Livin Relationship ಬಗ್ಗೆ ಸಮಗ್ರ ಕಾನೂನು ಮಾಹಿತಿ
ಒಮ್ಮೆ ಪದವಿ ಕಾಲೇಜಿನ ವಿದ್ಯಾರ್ಥಿಗಳ ಜೊತೆಗಿನ ಸಂವಾದದ ವಿಷಯ ’ಮದುವೆಗೆ ಮುನ್ನ. . . ’ ಎಂದಿತ್ತು. ಹದಿಹರೆಯಕ್ಕೂ ಮೊದಲೇ ಪ್ರೀತಿ ಪ್ರೇಮ ಎನ್ನುವ ಭಾವ ಸ್ಫುರಣೆಯಿಂದ ಹಿಡಿದು ಐವತ್ತು ವರ್ಷಗಳ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವವರೆಗೂ ಯುವಕ ಯುವತಿಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದರು. ಒಬ್ಬಳು ಯುವತಿ ’ನೋಡಿ ಮೇಡಮ್ ಯಾವುದೇ ಮದುವೆ ಮುರಿದು ಬಿದ್ದರೂ ಸಾಮಾನ್ಯವಾಗಿ ಹುಡುಗಿಯದ್ದೇ ತಪ್ಪು ಎನ್ನುವ ಮಾತೇ ಕೇಳಿ ಬರುತ್ತದೆ. ಆದರೆ ವಾಸ್ತವದಲ್ಲಿ ಅದು ಲವ್ ಮ್ಯಾರೇಜ್ ಇರಲಿ ಅಥವಾ ಅರೇಂಜ್ಡ್ ಮದುವೆಯೇ ಆಗಿರಲಿ ಆ ಹುಡುಗ ಹುಡುಗಿಯ ಮಧ್ಯೆ ಏನು ನಡೆದಿರುತ್ತದೆ ಎನ್ನುವುದು ಅವರಿಬ್ಬರಿಗೆ ಮಾತ್ರ ಗೊತ್ತಿರುತ್ತದೆ. ಸ್ವಭಾವದಲ್ಲಿ ಏನಾದರೂ ಹೆಚ್ಚು ಕಡಿಮೆ ಇದ್ದರೆ ಈಗೆಲ್ಲಾ ಆಪ್ತಸಮಾಲೋಚನೆ ಪಡೆಯುವ ಅನುಕೂಲ ಇದೆ ಹಾಗಾಗಿ ಸರಿಪಡಿಸಿಕೊಳ್ಳಬಹುದು. ಆದರೆ ದೈಹಿಕ ಹೊಂದಾಣಿಕೆ (Compatibility) ಇಲ್ಲದಿದ್ದರೆ ಯಾರಿಗೂ ಹೇಳಿಕೊಳ್ಳಲೂ ಆಗುವುದಿಲ್ಲ ಹಾಗಂತ ಜೀವನ ಪೂರ್ತೀ ಅನುಭವಿಸಲೂ ಆಗಲ್ಲ. ಅದಕ್ಕೆ ಮದುವೆಗೆ ಮುನ್ನ ಲಿವಿನ್ ರಿಲೇಷನ್‍ಶಿಪ್‍ನಲ್ಲಿ ಇದ್ದು ನಂತರ ಮದುವೆ ಆಗುವುದೇ ಒಳ್ಳೆಯದು’ ಎಂದಳು.
ಆಕೆಯ ಮಾತುಗಳನ್ನು ಕೇಳಿದಾರಭ್ಯ ಈ ಸಂಬಂಧವನ್ನು ಹೊಸದೊಂದು ಆಯಾಮದಿಂದ ಅರ್ಥೈಸಿಕೊಳ್ಳುವ ಅವಕಾಶ ಸಿಕ್ಕಿತು. ಮದುವೆ ಎನ್ನುವುದು ಜೀವನದ ಅಂತಿಮ ಗುರಿ ಎನ್ನುವ ಮನೋಭಾವದಿಂದ ಸಮಾಜವು ಅದೊಂದು ಆಯ್ಕೆ ಎನ್ನುವಲ್ಲಿಗೆ ಹೊರಳಿ, ಒಂಟಿಯಾಗಿ ಇರುವುದು ಕಷ್ಟವೇನಲ್ಲ ಎನ್ನುವಲ್ಲಿಂದ ಲಿವಿನ್ ರಿಲೇಷನ್‍ಶಿಪ್ ಎನ್ನುವ ಜೊತೆಗಾರಿಕೆಯವರೆಗೂ ನಡೆದು ಬಂದಿದೆ. ಒಂದು ಕಾಲಘಟ್ಟದಲ್ಲಿ ಮಗುವನ್ನು ಹೆರಲು ಮದುವೆ ಎನ್ನುವುದು ಕಡ್ಡಾಯ ರಹದಾರಿಯಂತಿತ್ತು. ಆದರೀಗ ಗಂಡು ಹೆಣ್ಣು ಇಬ್ಬರ ದೇಹದಲ್ಲೂ ಕಿಂಚಿತ್ತ್ ಮಾರ್ಪಾಡು ಮಾಡಿಕೊಳ್ಳದೆ ತಮ್ಮದೇ ಮಗು ಪಡೆಯುವ ಎಲ್ಲಾ ಸವಲತ್ತುಗಳು ಕೈಯಳತೆಯಲ್ಲಿ ಲಭ್ಯವಿದೆ. ಹಾಗಾಗಿ ಒಂದು ಹೆಣ್ಣಿಗೊಂದು ಗಂಡು ಹೇಗೋ ಸೇರಿ ಹೊಂದಿಕೊಂಡು ಮದುವೆಯನ್ನು ಸರಿದೂಗಿಸಲೇ ಬೇಕು ಎನ್ನುವ ಅನಿವಾರ್ಯತೆ ಮರೆಯಾಗಿದೆ. ಮದುವೆಯಾಗದೆಯೇ ಮಗು ಪಡೆಯುವುದು ಸಾಧ್ಯವಾದರೆ ಮದುವೆಯಾಗದೆಯೇ ಒಪ್ಪಿತವಾದ ಎರಡು ಜೀವಗಳು ಜೊತೆಯಲ್ಲಿ ಇರಲು ಏನು ತಾನೆ ಅಡ್ಡಿ ಎನ್ನುವ ಪ್ರಶ್ನೆ ಪ್ರತಿ ಮನೆಯಲ್ಲೂ ಮೌನದಲ್ಲಿಯಾದರೂ ಮಾರ್ದನಿಸುತ್ತಿದೆ.
ಜನರ ಈ ಕೂಗಿಗೆ ಸ್ಪಂದಿಸುವುದಕ್ಕೆ ಕಾನೂನುಗಳೂ ಮುಂದೆ ಬಂದಿವೆ. ಸರ್ವೋಚ್ಚ ನ್ಯಾಯಾಲಯವು ತನ್ನ ಹಲವಾರು ತೀರ್ಪುಗಳಲ್ಲಿ ಲಿವಿನ್ ರಿಲೇಷನ್‍ಶಿಪ್ ಎನ್ನುವುದು ಮದುವೆಯಲ್ಲಿಯೇ ಕೊನೆಗಾಣಬೇಕು ಎಂದಾಗಲಿ ಮತ್ತು ಹಾಗೆ ಒಟ್ಟಿಗೆ ವಾಸಿಸುವವರು ಗಂಡು ಮತ್ತು ಹೆಣ್ಣು ಮಾತ್ರ ಆಗಿರಬೇಕು ಎಂದಾಗಲಿ ಇಲ್ಲ ಎಂದಿದೆ. ಮದುವೆಯಿಲ್ಲದೆ ಗಂಡು ಹೆಣ್ಣುಗಳು ಪರಸ್ಪರ ಒಪ್ಪಿಗೆಯಿಂದ ಒಟ್ಟಾಗಿ ಜೀವನ ನಡೆಸುವುದಕ್ಕೆ ಶತಮಾನಗಳ ಇತಿಹಾಸವಿದೆ. ಆದರೆ ಒಂದಷ್ಟು ದಶಕಗಳಿಂದ ಅವುಗಳನ್ನು ಸಾರ್ವಜನಿಕವಾಗಿ ತೋರಿಸಿಕೊಳ್ಳಲು ಜನರು ಧೈರ್ಯ ಮಾಡುತ್ತಿದ್ದಾರೆ. Latha Singh Vs. State of UP (2006) ಈ ಪ್ರಕರಣದಲ್ಲಿ ಮದುವೆಯಿಲ್ಲದೆ ಒಟ್ಟಿಗೆ ಬದುಕಲು ತೀರ್ಮಾನಿಸಿದ್ದ ಇಬ್ಬರು ವಯಸ್ಕರಿಗೆ ಅವರುಗಳ ಕುಟುಂಬದಿಂದ ವಿರೋಧ ಎದುರಾದಾಗ ಸರ್ವೋಚ್ಚ ನ್ಯಾಯಾಲಯವು ಇಬ್ಬರು ವಯಸ್ಕ ವ್ಯಕ್ತಿಗಳ ನಡುವೆ ಒಪ್ಪಿಗೆ ಇದ್ದಲ್ಲಿ ಅವರುಗಳು ಒಟ್ಟಿಗೆ ವಾಸಿಸಲು, ದಾಂಪತ್ಯದಂತೆ ಜೀವನ ನಡೆಸಲು ಕಾನೂನಿನ ಅಡ್ಡಿಯಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದೆ. ನಮ್ಮ ಸಂವಿಧಾನದ ಪರಿಚ್ಚೇದ 21ರ ಮಾರ್ಗದರ್ಶನದಂತೆ ತಮ್ಮ ಜೀವನ ಸಂಗಾತಿಯನ್ನು ಆಯ್ದುಕೊಳ್ಳುವುದು ಪ್ರತೀ ವಯಸ್ಕನ ಮೂಲಭೂತ ಹಕ್ಕು ಎನ್ನುವುದನ್ನು Shafin Jahan Vs. Asokan K M ಎನ್ನುವ ಪ್ರಕರಣದಲ್ಲಿನ ತೀರ್ಪು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಸಮಾಜ ನಂಬಿರುವ ನೈತಿಕತೆಯ ವ್ಯಾಖ್ಯಾನ ಏನೇ ಇದ್ದರೂ ವ್ಯಕ್ತಿಗಳಿಗೆ ರಕ್ಷಣೆ ಕೊಡುವುದು ಕಾನೂನಿನ ಆದ್ಯ ಉದ್ದೇಶ ಹಾಗಾಗಿ ಇಂತಹ ಸಂಬಂಧದಲ್ಲಿ ಇರುವ ವ್ಯಕ್ತಿಗಳಿಗೂ ಕಾನೂನಿನ ರಕ್ಷಣೆ ಇದೆ ಎನ್ನುವ ತೀರ್ಪು ನೀಡಿದೆ ಸರ್ವೋಚ್ಚ ನ್ಯಾಯಾಲಯ. [S Khushboo Vs. Kanniammal (2010)].
ಮದುವೆ ಎನ್ನುವುದು ದೊಡ್ಡ ಜವಾಬ್ದಾರಿ, ಸಂಕಷ್ಟ ಅನುಭವಿಸುವಾಗ ಅದರಿಂದ ಹೊರಬರುವ ಪ್ರಕ್ರಿಯೆ ಬಹಳ ಸಂಕೀರ್ಣವಾದದ್ದು ಮತ್ತು ಹಣಕಾಸಿನ ನಷ್ಟ ಕೂಡ ಎಂದುಕೊಂಡು ಲಿವಿನ್ ರಿಲೇಷನ್‍ಶಿಪ್‍ನಲ್ಲಿ ಇರುವುದು ಎಂದರೆ ಸ್ವೇಚ್ಚೆಯಾಗಿ ಯಾವುದೇ ಹೊಣೆಗಾರಿಕೆ ಇಲ್ಲದೆ ಇರಬಹುದು ಎಂದುಕೊಂಡರೆ ಆಭಾಸವಾದೀತು. ಅಂತಹ ಸಂಬಂಧಗಳಿಗೂ ಪರಸ್ಪರ ಉತ್ತರದಾಯಿತ್ವ ಇರಬೇಕು ಎನ್ನುವ ಸಾಂವಿಧಾನಿಕ ಆಶಯವನ್ನು ಎತ್ತಿಹಿಡಿಯಲೆಂದೇ Indra Sarma Vs. V K V Sarma (2013) ಈ ಪ್ರಕರಣದಲ್ಲಿ ಇಂತಹ ಸಂಬಂಧದಲ್ಲಿ ಇರುವಾಗ ಹೆಂಗಸಿನ ಮೇಲೆ ಜೊತೆಗಾರನಿಂದ ದೈಹಿಕ, ಮಾನಸಿಕ, ಭಾವನಾತ್ಮಕ ದೌರ್ಜನ್ಯ ಉಂಟಾದರೆ ಅದನ್ನು ಕೌಟುಂಬಿಕ ದೌರ್ಜನ್ಯ ತಡೆಗಟ್ಟುವಿಕೆ ಕಾನೂನು 2005, ಇದರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದು ಗುರುತಿಸಲಾಗಿದೆ. ಇಬ್ಬರು ಹೆಂಗಸರು ಇಂತಹ ಸಂಬಂಧದಲ್ಲಿ ಕೂಡು ಜೀವನ ನಡೆಸುತ್ತಿದ್ದರೆ ಈ ರಕ್ಷಣೆಯು ಇದೇ ಕಾನೂನಿನ ಅಡಿಯಲ್ಲಿ ಅವರಿಗೂ ಅನ್ವಯವಾಗುತ್ತದೆ. ಹೆಂಗಸು ಗಂಡಸಿನ ಮೇಲೆ ಕೌಟುಂಬಿಕ ದೌರ್ಜನ್ಯ ವ್ಯಾಖ್ಯಾನದ ಅಡಿಯಲ್ಲಿ ಬರುವ ಯಾವುದೇ ಅಪರಾಧ ಎಸಗಿದರೆ ಆತನಿಗೆ ಭಾರತೀಯ ನ್ಯಾಯ ಸಂಹಿತೆ 2023 ಈ ಕಾನೂನಿನ ಅಡಿಯಲ್ಲಿ ರಕ್ಷಣೆ ಪಡೆಯುವ ಅವಕಾಶ ನೀಡಲಾಗಿದೆ.
ಮುಖ್ಯವಾಗಿ ಇಂತಹ ಸಂಬಂಧದಲ್ಲಿ ಇರುವವರು ಕಾನೂನಿನ ಯಾವುದೇ ರಕ್ಷಣೆ ಮತ್ತು ಪರಿಹಾರ ಪಡೆಯಬೇಕು ಎನ್ನುವ ಸಂದರ್ಭ ಒದಗಿಬಂದರೆ ಕಾನೂನು ಲಿವಿನ್ ರಿಲೇಷನ್‍ಶಿಪ್ ಎನ್ನುವುದಕ್ಕೆ ನೀಡಿರುವ ವ್ಯಾಖ್ಯಾನವನ್ನು ಪೂರೈಸಬೇಕಿರುತ್ತದೆ. ಅದರಂತೆ ಒಂದು ಕೂಡು ಸಂಬಂಧವು ಲಿವಿನ್ ರಿಲೇಷನ್‍ಶಿಪ್ ಎನಿಸಿಕೊಳ್ಳಬೇಕಾದರೆ ಆ ಸಂಬಂಧವು ದೀರ್ಘಾವಧಿಯದ್ದಾಗಿರಬೇಕು ಹಾಗೂ ಮಾನಸಿಕವಾಗಿ ಸ್ವಸ್ಥರಿರುವ ಇಬ್ಬರು ವಯಸ್ಕರು ಪರಸ್ಪರ ಯಾವುದೇ ಒತ್ತಡ ಮತ್ತು ಆಮಿಷವಿಲ್ಲದ ಒಪ್ಪಿಗೆಯಿಂದ ಒಟ್ಟಿಗೆ ಬಾಳುತ್ತಿರಬೇಕು. ಈಗಾಗಲೇ ಮದುವೆಯಾಗಿದ್ದು ಆ ಮದುವೆ ಅಸ್ತಿತ್ವದಲ್ಲಿ ಇರುವಾಗ ಮತ್ತೊಬ್ಬರ ಜೊತೆ ಲಿವಿನ್ ರಿಲೇಷನ್‍ಶಿಪ್‍ನಲ್ಲಿ ಇರುವ ಹಾಗಿಲ್ಲ. ಈ ನಿಯಮಗಳಿಗೆ ಒಳಪಟ್ಟು ವ್ಯಕ್ತಿಗಳು ಇಂತಹ ಸಂಬಂಧದಲ್ಲಿ ಇದ್ದರೆ ಕಾನೂನುಗಳು ಕೂಡ ಅವರ ಬೆಂಬಲಕ್ಕೆ ನಿಲ್ಲುತ್ತವೆ.
ಸಾಕಷ್ಟು ಸಮಯದಿಂದ ದೈಹಿಕ ಸಂಪರ್ಕವನ್ನೂ ಇಟ್ಟುಕೊಂಡು ಜೊತೆಗೂಡಿ ಬಾಳುತ್ತಿದ್ದ ಇಬ್ಬರು ವ್ಯಕ್ತಿಗಳಲ್ಲಿ ಗಂಡು ತನಗೆ ಆ ಸಂಗಾತಿ ಬೇಡ ಎನಿಸಿದಾಗ ರಾತ್ರೋರಾತ್ರಿ ಕೈತೊಳೆದುಕೊಂಡು ಬಿಟ್ಟೂ ಹೋಗುವ ಹಾಗಿಲ್ಲ. ಹಾಗೆ ಬೇರಾಗುವುದು ಆತನೊಬ್ಬನ ಇಚ್ಚೆ ಆಗಿದ್ದರೆ ಮತ್ತು ಆ ಸಂಬಂಧದಲ್ಲಿ ಇರುವಾಗ ಆಕೆಯು ಆರ್ಥಿಕವಾಗಿ ಆತನ ಮೇಲೆ ಅವಲಂಬಿತಳಾಗಿದ್ದರೆ ಆತನು ಸಂಬಂಧವನ್ನು ಮುಗಿಸಿ ಹೋಗುವಾಗ ಅವಳ ಪೋಷಣೆಗೆ ಹಣ ಬೆಂಬಲ ಒದಗಿಸಿಕೊಡುವ ಕಾನೂನಾತ್ಮಕ ಜವಾಬ್ದಾರಿ ಹೊಂದಿರುತ್ತಾನೆ. ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 2023 ಇದರ ಅಡಿಯಲ್ಲಿ ಆಕೆಯು ಇಂತಹ ಪರಿಹಾರವನ್ನು ಪಡೆಯಲು ಅವಕಾಶ ನೀಡಲಾಗಿದೆ. ಆದರೆ ಅದಕ್ಕಾಗಿ ತಾನು ಆತನೊಡನೆ ಲಿವಿನ್ ರಿಲೇಷನ್‍ಶಿಪ್‍ನಲ್ಲಿ ಇದ್ದುದ್ದಾಗಿ ದಾಖಲೆಗಳ ಮೂಲಕ ಸಾಬೀತು ಪಡಿಸಬೇಕಿರುತ್ತದೆ. ಮುಂದೊಂದು ದಿನ ಅವಶ್ಯಕತೆ ಬೀಳಬಹುದು ಎನ್ನುವ ಆತಂಕದಲ್ಲಿಯೇ ಇಬ್ಬರ ನಡುವಿನ ಪ್ರತಿಯೊಂದು ಕೊಡುಕೊಳ್ಳುವಿಕೆಯನ್ನು ಆಡಿಯೋ, ವೀಡಿಯೋ ಮಾಡಿಕೊಂಡು ಸಂತೋಷ ನೆಮ್ಮದಿಯನ್ನು ಅನುಭವಿಸಲಾರದೆ ಹಾಳು ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಇಬ್ಬರು ಒಟ್ಟಿಗೆ ವಾಸಿಸುತ್ತಿರುವ ಮನೆಯ ಬಾಡಿಗೆ ಕರಾರು, ಬ್ಯಾಂಕಿನ ಜಂಟಿ ಖಾತೆ, ಆನ್‍ಲೈನಿನಲ್ಲಿ ನಿರಂತರ ಹಣಕಾಸಿನ ವರ್ಗಾವಣೆ, ಇಬ್ಬರೂ ಸೇರಿ ಆಸ್ತಿ ಖರೀದಿಸಿದ್ದರೆ ಅದರ ಪತ್ರ, ಪಿಂಚಣಿ, ಜೀವವಿಮೆಯಲ್ಲಿ ನಾಮಿನಿಯಾಗಿರುವ ಸಾಕ್ಷಿ ಇಂತಹ ದಾಖಲೆಗಳನ್ನು ಲಿವಿನ್ ರಿಲೇಷನ್‍ಶಿಪ್ ಸಂಬಂಧದ ದೀರ್ಘಾವದಿಯನ್ನು ಸಾಬೀತುಪಡಿಸಲು ಸಹಾಯ ಮಾಡುತ್ತವೆ.
ಒಬ್ಬ ವಿವಾಹಿತ ಪುರುಷ ಅಥವಾ ಮಹಿಳೆಗೆ ಅವರುಗಳ ವಿವಾಹವು ಅಸ್ತಿತ್ವದಲ್ಲಿ ಇರುವಾಗಲೇ ಇಂತಹ ಲಿವಿನ್ ರಿಲೇಷನ್‍ಶಿಪ್ ಸಂಬಂಧದಲ್ಲಿ ಇರುವುದನ್ನು ಕಾನೂನು ಮಾನ್ಯ ಮಾಡುವುದಿಲ್ಲ. ಇದನ್ನು ವಿಚ್ಚೇಧನ ಪಡೆದುಕೊಳ್ಳಲು ಒಂದು ಕಾರಣವನ್ನಾಗಿ ಪರಿಗಣಿಸಬಹುದಾಗಿರುತ್ತದೆ. ಅಷ್ಟೇ ಅಲ್ಲದೆ ‘Alienation of affection’ ಎನ್ನುವ ಪರಿಕಲ್ಪನೆಯಂತೆ ವೈಯಕ್ತಿಕ ಅಪರಾಧ ಕಾನೂನಿನ ಅಡಿಯಲ್ಲಿ ನೊಂದ ವ್ಯಕ್ತಿಯು ಪರಿಹಾರಕ್ಕಾಗಿ ನ್ಯಾಯಾಲಯದಲ್ಲಿ ಹಕ್ಕೊತ್ತಾಯ ಮಾಡಬಹುದು.
ಲಿವಿನ್ ರಿಲೇಷನ್‍ಷಿಪ್‍ನಲ್ಲಿ ಇರುವಾಗ ಹುಟ್ಟುವ ಮಕ್ಕಳಿಗೆ ಅವರಿಬ್ಬರೇ ಕಾನೂನಾತ್ಮಕವಾಗಿ ತಂದೆ-ತಾಯಿ ಆಗಿರುತ್ತಾರೆ ಮತ್ತು ಆ ಮಗುವಿನ ಪಾಲನೆ ಪೋಷಣೆ ಮದುವೆಯಾಗಿರುವ ಗಂಡ ಹೆಂಡತಿಗೆ ಇರುವ ಹಾಗೆಯೇ ಇವರಿಬ್ಬರಿಗೂ ಇರುತ್ತದೆ. ಆ ಮಗುವಿಗೆ ಅವರಿಬ್ಬರ ಆಸ್ತಿಯಲ್ಲಿ ಸಹಜವಾದ ಹಕ್ಕು ಬರುತ್ತದೆ. ಒಂದು ವೇಳೆ ಇಂತಹ ಸಂಬಂಧದಲ್ಲಿ ಇರುವಾಗ ಮಗು ಹುಟ್ಟಿ ತದನಂತರ ಸಂಗಾತಿಗಳಲ್ಲಿ ಯಾರೊಬ್ಬರೇ ತೀರಿಕೊಂಡರೂ ಆ ಮಗುವಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಇರುವ ಹಕ್ಕು ಕೊನೆಯಾಗುವುದಿಲ್ಲ. ಕುಟುಂಬದವರು ತಮ್ಮ ಇಚ್ಚೆಗೆ ವಿರುದ್ಧವಾಗಿ ಇಂತಹ ಸಂಬಂಧ ಇತ್ತು ಎನ್ನುವ ಕಾರಣದಿಂದ ಮಗುವಿಗೆ ಕೊಡಬೇಕಾದ ಆಸ್ತಿಯನ್ನು ನಿರಾಕರಿಸುವ ಹಾಗಿರುವುದಿಲ್ಲ.
ಮದುವೆಯಾಗಲು ವಯಸ್ಸಿನ ನಿರ್ಬಂಧವಿದೆ. ಹುಡುಗಿಗೆ 18 ವರ್ಷ ವಯಸ್ಸು ತುಂಬುವವರೆಗೂ ಹುಡುಗನಿಗೆ 21 ವರ್ಷ ವಯಸ್ಸು ತುಂಬುವವರೆಗೂ ಮದುವೆ ಮಾಡಿದರೆ ಅದು ಬಾಲ್ಯವಿವಾಹ ಎನಿಸಿಕೊಳ್ಳುತ್ತದೆ ಮತ್ತು ಅದೊಂದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಆದರೆ 18 ವರ್ಷ ವಯಸ್ಸು ತುಂಬಿದ ಯುವಕನೊಬ್ಬ ಲಿವಿನ್ ರಿಲೇಷನ್‍ಶಿಪ್‍ನಲ್ಲಿ ಇರಲು ಬಯಸಿದರೆ ಕಾನೂನು ಅದನ್ನು ಒಪ್ಪಿದೆ. ಆ ಯುವಕ ಸಂಗಾತಿಯಾಗಿ ಬಯಸುವ ವ್ಯಕ್ತಿಯು ಯಾವುದೇ ಲಿಂಗಕ್ಕೆ ಸೇರಿದ ವಯಸ್ಕ ಇದ್ದರೆ ಆದೀತು. ಆದರೆ ಆ ಯುವಕ 21 ವರ್ಷ ವಯಸ್ಸು ತುಂಬುವವರೆಗೂ ಅದೇ ಸಂಗಾತಿಯೊಡನೆಯಾಗಲಿ ಬೇರೊಬ್ಬರ ಜೊತೆಯಾಗಲೀ ಮದುವೆಯಾಗಲು ಅವಕಾಶ ಇರುವುದಿಲ್ಲ. ಲಿವಿನ್ ರಿಲೇಷನ್‍ಶಿಪ್‍ನಲ್ಲಿ ಇರುವ ಹೆಣ್ಣು ವಯಸ್ಸಿನಲ್ಲಿ ಗಂಡಿಗಿಂತ ದೊಡ್ಡವಳಿದ್ದರೂ ಕಾನೂನಿನ ತೊಡಕು ಇರುವುದಿಲ್ಲ. ಅವಿವಾಹಿತರು, ವಿಚ್ಚೇಧನ ಪಡೆದುಕೊಂಡವರು, ಪತಿ ಅಥವಾ ಪತ್ನಿಯನ್ನು ಕಳೆದುಕೊಂಡವರು ಕೂಡ ಲಿವಿನ್ ರಿಲೇಷನ್‍ಶಿಪ್‍ನಲ್ಲಿ ಇರಲು ಕಾನೂನಿನ ಸಮ್ಮತಿ ಇದೆ.
ಎಲ್ಲಾ ವಿವಾಹಗಳನ್ನು ಕಡ್ಡಾಯವಾಗಿ ನೊಂದಾಯಿಸಬೇಕು ಎನ್ನುವ ಕಾನೂನು ನಮ್ಮಲ್ಲಿ ಇದೆ. ಆದರೆ ಲಿವಿನ್ ರಿಲೇಷನ್‍ಶಿಪ್‍ಗಳ ಬಗ್ಗೆ ಹೀಗೆ ನೊಂದಾಯಿಸಿಕೊಳ್ಳುವ ಯಾವುದೇ ಕಾನೂನು ಇರುವುದಿಲ್ಲ. ವಿದೇಶಗಳಲ್ಲಿ ಇಂತಹ ಒಪ್ಪಿತ ಸಂಬಂಧಗಳಲ್ಲಿ ವಾಸಿಸಲು ಬಯಸುವ ಇಬ್ಬರು ವ್ಯಕ್ತಿಗಳು ‘Cohabitation Certificate’ ಎನ್ನುವ ಕರಾರು ಮಾಡಿಕೊಳ್ಳಬಹುದು ಆದರೆ ನಮ್ಮಲ್ಲಿ ಇದು ಕಡ್ಡಾಯವಲ್ಲ. ಆದರೂ ಇತ್ತೀಚೆಗೆ ಇಂತಹ ಕರಾರು ದಾಖಲೆಯನ್ನು ನೋಟರಿಗಳ ಸಮಕ್ಷಮದಲ್ಲಿ ಮಾಡಿಸಿಕೊಳ್ಳಲು ಸಂಬಂಧಪಟ್ಟವರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಕೆಲವು ರಾಜ್ಯಗಳ ಉಚ್ಚನ್ಯಾಯಾಲಯಗಳು ಸಂಧರ್ಭಾನುಸಾರ ಈ ದಾಖಲೆಯನ್ನು ಪರಿಗಣಿಸಿದ್ದರೂ ಬಹುಪಾಲು ನ್ಯಾಯಾಲಯಗಳು ಲಿವಿನ್ ರಿಲೇಷನ್‍ಶಿಪ್ ಎನ್ನುವುದನ್ನು ಕರಾರು ಎನ್ನುವುದಾಗಿ ಒಪ್ಪದಿರುವುದರಿಂದ ಇಂತಹ ದಾಖಲೆಯನ್ನು ತಿರಸ್ಕರಿಸಿದ ಪ್ರಕರಣಗಳೂ ಇವೆ. ಈ ನಿಟ್ಟಿನಲ್ಲಿ Moya Khatun Vs. State of Punjab (2015) ಈ ಪ್ರಕರಣದ ತೀರ್ಪು ಅತ್ಯಂತ ಮಹತ್ವದ್ದಾಗಿದೆ. ಉತ್ತರಾಖಂಡ್ ರಾಜ್ಯದ ಸರ್ಕಾರವು ’Livin Relationship Certificate’ ಅನ್ನು ಕಡ್ಡಾಯ ಮಾಡುವುದರೆಡೆಗೆ ಚಿಂತನೆ ನಡೆಸಿದೆ.
ಲಿವಿನ್ ರಿಲೇಷನ್‍ಶಿಪ್‍ನಲ್ಲಿ ಇರುವವರು ಮಕ್ಕಳನ್ನು ದತ್ತು ಪಡೆಯಲು ಸಾಧ್ಯವೇ ಎನ್ನುವ ಪ್ರಶ್ನೆಗೆ ಉತ್ತರವಾಗಿ ನಿಂತಿದೆ Supriyo Vs. Union of India (2023) ಎನ್ನುವ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ನೀಡಿದ ತೀರ್ಪು. ಮಕ್ಕಳ ನ್ಯಾಯ ಕಾಯಿದೆ 2015 ಇದರಲ್ಲಿ ಈ ವಿಷಯದ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ(CARA)ದ ನಿಯಮಾವಳಿಗಳ ಪ್ರಕಾರ ಮದುವೆಯಾಗಿ ಕನಿಷ್ಟ ಎರಡು ವರ್ಷಗಳು ಆಗಿರುವ ದಂಪತಿಗಳು ಮಾತ್ರ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಅರ್ಹರು ಮತ್ತು ಒಂಟಿ ಹೆಂಗಸು ಹಾಗೂ ಒಂಟಿ ಗಂಡಸು ಏಕಪೋಷಕರಾಗಿ ಮಗುವನ್ನು ದತ್ತು ತೆಗೆದುಕೊಳ್ಳಲು ಅವಕಾಶವಿರುತ್ತದೆ. ಆದರೆ ಹೀಗೆ ಲಿವಿನ್ ರಿಲೇಷನ್‍ಶಿಪ್‍ನಲ್ಲಿ ಇರುವ ಇಬ್ಬರು ಸಂಗಾತಿಗಳು ಕೂಡಿ ಮಗುವನ್ನು ದತ್ತು ತೆಗೆದುಕೊಳ್ಳುವುದರ ಬಗ್ಗೆ ಯಾವುದೇ ನಿಯಮವನ್ನು ನೇರ ಮತ್ತು ಖಚಿತವಾಗಿ ರೂಪಿಸಿಲ್ಲ. ಹಾಗಾಗಿ ಇಂತಹ ಸಂಬಂಧದಲ್ಲಿ ಇರುವ ಇಬ್ಬರು ಏಕಕಾಲಕ್ಕೆ ಒಟ್ಟಿಗೆ ಒಂದು ಮಗುವನ್ನು ದತ್ತು ಪಡೆಯುವ ಅವಕಾಶ ಸಧ್ಯಕ್ಕಂತೂ ಇಲ್ಲ. ಅದರ ಬಗ್ಗೆ ಶಾಸಕಾಂಗ ಚರ್ಚೆಗೆ ಮೊದಲಿಟ್ಟು ಕಾನೂನಿನಲ್ಲಿ ವಿವರಣೆ ನೀಡಬೇಕಿದೆ.
ಲಿವಿನ್ ರಿಲೇಷನ್‍ಶಿಪ್‍ಗೆ ಕಾನೂನಿನ ಬೆಂಬಲ ಬೇಕು ಎನ್ನುವುದಾದರೆ ಮೂಲಭೂತವಾಗಿ ಅಂತಹ ಸಂಬಂಧ ಯಾವುದೇ ಒತ್ತಡವಿಲ್ಲದೆ ಹಾಗೂ ಆಮಿಷಕ್ಕೆ ಒಳಗಾಗದೆ ಏರ್ಪಟ್ಟಿರಬೇಕು. ಮದುವೆಯಾಗುವುದಾಗಿ ಪ್ರಮಾಣ ಮಾಡಿ ಸಂಗಾತಿಯೊಡನೆ ದೈಹಿಕ ಸಂಪರ್ಕ ಬೆಳೆಸಿದ್ದು ನಂತರ ಮದುವೆಯಾಗಲು ನಿರಾಕರಿಸಿದರೆ ಅದನ್ನು ಅತ್ಯಾಚಾರ ಎನ್ನಲಾಗುವುದಿಲ್ಲ ಬದಲಿಗೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 69ರ ಅಡಿಯಲ್ಲಿ ಅದನ್ನು ವಂಚನೆ ಎಂದು ಪರಿಗಣಿಸಿ 10 ವರ್ಷಗಳ ಜೈಲು ಶಿಕ್ಷೆಯನ್ನು ನೀಡಲಾಗುತ್ತದೆ. ‘Sharing the bed does not entitle a person to gain authority on someone’s life’ ಎಂದು ಹೇಳಿ ಸರ್ವೋಚ್ಚ ನ್ಯಾಯಾಲಯವು ಇಂತಹ ವಂಚನೆಯ ಮನೋಭಾವಕ್ಕೆ ಕಡಿವಾಣ ಹಾಕಲು ಯತ್ನಿಸಿದೆ. ಕಾರಣಾಂತರಗಳಿಂದ ಪರಸ್ಪರ ಒಪ್ಪಿಗೆಯಿಂದಲೇ ಲಿವಿನ್ ರಿಲೇಷನ್‍ಶಿಪ್‍ನಿಂದ ಹೊರ ಬಂದಿರಬಹುದಾದ ವ್ಯಕ್ತಿಗಳು ಮುಂದೆ ಮತ್ತೊಮ್ಮೆ ಅದೇ ಸಂಬಂಧದಲ್ಲಿ ಇರಲು ಬಯಸಿದರೆ ಅದಕ್ಕೆ ಕಾನೂನಿನ ವಿರೋಧ ಇರುವುದಿಲ್ಲ ಆದರೆ ಆ ಸಂಬಂಧದ ದೀರ್ಘಾವಧಿಯನ್ನು ಮೊದಲು ಇದ್ದ ಕಾಲದೊಡನೆ ಸೇರಿಸಿ ಲೆಕ್ಕ ಹಾಕಲು ಆಗುವುದಿಲ್ಲ. ಜಾತಿ ಧರ್ಮಗಳ ಅಂತರವಿಲ್ಲದೆ, ಲಾಂಗ್ ಡಿಸ್ಟೆನ್ಸ್‍ನಲ್ಲೂ ಕೂಡ ಇಂತಹ ಸಂಬಂಧದಲ್ಲಿ ಇರಬಹುದು.
ಸ್ವತಃ ಸರ್ವೋಚ್ಚ ನ್ಯಾಯಾಲಯವೇ ಲಿವಿನ್ ರಿಲೇಷನ್‍ಶಿಪ್ ಎನ್ನುವುದು ಸಮಾಜದ ಪ್ರತೀತಿಗೆ ಹೊಂದಾಣಿಕೆಯಾಗದಿದ್ದರೂ ಅದು ಅನೈತಿಕವೂ ಅಲ್ಲ ಕಾನೂನು ಬಾಹಿರವೂ ಅಲ್ಲ ಎಂದು ಹೇಳಿದೆ. ಆದರೆ ಒಂದೊಮ್ಮೆ ಪ್ರೀತಿ ಎನ್ನುವ ಹೆಸರಿನಿಂದ ಒಂದಾಗಿ, ಒಪ್ಪಿ ಜೊತೆಯಲ್ಲಿ ನಡೆಸುವ ಜೀವನ, “ತನಗೆ ಬದುಕಲು ಬರುವುದಿಲ್ಲ, ನಿನ್ನನ್ನು ಬಾಳಲು ಬಿಡುವುದಿಲ್ಲ” ಎನ್ನುವ ಹಂತ ತಲುಪುತ್ತಿರುವುದರಿಂದ ಈ ಸಂಬಂಧವನ್ನು ಕಾನೂನಿನ ಚೌಕಟ್ಟಿನೊಳಗೆ ಪೂರ್ಣ ಪ್ರಮಾಣದಲ್ಲಿ ಹಿಡಿದು ಕೂರಿಸಲು ನ್ಯಾಯಂಗವೂ ತಿಣುಕಾಡುತ್ತಿದೆ.
ದೌರ್ಜನ್ಯದ ಅನುಭವಕ್ಕೆ ಸಿಕ್ಕ ದಾಂಪತ್ಯವು ಬೇರೆಯಾಗುವ ಮೊದಲು ಉಳಿದುಕೊಳ್ಳಲು ನೂರು ಪ್ರಯತ್ನ ನಡೆಸುತ್ತದೆ. ಅದಕ್ಕಿರುವ ಒಂದೇ ಕಾರಣ ವಿವಾಹ ಎನ್ನುವ ಬಂಧಕ್ಕೆ ಇರುವ ಸಾಮಾಜಿಕ ಮಾನ್ಯತೆ ಮತ್ತು ಸಾಮುದಾಯಿಕ ಉತ್ತರದಾಯಿತ್ವ ಎನ್ನುವ ಹೊಣೆ. ಆದರೆ ಸಾಮುದಾಯಿಕ ಬದ್ಧತೆ ಎನ್ನುವುದೇ ಇಲ್ಲದ ಲಿವಿನ್ ರಿಲೇಷನ್‍ಶಿಪ್‍ನಲ್ಲಿ ಒಬ್ಬರಿಗೊಬ್ಬರು ಹೇಗೋ ಹೊಂದಿಕೊಂಡು ತೂಗುವ ಮಾತೆಲ್ಲಿ ಎನ್ನುವ ಅನುಮಾನ ಇರುವುದರಿಂದ ಮತ್ತು ಸಾಮಾಜಿಕ ಸಾಗುವಳಿಯಲ್ಲಿ ಕುಟುಂಬ ವ್ಯವಸ್ಥೆಗೆ ಇಂತಹ ಸಂಬಂಧಗಳು ಧಕ್ಕೆ ತರುತ್ತದೆ ಎನ್ನುವ ಊಹೆಯಿಂದ ಹಾಗೂ ನಮ್ಮಲ್ಲಿ ಮದುವೆ ಎನ್ನುವುದು ಇನ್ನೂ ಪ್ರತಿಷ್ಠೆಯ ಕುರುಹಾಗಿ ಉಳಿದಿರುವುದರಿಂದ ಇಂತಹ ಸಂಬಂಧವನ್ನು ಒಪ್ಪಿಕೊಳ್ಳಲು ಸಮಾಜವೂ ದ್ವಂದ್ವದಲ್ಲಿದೆ.
******************
ಅಂಜಲಿ ರಾಮಣ್ಣ
ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ವಕೀಲರು
ಮಾರ್ಚ್ 2026 ಸುಧಾ ವಾರಪತ್ರಿಕೆಯಲ್ಲಿ ಪ್ರಕಟಿತ ಲೇಖನ

Very detailed explanation madam. Good to save.
ReplyDelete