ಆಲ್ಬರ್ಟ್ ಐನ್ಸ್ಟೀನ್ Albert Einstein

 

ಪುಸ್ತಕದ ಶೀರ್ಷಿಕೆ: ಆಲ್ಬರ್ಟ್ ಐನ್ಸ್ಟೈನ್ 

ಲೇಖಕರು: ಜಿಟಿ ನಾರಾಯಣ ರಾವ್  


ಒಟ್ಟು 74 ಅಧ್ಯಾಯಗಳಲ್ಲಿ ಈ ಪುಸ್ತಕದಲ್ಲಿ ಐನ್ಸ್ಟೀನ್ ಅವರ ಸಂಪೂರ್ಣ ಜೀವನ ಚರಿತ್ರೆ ಯನ್ನು ಲೇಖಕರು ವಿಷದವಾಗಿ ಕಟ್ಟಿಕೊಟ್ಟಿದ್ದಾರೆ.


ಆಲ್ಬರ್ಟ್ ಐನ್ಸ್ಟೀನ್ ಒಬ್ಬ ವಿಜ್ಞಾನಿ ಮಾತ್ರವಲ್ಲ ಸಾಹಿತಿಯು ಹೌದು ಎನ್ನುವ ನಂಬಿಕೆ ಗಾಢವಾಗುತ್ತಾ ಹೋಗುತ್ತದೆ ಪುಸ್ತಕ ಓದುತ್ತಿರುವಾಗ, ನಡುನಡುವೆ ಐನ್ಸ್ಟೀನರು ತಮ್ಮ ಮನಸ್ಸಿನ ಭಾವನೆಯನ್ನು ನಾಲ್ಕಾರು ಪ್ರಾಸಬದ್ಧ ಸಾಲುಗಳಲ್ಲಿ ಹೊರ ಹಾಕುವಾಗ ಮತ್ತು ನಡು ನಡುವೆ ಉಮರ್ ಖಯಾಮನ ಪದ್ಯವನ್ನೋ 

ಅಥವಾ ಮತ್ತಾರೋ ಕವಿಯ ಸಾಲುಗಳನ್ನು ಉದ್ದರಿಸುವಾಗ ಮೃದು ಮನಸ್ಸಿನ ಐನ್ಸ್ಟೈನ ಸಾಕಾರ ರೂಪ ಸಾಕಾರಗೊಳ್ಳುತ್ತದೆ.

 

" ವ್ಯಕ್ತಿಗಾಗಿ ರಾಷ್ಟ್ರ ನಿರ್ಮಿತವಾದದ್ದೇ ವಿನಹ ರಾಷ್ಟ್ರ ಕ್ಕಾಗಿ ವ್ಯಕ್ತಿ ಅಲ್ಲ. ಅಂದರೆ ರಾಷ್ಟ್ರ ನಮ್ಮ ಸೇವಕ ಆಗಿರತಕ್ಕದ್ದು ನಾವು ಅದರ ಗುಲಾಮರಾಗಿರುವುದಲ್ಲ" ಎನ್ನುವ ಐನ್ಸ್ಟೈನರ ಸಾಲುಗಳನ್ನು ಓದುವಾಗ ಅಂದೆಂದೋ ಅವರು ಹೇಳಿದ್ದು ಇಂದಿಗೂ ಎಷ್ಟು ಪ್ರಸ್ತುತ ಎನಿಸುತ್ತದೆ ಮತ್ತು ಆ ಸಾಲುಗಳ ಒಳಾರ್ಥದ ಮೇಲೆ ನಮ್ಮ ದೇಶವನ್ನು ಕಟ್ಟಿಕೊಳ್ಳುವ ಹುರುಪು ತುಂಬುತ್ತದೆ .


ಸಾಪೇಕ್ಷ ಸಿದ್ದಾಂತದ ಬಗ್ಗೆ ಪ್ರಯೋಗಗಳನ್ನು ನಡೆಸುತ್ತಿರುವಾಗ ಐನ್ಸ್ಟೈನ್ ಹೇಳುತ್ತಾರೆ " ನನ್ನ ಸಾಪೇಕ್ಷತಾ ಸಿದ್ಧಾಂತ ನಿಜವಾದದೆಂದು ಸಾಧಿಸಲ್ಪಟ್ಟರೆ ಜರ್ಮನಿ ನನ್ನನ್ನು ಜರ್ಮನ್ ವ್ಯಕ್ತಿ ಎಂದು ಸಾರುತ್ತದೆ. 

ಪ್ರಾನ್ಸ್ ನನ್ನನ್ನು ಪ್ರಪಂಚ ಮಾನವನೆಂದು ಘೋಷಿಸುತ್ತದೆ. ನನ್ನ ಸಿದ್ಧಾಂತ ಸುಳ್ಳಾದರೆ ಪ್ರಾನ್ಸ್ ನನ್ನನ್ನು ಜರ್ಮನ್ ವ್ಯಕ್ತಿ ಎಂದು ಸಾರುತ್ತದೆ ಮತ್ತು ಜರ್ಮನಿ ನನ್ನನ್ನು ಯಹೂದ್ಯನೆಂದು ಘೋಷಿಸುತ್ತದೆ" 

ಈ ಸಾಲುಗಳನ್ನು ಓದುವಾಗ ಸಾಮಾಜಿಕ ಜಾಲತಾಣದ ಗುಲಾಮರಾಗಿರುವ ನಾವುಗಳು ವ್ಯಕ್ತಿಯೊಬ್ಬನನ್ನೋ , ಸಿದ್ಧಾಂತದ ಬಗ್ಗೆಯೂ, ವ್ಯವಸ್ಥೆಯೊಂದರ ಕಡೆಗೋ ಪೂರ್ವಗ್ರಹರಾಗುವುದನ್ನು ಅಂದೇ ಮನಗಂಡಿದ್ದ ನುರಿತ ಬುದ್ಧಿ ಐನ್ಸ್ಟೈನ್ ಎನ್ನುವುದು ಖಚಿತವಾಗುತ್ತದೆ. 


ಪ್ರತಿ ಯಶಸ್ವಿ ಪುರುಷನ ಹಿಂದೆ ಓರ್ವ ಮಹಿಳೆಯ ಬೆಂಬಲ ಇದ್ದೇ ಇರುತ್ತದೆ ಎನ್ನುವ ಮಾತನ್ನು ಖಚಿತಪಡಿಸುತ್ತದೆ ಐನ್ಸ್ಟೈನ್ ಮತ್ತು ಅವರ ಪತ್ನಿಯ ನಡುವಿನ ಸಂಬಂಧ. ಪತ್ರಿಕಾಗೋಷ್ಠಿಯಲ್ಲಿ ಕೇಳುತ್ತಾರೆ " ಶ್ರೀಮತಿ ಐನ್ಸ್ಟೈನರೇ, ನಿಮಗೆ ಸಾಪೇಕ್ಷತಾ ಸಿದ್ಧಾಂತ ಚೆನ್ನಾಗಿ ಅರ್ಥವಾಗಿರಬೇಕಲ್ಲ" ಎಂದು ಅದಕ್ಕೆ ಆಕೆ ಹೇಳುತ್ತಾರೆ "ನನಗೆ ಖಂಡಿತ ಏನು ತಿಳಿದಿಲ್ಲ ಅವರಿದನ್ನು ಅನೇಕ ಸಲ ವಿವರಿಸಿದ್ದಾರೆ ಆದರೆ ನನ್ನ ಸುಖ ಸಂತೋಷಗಳಿಗೆ ಈ ತಿಳುವಳಿಕೆಯ ಅಗತ್ಯವಿಲ್ಲ" ಎಂದು. ಪತ್ರಕರ್ತರು ಕೇಳುತ್ತಾರೆ "ನೀವು ಗಣಿತ ಪಾರಂಗತರೆ" ಎಂದು ಅದಕ್ಕೆ ಆಕೆ ಹೇಳುತ್ತಾರೆ "ನಮ್ಮ ಮನೆ ವಾರ್ತೆ ಲೆಕ್ಕಾಚಾರಗಳನ್ನು ಸರಿದೂಗಿಸುವಷ್ಟರ ಮಟ್ಟಿಗೆ ನನಗೆ ಗಣಿತ ಪಾರಂಗತೆ ಇದೆ" ಎಂದು. ಅದಕ್ಕೆ ಐನ್ಸ್ಟೀನ್ ದನಿಗೂಡಿಸುತ್ತಾರೆ "ಅಲ್ಲಿ ಆಕೆಯದ್ದೇ ಮೇಲುಗೈ 

ನಾನು ಸೋಲುವುದೇ ಸೈ "


1931ರಲ್ಲಿ ಐನ್ಸ್ಟೈನ್ ಅವರು ಗಾಂಧೀಜಿಗೆ ಪತ್ರ ಬರೆದಿದ್ದರಂತೆ "ಹಿಂಸೆಯನ್ನು ಪ್ರಯೋಗಿಸದೆಯು ನಾವು ಗುರಿ ಸಾಧಿಸಬಲ್ಲೆವು ಎಂಬುದನ್ನು ನಿಮ್ಮ ಸಮಸ್ತ ಪ್ರಯೋಗದಿಂದ ನೀವು ತೋರಿಸಿಕೊಟ್ಟಿರುವಿರಿ. ಹಿಂಸಾಧಾರಿತ ಘರ್ಷಣೆಯನ್ನು ಹತ್ತಿಕ್ಕಲು ಮತ್ತು ಅಂತರಾಷ್ಟ್ರೀಯ ಸಹಾಯ ಮತ್ತು ಸಹಕಾರದೊಡನೆ ಪ್ರಪಂಚ ಶಾಂತಿಯನ್ನು ಖಾತರಿಗೊಳಿಸಲು ನಿಮ್ಮ ನಿದರ್ಶನ ಸ್ಪೂರ್ತಿದಾಯಕವಾಗಿದೆ ಮತ್ತು ಸಹಾಯಕವಾಗಿದೆ" ಎಂದು.


ಇಂತಹ ಅನೇಕ ಘಟನೆಗಳ ನೋವು ನಲಿವುಗಳ, ಪ್ರಯೋಗಗಳ, ದ್ವಂದ್ವಗಳ ಸರಳ ಮತ್ತು ಸಂಕೀರ್ಣ ಸಮುಚ್ಚಯಗಳು ಐನ್ಸ್ಟೈನರ ಜೀವನವನ್ನು ರೂಪಿಸಿದ ಬಗ್ಗೆ ಈ ಪುಸ್ತಕ ಸ್ವಾರಸ್ಯಕರವಾಗಿ ಓದುಗರಿಗೆ ಒದಗಿಸಿಕೊಡುತ್ತದೆ.

 

ಮತ್ತೊಂದು ಆಕರ್ಷಣೀಯ ಅಂಶವೆಂದರೆ ಎಲ್ಲಾ ಅಧ್ಯಾಯಗಳಿಗೂ ನೀಡಿರುವ ಶೀರ್ಷಿಕೆಗಳು. ಉದಾಹರಣೆಗೆ 

"ಅಮೆರಿಕನ್ನರ ಹೃನ್ಮನ ಗೆದ್ದ ಪರಿವ್ರಾಜಕ " "ದೊಗಲೆ ಸುರಾಲಿನ ಪಿಟೀಲು ವಾದಕ ಯಾರಿವನು" "ಬರ್ಲಿನ್ ನಲ್ಲಿ ರಂಗು ಬದಲಾವಣೆ" "ಅಪೂರ್ವ ತೇಜದ ಮಾಂತ್ರಿಕ" ಹೀಗೆ ಇನ್ನೂ ಮುಂತಾದ ಶೀರ್ಷಿಕೆಗಳು ಸೆಳೆಯುತ್ತವೆ. 


ಹಾಗೆಯೇ " ಪ್ರಿಯ ಭವಿಷ್ಯವೇ ನೀನು ನಮಗಿಂತ ಅಥವಾ ನಾವಿದ್ದುದ್ದಕ್ಕಿಂತ ಅಧಿಕ ನ್ಯಾಯವಂತ, ಅಧಿಕ ಶಾಂತಶೀಲ ಮತ್ತು ಸಾಧಾರಣವಾಗಿ ಅಧಿಕ ತರ್ಕಶೀಲ ಆಗದಿದ್ದರೆ ಬರೆದಿಟ್ಟುಕೋ, ಖಾತ್ರಿ ನೀನು ಮಸಣ ಕಾಳಿಗೆ ಕೂಳಾಗಿ ಹಾಳಾಗಿ ಹೋಗುವೆ" ಎನ್ನುವ ಐನ್ಸ್ಟೀನರ ಸಾಲುಗಳು ಅಗೋಚರ ಅರ್ಥಗಳಿಂದ ತುಂಬಿದ್ದು ಬಹಳವಾಗಿ ಕಾಡುತ್ತವೆ.

Comments

Popular posts from this blog

Autistic ಜನರ ಹಕ್ಕುಗಳು Law Point

ಮಕ್ಕಳು ಮತ್ತು summer vacation

ಅವಳ ಇವಳ ಸುತ್ತ - Book read