ಕರೋನ ತೋರಿದ ತವರು


 ಇವತ್ತಿನ ಆಂದೋಲನ ಪತ್ರಿಕೆಯಲ್ಲಿ ಕರೋನ ತೋರಿಸಿದ ತವರೂರ ಸುಖ.... ಓದುತ್ತೀರಲ್ಲ 🙏🙏🙏


“ ಜೀವನದಲ್ಲಿ ಎದುರಿಸಲು ಆಗುವುದೇ ಇಲ್ಲ ಎನ್ನುವ ಕಷ್ಟ ಯಾವುದೂ ಇರವುದಿಲ್ಲ. ಯಾವ ನೋವೂ ತಾತ್ಕಾಲಿಕ. ಸಂತೋಷ ಪಡುವುದು ನಮ್ಮ ಕೈಯಲ್ಲಿಯೇ ಇದೆ” ಹೀಗೆಲ್ಲಾ ಇನ್ನೂ ತರಹಾವರಿ ವಾಕ್ಯಗಳನ್ನು ಬಲು ಮಧುರವಾದ ದನಿಯಲ್ಲಿ ಹರಿಯಬಿಡುತ್ತೇನೆ ಟೇಬಲ್‍ನ ಈಚೆ ಬದಿಯಿಂದ ಎದುರು ಕುಳಿತವರಿಗೆ. ಒಮ್ಮೆ ಹೀಗೇ ಭಾರೀಭಾರೀ ತೂಕದ ಮಾತುಗಳನ್ನು ಆಡಿ ಬೀಗುತ್ತಿದ್ದೆ. 


ಕೇಳಿಸಿಕೊಂಡ ಒಬ್ಬಾಕೆ “ ಮೇಡಮ್, ನಿಮಗೆ ಬರೀ ಹೇಳಕ್ಕೆ ಬರತ್ತೆ ಅಷ್ಟೆ. ನಿಮಗೂ ಒಂದ್ಸರ್ತಿ ಈ ರೀತಿಯ ಕಷ್ಟ ಬಂದ್ರೆ ಗೊತ್ತಾಗತ್ತೆ, ಎಷ್ಟ್ ನೋವು ಅಂತ” ಎಂದು ಪಟ್ ಅಂತ ಹೇಳಿ ಟಪಕ್ ಅಂತ ಎದ್ದು ಹೋಗಿದ್ದಳು. 


ಆಕೆಯ ಕಷ್ಟ ಏನಿತ್ತು ಅಂದರೆ ೮-೧೦ ತಿಂಗಳಿಂದ ಒಂದಲ್ಲ ಒಂದು ಕಾರಣಕ್ಕೆ ತಾಯಿ ಮನೆಗೆ ಹೋಗಲು ಆಗಿರಲಿಲ್ಲ. ಅದೇ ನೆಪಕ್ಕೆ ಗಂಡ ಹೆಂಡತಿಯರ ನಡುವೆ ರಾತ್ರಿ ಜಗಳಗಳು. ಅವನಿಗೆ ಸಿಟ್ಟು ಇವಳಿಗೆ ಸಿಡುಕು. ಓಹೋ, ಎಷ್ಟು ಬಾಲಿಶ ಇದು. ಸ್ವಲ್ಪವೂ ಪ್ರೌಢಿಮೆ ಇಲ್ಲದವಳು. ಎಂತಹಾ ಹೆಂಗಸಪ್ಪ ಇವಳು. ಹೀಗೆಲ್ಲಾ ಅಂದುಕೊಂಡಿದ್ದೆ.


ಪಾದಕ್ಕೆ ನೀರು ತಾಕಿದರೆ ಮಾತ್ರ ಕೈ ಗೋವಿಂದನ ಭಂಗಿಗೆ ಹೋಗೋದು ಅಂತ ತಿಮ್ಮಪ್ಪನ ಭಕ್ತರೊಬ್ಬರು ಹೇಳಿದ್ದನ್ನು ಅರ್ಥವಾಗಿಸಿದ್ದು ಹಾಗೂ ಈ ಮೇಲಿನಾಕೆಯ ಶಾಪ ತಟ್ಟಿಸಿದ್ದು ಕರೋನ ಎನ್ನುವ ಏಳು ಕೊಂಡಲ ವಾಡ! ಅಬ್ಬಾ! ಎಷ್ಟೆಲ್ಲಾ ಬದಲಾಗಿ ಹೋಯಿತು. ನನ್ನ ಕಾಲಿನ ಚಕ್ರ ಅದೆಲ್ಲಿ ಕಳಚಿಕೊಂಡಿತು? ಬ್ರಿಡ್ಜ್ ಕೆಳಗೆ ಮಳೆಗೂ ನಿದ್ದೆಗೂ ಕಣ್ಣಾಮುಚ್ಚಾಲೆ ಆಡಿಸುವ ಜನರನ್ನು ಕಂಡಾಗ, ಸದ್ಯ, ನನಗೆ ಅಂತ ನಾಲ್ಕು ಗೋಡೆ ಇದೆಯಲ್ಲ, ಎಂತಹ ಸ್ವರ್ಗ ಎಂದು ಸ್ವಗತಿಸಿಕೊಳ್ಳುತ್ತಿದ್ದೆ. ಅದೇ ಜನ್ನತ್‍ನಂತಹ ಮನೆ ಜಹನ್ನುಮ್ ಎನ್ನಿಸಿದ್ದು ಮಾತ್ರ ಸೋಜಿಗವೇನಲ್ಲ.


ಅಂಡಮಾನ್‍ನಿಂದ ಇಸ್ರೇಲಿನವರೆಗೂ ಸುತ್ತುವಾಗ “ನಾನೊಬ್ಬ ಮಹಾನ್ ಅಲೆಮಾರಿ” ಎನ್ನುವ ಹಮ್ಮು ಹೊಕ್ಕಿದ್ದನ್ನು ಸದ್ದಿಲ್ಲದೆ ಕಗಿಸಿದ್ದು ಕರೋನ. ಕಾಸು ಕೊಟ್ಟು, ಕಾಲಾಡಿಸುವ ಪ್ರವಾಸವನ್ನು ಮಾತ್ರವಲ್ಲ ತವರು ಮನೆಗೇ ಹೋಗದಂತಹ ನೋವಿನ ಪಾಠ ಕಲಿಸಿದ್ದೂ ಇದೇ ಕರೋನ.


 ಉಚ್ಚ್ವಾಸಕ್ಕೆ ತಾಯೂರು, ನಿಶ್ವಾಸಕ್ಕೆ ಬೀಗರೂರು ಎಂದು ಎಡಕಾಡತ್ತಿದ್ದ ನನ್ನನ್ನು ಬರೋಬರಿ ಒಂಬತ್ತು ತಿಂಗಳು ವಾಯುರಹಿತಳನ್ನಾಗಿಸಿದ್ದು ಇದೇ ವೈರಾಣು. ಮೈಸೂರಿನ, ನನ್ನೂರಿನ ಮುಖ ತೊರೆದು ಹೋಗಿದ್ದರ ನೋವು ಹೇಳಿದರೆ ತೀರೀತೇ?! ನಿಜ, ಈ ಮೇಲಿನಾಕೆ ಹೇಳಿದ್ದನ್ನು ಅಕ್ಷರಶಃ ಸತ್ಯವಾಗಿಸಿ ನನ್ನನ್ನು ಮತ್ತಷ್ಟು ಮಗಳು ಮಾಡಿ, ಇನ್ನಷ್ಟು ತಾಯಿಯಾಗಿಸಿದ ಹೇ, ಕರೋನ ನಿನಗೊಂದು ನಮಸ್ಕಾರ.


ಕೌಸಲ್ಯ ಸುಪ್ರಜಾರಾಮ ಎನ್ನುತ್ತಲೇ, ಇವತ್ತು ಹೋಗಲೇ ಬೇಕು ಎಂದುಕೊಂಡು ಕೈಗಳನ್ನು ಇಪ್ಪತ್ತು ಸೆಕೆಂಡ್ ಸೋಪಿನಿಂದ ತಿಕ್ಕಿದೆ, ಪೂರ್ತಿ ಸ್ಯಾನಿಟೈಸ್ ಆಗಿ ಹೊರಟಿದ್ದು ಮಾತ್ರ ಸಂಜೆ ೬ಕ್ಕೆ. ಹೌದಲ್ಲ, ಹಸುಗಳೂ ಹೀಗೇ ಇದೇ ಲಗ್ನದಲ್ಲಿ ಮನೆ ಸೇರೋದು. 


ಬಲಗಡೆ ಕಣ್ಣು ಹಾಯಿಸಿ ಸಿದ್ದಲಿಂಗಪುರದ ನಾಗಪ್ಪನಿಗೆ ಒಂದು ನಮಸ್ಕಾರ ಹಾಕಿಬಿಟ್ಟರೆ ಆಯಿತು ಕಾವೇರಮ್ಮನಿಗೆ ಉಘೇಉಘೇ ಎಂದಷ್ಟೇ ಸಾಂತ್ವನ. ಎಡಗಣ್ಣು ಬಿನ್ನಿ ಮಿಲ್ಸ್ ಮೇಲಿನ ಗೋಡೆಯ ಮಾಸಲು ಗಾಂಧಿತಾತನ ಕಂಡರೆ ಮುಗೀತು ನಾನೀಗ ಜೀವಂತ. ಕರೋನ “ನಾ ಬಂದೆ, ನಾ ನೋಡ್ದೆ, ನಾ ಗೆದ್ದೆ” ಎಂದು ಅಟ್ಟಹಾಸಿಸಲು ಶುರುವಿಟ್ಟ ಮೇಲೆ ಮೊದಲ ಬಾರಿಗೆ ನನ್ನ ಪಾದ ಸೋಕಿತ್ತು ಮೈಸೂರಿನ ನೆಲಕ್ಕೆ. 


“ಒಂಬತ್ತು ಗಂಟೆ ಆಗಿ ಹೋಗ್ತಿದೆ, ನಳಪಾಕ್ ತೆಗೆದಿರುತ್ತೋ ಇಲ್ಲವೋ ಒಂದು ಕಾಫಿ ಕುಡಿದೇ ಮನೆಗೆ ಹೋಗಬಹುದಿತ್ತು’ ಕಾರಿನ ವೇಗ ಜಾಸ್ತಿ ಆಯ್ತು. ಕರೋನವನ್ನು ಮೊದಲ ಬಾರಿಗೆ ಹಿಮ್ಮೆಟಿಸಿದ ಊರು ಮೈಸೂರು ಎನ್ನುವ ಖ್ಯಾತಿ ಹೊತ್ತು , ಇಲ್ಲಿನ ರೂಲ್ಸ್ ತುಂಬಾ ಖಡಕ್ ಎನ್ನುವ ವಿಶೇಷಣ ತಗುಲಿಸಿಕೊಂಡ ಊರಿನಲ್ಲಿ ಎಲ್ಲವೂ ಸ್ಥಬ್ಧ ಎನ್ನುವುದು ಬರೀ ನನ್ನ ಊಹೆ ಮಾತ್ರ ಎನಿಸಿದ್ದು ನಳಪಾಕ್ ಮುಂದೆ ಅಲ್ಲಿ ಇಲ್ಲಿ ಅಲ್ಲಲ್ಲಿ ನಿಂತಿದ್ದ ಸಣ್ಣ ಸಣ್ಣ ಗುಂಪಿನ ಗಂಡಸರು. ಪಕ್ಕದಲ್ಲೇ ಐದು ಜನ ಹಿಡಿಯುವ ಕಾರಿನಲ್ಲಿ ಕೂಸೊಂದು ಸೇರಿ ಎಂಟು ಜನ ಮಸಾಲೆ ದೋಸೆ ತಿನ್ನುತ್ತಿದ್ದರು. ಪೋಂ ಪೋಂ ಸದ್ದಿಗೆ ಓಡಿ ಬಂದ ಮಾಣಿ , ದೂರಬಾರದು ಪಾಪ ತುಟಿಯವರೆಗೂ ಮಾಸ್ಕ್ ಹಾಕಿದ್ದ. ಎಡಗಡೆ ಇದ್ದ ಕಾರಿನವರು ಐದು ತಟ್ಟೆಗಳನ್ನು ಕೈತೊಳೆದ ನೀರಿನ ಸಮೇತ ಮತ್ತೊಬ್ಬ ಮಾಣಿಯ ಕೈಗಿರಿಸಿ ಹೊರಟರು. ಡ್ರೈವರ್‍ನ ಮಾಸ್ಕ್ ರಹಿತ ಮುಖ ಬೀದಿ ದೀಪಕ್ಕೆ ಫಳಗುಟ್ಟಿತ್ತು.


ಇಂತಹ ಸ್ವಲ್ಪ ಜನಗಳಿಂದಾನೇ ಅಷ್ಟೊಂದು ಜನರ ಪ್ರಾಣಕ್ಕೆ ಕುತ್ತು ಬಂದಿರೋದು ಎಂದು ಗೊಣಗಿಕೊಂಡು ಮನೆಗೆ ಹೋಗಿ ಒಂದಷ್ಟು ಮಾತು, ಇನ್ನೊಂದಿಷ್ಟು ಕತೆಗಳ ವಿನಿಮಯದ ನಂತರ ದಿನ ಮುಗಿದಿತ್ತು.


ಬೆಳಗ್ಗೊಂಬತ್ತಾದರೂ ಇಬ್ಬನಿ ಸುಂದರಿಯಾಗಿದ್ದಳು ನನ್ನ ಮೈಸೂರು. ಚಾಮುಂಡಮ್ಮ ತೆಳುವಾಗಿ ಕಾಣುತ್ತಿದ್ದಳು. ಅವಳೂ ಮಾಸ್ಕ್ ಧರಿಸಿರುತ್ತಾಳೆ. ಅದಕ್ಕೇ ನನ್ನೂರು ಸೇಫ್ ಮತ್ತು ಸ್ವಚ್ಚ ಸ್ವಚ್ಚ ಎಂದು ದಿನವಿಡೀ ಬೀಗಿದ್ದೆ.  


ಊರಿಗೆ ಬಂದವಳು ನೀರಿಗೆ ಬರುವ ನಿಯಮದಂತೆ ಈಗ ಅರಸು ರೋಡಿಗೆ ಹೊರಟು ನಿಂತೆ. ಉಹುಂ, ಶಿವರಾಮ ಪೇಟೆಯ ಕಡೆ ತಿರುಗುವುದು ಬೇಡ, ಹಾಗೇ ಹತ್ತು ಹೆಜ್ಜೆಯನ್ನು ಬಲಕ್ಕೆ ಇಟ್ಟರೆ, ಅದೆ ಅದೇ ಆ ಮಾರ್ವಾಡಿ ಅಂಗಡಿ. ಸಣ್ಣಗೇ ಇದ್ದೇನೆ ಎನ್ನುವ ನನ್ನ ಭ್ರಮೆಯನ್ನು ಚಪಾತಿಯಷ್ಟೇ ದುಂಡಗೆ ಸಾಕುತ್ತಿರುವ ಅವನಂಗಡಿಯ ಗೋಧಿ ಹಿಟ್ಟು ಕೊಳ್ಳುವುದಿತ್ತು. 


ಕೆಂಪು ಹಲಸಂದೆ, ಮೂರು ರೀತಿಯ ಅಕ್ಕಿ, ಕಾಬೂಲೀ ಕಡಲೆ, ತಲೆಯೊಡೆದ ಹೆಸರು ಬೇಳೆ ಹೀಗೆ ಒತ್ತೊತ್ತಾಗಿ ಉಸಿರುಗಟ್ಟಿ ಕುಳಿತಿರುವ ಮೂಟೆಗಳಿಗೆ ಪೈಪೋಟಿ ಕೊಡುತ್ತಿದ್ದರು ಖರೀದಿದಾರರು. ಅವರ ಧೈರ್ಯ ನನ್ನೊಳಗಿನ ಕರೋನ ಭಯವನ್ನು ಸ್ವಲ್ಪ ಹಿಂದಕ್ಕಿಕ್ಕಿ “ಅರ್ಧ ಕೆ ಜಿ ಪಚರಂಗಿ ಅಚಾರ್ ಕೊಡಿ’ ಎಂದು ದನಿಯಾಗಿತ್ತು. ಬಾಟಾಲಿಯನ್ನು ಕೈಗಿತ್ತವನದ್ದು, ಗಲ್ಲ ಪೆಟ್ಟಿಗೆಯಲ್ಲಿದ್ದವರದ್ದೂ ಕತ್ತು ತೂಗುತ್ತಿತ್ತು ನೀಲಿನೀಲಿ ಮಾಸ್ಕ್ ಭಾರಕ್ಕೆ.


ಆ ರಸ್ತೆಯ ಈ ತುದಿಯಿಂದ ಕೊನೆಯಂಚಿನ ವರೆಗೂ ಸುಮ್ಮನೆ ಎರಡು ಬಾರಿ ನಡೆದು ಬಿಡುವುದು ನನ್ನಿಷ್ಟದ ಕಾರ್ಯಕ್ರಮ. ಹಾಗೇ ಹೊಗುತ್ತಿದ್ದೆ, ಆರೆಂಟು ಸರ್ತಿ ಪಾದಗಳನ್ನು ಮುಂದುಮುಂದಕ್ಕೆ ಊರಿದ ಮೇಲೆ ಗೊತ್ತಾಯ್ತು ನಾನು ರಸ್ತೆಯಲ್ಲಿದ್ದೆ ಫುಟ್‍ಪಾತಿನಲ್ಲಿ ಅಲ್ಲ. ಯಾಕೆಂದರೆ ಅಲ್ಲಿ ಜಾಗವೇ ಇರಲಿಲ್ಲ. 


ಇಟಲಿಯ ಫ್ಲೋರೆನ್ಸ್‍ನಲ್ಲಿ ಕಂಡಿದ್ದ ಚಪ್ಪಲಿ ವಿಧಗಳನ್ನು ಆಸೆ ಪಟ್ಟಿದ್ದರೂ ಕೊಂಡು ತೊಡೂವುದು ಮಾತ್ರ ಮೈಸೂರಿನ ಈ ರಸ್ತೆಯ ಆ ಅಂಗಡಿಯದ್ದೇ. ಒಳಹೊಕ್ಕೆ. ಈದ್ ಸಮಯದಲ್ಲಿ ಶಾಪಿಂಗ್ ಮಾಡಲು ಆಗಿರಲಿಲ್ಲವೇನೋ ಇವರಿಗೆ ಎಂದು ಅನುಮಾನ ಮೂಡೂವಷ್ಟು ರಂಜಾನ್ ಬಜಾರ್ನಂತೆ ಇತ್ತು ಆ ಅಂಗಡಿ. 


ಮಾಸ್ಕ್ ಇಲ್ಲದ ಮಕ್ಕಳು ಮರಿಗಳು, ಅಂತರ ಗೊತ್ತಿಲ್ಲದ ಅವರಮ್ಮಂದಿರು, ಎರಡಕ್ಕೂ ನಮಗೂ ಸಂಬಂಧವೇ ಇಲ್ಲ ಎನ್ನುವಂತೆ ಅತ್ತರ್ ಪೂಸಿಗೊಂಡಿದ್ದ ಅವರ ಮನೆಯ ಗಂಡಸರು. ಉಸ್ಸಪ್ಪಾ, ಕಾಲಲ್ಲಿ ಇದ್ದ ಚಪ್ಪಲಿಯನ್ನೂ ಮರೆತು ಬರಿಗಾಲಲ್ಲೇ ಹೊಸಿಲು ದಾಟುವ ಧಾವಂತ ನನಗೆ.


ಮಾಲೀಕ ರಾಜಸ್ತಾನಿ. “ಏನ್ರೀ ನಿಮ್ಮ ಅಂಗಡಿಗೆ ಬರೋಲ್ಲ ಅಂತ ಅಗ್ರೀಮೆಂಟ್ ಮಾಡಿಕೊಂಡಿದೆಯಾ ಕರೋನಾ” ಎಂದು ಕೇಳಿದೆ ಅದಕ್ಕಾತ “ ಏನು ಮಾಡೋದು ಮೇಡಮ್, ಕಸ್ಟಮರ್ಗಳಿಗೆ ಹೇಳಕ್ಕಾಗಲ್ಲ” ಅಂದ. ಅದು ನಿಜ, ಯಾರಿಗೆ ಯಾರು ಮಾಲೀಕ ಎನ್ನುವ ಅರಿವು ನೀಡಲು ತಾನೇ ಬಂದದ್ದು ಈ ಕರೋನ.


ಜ್ಯೇಷ್ಠಕ್ಕೂ ಆಷಾಢಕ್ಕೂ ನಡುವೆ ನಿಂತಾಗ ಮೂಗಿಗೆ ಅಡರಿಕೊಳ್ಳುತ್ತೆ ಕಳಚಿದ ಪೊರೆಯ ಹಸಿಹಸಿ ಘಮಲು. ಆಗ ಹೊರಡುತ್ತೇನೆ ಕಾಡು ಸುತ್ತಲು ಪ್ರತೀಬಾರಿ. ಆದರೆ ಲಾಕ್‍ಡೌನ್ ಎನ್ನುವ ಭೂತ ಮಾಸಾತೀತವಾಗಿತ್ತಲ್ಲ. ಹಾವಿನಂತೆ ಪೊರೆತೊರೆಯುವ ಸೌಲಭ್ಯ ನಮಗೇಕಿಲ್ಲ ಎನ್ನುತ್ತಲೇ, ಮ್ಯಾನಿಕ್ಯೂರ್, ಪೆಡಿಕ್ಯೂರ್‍ಗಳಿಂದ ದೂರಾಗಿ ಪ್ಯುಮಿಕ್ ಸ್ಟೋನ್‍ನಿಂದ ತಿಕ್ಕಿದ್ದು ಸಾಲದು ಅಂತ, ಮರುದಿನ ಒಂದಷ್ಟು ಕ್ರೀಂ ತೆಗೆದುಕೊಳ್ಳೋಣ ಅಂತ ಕೆ ಅರ್ ವೃತ್ತದ ಶ್ರೀನಿವಾಸ ಸ್ಟೋರ್ ಮುಂದೆ ನಿಂತಿದ್ದೆ.


ಒಳಹೋಗಲು ಅಲ್ಲಿದ್ದ ಸುಂದರಿಯಾಗಬೇಕು ಎಂದುಕೊಂಡಿದ್ದವರ ಗುಂಪು ಬಿಟ್ಟರೆ ತಾನೆ?! ಒಂದ್ನಾಲ್ಕು ಜನ ಹೊರಗೆ ಬರಲಿ ಅಂತ ಕಾಯುತ್ತಾ ನಿಂತೆ. ಪಕ್ಕದಲ್ಲೇ ಇರುವ ಡ್ರೈ ಕ್ಲೀನ್ ಅಂಗಡಿಯಾತ ಬಣ್ಣ ಕಾಣದ ಸೀರೆಯೊಂದನ್ನು ಮಡಚುತ್ತಿದ್ದ. ಹರೆಯದಲ್ಲಿ ಆ ಮನೆಯ ಹುಡುಗರಿಗೆ ನಾನೂ ಸುಂದರಿಯಂತೇ ಕಂಡಿದ್ದೆ. ನೆನಪಾಯ್ತು, ಹೇರ್ ಡೈ ಮರೆಯದೆ ಕೊಂಡುಕೊಳ್ಳಬೇಕು.


ಕಪ್ಪಿದ್ದ ಕೂದಲು ಬೆಳಕು ಕಂಡರೂ ಡ್ರೈ ಕ್ಲೀನ್ ಅಂಗಡಿಯೊಳಗೆ ಮಾತ್ರ ಈ ವರೆಗೂ ಬೆಳಕು ಕೂಡ ಡ್ರೈ ಕ್ಲೀನ್ ಆಗಿಯೇ ಇದೆ. ಒಂದು ಬಲ್ಬ್ ಹತ್ತಿದ್ದು ನನ್ನ ಕಣ್ಣಿಗೆ ಕಂಡೆ ಇಲ್ಲ ಅದಕ್ಕೇ ಇರಬೇಕು ಆಗ ಆ ಯುವಕರೂ ಕಾಣದಿದ್ದದ್ದು. ಸಿಗ್ನಲ್‍ನಲ್ಲಿ ನಿಂತಿದ್ದ ಕಾರಿನಿಂದ ಹಾಡು ಕೇಳುತ್ತಿತ್ತು “ಯಾಮಿನಿ ಯಾರಮ್ಮ ನೀನು ಯಾಮಿನಿ. . .ವಯಸಿಗೆ ಕಿವಿಗಳೆ ಕೇಳಿಸದು, ಚೆಲುವಿಗೆ ಕಣ್ಗಳೆ ಕಾಣಿಸದು. . .” ಆಹಾ, ನನ್ನ ಮೈಸೂರೇ ಏನೆಲ್ಲಾ ಕಲಿಸಿಬಿಟ್ಟೆ ನನ್ನನ್ನು ನಿನ್ನಾತ್ಮದ ಚೂರಾಗಿಸಿಕೊಂಡು!


ಸೀದಾ ಹೋಗಿ ಎಡಕ್ಕೆ ತಿರುಗಿದರೆ ಬಲವಾಗಿಸುತ್ತೆ ನೆನಪುಗಳನ್ನು ಕ್ರಾಫರ್ಡ್ ಹಾಲ್. ಹೋದಾಗಲೆಲ್ಲ ಅದರ ಮುಂದೆ ಐದು ನಿಮಿಷ ನಿಂತು, ಕಾಲೇಜಿಗೆ ಕಟ್ಟಿದ್ದ ಫೀಸಿನ ಪೂರ್ತೀ ರಿಸಲ್ಟ್ ವಸೂಲಿ ಮಾಡಿಯೇ ಬರುತ್ತೇನೆ. ಕಾಲೇಜು ದಿನಗಳಿಗೆ ವಯಸ್ಸು ಎನ್ನುವುದೇ ಇರುವುದಿಲ್ಲವಲ್ಲ ಅದೆಂತಹ ಸೋಜಿಗ. ಮೈಭಾರ ಇಳಿದಾಗ ಸಿಗುವ ಸುಖಕ್ಕಿಂತ ಒಂದು ಮುಷ್ಟಿ ಹೆಚ್ಚಿನ ದುಃಖ ಪೊಗರು ಕಳೆದುಹೋಗುವುದು. ಆದರೂ ಕಣ್ಣಲ್ಲಿ ನೀರಿಲ್ಲ, ತುಟಿಯಂಚಿನಲ್ಲಿ ಯಾಕೆ ಈ ನಗು. 


ಗಂಟೆ ಏಳಾಗಿದೆ. ಕುಕ್ಕರಹಳ್ಳಿ ಕೆರೆ ರಸ್ತೆ ಕಡೆ ನೋಡುವ ಹಾಗೂ ಇಲ್ಲ ಎಂದು ಹೇಳಿಸಿಕೊಂಡೆ ಬೆಳೆದದ್ದು ತಾನೆ? ತಲೆ ಗಟ್ಟಿ ಇದೆ ಅಂತ ಬಂಡೇಗೆ ಚಚ್ಚಿಕೊಳ್ಳಬಾರದು ಕಣೇ ಎಂದು ಅಮ್ಮ ಹೇಳಿಕೊಟ್ಟ ಪಾಠಕ್ಕೆ ಮೊದಲ ಬಾರಿಗೆ ಮನ್ನಣೆ ಕೊಟ್ಟು ಮನೆ ಸೇರಿದೆ.


ಬೆಳಗಿನಲ್ಲಿ ಎದರು ಮನೆ ಪರಿಮಳ ಆಂಟಿ ನಜರ್ಬಾದಿನ ಅಮೃತಶಿಲೆ ಸತ್ಯನಾರಾಯಣನ ಹೆಸರಿನಲ್ಲಿ ಧನುರ್ಮಾಸದ ಪ್ರಸಾದ ಅಂತ ತಾವೇ ಮಾಡಿದ ಬಿಸಿಬಿಸಿ ಪೊಂಗಲ್ ತಂದುಕೊಟ್ಟರು. ಕಾಫಿಯ ಮೊದಲ ಗುಟುಕಿಗೇ ಬಟ್ಟಲು ಖಾಲಿಯಾಗಿತ್ತು. ಯಾವಾಗಲೂ ಹೀಗೇ ಅಲ್ಲ್ವಾ ಪಕ್ಕದಮನೆ ಅಡುಗೆ ಎಂದರೆ ಪ್ರಸಾದದಷ್ಟೇ ರುಚಿ. ಮೂರುಮನೆ ಆಚೆಯ ಪದ್ಮ ಆಂಟಿ ಎರಡು ಬಾಳೆಕಾಯಿ ಹಿಡಿದು ಬಂದರು. “ ರಾಮು ಬರೋ ಹೊತ್ತಾಯ್ತು” ಎಂದು ಹೊರಟರು.


ಸೊಪ್ಪಿನ ರಾಮು ವಾರಕ್ಕೊಮ್ಮೆ ಮಾತ್ರ ಪ್ರತ್ಯಕ್ಷ ಆಗುತ್ತಾನೆ. ಆದ್ಯಾವ ವಿಶ್ವಾಮಿತ್ರ ಉತ್ತ ನೆಲದ ಸೊಪ್ಪು ತರುತ್ತಾನೋ ನಾ ಕಾಣೆ. ನೂರು ರೂಪಾಯಿಕೊಟ್ಟರೆ ಸಾಕು ನಮ್ಮ ಬೀದಿಯ ಎಲ್ಲಾ ಮನೆಯಲ್ಲೂ ಅವರೆಕಾಳಿನ ಜೊತೆ ನ ಧೀಂ ಧೀಂ ತನ ಎನ್ನುತ್ತಾ ಕುದಿಯುತ್ತದೆ ಹುಳಿ ಅದರ ಜೊತೆಯಾಗುತ್ತೆ ಹಬೆ ಹೊದ್ದ ಅನ್ನ. ಊರೆಲ್ಲಾ “ಯಾವಾಗ ಬಂದೆ” ಎನ್ನುವ ಉತ್ಸಾಹ ತೋರುವಾಗ ಇವನು ಮಾತ್ರ “ಅಕ್ಕ ಯಾವಾಗ ಓಗ್ತೀಯಾ” ಎಂದು ಕೇಳುತ್ತಾನೆ. ಯಾಕೆಂದರೆ ನಾ ಹಿಂದಿರುಗುವ ಮುಂಜಾವಿಗೇ ನಗುವ ಬೇರನ್ನು ತಬ್ಬಿಕೊಂಡು ಹಬ್ಬಿ ಹರಡಿರುವ ಒಂದು ಬುಟ್ಟಿ ಸೊಪ್ಪು ಕೊಟ್ಟು ಹೋಗಬೇಕಲ್ಲ ಅದಕ್ಕೇ.  


ನಂಜುಂಡ ಸಂದೇಶ ಕೊಟ್ಟ. “ನಾಳೆ ಸೋಮವಾರ ನಾನು ತುಂಬಾ ಬಿಜಿ. ಬರೋದಾದರೆ ಇವತ್ತೇ ಬಾ” ಎಂದ. ತೊಟ್ಟ ಬಟ್ಟೆಯಲ್ಲೇ ಹೊರಟೆ. ಅಯ್ಯೋ, ಕರೋನ ವೈರಾಣುವಿನ ಭೂಪಟದಲ್ಲಿ ನಂಜನಗೂಡು ಇಲ್ಲವೇ ಇಲ್ಲ ಎನ್ನುವ ಖಾತ್ರಿಯಲ್ಲಿ ಅಂಕೆ ಮೀರಿತ್ತು ಜನರ ಸಂಖ್ಯೆ. ದೇವಸ್ಥಾನದ ಒಳಗಂತೂ ಹಕೀಂ ನಂಜುಂಡ “ನನ್ನ ಅವಶ್ಯಕತೆ ಇಲ್ಲ ಕಣೇ” ಎನ್ನುವ ಧಾಟಿಯಲ್ಲಿ ಹೊದ್ದು ಮಲಗಿದ್ದ. 


ಸರಿ, ಇರುವೆ ಗೂಡಿನ ಸಾಲಿನಂತೆ ಕಾಣುತ್ತಿರುವ ಈ ಭಕ್ತರು ಇಷ್ಟು ದಿನ ಎಲ್ಲಿದ್ದರು ಎಂದು ಕೇಳಿಕೊಂಡೆ ಕೂಡಲೇ ಈ ಮೇಲಿನಾಕೆಯ ಮಾತು ನೆನಪಾಯ್ತು. ಬೇಡಪ್ಪಾ ಬೇಡ ಭಗವಂತ ನಿನ್ನ ಬಗ್ಗೆ, ನಿನ್ನ ಭಕ್ತರ ಬಗ್ಗೆ ಹಗುರ ಮಾತು ಆಡಲ್ಲ. ತಪ್ಪಾಯ್ತು ಕ್ಷಮಿಸಪ್ಪ ಅಂತ ಮುಖ್ಯದ್ವಾರದಲ್ಲಿ ಸುತ್ತುವರೆದು ಸರಕು ಮಾರಲು ಹೆಣಗುತ್ತಿದ್ದ ಗುಂಪಿನ ಒಬ್ಬನ ಬಳಿ ಹೆಣ್ಣು ದೇಹದ ಬೆಳ್ಳಿ ತಗಡೊಂದನ್ನು ಕೊಂಡು ಹುಂಡಿಗೆ ಹಾಕಿ ಶ್ರೀಕಂಠೇಶ್ವರನ ಕೃಪೆ ಬೇಡಿ ಬಂದೆ.


ದಾರಿಯುದ್ದಕ್ಕೂ ಲೆಕ್ಕ ಬರೆದುಕೊಂಡರೂ ತಾಳೆ ಆಗಲಿಲ್ಲ ದೇವಸ್ಥಾನದಲ್ಲಿ ಸೆಲ್ಫೀ ತೆಗೆದುಕೊಳ್ಳುತ್ತಿದ್ದವರ ಸಂಖ್ಯೆ. ಮನೆ ರಸ್ತೆ ತಲುಪುವಾಗ ಚಿಕ್ಕವಳಿದ್ದಾಗ ಅಮ್ಮ ಹೇಳಿದ ಕಥೆಯೊಂದರ ಒಂದು ಸಾಲು ನೆನಪಾಯ್ತು


 “ ಉಣ್ಣೆ ಕೆಚ್ಚಲಿಗೆ ಕಚ್ಚಿಕೊಂಡಿದ್ದರೂ ಹಾಲು ಹೀರಲು ಆಗುವುದಿಲ್ಲ” ಅಮ್ಮ ಇದೆಲ್ಲಾ ಎಲ್ಲಿಂದ ಕಲಿತಳು? ಮೈಸೂರಿನ ಸ್ಥಳೀಯ ದಿನಪತ್ರಿಕೆಗಳಿಂದಲೇ ಇರಬೇಕು. ಬೆಂಗಳೂರಿನಲ್ಲಿ ಈ ಲಗ್‍ಷುರಿ ಇಲ್ಲದ ನಾನು ಎಷ್ಟೇ ದೇಶ ಸುತ್ತಿದರೂ ಮೈಸೂರಿನ ಅಮ್ಮನಷ್ಟು ಜ್ಞಾನ ಹೊಂದಲು ಉಹುಂ, ಸಾಧ್ಯವೇ ಇಲ್ಲ.


ಕಮಲಮ್ಮ ಮಗಳ ಊರು ಸೇರಿದ್ದಾರೆ. ಉಷಾ ಮನೆ ಬದಲಿಸಿದ್ದಾರೆ. ರಾಗಿಣಿಗೆ ನೀಟ್ ಪರೀಕ್ಶೆಗೆ ಹೋಗಲು ಆಗಲೇ ಇಲ್ಲ ಕರೋನಾದಿಂದಾಗಿ. ವನಿತಾ ಅವರ ಮನೆಯ ಕೋರ್ಟ್ ಕೇಸ್ ಮುಗಿದಿದೆ. ಡಾಕ್ಟರ್ ಪ್ರಶಾಂತ್ ಅವರು ಮನೆಯ ಗೃಹಪ್ರವೇಶಕ್ಕೆ ಯಾರನ್ನೂ ಕರೆಯಲಾಗಲಿಲ್ಲ. ಆದ್ಯವೀರರಿಗೆ ಮೂರು ತುಂಬಿದೆ. ದಸರೆಯ ಆನೆಗಳು ಬಂದು ಹೋಗಿವೆ. ಹಿಮವದ್‍ಗೋಪಾಲ ಇನ್ನೂ ದರ್ಶನ ಕೊಡುತ್ತಿಲ್ಲವಂತೆ. ಚಾಮುಂಡಿ ಬೆಟ್ಟದಲ್ಲಿ ತುಂಬಾ ಸ್ಟ್ರಿಕ್ಟ್ ರೂಲ್ಸ್ ಅಂತೆ. 


ಜೂ ಗಾರ್ಡನ್ ಕಡೆ ಗಮನ ಕೊಡಲೇ ಇಲ್ಲ. ಕರ್ನಾಟಕ ಸ್ಯಾರೀ ಸೆಂಟರ್ಗೆ ಸಂಕ್ರಾಂತಿಗೆ ಬಂದಾಗ ಹೋಗಬೇಕು. ಕೃಷ್ಣಾ ಬೇಕರಿಯಲ್ಲಿ ಗೂಗಲ್ ಪೇ ತೊಗೋತಾರೆ ಈಗ. ಊಬರ್ ತಾಪತ್ರಯ ಇಲ್ಲದೆ ಸಿಗುತ್ತೆ. ಉತ್ತರಾದಿ ಮಠದ ರಸ್ತೆಯಲ್ಲಿ ನಾನು ಹುಟ್ಟಿದ ಮನೆ ಈಗ ಏನಾಗಿದೆ ಗೊತ್ತಾಗಲಿಲ್ಲ. ಅವಿಲಾ ಕಾನ್ವೆಂಟಿನ ದೊಡ್ಡ ಗೇಟಿನೊಳಗಿನ ನೆಲದ ಮೇಲೆ ಅಂತರ ಕಾಪಾಡಲು ಬಿಳಿ ವೃತ್ತ ಬರೆದಿದ್ದಾರೆ.


ಅಮ್ಮ ಹೇಳುತ್ತಾಳೆ ನಾನು ಹತ್ತನೆಯ ತಿಂಗಳಿಗೆ ಹುಟ್ಟಿದವಳಂತೆ. ಆದರೆ ಕರೋನ ಮತ್ತೊಮ್ಮೆ ನನ್ನನ್ನು ತವರೂರಿನಲ್ಲಿ ಒಂಬತ್ತು ತಿಂಗಳಿಗೆ ಹೆತ್ತಿದೆ. ಈ ಸುಖ ತೀರದಿರಲಿ. ನೆಮ್ಮದಿ ಮುರಿಯದಿರಲಿ. ತವರೂರ ಬಳ್ಳಿ ಮೈಸೂರಿನಲ್ಲಿ ಹಬ್ಬಿ ಹರಡಲಿ. ಯಾವ ಹೆಣ್ಣಿಗೂ ತವರುಮನೆ ದೂರಾಗದಿರಲಿ, ಕರೋನ ಇದ್ದೂ ಇಲ್ಲವಾಗಲಿ. 


ವ್ಯಾಕ್ಸಿನ್‍ನ ಸಂಕ್ರಮಣವಾಗಲಿ. ತವರೂರು ಎಳ್ಳುಬೆಲ್ಲ ತಿಂದು ಒಳ್ಳೆ ಮಾತನ್ನು ಮುಂದುವರೆಸುವಾಗ ನಾನು ಮತ್ತೊಮ್ಮೆ, ಮಗದೊಮ್ಮೆ ಮೈಸೂರಿಗೆ ಬರುವಂತೆ ಆಗಲಿ ಎಂದುಕೊಳ್ಳುತ್ತಲೇ ಹೊರಟು ಈ ಊರು ಮುಟ್ಟಿದ್ದೇನೆ, ಇಲ್ಲಿನ ನೀರೊಳಗೆ ಕದಡಿಕೊಂಡ ಪಾರದರ್ಶಕತೆ ಆಗಿದ್ದೇನೆ.


********

Comments

Popular posts from this blog

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್