Surrogacy Law

 ಅಕ್ಟೊಬರ್ 2021ರಂದು ಆರೋಗ್ಯ ಸಚಿವ ಸುಧಾಕರ್ ಅವರು ಹೇಳುತ್ತಾರೆ “ಆಧುನಿಕ ಮಹಿಳೆ ಒಬ್ಬಳೇ ಇರಲು ಬಯಸುತ್ತಾಳೆ. ವಿವಾಹವಾದರೂ ಮಗು ಹೆರಲು ಇಷ್ಟ ಪಡುತ್ತಿಲ್ಲ, ಬಾಡಿಗೆ ತಾಯಿಯಿಂದ ಮಗು ಪಡೆಯಲು ಬಯಸುತ್ತಿದ್ದಾಳೆ” ಎಂದು. 

ಒಬ್ಬ ಮಹಿಳೆ ಹೀಗೆ ತನ್ನಿಷ್ಟಕೆ ಅನುಗುಣವಾಗಿ ಬಾಡಿಗೆ ತಾಯಂದಿರಿಂದ ಮಕ್ಕಳನ್ನು ಪಡೆಯಬಹುದು ಎಂದರೆ ಒಟ್ಟು 19 ಪುಟಗಳ 54 ಮುಖ್ಯ ಸೆಕ್ಷನ್‍ಗಳ ಸ್ಯಾರೋಗೆಸಿ (ನಿರ್ವಹಣೆ) ಕಾನೂನು-2021 ಹಾಗೂ 69 ಪುಟಗಳ 35 ರೂಲ್ಸ್ ಜೊತೆಗೆ 19 ನಮೂನೆಗಳನ್ನು ಹೊಂದಿರುವ ಸ್ಯಾರೋಗೆಸಿ ನಿಬಂಧನೆಗಳು-2022 ಇವುಗಳನ್ನು ಜಾರಿಗೆ ತರುವ ಅವಶ್ಯಕತೆಯಾದರೂ ಏನಿತ್ತು?!

ಮೊನ್ನೆಮೊನ್ನೆ ನಯನತಾರ ಎನ್ನುವ ಪ್ರಖ್ಯಾತ ನಟಿ ಬಾಡಿಗೆ ತಾಯಿಯ ಮೂಲಕ ಅವಳಿ ಮಕ್ಕಳನ್ನು ಪಡೆದಾಗ ಕೆಲವು ಜನರು ಟೈಮ್ ಪಾಸ್ ಮಾತಿನಂತೆ ಹಗುರವಾಗಿ ಹೇಳಿದ್ದು “ಮದುವೆ ಮಾಡಿಕೊಂಡು ಲಕ್ಷಣವಾಗಿ ಮಕ್ಕಳು ಹೆರಕ್ಕೆ ಏನಂತೆ?” ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಕೆಲವರ ಮಾತು “ಮಕ್ಕಳು ಮಾಡಿಕೊಂಡ ಮೇಲೆ ಮದುವೆ ಯಾಕೆ? ನಮ್ಮ ಸಂಸ್ಕೃತಿ ಹಾಳಾಗುತ್ತಿದೆ.”  ತಮ್ಮದೂ ಒಂದು ಮಾತಿರಲಿ ಎಂದುಕೊಳ್ಳುವ ಕೆಲವರು ಹೇಳಿದ್ದು “ಊರಲೆಲ್ಲಾ ಅನಾಥ ಮಕ್ಕಳು ಬಿದ್ದಲೆಯುತ್ತಿವೆ. ಅವುಗಳನ್ನು ದತ್ತು ತೆಗೆದುಕೊಂಡು ಸಾಕಬಾರದೇ?”. ಇನ್ನೂ ಒಂದಷ್ಟು ತಲೆಗಳು “ಹೆಂಗಸರಿಗೆ ತಮ್ಮ ಸೌಂದರ್ಯ ಉಳಿದರೆ ಸಾಕು, ಸಮಾಜ ಏನಾದರೇನಂತೆ?” ಎಂದವು. ಹೀಗೇ ಇನ್ನೂ ತರಹಾವರಿ ವಾಕ್ಯಗಳನ್ನು ಓದುವಾಗ, ಕೇಳುವಾಗ ’ತಾಳಕ್ಕೆ ತಕ್ಕಂತೆ ಕುಣಿಯ ಬೇಕು, ಕಾಲಕ್ಕೆ ತಕ್ಕಂತೆ ನಡೆಯ ಬೇಕು ಇದೇ ಮುತ್ತಿನಂಥಾ ಮಾತು’ ಎಂದ ಹಿರಿಯರು ಎಲ್ಲೋ ಕುಳಿತು ನಗುತ್ತಿರಬೇಕು ಮತ್ತು ಹುಟ್ಟಿದ, ಹುಟ್ಟಲಿರುವ ಕಂದಮ್ಮಗಳ ನೆತ್ತಿ ಆಘ್ರಾಣಿಸುತ್ತಿರಬೇಕು ಎನ್ನಿಸುತ್ತದೆ.

ವಿಜ್ಞಾನವೂ ಕೂಡ ’ಇದು ಹೀಗೇ’ ಎಂದು ಎದೆ ತಟ್ಟಿಕೊಳ್ಳುವ ಕಾಲವಿಲ್ಲ. ಬದಲಾವಣೆ, ಬೆಳವಣಿಗೆ ಮಾತ್ರ ನಿರಂತರ ಎನ್ನುತ್ತಾ ಜಗತ್ತು ಭೂಮಿಯೊಂದಿಗೇ ಪರಿಭ್ರಮಿಸುತ್ತಿದೆ. ವೈಯಕ್ತಿಕ ಜೀವನದಲ್ಲಿ ಇಲ್ಲೀಗ ತಪ್ಪು ಸರಿಗಳು ಅಂತ ಇಲ್ಲ. ಇರುವುದಾದರೆ ಅವರವರ ಅನುಕೂಲಕ್ಕೆ ಅವರವರೇ ತೆಗೆದುಕೊಳ್ಳುವ, ಸಮಾಜಕ್ಕೆ ಹಾನಿ ಮಾಡದ ವೈಯಕ್ತಿಕ ನಿರ್ಧಾರಗಳು. ಅದನ್ನೇ ಅನುಮೋದಿಸುವಂತೆ ಇಷ್ಟು ವರ್ಷಗಳು ಇಲ್ಲದ ಕಾನೂನು ಈಗ ಜಾರಿಗೆ ಬಂದಿದೆ. ಎಲ್ಲಾ ಹೊಸತನ್ನೂ ಒಪ್ಪಿಕೊಳ್ಳುವಾಗ, ಪಡೆದುಕೊಳ್ಳುವಾಗ ಅನುಮಾನ ಆತಂಕ ಸಹಜವೇ. ಆದರೆ ಅದು ಘಟಿಸುವುದು ಅಸಾಧ್ಯ, ಅಪರಾಧ ಎನ್ನುವ ಮನೋಭಾವ progressive ಸಮಾಜದ ವ್ಯಾಖ್ಯಾನದಲ್ಲಿ ಇರಬಾರದು ಅಷ್ಟೇ.

ಅಷ್ಟಕ್ಕೂ ಬಾಡಿಗೆ ತಾಯಿ ಆಗುವುದು ಎಂದರೆ ಅಥವಾ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೇಯುತ್ತೇನೆ ಎಂದರೆ ಅದು ಪ್ರಸ್ತುತ ಇರುವ ಕಾನೂನಿನ ನಿಬಂಧನೆಗಳಿಗೆ


ಒಳಪಟ್ಟು ಆಗಿರಬೇಕೇ ಹೊರತು ವ್ಯಕ್ತಿಗತ ಇಚ್ಚೆಯಂತೆ ಅಲ್ಲ. ಬಾಡಿಗೆ ತಾಯಿ ಆಗುವವಳು  25 ರಿಂದ 35 ವರ್ಷಗಳ ವಯಸ್ಸಿನವವಳಾಗಿದ್ದು, ಮದುವೆಯಿಂದ ತನ್ನ ಒಂದು ಜೈವಿಕ ಮಗುವನ್ನು ಹೊಂದಿರಬೇಕು. ಅವಳ ಇರಲೇ ಬೇಕಾದ  ಮಾನಸಿಕ ಮತ್ತು ದೈಹಿಕ ಸ್ಥಿತಿಗತಿಯ ಬಗ್ಗೆ ಸಾಕಷ್ಟು ಮಾನದಂಡಗಳನ್ನು ನೀಡಲಾಗಿದೆ. ಹಾಗೆಯೇ ಮಗುವನ್ನು ಹೊಂದುವುದು ಪ್ರತೀ ಹೆಣ್ಣಿನ ತುಡಿತ. ಇದನ್ನು ಮನಗೊಂಡೇ ಬಾಡಿಗೆ ತಾಯ್ತನ ಅನುಭವಿಸಲು ವಿವಾಹಿತ ಮತ್ತು ಅವಿವಾಹಿತ ಎನ್ನುವ ಬೇಧವಿಲ್ಲದೆ ಮಗುವನ್ನು ಪಡೆಯಲು ಷರತ್ತಿಗೆ ಅನ್ವಯಿಸಿ ಅವಕಾಶ ನೀಡುತ್ತದೆ ಕಾನೂನು. ಹೆರುವಾಕೆಯಾಗಲೀ ಹೊಂದುವ ತಾಯಿ ಆಗಲೀ ಗರ್ಭ ಮತ್ತು ನಂತರ ಮಗುವಿನ ಮೂಲಕ ಹಣ ಸಂಪಾದನೆ ಮಾಡಲು ಕಾನೂನಿನಲ್ಲಿ ಅವಕಾಶ ನಿರಾಕರಿಸಲಾಗಿದೆ. ಅಷ್ಟೇ ಅಲ್ಲ ಹಾಗೆ ಮಾಡುವುದನ್ನು ಶಿಕ್ಷಾರ್ಹ ಅಪರಾಧ ಎಂದು ಗುರುತಿಸಲಾಗಿದೆ. ಬಾಡಿಗೆ ಗರ್ಭ ನೀಡುವವಳಿಗೆ ಮಗು ಪಡೆಯುವವರು ಎಲ್ಲಾ ವೈದ್ಯಕೀಯ ಮತ್ತು ತತ್ಸಂಬಂಧ ಖರ್ಚುಗಳನ್ನು ನೀಡಬೇಕು. ಮತ್ತು ಮಗುವಿನ ಜನನನದ ನಂತರದ 36 ತಿಂಗಳುಗಳ ಕಾಲ ಮೆಡಿಕಲ್ ಇನ್ಶ್ಯೂರೆನ್ಸ್‍ನ ಸೌಲಭ್ಯ ನೀಡಬೇಕಿರುತ್ತದೆ. ಮಗು ಹೊರುವ ಪಡೆಯು ಎರಡೂ ಬದಿಯವರು ನಿಗಧಿತ ಕಾಲದ ವರೆಗೂ ಆಪ್ತಸಮಾಲೋಚನೆಯನ್ನು ಪಡೆಯಬೇಕಿರುತ್ತದೆ.

ಈ ಕಾನೂನು ಭಾರತೀಯ ಪ್ರಜೆಗಳಿಗೆ ಮಾತ್ರ ಧರ್ಮಾತೀತವಾಗಿ ಅನ್ವಯ ಆಗುತ್ತದೆ. ಬಾಡಿಗೆಗೆ ಗರ್ಭ ನೀಡುವವರು, ಮಗುವನ್ನು ಪಡೆಯುವವರು ಇಬ್ಬರೂ ಭಾರತೀಯರೇ ಆಗಿರಬೇಕು.  ಹಾಂ, ಹೀಗೆ ಬಾಡಿಗೆಯ ಗರ್ಭದಿಂದ ಮಗು ಪಡೆಯುವವರಿಗೆ ಈ ಮೊದಲೇ ಜೈವಿಕವಾಗಿ ಆಗಲೀ, ದತ್ತಕದಿಂದಾಗಲೀ ಅಥವಾ ಸ್ಯಾರೋಗೆಸಿಯಿಂದಾಗಲೀ ಮಗು ಇರಬಾರದು. ಅವರುಗಳ ತಮಗಾಗಿ ಗರ್ಭ ನೀಡುವಂತೆ ನೆಂಟರನ್ನೋ, ಸ್ನೇಹಿರನ್ನೋ ಅಥವಾ ಪರಿಚಯದವರನ್ನೋ ಆಮಿಷ ಒಡ್ಡಿ ಬಲವಂತ ಮಾಡುವ ಹಾಗೂ ಇಲ್ಲ. ಅವಿವಾಹಿತ ಮಹಿಳೆ ಬಾಡಿಗೆ ತಾಯ್ತನದಿಂದ ಮಗುವನ್ನು ಪಡೆದ ನಂತರ ತನ್ನ ಇಚ್ಚೆಯಂತೆ ಮದುವೆ ಆಗಲು ಯಾವುದೇ ತಡೆ ಇಲ್ಲ. ಮತ್ತೊಬ್ಬರ ಗರ್ಭದಿಂದ ತನಗೆ ಹುಟ್ಟುವ  ಮಗುವಿಗೆ ಲಿಂಗ ಪರೀಕ್ಷೆ ಮತ್ತು ಅಕಾರಣ ಗರ್ಭಪಾತ ಎರಡಕ್ಕೂ ಅವಕಾಶವಿಲ್ಲ.

ಇಷ್ಟು ಸರಳವೇ ನಿಬಂಧನೆಗಳು, ಸರಿ ಹಾಗಾದರೆ ನಾವು ಕೂಡ ಇನ್ನು ಮುಂದೆ ’ಬಾಡಿಗೆ ತಾಯ್ತನ’ ನೀಡುವುದರ ಮೂಲಕ ನಮ್ಮ ಆಸ್ಪತ್ರೆ ಅಥವಾ ಕ್ಲಿನಿಕ್‍ಗಳಲ್ಲಿ ಹೆಚ್ಚು ದುಡ್ಡು ಮಾಡಬಹುದು ಎನ್ನುವ ವ್ಯಾಪಾರೀ ಮನಸ್ಸಿಗೆ ಕಡಿವಾಣ ಹಾಕಲೆಂದೇ ಈ ಕಾಯಿದೆಯಲ್ಲಿ ಪ್ರಸೂತಿ ಹಾಗೂ ಸಹಾಯಕ ಗರ್ಭಧಾರಣೆ ಮಾಡಿಸುವ  ಅನುಕೂಲ ಇರುವ ಎಲ್ಲಾ ಆಸ್ಪತ್ರೆಗಳಲ್ಲಿ ಬಾಡಿಗೆ ತಾಯಿಯಿಂದ ಹೆರಿಗೆ ಮಾಡಿಸಲು ಅಥವಾ ಅದಕ್ಕೆ ಬೇಕಾದ ಪ್ರಕ್ರಿಯೆ ನಡೆಸಲು ಅನುಮತಿ ನೀಡಿಲ್ಲ. ಈ ಪ್ರೊಸೀಜರ್ಗಾಗಿಯೇ National ಅಥವಾ State Assisted Reproductive Technology and Surrogacy Board ಇಲ್ಲಿ ನೊಂದಾವಣೆ ಮಾಡಿಸಿಕೊಡು ಲೈಸೆನ್ಸ್ ಪಡೆದಿರಬೇಕಿರುತ್ತದೆ. ಎಲ್ಲ ಪ್ರಸೂತಿ  ಮತ್ತು ಹೆರಿಗೆ ವೈದ್ಯರು ಈ ಕಾರ್ಯವನ್ನು ನಿರ್ವಹಿಸಲು ಕಾನೂಉ ಒಪ್ಪಿಗೆ ನೀಡಿಲ್ಲ. ಪರವಾನಿಗೆ ಪಡೆದ ಆಸ್ಪತ್ರೆಗಳಲ್ಲಿ ಬಾಡಿಗೆ ತಾಯ್ತನದ ಪ್ರಕರಣಗಳನ್ನು ನಿರ್ವಹಿಸಲು ಶಸ್ತ್ರಚಿಕಿತ್ಸಕರು, ಅರಿವಳಿಗೆ ತಜ್ಞರು, ದಾದಿಗಳು, ಆಪ್ತ ಸಮಾಲೋಚಕರು, ಪರಿಚಾರಿಕೆಯರು ಕೂಡ ಪ್ರತ್ಯೇಕ ಅಪ್ಪಣೆಯನ್ನು ಮಂಡಳಿಯಿಂದ ಪಡೆದಿರ ಬೇಕಿರುತ್ತದೆ. ಇದಕ್ಕೆ ಮೇಲ್ವಿಚಾರಕ ಸಮಿತಿಯೂ ಇರುತ್ತದೆ.

ಇಷ್ಟೆಲ್ಲಾ ನಿಯಮಗಳಿದ್ದಾಗ್ಯೂ ಅದೆಷ್ಟೋ ಪ್ರಖ್ಯಾತರು, ಉದಾಹರಣೆಗೆ ಹಿಂದಿ ಚಲನಚಿತ್ರ ನಟ  ಶಾರುಖ್ ಕಾನ್, ತುಷಾರ್ ಕಪೂರ್, ನಿರ್ದೇಶಕ ಕರಣ್ ಜೋಹರ್, ನಟಿ ರವೀನಾ ಟಂಡನ್, ನಿರ್ಮಾಪಕಿ ಏಕ್ತಾ ಕಪೂರ್ ಇವರೆಲ್ಲ ಅಷ್ಟು ಸುಲಭದಲ್ಲಿ ಮಕ್ಕಳು ಪಡೆದಿದ್ದಾರಲ್ಲಾ ಎನಿಸಬಹುದು.  ನಮ್ಮಲ್ಲಿ ಈ ಕಾನೂನು ಜಾರಿಗೆ ಬಂದಿದ್ದು 2021ರಲ್ಲಿ ಮತ್ತು ಇದಕ್ಕೆ ಹಿಂಜಾರಿಗೆಯ ಪರಿಣಾಮದ ಕ್ರಮ ತೆಗೆದುಕೊಳ್ಳೂವ ಅವಕಾಶ ಇಲ್ಲ.

ಸಚಿವರು ಹೇಳಿದಂತೆ ಒಬ್ಬಳೇ ಇರಬೇಕು ಎಂತಲೋ, ಮಗುವನ್ನು ಹೊತ್ತು ಹೇರಲು ಬೇಕಿರುವ ಆರೋಗ್ಯದ ಕೊರತೆಯಿಂದಾಗಿಯೋ, ಅವರಿವರೆಂದಂತೆ  ಸೌಂದರ್ಯ ಉಳಿಸಿಕೊಳ್ಳಬೇಕು ಎಂತಲೋ ಯಾವುದೇ ಕಾರಣಕ್ಕೂ ತನ್ನದೇ ಮಗುವನ್ನು ಯಾವುದೇ ರೀತಿಯಲ್ಲೂ ಪಡೆಯಲು ಇಲ್ಲಿ ಸಾಧ್ಯವಿದೆ. ಜೈವಿಕ ಮಗು, ದತ್ತು ತೆಗೆದುಕೊಂಡ ಮಗು ಮತ್ತು ಬಾಡಿಗೆ ಗರ್ಭದಿಂದ ಪಡೆದ ಮಗು, ಈ ಮಕ್ಕಳು ಕಾನೂನು ರೀತ್ಯ ಸಮಾನರು. ಅವರಿಗೆ ಬರಬೇಕಾದ ಆಸ್ತಿ ಹಕ್ಕು, ಅವರು ದೊಡ್ಡವರಾದ ಮೇಲೆ ತಾಯಿ ಮತ್ತು ತಂದೆಯರಿಗೆ ಜೀವನ ಕಟ್ಟಿಕೊಡುವ ಕರ್ತವ್ಯ ಎಲ್ಲವೂ ಸಮನಾವಾಗಿಯೇ ಇದೆ. ಈ ಕಾಯಿದೆಯಲ್ಲಿ ಸ್ಯಾರೋಗೆಸಿಯಿಂದ ಪಡೆದ ಮಗುವನ್ನು ಯಾವುದೇ ಕಾರಣಕ್ಕೆ ದತ್ತು ಕೊಡಬಹುದೇ ಎನ್ನುವುದರ ಬಗ್ಗೆ ಮಾಹಿತಿ ಇಲ್ಲ. ಬಹುಶಃ ಇದನ್ನು ಚರ್ಚೆಗೆ ಇವತ್ತಲ್ಲ ನಾಳೆ ತರಲೇ ಬೇಕಿರುತ್ತದೆ.  “ಅಂಡಾಣು ಕೊಟ್ಟೆ, ಆಕೆ ಗರ್ಭ ಕೊಟ್ಟಳು, ವೀರ್ಯ ಒದಗಿ ಬಂತು, ಭ್ರೂಣವಾಗಿ ಶಿಶು ಹುಟ್ಟಿತು. ಒಪ್ಪಂದದ ಪ್ರಕಾರ ಆ ಕೂಸು ತನ್ನದು ಹಾಗಾಗಿ ತಾನು ತೆಗೆದುಕೊಂಡು ಹೊರಟೆ ಟಾಟಾ, ಬೈ ಬೈ” ಎನ್ನುವಷ್ಟು ಸರಾಗವಲ್ಲ ಜೀವದ ಜೊತೆಗಿನ ಒಡನಾಟ ಮತ್ತು ಜವಾಬ್ದಾರಿ. ಅದಕ್ಕೇ ಕಾನೂನು ಹೇಳುತ್ತದೆ ಹೀಗೆ ಬಾಡಿಗೆ ಗರ್ಭದಿಂದ ಹುಟ್ಟಿದ ಮಗುವನ್ನು ನ್ಯಾಯಾಲಯದ ಮ್ಯಾಜಿಸ್ಟ್ರೇಟರ ಮುಂದೆ ’Birth Affidavit” ದಾಖಲೆಯೊದಗಿಸಿ ಆದೇಶದ ಮೂಲಕ ತನ್ನದಾಗಿಸಿಕೊಳ್ಳಬೇಕು ಎಂದು.

ನಟಿ ನಯನತಾರ ಮದುವೆಗೆ ಮೊದಲೇ ಹೀಗೆ ಗರ್ಭಾಶಯ ಬಾಡಿಗೆ ಪಡೆದು ಮಗು ಪಡೆದಳು. ಹೀಗೆ ಮಾಡಲು ಆಕೆಯ ಸಂಗಾತಿಯ ಒಪ್ಪಿಗೆ ಇತ್ತೇ ಇಲ್ಲವೇ ಎನ್ನುವ ಪ್ರಶ್ನೆಯೇ ಇಲ್ಲ. ಮದುವೆ ಆಗುವಾಗ ಮಾತ್ರ ಆತ ತಾನು ಈ ಮಕ್ಕಳ ತಂದೆ ಎಂದು ಒಪ್ಪಿರಬೇಕು ಅಷ್ಟೇ.  ನಿಬಂಧನೆಗಳಿಗೆ ಒಳಪಟ್ಟು ನಯನತಾರಾ ಅವರ ಬಾಡಿಗೆ ತಾಯ್ತನದ ಪ್ರಕರಣ ಇದೆಯೇ ಇಲ್ಲವೇ ಎನ್ನುವುದನ್ನು ಖಚಿತ ಪಡಿಸಿಕೊಳ್ಳಲು ತಮಿಳುನಾಡು ಸರ್ಕಾರ ತನಿಖೆ ಮಾಡುತ್ತಿದೆ. ಬಾಹ್ಯಾಕಾಶಕ್ಕೆ ಒಬ್ಬಳೆ ಹೋಗಬಲ್ಲಳಾದರೆ ಮಗುವನ್ನೂ ಒಬ್ಬಳೇ ಪಡೆಯಬಲ್ಲಳು ಅವಳು.  ಮುಂದೊಮ್ಮೆ ಅವನು ಕೂಡ ಏಕಾಂಗಿ ಅಪ್ಪನಾಗಿ ಮಗುವನ್ನು ಹೊರಿಸಿ, ಹೆತ್ತಿಸಿಕೊಳ್ಳುವ ಕಾಲ ಬರುತ್ತದೆ. ಅದು ಹಾಗೆ ಆಗುವವರೆಗೂ ಯಾರ ವೈಯಕ್ತಿಕ ಜೀವನವನ್ನೂ, ಎಲ್ಲಿಯವರೆಗೂ ಅದು ಸಮಾಜದ, ಸಹಜೀವಿಯ ಘಾತುಕ ಅಲ್ಲವೋ ಅಲ್ಲಿಯವರೆಗೂ ತಕ್ಕಡಿಯಲ್ಲಿಟ್ಟು ತೂಗುವ ಕೆಲಸ ಮಾಡದಿರುವುದೇ ಸಮಂಜಸ.

*********************************

Comments

Popular posts from this blog

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್