ಜೀನ್ಸ್ ಟಾಕ್ - Jeans talk
" ಜೀನ್ಸ್ ಟಾಕ್ " ಅನ್ನೋ ಹೆಸರು ಓದಿದ ಕೂಡಲೇ ನನ್ನ ಮನಸಿಗೆ ಹೋದದ್ದು ಅಯ್ಯೋ ... ಇದು ನನ್ನಂತಹ ಪೆದ್ದುಗಳಿಗೆ ಏನು ಅರ್ಥ ಆಗುತ್ತೆ ?? ಅಂತ. ಆದರೆ ಓದುತ್ತಾ ಓದುತ್ತಾ ಇದು ಎಷ್ಟು ಸರಳವಾಗಿದೆ ಎಂದರೆ ಯಾರು ಬೇಕಾದರೂ ಇದರಲ್ಲಿರುವುದನ್ನು ಅರ್ಥೈಸಿಕೊಳ್ಳಬಹುದು ಅಂತ. ಇದರೊಳಗಿರುವುದು ನಮ್ಮ ದಿನನಿತ್ಯದ ಬದುಕಿನಲ್ಲಿ ಘಟಿಸುವಂತಹ, ಘಟಿಸಿದಂತಹ ಘಟನೆಗಳೇ.
ಕೆಲವೊಮ್ಮೆ ಲೇಖಕಿ ಅಂಜಲಿ ರಾಮಣ್ಣ ಅವರ ಕೆಲವೊಂದು ಮಾತುಗಳು ಒರಟೆನಿಸಿದರೂ ಮಕ್ಕಳ , ಮಹಿಳೆಯರ ಪ್ರತಿ ಇವರ ಕಾಳಜಿ ಪ್ರಶಂಸನೀಯ . ಮಕ್ಕಳ ವಿಷಯದಲ್ಲಂತೂ ಇವರದ್ದು ಹೂ ಮನ . ಸದಾ ಮಕ್ಕಳ ಹಕ್ಕುಗಳ ಸಲುವಾಗಿ ಹೋರಾಟ ನಡೆಸುತ್ತಾ ಇರುವ ಛಲಗಾತಿ . " ಜೀನ್ಸ್ ಟಾಕ್ " ಕೇವಲ ಒಂದು ವಿಷಯದ ಕುರಿತಾಗಿ ಇಲ್ಲ. ಇದರೊಳಗೆ ಹಲವಾರು ವಿಚಾರಗಳು ಅಡಗಿವೆ .
ಲೇಖನದ ಆರಂಭದಲ್ಲಿ ಖ್ಯಾತ ಲೇಖಕ, ಲೇಖಕಿಯರು ಅಂಜಲಿ ರಾಮಣ್ಣ ಅವರ ಬಗ್ಗೆ , ಅವರ ಲೇಖನಗಳ ಬಗ್ಗೆ ಬರೆದ ಅಭಿಪ್ರಾಯಗಳು ಈ ಪುಸ್ತಕವನ್ನು ಓದುವಂತೆ ಪ್ರೇರೇಪಿಸುತ್ತದೆ .
" ಜೀನ್ಸ್ ಟಾಕ್ " ಲೇಖಕಿಯ ಅನುಭವಗಳ ಸರಮಾಲೆ .
ಮೊದಲ ಭಾಗದಲ್ಲಿ ಹದಿಹರೆಯದ ಮನಸಿನ ಭಾವನೆ, ಅನುಭವಗಳು ಅನಾವರಣ ಗೊಂಡಿದೆ . ಹದಿ ವಯಸ್ಸಿನ ಮೊದಲ ಅನುಭವಗಳ ಬಗ್ಗೆ ಲೇಖಕಿ ಇಲ್ಲಿ ಸೊಗಸಾಗಿ ವರ್ಣಿಸಿದ್ದಾರೆ. ಹದಿ ಹರೆಯದ ಒಂದೊಂದೂ ಅನುಭವವೂ ಬಹಳ ಸುಂದರ . ಒಂದು ವಯಸ್ಸು ಕಳೆದ ಮೇಲೂ ಅದನ್ನು ಜ್ಞಾಪಿಸಿಕೊಂಡು ನಗುವಂತಿರುತ್ತದೆ . ಇಲ್ಲಿ ಲೇಖಕಿ ಕೇಳಿದ ಒಂದು ಪ್ರಶ್ನೆ - " ಅವನು ಮಾತ್ರ ಕೊನೆಯಾಗೋಕೆ ಬಂದರೂ ಅಪ್ಪನಾಗೋಕೆ ತಯಾರಿರೊಲ್ಲ , ಆದರೆ ಹುಡುಗಿಯರು ಯಾಕೆ ಏನೇ ಆಗೋದಕ್ಕೂ ಮೊದಲು ಅಮ್ಮ ಆಗೋಕೆ ಒದ್ದಾಡ್ತಿರ್ತಾರೆ....? ". ಎಲ್ಲೋ ಒಂದು ಕಡೆ ಮನವನ್ನು ತಟ್ಟುವಂತಿದೆ .
ಇನ್ನೊಂದು ಭಾಗದಲ್ಲಿ ಪ್ರೇಮ ವಿವಾಹ , ಅದರೊಳಗೆ ಸಿಲುಕಿದ ನಂತರದ ಜೀವನ, ಪಡೆದದ್ದೇನು, ಕಳೆದುಕೊಂಡದ್ದೇನು ?? ಅನ್ನುವುದರ ಕುರಿತು ಒಂದಷ್ಟು ಸೊಗಸಾದ ವಿವರಣೆ . ಮದುವೆಯಾದ ಜೋಡಿ ಜಾತಿ ಹೆಸರಲ್ಲಿ ದೂರವಾದ ಕಥೆಗಳಿಲ್ಲಿ ಬರುತ್ತದೆ . ಒಂದಷ್ಟು ಸುಳ್ಳು ಸುಳ್ಳು ಹೊಗಳಿಕೆ , ಜೊತೆಗೆ ತೆಗಳಿಕೆ, ನಗು , ನೋವು , ಸಣ್ಣಪುಟ್ಟ ಖುಷಿಗಳು, ರಾಜಕೀಯ ಕಿತ್ತಾಟಗಳು , ರೇಗಿಸುವಿಕೆ, ರೋಮ್ಯಾನ್ಸ್ , ಹೀಗೆ ಬದುಕಿನ ಹಲವು ಆಯಾಮಗಳೊಳಗೆ ಬೇರೆಯದೇ ಹೋದರೆ ಅದೇನು ಬದುಕು ಅನ್ನೋ ಭಾವ . ಕೊನೆಯಲ್ಲಿ ಸ್ವಾತಂತ್ರ್ಯಕ್ಕೂ ,ಸ್ವೇಚ್ಚಾಚಾರಕ್ಕೂ ಬಹಳ ವ್ಯತ್ಯಾಸವಿದೆಯೇನು?? ಎಂದು ಕನ್ಫ್ಯೂಸ್ ಮಾಡೋ ಒಂದು ಪ್ರಶ್ನೆ .
ತಮಗಾದ ಸ್ವಂತ ಅನುಭವಗಳ ಮೂಲಕ ಮತದಾನದ ಮಹತ್ವವನ್ನು ಇಲ್ಲಿ ನಮ್ಮ ಲಾಯರಮ್ಮ ಮನದಟ್ಟಾಗುವಂತೆ ವಿವರಿಸಾರೆ . ದೇಶದ ಪರ ಅವರ ಪ್ರೀತಿ, ಕಾಳಜಿ, ಬಹಳ ಚೆನ್ನಾಗಿ ವ್ಯಕ್ತವಾಗಿದೆ ಇಲ್ಲಿ . ಸಣ್ಣ ಸಣ್ಣ ಬದಲಾವಣೆಗಳು ಬದಲಾವಣೆಯ ದಾರಿಯಲ್ಲಿ ನಾವು ಹಾಕುವ ಹೆಜ್ಜೆಗಳಿಂದ ಎಲ್ಲವೂ ಬದಲಾಗುತ್ತದೆಯೇ ಎಂಬ ಒಂದು ಪ್ರಶ್ನೆ ಇಲ್ಲಿ ಏಳುತ್ತದೆ . ಉದಾಹರಣೆಗೆ ಒಂದೆಡೆ ಹೋಗುತ್ತಿರುವ ನಲ್ಲಿ ನೀರನ್ನು ನಿಲ್ಲಿಸುವುದರಿಂದ ಎಷ್ಟು ಪೋಲಾಗುವ ನೀರನ್ನು ತಡೆಯಬಹುದು, ಪ್ಲಾಸ್ಟಿಕ್ ಅನ್ನು ನಾವು ಬಳಸುವುದನ್ನು ಕಮ್ಮಿ ಮಾಡಿದರೆ ಉಳಿದೆಡೆಯೂ ಹೀಗೆಯೇ ಅದನ್ನು ನಿಲ್ಲಿಸಿದಂತಾಗುತ್ತದೆಯೇ ಈ ತರದ ಪ್ರಗತಿಪರ ಹಾದಿಯಲ್ಲಿ ನಾವು ಸಾಗುವಾಗ ಏಳುವ ಪ್ರಶ್ನೆಗಳು . ಹೌದು, ನಮ್ಮ ಹಾಗೆಯೇ ಉಳಿದವರೂ ಈ ಹಾದಿಯಲ್ಲಿ ಚಿಂತನೆ ನಡೆಸಿ ಹೆಜ್ಜೆ ಹಾಕಲು ಶುರು ಮಾಡಿದಲ್ಲಿ ಬದಲಾವಣೆ ಖಂಡಿತಾ ಸಾಧ್ಯ.
ದೇಶದ ಅಭಿವೃದ್ಧಿಯ ಪಥದಲ್ಲಿ ನಮಗೆ ಪ್ರಶ್ನೆ ಕೇಳುವ ಅಧಿಕಾರ ನಾವು ಮತ ಹಾಕುವುದರ ಮೂಲಕ ನಮಗೆ ಸಿಗುತ್ತದೆ ಅನ್ನುವುದು ಲೇಖಕಿಯ ಅಭಿಪ್ರಾಯ .
ಸ್ಟ್ಯಾಚ್ಯು ಒಫ್ ಲಿಬರ್ಟಿ :-
ಈ ಪ್ರತಿಮೆಯನ್ನು ನೋಡಿ ಅಂಜಲಿ ಅಕ್ಕನ ಮನದಲ್ಲಿ ಮೂಡಿದ ಭಾವಗಳು ಅದ್ಭುತ . ಈ ಪ್ರತಿಮೆಯ ಕುರಿತು ಬಹಳ ಚೆನ್ನಾಗಿ explain ಮಾಡಿದ್ದಾರೆ. ನಮ್ಮ ಕನ್ನಡ ನಿಘಂಟಿನಲ್ಲಿರುವ ಲಿಬರ್ಟಿಯ ಅರ್ಥವನ್ನು ನೆನಪು ಮಾಡುತ್ತಾರೆ .
ಈ ಪ್ರತಿಮೆಯನ್ನು ನೋಡುವಾಗ ಅವರು ಶಿಬಿರವೊಂದರಲ್ಲಿ ಭೇಟಿಯಾದ ಮಹಿಳೆ ಹಾಗು ಅದಕ್ಕೆ ಸಂಬಂಧಪಟ್ಟ ಘಟನೆಯನ್ನಿಲ್ಲಿ ಉಲ್ಲೇಖಿಸುತ್ತಾರೆ . ಆ ಮಹಿಳೆ ದುಡಿಯುತ್ತಿದ್ದರೂ ಕೂಡ ಗಂಡನ ಅಡಿಯಾಳಾಗಿ ಬದುಕುತ್ತಿದ್ದಳು. ನೀನೂ ದುಡಿಯುತ್ತಿ , ನಿನಗೆ ಹೇಗೆ ಬೇಕೋ ಹಾಗೆ ಇರಬಾರದಾ ಅನ್ನೋ ಸಲಹೆಯನ್ನೂ ನಮ್ಮ ಲಾಯರಮ್ಮ ಇಲ್ಲಿ ನೀಡಿದ್ದಾರೆ .ಸಂಬಂಧಗಳ ಕುರಿತಾಗಿ ಅವರ ಮನದಲ್ಲಿ ಎದ್ದ ಹಲವಾರು ಪ್ರಶ್ನೆಗಳ ಕುರಿತಾದ ಉಲ್ಲೇಖವಿದೆ ಇಲ್ಲಿ .
ಕೊನೆಯ ಸಾಲುಗಳಲ್ಲಿ ಈ ದಿನ ಇಲ್ಲೆಲ್ಲಾ mothers day ಸಂಭ್ರಮ . ಎಲ್ಲೆಲ್ಲೂ ಶುಭಾಶಯಗಳ ವಿನಿಮಯ , ಉಡುಗೊರೆಗಳ ಹಾವಳಿ , ನಾನು ಉಡುಗೊರೆ ನೀಡುವುದಾದರೆ ಜಗತ್ತಿನ ಎಲ್ಲಾ ಅಮ್ಮಂದಿರಿಗೂುಗೊರೆ ಸ್ಟ್ಯಾಚ್ಯು ಆಗದ ಲಿಬರ್ಟಿಯನ್ನು ಮಾತ್ರ ಅನ್ನುತ್ತಾರೆ ನಮ್ಮ ಅಂಜಲಿ ರಾಮಣ್ಣ. ಈ ಮಾತುಗಳು ಹೃದಯವನ್ನು ಬಹಳ ಸ್ಪರ್ಶಿಸಿದವು .
ಇನ್ನೊಂದು ಕಡೆ ತಮ್ಮ ಬಣ್ಣದ ಕುರಿತು ಕೀಳರಿಮೆಯನ್ನು ತಾಳದೆ , ಅದೇ ಬಣ್ಣ ಹೊಂದಿದವರಲ್ಲೂ ಆತ್ಮವಿಶ್ವಾಸ ತುಂಬುವಂತಹ ಸಾಲುಗಳನ್ನು ತಮ್ಮ ಸ್ವಂತ ವಿಚಾರ , ಅನುಭವಗಳನ್ನು ನವಿರಾದ ಹಾಸ್ಯದ ಮೂಲಕ ಬರೆದಿದ್ದಾರೆ . ಲೇಖಕಿಯ ಹಾಸ್ಯ ಪ್ರಜ್ಞೆ ಇಲ್ಲಿ ಮನಸ್ಸಿಗೆ ಹಿತವೆನಿಸುವಂತಿದೆ .
ವ್ಯಕ್ತಿಯನ್ನು ಅವನ / ಅವಳ ಬಣ್ಣದಿಂದಲ್ಲ ಗುಣ ನಡತೆ , ಸಾಮರ್ಥ್ಯದಿಂದ ಗುರುತಿಸುವಂತಾಗಬೇಕು ಅನ್ನುವುದು ಇಲ್ಲಿ ಅಭಿಪ್ರಾಯ .
ಎಷ್ಟು ಸಣ್ಣ ಸಣ್ಣ ಕಾರಣಗಳಿಗೆ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಮತ್ತು ಅದು ಎಷ್ಟು ತಪ್ಪು ಅನ್ನುವುದನ್ನಿಲ್ಲಿ ವಿವರಿಸಲಾಗಿದೆ . ಬದುಕು ಸುಂದರ , ಅದನ್ನು ಎಲ್ಲಾ ಕಷ್ಟಗಳ ನಡುವೆಯೂ ಕಟ್ಟಿಕೊಳ್ಳುವ ಬಗ್ಗೆ ಹೇಳಲಾಗಿದೆ .ನಮ್ಮ ಬದುಕಿಗೆ ನಾವೇ ರಿಂಗ್ ಮಾಸ್ಟರ್ಗಳಾಗಿ , ನಮ್ಮ ಸಾಧನೆಗೆ ನಾವೇ ಮೆಡಲ್ ಕೊಟ್ಟುಕೊಂಡು ಹೆಮ್ಮೆಯಿಂದ ಬದುಕದಿದ್ದರೆ ಅದೆಂತಹ ಬದುಕು ಅನ್ನುವುದು ಲೇಖಕಿಯ ಅಭಿಪ್ರಾಯ . ನೂರಾರು ಕಷ್ಟಗಳ ನಡುವೆಯೂ ಬದುಕನ್ನು ಅರಳಿಸೋ ಮಾತುಗಳನ್ನು ನಾವಿಲ್ಲಿ ಕಾಣಬಹುದು .
ಸ್ನೇಹಿತರೆ , ಇದು ಜೀನ್ಸ್ ಟಾಕ್ ಪುಸ್ತಕದಲ್ಲಿರುವ ಕೆಲವೇ ಕೆಲವು ಸುಂದರವಾದ, ಬದುಕಿಗೆ ಹತ್ತಿರವಾದ ವಿಚಾರಗಳು ಅಷ್ಟೇ. ಸಮಯದ ಅಭಾವ ಹಾಗಾಗಿ ಕೆಲವನ್ನಷ್ಟೇ ಇಲ್ಲಿ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ . ಸಮಯ ಸಿಕ್ಕಲ್ಲಿ ಇಡೀ ಬುಕ್ ಓದಿ ಆದ ಮೇಲೆ ಇನ್ನಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತೇನೆ , ಸದ್ಯಕ್ಕೆ ಇಷ್ಟೇ .
ಅಂಜಲಿ ರಾಮಣ್ಣ ಅವರ " ಜೀನ್ಸ್ ಟಾಕ್ " ಸಿಕ್ಕಲ್ಲಿ ಖಂಡಿತಾ ಓದಿ , ಸಾಕಷ್ಟು ವಿಚಾರಗಳನ್ನೊಳಗೊಂಡಂತಹ ಸುಂದರವಾದ ವಾಸ್ತವಕ್ಕೆ ಹತ್ತಿರವಾದ ಲೇಖನಮಾಲೆ ಚೆನ್ನಾಗಿದೆ .
- ನಯನ ಬಜಕುಡ್ಲು

Comments
Post a Comment