ಮನೆಯಿಂದ ಹೊರಟಾಗ ಚಿರಾಪುಂಜಿ ಎಂದರೆ ಪ್ರೈಮರಿ ಶಾಲೆಯಲ್ಲಿ ಹೇಳಿಕೊಟ್ಟಿದ್ದಂತೆ ಭಾರತದಲ್ಲೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಎನ್ನುವುದು ಮಾತ್ರ ತಲೆಯಲ್ಲಿ ಇತ್ತು. ಶಿಲ್ಲಾಂಗ್ನಿಂದ ಒಂದುವರೆ ಗಂಟೆಯ ಪ್ರಯಾಣ ಮಾತ್ರ ಎಂದಾಗ ಖುಷಿಯೋ ಖುಷಿ. ಹೋಗ್ತಾನೇ ಇದ್ದರೂ ಎಲ್ಲೂ ಚಿರಾಪುಂಜಿ ಅಂತ ಬೋರ್ಡ್ ಕಾಣದೆ ಚಾಲಕ ಬುರಿತ್ ಧೊತ್‍ದಾಂಗ್‍ನನ್ನು ಕೇಳಿದೆ. “ನೀವೀಗ ಚಿರಾಪುಂಜಿಯಲ್ಲಿಯೇ ಇದ್ದೀರ” ಎಂದ. ಹೌದು, ಚಿರಾಪುಂಜಿಯ ಮೂಲ ಹೆಸರು ಸೋಹ್ರಾ. ನಾಲಿಗೆ ಹೊರಳದ ಬ್ರಿಟೀಷರು ಚಿರಾಪುಂಜಿ ಎಂದಿದ್ದಾರೆ. ಇಂದಿಗೂ ಇಲ್ಲಿನ ಜನ ಸೋಹ್ರಾ ಎಂತಲೇ ಕರೆಯುವುದು. ಇಲ್ಲಿ ಈಗ ಪುಸ್ತಕಗಳಲ್ಲಿ ಓದಿದ ಹಾಗೆ ಮಳೆ ಬರುವುದಿಲ್ಲ. ಖಸಿ ಬೆಟ್ಟಗಳ ಸಾಲಿನ ನಟ್ಟನಡುವೆ ಹಸಿರಾಡುತ್ತಾ ಇರುವ ಈ ಊರಿಗೆ ಬೇಸಿಗೆಯ ಧಾಳಿ ಆಗಿದೆ. ಹೆಚ್ಚಿದ ಗಣಿಗಾರಿಕೆಗೆ ಮಳೆ ಬೆಚ್ಚಿಬಿದ್ದಿದೆ. ಫ್ಯಾನ್ ಇಲ್ಲದೆ ಇರಲು ಕಷ್ಟ ಎನ್ನುವಷ್ಟೇ ಬಿಸಿ ಏರಿಬಿಟ್ಟಿದೆ. ಇನ್ನೂ ಅರ್ಧ ದಿನ ಸಮಯ ಇತ್ತು ಕತ್ತಲಾಗಲು. ಸ್ಥಳೀಯರು ಹೋಗುವ ಮಾರುಕಟ್ಟೆಗೆ ಹೋಗುವುದು ನನಗೆ ಬಲು ಅಚ್ಚುಮೆಚ್ಚು. ಹೊರಟಾಗ “ಇವತ್ತು ಮಾರುಕಟ್ಟೆ ಇಲ್ಲ, ನಾಳೆ ಇದೆ” ಎಂದ ಸೆರಿನಿಟಿ ಟ್ರ್ಯಾವೆಲೆರ್ಸ್ ಇನ್ನ್ ತಂಗುದಾಣದ ಮಾಲೀಕ ಮಿಚೇಲ್. “ಅರೆ, ಅದೇನು ಸಂತೆಯೇ ನಿಗಧಿತ ದಿನದಲ್ಲಿ ಇರಲು” ಎನ್ನುವ ಪ್ರಶ್ನೆಗೆ ಅಲ್ಲಿದ್ದವರೆಲ್ಲಾ ಕೊಟ್ಟ ವಿವರ ಆಸಕ್ತಿದಾಯಕವಾಗಿತ್ತು. ಬೆಳಿಗ್ಗೆ ಹತ್ತು ಗಂ...