ನಲಿವು ಎಂದೂ ವ್ಯಕ್ತಿಗತ ; ನೋವು ಯಾವತ್ತಿಗೂ ಸಾಮುದಾಯಿಕ



(ಕರ್ನಾಟಕ ಲೇಖಕಿಯರ ಸಂಘದ , ಸಾಹಿತ್ಯ ಸಂಚಯ ಕಾರ್ಯಕ್ರಮದಲ್ಲಿ ಆಡಿದ ಮಾತುಗಳು)


 *ಕಾನೂನು, ಮಹಿಳೆ ಮತ್ತು ಅರಿವು*

ಎಲ್ಲರಿಗೂ ನಮಸ್ಕಾರ.

ಇಂದಿನ ಆಹ್ವಾನ ಪತ್ರಿಕೆಯಲ್ಲಿ ಉಪನ್ಯಾಸಕಿ ಎನ್ನುವ ದೊಡ್ಡ ಪದ ಬಳಸಿದ್ದಾರೆ. ಆದರೆ ಉಪನ್ಯಾಸ ಮಾಡಲು ಆಳವಾದ ಅಧ್ಯಯನ ಇರಬೇಕು ಮತ್ತು ಉಪನ್ಯಾಸಕಿ ಆಗಲು ಅರ್ಹತೆ ಇರಬೇಕು. ಇವೆರಡು ನನ್ನ ಬಳಿ ಇಲ್ಲ. ಹಾಗಾಗಿ ಇದು ಉಪನ್ಯಾಸ ಅಲ್ಲ.

ನಿಮ್ಮೆಲ್ಲರ ವಿನಾಕಾರಣ ವಿಶ್ವಾಸಕ್ಕೆ ಮಣಿದು ನನ್ನ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಂದಿದ್ದೇನೆ ಮತ್ತು ಅದರ ಮೂಲಕವೇ ಬೆಳೆಯಬೇಕು ಎನ್ನುವ ಆಸೆಯಿಂದ ಇಲ್ಲಿದ್ದೇನೆ.

ಒಂದಷ್ಟು  ವರ್ಷಗಳ ಹಿಂದೆ ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಕಾನೂನು ತರಬೇತಿ ನೀಡಲು ಹೋಗಿದ್ದಾಗ, ಮಹಿಳಾ ಐಏಎಸ್ ಅಧಿಕಾರಿಯೊಬ್ಬರು ಮಹಿಳೆಯರೂ ಉಯಿಲು ಮಾಡಬಹುದು ಎನ್ನುವ ವಿಷಯವೇ ತಮಗೆ ತಿಳಿದಿರಲಿಲ್ಲ ಎಂದು ಹೇಳಿಕೊಂಡಾಗ   ಮೊದಲ ಬಾರಿಗೆ ಒಬ್ಬ ಮಹಿಳೆಯಾಗಿ ನನ್ನ ಜವಾಬ್ದಾರಿಯ ಅರಿವಾಯ್ತು.

ಅದಕ್ಕೂ ಮೊದಲಿನಿಂದಲೇ, ಅಸ್ತಿತ್ವ ಸಂಸ್ಥೆಯನ್ನು ಸ್ಥಾಪಿಸಿದಾಗಿನಿಂದ ಮಹಿಳೆಯರು ಮತ್ತು ಮಕ್ಕಳು ಎನ್ನುತ್ತಾ ಕೆಲಸ ಮಾಡುತ್ತಿದ್ದರೂ, ಈ ಘಟನೆ ಮೊದಲ ಬಾರಿಗೆ ನನ್ನ ಜವಾಬ್ದಾರಿಯನ್ನು ಕೇಂದ್ರಿಕೃತಗೊಳಿಸಿಕೊಟ್ಟಿದ್ದು.

ಇದರಿಂದ ನಾನು ಕಲಿತ ಪಾಠ ಅಂದರೆ ಕಲಿಯುವುದು ಎಷ್ಟು ಒಳ್ಳೆಯದೋ ಕಲಿತು ಸುಮ್ಮನಿರುವುದು ಅಷ್ಟೇ ಕೆಟ್ಟದು ಅಂತ.

ನಮ್ಮ ಸಂವಿಧಾನದ ಮೂಲಭೂತ ಆಶಯವಾದ  “ಸಹಬಾಳ್ವೆ” ಎನ್ನುವ ಪರಿಕಲ್ಪನೆಗೇ, ಹೀಗೆ ಸುಮ್ಮನೆ ಇರುವುದು ಒಂದು ದೊಡ್ಡ ಪೆಟ್ಟು. ನಾನು ಕಲಿತದ್ದನ್ನು ಹಂಚಿಕೊಂಡು ಸಹಚರರನ್ನೂ ಗಟ್ಟಿಗೊಳಿಸುವುದೇ ಬದುಕಿನ ಉದ್ದೇಶ ಆಗಬೇಕು.

ಯಾವಯಾವ ಕಾನೂನುಗಳು ಇವೆ, ಅವುಗಳು ಹೇಗಿವೆ, ಅವುಗಳನ್ನು ರೂಪಿಸಲು , ಜಾರಿಗೆ ತರಲು ಇತಿಹಾಸ ಏನು ಎಲ್ಲವೂ ಈಗ ಗೂಗಲ್‍ನಲ್ಲಿ ಲಭ್ಯ. ಜೊತೆಗೆ ಇಲ್ಲಿನ ದಿಗ್ಗಜರುಗಳು ತಮ್ಮ ಬೆರಳ ತುದಿಯಲ್ಲಿಯೇ ಆ ಮಾಹಿತಿಗಳನ್ನು ನೀಡಬಲ್ಲರು ಹಾಗಾಗಿ ನಾನು ಅವುಗಳ ಬಗ್ಗೆ , ಅಂಕಿಅಂಶಗಳ ಬಗ್ಗೆ ಮಾತನಾಡೋಲ್ಲ.ಕೆಲವು ಘಟನೆಗಳನ್ನು ಮತ್ತು ಅವುಗಳಿಂದ ನಾ ಕಲಿತ ಪಾಠಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ ಅಷ್ಟೇ.

ತುಂಬ ಪ್ರಸಿದ್ಧ ಶ್ರೀಮಂತರೊಬ್ಬರು ತಮ್ಮೆಲ್ಲಾ ಲಕ್ಷಲಕ್ಷ ದುಡ್ಡುಕಾಸನ್ನು ತಮ್ಮ ಹೆಂಡತಿಯ ಕೈಯಲ್ಲಿಟ್ಟು ತೀರಿಕೊಂಡರು. ೬೦ ವರ್ಷ ವಯಸ್ಸಿನ ಆಕೆ ಎಲ್ಲಾ ದುಡ್ಡನ್ನು ಬ್ಯಾಂಕಿನಲ್ಲಿ ಠೇವಣಿ ಮಾಡಿ ತಮ್ಮ ಹಿರೀ ಮಗನನ್ನು ನಾಮಿನಿ ಮಾಡಿ ನಿಶ್ಚಿಂತರಾದರು. ಅವರಿಗೆ ಆರು ಜನ ಮಕ್ಕಳು. ಎಲ್ಲರ ಬಗ್ಗೆಯೂ ಒಂದೇ ಪ್ರೀತಿ ಒಂದೇ ಜವಾಬ್ದಾರಿ. ಎಲ್ಲಾ ಮಕ್ಕಳಿಗೂ ಆ ದುಡ್ಡು ಸಮನಾಗಿ ಬರಬೇಕು ಎನ್ನುವ ಉದ್ದೇಶ ಅವರಿಗಿತ್ತು. ಆದರೆ ಎಲ್ಲರನ್ನೂ ನಾಮಿನಿ ಮಾಡಲು ಸಾಧ್ಯ ಇರಲಿಲ್ಲ ( ಈಗ ಇಬ್ಬರನ್ನು ನಾಮಿನಿ ಮಾಡುವ ಅವಕಾಶ ಇದೆ) ಹಾಗಾಗಿ ಮೊದಲ ಮಗನನ್ನು ಮಾಡಿದ್ದರು. ವಯಸ್ಸಿಗೆ ಅನುಗುಣವಾಗಿ ಹಾಸಿಗೆ ಹಿಡಿದರು ತೀರಿಕೊಂಡರು. ಹಿರಿಯ ಮಗ ಬ್ಯಾಂಕಿಗೆ ಹೋದರು, ಮರಣ ನೊಂದಾವಣೆ ಪತ್ರ ನೀಡಿದರು ದುಡ್ಡು ಪಡೆದರು. ತಿಂದು ತೇಗಿದರು. 

ಮತ್ತ್ಯಾವ ವಾರಸುದಾರರಿಗೂ ಕೊಡಲಿಲ್ಲ. ಕೇಳಿದರೆ ತಾಯಿ ತನ್ನನ್ನು ಮಾತ್ರ ನಾಮಿನಿ ಮಾಡಿದ್ದರಿಂದ ಅದು ತನಗೇ ಸೇರಬೇಕಾದ ಹಣ ಎನ್ನುವ ವಾದ ಮುಂದಿಟ್ಟರು ಕೋರ್ಟಿನಲ್ಲೂ ಸಹ. ಕಾನೂನಿನ ಪ್ರಕಾರ ನಾಮಿನಿ ಒಂದು ಪದವಿ ಅಷ್ಟೇ. ಆತನ ಅಥವಾ ಅಕೆಯ ಜವಾಬ್ದಾರಿ ಇತರೆ ವಾರಸುದಾರರಿಗೆ ಸಮನಾಗಿ ಹಂಚಿಕೆ ಮಾಡೋದು ಅಷ್ಟೆ. ಆದರೆ ತೀರಿಕೊಂಡಾಕೆಗೆ ಸರಿಯಾದ ಮಾಹಿತಿ ಇರಲಿಲ್ಲ. 

ಈ ಪ್ರಕರಣದಲ್ಲಿ ನಾಮಿನಿ ಮಾಡಬೇಕೆಂಬ ಅರಿವು ಇತ್ತು ಆ ಮಹಿಳೆಗೆ ಎಂದು ಸಂತೋಷ ಪಡಬೇಕೋ ಅಥವಾ ಸರಿಯಾದ ಮಾಹಿತಿ ಇರಲಿಲ್ಲ ಎಂದು ಪರಿತಪಿಸಬೇಕೋ? ಇದರಿಂದ ನಾನು ಕಲಿತದ್ದು ಅಂದರೆ ಮಾಹಿತಿ ಹೊಂದುವುದು ಎಷ್ಟು ಅವಶ್ಯಕವೋ ಸರಿಯಾದ ಮೂಲದಿಂದ ಸರಿಯಾದ ಮಾಹಿತಿ ಹೊಂದುವುದೂ ಅಷ್ಟೇ ಅವಶ್ಯಕ.

ಇನ್ನೊಂದು ಘಟನೆಯಲ್ಲಿ ಒಬ್ಬಾತನಿಗೆ ಒಂದು ಗಂಡು ಒಂದು ಹೆಣ್ಣು ಮಕ್ಕಳಿದ್ದರು. ಮಗ ಹತ್ತ್ಹನ್ನೆರಡು ವಯಸ್ಸಿನವನಿದ್ದಾಗ ಎಲ್ಲೋ ಕಳೆದುಹೋದ. ಹುಡುಕಲು ಎಲ್ಲಾ ರೀತಿಯ ಪ್ರಯತ್ನ ಪಟ್ಟ ನಂತರವೂ ಮಗ ಸಿಗಲಿಲ್ಲ. ಹತ್ತು ವರ್ಷ ಕಳೆಯಿತು. ತಂದೆ ಉಯಿಲು ಮಾಡಿ ತೀರಿಕೊಳ್ಳುವಾಗ ಮಗ ಕಳೆದು ಹೋಗಿ ಮೂವತ್ತು ವರ್ಷಗಳೇ ಆಗಿಹೋಗಿದ್ದವು. 

ಅವರ ನಂತರ ವಿಲ್ ತೆಗೆದು ನೋಡಿದರೆ ಅದರಲ್ಲಿ ಇತ್ತು “ ನನ್ನ ಎಲ್ಲಾ ಆಸ್ತಿಯೂ ನನ್ನ ಮಗನಿಗೆ ಮತ್ತು ಮಗನಿಗೆ ಮಾತ್ರ ಸೇರಬೇಕು. ಅವನು ಬರುವವರೆಗೂ ಮಗಳು ಅವುಗಳನ್ನು ಪರಬಾರೆ ಮಾಡದೆ ಅನುಭವಿಸಿಕೊಂಡು ಹೋಗಬೇಕು ಹಾಗೇಯೆ ಬಾಡಿಗೆಯ ಹಣದಲ್ಲಿ ನನ್ನ ಮಗನಿಗಾಗಿ ೫೦ ಶೇಕಡಾ ಎತ್ತಿಡಬೇಕು” ಮೇಲ್ನೋಟಕ್ಕೆ  ಇದು ಗಂಡು ಮಗನ ಮೇಲಿನ ನಮ್ಮ ಸಾಮೂಹಿಕ ವ್ಯಾಮೋಹದಂತೆ ಕಂಡರೂ ನಾವುಗಳು ದ್ವಂದ್ವಗಳನ್ನು ಮೆಟ್ಟಿ ನಿಂತು ನಮ್ಮ ಜೀವನವನ್ನು ದಾಖೆಗಳ ಮಲಕ ನಮ್ಮ ನಂತರವೂ ಹೇಗ ಸರಳಗೊಳಿಸಿಕೊಳ್ಳ ಬೇಕೂ  ಎನ್ನುವ ಬಗ್ಗೆ ಚಿಂತನಗೆ ಹಚ್ಚಿದ ಅನುಭವ.

ಇನ್ನೊಮ್ಮೆ ಠಾಕುಠೀಕಾಗಿ   ಡ್ರೆಸ್ಸ್ ಮಾಡಿಕೊಂಡಿದ್ದ ಊರ ಗೌಡ್ರು ಒಳಗೆ ಬಂದ್ರು, ಅವರ ಹಿಂದೆ ರೇಷ್ಮೆ ಸೀರೆ ಉಟ್ಟ್ಕೊಂಡು ಲಕ್ಷಣವಾಗಿ ತಯಾರಾಗಿದ್ದ ಅವರ ಹೆಂಡತಿ ಮತ್ತು ಒಬ್ಬ ಯುವತಿ.

 “ಸಾರ್ ಇದಾರಾ?"  ಅಂದ್ರು. "ಹೇಳಿ ಏನಾಗಬೇಕು" ಎಂದೆ. "ಸಾರ್ನ ನೋಡಬೇಕಿತ್ತು" ಅಂದರು. "ವಿಷಯ ಏನು ಹೇಳಿ ಅಂದೆ". "ಸಾರ್ಗೆ ಹೇಳ್ತೀನಿ" ಅಂದರು. ನನ್ನ ಆಫೀಸಿಗೆ ನಾನೇ ಸರ್  ನಾನೇ ಮೇಡಂ, ಮೀಸೆಯೂ ನಾನೇ ಬಳೆಯೂ ನಾನೇ ಅಂತ ಅವರಿಗೆ ಅರ್ಥ ಮಾಡಿಸುವಷ್ಟರಲ್ಲಿ ಸಾಕುಸಾಕಾಯ್ತು. 

ಅವರು ಬಂದದ್ದದ್ದು ಅವರ ಮಗಳಿನ ದಾಂಪತ್ಯ ಜೀವನ ಸಮಸ್ಯೆ ತೆಗೆದುಕೊಂಡು. ಆ ಹುಡುಗಿ ದೈಹಿಕ ಸನಿಹಕ್ಕೆ ಒಲ್ಲೆ ಎನ್ನುತ್ತಿದ್ದಳು ಅದಕ್ಕೇ ಹೊಸ ಅಳಿಯ ಡೈವೋರ್ಸ್ ಕೇಳಿ ಬಿಟ್ಟಿದ್ದ. ಈ ಖಾಸಗಿ ವಿಷಯವನ್ನು ಹೇಳಿಕೊಳ್ಳಲು ಆತನಿಗೆ ಒಬ್ಬ ಗಂಡಸು ಬೇಕಿತ್ತು. 

ಇದು ನನಗೆ ಕಲಿಸಿದ್ದು ಎರಡು ಪಾಠ. ಒಂದು ಹೆಂಗಸು ಮನಸ್ಸು ಮಾಡಿದರೆ, ಬುದ್ಧಿಯ ಮೂಲಕ ಗಳಿಸಿಕೊಂಡ ಆತ್ಮವಿಶ್ವಾಸ ಇದ್ದರೆ ಯಾರದ್ದೇ ಆಗಿರಲಿ, ಯಾವುದೇ ರೀತಿಯ ಮುಜುಗರವನ್ನು ಹೋಗಲಾಡಿಸಬಲ್ಲಳು

ಇನ್ನೊಂದು ಪಾಠ ವೃತ್ತಿಪರತೆಗೆ ಲಿಂಗಬೇಧ ಇರಬಾರದು ಎನ್ನುವ ಅವೇರ್ನೆಸ್ಸ್ ನೀಡಲು ಕೆಲಸ ಮಾಡಬೇಕು. ಮಹಿಳೆಯರಿಗೆ ತಮ್ಮೊಳಗೇ ತಮ್ಮ ಬಗ್ಗೆ ಇರುವ ಮುಜುಗರದಿಂದ ಹೊರಬರಲು ಸಹಾಯ ಮಾಡಬೇಕಿದೆ ಎನ್ನುವುದು. ನೇರವಾದ ಮಾತು ಎಂದರೆ ಒರಟು ಮಾತು ಅಂತಲ್ಲ, ಸ್ಪಷ್ಟ ಮತ್ತು ಖಚಿತವಾದ ಮಾತು ಎಂದು.

ಈ ಎರಡನೆಯ ಪಾಠವನ್ನು ಕಲಿಸಬೇಕು ಮತ್ತು ಕಲಿತುಕೊಳ್ಳಬೇಕು ಎಂದರೆ ಮಹಿಳೆಯರು ಹೆಚ್ಚು ಹೆಚ್ಚು ಕಾನೂನಿಗೆ ಸಂಬಂಧಪಟ್ಟ ವಿಷಯಗಳನ್ನು ಓದಬೇಕು , ತಿಳಿದುಕೊಳ್ಳಬೇಕು. ಅಷ್ಟೇ ಅಲ್ಲ ಬರೆಯ ಬೇಕು ಕೂಡ. ಲೇಖಕಿಯರಾಗಿ ಇದು ನಮ್ಮ ಮೇಲಿರುವ ಜವಾಬ್ದಾರಿಯೂ ಹೌದು. 

ಈ ವಿಷಯ ನನ್ನ ತಲೆಗೆ ಬಂದ ತಕ್ಷಣ ಮಹಿಳೆಯರನ್ನು ಕಾನೂನು ಸಾಹಿತ್ಯ ಬರೆಯಲು ಪ್ರೋತ್ಸಾಹಿಸಬೇಕು ಎನ್ನಿಸಿ ಶ್ರೀಮತಿ. ವನಮಾಲ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರು ಇವರ ಬಳಿ , ಮಹಿಳೆಯರು ಬರೆಯುವ ಕಾನೂನು ಸಾಹಿತ್ಯಕ್ಕೆ  , ನನ್ನ ಪರವಾಗಿ ಲೇಖಕಿಯರ ಸಂಘದಿಂದ ಒಂದು ಬಹುಮಾನವನ್ನು ಘೋಷಿಸಲು ಮನವಿ ಮಾಡಿಕೊಂಡಿದ್ದೇನೆ ಮತ್ತು ಪ್ರತೀ ವರ್ಷ ಇಂತಹ ಒಂದು ಬಹುಮಾನ ನೀಡಲು ನಾನು ಬದ್ಧಳಾಗಿರುತ್ತೇನೆ ಕೂಡ.

ಕಡೆಯದಾಗಿ ಇನ್ನೊಂದು ಅನುಭವವನ್ನು ಹಂಚಿಕೊಂಡು ನನ್ನ ಮಾತು ಮುಗಿಸುತ್ತೇನೆ. ಇತ್ತೀಚೆಗೆ ಒಂದು ಕೇಸ್ ಬಂತು. ಕೆಳ ಮಧ್ಯಮವರ್ಗದ ಹೆಂಗಸೊಬ್ಬಳಿಗೆ ಎಂಟು ವರ್ಷದ ಮಗಳು. ಆ ಬಾಲಕಿಗೆ ನಾಲ್ಕು ವರ್ಷಗಳಿದ್ದಾಗ ಗಂಡ ಬಿಟ್ಟು ಹೋಗಿದ್ದಾನೆ. ನಂತರ ಒಂದು ವರ್ಷದಲ್ಲಿ ಆಕೆ ಇನ್ನೊಂದು ಮದುವೆ ಆಗಿದ್ದಾಳೆ. ಆತ ಈ ಮಗುವಿಗೆ ದೈಹಿಕ ದೌರ್ಜನ್ಯ ಮಾಡುತ್ತಾನೆ. ಲೈಂಗಿಕ ದೌರ್ಜನ್ಯಕ್ಕೂ ಒಂದು ಅಂಶ ಹೆಚ್ಚಾಗಿಯೇ ಆ ಬಾಲಕಿಗೆ ಹೊಡೆಯುವುದು, ಬಡಿಯುವುದು, ಕಚ್ಚುವುದು, ಪರಚುವುದು  ಸತತ ಮೂರುವರ್ಷಗಳು ಇಂತಹ ದೌರ್ಜನ್ಯ ಮಾಡಿದ್ದಾನೆ. ಕೊನೆಗೆ ಚೈಲ್ಡ್ ಲೈನ್ ಅವರಿಂದ ರಕ್ಷಿಸಲ್ಪಟ್ಟು ನನ್ನ ಬಳಿಗೆ ಈ ಪ್ರಕರಣ ಬಂತು. 

ಇದು ಮಕ್ಕಳ ನ್ಯಾಯ ಕಾಯಿದೆ ಸೆಕ್ಷನ್ ೭೫ ರಲ್ಲಿ ಒಂದು ಕ್ರಿಮಿನಲ್ ಅಪರಾಧ. ಮೂರು ವರ್ಷ ಜೈಲು ಶಿಕ್ಷೆ ಇರುವಂತಹ ಅಪರಾಧ. ಪೋಲಿಸಿನವರನ್ನು ಕರೆಸಿ ದೂರು ದಾಖಲಿಸಿಕೊಳ್ಳಲು ಆದೇಶ ಕೊಟ್ಟಿದ್ದಾಯ್ತು. ಆಕೆ ಅಳುತ್ತಾ ಕೈಕಾಲು ಕಟ್ಟಿಕೊಂಡಳು. ನೆಂಟರು , ಪರಿಚಯವದವರು ಎಲ್ಲರೂ ನನ್ನಲ್ಲಿ FIR ಮಾಡಿಸದಿರಲು ಗೋಗರೆದುಕೊಂಡರು. ಈಗ ನನ್ನ ಮುಂದೆ ಎರಡು ಆಯ್ಕೆ ಒಂದು ಕಾನೂನಿನ ಅಡಿಯಲ್ಲಿ ಮಗುವನ್ನು ರಕ್ಷಿಸುವುದು ಇನ್ನೊಂದು ಮಾನವೀಯ ದೃಷ್ಟಿಯಲ್ಲಿ ಆರೋಪಿಯನ್ನು ಖುಲಾಸೆ ಗೊಳಿಸುವುದು.

ನನಗೆ ಗೊತ್ತಿದೆ ಅವನು ಶಿಕ್ಷೆ ಅನುಭವಿಸಿ ಬಂದ ಮೇಲೆ ಹೆಂಡತಿಯನ್ನೂ ಇನ್ನೂ ಹೆಚ್ಚಿಗೆ ಗೋಳುಹುಯಿಡು ಕೊಳ್ಳುತ್ತಾನೆ ಅಂತ. ಆದರೆ ನಾನೀಗ ಏನು ಮಾಡಲೀ? ಒಂದೆರಡು ರಾತ್ರಿಗಳು ನಿದ್ದೆ ಬರಲಿಲ್ಲ. ಆಗ ನನ್ನ ಕೈಹಿಡಿದ್ದದ್ದು ಮಾರ್ಟಿನ್ ಲೂಥರ್ ಕಿಂಗ್‍ ಹೇಳಿದ ಮಾತು “Injustice done anywhere is a threat to Justice done everywhere”ನನಗೆ ನಾನೇ ಹೇಳಿಕೊಂಡೇ ನಾನು ಧ್ವನಿ ಎತ್ತಬೇಕಿರುವುದು ನ್ಯಾಯ ಸಿಗಲಿ, ನ್ಯಾಯ ಆಗಲಿ ಅಂತಲ್ಲ ಅನ್ಯಾಯ ಆಗದಿರಲಿ ಎಂದು. 

ಆಗ ನನ್ನ ಗೊಂದಲಕ್ಕೆ ಒಂದು ಖಚಿತ ಉತ್ತರ ಸಿಕ್ಕಿತು. ಇದರಿಂದ ನಾನು ಕಲಿತ ಪಾಠ ನನ್ನ ನೋವಿಗೆ ಪರಿಹಾರ ಸಿಗಲಿ ಎಂದು ಹೋರಾಟ ಮಾಡುವುದಕ್ಕಿಂತ ನೋವುಗಳನ್ನು ಶಮನ ಮಾಡಲು ಒಂದಾಗೋಣ ಎನ್ನುವ ಸಂಕಲ್ಪ ಮಾಡಬೇಕೂ. ನಲಿವು ಎಂದೂ ವ್ಯಕ್ತಿಗತ ಆದರೆ ನೋವು/ದೌರ್ಜನ್ಯ  ಯಾವತ್ತೂ ಸಾಮುದಾಯಿಕ.

ಇದನ್ನು ಅರಿತು ಅದರಂತೆಯೇ ನುಡಿಯಲ್ಲಿ, ಬರಹದಲ್ಲಿ, ನಡೆದುಕೊಂಡಲ್ಲಿ  ಬಹುಶಃ ಮಹಿಳೆಯರಿಗೆ ಮತ್ತು ಮಹಿಳೆಯರ ಸಾಹಿತ್ಯಕ್ಕೆ ಇನ್ನೂ ಸಿಗದೆ ವಂಚಿತ ಆಗಿರುವ ಮನ್ನಣೆ ಸಿಗುವುದೇನೋ  ಅಂತ ಭಾವಿಸ್ತೀನಿ.

ಲೇಖಕಿಯರ ಸಂಘದ ಬಗ್ಗೆ ನನಗೆ ವಿಶೇಷ ಗೌರವ. ಇಷ್ಟು ಘನವಾದ ಸಂಸ್ಥೆಯ ಚುನಾವಣೆಯಲ್ಲಿ ನನ್ನನ್ನು ಚುನಾವಣಾ ಅಧಿಕಾರಿಯನ್ನಾಗಿ ಮಾಡಿದ್ದೀರಿ. ಇದು ಜೀವನದಲ್ಲಿ ಸಂದ ಎತ್ತರದ ಗೌರವ. ನಿಮ್ಮೆಲ್ಲರ ಜೊತೆ ಹೀಗೆ ಕುಳಿತು ಮನಸ್ಸಿನ ಮಾತುಗಳನ್ನು ಆಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು.


20-01-2021

ಮಾತುಗಳನ್ನು ಕೇಳಲು ಈ ಲಿಂಕ್ ಬಳಸಿ

https://youtu.be/Ye_jJ8oCPpI







Comments

  1. ಅದ್ಬುತ ಚಿಂತನೆಯ ನ್ನು ಸರಳವಾಗಿ ಹೇಳುವ ಕಲೆಗಾರಿಕೆಗೆ ಶರಣು ಅಂಜಲಿ

    ReplyDelete
  2. ಚಂದವಾಗಿ ಸರಳವಾಗಿ ನಿಮ್ಮ ಅನುಭವ ಹಂಚಿಕೊಂಡಿದ್ದೀರಿ. ಸೂಪರಾಂಜಲಿ

    ReplyDelete

Post a Comment

Popular posts from this blog

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್