Special Markets of Chirapunji

 



  ಮನೆಯಿಂದ ಹೊರಟಾಗ ಚಿರಾಪುಂಜಿ ಎಂದರೆ ಪ್ರೈಮರಿ ಶಾಲೆಯಲ್ಲಿ ಹೇಳಿಕೊಟ್ಟಿದ್ದಂತೆ ಭಾರತದಲ್ಲೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಎನ್ನುವುದು ಮಾತ್ರ ತಲೆಯಲ್ಲಿ ಇತ್ತು.  ಶಿಲ್ಲಾಂಗ್ನಿಂದ ಒಂದುವರೆ ಗಂಟೆಯ ಪ್ರಯಾಣ ಮಾತ್ರ ಎಂದಾಗ ಖುಷಿಯೋ ಖುಷಿ. ಹೋಗ್ತಾನೇ ಇದ್ದರೂ ಎಲ್ಲೂ ಚಿರಾಪುಂಜಿ ಅಂತ ಬೋರ್ಡ್ ಕಾಣದೆ ಚಾಲಕ ಬುರಿತ್ ಧೊತ್‍ದಾಂಗ್‍ನನ್ನು ಕೇಳಿದೆ. “ನೀವೀಗ ಚಿರಾಪುಂಜಿಯಲ್ಲಿಯೇ ಇದ್ದೀರ” ಎಂದ. ಹೌದು, ಚಿರಾಪುಂಜಿಯ ಮೂಲ ಹೆಸರು ಸೋಹ್ರಾ. ನಾಲಿಗೆ ಹೊರಳದ ಬ್ರಿಟೀಷರು ಚಿರಾಪುಂಜಿ ಎಂದಿದ್ದಾರೆ. ಇಂದಿಗೂ ಇಲ್ಲಿನ ಜನ ಸೋಹ್ರಾ ಎಂತಲೇ ಕರೆಯುವುದು. ಇಲ್ಲಿ ಈಗ ಪುಸ್ತಕಗಳಲ್ಲಿ ಓದಿದ ಹಾಗೆ ಮಳೆ ಬರುವುದಿಲ್ಲ. ಖಸಿ ಬೆಟ್ಟಗಳ ಸಾಲಿನ ನಟ್ಟನಡುವೆ ಹಸಿರಾಡುತ್ತಾ ಇರುವ ಈ ಊರಿಗೆ ಬೇಸಿಗೆಯ ಧಾಳಿ ಆಗಿದೆ. ಹೆಚ್ಚಿದ ಗಣಿಗಾರಿಕೆಗೆ ಮಳೆ ಬೆಚ್ಚಿಬಿದ್ದಿದೆ. ಫ್ಯಾನ್ ಇಲ್ಲದೆ ಇರಲು ಕಷ್ಟ ಎನ್ನುವಷ್ಟೇ ಬಿಸಿ ಏರಿಬಿಟ್ಟಿದೆ.

 ಇನ್ನೂ ಅರ್ಧ ದಿನ ಸಮಯ ಇತ್ತು ಕತ್ತಲಾಗಲು. ಸ್ಥಳೀಯರು ಹೋಗುವ ಮಾರುಕಟ್ಟೆಗೆ ಹೋಗುವುದು ನನಗೆ ಬಲು ಅಚ್ಚುಮೆಚ್ಚು. ಹೊರಟಾಗ “ಇವತ್ತು ಮಾರುಕಟ್ಟೆ ಇಲ್ಲ, ನಾಳೆ ಇದೆ” ಎಂದ ಸೆರಿನಿಟಿ ಟ್ರ್ಯಾವೆಲೆರ್ಸ್ ಇನ್ನ್ ತಂಗುದಾಣದ ಮಾಲೀಕ ಮಿಚೇಲ್. “ಅರೆ, ಅದೇನು ಸಂತೆಯೇ ನಿಗಧಿತ ದಿನದಲ್ಲಿ ಇರಲು” ಎನ್ನುವ ಪ್ರಶ್ನೆಗೆ ಅಲ್ಲಿದ್ದವರೆಲ್ಲಾ ಕೊಟ್ಟ ವಿವರ ಆಸಕ್ತಿದಾಯಕವಾಗಿತ್ತು. ಬೆಳಿಗ್ಗೆ ಹತ್ತು ಗಂಟೆಗೆ ನಿಂತಿದ್ದೆ ಐವ್ ಸೋಹ್ರಾ ಮಾರುಕಟ್ಟೆಯ ಬಾಗಿಲಿನಲ್ಲಿ.

ಇದೊಂದು ಮಾಂತ್ರಿಕವಾದ ಜಾಗ, ಬರೀ ಮಾರುಕಟ್ಟೆಯಲ್ಲ  ಪುರಾತನ ಜೀವವೊಂದು ತನ್ನ ಎಂದೂ ಮುಗಿಯದ ಯೌವ್ವನದದಿಂದ ಮನುಕುಲದ ಕಥೆ ಹೇಳುವಂತಿದೆ ಈ ಜಾಗ. ಇದೊಂದು ತಾಣವಲ್ಲ ಅನುಭವ. ಇಲ್ಲಿ ನಡೆಯುವ ವಿನಿಮಯವೆಲ್ಲಾ ಒಂದು ಸಾಮುದಾಯಿಕ ಸಂಭ್ರಮ.

 ಇಲ್ಲಿ ಎರಡು ರೀತಿಯ ಮಾರುಕಟ್ಟೆಗಳಿವೆ.  'Iewbah'  ದೊಡ್ಡ ಮಾರುಕಟ್ಟೆ.  'Iewrit' ಸಣ್ಣ ಮಾರುಕಟ್ಟೆ. ದೊಡ್ಡ ಮಾರುಕಟ್ಟೆಯನ್ನು ಪ್ರತೀ  ಎಂಟು ದಿನಗಳಿಗೊಮ್ಮೆ ನಡೆಸಲಾಗುತ್ತದೆ. ಇಂದಿನ ಮಾರುಕಟ್ಟೆಯ ದಿನ ಸೋಮವಾರವಿದ್ದರೆ ಮುಂದಿನದ್ದು ಮಂಗಳವಾರ ಇರುತ್ತದೆ. ಕ್ರಿಶ್ಚಿಯನ್ ಧರ್ಮದ ಅನುಯಾಯಿಗಳು ಹೆಚ್ಚಿದಂತೆ ಮಾರುಕಟ್ಟೆಯು ಭಾನುವಾರದಂದು ಬಂದರೆ ಅದರ ಹಿಂದಿನ ದಿನ ಶನಿವಾರವೇ ಅದನ್ನು ನಡೆಸಲಾಗುತ್ತದೆ. ಆಧುನಿಕತೆಗೆ ತೆರೆದುಕೊಂಡಿರುವ ಕೆಲವರು ವಾರದ ಏಳು ದಿನಗಳೂ ವ್ಯಾಪಾರ ಮಾಡುತ್ತಾರೆ.  ಸಣ್ಣ ಮಾರುಕಟ್ಟೆ 'Iewrit' ಅನ್ನು ದೊಡ್ಡ  Iewbah ನಡೆದ ನಾಲ್ಕನೆಯ ದಿನ ತೆರೆಯಲಾಗುತ್ತದೆ. ಮಾರುಕಟ್ಟೆಯ ದಿನಗಳು ಮೊದಲೇ ನಿಗಧಿಯಾಗಿ ಕ್ಯಾಲೆಂಡರ್ನಲ್ಲಿ ಅಚ್ಚಾಗಿರುತ್ತದೆ.

ಮಾರುಕಟ್ಟೆಯ ದಿನಗಳಂದು ಊರೂರಿಂದ ಬೂದು ಬಣ್ಣದ  ’ಬಜಾರ್ ಬಸ್ಸುಗಳು’ ಎಡೆಬಿಡದೆ ಸಾಮಾನುಗಳನ್ನು, ವ್ಯಾಪಾರಿಗಳನ್ನು, ಗ್ರಾಹಕರನ್ನು ಹೊತ್ತುತರುತ್ತಿರುತ್ತವೆ. ಹೆಸರೂ ತಿಳಿಯದ ತರಕಾರಿಗಳು, ಸಾಂಬಾರ ಪದಾರ್ಥಗಳು, ಬಟ್ಟೆಗಳು, ಹೂವು ತರಕಾರಿಗಳ ಬೀಜ, ಸಸಿಗಳು, ಉಪ್ಪಿನಕಾಯಿಗಳು ಮೊರಬ್ಬಾಗಳು, ಸ್ಥಳೀಯ ಸಾರಾಯಿಗಳು, ವಿದೇಶಿ ಮದ್ಯಗಳು, ಅಲ್ಲಿಯೇ ಕತ್ತರಿಸಿಕೊಡುವ ವಿವಿಧ ಮಾಂಸಗಳು, ಸ್ಟೀಲ್ ಪಾತ್ರೆಗಳು, ತೋಟಗಾರಿಕೆ ಕೃಷಿಗೆ ಬೇಕಾದ ಸಾಮಾನುಗಳು, ಮನೆಕಟ್ಟಲು ಅವಶ್ಯವಿರುವ ಸಾಮಗ್ರಿಗಳು, ಅಲಂಕಾರಿಕ ಐಟಮ್‍ಗಳು, ಎಲೆಕ್ಟ್ರಿಕಲ್ ಎಲೆಕ್ಟ್ರಾನಿಕ್ ಸಾಮಾನುಗಳು, ಪೀಠೋಪಕರಣಗಳು ಹೀಗೆ ಏನುಂಟು ಏನಿಲ್ಲ!

ಸೋಹ್ರಾ ಜಿಲ್ಲೆಯ ಮುಖ್ಯಸ್ಥ ’ ಸೈಯಮ್’  ಮಾರುಕಟ್ಟೆ ಸ್ಥಳದ ನಿರ್ವಹಣೆಗಾಗಿ ಪ್ರತಿ ಮಾರಾಟಗಾರರಿಂದ ತೆರಿಗೆ ಪಡೆಯುತ್ತಾನೆ. ಸುಮಾರು 10 ವರ್ಷಗಳ ಹಿಂದೆ, 'ರಾಯಭಾರಿ' ಟ್ಯಾಕ್ಸಿಗಳು ಎಂತಲೇ ಓಡಿಸಲಾಗುತ್ತಿತ್ತಂತೆ. ಆದರೆ ಈಗ ಎಲ್ಲೆಡೆ ಇರುವಂತೆ ಸಾಮಾನ್ಯ ಟ್ಯಾಕ್ಸಿಗಳಿವೆ. ಅವುಗಳ ಬಾಗಿಲುಗಳು ತೆರೆಯುವುದು ಮಾತ್ರ ಕಾಣುತ್ತವೆ, ರೆಪ್ಪೆಯಾಡಿದ ವೇಗದಲ್ಲಿ ಮುಚ್ಚಿಕೊಂಡು ಮುಂದೆ ಹೋಗಿಬಿಡುತ್ತವೆ.

ಈ ಮಾರುಕಟ್ಟೆಗಳಲ್ಲಿ ಬರೀ ವಸ್ತುಗಳ ವ್ಯಾಪಾರವಲ್ಲ, ಮದುವೆ ಮಾತುಕತೆಯಿಂದ ರಾಸು ವಿನಿಮಯದವರೆಗೂ ಆವಳಿಯಲ್ಲಿ ಘಟಿಸುತ್ತವೆ. ಸೆಂಗ್‍ಖಸಿ ಬುಡಕಟ್ಟಿನ, ಯಾವುದೇ ಅಂತಸ್ತಿನ ಜನರು ,ಒಬ್ಬರಿಗೊಬ್ಬರು ಎದುರುಗೊಂಡಾಗ , ನಮಸ್ಕಾರದ ರೀತಿಯಲ್ಲಿ ಕುಮ್ನೋ ಎನ್ನುತ್ತಾರೆ ಮತ್ತು ತಪ್ಪದೆ ಕ್ವಾಯ್ (ಅಡಿಕೆ) ತಿಂಪ್ಯೂ (ವಿಳ್ಳೇದೆಲೆ) ಅದರೊಳಗೆ ಹಚ್ಚಿದ ಶುನ್ (ಸುಣ್ಣ) ಇದನ್ನು ಕಡ್ಡಾಯವಾಗಿ ವಿನಿಮಯ ಮಾಡಿಕೊಳ್ಳುತ್ತಾರೆ. ದೊಡ್ಡ ದೊಡ್ಡ ಕೆಲಸದಲ್ಲಿ ಇರುವವರು ಕೂಡ ಇದನ್ನು ತಮ್ಮ ಜೋಬಿನಲ್ಲಿ ಇಟ್ಟುಕೊಂಡಿರುವುದನ್ನು ನೋಡಿದೆ. ಇದು ಪುರುಷರಿಗೆ ಮಾತ್ರ. ಎಲ್ಲರೂ ಈ ತಾಂಬೂಲವನ್ನು ಜಗಿದರೂ ರಸ್ತೆಯಲ್ಲಿ ಉಗುಳುವುದಿಲ್ಲ. ಈಗೀಗ ಅದರೊಳಗೆ ತಂಬಾಕು ಜಗಿಯುತ್ತಾರೆ ಅದು ಸರ್ಕಾರಕ್ಕೂ ತಲೆನೋವಾಗಿದೆಯಂತೆ.

ದೊಡ್ಡ ಮಾರುಕಟ್ಟೆಯ ದಿನದಲ್ಲಿ ವೈದ್ಯರು ತಮ್ಮ ಕ್ಲಿನಿಕ್‍ಗಳನ್ನು ತೆರೆದಿಟ್ಟುಕೊಂಡಿರುತ್ತಾರೆ. ಬ್ಯೂಟಿ ಪಾರ್ಲರ್ಗಳು ತುಂಬಿರುತ್ತವೆ. ಫೋಟೊ ಸ್ಟುಡಿಯೋಗಳು ಕ್ಯಾಮೆರ ಹಿಡಿದು ಕಾಯುತ್ತಿರುತ್ತವೆ. ಸಣ್ಣಪುಟ್ಟ ರಿಪೇರಿ ಅಂಗಡಿಗಳಿಗೂ ಅಂದೇ ವ್ಯಾಪಾರ. ರಿಯಲ್ ಎಸ್ಟೇಟ್‍ಗಳೂ ಅಂದು ಕುದುರುತ್ತವೆ.

ವ್ಯಾಪಾರಿಗಳು ಶಂಕಾಕಾರದ ಬಿದಿರಿನ ದೊಡ್ಡದೊಡ್ಡ ಗುಡಾಣಗಳಲ್ಲಿ ತಮ್ಮ ಸಾಮಾನುಗಳನ್ನು ತರುತ್ತಾರೆ. ಹೆಂಗಸರು ಚೌಕುಳಿ ಪ್ರಿಂಟ್ ಇರುವ ಮೇಲ್ಬಟ್ಟೆಯನ್ನು ಹಾಕಿಕೊಂಡಿರುತ್ತಾರೆ. ಸ್ಕಾಟ್‍ಲ್ಯಾಂಡ್‍ನ ನೇಯ್ಗೆಯನ್ನು ಹೋಲುವ ಈ ಮೇಲ್ಬಟ್ಟೆಯನ್ನು  ಖಸಿ ಬುಡಕಟ್ಟಿನವರಲ್ಲಿ  ಜಿಂಪಾಂಗ್  ಎನ್ನಲಾಗುತ್ತದೆ. ಶಾಲಿನಂತಹ ಎರಡು ಬಟ್ಟೆಗಳನ್ನು ಮುಖಾಮುಖಿಯಾಗಿ ಸುತ್ತಿ ಎರಡೂ ಭುಜಗಳ ಮೇಲೆ ಗಂಟು ಹಾಕಿಕೊಳ್ಳುತ್ತಾರೆ. ಒಂದೇ ಬಟ್ಟೆಯನ್ನು ಸುತ್ತಿ ಗಂಟು ಹಾಕಿಕೊಂಡಿದ್ದರೆ ಅವರು ಜಂತಿಯಾ ಬುಡಕಟ್ಟಿನ ಹೆಂಗಸರು. ಅದನ್ನು ಕಿರ್ಶಾಹ್ ಎನ್ನಲಾಗುತ್ತದೆ.

ಮಾರುಕಟ್ಟೆಯ ಮಾಂಸದ ವಿಭಾಗವನ್ನು ಗಂಡಸರು ನೋಡಿಕೊಂಡರೆ ಉಳಿದ ವ್ಯಾಪಾರಗಳನ್ನು ಪೂರ್ತೀ ಹೆಂಗಸರು ಮಾಡುತ್ತಾರೆ. ಸೋಹ್ರಾ ಕಾಡುಗಳು ಒಂದೊಮ್ಮೆ ಜಿಂಕೆಗಳಿಗೆ ಪ್ರಸಿದ್ಧಿ ಪಡೆದಿತ್ತಂತೆ. ಆದರೆ ಅವುಗಳ ಮಾಂಸ ಈಗ ನಿಷೇಧವಾಗಿರುವುದರಿಂದ ಸಿಗುವುದಿಲ್ಲವಂತೆ. ಮಳೆಗಾಲದಲ್ಲೂ ತೆರೆಯುವ ಈ ಮಾರುಕಟ್ಟೆಗಳಲ್ಲಿ  ಎಲ್ಲರೂ   'ಕುನುಪ್' ಎನ್ನುವ  ರಂಗುರಂಗಿನ ಛತ್ರಿಗಳನ್ನು ಬಳಸುತ್ತಾರೆ. ದೊಡ್ಡ ಮಾರುಕಟ್ಟೆಯ ಪಕ್ಕದ ಗೋಡೆಯಲ್ಲಿ ಸರ್ಕಾರವು  ಸೊಹ್ರಾ ಷಾಪಿಂಗ್ ಸೆಂಟರ್ ನಡೆಸುತ್ತಿದೆ. ಅದರ ಪಕ್ಕದಲ್ಲಿಯೇ ದಿ ಹೋಟೆಲ್ ಕ್ರೆಸೆಂಟ್ಬದಲಾದ ಕಾಲದ ಕುರುಹಾಗಿ ನಿಂತಿದೆ.

ಸೊಹ್ರಾದಲ್ಲಿ  ಮಾರುಕಟ್ಟೆ ನಡೆಯುವ ದಿನಗಳಲ್ಲಿ  ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ವಿಸ್ತರಣಾ ಸಂಪೂರ್ಣ ಹಾಜರಾತಿಯನ್ನು ಹೊಂದಿರಬೇಕು ಎನ್ನುವ ನಿಯಮ ಮಾಡಲಾಗಿದೆ. ಸಂಜೆಯಾಗುತ್ತಿದ್ದಂತೆ ಮೊದಲು  'ಡಾಂಗ್ಮುಸಾ' ಎಂದು ಕರೆಯಲ್ಪಡುವ ಸೀಮೆಎಣ್ಣೆ ದೀಪಗಳಿಂದ ವ್ಯಾಪಾರ ಮುಂದುವರೆಯುತ್ತಿತ್ತು ಆದರೀಗ ಸೌರಚ್ಶಕ್ತಿ ಚಾಲಿತ ದೀಪಗಳು ಬಂದಿವೆ. ಬೆಳಿಗ್ಗೆ ಹತ್ತರಿಂದ ರಾತ್ರಿ ಕೊನೆಯ ಗ್ರಾಹಕ ಇರುವವರೆಗೂ ಮಾರುಕಟ್ಟೆ ನಿರತವಾಗಿರುತ್ತದೆ. ಬಹುಪಾಲು ಸಾಯಂಕಾಲ ಏಳು ಗಂಟೆಗೆ ವ್ಯಾಪಾರ ಮುಗಿಯುತ್ತದೆ.

ಸಂಚಲನವೇ ಮೂರ್ತಿವೆತ್ತಂತೆ ಇರುವ ಇಲ್ಲಿ ಕೊಳ್ಳಲೇ ಬೇಕಾದ ವಸ್ತು ಎಂದರೆ ಅರಿಶಿನ ಮತ್ತು ಕೆಂಪುಮೆಣಸಿನ ಪುಡಿ. ಮಾರುಕಟ್ಟೆಯೆಲ್ಲಾ ಅವುಗಳದ್ದೇ ಘಮ. ಹಾಂ, ಇನ್ನೊಂದು ಚಂದದ ಅನುಭವ ಎಂದರೆ ನಾನಿದ್ದ ತಂಗುದಾಣದಲ್ಲಿ ಬಹುಶಃ ಸಮಯದ ಭೂರೇಖೆ ಹಾದು ಹೋಗುತ್ತಿತ್ತೇನೋ. ಮಲಗಿದ್ದ ಮಂಚದಲ್ಲೇ ಎಡಕ್ಕೆ ಹೊರಳಿದರೆ ಗಡಿಯಾರ  ತಕ್ಷಣ ಬಾಂಗ್ಲಾದೇಶದ  ಸಮಯವನ್ನು ಎಡಕ್ಕೆ ಹೊರಳಿದರೆ ಭಾರತ ಕಾಲಮಾನವನ್ನು ತೋರಿಸುತ್ತಿತ್ತು. ಪಕ್ಕದಲ್ಲಿದ್ದ ಮತ್ತೊಂದು ಮಂಚದಲ್ಲಿ ಮಲಗಿದ್ದ ಅಕ್ಕನಿಗೆ ಈ ಬಗೆಯ ಸೋಜಿಗ ಇರಲಿಲ್ಲ. ನಾನಂತೂ  ರಾತ್ರಿಯೆಲ್ಲಾ ಮಗ್ಗುಲು ಬದಲಿಸುತ್ತಾ, ಟೈಮ್ ನೋಡುತ್ತಾ ಚಿರಾಪುಂಜಿಯನ್ನು ಚಪ್ಪರಿಸಿದೆ.

*************************


Comments

Popular posts from this blog

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್