About Sandipani ashram

ಇವತ್ತಿನ ಆಂದೋಲನ ಪತ್ರಿಕೆಯಲ್ಲಿ...ಓದಿ ಅಭಿಪ್ರಾಯ ತಿಳಿಸಿ 🙏

 ’ಊಟಾ ಊಟಾ’ ಎಂದು ಹಪಹಪಿಸುತ್ತಿದ್ದವಳನ್ನು ಚಾಲಕ ಪವನ್ “ಏನ್ಮೇಡಂ ನಿಮ್ಮಂಥವರು ಜ್ಞಾನದ ಭೂಕ್ (ಹಸಿವು) ಅನ್ನಬೇಕು ಅದು ಬಿಟ್ಟು ಹೀಗೆ ಊಟಾ ಊಟಾ ಅನ್ನುತ್ತಿದ್ದಿರಲ್ಲ” ಎಂದು ರೇಗಿಸುತ್ತಾ ಗಾಡಿಯನ್ನು ರೋಂಯ್ ಅಂತ ನಿಲ್ಲಿಸಿ, ಇಳಿಯಲು ಹೇಳಿದ. ಪಕ್ಕದ ಕಾಂಪೌಂಡಿನ ದೊಡ್ಡ ಕಮಾನಿನ ಮೇಲೆ ಬರೆದಿತ್ತು ’ಮಹರ್ಷಿ ಸಾಂದಿಪನಿ ಆಶ್ರಮ್”. ಕೃಷ್ಣ, ಬಲರಾಮ, ಸುಧಾಮ ಓದಿದ ಗುರುಕುಲ. ನಾನೋದಿದ ಮೈಸೂರಿನ ಶಾಲೆ ಅವಿಲಾ ಕಾನ್ವೆಂಟಿನ ಮುಖ್ಯ ಗೇಟಿನ ಕಮಾನೂ ಹೀಗೇ ಇತ್ತು. ಎಲ್ಲಾ ಶಿಕ್ಷಕರೂ ನಿಸ್ಪೃಹವಾಗಿ ನನ್ನನ್ನೂ ಕೃಷ್ಣನ ಅರ್ಧದಷ್ಟಾದರೂ ಜಾಣೆ ಮಾಡಬೇಕೆನ್ನುವ ಪ್ರಯತ್ನ ನಡೆಸಿ ಸೋತಿದ್ದನ್ನು ನೆನೆಸಿಕೊಂಡೇ ಒಳಹೊಕ್ಕೆ.

ಉಜ್ಜನಿಯ ಸಾಂದಿಪನಿ ಆಶ್ರಮದಲ್ಲಿ ಆ ದಿನ ಹೆಚ್ಚಿನ ಜನರಿರಲಿಲ್ಲ.  ಕುಟಿರಾಕಾರದ ಸಿಮೆಂಟಿನ ಅಂಗಳದೊಳಗಿನ ಗೋಡೇಗಳ ಮೇಲೆಲ್ಲಾ ಕೃಷ್ಣ ಕಲಿತ ಹದಿನಾಲ್ಕು ವಿದ್ಯೆಗಳನ್ನು ಬಣ್ಣಬಣ್ಣದಲ್ಲಿ ರಚಿಸಿದ್ದಾರೆ. ಗಾಢ ಬಣ್ಣಗಳು ಈಗಿನ ಆಧುನಿಕ ಶಾಲೆಗಳನ್ನು ಹೋಲುತ್ತಿದ್ದರೂ ಕೃಷ್ಣಭಾವ ಕೊಡುವುದರಲ್ಲಿ ಸೋಲುವುದಿಲ್ಲ. ಆ ಕೋಣೆಯ ದೊಡ್ಡ ಆಕರ್ಷಣೆ ಎಂದರೆ ಗಿರಿಧಾರಿ ಕಲಿತನೆನ್ನಲಾದ ಹದಿನಾಲ್ಕು ವಿದ್ಯೆಗಳು ಯಾವುವು ಎನ್ನುವ ಪಟ್ಟಿಯೊಂದನ್ನು ಬಾಗಿಲಿನ ಹಿಂದಿನ ಗೋಡೆಯ ಮೇಲೆ ತೂಗು ಹಾಕಿರುವುದು. ನಾಲ್ಕು ವೇದಗಳು, ಕಲ್ಪಗಳು, ತಂತ್ರಜ್ಞತೆ, ವ್ಯಾಕರಣ, ಪುರಾಣ, ಜ್ಯೋತಿಷ್ಯ, ಖಗೋಳ ಶಾಸ್ತ್ರ, ಭಾಷಾ ಶಾಸ್ತ್ರ, ಛಂದಸ್ಸು ಹೀಗೆ ಇನ್ನು ಉಳಿದವುಗಳು ಎಲ್ಲವನ್ನೂ ಆತ ಕಲಿತು ಬ್ರಹ್ಮಾಂಡಕ್ಕೆ  ಕಲಿಸಲು ಪ್ರಯತ್ನಿಸಿದ್ದು ಇದೇ ಗುರುಕುಲದಲ್ಲಿ.  ಹೈಸ್ಕೂಲ್‍ನಲ್ಲಿ ಸಮಾಜ ಪಾಠ ಮಾಡುತ್ತಿದ್ದ ಸುಶೀಲಾ ಮಿಸ್ ಅನಾಯಾಸವಾಗಿ ನೆನಪಾದರು. ಅವರು ಎಂಟನೆಯ ತರಗತಿಯಲ್ಲಿ ನಮಗೆ ಹೇಳಿದ್ದ ಮಾತು “ಚರಿತ್ರೆ ಭೂಗೋಳ ತಾನಾಗೇ ಬರತ್ತೆ ನೀವು ಸಂಗೀತ ಕಲಿತರೆ” ಅಂತ. ಬಹುಶಃ ಇದರ ಹಿಂದಿನ ತತ್ವವರಿಯಲು ಸಾಂದಿಪನಿ ಗುರುಕುಲದಲ್ಲೇ ಕಲಿಯಬೇಕೇನೋ. 

ಮಹರ್ಷಿ ಸಾಂದಿಪನಿ ಒಂದು ಬಿಲ್ವಪತ್ರೆಯಿಂದ ಸೃಷ್ಟಿಸಿದರು ಎನ್ನುವ ಶಿವಲಿಂಗ ಸರ್ವೇಶ್ವರನೆನ್ನುವ ಹೆಸರಿನಿಂದ ಪ್ರತಿಷ್ಠಾಪನೆಗೊಂಡಿದ್ದಾನೆ. ಪಾಠಕ್ಕೆ ಕೂರುವ ಮೊದಲು ಕೃಷ್ನ. ಮತ್ತು ಸಂಗಡಿಗರು ಪೂಜೆ ಸಲ್ಲಿಸುತ್ತಿದ್ದ ಶಿವಲಿಂಗ ಅಲ್ಲೇ ಸ್ವಲ್ಪ ಮುಂದೆ ಕುಂಡೇಶ್ವರನೆನ್ನುವ ನಾಮಧೇಯನಾಗಿ ಕುಳಿತಿದ್ದಾನೆ. ಅಲ್ಲಿ ಪೂಜೆ ಮಾಡುತ್ತಿದ್ದವರು ಹೇಳಿದ್ದು “ಜಗತ್ತಿನ ಎಲ್ಲೆಡೆಯಲ್ಲಿಯೂ ಶಿವನ ಎದುರು ಕುಳಿತ ನಂದಿ ಇರುತ್ತಾನೆ ಆದರೆ ಇಲ್ಲಿ ಮಾತ್ರ ನಂದಿ ನಿಂತಿದ್ದಾನೆ ನೋಡಿ” ಎನ್ನುತ್ತಾ ತೋರಿಸಿದರು. ಅದರ ಕಾರಣವನ್ನು ಅವರು ಹೇಳಲಿಲ್ಲ. ಕಾನ್ವೆಂಟಿನಲ್ಲಿ ಓದಿದ ವಿದ್ಯಾರ್ಥಿನಿಯರು ಪ್ರಶ್ನೆ ಹೆಚ್ಚು ಕೇಳುವ ಹಾಗಿಲ್ಲ, ಅದಕ್ಕೇ ಇರಬೇಕು  ನಾನೂ ಸುಮ್ಮನಿದ್ದೆ. ವಿದ್ಯಾಭ್ಯಾಸ ಮುಗಿಸಿದ ನಂತರ ಗುರುಗಳಿಗೆ ದಕ್ಷಿಣೆ ಕೊಡಬೇಕು ಎನ್ನುವುದಕ್ಕೆ ಕೃಷ್ಣ ದೇವಲೋಕದಿಂದ ಕುಬೇರ ನ್ನು ಕರೆಸಿದ್ದನಂತೆ. ಆದರೆ ಗುರುಗಳು ನಿನ್ನಂತಹ ಶಿಷ್ಯರೇ ನನಗೆ ದಕ್ಷಿಣೆ ಎಂದಾಗ ಕುಬೇರ  ಅಲ್ಲಿಯೇ ಗಟ್ಟಿಯಾಗಿ ಕುಳಿತುಬಿಟ್ಟನಂತೆ. ಗುಂಡಗೆ, ಕುಳ್ಳಗೆ ಮಿರಮಿರಮಿಂಚುವ ಕರಿಕಲ್ಲಾಗಿ ಕುಳಿತವನನ್ನು ಕಂಡು ಒಮ್ಮೆ ನನ್ನ ಮನೆಯ ಕಡೆಗೂ ಬಂದು ಹೋಗಪ್ಪ ಎನ್ನುವ ಆಹ್ವಾನವನ್ನು ಕೊಟ್ಟು ಬಂದೆ. 

ಹೊರಡುವ ಮುನ್ನ ದೇವಸ್ಥಾನದ ಎಡಗೋಡೆಯ ಮೇಲೆ ಹದಿನಾಲ್ಕು ವರ್ಷದ ದುಂಡು ಮುಖದ ಬಾಲಕನ  ದೊಡ್ಡ ಫೋಟೊ ಕಾಣಿಸಿತು. ಅವನು ಸಾಂದಿಪನಿ ವಂಶಜನಂತೆ. ಈಗ ಒಂದು ದೊಡ್ಡ ಅಂಗ್ರೇ‘ಜಿ ವಸತಿ ಶಾಲೆಯಲ್ಲಿ ಕಲಿಯುತ್ತಿದ್ದಾನಂತೆ. ಆ ಹುಡುಗನ ನಗುಮುಖದ ಫೋಟೊ ನೋಡಿದಾಗ ಈಗಿನ ಅವಿಲಾ ಕಾನ್ವೆಂಟಿನಲ್ಲಿ ಅದೆಷ್ಟು ಮಕ್ಕಳು ಹೀಗೇ ಹದಿನಾಲ್ಕು ವಿದ್ಯೆ ಕಲಿಯುತ್ತಿದ್ದಾರೋ, ಒಮ್ಮೆ ನೋಡಿ ಬರಬೇಕು, ಆಗ  ಕುಬೇರನೂ ಜೊತೆಗೇ ಬಂದರೆ ಎಷ್ಟು ಚೆನ್ನ ಎಂದುಕೊಳ್ಳುತ್ತಲೇ ಹೊಟ್ಟೆ ಹಸಿವಿಗೆ ಉಪಾಯ ಮಾಡಲು ಹೊರಟೆ.




*********************

 

Comments

Popular posts from this blog

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್