಿದುಕೊಂಡು ಜಾಗ ಹುಡುಕುತ್ತಾ ಹೋಗುತ್ತಿದ್ದ. ನನ್ನ ಮುಂದಿನ ಸೋಫಾ ಖಾಲಿ ಇತ್ತು ಇಲ್ಲೇ  ಬನ್ನಿ ಪರವಾಗಿಲ್ಲ ಎಂದು ಕರೆದೆ. ಅವನೊಬ್ಬ ಆಫ್ಘಾನಿಯಾಗಿದ್ದ. ಸಯ್ಯದ್ ಮೋಸೆಸ್. ಹೆಂಡತಿ ಮಗನನ್ನು ಹಯಾತ್ ನಲ್ಲಿ ಬಿಟ್ಟು ತಾನು ದುಬೈ ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ. 5 ವರ್ಷ ವಯಸ್ಸಿನ ಇರ್ಷಾದ್ ನ ಅಪ್ಪ. ಮುಂದಿನ ತಿಂಗಳು ಮತ್ತೊಂದು ಗಂಡು ಮಗುವಿಗೆ ಅಪ್ಪನಾಗಲಿದ್ದ.

"ಒಹ್ ಗುಡ್ ಗುಡ್ ಆದರೆ ಹುಟ್ಟಲಿರೋದು ಗಂಡು ಮಗುವೇ ಅಂತ ನಿಮಗೆ ಹೇಗೆ ಗೊತ್ತು" ಎಂದು ಕೇಳಿದೆ. "ನಮ್ಮ ದೇಶದಲ್ಲಿ ಹುಟ್ಟಲಿರುವ ಮಗು ಯಾವುದು ಎಂದು ಮೊದಲೇ ಹೇಳಿಬಿಡ್ತಾರೆ. ಪಾಕಿಸ್ತಾನ ಮತ್ತು ಇಂಡಿಯಾದ ಹಾಗಲ್ಲ" ಎಂದ.

ಪಾಕಿಸ್ತಾನದಲ್ಲಿ ಮರ್ಯಾದೆ ಹತ್ಯೆ ತುಂಬಾ ಮಾಡ್ತಾರೆ. ಆದರೆ ನಮ್ಮಲ್ಲಿ ಆ ರೀತಿಯ ಯಾವುದೇ ಸಮಸ್ಯೆ ಇಲ್ಲ. ಸಿನೆಮಾಗಳಲ್ಲಿ ತೋರಿಸುವಂತೆ ನಮ್ಮಲ್ಲಿ ರಸ್ತೆರಸ್ತೆಯಲ್ಲೂ ಮಕ್ಕಳು ಗನ್ ಹಿಡಿದು ಓಡಾಡಲ್ಲ. ಅವರುಗಳೂ ಶಾಲೆಗೇ ಹೋಗುತ್ತಾರೆ. ಸರ್ಕಾರವೇ ಶಾಲೆ ಕಾಲೇಜು ನಡೆಸುತ್ತೆ ಎಂದವ ಇದ್ದಕಿದ್ದ ಹಾಗೆ ಹೊಟ್ಟೆಯೊಳಗಿನ ಮಗು ಎಂಥದ್ದು ಎಂದುಮೊದಲೇ ಗೊತ್ತಿದ್ದರೆ ತಂದೆ ತಾಯಿಯರು ಮಾನಸಿಕವಾಗಿ ಸಿದ್ಧರಾಗಿರುತ್ತಾರೆ ಅನ್ನಿಸೋಲ್ಲ್ವಾ? ಕೇಳಿದ. ಭಾರತೀಯ ಹೆಣ್ಣಾಗಿ ಹೂಂ ಎಂದು ಉತ್ತರ ಹೇಳಲು ಸಾಧ್ಯವೇ?!

"ಪಾಕಿಸ್ತಾನದಲ್ಲಿ ಬಡತನ ಮತ್ತು ಅವರು ಯೋಚಿಸುವ ವಿಧಾನವೇ ಬೇರೆ ಆದರೆ ನೀವು ಭಾರತೀಯರು ತುಂಬಾ ತಿಳಿದವರು. ನಿಮ್ಮಲ್ಲೂ ಮರ್ಯಾದೆ ಹತ್ಯೆ ಆಗುತ್ತೆ ಎಂದರೆ ನಮಗೆಲ್ಲಾ ತುಂಬಾ ಆಶ್ಚರ್ಯ ಆಗುತ್ತೆ"  ಎನ್ನುತ್ತಾ ದುಬೈ ಗೆ ಬಂದು ನೋಡಿ ಯಾವುದೇ ಅಪರಾಧ ಇದ್ದರೂ ಅದು ಪಾಕಿಸ್ತಾನಿಗಳಿಂದ ಮತ್ತು  ಬಾಂಗ್ಲಾ ದೇಶಿಗಳಿಂದ ಆಗಿರುತ್ತೆ ಎನ್ನುವ ರಾಜಕೀಯಕ್ಕೆ ಹೊರಳಿದ. ಆದರೆ ಅವನಾಡಿದ ನೀವು ಭಾರತೀಯರು ತುಂಬಾ ತಿಳಿದವರು ಎನ್ನುವ ಮಾತು, ಇದೇನಪ್ಪ ನಾನು ಊರು ಬರುವ ಮೊದಲೇ ಭಾರತ ಏನಾದ್ರೂ ವಿಶ್ವಗುರು ಆಗಿಯೇ ಹೋಯ್ತೆ ಎನ್ನುವ ಅನುಮಾನದಲ್ಲಿ ಕ್ಯಾಲೆಂಡರ್ ನೋಡಿದ್ದೇ. ಚುನಾವಣೆಗೆ ಸಮಯವಿತ್ತು. ಆದರೆ ಮಕ್ಕಳನ್ನು ಚುನಾವಣೆಯ ಪ್ರಣಾಳಿಕೆಯಲ್ಲಿ ಸೇರಿಸಲು ಸೂಕ್ತ ಸಮಯ ಯಾವಾಗ ಎನ್ನುವುದನ್ನು ಪಂಚಾಂಗವೇ ಹೇಳಬೇಕೇನೋ.....

ಅವನ ಫೋನ್ ಮಾತು  ಮುಗೀತು. ಸುತ್ತಾಟದ ಸಣ್ಣ ಅನುಭವದಲ್ಲಿ ಗಮನಿಸಿರುವ ಮತ್ತೊಂದು ವಿಷಯ ಎಂದರೆ ವಿದೇಶದಲ್ಲಿನ ಪೊಲೀಸ್ ನಮ್ಮ ದೇಶದವರಷ್ಟು ಸಾಮಾನ್ಯರೊಂದಿಗೆ ಬೆರೆಯುವುದಿಲ್ಲ.  ಮಾತಿಗೆಳೆಯ ಬೇಕೆನ್ನುವ ಆಸಕ್ತಿ ಹುಟ್ಟಿಸುವುದಿಲ್ಲ,  ಧೈರ್ಯ ತರುವುದಿಲ್ಲ. ಮಾತನಾಡಿಸಿದರೂ ಭಾರತೀಯರಷ್ಟು ಸಾಮಾನ್ಯ ಜ್ಞಾನ ಇಲ್ಲವೇನೋ ಎಂಬ ಅನುಮಾನ ಮೂಡುತ್ತದೆ. ಆದರೆ ಅಲೆಕ್ಸಾಂಡರ್  Cambridge ನ ಕಾಲೇಜ್ ಒಂದರಲ್ಲಿ   Children Safety and Challenging Behaviour ಎನ್ನುವ ವಿಷಯದಲ್ಲಿ ಸಂಶೋಧನಾ ಪ್ರಬಂಧ ಮಂಡನೆಗೆ ತಯಾರಾಗುತ್ತಿರುವುದು  ನನ್ನ ಕುತೂಹಲ ತಣಿಸಲು ಸಹಕಾರಿ ಆಗುತ್ತಿತ್ತು.

" ನೀವು ಇಲ್ಲಿ ಮಕ್ಕಳಿಗೆ ಕೊಡುತ್ತಿರುವುದು  ಬರಿಯ ಮಾನವೀಯ ಅನುಕೂಲವಲ್ಲ ನಮ್ಮ ದೇಶದ ಸಾವಿರಾರು ಮಕ್ಕಳ  ಹೋಲಿಕೆಯಲ್ಲಿ ಇಲ್ಲಿನ ಸರ್ಕಾರ ನೀಡುತ್ತಿರುವುದು luxury. ಆದರೂ ಹುಟ್ಟುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ ಏನು ಕಾರಣ " ಎಂದು  ಕೇಳಿದೆ. "ಯಾಂಜಲಿ ನಾ ಕೊಟ್ಟ ಪೇಪರ್ಗಳಲ್ಲಿದೆ ಕಾರಣ ಓದಲಿಲ್ಲವಾ?" ಕೇಳಿದನಾತ. ಸರ್ಕಾರ ನಿಗಧಿ ಮಾಡಿರುವ ಎಲ್ಲಾ ಸವಲತ್ತುಗಳನ್ನು ಪಡೆಯಲು ಪೋಷಕರಿಗೆ National Insurance Number   ಇರಬೇಕು.  ಅದನ್ನು ಪಡೆಯುವುದು ಸುಲಭವಲ್ಲ. ಎಲ್ಲಾ ಅನುಕೂಲಗಳನ್ನು 16 ವರ್ಷಗಳ ವಯೋಮಿತಿಯವರೆಗೂ ನೀಡಲಾಗುತ್ತದೆ. ನಂತರ ಮುಂದುವರಿಸ ಬೇಕೋ ಬೇಡವೋ  ನಿರ್ಧಾರ ಸರ್ಕಾರಕ್ಕೆ ಸೇರಿರುತ್ತದೆ.

ಈ ನಡುವೆ ಪೋಷಕರು ಅಪರಾಧಿಗಳು ಅಂತೇನಾದರು ಆಗಿಬಿಟ್ಟರೆ ಸರ್ಕಾರ ಅಕ್ಷರಶಃ ಮಕ್ಕಳನ್ನು ಅವರಿಂದ ದೂರ ಮಾಡಿ ಪೋಷಕರು ಪಡೆದ ಎಲ್ಲಾ ಸವಲತ್ತುಗಳನ್ನು ಹಣದ ರೂಪದಲ್ಲಿ ಸರ್ಕಾರಕ್ಕೆ ಹಿಂದಿರುಗಿಸಲು ತಾಕೀತು ಮಾಡುತ್ತದೆ ಎಂದವನ ಮುಂದೆ ಅರೆ ನಿಮಿಷ ಕಣ್ಣು ಮುಚ್ಚಿದೆ. ಬಸಿರಿಗೆ ಭವಿಷ್ಯ ಇದೆ ನಿಜ. ಆದರೆ ಬಿಸಿಯೇರಿದ  ಬಸಿರಾಗುವ ಸಮಯಕ್ಕೆ ನಾಳಿನ ಯೋಚನೆ ಮಾಡು ಎಂದು ಕತ್ತಿನ ಪಟ್ಟಿ ಹಿಡಿದು ಜಗ್ಗುವುದು ಸಾಧ್ಯವಾಗುವಂತಿದ್ದರೆ . . .

       ಅಬ್ಬಬ್ಬಾ ಅದಕ್ಕೇ ಇರಬೇಕು ನಮ್ಮ ದೇಶದಲ್ಲಿ ಮಕ್ಕಳಿಗೆ ಎಂದು ಇಂತಹ ಅನುಕೂಲಗಳನ್ನು ಮಾಡಿಕೊಡುವುದೂ ಬೇಡ, ನಂತರ ವಸೂಲಿಗೆ ಬೇಜವಾಬ್ದಾರಿ ಪೋಷಕರುಗಳ ಹಿಂದೆ ಬೀಳುವುದು ಬೇಡ ಎಂದು ಸರ್ಕಾರ ಮಕ್ಕಳನ್ನು ಇನ್ನೂ ಮಾನ್ಯ ಮಾಡದೆಯೇ ಇರುವುದು. ಇನ್ನಷ್ಟು ವಿಷಯಗಳು ಮಕ್ಕಳ ಬಗ್ಗೆ ಆತ ಕೊಟ್ಟ ಕಾಗದಗಳಲ್ಲಿ ಇದೆಯಲ್ಲ, ಓದಿ ತಿಳಿದರಾಯ್ತು. ಈಗ ನೇರವಾಗಿ “ಅಲೆಗ್ಸ್ಯಾಂಡರ್ ನೀವು ನನಗೆ ಹತ್ತು ನಿಮಿಷಗಳು ಮಾತ್ರ ಎಂದು ಹೇಳಿ ಒಳಗೆ ಕರೆದಿರಿ, ಆದರೆ sorry ನಾನು ವಿಷಯಾಂತರಿಯಾದೆ. . .ಭಾರತೀಯರಿಗೆ ವಿಷಯಕ್ಕೆ ನೇರವಾಗಿ ಬರುವುದು ಶಿಷ್ಟಾಚಾರ ಎನಿಸೋಲ್ಲ” ಎಂದು ಒಂದು ಒಣನಗು ಹೊರ ಹಾಕಿದೆ. ಮುಂದುವರೆಯುತ್ತಾ “ ನೇರವಾಗಿಯೇ ಕೇಳುತ್ತೇನೆ ಹೇಳಿ ಮತ್ತೆ ನೆನ್ನೆ ನಡೆದ ಆ ಘಟನೆ ಯಾರು ಮಾಡಿರೋದು, ಯಾಕಾಗಿ” ಎಂದೆ.

       “ಯಾಂಜಲಿ, ನಾನು ಆಗಲೇ ನಿನಗೆ ಹೇಳಿದೆನಲ್ಲ ಇದು ಆನರ್ ಕಿಲ್ಲಿಂಗ್ ಪ್ರಕರಣ” ಥಣ್ಣಗೆ ಹರಿದ. ನಾ ಬಿಡಲಾರೆ “ಭಾರತೀಯರು ಮಾಡಿರುವುದೇ?” ಪ್ರಶ್ನೆಗಿಂತ ನಿರ್ಧಾರಿತ ದನಿಯಲ್ಲಿ ಕೇಳಿದೆ. “ಇಲ್ಲ ಇದು ಭಾರತೀಯರು ನಡೆಸಿರುವುದಲ್ಲ, ಇಲ್ಲಿಯವರೆಗೂ ಈ ನೆಲದಲ್ಲಿ ಭಾರತಿಯರು ಆನರ್ ಕಿಲ್ಲಿಂಗ್ ಅಪರಾಧ ಎಸಗಿಲ್ಲ” ಎಂದ. ವಿದೇಶದಲ್ಲಿ ಮಾನ ಉಳಿಯಿತು ಎನ್ನುವ ನಿಟ್ಟುಸಿರು ಎದೆಯಪ್ಪಿದರೂ ನನ್ನೂರಿನ ವಾಸ್ತವ ಗಂಟಲುಬ್ಬಿಸಿತು. “ ಮತ್ತೆ ಯಾರು ಮಾಡಿರೋದು ಅಲೆಗ್ಸ್ಯಾಂಡರ್?” “ದಾಖಲೆಗಳಿಲ್ಲದೆ ನಮ್ಮ ದೇಶದ ಒಳನುಸುಳುವ ಬಾಂಗ್ಲಾದೇಶಿಗಳು” ಬಾಣದಂತೆ ತೂರಿದ ಉತ್ತರವನ್ನು. ರಾತ್ರಿ ನಡೆದ ಪ್ರಕರಣವನ್ನು ಹನ್ನೆರಡು ಗಂಟೆಗಳಲ್ಲಿ ಇಷ್ಟು ಖಚಿತವಾಗಿ ಪರಿಹರಿಸಿ ಟೇಬಲ್ ಮೇಲೆ ಹರವಲು ಸಾಧ್ಯವೇ ಎಂದು ಅನುಮಾನಿಸುತ್ತಲೇ “ ಈ ಕೇಸ್ ಆಗಲೇ ಸಾಲ್ವ್ ಆಗಿಹೋಯ್ತಾ? ಆ ಮಗುವನ್ನು ತಿಪ್ಪೆಯಲ್ಲಿ ಬಿಸುಟೀದವರು ಸಿಕ್ಕರೇ?” ಎಂದು ಕೇಳಿದೆ.” ಇಲ್ಲ ಇನ್ನೂ ಅಷ್ಟೊಂದು ಖಚಿತವಾಗಿ ತಿಳಿದಿಲ್ಲ, ಅಂದಾಜು ನಡೆಯುತ್ತಿದೆ” ಎಂದವನ ಎದುರು ಗಡಿಯಾರ ನೋಡಿಕೊಂಡು “ ಇನ್ನು ನಿಮ್ಮ ಸಮಯ ಹಾಳು ಮಾಡೋಲ್ಲ, ನಾಳೆ ಭಾರತಕ್ಕೆ ಹೊರಡುವ ಮುನ್ನ ನಿಮಗ ಫೋನ್ ಮಾಡುತ್ತೇನೆ. ಇದರ ಬಗ್ಗೆ ಇನ್ನೇನಾದರು ವಿಷಯ ಇದ್ದರೆ ಹೇಳಿ” ಎಂದು ಅವನು ಮುಂದು ಮಾಡಿದ ಹಸ್ತವನ್ನು ಲಾಘವಿಸಿದೆ. ಅನುಮಾನಗಳನ್ನು ಹೀಗೆ ಕುಲುಕುವ ಮಾರ್ಗದರ್ಶಿ ಕೈಗಳು ಸಿಕ್ಕರೆ ನಾವೆಲ್ಲಾ ಅದೆಷ್ಟು  ಮನುಷ್ಯರಾಗಬಹುದು ಎಂದುಕೊಳ್ಳುತ್ತಾ. . .

       ಇನ್ನೇನು ವಿಮಾನ ಏರಬೇಕು. ನಂತರ ಈ ಫೋನ್‍ನ ಸಿಮ್ ಕಾರ್ಡ್ ಕೆಲಸ ಮಾಡೋಲ್ಲ. ಬಹಳಷ್ಟೂ ಬ್ಯಾಲೆನ್ಸ್ ಇದೆ. ಕೊನೆಯ ಕರೆ ಎಂದು ಅಲೆಗ್ಸ್ಯಾಂಡರ್ಗೆ ಫೋನ್ ಮಾಡಿದೆ. ಸ್ವಾಗತಕಾರಿಣಿ ಆತನಿಗೆ ಕನೆಕ್ಟ್ ಮಾಡಿದಳು “ ಹೇ ಯಾಂಜಲಿ ನೋಡು ನಾನು ಹೇಳಿದ್ದು ನಿಜವಾಯ್ತು. ಆ ಮಗುವನ್ನು ಹಾಗೆ ಬಿಟ್ಟು ಹೋಗಿದ್ದ ಹೆಂಗಸು ಸಿಕ್ಕಿದ್ದಾಳೆ. ಅವಳು ಅದೇ ದೇಶದವಳು. ಜರ್ಮನಿಯ ಮೂಲಕ ಇಲ್ಲಿಗೆ ಬಂದಿದ್ದಾಳೆ. ಯಾವುದೇ ದಾಖಲೆಗಳಿಲ್ಲ. ಈಗ ಅವರುಗಳನ್ನು ಸರ್ಕಾರ Deport  ಮಾಡುತ್ತಿದೆ. ಆ ಬಸಿರಿಗೆ ಕಾರಣ ಆದವನೂ ಅವಳ ದೇಶದವನೇ ಆದರೆ ಅವನಿನ್ನೂ ಸಿಕ್ಕಿಲ್ಲ. ಅವಳ ಹೇಳಿಕೆಯ ಪ್ರಕಾರ ಅವರಿಬ್ಬರಿಗೂ ಇಲ್ಲಿ ಬಂದ ಮೇಲೆ ಪರಿಚಯ ಸ್ನೇಹ ಆಗಿದೆ. ಈಗ ನಿರಾಶ್ರಿತರನ್ನು ಅವರ ದೇಶಕ್ಕೆ ವಾಪಸ್ಸು ಕಳುಹಿಸಲಾಗುತ್ತದೆ ಎಂದು ತಿಳಿದಾಗ , ಅಲ್ಲಿ ಹೋದರೆ ಅವರಿಬ್ಬರೂ ಬೇರೆಬೇರೆ ಧರ್ಮಕ್ಕೆ ಸೇರಿದವರಾದ್ದರಿಂದ  ಅಲ್ಲಿ ಇವರಿಬ್ಬರನ್ನೂ ಕೊಂದು ಬಿಡುತ್ತಾರಂತೆ. ಅದಕ್ಕೇ ಹೀಗೆ ಮಾಡಿಕೊಂಡಿದ್ದಾರೆ” ಎಂದು ಬಿಗಿಯಾಗಿ ಉಸುರಿದ.

     “ಥ್ಯಾಂಕ್ಯೂ ಅಲೆಗ್ಸ್ಯಾಂಡರ್. . .Take care, Bye” ಎಂದಿದಷ್ಟೇ, ವಿಮಾನದೊಳಗೆ ಸೀಟಿನಲ್ಲಿ ಕುಳಿತು ಹಾಳು ಕೇಳಲು ಕಿವಿಗೆ ಚುಚ್ಚಿಕೊಂಡೆ “ ಮಾಯವಾಗಿದೆ ಮನಸು ಹಾಗೇ ಸುಮ್ಮನೆ. . .” ಎನ್ನುವ ಒಂದೇ ಸಾಲನ್ನು ರಾಗವಾಗಿಸಿದ  ಯಂತ್ರದ  ಬ್ಯಾಟರಿ ಡೆಡ್ ಆಯಿತು. ಮನಸ್ಸು ಮಾಯವಾಗಲು ಒಲ್ಲೆ ಎನ್ನುತ್ತಿತ್ತು.
********************************************  
February 2019 @ Cambridge, UK

Comments

Popular posts from this blog

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್