ನಲಿವು ಎಂದೂ ವ್ಯಕ್ತಿಗತ ; ನೋವು ಯಾವತ್ತಿಗೂ ಸಾಮುದಾಯಿಕ

(ಕರ್ನಾಟಕ ಲೇಖಕಿಯರ ಸಂಘದ , ಸಾಹಿತ್ಯ ಸಂಚಯ ಕಾರ್ಯಕ್ರಮದಲ್ಲಿ ಆಡಿದ ಮಾತುಗಳು) *ಕಾನೂನು, ಮಹಿಳೆ ಮತ್ತು ಅರಿವು* ಎಲ್ಲರಿಗೂ ನಮಸ್ಕಾರ. ಇಂದಿನ ಆಹ್ವಾನ ಪತ್ರಿಕೆಯಲ್ಲಿ ಉಪನ್ಯಾಸಕಿ ಎನ್ನುವ ದೊಡ್ಡ ಪದ ಬಳಸಿದ್ದಾರೆ. ಆದರೆ ಉಪನ್ಯಾಸ ಮಾಡಲು ಆಳವಾದ ಅಧ್ಯಯನ ಇರಬೇಕು ಮತ್ತು ಉಪನ್ಯಾಸಕಿ ಆಗಲು ಅರ್ಹತೆ ಇರಬೇಕು. ಇವೆರಡು ನನ್ನ ಬಳಿ ಇಲ್ಲ. ಹಾಗಾಗಿ ಇದು ಉಪನ್ಯಾಸ ಅಲ್ಲ. ನಿಮ್ಮೆಲ್ಲರ ವಿನಾಕಾರಣ ವಿಶ್ವಾಸಕ್ಕೆ ಮಣಿದು ನನ್ನ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಂದಿದ್ದೇನೆ ಮತ್ತು ಅದರ ಮೂಲಕವೇ ಬೆಳೆಯಬೇಕು ಎನ್ನುವ ಆಸೆಯಿಂದ ಇಲ್ಲಿದ್ದೇನೆ. ಒಂದಷ್ಟು ವರ್ಷಗಳ ಹಿಂದೆ ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಕಾನೂನು ತರಬೇತಿ ನೀಡಲು ಹೋಗಿದ್ದಾಗ, ಮಹಿಳಾ ಐಏಎಸ್ ಅಧಿಕಾರಿಯೊಬ್ಬರು ಮಹಿಳೆಯರೂ ಉಯಿಲು ಮಾಡಬಹುದು ಎನ್ನುವ ವಿಷಯವೇ ತಮಗೆ ತಿಳಿದಿರಲಿಲ್ಲ ಎಂದು ಹೇಳಿಕೊಂಡಾಗ ಮೊದಲ ಬಾರಿಗೆ ಒಬ್ಬ ಮಹಿಳೆಯಾಗಿ ನನ್ನ ಜವಾಬ್ದಾರಿಯ ಅರಿವಾಯ್ತು. ಅದಕ್ಕೂ ಮೊದಲಿನಿಂದಲೇ, ಅಸ್ತಿತ್ವ ಸಂಸ್ಥೆಯನ್ನು ಸ್ಥಾಪಿಸಿದಾಗಿನಿಂದ ಮಹಿಳೆಯರು ಮತ್ತು ಮಕ್ಕಳು ಎನ್ನುತ್ತಾ ಕೆಲಸ ಮಾಡುತ್ತಿದ್ದರೂ, ಈ ಘಟನೆ ಮೊದಲ ಬಾರಿಗೆ ನನ್ನ ಜವಾಬ್ದಾರಿಯನ್ನು ಕೇಂದ್ರಿಕೃತಗೊಳಿಸಿಕೊಟ್ಟಿದ್ದು. ಇದರಿಂದ ನಾನು ಕಲಿತ ಪಾಠ ಅಂದರೆ ಕಲಿಯುವುದು ಎಷ್ಟು ಒಳ್ಳೆಯದೋ ಕಲಿತು ಸುಮ್ಮನಿರುವುದು ಅಷ್ಟೇ ಕೆಟ್ಟದು ಅಂತ. ನಮ್ಮ ಸಂವಿಧಾನದ ಮೂಲಭೂತ...