ಆಂದೋಲನದಲ್ಲಿ ಶಿವ


  ಉತ್ತರಾಖಂಡವೇ ಪುರಾಣ ಪುಣ್ಯಕಥೆಗೆ ಹಿಡಿದ ಕನ್ನಡಿ. ಪ್ರಕೃತಿ ಮೈಹರವಿಕೊಂಡು ಸೌಂದರ್ಯವನ್ನು ಕೊಡವಿಕೊಳ್ಳುತ್ತಿರುವ ಈ ಭೂಮಿಯಲ್ಲಿ ಸ್ವಯಂಭುಗೊಂಡಿದ್ದಾನೆ ಕೇದಾರನಾಥ. ಅವನನ್ನು ಮುಟ್ಟಲು ಮಾರ್ಗ ಹಲವು. ನಾನು ಆಯ್ಕೆ ಮಾಡಿಕೊಂಡಿದ್ದು ರಿಷಿಕೇಶದಿಂದ ರಸ್ತೆ ಪ್ರಯಾಣ. ರಾಂಪುರವೆನ್ನುವ ಊರು ತಲುಪುವಷ್ಟರಲ್ಲಿ ರಾತ್ರಿಯಾಗಿತ್ತು. ಮಾರನೆಯ ದಿನದ ಪ್ರಯಾಣದಲ್ಲಿ ಸಿಕ್ಕಿದ್ದು ಅಲಕಾನಂದ-ಮಂದಾಕಿನಿಯರ ಸಂಗಮವಾದ ರುದ್ರಪ್ರಯಾಗವು ಶ್ರೀರಾಮಚಂದ್ರ ಪೂರ್ವಿಕರಿಗೆ ತರ್ಪಣಕೊಟ್ಟ ಸ್ಥಳ. ನಂತರ ಸಿಕ್ಕಿದ್ದು ಭಾಗೀರಥಿ-ಮಂದಾಕಿನಿಯರ ಸಂಗಮದ ದೇವಪ್ರಯಾಗ. ಇಲ್ಲಿ ಬ್ರಹ್ಮ ತಪಸ್ಸು ಮಾಡಿದ ಗುರುತಿಗೊಂದು ಶ್ರೀರಾಮ ಮಂದಿರವಿದೆ. ಇನ್ನೊಂದಷ್ಟು ದೂರದಲ್ಲಿ ತ್ರಿಯುಗ ನಾರಾಯಣನ ಸ್ಥಾನ. ಪಾರ್ವತಿ ಕಲ್ಯಾಣ ನಡೆದದ್ದು ಎಂದು ಹೇಳಲಾಗುವ ಮನಮೋಹಕ ಮಂದಿರವದು.

ಶಿವ ಪಾರ್ವತಿಯರು ಸಪ್ತಪದಿ ತುಳಿದುದರ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಅದೇ ಅಗ್ನಿಯನ್ನು ಅಂದಿನಿಂದ ಈ ಘಳಿಗೆಯವರೆಗೂ ಆರದಂತೆ ಕಾಯುತ್ತಿದ್ದಾರೆ ಅಲ್ಲಿನ ಭಕ್ತರು. ಅಲ್ಲಿಂದ ತಲುಪಿದ್ದು ಕೇದಾರನಾಥನ ತಪ್ಪಲಿಗೆ. ಭಕ್ತರನ್ನು ಮೀಯಿಸಿ ಶುಚಿಗೊಳಿಸುವ ಬಿಸಿನೀರಿನ ಬುಗ್ಗೆಯ ಗೌರಿಕುಂಡ ಈ ತಪ್ಪಲಿಗೆ ಆತುಕೊಂಡಿದೆ. ಇಲ್ಲಿಂದ ಮುಂದೆ ದುರ್ಗಮ ದಾರಿ. ಕೋಲೂರಿ ಹತ್ತಿ ಹೋಗಬೇಕು ಇಲ್ಲವೇ ಅಲ್ಲಿನ ಕುದುರೆ ಏರಿ ಹೋಗಬೇಕು. ಅದೂ ಸಾಧ್ಯವಿಲ್ಲವೆನಿಸಿದರೆ ಇಬ್ಬರು ಪಾಳಿ ಬದಲಿಸುತ್ತಾ ಹೊತ್ತು ಸಾಗುವ ಪಲ್ಲಕ್ಕಿಯಂಥ ವ್ಯವಸ್ಥೆ ಇದೆ. ಹದಿನಾಲ್ಕು ಕಿಲೋಮೀಟರ್ಗಳ ಈ ದಾರಿಯನ್ನು ಕ್ರಮಿಸಲು ಸರಾಸರಿ ಬೇಕಾಗುವ ಸಮಯ ನಾಲ್ಕರಿಂದ ಆರು ಘಂಟೆಗಳು. ನಡೆದುಕೊಂಡು ಹತ್ತುವವರಿಗೆ ಒಂದಷ್ಟು ರೂಪಾಯಿಗಳಿಗೆ ಒಂದು ಊರುಗೋಲು ಬಾಡಿಗೆಗೆ ಸಿಗುತ್ತೆ.

ಹುಡುಗನೊಬ್ಬ ಅವನ ಕುದುರೆಯೇರಿ ಹೋಗಬೇಕೆಂದು ದುಂಬಾಲು ಬಿದ್ದಿದ್ದ. ಆ ಹುಡುಗನ ದಮ್ಮಯ್ಯಕ್ಕೆ ಮನಸೋತು 2700 ರೂಪಾಯಿಗಳಿಗೆ ಆ ಕುದುರೆ ನನ್ನ ಹೊರಲು ಸಿದ್ಧವಾಯ್ತು. ಅವನ ಮಾತಿಗೆ ಬೆಲೆಕೊಡುವಂತೆ ಮಧ್ಯೆ ಮಧ್ಯೆ ಅಶ್ವವನ್ನೇರಿ ನಡುನಡುವೆ ಪಾದಾಳುವಾಗುತ್ತಿದ್ದೆ. ಇಕ್ಕಟ್ಟಿನ, ಕಲ್ಲುಭರಿತ, ಕೊಚ್ಚೆ ಸಹಿತವಾದ ದಾರಿ. ಒಂದಡಿಯೂ ಅಗಲವಿಲ್ಲದ್ದ ರಸ್ತೆಯಲ್ಲಿ ಒಂದೂರಿಗಾಗುವಷ್ಟು ಜನಜಂಗುಳಿ. ಕಣ್ಣು ಮಿಟುಕಿಸಿದರೆ ಅಲಕಾನಂದಳ ಘಾರಘಾರಿಯಲ್ಲಿ ಒಂದಾಗುವ ಆತಂಕ. ಎಡಕ್ಕೆ ಹೊರಳಿದರೆ ಹಿಮಪಾತದಲ್ಲಿ ಸರಿದುಹೋಗುವ ಧಾವಂತ. ಮಾರ್ಗಮಧ್ಯದಲ್ಲಿ ನೀರಿನ ಬಾಟಲಿಗಳು, ಜೂಸಿನ ಟೆಟ್ರಾ ಪ್ಯಾಕ್‍ಗಳು, ಬಿಸ್ಕೇಟು ಮ್ಯಾಗಿಗಳು ಯಾವುದಕ್ಕೂ ಕೊರತೆಯಿರಲಿಲ್ಲ. ಅಲ್ಲೊಂದು ಕಡೆ ಕುದುರೆಗಳ ಜಾತ್ರೆ ನಡೆಯುತ್ತಿದೆಯೇನೋ ಅನ್ನುವ ಗುಮಾನಿ ಬರುವ ಹಾಗಿತ್ತು. ಹತ್ತಿರ ಹೋಗಿ ನೋಡಿದರೆ ಮಾಲೀಕರು ಅವುಗಳಿಗೆ ಬೆಲ್ಲ ನೀರು ಕೊಡುತ್ತಿದ್ದರು.

ನಾಲ್ಕು ಘಂಟೆಗಳವಧಿಯಲ್ಲಿ, ಸಮುದ್ರ ಮಟ್ಟದಿಂದ 3584 ಮೀ. ಎತ್ತರವಿರುವ ಕೇದಾರನಾಥನ ಪರ್ವತವನ್ನು ತಲುಪಿದಾಗ -4 ಡಿಗ್ರೀ ಇತ್ತು. ಕಾಯ್ದಿರಿಸಿದ ಹೋಟೆಲ್ ಜಾಗಕ್ಕೆ ಹೋದಾಗ ಬೆನ್ನುಮೂಳೆಯ ತುದಿಗೆ ಚಳಿ ಹತ್ತಿತ್ತು. ಮೈಮೇಲೆ ಮಣಭಾರದ ಉಲ್ಲನ್ ಹೊದ್ದರೂ ಉಸಿರು ಬಾರದು. ಇನ್ನೂ ಸಂಜೆಯ ನಾಲ್ಕು ಗಂಟೆ.

ಕಾಲ್ಕೈ ಚೀಲಗಳು, ಕಿವಿ ತಲೆಗವುಸು ಎಲ್ಲಾ ಹಾಕಿಕೊಂಡು, ಊರುಗೊಲನ್ನು ಹಿಡಿದು ದೇವಸ್ಥಾನದ ದಾರಿಗಿಳಿದೆ. ದೇವಸ್ಥಾನದ ಮುಂದೆ ನಿಲ್ಲುವಷ್ಟರಲ್ಲಿ ಗೋಧೂಳಿ ಬೆಳಕಿಗೆ ವಿದ್ಯದ್ದೀಪಾಲಂಕಾರದ ಝಗಮಗವು ಹಿಮಸ್ವರ್ಗವನ್ನು ತೋರುತ್ತಿತ್ತು. ಪ್ರದಕ್ಷಿಣೆ ಬರೋಣವೆಂದು ಹಿಮದೊಳಗೆ ಹೆಜ್ಜೆ ತೂರಿಸಿ ನಡೆದಾಗ ಸಿಕ್ಕಿದ್ದು ಆದಿ ಶಂಕರಾಚಾರ್ಯರು ಸಮಾಧಿಯಾಗಲು ಹಿಮದೊಳಗೆ ನಡೆದು ಕಣ್ಮರೆಯಾದ ಜಾಗ. ಅಲ್ಲೊಂದು ಅಮೃತ ಶಿಲೆಯ ಮಂದಿರ, ಶಂಕರರ ಮೂರ್ತಿ ಮತ್ತು ಶಿವನ ಲಿಂಗ.

ಸತ್ಯಯುಗದಲ್ಲಿದ್ದ ಕೇದಾರನೆನ್ನುವ ರಾಜನಿಗಿದ್ದ ವರದಂತೆ ಈ ಜಾಗಕ್ಕೆ ಕೇದಾರನಾಥ ಎನ್ನುವ ಹೆಸರು ಬಂದಿತಂತೆ. ಪಾಂಡವರು ಯುದ್ಧದಲ್ಲಿ ರಕ್ತಸಿಕ್ತಗೊಂಡಿದ್ದ ತಮ್ಮ ಮೈಮನಸ್ಸುಗಳನ್ನು ಶುಚಿಗೊಳಿಸಬೇಕೆಂದು ಶಿವನನ್ನು ಬೇಡಿಕೊಂಡು ಹಿಮಾಲಯದಲ್ಲಿ ಅಲೆಯುತ್ತಿದ್ದಾಗ, ಶಂಕರನು ಇವರನ್ನು ಪರೀಕ್ಷೆ ಮಾಡಬೇಕೆಂಬ ಉದ್ದೇಶದಿಂದಲೇ ಎತ್ತಿನ ಚೋಹದಲ್ಲಿ ಎದುರಾದನಂತೆ. ಧರ್ಮರಾಯನ ದಿವ್ಯದೃಷ್ಟಿಗೆ ಆ ಎತ್ತು ಶಿವನೆಂದು ತಿಳಿದು ಅವನಾಜ್ಞೆಯಂತೆ, ಭೀಮನು ಎತ್ತನ್ನು ಹಿಡಿಯಲು ಹೋದಾಗ, ಅವನ ಕೈಗೆ ದಕ್ಕಿದ್ದು ಅದರ ಡುಬ್ಬ ಮಾತ್ರವಂತೆ. ಆ ಕಾರಣಕ್ಕಾಗಿಯೇ ಇಲ್ಲಿ ಶಿವನ ಲಿಂಗ ಎತ್ತಿನ ಬೆನ್ನ ಮೇಲಿನ ಡುಬ್ಬದಾಕಾರದಲ್ಲಿದೆ ಎನ್ನುವ ಕಥೆಯನ್ನು ಅಮ್ಮ ಮೊದಲೇ ಹೇಳಿದ್ದಳು.

ಚಾರ್‍ಧಾಮ ಯಾತ್ರಿಗಳು ಗಂಗೋತ್ರಿ, ಯಮುನೋತ್ರಿಗಳಿಂದ ತಂದ ಜಲವನ್ನು ಇಲ್ಲಿ ಶಿವನಿಗೆ ಅರ್ಪಿಸುತ್ತಾರೆ. ಅಕ್ಷಯ ತದಿಗೆಯಂದು ಶುರುವಾಗುವ ಕೇದಾರನಾಥನ ದರ್ಶನ ಈ ಸ್ಥಳದಲ್ಲಿ ಭಾಯಿದೂಜ್‍ನ ದಿನ ಕೊನೆಯಾಗುತ್ತೆ. ಬೆಳಗಿನ ಝಾವ ಮೂರಕ್ಕೆ ದೇವಸ್ಥಾನದ ಮೆಟ್ಟಿಲುಗಳಮೇಲೆ ಷೂಝ್ ಕಳಚಿದಾಗ ಥಂಡಿಗೆ ಕಣ್ಗುಡ್ಡೆ ನೆತ್ತಿ ಸೇರಿದಂತಾಯ್ತು. ಮುಂಭಾಗದಲ್ಲಿ ತೋಳಗಳಂತಿದ್ದ ಎರಡು ಕಾರ್ಗಪ್ಪು ನಾಯಿಗಳು. ಸದಾಕಾಲವೂ ಅಲ್ಲೇ ಇರುತ್ತವಂತೆ. ಕೇಸರಿಧಾರಿಯೊಬ್ಬ ಬಂದು ತಾಮ್ರದ ಸ್ಥಾಲಿಯಲ್ಲಿ ನೀರು ಕೊಟ್ಟು ಒಳಹೋಗುವಂತೆ ಹೇಳಿ ಪೂಜೆ ಮಾಡಿ ಬನ್ನಿ ಅಂದರು.

ಒಳಗೆ ಹೋಗಿ ಶಿವನ ನೆತ್ತಿಗೆ ಅಘ್ರ್ಯಾಭಿಷೇಕ ಮಾಡಿ, ಕಣ್ಣ್ಗೊತ್ತಿಕೊಂಡು ಮೈಮರೆತಿದ್ದೆ. ಪುರೋಹಿತರೊಬ್ಬರು ಒಳಬಂದು ಧ್ವನಿಯೆತ್ತಿದಾಗಲೇ ಎಚ್ಚೆತ್ತಿದ್ದು. ಗಂಟೆಯ ನಂತರ ಮತ್ತೊಂದು ದರ್ಶನಕ್ಕಾಗಿ ಒಳಹೋದಾಗ ಕೇದಾರನಾಥ ಬೆಳ್ಳಿಯ ಮುಖವಾಡ ಧರಿಸಿ ಮೀಸೆ ಹೊತ್ತು ಕೀಲಾಕ್ಷಿಯಾಗಿಬಿಟ್ಟಿದ್ದ.

ಹೊರಬಂದಾಗ ಒಂದಷ್ಟೇ ದೂರದಲ್ಲಿ ಹೆಲಿಕಾಪ್ಟರ್ ಕಾಣಿಸಿತು. ಕೆಳಗಿಳಿಯಲು ಬೇಕಾದ್ದು ಏಳು ನಿಮಿಷ ಮತ್ತು ಟಿಕೆಟ್ಟಿಗೆ ಒಬ್ಬರಿಗೆ ಏಳು ಸಾವಿರ! ಕ್ಯಾಪ್ಟನ್ ಮಲ್ಹೋತ್ರ ಸ್ವಾಗತಿಸಿ ಸೀಟ್ ಬೆಲ್ಟ್ ಹಾಕಿಕೊಳ್ಳಲು ಹೇಳಿದರು. ಗಾಳಿಯಲ್ಲಿ ತೇಲುತ್ತಿದ್ದಾಗ ಕೆಳಗೊಮ್ಮೆ ಬಗ್ಗಿ ನೋಡಿದೆ. ಅಕಸ್ಮಾತ್ ಅಲ್ಲೇನಾದರು ದುರಂತ ಸಂಭವಿಸಿದರೆ ಒಂದೇಕ್ಷಣದಲ್ಲಿ ಪಂಚಭೂತಗಳೊಂದಿಗೆ ಲೀನವಾಗುವಷ್ಟು ಖಚಿತವಾದ ಭಯಂಕರ ಆದರೂ ರುದ್ರರಮಣೀಯ ನೋಟವಿತ್ತಲ್ಲಿ. ‘ತೃಣಮಪಿ ನ ಚಲತೀ ತೇನವಿನ’ ಅಂತ ಮತ್ತೊಮ್ಮೆ ಕೇದಾರನಾಥ ನನ್ನೊಳಗೆ ತಳವೂರಿ ಬೀಳ್ಕೊಟ್ಟಿದ್ದ.

ಇನ್ನೊಮ್ಮೆ ಸಿಕ್ಕವನು ಗಂಗೆಯ ಶಿರದಲ್ಲಿ ಶಂಕರ. ಅರುಣಾಚಲಪ್ರದೇಶದ ಝೀರೋ ಎನ್ನುವ ಸ್ಥಳದಿಂದ ಆದಿವಾಸಿಗಳ ಹಾಡಿ ಬಿಟ್ಟು ಹೊರಟಾಗ ಪಟ್ಟಿಯಲ್ಲಿ ಮುಂದೆ ನೋಡಬೇಕಾದ ಜಾಗದ ಗುರುತು ಇತ್ತು. ಟ್ಯಾಕ್ಸಿ ಹತ್ತಿ ಕುಳಿತೆ. ದಪ್ಪ ಉಣ್ಣೆಯ ಸ್ವೆಟರ್ ಅನ್ನು ಸೀಳಿ ಛಳಿ ಒಳನುಗ್ಗಿ ತಣ್ಣಗೆ ಮುದ್ದಿಸುತ್ತಿತ್ತು. ಅಷ್ಟರಲ್ಲಿ ಹಿಂದಿನ ದಿನ ಬಸ್ತಿಯ ದಾರಿ “ಓಹ್, ವಾಪಸ್ಸು ಹೊರಟಿರಾ. ಶಿವಲಿಂಗ ನೋಡಿಕೊಂಡು ಹೋಗಿ” ಎಂದು ಹೇಳಿ ಕೈ ಬೀಸಿದರು.

. ತೀರಾ ಕಡಿದಾದ ಮಣ್ಣಿನ ರಸ್ತೆಯಂತಹ ರಸ್ತೆಯಲ್ಲಿ ಮೇಲೇರುತ್ತಿದ್ದೆವು. ಕಾರು ನಿಂತರೆ ಬಾಗಿಲು ತೆರೆಯಲೂ ಆರದಷ್ಟು ಅಂತರದಲ್ಲಿ ಶಿಲಾ ಏಣುಗಳು. ಪುಪ್ಪಸಗಳಲ್ಲಿ ಹೆಚ್ಚಿನ ಗಾಳಿ ತುಂಬಿಕೊಂಡರೂ ಸಮತೋಲನ ತಪ್ಪಿ ಉರುಳುವಂಥಾ ಪ್ರಪಾತ ಇನ್ನೊಂದು ಕಡೆ. ಮಣ್ಣಿನ ಧೂಳು ಎದ್ದು ದಾರಿ ಕಾಣದಂತಾಯ್ತು. ಗಾಡಿ ನಿಲ್ಲಿಸಿ ಚಾಲಕ ಇಳಿದ ಹಿಂದೆಯೇ ಇಕ್ಕಟ್ಟಿನಲ್ಲೇ ನಾನೂ ಇಳಿದೆ. ಮುಂದೆ ಜೀವನದ ಅಂತ್ಯವೇ ಮೂರ್ತಿವೆತ್ತಂತಿತ್ತು. ರಂಜು ಒಬ್ಬ ಉತ್ತಮ ಚಾಲಕನಾಗಿದ್ದ. ನನ್ನನ್ನು ಒಳಗೆ ಕೂರಲು ಹೇಳಿ ಸುಮಾರು 10 ಕಿಲೋಮೀಟರ್ಗಳಷ್ಟು ರಿವರ್ಸ್ ಗೇರಿನಲ್ಲೇ ಕೆಳಗಿಳಿದ. ನಂತರ ಮತ್ತೊಂದು ಪರ್ವತವನ್ನೇರ ತೊಡಗಿದೆವು. ಏರುತ್ತಾ ಏರುತ್ತಾ ಕವಲಿಲ್ಲದೆ ಕೊನೆಯಾಗಿದ್ದ ದಾರಿಯಲ್ಲಿ ನಿಂತೆವು. ನಂತರ ಏಳೆಂಟು ಕಿಲೋಮೀಟರ್ಗಳಷ್ಟು ಕಾಲ್ನಡಿಗೆ. ಸ್ವಲ್ಪ ಹೊತ್ತಿನ ನಂತರ ಒಂದಷ್ಟು ಮೆಟ್ಟಲಿನಂತವುಗಳು ಕಾಣ ತೊಡಗಿತ್ತು. ಬಳಸದೆಯೆ ಅದರ ಮೇಲೆಲ್ಲಾ ಕುರುಚಲು ಗಿಡಗೆಂಟೆಗಳು ಬೆಳೆದಿದ್ದವು. ಹಿಮ ಕರಗಿ ಅಲ್ಲಲ್ಲೇ ಒದ್ದೆಯಾಗಿತ್ತು. ಅಗೋಚರವಾಗಿದ್ದ ನೀರಿನ ಝುಳುಝುಳು ಮಾತ್ರ ಕೇಳುತ್ತಿತ್ತು. ಮೈಕೈಗೆ ಅಂಟಿಕೊಂಡ ಪುರಲೆಗಳನ್ನು ಸರಿಸುತ್ತಾ ಹತ್ತಿಕೊಂಡು ನಂತರ ಒಂದಷ್ಟು ದೂರ ಇಳಿಜಾರಿನಲ್ಲಿ ಜಾರಿ ಹೋಗಿ ಎಡಕ್ಕೆ ತಿರುಗಿದರೆ ಕಂಡಿದ್ದೇನು?!

ಬಯಲ ಬಣ್ಣವ ಮಾಡಿ; ಸ್ವಯವ ನಿಲವ ಮಾಡಿ; ಸುಳಿವಾತನು ಇಲ್ಲಿ ಆಕಾಶಕ್ಕೆದ್ದು ನಿಂತಿದ್ದ. ಪರ್ವತ ಹಿಮ ಮೌನವಾಗಿದ್ದ. 25 ಅಡಿ ಎತ್ತರದ 22 ಅಡಿಗಳಷ್ಟು ಅಗಲದ ಶಿವಲಿಂಗಾಕೃತಿ. ವಿಭೂತಿ ಪಟ್ಟೆ, ರುದ್ರಾಕ್ಷಿ ಮಾಲೆ, ನಾಗಾಭರಣ ಎಲ್ಲವೂ ಅವನ ಮೈಮೇಲೆ ಸ್ವಯಂಭು. ಎಡದ ಹಿಂಭಾಗಕ್ಕೆ ಹೆಣ್ಣಿನಂಥಾ ಆಕೃತಿ ಇಕ್ಕೆಲಗಳಲ್ಲಿ ಗಣೇಶ, ಕಾರ್ತಿಕೇಯನಂಥ ಶಿಲಾರಚನೆ. ಬೂದಿಗಟ್ಟಿದ ಮೋಡ, ನೀಲಿನೀಲಿ ಮಂಜು, ಹಸಿರು ರಾಶಿಯ ನಡುವೆ ಕಪ್ಪು ಶಿಲೆಯಲ್ಲಿ ಆಕಾಶ ಭೂಮಿಗಳ ಒಂದು ಮಾಡಿನಿಂತಿದ್ದ ಶಿವ. ಕೇಸರಿ ಕಚ್ಚೆ ಧರಿಸಿದ್ದ ಕುಲಾವಿಧಾರಿ ಪುರೋಹಿತರೊಬ್ಬರು ಬಂದು “ಬನ್ನಿ ಮಂಗಳಾರತಿ ಮಾಡುತ್ತೇನೆ” ಎಂದರು.

ಕೈಗೆ ಕಂಕಣ ಕಟ್ಟಿ ಹಣೆಗೆ ತಿಲಕವಿಟ್ಟು ಪೂಜೆಗೆ ಶುರುವಿಟ್ಟರು. ಬೆನ್ನ ಹಿಂದಿನ ಬ್ಯಾಗ್‍ನಲ್ಲಿದ್ದ ಸ್ಯಾಂಡಲ್‍ವುಡ್ ಅಗರಬತ್ತಿಯನ್ನು ಕೊಟ್ಟೆ. ಆರತಿ ಮಾಡಿ ಹಿಡಿಭರ್ತಿ ಕಲ್ಯಾಣಿ ಕೊಟ್ಟರು. ಕಥೆ ಹೇಳಿದರು. ’ಇಲ್ಲಿನ ವಿಶ್ವಹಿಂದು ಪರಿಷತ್ತಿನವರು ಒಂದು ಕಮಿಟಿ ಮಾಡಿದ್ದಾರೆ. ನನಗೆ ಸಂಬಳವನ್ನೂ ಕೊಡುತ್ತಾರೆ” ಎಂದರು.

2004ನೇ ಇಸವಿಯ ಜುಲೈ ತಿಂಗಳ ಮೊದಲ ಪಕ್ಷದಲ್ಲಿ, ಶ್ರಾವಣ ಮಾಸದ ಮುಂಜಾವಿನಲ್ಲಿ ಪ್ರೇಮ್ ಸುಭಾ ಎನ್ನುವ ನೇಪಾಳಿ ಯುವಕನೊಬ್ಬ ಕಟ್ಟಿಗೆಗಾಗಿ ಈ ದಟ್ಟ ಕಾಡಿನಲ್ಲಿ ಒಬ್ಬನೇ ಮರ ಕಡಿಯುತ್ತಿದ್ದ. ಗರಗಸದ ತುದಿಯಂಚಿಗೆ ಬಂದು ನಿಂತ ದೊಡ್ಡ ಕಾಂಡ ಬೀಳಲಿದೆ ಎಂದುಕೊಂಡ ದಿಕ್ಕಿನಲ್ಲಿ ಉರುಳದೆ ಅನಿರೀಕ್ಷಿತವಾಗಿ ವಿರುದ್ಧ ದಿಕ್ಕಿನಲ್ಲಿ ಮಲಗಿತು. ಆಶ್ಚರ್ಯದಿಂದ ಆತ ಗಮನವಿಟ್ಟು ನೋಡಿದಾಗ ಅಲ್ಲೇ ಈ ದೈತ್ಯಕಾರಾದ ಕರಿಶಿಲೆಯ ಶಿವ ಕಂಡ. ಸುತ್ತಲಿನ ನಿತ್ಯಹರಿದ್ವರ್ಣದ ಪರ್ವತಗಳ ಸಂಧಿಯಿಂದ ತೂರಿ ಬರುತ್ತಿದ್ದ ಕಿರಣದ ಹಂಗಿನಲ್ಲಿ ಭೋಲೆನಾಥನ ಪರಿವಾರವೇ ಈ ಶಿಲೆಯಲ್ಲಿ ಕಂಡಿತು. 25 ಮೈಲುಗಳಾಚೆಯ ಬಸ್ತಿಗೆ ಓಡಿ ಹೋಗಿ ಎಲ್ಲರಿಗೂ ವಿಷಯ ತಿಳಿಸಿದ. ಇಲ್ಲಿನ ವಿಶೇಷವೆಂದರೆ ಶಿವನ ಕಾಲ ಕೆಳಗೆ ಸತತವಾಗಿ ನೀರು ಹರಿಯುತ್ತಿದೆ. ತಜ್ಞರು ಅದರ ಮೂಲವನ್ನು ಗಂಗಾ ನದಿಗೆ ಆರೋಪಿಸಿರುವುದರಿಂದ ಅದನ್ನು ಗಂಗೆಯೇ ಎಂದು ನಂಬಲಾಗಿದೆ.

ಎಲ್ಲೆಡೆಯಲ್ಲಿ ಶಿವನ ಜಟೆಯಲ್ಲಿ ಇರುವ ಗಂಗಮ್ಮ ಇಲ್ಲಿ ತನ್ನ ಶಿರದಲ್ಲೇ ಅವನನ್ನು ಧರಿಸಿದ್ದಾಳೆ, ಭರಿಸುತ್ತಿದ್ದಾಳೆ. ನಂತರದ ದಿನಗಳಲ್ಲಿ ಪುರಾಣಜ್ಞರ ಅಧ್ಯಯನದಿಂದ ತಿಳಿದು ಬಂದಿದೆ ಈ ಲಿಂಗದ ಬಗ್ಗೆ ಶಿವಪುರಾಣದ 17ನೆಯ ಅಧ್ಯಾಯವಾದ ರುದ್ರಖಂಡದಲ್ಲಿ ಉಲ್ಲೇಖಿಸಲಾಗಿದೆ ಎಂದು. ಜ್ಯೋತಿರ್ಲಿಂಗ ರೂಪದಲ್ಲಿನ ಶಿವ ಅಘನಾಶನನೆನಿಸಿಕೊಂಡರೆ, ಅಗಾಧಾಕಾರದಲ್ಲಿ ನಿಂತು ಇಲ್ಲಿ ಇಷ್ಟಾರ್ಥ ಸಿದ್ದಿಸಿಕೊಡುತ್ತಾ ಸಿದ್ಧೇಶ್ವರನಾಥ ಎನಿಸಿಕೊಂಡಿದ್ದಾನೆ. “ಸಿದ್ಧಪೀಠದಲ್ಲಿ ನೆಲೆನಿಂತ ಇವನ ಕಥೆ ಕೇಳಿದರೂ ಜನ್ಮಾಂತರಗಳ ಪಾಪ ಪರಿಹಾರವಾಗುವುದು ಮಗಳೇ, ಅಂಥಾದರಲ್ಲಿ ನೀನು ಅಷ್ಟು ದೂರದಿಂದ ಇಲ್ಲಿ ಬಂದು ದರ್ಶನ ಪಡೆದಿದ್ದೀಯ. ನಿನಗೆ ಮೋಕ್ಷ ಸಿಗುವುದು ಖಾತರಿ” ಎಂದು ಹೇಳಿ ಆ ಪುರೋಹಿತರು ಅಲ್ಲಿಂದ ಹೊರಟಾಗ ಕಿರು ನಗುವೊಂದು ನನ್ನ ತುಟಿಯಂಚಿನಲ್ಲಿ ಅರಳಿತ್ತು.

ಮತ್ತೊಮ್ಮೆ ಸಿಕ್ಕ ಶಿವ ಗುಜರಾತಿನ ಬಿಲ್ಲಿಮೋರದಲ್ಲಿ ಸೋಮನಾಥನಾಗಿ. ನೆಲಮಟ್ಟದಲ್ಲಿ ಕರಿಕಲ್ಲಿನ ಲಿಂಗ ರೂಪದಲ್ಲಿ. ಹಿಂದೆ ಬಿಳಿ ಅಮೃತಶಿಲೆಯಲ್ಲಿ ಆಳೆತ್ತರಕ್ಕೆ ಅಲಂಕಾರ ಮಾಡಿ ಇರಿಸಿದ್ದ ಹೆಣ್ಣಿನ ಪ್ರತಿಮೆ. ಅಲ್ಲಿದ್ದ ಪಂಡಿತರು ಹೇಳಿದ್ದು, ಒಂದಾನೊಂದು ಕಾಲದಲ್ಲಿ ರಜಪೂತ ಸಿರಿವಂತನೊಬ್ಬನಿದ್ದ. ಅವನ ಬಳಿ ನೂರು ಹಾಲು ಕರೆಯುವ ಹಸುಗಳು. ಒಂದು ಹಸು ಮಾತ್ರ ಎರಡು ಹನಿ ಹಾಲು ಕೊಡಲೂ ಒಲ್ಲೆ ಎನ್ನುತ್ತಿತ್ತು. ಅವನ ಹೆಂಡತಿ ಪಾರ್ವತಿಯು ಕಾರಣ ಪತ್ತೆ ಮಾಡಿದಾಗ ಕಾಡಿನಲ್ಲಿದ್ದ ಲಿಂಗವೊಂದಕ್ಕೆ ನಿತ್ಯವೂ ಹಾಲುಕೊಡುತ್ತಿದ್ದ ಆ ಹಸುವಿನ ಬಳಿ ಇವರಿಗೆ ಕೊಡಲು ಏನೂ ಇರುತ್ತಿರಲಿಲ್ಲ. ವಿಸ್ಮಯ ಕಂಡವಳು ನಿತ್ಯವೂ ಭಕ್ತಿಭಾವದಿಂದ ಆ ಲಿಂಗಕ್ಕೆ ಪೂಜೆ ಮಾಡುತ್ತಾಳೆ.

ಹೆಂಡತಿ ದಿನವೂ ಹೋಗುವುದಾದರೂ ಎಲ್ಲಿಗೆ ಎನ್ನುವ ರಹಸ್ಯ ಪತ್ತೆ ಮಾಡಲು, ಗಂಡ ಹಿಂದೆಯೇ ಬಂದು ಅನುಮಾನದಿಂದ ಕತ್ತಿ ಎತ್ತಿದಾಗ ಅವಳು ಹೆದರಿ ಲಿಂಗದೊಳಗೆ ಒಂದಾಗುತ್ತಾಳೆ. ಅವಳನ್ನು ತನ್ನೊಳಗೆ ಸೇರಿಸಿಕೊಳ್ಳಲು ಲಿಂಗ ಬೆಳೆಯಿತು. ನೆತ್ತಿಯಲ್ಲಿ ಇಂದಿಗೂ ಅವಳ ತಲೆಗೂದಲು ಇದೆ. ಅದಕ್ಕೆ ಶಿವರಾತ್ರಿಯಂದು ತುಪ್ಪದಿಂದ ಶಿವನ ಮುಖವಾಡ ಮಾಡಿ ಇಡಲಾಗುತ್ತದೆ. ಇದು ಐತಿಹ್ಯ. ಶಿಫಾನ್ ಸೀರೆಯುಟ್ಟು ಉದ್ದ ಕೂದಲು ಹರಡಿ ನಿಂತಿರುವ ಪಾರ್ವತಿಗಿಂತ ನನ್ನ ಗಮನ ಸೆಳೆದದ್ದು, ಅಲ್ಲಿನ ಪುರೋಹಿತರು "ಈಗಿನಂತೆ ಆಗಲೂ ಗಂಡಸು ಹೆಂಡತಿಯನ್ನು ನಂಬುತ್ತಿರಲಿಲ್ಲ" ಎಂದು ಹೇಳಿದ್ದು. ಏನು ಮಾಡಲಿ ಎಲ್ಲಿ ಹೋದರೂ ಭೋಲೇನಾಥ ಭಾವ ಜನ್ಮಕ್ಕಂಟಿದ ಜಾಢ್ಯದಂತೆ!

************


Comments

Post a Comment

Popular posts from this blog

Livin Relationship ಬಗ್ಗೆ ಸಮಗ್ರ ಕಾನೂನು ಮಾಹಿತಿ

ಅಲಹಾಬಾದ್ ಹೈಕೋರ್ಟ್ on Living Relationship

ಅವಳ ಇವಳ ಸುತ್ತ - Book read