ಅಲಹಾಬಾದ್ ಹೈಕೋರ್ಟ್ on Living Relationship

 


ಮದುವೆಯಾದ ಪುರುಷ livin relationship ನಲ್ಲಿ ಇದ್ದರೆ ಅಪರಾಧ ಅಲ್ಲ ಅಂತ ಅಲಹಾಬಾದ್ ಕೋರ್ಟ್ ಹೇಳಿದೆ ಎನ್ನುವ ಸುದ್ದಿ ಓದಿ ಲಿವ್ ಇನ್ ಸಂಬಂಧಗಳ ಬಗ್ಗೆ ರಮ್ಯ ಕಲ್ಪನೆ ಮಾಡಿಕೊಂಡರೆ ನಿರಾಸೆ ಕಟ್ಟಿಟ್ಟ ಬುತ್ತಿ. ಅಲ್ಲಿನ ಪ್ರಕರಣದ Facts ಬೇರೆ ಮತ್ತು ಪಾರ್ಟಿಗಳು ಕೇಳಿಕೊಂಡಿದ್ದ ಪರಿಹಾರಕ್ಕೆ ಅನುಗುಣವಾಗಿ ಆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಲ್ಲಿನ ಕೋರ್ಟ್ ತೀರ್ಪು ಕೊಟ್ಟಿದೆ ಅಷ್ಟೇ.

Livin relationship ಎನ್ನುವುದರ ಮೂಲಭೂತ ಗುಣಲಕ್ಷಣ ಇಬ್ಬರಿಗೂ ಅಸ್ತಿತ್ವದಲ್ಲಿ ಇರುವ ಮದುವೆ ಇರಬಾರದು ಎನ್ನುವುದೇ ಆಗಿದೆ.

ಒಬ್ಬಾಕೆ ಸುಮಾರು 10 ವರ್ಷಗಳಿಂದ ಸಂಬಂಧದಲ್ಲಿದ್ದಳು. ಸಂಬಂಧಕ್ಕೆ ತನ್ನ ನಂಬಿಕೆ, ಸಮಯ, ಯೌವನ, ಭಾವನೆ, ದೇಹವನ್ನೂ ವ್ಯಯಿಸಿದ್ದಳು. ಏಕಾಏಕಿ ಒಂದು ದಿನ ಆತ ಖೇಲ್ ಖತಂ ಟಾಟಾ ಬೈ ಬೈ ಎಂದು ಹೊರನಡೆದು ಬಿಟ್ಟ. ಚೂರಾದ ಅವಳು ಪೊಲೀಸರ ಬಳಿ ಹೋಗಲು ನಿರ್ಧರಿಸಿದಳು. ಅವಳು ಭಾವಿಸಿದಂತೆ ಅವನು ಮಾಡಿದ ಗಂಭೀರ ದ್ರೋಹಕ್ಕೆ ಕಾನೂನು ಅವನಿಗೆ ಶಿಕ್ಷೆ ನೀಡಬೇಕೆಂದು ಅವಳು ಬಯಸಿದಳು. ಆದರೆ ಕಾನೂನು ಎಂದಿಗೂ ಭಾವನಾತ್ಮಕ ಗಾಯವನ್ನು ಅದಕ್ಕೆ ಪರ್ಯಾಯವಾಗಿ ಗುರುತಿಸುವಷ್ಟು ಸಮರ್ಥವಾಗಿಲ್ಲ ಮತ್ತು ಅದು ಸಾಧ್ಯವೂ ಇಲ್ಲ.

ಲಿವ್-ಇನ್ ಸಂಬಂಧವು ಸಬಲೀಕರಣದ ಸಂಬಂಧವಲ್ಲ, ಅದೊಂದು ಪರಸ್ಪರ ನಿರೀಕ್ಷೆಗಳ ಬಂಧವಾಗಿದೆ. ಸಾರ್ವಜನಿಕ ಪ್ರವಚನದಲ್ಲಿ, ಲಿವ್-ಇನ್ ಸಂಬಂಧಗಳನ್ನು ಸ್ವಾತಂತ್ರ್ಯ, ಆಯ್ಕೆ ಮತ್ತು ಆಧುನಿಕತೆ ಎಂದು ಬಿಂಬಿಸಲಾಗುತ್ತದೆ. ಆದರೆ ಕೋರ್ಟ್‌ರೂಮ್‌ಗಳಲ್ಲಿ ವಾಸ್ತವದ ಚಿತ್ರಣ ಬೇರೆಯದೇ ಇರುತ್ತದೆ. ಅಂತಹ ಸಂಬಂಧಗಳು ಕುಸಿದಾಗ, ಸಾಮಾನ್ಯವಾಗಿ ಹೆಣ್ಣು ಭಾವನಾತ್ಮಕವಾಗಿ ಮುರಿದುಹೋಗುತ್ತಾಳೆ ಮತ್ತು ಕಾನೂನುಬದ್ಧವಾಗಿ ದುರ್ಬಲಳಾಗುತ್ತಾಳೆ.

ಲಿವ್ ಇನ್ ಸಂಬಂಧಗಳ ಬಗ್ಗೆ ತಿಳಿದುಕೊಳ್ಳಲೇ ಬೇಕಾದ್ದು ಎಂದರೆ;

1. ಇಬ್ಬರು ವಯಸ್ಕರು ಸಂಬಂಧದಲ್ಲಿರಲು ಮತ್ತು ದೈಹಿಕ ಸಂಬಂಧದಲ್ಲಿ ತೊಡಗಿಸಿಕೊಳ್ಳಲು ಸ್ವಯಂಪ್ರೇರಣೆಯಿಂದ ಆಯ್ಕೆ ಮಾಡಿಕೊಂಡರೆ, ಪ್ರತೀ ಬ್ರೇಕಪ್ ಕ್ರಿಮಿನಲ್ ಅಪರಾಧವಾಗುವುದಿಲ್ಲ.

2. ಬ್ರೇಕಪ್ by Default ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯವಲ್ಲ. ವ್ಯಕ್ತಿ ಸಂಬಂಧವನ್ನು ಬಿಟ್ಟುಹೋದ ಕಾರಣದಿಂದಾಗಿ ಒಮ್ಮತದ ದೈಹಿಕ ಸಂಬಂಧವು ಅತ್ಯಾಚಾರವಾಗುವುದಿಲ್ಲ.

3. ಆರಂಭದಿಂದಲೇ ವಂಚನೆ, ಕುಶಲತೆ ಅಥವಾ ಒಪ್ಪಿಗೆಯನ್ನು ಪಡೆಯಲು ಮಾತ್ರ ಮದುವೆಯ ಸುಳ್ಳು ಭರವಸೆ ಇದ್ದರೆ, ಕಾನೂನು ಬೆಂಬಲಕ್ಕೆ ನಿಲ್ಲುತ್ತದೆ. ಆದರೆ ಅಂತಹ ಸಂಬಂಧ ಸ್ಪಷ್ಟವಾಗಿ ಸ್ಥಾಪಿತವಾಗಿರಬೇಕು.

4. ಲಿವ್-ಇನ್ ಸಂಬಂಧಗಳು ಸಹಜವಾಗಿ ಮದುವೆಯ ಕಾನೂನು ರಕ್ಷಣೆಯನ್ನು ಒದಗಿಸುವುದಿಲ್ಲ. ಮದುವೆಯು ಹೆಣ್ಣಿಗೆ ಸಾಮಾಜಿಕ ಮತ್ತು ಕಾನೂನು ಸ್ಥಾನಮಾನವನ್ನು ನೀಡುತ್ತದೆ. ಇದು ಜಾರಿಗೊಳಿಸಬಹುದಾದ ಹಕ್ಕುಗಳು ಮತ್ತು ಕಟ್ಟುಪಾಡುಗಳನ್ನು ಸೃಷ್ಟಿಸುತ್ತದೆ. ಹೆಂಡತಿಯು shared house ನ ರಕ್ಷಣೆ ಪಡೆಯಬಹುದು. ಜೀವನಾಂಶ ಪಡೆಯಬಹುದು. ಗಂಡನಿಂದ ಸಾಮಾಜಿಕ ಮಾನ್ಯತೆ ಮತ್ತು ಹೊಣೆಗಾರಿಕೆಯ ಚೌಕಟ್ಟನ್ನು ಕೋರಬಹುದು.

5. ಲಿವ್-ಇನ್ ಸಂಬಂಧಗಳು ಕೆಲವು ಸಂದರ್ಭಗಳಲ್ಲಿ ಸೀಮಿತ ರಕ್ಷಣೆಯನ್ನು ಮಾತ್ರ ಪಡೆಯಬಹುದು, ಆದರೆ ಅವು ಮದುವೆಗೆ ಸಮಾನವಾಗಿಲ್ಲ.

ಹುಡುಗಿಯರಿಗೆ, ನಿನ್ನ ದೇಹ, ನಿನ್ನ ಆಯ್ಕೆ ಎಂದು ಹೇಳಿದಾಗ, ಅವರ ಆಯ್ಕೆಯ ಗುಣಮಟ್ಟವು ಅವರ ನಿಜಾರ್ಥದ empowerment ನ ಸಂಕೇತವಾಗಿರುತ್ತದೆ ಎನ್ನುವುದನ್ನೂ ಕಲಿಸಿಕೊಡಬೇಕು.

ಕೊನೆಯಲ್ಲಿ ಕಾನೂನು ಎಂದಿಗೂ ಘೋಷಣೆಗಳನ್ನು ರಕ್ಷಿಸುವುದಿಲ್ಲ. ಅದು ಹಕ್ಕುಗಳನ್ನು ಮಾತ್ರ ರಕ್ಷಿಸುತ್ತದೆ ಮತ್ತು ಹಕ್ಕುಗಳು ಕೇವಲ ಭಾವನಾತ್ಮಕ ಹೂಡಿಕೆಯಿಂದ ಉದ್ಭವಿಸುವುದಿಲ್ಲ.

ಮಹಿಳೆಯು ಲಿವ್ ಇನ್ ಸಂಬಂಧವನ್ನು ಸ್ವಾತಂತ್ರ್ಯ ಎಂದೇ ನಂಬಿ ಅಂತಹ ಸಂಬಂಧದಲ್ಲಿ ಇದ್ದರೆ ಸಂಬಂಧವು ಕೊನೆಗೊಂಡಾಗ, ಅವಳಿಗೆ ಮದುವೆಗೆ ಖಾತರಿಯಾದ ಹಕ್ಕಿಲ್ಲ, ನಿರ್ವಹಣೆಯ ಖಾತರಿಯಿಲ್ಲ, ಸ್ಪಷ್ಟ ಸಾಮಾಜಿಕ ರಕ್ಷಣೆಯಿಲ್ಲ, ನಿರ್ದಿಷ್ಟ ನಿವಾಸ ಹಕ್ಕುಗಳಿಲ್ಲ ಮತ್ತು ಭಾವನಾತ್ಮಕ ದ್ರೋಹಕ್ಕೆ ಸುಲಭ ಕಾನೂನು ಪರಿಹಾರವಿಲ್ಲ ಎನ್ನುವ ಕಠಿಣ ಸತ್ಯ ಅರಿವಿಗೆ ಬರುತ್ತದೆ. ಅಂತಹ ಸಂಬಂಧವನ್ನು ಪ್ರವೇಶಿಸುವ ಮೊದಲು, ಪ್ರತಿಯೊಬ್ಬ ಹುಡುಗಿ ತನ್ನನ್ನು ತಾನೇ ಕೇಳಿಕೊಳ್ಳಬೇಕು ತನಗಿರುವ ಕಾನೂನು ರಕ್ಷಣೆ ಏನು ? ಭರವಸೆ ಕೊನೆಗೊಂಡಾಗ ತನಗೆ ಪರಿಹಾರ ಏನು? ಆಳವಾದ ಭಾವನಾತ್ಮಕ ಮತ್ತು ದೈಹಿಕ ಹೂಡಿಕೆಗೆ ಪ್ರತಿಯಾಗಿ ತಾನು ನಿಖರವಾಗಿ ಏನನ್ನು ಪಡೆಯುತ್ತಿದ್ದೇನೆ?

ಮನುಷ್ಯ ಸಂಬಂಧ ಹೊಂದಾಣಿಕೆಯಷ್ಟು ಸರಳವಲ್ಲ ಅದು ಸ್ವಾತಂತ್ರ್ಯ ಎನ್ನುವಷ್ಟು ಸಂಕೀರ್ಣ.

****

March 2026

Comments

Popular posts from this blog

Livin Relationship ಬಗ್ಗೆ ಸಮಗ್ರ ಕಾನೂನು ಮಾಹಿತಿ

ಮಕ್ಕಳಿಗೆ Summer vacation