ಮಕ್ಕಳ ಹಕ್ಕು, ಮೊದಲ ಹುಡುಗ


 ಈ ಸಂಪರ್ಕ ಸಂಖ್ಯೆಯೊಡನೆ ಮಾತು ನಿಂತು ಮೂರು ತಿಂಗಳಾಗಿತ್ತೇ?! ಗಮನಕ್ಕೇ ಬರಲಿಲ್ಲವಲ್ಲ. ಎಂದುಕೊಳ್ಳುತ್ತಲೇ ಬಂದಿದ್ದ ಆಡಿಯೋ ಸಂದೇಶವನ್ನು ತೆರೆದೆ “ ಲೇ ಲೇ ರಾಮಣ್ಣನ ಮಗಳೇ. . .” ಎಂದು ರಾಗವಾಗಿ ಹಾಡಿದ್ದ ಅವನು. ಆ ರಾಗಕ್ಕೆ ತಾಳವಾಗುವ ಮನಸ್ಸು ಇರಲಿಲ್ಲ. ಆದರೆ ಉತ್ತರಿಸುವುದು ಬೇಕಾಗಿತ್ತು. ಪ್ರಾಮಾಣಿಕವಾಗಿ ಹೇಳಿದೆ “ ಪಾಪ ಆ ಹುಡುಗಿ ಹತ್ತಿರ ಸೆಕ್ಶನ್ 94ರಲ್ಲಿ ಹೇಳಿರುವ ಯಾವ ದಾಖಲೆಯೂ ಇಲ್ಲ. ಏನು ಮಾಡೋದು ಅಂತ ಯೋಚಿಸ್ತಿದ್ದೀನಿ” ಎಂದೆ.


 ಪ್ರತಿ ಬಾರಿಯಂತೆ ಈಗ ಅವನು ಸಿಡುಕಲಿಲ್ಲ. “ನೀನೊಂದು ಗೂಬೆ’ ಎಂದು ದೂರಲಿಲ್ಲ. “ನಿನ್ನಿಂದ ರೊಮ್ಯಾಂಟಿಕ್ ಮಾತು impossible” ಎಂದು ಬೈಯಲಿಲ್ಲ. 


ಸಮಾಧಾನದಿಂದ “ಓಹ್ ಹೌದಾ. . .” ಎನ್ನುತ್ತಲೇ ಒಂದೆರಡು ಸಲಹೆಗಳನ್ನು ಕೊಟ್ಟ.

ಸಲೀಂ ನನ್ನ ಜೀವದ ಅವಿಭಾಜ್ಯ ಅಂಗ. ಜೀವನವನ್ನು ಹಂಚಿಕೊಂಡವ. ಅಮೇರಿಕೆಯಲ್ಲಿ ಇದ್ದಾನೆ. ನಮ್ಮಿಬ್ಬರದು ಹುಟ್ಟಿದಾರಭ್ಯ ಏತಿ ಎಂದರೆ ಪ್ರೇತಿ ಎನ್ನುವ ಬಂಧ. ನನ್ನ ಯಾವ ಗುರಿಗಳೂ ಅವನದಲ್ಲ. ಅವನ ಯಾವ ಕನಸುಗಳೂ ನನ್ನನ್ನು ರೋಮಾಂಚನ ಗೊಳಿಸಿದ್ದೇ ಇಲ್ಲ. ಕಲ್ಪನೆಗಳನ್ನೂ ನಮ್ಮಿಬ್ಬರ ಸಾಮ್ಯತೆಯೇ ಇಲ್ಲ. ಅವನದ್ದು ಬೆಳಗ್ಗೆ ಒಂಭತ್ತರಿಂದ ಸಂಜೆ ಐದಕ್ಕೆ ನಿಗಧಿಗೊಂಡ ಶೈಲಿ. ನನ್ನದು ಹಿಡಿದ ಕೆಲಸ ಮುಗಿಸಿ, ತಕ್ಷಣವೇ ಮತ್ತೊಂದನ್ನು ತೆರೆದಿಟ್ಟುಕೊಂಡು ಕೂರುವ ಹೊತ್ತುಗತ್ತು ಇಲ್ಲದ ಅಭಿರುಚಿ. ಅಗಾಧ ವ್ಯತ್ಯಯಗಳಲ್ಲೂ ನನ್ನನ್ನು ಹುಚ್ಚನಂತೆ ಪ್ರೀತಿಸುತ್ತಾನೆ ಅವ.


ಒಂದಷ್ಟು ವರ್ಷಗಳಿಂದ ಅವನ ಎಲ್ಲಾ ಮಾತುಗಳಿಗೂ ನನ್ನ ಉತ್ತರ ಮಕ್ಕಳ ನ್ಯಾಯ ಕಾಯಿದೆಯ ಸೆಕ್ಶನ್‍ಗಳೇ ಆಗಿರುತ್ತಿತ್ತು. ಇತ್ತ ಕಡೆಯಿಂದ ಹಂಚಿಕೆ ಎಂದರೆ POCSO ಕಾಯಿದೆಯ ಅರ್ಥೈಸುವುಕೆಯೇ ಆಗಿರುತ್ತತ್ತು. ಸಾಹಿತ್ಯ ಎಂದರೆ ಬಾಲ ಕಾರ್ಮಿಕ ನಿಷೇಧ ವಿಷಯ. ಕಣ್ಣೀರು ಎಂದರೆ ಬಾಲ್ಯ ವಿವಾಹದ ಪ್ರಕರಣಗಳು ನಗು ಎಂದರೆ ಮಕ್ಕಳು ನನಗೆ ಕೊಟ್ಟ ’ಪ್ರೇಮಪತ್ರಗಳು’. ಇವೆಲ್ಲವನ್ನೂ ಮೀರದ ಮಾತುಗಳು ಎಂದರೆ ಅಂತರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಡಂಬಡಿಕೆ.


 ಹೇಳಿದ ಹೇಳಿದ ಹೇಳುತ್ತಲೇ ಇದ್ದ ಬುದ್ಧಿ ಮಾತನ್ನು. ಇವೆಲ್ಲವನ್ನೂ ಮೀರಿದ ಬದುಕು ಇದೆ ಎಂದು ನನಗೆ ಉಪದೇಶಿಸುತ್ತಿದ್ದ. ನನಗೋ ಇವುಗಳೇ ಬ್ರಹ್ಮಾಂಡ. ಪಾಪ ಅವನ ತಾಳ್ಮೆ ಕೈಕೊಟ್ಟಿತ್ತು. ಎಂಟು ತಿಂಗಳಿಂದ ಮಾತು ಕಡಿಮೆ ಮಾಡಿದ್ದ. ಮೂರು ತಿಂಗಳಿಂದ ಫೋನ್ ಸಂದೇಶಗಳನ್ನೂ ಬಂದು ಮಾಡಿದ್ದ. ನನ್ನ ಗಮನಕ್ಕೇ ಬಂದಿರಲಿಲ್ಲ ಎನ್ನುವುದು ಅಹಂಕಾರ ಎನಿಸಿದರೂ ಸತ್ಯ.


ಅರೆ, ಈ ಬಾರಿ ಇವನು ಯಾಕೆ ಸಿಟ್ಟಾಗುತ್ತಿಲ್ಲ ಎನ್ನುವ ಗುಮಾನಿಯಿಂದಲೇ ಮಾತು ಮುಂದುವರೆಸಿದೆ. ಈ ವರ್ಷದ ಮಕ್ಕಳ ಸ್ನೇಹಿ ಸಪ್ತಾಹಕ್ಕೆ ಸಂಯೋಜಿಸಿದ್ದ ಕಾರ್ಯಕ್ರಮಗಳ ಬಗ್ಗೆ ವಿವರಿಸಿದಾಗಲೂ ಉತ್ಸಾಹ ತೋರುತ್ತಿದ್ದ. ಹದಿಮೂರು ವರ್ಷದ ಆ ಹುಡುಗಿ ತುಂಬು ಗರ್ಭಿಣಿ ಸಾವು ಬದುಕಿನ ನಡುವೆ ಹೋರಾಡಿ ಮಗು ಕಳೆದುಕೊಂಡ ಘಟನೆಯನ್ನು ಹೇಳಿದಾಗಲೂ “ಸಾಕು ಮಾಡು ಗೋಳು” ಎನ್ನಲಿಲ್ಲ ಅವ. ಹತ್ತೊಂಬತ್ತೇ ವರ್ಷದ ಹುಡುಗ ತಾನು ಪ್ರೀತಿಸಿದವಳನ್ನು ಓಡಿಸಿಕೊಂಡು ಬಂದು ಮಕ್ಕಳ ನ್ಯಾಯ ಮಂಡಳಿಯ ಎದುರು ಆಪಾದಿತನಾಗಿ ನಿಂತಿದ್ದ ವಿಷಯ ಹೇಳಿದಾಗ “ಅಯ್ಯೋ ಪಾಪ” ಎಂದ. “ತನ್ನ ತಂದೆ ಕುಡಿದು ಬಂದು ಕಾಟ ಕೊಡುತ್ತಾನೆ. ತನಗೆ ರಕ್ಷಣೆ ಕೊಡಿ” ಎಂದು ರಾತ್ರಿ ಹನ್ನೆರಡು ಗಂಟೆಗೆ ಮನೆ ಬಿಟ್ಟು ಬಂದು ಕದ ತಟ್ಟಿದ ಹದಿನಾರರ ಬಾಲೆಯ ಕಥೆ, ಶಾಲೆಯಲ್ಲಿ ಟೀಚರ್ ತುಂಬಾ ಹೊಡೆಯುತ್ತಾರೆ ಎಂದು ಅಳುತ್ತಿದ್ದ ಎಂಟರ ಪೋರನ ಮಾತು ಯಾವುದಕ್ಕೂ ಅವನ ಆಸಕ್ತಿ ಕಡಿಮೆ ಆಗಲೇ ಇಲ್ಲ. ನನ್ನ ಅನುಮಾನ ಈಗ ಮಿತಿ ಇರದ ಆಶ್ಚರ್ಯವಾಗಿ ತಿರುಗಿತ್ತು. ಕೊನೆಗೂ ಬಾಯಿಬಿಡಿಸಿದೆ ಅವನ ಬದಲಾದ ಚರ್ಯೆಯ ಕಾರಣವನ್ನು!


ಈಗ ಅವನು ಮಕ್ಕಳ ಹಕ್ಕುಗಳ ಬಗ್ಗೆ ಒಂದು ವರ್ಷದ ಡಿಪ್ಲೊಮಾ ತರಬೇತಿಗೆ ಸೇರಿದ್ದಾನೆ. ಅಮೇರಿಕೆಯಲ್ಲಿನ ಬೀದಿ ಮಕ್ಕಳ ಜೊತೆ ಸಂಪರ್ಕಕ್ಕೆ ಬಂದು ಅವರಿಗೆ ಮಾರ್ಗದರ್ಶಿ ಆಗಿದ್ದಾನೆ. ವಿಚ್ಚೇಧನ ಪಡೆದ ಕುಟುಂಬದ ಮಕ್ಕಳ ಮಾನಸಿಕ ಸ್ಥಿತಿಗೆ ಸ್ನೇಹಿತನಾಗಿ ಕೆಲಸ ಮಾಡುತ್ತಿದ್ದಾನೆ. ಅಪ್ರಾಯಸ್ಥ ಗರ್ಭಧಾರಣೆಯ ಕೆಡುಕುಗಳನ್ನು ಹರೆಯಕ್ಕೆ ತಿಳಿ ಹೇಳುವ ಗುರು ಆಗಿದ್ದಾನೆ. 


ಅವನು ಸೆಕೆಂಡ್ ಇನ್ನಿಂಗ್ನ್ಸ್‍ನಲ್ಲಿ ಜೀವನದ ಟೆಸ್ಟ್ ಮ್ಯಾಚ್ ಆಡಲು ಕಣಕ್ಕಿಳಿದಿದ್ದಾನೆ. ಅದಕ್ಕೇ ಅವನೀಗ ಹಗುರವಾಗಿದ್ದಾನೆ , ನನ್ನೊಡನೆ ನಿಜಾರ್ಥದಲ್ಲಿ ರೊಮ್ಯಾಂಟಿಕ್ ಆಗಿದ್ದಾನೆ!



ಮಕ್ಕಳಿಗೆ ದೊರಕಲೇ ಬೇಕಾದ ಬದುಕನ್ನು ದಕ್ಕಿಸಿಕೊಡಲು ನಾನು ಇನ್ನೂ ದೂರ ಸಾಗಬೇಕಿದೆ ಜನ್ಮಜನ್ಮಗಳಲ್ಲಿ. ಆದರೆ ಸಲೀಂಗೆ ನಿಜದ ಬದುಕನ್ನು ಅರ್ಥ ಮಾಡಿಸಿಕೊಟ್ಟ ಸಾಧಕಳಾಗಿದ್ದೇನೆ. ಮಕ್ಕಳ ಪರವಾಗಿ ದನಿ ಎತ್ತಿ ನನ್ನ ಮೊದಲ ಹುಡುಗ ನನ್ನನ್ನು ಅಮ್ಮ ಮಾಡಿದ್ದಾನೆ.  ಜಗತ್ತು ಆತಂಕದ ಪರಿಸ್ಥಿತಿಯಿಂದ ಹೊರಬರಬಹುದು ಎನ್ನುವ ಬೆಳಕಿನ ಕಿರಣ ಮೂಡಿದೆ. ಒಂದು ಸಣ್ಣ ಕನಕನ ಕಿಂಡಿ ಮಕ್ಕಳ ಬದುಕಿನಲ್ಲಿ ವಿಶ್ವರೂಪಿ ಬದಕನ್ನು ತೆರೆದಿಡಿಲಿ ಎನ್ನುವ ಆಶಯ ಈ ದಿನದ ಅಂತರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಚರಣಾ ದಿನಕ್ಕೆ.


ಅಂಜಲಿ ರಾಮಣ

ಅಧ್ಯಕ್ಷರು ಮಕ್ಕಳ ಕಲ್ಯಾಣ ಸಮಿತಿ

ಸಂಸ್ಥಾಪಕಿ ಅಸ್ತಿತ್ವ ಟ್ರಸ್ಟ್

Comments

Popular posts from this blog

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್