ಕಂಡಷ್ಟೂ ಪ್ರಪಂಚ - review

 

ಪುಸ್ತಕ ಪರಿಚಯ ೧೬೨: ಕಂಡಷ್ಟೂ ಪ್ರಪಂಚ

ಲೇಖಕರು: ಅಂಜಲಿ ರಾಮಣ್ಣ


ಪುಸ್ತಕಗಳು ಆಗಷ್ಟೇ ಗಮನ ಸೆಳೆಯುತ್ತಿದ್ದ ಬಾಲ್ಯದ ದಿನಗಳು ಎಂಬತ್ತರ ದಶಕ, ಆಗ "ಸುಧಾ" ವಾರಪತ್ರಿಕೆಯಲ್ಲಿ ಕನ್ನಡದ ಹಿರಿಯ ಲೇಖಕಿ ನೀಳಾದೇವಿಯವರ ಅಮೆರಿಕಾ ಪ್ರವಾಸ ಕಥನ ಧಾರಾವಾಹಿಯಾಗಿ ಬರುತ್ತಿತ್ತು (ಅದೂ ಮಕ್ಕಳ ಪುಟಗಳ ಆಸುಪಾಸಿನ ಪುಟಗಳಲ್ಲಿ). ಹೀಗಾಗಿ  ಗಮನ ಸೆಳೆದು ಓದಿಸಿಕೊಂಡ ಮೊದಲ ಪ್ರವಾಸ ಕಥನ ಅದು!!  ನಾವು ಕಂಡಿರದ ಇನ್ನೊಂದು ಸ್ಥಳಕ್ಕೆ ಭೇಟಿ ನೀಡಿ, ಆ ಪಯಣದ ಅನುಭವವನ್ನು ದಾಖಲಿಸಿ, ಓದುಗರರಲ್ಲಿ ಆಸಕ್ತಿ ಮೂಡಿಸಿ, ಅವರೂ ಆ ಪ್ರವಾಸ ಮಾಡುವಂತೆ ಪ್ರೇರೇಪಿಸುವುದಿರಲಿ, ಪ್ರವಾಸ ಮಾಡಲಾಗದಿದ್ದವರೂ ಮಾನಸಿಕವಾಗಿ ಆ ಅನುಭವವನ್ನು ಗಳಿಸುವಂತೆ ಮಾಡುವ ಈ ಸಾಹಿತ್ಯ ನಿಜಕ್ಕೂ ವಿಶಿಷ್ಟವೇ ಸರಿ. 

ಪ್ರವಾಸ ಸಾಹಿತ್ಯದಲ್ಲಿ ನೋಡಿ ಅನುಭವಿಸಿದ್ದನ್ನು ಹಾಗೇ ದಾಖಲಿಸುವುದು ಒಂದು ಬಗೆ. ಪ್ರಸಿದ್ಧ ಸಾಹಿತಿಗಳಾದ ಗೊರೂರು, ಬೀಚಿ, ಟಿ.ಕೆ.ರಾಮರಾವ್, ಬಿ.ಜಿ.ಎಲ್ ಸ್ವಾಮಿ ಆ ದಿನಗಳಲ್ಲೇ ಇಂಥಹ ಕೃತಿ ನೀಡಿದವರು. ಇನ್ನು ಬರಿಯ ಪ್ರವಾಸದ ಅನುಭವಕ್ಕಷ್ಟೆ ಪ್ರಾಶಸ್ತ್ಯ ನೀಡದೆ ಆ ಸ್ಥಳಗಳ ಬಗೆಗೆ ಆಳವಾಗಿ ಕಲೆಹಾಕಿದ ಮಾಹಿತಿಗಳನ್ನೂ ಒಗ್ಗೂಡಿಸಿ, ಪ್ರವಾಸಾನುಭವದೊಂದಿಗೆ ಹೊಸೆದು ಓದುಗರರ ಆಸಕ್ತಿಯ ಆಯಾಮವನ್ನು ಹಿಗ್ಗಿಸಿ, ಓದಿದ ನಂತರವೂ ಇನ್ನಷ್ಟು ಅರಿಯಲು ಪ್ರಯತ್ನ ಪಡುವಂತೆ ಮಾಡುವುದು ಪ್ರವಾಸಿ ಸಾಹಿತ್ಯದ ಇನ್ನೊಂದು ಶೈಲಿ. 

ನೇಮಿಚಂದ್ರ ಅವರ ಕೃತಿಗಳು ಈ ಎರಡನೆಯ ಪ್ರಕಾರಕ್ಕೆ ಸೇರುತ್ತದೆ. ಇವೆರಡರ ಹೊರತಾದ ವಿಭಿನ್ನ ಪ್ರವಾಸ ಕಥನ ನಮ್ಮ ಇಂದಿನ ಪರಿಚಯ. ತಾವು ಭೇಟಿ ಇತ್ತ ಅನೇಕ ಸ್ಥಳಗಳ ಐತಿಹಾಸಿಕ, ಭೌಗೋಳಿಕ, ಸಾಂಸ್ಕೃತಿಕ ಮಾಹಿತಿಗಳ ಸ್ಥೂಲನೋಟ ನೀಡಿ, ಅಲ್ಲಿ ಭೇಟಿಯಾದ ವ್ಯಕ್ತಿಗಳ, ಅವರೊಂದಿಗೆ ಹಂಚಿಕೊಂಡ ಕ್ಷಣಗಳು, ಕಂಡು ಅನುಭವಿಸಿದ ಗಂಭೀರ ಘಟನೆ,  ಅವು ಮೂಡಿಸಿದ ಅನುಭೂತಿಯನ್ನು ಲಘುಬರಹಗಳ ರೂಪದಲ್ಲಿ ಓದಿಸುತ್ತಾ ಓದುಗರರ ಮನದಲ್ಲೂ ಅದೇ ಭಾವ ಮೂಡಿಸುವ ಶೈಲಿಯದು  ಈ ಪುಸ್ತಕ "ಕಂಡಷ್ಟೂ ಪ್ರಪಂಚ". 


ಲೇಖಕಿ ಅಂಜಲಿ ರಾಮಣ್ಣ ವೃತ್ತಿಯಲ್ಲಿ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ವಕೀಲರು. ಅಂಕಣಕಾರರು ಮತ್ತು ಬರಹಗಾರರು. ತಮ್ಮ ಪ್ರವಾಸದ ಅನುಭವಗಳ ಸಾರವನ್ನು ನಲವತ್ತು ಲವಲವಿಕೆಯಿಂದ ಕೂಡಿದ ಅಧ್ಯಾಯಗಳನ್ನಾಗಿಸಿದ್ದರೆ.  

ಡಾರ್ಜಿಲಿಂಗ್ ಪ್ರವಾಸ, ಅಲ್ಲಿ ತಾವು ತೇನಸಿಂಗ್ ಅವರ ಮನೆ ಹುಡುಕಿ ತೇನಸಿಂಗರ ಸೊಸೆಯ ಭೇಟಿಮಾಡಿದ್ದರಿಂದ ಶುರುವಾಗುತ್ತದೆ. ಗೌಹಾಟಿಯ ಪ್ರವಾಸದಲ್ಲಿ ಭುಪೇನ್ ಹಜಾ಼ರಿಕಾ ಅವರ ಸಮಾಧಿಯನ್ನು ನೋಡಿದ ಕ್ಷಣಗಳು. ಲಖನೌ ಮತ್ತು ಬಿರ್ಜುಮಹಾರಾಜರ ಭೇಟಿ, ತನ್ನ ಒಡೆಯನ ಮೇಲೆ ಅಪಾರ ಪ್ರೀತಿ ತೋರಿದ ಎಡಿನ್ ಬರೋದ ಬಾಬಿ ಸ್ಮಾರಕ, ಉತ್ತರ ಪ್ರದೇಶದ ಬಾರಾಬಂಕಿಯಲ್ಲಿರುವ ಬೃಹದ್ ಪಾರಿಜಾತ ವೃಕ್ಷ ತರುವ ಅಚ್ಚರಿ, ಜರ್ಮನಿಯ ರಮ್ಯ ಸ್ಥಳ ಒಬರಮೆರ್ಗಾವ್ ಅಲ್ಲಿನ ದ ಪ್ಯಾಷನ್ ಪ್ಲೇ ಥಿಯೇಟರ್ ಅಲ್ಲಿ ಕ್ರಿಸ್ಮಸ್ ಸಮಯದಲ್ಲಿ ನಡೆಯುವ ನಾಟಕೋತ್ಸವ, ಮೇರಿಮಾತೆಯ ಪಾತ್ರದ ಆಯ್ಕೆಯ ಪ್ರಕ್ರಿಯೆ, ಕೇದಾರ ಝೀರೋ ಮತ್ತು ಬಿಲ್ಲಿಮೋರಾದ ಶಿವದೇಗುಲಗಳ ದರ್ಶನ, ಬಿಕನೇರ್ ಜಿಲ್ಲೆಯ ಗ್ರಾಮಗಳ ಪ್ರವಾಸ ಅಲ್ಲಿ ಅಂಬಾನಿಯ ಹುಟ್ಟಿದೂರು, ಬದರೀನಾಥದ ಬಳಿಯ ಭಾರತದ ಕಡೆಯ ಗ್ರಾಮ, ವಿದೇಶಿ ಗ್ರಂಥಾಲಯಗಳ ಭೇಟಿ, ಶ್ರೀಲಂಕಾ ಪ್ರವಾಸ, ಅಮೃತಸರಕ್ಕೆ ಭೇಟಿನೀಡಿದ ಅನುಭವಗಳು, ದೋಹಾದ ಮಹಿಳೆಯರು ನಡೆಸುವ ಮಾರುಕಟ್ಟೆ, ಟ್ಯಾಗೋರರು ತಮ್ಮ ಗೀತಾಂಜಲಿ ಕೃತಿಯನ್ನು ಬರೆದ ಸ್ಥಳ ಭೂತಾನಿನ ಕೆಲಿಪಾಂಗ್ ಅಲ್ಲಿ ಟ್ಯಾಗೋರರು ನೆಲಿಸಿದ್ದ ಮನೆ ಹುಡುಕಿದ್ದು, ವಾಷಿಂಗ್ಟನ್ ಡಿಸಿಯ ಮಾರ್ಟಿನ್ ಲೂಥರ್ ಕಿಂಗ್ ಸ್ಮಾರಕ, ಫ್ಲಾರೆನ್ಸ್ ನೈಟಿಂಗ್‌ಗೇಲ್ ಸ್ಮರಣಾರ್ಥವಾಗಿರುವ ಮ್ಯೂಸಿಯಮ್, ಚಿಕ್ಕಮಗಳೂರು ದತ್ತಪೀಠ ಹಿರೇಮಗಳೂರು ದೇಗುಲ, ಅಂಡಮಾನ್ ಪ್ರವಾಸ, ಜೋಧಪುರದ ಕೋಟೆ ಅಲ್ಲಿ ಜೋಹರ್ ಹೋದ ಸ್ಥಳ, ಮೌಂಟ್ ಅಬು, ‌ಆಲ್ಮೋರಾ ನೈನಿತಾಲ್‌ಗಳ ಭೇಟಿ, ಇರಾನಿನ ಪ್ರವಾಸ ಆಗ ವಿಮಾನಯಾನದಲ್ಲಿ ನಡೆದ ಘಟನೆ, ಕೇಂಬ್ರಿಡ್ಜ್ ಬೇಟಿ ಗುರುತ್ವಾಕರ್ಷಣೆಯ ತತ್ವಗಳ ಅನ್ವೇಷಣೆಯತ್ತ ನ್ಯೂಟನ್ ಚಿತ್ತ ಸೆಳೆದ ಸೇಬಿನ ಮರ, ಲೇಹ್ ಲಡಾಕಿನ ಭೇಟಿಯಲ್ಲಿ ಕಂಡ ಸೈನಿಕರ ಹಾಲ್ ಆಫ್ ಫೇಮ್, ಉಲ್ಫಾ ಉಗ್ರರು ನಡೆಸಿದ ಸ್ಫೋಟಕ್ಕೆ ಸಾಕ್ಷಿಯಾಗಿರುವ ಸ್ಥಳ, ಮಾರಿಷಸ್‌ನ ಪ್ರವಾಸಿ ತಾಣ, ವಿವಿಧ ಪ್ರವಾಸಗಳಲ್ಲಿ ಕಂಡ ರಾಷ್ಟ್ರಪಿತನ ಮೂರ್ತಿಗಳು, ಕಾಮಾಖ್ಯ ದೇಗುಲದ ಭೇಟಿ, ದಲೈಲಾಮ ಅವರ ಭೇಟಿ, ಬಾಜಿರಾಯನ ಪ್ರಿಯತಮೆ ಮಸ್ತಾನಿಯ ಸಮಾಧಿ ನೋಡಿದ್ದು, ಪುಟ್ಟಪರ್ತಿಯ ಸಾಯಿಬಾಬ ನೋಡಿದ್ದು, ಕುಂಭಮೇಳದ ಭೇಟಿ ಹೀಗೆಲ್ಲಾ ವೈವಿಧ್ಯತೆಯ ಪ್ರವಾಸಾನುಭವಗಳೇ ತುಂಬಿದೆ. 

ಓದುತ್ತಾ ಹೋದಂತೆ ಆ ಪ್ರವಾಸಾನುಭವ ನೀಡುವ ಅಪಾರ ಮಾಹಿತಿಯ ಅರಿವು ಮೂಡುತ್ತದೆ. ಇದರಲ್ಲಿ ಉಲ್ಲೇಖಿಸಿದ ಬಹಳಷ್ಟು ವಿಷಯಗಳು ಈ ಪುಸ್ತಕ ಓದುವವರೆಗೂ ಗೊತ್ತೇ ಇರಲಿಲ್ಲ. ಇನ್ನು ತಾವು ಗಳಿಸಿದ ಪ್ರವಾಸಾನುಭವದಿಂದ ಬಹಳಷ್ಟು ಉಪಯುಕ್ತ ಸಲಹೆಗಳಿಗಾಗಿ ಕೊನೆಯ ಅಧ್ಯಾಯ ಮೀಸಲು. ಒಟ್ಟಿನಲ್ಲಿ ಒಂದು ವಿಭಿನ್ನ ಪ್ರವಾಸ ಸಾಹಿತ್ಯವನ್ನೂ ಮೀರಿದ ಕೃತಿ ಇದು. ದೇಶ ಸುತ್ತಲಿಕ್ಕಾಗದಿದ್ದರೂ ಕೋಶವನ್ನು ಓದಿ ಒಂದು ಮಟ್ಟಿಗಾದರೂ ಆ ಅನುಭವ ಪಡೆಯ ಬಯಸುವವರಿಗೆ ನಿರಾಶೆ ಮಾಡದು.

- Girish AV

Comments

Popular posts from this blog

ಆತ್ಮಹತ್ಯೆ ಬೆದರಿಕೆ - Law Point

ಸವಾಲು ದಾಟುವ ಸಂಭ್ರಮ in VK

Police Notice in ಪ್ರಜಾವಾಣಿ