ಮಹಿಳೆ - Woman as leader in ವಿಜಯಕರ್ನಾಟಕ


ಸಾವಿರಾರು ಯುವಜನರು, ವಿದ್ಯಾರ್ಥಿಗಳು, ಮಕ್ಕಳನ್ನು ಭೇಟಿಯಾಗುವ ಅವಕಾಶವಾದಗಲೆಲ್ಲಾ ಸಿಕ್ಕ ಉತ್ತರ ಡಾಕ್ಟರ್, ಪೊಲೀಸ್, ಇಂಜಿನಿಯರ್, ಐಏಎಸ್, ಟೀಚರ್ ಆಗಬೇಕು ಎನ್ನುವುದು. ಒಮ್ಮೊಮ್ಮೆ ಗಗನಸಖಿ, ರೂಪದರ್ಶಿ ಆಗಬೇಕು ಎಂದು ಕೂಡ ಹೇಳಿದ್ದಾರೆ.

 ಅಪರೂಪದಲ್ಲಿ ಅಪರೂಪಕ್ಕೆ ಸೇನೆಗೆ ಸೇರಬೇಕು ಎಂದಿದ್ದಾರೆ ಕೂಡ ಹೆಣ್ಣು ಮಕ್ಕಳು. ಈವರೆಗೂ ರಾಜಕಾರಣಿ, ಮಂತ್ರಿ, ನಾಯಕಿ ಆಗಲು ಬಯಸುವ ಒಂದೇ ಒಂದು ಬಾಲಕಿ, ಯುವತಿಯನ್ನು ಭೇಟಿಯಾಗದಿರುವುದು ಸಮಾನತೆ-ಸಹಬಾಳ್ವೆ ಹಾದಿಯಲ್ಲಿ ನಿರಾಸಾಯುಕ್ತ ವಾಸ್ತವ. ಶಾಲಾ ಕಾಲೇಜುಗಳಲ್ಲಿ ಪೌರನೀತಿ ವಿಷಯಕ್ಕೆ ಕಟ್ಟಕಡೆಯ ಆದ್ಯತೆ. ರಾಜ್ಯಶಾಸ್ತ್ರ, ಸಾರ್ವಜನಿಕ ಆಡಳಿತ ವಿಷಯಗಳ ವಿಭಾಗದಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚು.

ಮತ ಕೇಳಲು ಬರುವ ಪುಢಾರಿಯನ್ನೂ ಆರತಿ ಬೆಳಗಿ ಬರಮಾಡಿಕೊಳ್ಳಲು ಬೇಕು ಸುಮಂಗಲಿಯರು, ಪ್ರತಿಭಟನೆಯಲ್ಲಿ, ರ್~ಯಾಲಿಗಳಲ್ಲಿ ಪಕ್ಷದ ಪರ ಅಥವಾ ವಿರುದ್ಧ ಘೋಷಣೆ ಕೂಗಲು ಬಂದು ಸೇರುತ್ತಾರೆ ಹೆಂಗಸರು, ಕರಪತ್ರ ಹಂಚಲು, ರಾಜಕಾರಣಿಗಳ ಭಾಷಣ ಕೇಳಲು ಗುಂಪಾಗುತ್ತಾರೆ ಮಹಿಳೆಯರು ಆದರೆ ಟಿಕೆಟ್ ಸಿಕ್ಕ ಅಭ್ಯರ್ಥಿಗಳ ಪಟ್ಟಿಯಲ್ಲಿ ಬೆರಳೆಣಿಕೆಯಷ್ಟೂ ಇರದವರು ಮತಚಲಾಯಸುವವರ ಲಿಸ್ಟ್‍ನಲ್ಲಿ ಮಾತ್ರ ಶೇಕಡಾ ಐವತ್ತರಷ್ಟು ಸ್ಥಾನ ಪಡೆದಿದ್ದಾರೆ . ವರ್ತಮಾನಕ್ಕೆ ಹಿಡಿದ ಕನ್ನಡಿ ಭವಿಷ್ಯದ ಕರಾಳತೆಯನ್ನು ತೋರಿಸುತ್ತಿದೆ.

ಕಣಕ್ಕಿಳಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಇರುವ ಒಬ್ಬಿಬ್ಬರು ಮಹಿಳಾ ಅಭ್ಯರ್ಥಿಗಳು ಕೂಡ ಯಾರದ್ದೋ ಹೆಂಡತಿಯಾಗಿ, ಮಗಳಾಗಿ, ಸೊಸೆಯಾಗಿ ಇರುವ ಕಾರಣಕ್ಕೆ ಟಿಕೆಟ್ ಪಡೆದುಕೊಂಡವರೇ ಆಗಿದ್ದಾರೆ. ಸಿನೆಮಾ ಸೇರುವ ಮಗಳನ್ನು ಒಪ್ಪುವ ಹಾಗೆ ರಾಜಕೀಯ ಸೇರುತ್ತೇನೆ ಅನ್ನುವವಳನ್ನು ಒಪ್ಪಲು ಸಮಾಜದ ಮನೋಭಾವ ಇನ್ನೂ ತಯಾರಾಗಿಲ್ಲ ಎನ್ನುವುದು ಸತ್ಯವಾದಂತೆಯೇ ಮಹಿಳೆಯರೂ ತಮ್ಮ ಗುರಿ ಮತ್ತು ಆಕಾಂಕ್ಷೆಗಳಲ್ಲಿ ಸ್ಥಿರತೆ ಕಾಪಾಡಿಕೊಳ್ಳುವಷ್ಟು ಸಬಲರಾಗಿಲ್ಲ. ಕನಸಿಗೂ ಸಾಮರ್ಥ್ಯಕ್ಕೂ ಸಮನಾದ ಅನುಪಾತ ಇರಬೇಕು ಎಂದು ತಿಳಿಯದೆ ಕನಸು ಕಾಣುವುದು ಕೂಡ ಮಹಿಳೆಯ ಬೆಳವಣಿಗೆಗೆ ಮಾರಕ. ಹಿಲರಿ ಕ್ಲಿಂಟನ್ ಹೇಳಿದಂತೆ ಹುಡುಗಿಯೊಬ್ಬಳು ತನ್ನ ಅಭಿಪ್ರಾಯವನ್ನು ಗಟ್ಟಿಯಾಗಿ ಹೇಳಿದರೆ ಅವಳನ್ನು ’ಬಜಾರಿ’ ಎಂತಲೇ ಗುರುತಿಸಲಾಗುತ್ತದೆಯೇ ಹೊರತು ಒಳ್ಳೆಯ ಅಧಿಕಾರಿ ಆಗುತ್ತಾಳೆ ಎನ್ನಲು ಇನ್ನೂ ನಾವು ಸಿದ್ದರಿಲ್ಲ. ಕರ್ನಾಟಕದಲ್ಲಿ ಒಂದೊಮ್ಮೆ ಸಚಿವೆಯರಾಗಿ ಈಗ ತೆರೆ ಮರೆಗೆ ಸರಿದಿರುವ ಕೆಲವೇ ಕೆಲವು ಮಹಿಳೆಯರನ್ನು ಸ್ವತಃ ಮಾತನಾಡಿಸಿದಾಗಲೂ ಬಂದ ಉತ್ತರ ಈ ಕ್ಷೇತ್ರದಲ್ಲಿ ಗಂಡಸರು ಹೇಳಿದಂತೆ ಕೇಳುವ ಮಹಿಳೆಯರಿಗೆ ಮಾತ್ರ ಜಾಗ.

ಇಂದಿರಾಗಾಂಧಿಯಿಂದ ಈ ದೇಶ ಕಂಡ ಮಹಿಳಾ ನಾಯಕಿರುಗಳೆಲ್ಲಾ ಚಾರಿತ್ರ್ಯಹರಣದಂತಹ ಆಪಾದನೆಗೆ ಒಳಗಾಗಿಯೇ ತಮ್ಮ ಛಾಪು ಮೂಡಿಸಿರುವುದು. ಸಾಮಾಜಿಕ ಜಾಲತಾಣದಲ್ಲಿ ಮುಖವಿಲ್ಲದ, ಅಸ್ತಿತ್ವವಿಲ್ಲದ ಯಾವುದೋ ಗಂಡು ನೀಡುವ ಅಸಭ್ಯ ಪ್ರತಿಕ್ರಿಯೆಗೆ ಬೇಸತ್ತು ಇನ್ನೆಂದು ಯಾವುದೇ ಚಟುವಟಿಕೆಯಲ್ಲಿ ತೊಡಗದಂತೆ ಮರೆಯಾಗಿ ಹೋಗುವ ದುರ್ಬಲ ಮನಸ್ಥಿತಿ ಇಂದೂ ಇದೆ ಹೆಂಗಸರಲ್ಲಿ. ಹೀಗಿರುವಾಗ ಟೀಕೆ ಟಿಪ್ಪಣಿಗಳ ಮಳೆ ಸುರಿಯುವುದನ್ನು ಎದುರಿಸುವ ಸಾಮರ್ಥ್ಯ ಇರುವ ಮಹಿಳಾ ರಾಜಕಾರಣಿ ಹೇಗೆ ಸಿಗುತ್ತಾರೆ ? ಅಕ್ಕ ತಂಗಿಯರನ್ನು, ಹೆಂಡತಿ ಮಗಳನ್ನು ಬೈದರೆ ನಮ್ಮ ಗಂಡು ಪಾಳೆಯಕ್ಕೆ ಸಹಿಸಲು ಆಗುವುದಿಲ್ಲ ಎನ್ನುವ ಸೆಂಟಿಮೆಂಟ್ ಬಹಳ ದುರ್ಬಳಕೆಯಾಗಿ ಮಹಿಳೆಗೆ ಮೂಗುದಾರ ಹಾಕುವಲ್ಲಿ ತನ್ನ ಸಾಫಲ್ಯ ತೋರಿದೆ. 

ಪುರುಷನನ್ನು ಯಶಸ್ವೀ ಮಾಡಲು ದುಡಿಯುವ ಮಹಿಳೆಯರು ಪ್ರತೀ ಮನೆಯಲ್ಲೂ ಸಿಗುತ್ತಾರೆ ಆದರೆ ಮಹಿಳೆಯ ಇಚ್ಛೆಯನ್ನು ಅರಿಯುವ ಅದರಂತೆ ನಡೆಯಲು ಪ್ರೋತ್ಸಾಹಿಸುವ ಪುರುಷ ಎಷ್ಟು ಕುಟುಂಬಗಳಲ್ಲಿ ಸಿಗುತ್ತಾನೆ?

ಕರೋನಾ ಕಾಲವನ್ನೂ ಸಮರ್ಥವಾಗಿ ಎದುರಿಸಿದ್ದರೂ ವಿಶಮಟ್ಟದಲ್ಲಿ ಇತ್ತೀಚೆಗೆ ರಾಜೀನಾಮೆ ನೀಡಿ ಮನೆ ಸೇರುತ್ತಿರುವ ಮಹಿಳಾ ನಾಯಕಿರನ್ನು ಕಂಡಾಗ ಮಹಿಳೆಯರಿಗೆ ಒತ್ತಡ ಎದುರಿಸುವ ಸಾಮರ್ಥ್ಯ ಇಲ್ಲ ಎನ್ನುವ ಆರೋಪ ನಿಜವೇ ಏನೋ ಎನಿಸಿಬಿಡುತ್ತದೆ.

 ಸ್ವಾಭಾವಿಕವಾಗಿ ಹೆಂಗಸರು ತ್ವರಿತವಾಗಿ ಮಾನಸಿಕ ಮತ್ತು ಭಾವನಾತ್ಮಕ ಪ್ರಭಾವಕ್ಕೆ ಒಳಗಾಗುತ್ತಾರೆ. ಇದು ರಾಜಕೀಯ ಕ್ಷೇತ್ರದಲ್ಲಿ ಎದುರಾಗುವ ಬಲು ದೊಡ್ಡ ಅನಾನುಕೂಲ. ಹೊಂದಿಕೊಳ್ಳುವ ಗುಣ ನಾಯಕಿಗೆ ಇರಲೇಬೇಕಾದ ದೊಡ್ಡ ಗುಣ ನಿಜ ಆದರೆ ಬಹುಪಾಲು ಮಹಿಳೆಯರಿಗೆ ಹೊಂದಿಕೊಳ್ಳುವುದು ಎಂದರೆ ಬದಲಾಗುವುದು ಎನ್ನುವುದಾಗಿಯೇ ಕಲಿಸಿಕೊಡಲಾಗಿದೆ ಹಾಗಾಗಿ ನಾಯಕಿಯರನ್ನು ಈ ಸಮಾಜದಲ್ಲಿಉತ್ಪಾದನೆ ಮಾಡಲಾಗುತ್ತಿಲ್ಲ. ಹಿಂಬಾಲಕರು ಬೇಕು ಎನ್ನುವ ’ಪುರುಷ ಕೃಪಣತೆ’ (ಲಿಂಗ ಬೇಧವಿಲ್ಲದೆ) ಹೆಂಗಸರನ್ನು ರಾಜಕಾರಣಿಗಳನ್ನಾಗಿ ಮಾಡಲು ಮುಂದಾಗುತ್ತಿದೆ ನಾಯಕಿರನ್ನಾಗಿ ರೂಪಿಸಲು ಅಲ್ಲ. ಹೆಂಗಸು ಕೂಡ ಇಂತಹ ಪ್ರೌಢಿಮೆ ಬೆಳೆಸಿಕೊಳ್ಳಲು ಒಂದು ಯುಗಾಂತರವಾಗ ಬೇಕಿದೆ.




*********************









Comments

Post a Comment

Popular posts from this blog

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್