ಸವಾಲು ದಾಟುವ ಸಂಭ್ರಮ in VK
ಸವಾಲು ದಾಟುವ ಸಂಭ್ರಮ - ಮಹಿಳಾ ದಿನಾಚಾರಣೆಗಾಗಿ ಈ ದಿನದ ವಿಜಯಕರ್ನಾಟಕದಲ್ಲಿ ನಾ ಬರೆದ ಲೇಖನ ಹೇಗಿದೆ. ದಯವಿಟ್ಟು ಓದಿ 🙏
*******
ಅಭಿರುಚಿಯಿರುವವರಿಗೆ ಪ್ರವಾಸವೆನ್ನುವುದು ಆತ್ಮಸಾಂಗತ್ಯದ ಪರಮಾವಧಿ. ಅದರಲ್ಲೂ ಒಂಟಿಯಾಗಿ, ತಿಳಿಯದ ಜಾಗಕ್ಕೆ ಹೋಗುವ, ಅಪರಿಚಿತರೊಡನೆ ಒಡನಾಡುವ ಪ್ರವಾಸವೆಂದರೆ ಅಂತರಂಗಕ್ಕೆ ಪಯಣಿಸುವ ಕುಂಡಲಿನಿ ಯಾತ್ರೆಯಂತೆ.
’ಜಗದ ಜಂಜಡ ಬೇಡ ನಿನಗೆ ನಾನು ಆಗುವೆ ಕಣ್ಣು ನಿನಗೆ’ ಎನ್ನುತ್ತಾ ಪಾರದರ್ಶಕ ಗೆಳೆಯನೊಬ್ಬ ತನ್ನನ್ನೇ ಪ್ರೇಯಸಿಯಾಗಿಸಿಕೊಂಡಿದ್ದಾನೇನೋ ಎನ್ನುವಂತಹ ಅಮೂಲ್ಯ ಭಾವವನ್ನು ಅನುಭವಿಸಿದ್ದೇನೆ ಪ್ರವಾಸದಲ್ಲಿ.
ಉದ್ಯೋಗಸ್ಥ ಮಹಿಳೆ ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗುವಾಗ ಇಲ್ಲದ ಕೌತುಕ, ಮೆಚ್ಚುಗೆ, ಒಂದು ತೂಕ ಅಸಹನೆ ಮಹಿಳೆಯೊಬ್ಬಳು ಒಂಟಿ ಪ್ರವಾಸಕ್ಕೆ ಹೊರಟಿದ್ದಾಳೆ ಎಂದರೆ ಇರುತ್ತದೆ ಎನ್ನುವುದು ಸೋಜಿಗ.
ಹಾಗೆ ಊರೂರು ಸುತ್ತುವವರು ತಮ್ಮ ಕುಟುಂಬದ ಹೊಣೆಯನ್ನು ಬದಿಗೊತ್ತಿರುವವರೋ, ಮತ್ತ್ಯಾವುದೇ ಯಾವುದೇ ಜವಾಬ್ದಾರಿ ಇಲ್ಲದವರೋ, ವಿಪರೀತ ದುಡ್ಡು ಇರುವವರಾಗಿರುತ್ತಾರೆ ಎನ್ನುವುದೇ ಬಹುಪಾಲು ಜನರ ಆಲೋಚನೆ.
ಆದರೆ ಎಲ್ಲವನ್ನೂ ನಿಭಾಯಿಸಿಯೂ ತನ್ನ ಆಸಕ್ತಿಗಾಗಿ ಸಮಯ ಮತ್ತು ಸೌಲಭ್ಯವನ್ನು ಒದಗಿಸಿಕೊಳ್ಳಲು ಮನಸ್ಸು ಮಾಡುವ ಮಹಿಳೆಯ ಬಗ್ಗೆ ಸಮಾಜಕ್ಕೆ ಅಸಡ್ಡೆ ಇರುವಂತೆಯೇ ತಮಗಾಗದ್ದನ್ನು ಮತ್ತೊಬ್ಬರು ಮಾಡುತ್ತಿದ್ದಾರೆ ಎನ್ನುವ ಖುಷಿ ಅನುಭವಿಸುವ ಒಂದು ಸಣ್ಣ ವರ್ಗವೂ ಇಲ್ಲದಿಲ್ಲ.
ಪ್ರವಾಸಕ್ಕೆ ಹೋಗಿ ಬಂದಾಗ ಬರೆಯುವ ಒಂದೊಳ್ಳೆ ಲೇಖನವನ್ನು ಓದಿಯೋ, ಫೋಟೋ ರೀಲ್ಸ್‍ಗಳನ್ನು ನೋಡಿಯೋ, ಪ್ರವಾಸ ಯಾವಾಗಲೂ ಹಿತ, ಸುಖ ಎಂದುಕೊಳ್ಳುವುದು ವಿರೋಧಾಭಾಸ. ಕುಟುಂಬದ ಜೊತೆಯಲ್ಲಿ, ಸ್ನೇಹಿತರೊಡನೆ ಅಥವಾ ಟ್ರಾವೆಲ್ ಏಜೆಂಟ್‍ಗಳು ಏರ್ಪಡಿಸಿರುವ ಗುಂಪಿನ ಪ್ರವಾಸದಲ್ಲಿ ಯಾವುದೇ ಕೊರತೆ ಬಾರದು ಯಾಕೆಂದರೆ ಎಲ್ಲವೂ ಪೂರ್ವನಿರ್ಧಾರಿತ.
ಹಾಗೊಂದು ವೇಳೆ ನಡುವಿನಲ್ಲಿ ಧುತ್ತೆಂದು ಸಮಸ್ಯೆ ಎದುರಾದರೆ ಬಗೆಹರಿಸಿಕೊಳ್ಲಲು ಪರಸ್ಪರರ ಸಹಕಾರ ಬೆಂಬಲ ಇರುತ್ತದೆ. ಬೆನ್ನ ಮೇಲೊಂದು ಬ್ಯಾಗ್ ಹಾಕಿಕೊಂಡು ಒಬ್ಬರೇ ಹೊರಡುವ ಪ್ರವಾಸ ಹಾಗಲ್ಲ.
ಎಷ್ಟೇ ವಿದ್ಯಾವಂತೆ, ಹಣವಿದೆ, ಆಧುನಿಕ ಸಲಕರಣೆ ಇದೆ ಎಂದರೂ ಸದಾಕಾಲ ತಾನು ಹೆಂಗಸು ಮತ್ತು ನನ್ನ ರಕ್ಷಣೆ ನನ್ನ ಹೊಣೆ ಎನ್ನುವುದು ಅರಿವಿಗೇ ಬಾರದಂತೆ ನಾಭಿಯ ಮೂಲೆಯಲ್ಲಿ ಕರೆಯಾಗುತ್ತಿರುತ್ತದೆ.
ಇತ್ತೀಚೆಗೆ ಜಪಾನ್ ದೇಶಕ್ಕೆ ಹೋಗಿದ್ದೆ. ಟೊಕಿಯೋದಿಂದ ಕ್ಯೋಟೋ ನಗರಕ್ಕೆ ಹೋಗಲು ಕಾಯ್ದಿರಿಸಿದ್ದ ಬುಲೆಟ್ ಟ್ರೇನ್ ನಿಲ್ದಾಣಕ್ಕೆ ಹೋಗಲು ಮೆಟ್ರೋ ರೈಲು ಹತ್ತಿದ್ದೆ. ಕೆಲವೇ ಕ್ಷಣಗಳಲ್ಲಿ ರೈಲಿನ ಬಾಗಿಲು ಮುಚ್ಚಿದ ಕೂಡಲೇ ಗೊತ್ತಾಯ್ತು ನಾನು ಹತ್ತಿರುವುದು ತಪ್ಪು ಮಾರ್ಗ ಎಂದು. ಮುಂದಿನ ನಿಲ್ದಾಣದಲ್ಲಿ ಇಳಿಯುವಾಗ ರೈಲಿನ ಒಳಗೇ ನನ್ನ ವ್ಯಾನಿಟಿ ಬ್ಯಾಗ್ ಅನ್ನು ಮರೆತು ಬಿಟ್ಟೆ.
ಅದರಲ್ಲಿ ಹಿಂದಿನ ಪಾಸ್ಪೋರ್ಟ್‍ಗಳು ಮತ್ತು ಒಂದಷ್ಟು ದುಡ್ಡು ಕೂಡ ಇಟ್ಟಿದ್ದೆ. ಕೆಲವೇ ಗಂಟೆಗಳಲ್ಲಿ ಆ ಬ್ಯಾಗ್ ಸಿಕ್ಕಿತು. ಆದರೆ ಅಲ್ಲಿಯವರೆಗೂ ನಾನು ಎದುರಿಸಿದ ಆತಂಕವನ್ನು ಹಂಚಿಕೊಳ್ಳಲು ಜೊತೆಗಾರರಿರಲಿಲ್ಲ.
ಭಾವತೀವ್ರತೆಯಲ್ಲಿ ಮುಂದೇನು ಮಾಡಬೇಕು ಎನ್ನುವುದು ಹೊಳೆಯುವುದಿಲ್ಲ, ಅಂತಹ ಸಂದರ್ಭದಲ್ಲಿ ಜೊತೆಯಲ್ಲಿ ಇರುವವರ ಸಲಹೆ ಪಡೆದುಕೊಳ್ಳಬಹುದು. ಇಂತಹ ಲಗ್ಷುರಿ ಒಂಟಿ ಪಯಣಕ್ಕೆ ಇರುವುದಿಲ್ಲ. ಎಲ್ಲವನ್ನೂ ಖುದ್ದಾಗಿ ನಿರ್ವಹಿಸಿಕೊಳ್ಳಬೇಕು. ಇದು ಹೆಚ್ಚು ಸಮಾಧಾನ ಬೇಡುವ ವಿಷಯ.
ಅರುಣಾಚಲಪ್ರದೇಶದಲ್ಲಿ ಕತ್ತಾಲಾದಾಗ ದಾರಿ ತಪ್ಪಿ ಮಿಲಿಟರಿ ಜಾಗ ಹೊಕ್ಕಿಬಿಟ್ಟಿದ್ದೆ. ಯಾವುದೇ ದಾಖಲೆಯನ್ನು ತೋರಿಸಿದರೂ ಅಧಿಕಾರಿಗಳು ನನ್ನ ಮಾತನ್ನು ನಂಬದೇ ಇದ್ದಾಗ ಮುಂದೇನು ಎನ್ನುವುದೇ ತೋಚದೆ ಬುದ್ಧಿಗತ್ತಲಾಗಿತ್ತು.
ಇನ್ನೊಮ್ಮೆ ಕೆಲ್ಲಿಂಪಾಂಗ್‍ನಲ್ಲಿ ಕಾಡಿನ ಮಧ್ಯೆ ಹೆಚ್ಚೇನೂ ಸೌಲಭ್ಯವಿಲ್ಲದ ರೆಸಾರ್ಟ್‍ನಲ್ಲಿ ಉಳಿದುಕೊಂಡಿದ್ದೆ. ಕಾವಲುಗಾರ 6 ಗಂಟೆಯ ನಂತರ ಯಾವುದೇ ಕಾರಣಕ್ಕೂ ರೂಮಿನ ಹೊರಗೆ ಬರದಂತೆ ತಾಕೀತು ಮಾಡಿದ್ದ. ಫೋನ್ ಕೂಡ ಇರಲಿಲ್ಲ. ಆ ರಾತ್ರಿ ನನ್ನ ಹೊಟ್ಟೆ ಹಿಂಸೆಯಾಗಿ ತೆಗೆದುಕೊಂಡು ಹೋಗಿದ್ದ ಔಷಧಕ್ಕೆ ಬಗ್ಗದೆ ಸೊರಗಿಸಿಬಿಟ್ಟಿತ್ತು. ಬೆಳಗಿನವರೆಗೂ ಉಸಿರಿದ್ದರೆ ನಾನು ಮತ್ತು ಮುಂದಿನ ಪ್ರವಾಸ ಎನ್ನುವ ಸ್ಥಿತಿ.
ಇಂತಹ ಕೆಲವಾರು ಇರುಸುಮುರುಸುಗಳನ್ನು ಎದುರುಗೊಂಡರೂ ಒಂಟಿಯಾಗಿ ಪ್ರವಾಸ ಮಾಡುವುದು ಎಂದರೆ ಪ್ರಸವ ವೈರಾಗ್ಯದಂತೆ. ಮನೆಯ ಕಾಲಿಂಗ್ ಬೆಲ್ ಒತ್ತುವ ಮೊದಲೇ ತಯಾರಾಗಿರತ್ತೆ ಮುಂದಿನೋಟದ ಭೂಪಟ.
*****************************
❤️
ReplyDelete