My body my choice - ವಿಜಯಕರ್ನಾಟಕ

 



ಕಲಾರಾಧನೆಯ ಕಣ್ಣಿನಿಂದ, ಸೌಂದರ್ಯದ ಆಸ್ವಾದನೆಯ ಮನಸ್ಸಿನಿಂದ ನೋಡಿದಾಗ ಈ ವಿಡಿಯೋ ಅದ್ಭುತವಾಗಿ ಮೂಡಿ ಬಂದಿದೆ. ಇದನ್ನು ತಯಾರು ಮಾಡಿದವರೇ ಸಾರ್ವಜನಿಕವಾಗಿ ಹೇಳಿಕೊಂಡಂತೆ 'ಈ ವಿಡಿಯೋ ಮೂಲಕ ಮಹಿಳೆಯರಿಗೆ ಆಯ್ಕೆಯ ಹಕ್ಕು ಇದೆ ಎಂದು ಸಮಾಜಕ್ಕೆ ತಿಳಿಸುವುದಷ್ಟೇ ನಮ್ಮ ಉದ್ದೇಶ' ಎನ್ನುವ ಮಾತೂ ಬಹಳ ಆಕರ್ಷಣೀಯವಾಗಿದೆ. ಹಲವು ಕಾರಣಗಳಿಗೆ ವಿಡಿಯೋ ಗಂಭೀರವಾಗಿ ಗಮನ ಸೆಳೆದಿದೆ. ದೀಪಿಕಾ ಪಡುಕೋಣೆಯ ಬಗ್ಗೆ ಯಂತೂ ಬೆರಳು ತೋರಲು ಆಗುವುದೇ ಇಲ್ಲ.
But...
ಉದ್ದೇಶವನ್ನು ಸಾರಲು ಬಳಸಿಕೊಂಡಿರುವ ಪದಗಳು ಮನಸ್ಸಿರುವ ಮನುಷ್ಯ ರನ್ನು ಒಂದಷ್ಟರಮಟ್ಟಿಗೆ ಗೊಂದಲಕ್ಕೀಡು ಮಾಡುವುದಂತೂ ನಿಜ.  SEX ಎನ್ನುವ ಸುಂದರ ಮೂರಕ್ಷರದ ಪದವು ಇಲ್ಲಿ ಬಳಕೆಯಾಗಿರದಿದ್ದರೆ ಬಹುಶಃ ಇದಕ್ಕೆ ಈ ಪರಿಯ ಪ್ರಚಾರವೂ ದಕ್ಕುತ್ತಿರಲಿಲ್ಲವೇನೋ. ಮದುವೆಗೆ ಮೊದಲಿನ ಲೈಂಗಿಕ ಸಂಬಂಧ, ಮದುವೆಯಾಚೆಗಿನ ಸೆಕ್ಸ್, ಹೆಣ್ಣು ಹೆಣ್ಣನ್ನೇ ಕಾಮಿಸುವುದು, ಬೇಕಾಬಿಟ್ಟಿ ಮೈ ಬೆಳೆಸುವುದು, ಮನಸೋಯಿಚ್ಛೆ ಬಟ್ಟೆಧರಿಸುವುದು, ಮದುವೆ ಬೇಕೋ ಬೇಡವೋ, ಹೊತ್ತುಗೊತ್ತಿಗೆ ಗೂಡು ಸೇರುವುದೋ ಬೇಡವೋ, ಪ್ರೀತಿ ಸ್ಥಾಯಿಯಾಗಿರಬೇಕೋ ಜಂಗಮವಾಗಬೇಕೋ, ಹೀಗೆ ಇನ್ನೂ ಏನೇನನ್ನೋ 99 ಹೆಂಗಸರು 'ನನ್ನ ಆಯ್ಕೆ' ಎಂದು ಖಚಿತ ಧ್ವನಿಯಲ್ಲಿ ಸಾರಿ ಹೇಳುವಾಗ, ನನಗಂತೂ ತಪ್ಪು ಎನಿಸಲಿಲ್ಲ, ನಿಜ. ಹೆಣ್ಣಿಗೂ ಆಯ್ಕೆ ಎನ್ನುವ ಹಕ್ಕು ಇದೆ ಮತ್ತು ಅದು ಇತರರಿಗೆ ಇರುವಷ್ಟೇ ಸಮಾನವಾಗಿದೆ. ಎನ್ನುವುದನ್ನು ಇಂದಿನ ಸಮಾಜದ ಜಡಗೊಂಡ ಮನಸ್ಸಿಗೆ ನಾಟುವಂತೆ ಹೇಳಲೇ ಬೇಕಿದೆ. ಗಂಡಸಿಗೆ ಮಾತ್ರವಲ್ಲ ಹೆಂಗಸಿಗೂ
ಇದರ ಮನವರಿಕೆಯಾಗುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಈ ಚಿತ್ರದ ಉದ್ದೇಶವನ್ನು ಒಪ್ಪಲೇಬೇಕು ಎನ್ನಿಸುತ್ತೆ, But....

ಕನಸನ್ನು ನನಸಾಗಿಸಿಕೊಳ್ಳುವ ದಾರಿಯಲ್ಲಿನ ಪಯಣದಲ್ಲಿ ಸಹಬಂದಿಯನ್ನು ಪ್ರಶ್ನಿಸುತ್ತಾ, ನನ್ನನ್ನು ಪ್ರಶ್ನೆಗಳಿಗೆ ತೆರೆದುಕೊಳ್ಳುತ್ತಾ ಹೋಗುವುದನ್ನು ನಾನು ಹೆಚ್ಚು ಅರ್ಥ ಪೂರ್ಣ ಎಂದುಕೊಳ್ಳುತ್ತೇನೆ. ನಿಜಾರ್ಥದ ಸಾಂಗತ್ಯ ಎಂದುಕೊಳ್ಳುತ್ತೇನೆ.

A person who has nothing to lose can gain nothing! ಈ ಕಾರಣಕ್ಕಾಗಿಯೇ ನಾನು ಈ ವಿಡಿಯೋದಲ್ಲಿನ ಸ್ವಚ್ಛಂಧತೆಯನ್ನು ಪ್ರಶ್ನಿಸುತ್ತಲೇ ಹೇಳುತ್ತೇನೆ. ಆಯ್ಕೆ ನನ್ನದಿರಲಿ. ಆಯ್ಕೆಯ ಸ್ವಾತಂತ್ರ್ಯವೂ ನಿನ್ನಷ್ಟೇ ನನಗಿರಲಿ ಹಾಗೆಯೇ ನಿನಗೂ ನನಗೂ ಪರಸ್ಪರ ಪ್ರಶ್ನಿಸಿಕೊಳ್ಳುವ ಮನಸ್ಪೂ ಇರಲಿ. 

Creative Activism ಎನ್ನುವ ತಲೆಬರಹದಡಿಯಲ್ಲಿ ಶೇಕಡ ಒಂದರಷ್ಟು ಜನರನ್ನೂ ತಲುಪದಿರುವ ಇಂತಹ ವೀಡಿಯೋಗಳು Women Empowerment ಎನ್ನುವ ಪರಿಕಲ್ಪನೆಯನ್ನೇ ಜಾಳು ಗೊಳಿಸದಿರುವಂತೆ ಎಚ್ಚರಿಕೆಯನ್ನೂ ವಹಿಸಬೇಕಿದೆ.

ತಂದೆ-ತಾಯಿ, ಗಂಡ-ಪ್ರೇಮಿ, ಅಕ್ಕ-ಅಣ್ಣ, ಗೆಳೆಯ-ಗೆಳತಿ, ಗುರು-ಸಹಪಾಠಿ ಹೀಗೆ ಯಾವುದೇ ಸಂಬಂಧದಲ್ಲಿನ ಸಹಚರರನ್ನು ಹೀನಾಯ, ನಗಣ್ಯ ಎನ್ನುವಂತೆ ಬಿಂಬಿಸಿರುವುದನ್ನು ಒಪ್ಪಲು ಸಾಧ್ಯವೇ?! 'ನನ್ನ ಆಯ್ಕೆ'ಯನ್ನು ಯಾರೂ ಪ್ರಶ್ನಿಸಬೇಡಿ ಎಂದು ಹೇಳಿದಾಗ ನನ್ನ ಇರುವಿಕೆ, ಪ್ರಶ್ನಾತೀತವಾಗಿರಲಿ ಎನ್ನುವುದೇ ನನ್ನ ಆಯ್ಕೆ ಎಂದಾಗುವುದನ್ನು ಒಪ್ಪಲು ನಾನಂತೂ ಹಿಂಜರಿಯುತ್ತೇನೆ. ಆಯ್ಕೆ ನನ್ನದಿರಲಿ. ಪರಸ್ಪರ ಪ್ರಶ್ನಿಸುವ ಮನಸ್ಸೂ ಇರಲಿ.



Comments

Popular posts from this blog

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್