ಆಧುನಿಕತೆ ಮತ್ತು ಸಮಾನತೆ - Oneindia Kannada


 ಮಹಿಳಾ ದಿನಾಚರಣೆಗೆ Oneindia kannada ಈ ಅಂತರ್ಜಾಲ ಪತ್ರಿಕೆಯಲ್ಲಿ ಬರೆದ ಲೇಖನ. ಓದಿ ಅಭಿಪ್ರಾಯ ತಿಳಿಸಿ 🙏

*******

 ಆಧುನಿಕ ಕುಟುಂಬವೆಂದರೆ ಯಾವುದು ಎನ್ನುವ ಪ್ರಶ್ನೆಯೊಂದಿಗೇ ಲಿಂಗತಾರತಮ್ಯದ ವಾಸ್ತವವನ್ನು ನಿಕಷಕ್ಕೆ ಒಳಪಡಿಸಬೇಕಿರುತ್ತದೆ. ಹೆಚ್ಚಿನ ವಿದ್ಯಾವಂತರ  ಕುಟುಂಬ ಆಧುನಿಕವೋ ಅಥವಾ ಆರ್ಥಿಕ ಸ್ಥಿತಿಯಲ್ಲಿ ಉತ್ತಮವಾಗಿರುವವರು ಆಧುನಿಕರೋ.  


ವಿದ್ಯೆ ಮತ್ತು ಹಣಗಳಿಕೆಗೆ ಸಮನಾದ ಅನುಪಾತವಿಲ್ಲದ ಈ ಕಾಲಘಟ್ಟದಲ್ಲಿ ದಿನಮಾನಕ್ಕೆ ತಕ್ಕಂತೆ ಹೊಂದಿಕೊಳ್ಳುವ ಮತ್ತು ಮಾನವೀಯ ಗುಣಗಳನ್ನು ಅಳವಡಿಸಿಕೊಂಡಿರುವ ಮನೋಭಾವವನ್ನು ’ಆಧುನಿಕತೆ ’ ಎಂದು ಒಪ್ಪಿಕೊಳ್ಳಲಾಗದ ದ್ವಂದ್ವದಲ್ಲಿ ಸಾಗುವಳಿ ಕಾಣುತ್ತಿದೆ ಇಂದಿನ ಸಮಾಜ.

 

ಸ್ನೇಹಿತೆಯೊಬ್ಬಳು ಪ್ರತಿಷ್ಟಿತ  ಸಂಸ್ಥೆಯಲ್ಲಿ ವಿಜ್ಞಾನಿ. ಗಂಡ ಭೌತಶಾಸ್ತ್ರದ ಪ್ರಾಧ್ಯಾಪಕ.  ಮಗ ವಿದೇಶದಲ್ಲಿ ಇಂಜಿನಿಯರ್. ಕಾಲೇಜು ಓದುತ್ತಿರುವ ಮಗಳು. ಮೆಟ್ರೋ ನಗರದಲ್ಲಿ ವಾಸವಿರುವ ಕುಟುಂಬ ಮೇಲ್ನೋಟಕ್ಕೆ ಆಧುನಿಕವೇ ಹೌದು. ಮಗಳನ್ನು ಮುಟ್ಟಿನ ದಿನದಲ್ಲಿ ಮನೆಯ ಮುಂಭಾಗದಲ್ಲಿ ಇರುವ ಕೋಣೆಯಲ್ಲಿ ಮೂರು ದಿನ ಇರಬೇಕು ಎನ್ನುವ ಆಚರಣೆಯನ್ನು ಆಕೆ ಮೈನೆರೆದ ದಿನದಿಂದಲೂ ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ.


 ’ಇದೇನು ಈಗಿನ ಕಾಲದಲ್ಲೂ ಅದೂ ನಿಮ್ಮ ಮನೆಯಲ್ಲಿ ಹೀಗ್ಯಾಕೆ?’ ಎಂದು ಕೇಳಿದಾಗ ಬಂದ ಉತ್ತರ ’ನನಗದರಲ್ಲಿ ನಂಬಿಕೆಯಿಲ್ಲ ಆದರೇನು ಮಾಡಲಿ ಗಂಡ ಒಪ್ಪುವುದಿಲ್ಲ. ನನಗೆ ಸಂಸಾರದಲ್ಲಿ ನೆಮ್ಮದಿ ಬೇಕು. ಹಾಗಾಗಿ ಅವರು ಹೇಳಿದ್ದನ್ನು ಕೇಳಿಬಿಡುತ್ತೇನೆ’.

 

ಇಲ್ಲಿ ಆ ಯುವತಿ ಮೂರು ದಿನ ಹೊರಗೆ ಕೂರುವುದರ ಬಗ್ಗೆ ಒಪ್ಪಿಗೆ, ವಿರೋಧಗಳು  ಸರಣಿಯಲ್ಲಿ  ಮುಂದುವರೆಯಬಹುದು ಆದರಿಲ್ಲಿ ಕಂಡಿದ್ದು ಆಕೆ ಹೇಳಿದ  ’ನನಗೆ ಸಂಸಾರದಲ್ಲಿ ನೆಮ್ಮದಿ ಬೇಕು ಹಾಗಾಗಿ ಅವರು ಹೇಳಿದ್ದನ್ನು ಕೇಳಿಬಿಡುತ್ತೇನೆ’ ಎನ್ನುವ ಮಾತು. 


ಬಹುಪಾಲು ಜನರ ಕನಸಿನಲ್ಲೂ ಬರಲಾರದಷ್ಟು ವಿದ್ಯಾಭ್ಯಾಸವಿದ್ದೂ, ಆರ್ಥಿಕ ಸ್ವಾತಂತ್ರ್ಯವಿದ್ದೂ ಮಹಿಳೆಯೊಬ್ಬಳು ತನ್ನ ಅಭಿಪ್ರಾಯವನ್ನು ಕುಟುಂಬದ ಒಳಗೇ ಹೇಳಲಾರಳು ಅಥವಾ ಹೇಳಲು ಹಿಂಜರಿಯುವಳು ಎಂದರೆ ವಿದ್ಯಾಭ್ಯಾಸವು ಆಧುನಿಕತೆ ಮತ್ತು ಸಮಾನತೆಯನ್ನು ತಂದುಕೊಡುತ್ತದೆ ಎನ್ನುವ ಭರವಸೆಯೇ ಅದೆಷ್ಟು ಪೊಳ್ಳು. 

 

ಒಮ್ಮೆ ಊರ ಗೌಡರೊಬ್ಬರು ತಮ್ಮ ಮಗಳ ಕೌಟುಂಬಿಕ ವಿಷಯದಲ್ಲಿ ಕಾನೂನು ಸಲಹೆ ಪಡೆಯಲು ಹೆಂಡತಿ ಮತ್ತು ಕುಟುಂಬದ ಹತ್ತಾರು ಸದಸ್ಯರುಗಳೊಡನೆ ಕಚೇರಿಗೆ ಬಂದಿದ್ದರು. ಎಲ್ಲರೂ ಒಳ್ಳೊಳ್ಳೆ ಜರತಾರಿ ಬಟ್ಟೆ  ಸೀರೆಗಳನ್ನು ಉಟ್ಟು ಒಡವೆ ವಸ್ತ್ರ ಜೋರಾಗಿ ಧರಿಸಿ ಬಂದಿದ್ದರು. ಮೂರು ದೊಡ್ಡ ಕಾರುಗಳಲ್ಲಿ ಬಂದಿಳಿದವರು ಶ್ರೀಮಂತಿಕೆಯನ್ನು ಹೆಜ್ಜೆಯ ಧೂಳಿನಲ್ಲಿ ಹಾರಿಸಿಕೊಂಡೇ ಬಂದು ಎದುರು ಕುಳಿತಿದ್ದರು. 


ಅರ್ಧ ಗಂಟೆಯ ನಂತರ  ಆಕೆಯು ಬೆವರುತ್ತಿದ್ದರು. ತುಟಿಗಳು ಪೇಲವವಾಗಿ ಕಣ್ಣುಗಳು ತೇಲುವಾಗ ಅವರ ದೇಹದಲ್ಲಿ ಸಕ್ಕರೆ ಇಳಿತವಾಗಿದ್ದನ್ನು ಗಮನಿಸಿ ತಕ್ಷಣ ಏನು ಉಪಚಾರ ಮಾಡಬೇಕಿತ್ತೋ ಅದನ್ನು ಮಾಡಿದ್ದಾಯ್ತು.


 ’ಅಲ್ಲ್ರೀ ತಾಯಿ ಶುಗರ್ ಇದೆ, ಮಾತ್ರೆ ತೊಗೋತೀನಿ ಅಂತೀರಾ ಮತ್ತೆ ಸರಿಯಾಗಿ ತಿಂದು ಬರೋದಲ್ಲ್ವಾ’ ಎಂದೆ. ಆಕೆ ಕೂಡಲೇ ’ಇವರು ತಿನ್ನದೆ ನಾನೇನೂ ತಿನ್ನಲ್ಲ, ಆದರೆ ಇವತ್ಬೆಳಿಗ್ಗೆ ಇವರು  ನಾಷ್ಟ ಬೇಡ ಅಂದ್ಬಿಟ್ಟ್ರು. ಅದಕ್ಕೆ ನಾನೂ ತಿನ್ನಲಿಲ್ಲ’ ಎಂದು ಗಂಡನನ್ನು ನೋಡಿದಾಗ ಆ ಕುಟುಂಬದ ಬ್ಯಾಂಕ್ ಬ್ಯಾಲೆಂನ್ಸಿನ  ತೂಕ ಟೇಬಲ್ ಮೇಲಿದ್ದ ಪೆನ್ನು ಪೇಪರ್ಗಳಲ್ಲಿ ಕಾಣುತ್ತಿತ್ತು.  


ಉತ್ತರದ ಯಾವುದೋ ಹಳ್ಳಿಯಿಂದ ಬಂದಿದ್ದ ಹಣಕಾಸು ಗಟ್ಟಿ ಇಲ್ಲದ ಸಂಸಾರದ ಗುಂಪೊಂದು ಕುಂಭಮೇಳದಲ್ಲಿ ಬಿಸಿಲಿನಲ್ಲಿ ತಲೆ ಮೇಲೆ ಸೆರಗ್ಹೊದ್ದು ರಸ್ತೆಯ ಕಲ್ಲುಗಳನ್ನೇ ಒಲೆ ಮಾಡಿಕೊಂಡು ಅಡುಗೆ ಮಾಡುತ್ತಿತ್ತು.  ಕೈಜೋಡಿಸಿದ ನಾನು ’ಬನ್ನಿ ಎಲ್ಲರೂ ಒಟ್ಟಿಗೆ ಊಟ ಮಾಡೋಣ’ ಎಂದಾಗ ಅವರುಗಳು ತಮ್ಮತಮ್ಮ ಗಂಡಂದಿರು ಉಣ್ಣದೆ ತಾವು ತಿನ್ನಲಾರೆವು ಎಂದಿದ್ದರು. ಹಾಗಾದರೆ ಮೇಲುಕೀಳಿನ ಈ ಮನೋಭಾವಕ್ಕೆ ಉಳ್ಳವರು, ಬಡವರು ಎನ್ನುವ ಭೇದಭಾವ ಇಲ್ಲವೆನ್ನುವುದಂತೂ ಖಾತರಿಯಾಯಿತು.

 

ಇಂದಿಗೂ ಉದ್ಯೋಗಸ್ಥ ಮಹಿಳೆ ತನ್ನ ದುಡಿಮೆಗೆ ಗಂಡನಿಗೆ ಲೆಕ್ಕ ಒಪ್ಪಿಸಬೇಕು, ಆಸ್ತಿ ಖರೀದಿ ಮಾಡಲಾರಳು. ತನ್ನಿಷ್ಟ ಬಂದ ಹಾಗೆ ಖರ್ಚು ಮಾಡುವುದಿರಲಿ ತನ್ನ ಗಂಡನ ಸಾಲಕ್ಕೆ ಕಡ್ಡಾಯವಾಗಿ ತಾನೇ ಸಹಸಾಲಿಗಳಾಗಬೇಕು. ನಿಗದಿತ ಸಮಯಕ್ಕೆ ಮನೆಗೆ ಬರದಿದ್ದರೆ  ಕಾಲಿಂಗ್ ಬೆಲ್ ಕೂಡ ಪ್ರಶ್ನೆ ಮಾಡತ್ತೆ. ಮಕ್ಕಳ, ಮನೆಯ ಆಗುಹೋಗುಗಳಿಗೆ ಇವಳು ರಜೆ ತೆಗೆದುಕೊಳ್ಳಬೇಕು, ಹಿರಿಯರ ಮಾತಿಗೆ ಕಿವಿಯಾಗಬೇಕು. 


ಮಹಿಳಾ ದಿನಾಚರಣೆ ಎನ್ನುತ್ತಾ ಹೋಟೇಲುಗಳ ಟೇಬಲ್‍ಗಳಲ್ಲಿ ಹರವಿಕೊಳ್ಳುವ, ಪಬ್‍ನ ಲೋಟಗಳಲ್ಲಿ ಸುರುವಿಕೊಳ್ಳುವ, ಮಾಲ್‍ಗಳ ಅಂಗಡಿಗಳಲ್ಲಿ ಡಿಸ್ಕೌಂಟ್‍ಗೊಳುವ ಮಹಿಳೆಯರು ಮಾತ್ರ ಕಣ್ಣಿಗೆ ಬೀಳುತ್ತಾರೆ ಆದರೆ ಹಿಂದೆಯೇ ಇದ್ದು ಎಂದೂ ಹಿಂದಾಗಿ ಬಿಡುವ ಅಸಂಖ್ಯಾತ ಮಹಿಳೆಯರು ಆಧುನಿಕ ಎನಿಸಿಕೊಂಡ ಕುಟುಂಬಗಳಲ್ಲಿಯೇ ಇದ್ದಾರೆ. ಅಂತವರಿಗೆ ಹೆಂಡತಿ, ತಾಯಿ, ಮಗಳು, ಅಕ್ಕ, ತಂಗಿ ಎನ್ನುವ ಶೀರ್ಷಿಕೆಗಳೂ ಇರುತ್ತವೆ. 

 

ಎಲ್ಲಿಯವರೆಗೂ ’ಮಹಿಳೆ’ ಎನ್ನುವ ಪ್ರತ್ಯೇಕ ಕೂಗು ಕೇಳಿಸುವುದೋ ಅಲ್ಲಿಯವರೆಗೂ ಲಿಂಗತಾರತಮ್ಯ ಕಾಣಿಸುವುದು. ಎಲ್ಲಿಯವರೆಗೂ ’ಗಂಡಸು’ ಎನ್ನುವ ಅಹಂ ಆಡುವುದೋ ಅಲ್ಲಿಯವರೆಗೂ ಮೇಲುಕೀಳು ಎನ್ನುವ ಅನುಭವ ಆಗಿಯೇ ತೀರುವುದು. 


ವಿದ್ಯೆ, ಹಣಗಳಿಕೆಯನ್ನು ಸಮಾನತೆಯತ್ತ ಕೊಂಡೊಯ್ಯುವ ಮಾಂತ್ರಿಕ ದಂಡ ಎಂದುಕೊಂಡಿರುವುದು ದುರಂತ.  


ಸಹಬಾಳ್ವೆ ಎನ್ನುವ ಮನೋಭಾವ ಆಧುನೀಕತೆಯ ಪರ್ಯಾಯ ವ್ಯಾಖ್ಯಾನವಾದಾಗ ಅವನು ಅವಳು ಇಬ್ಬರೂ ಹೇಳಿಕೊಳ್ಳಬಹುದು  ’ನಾನೂ ಕ್ಷೇಮ ನೀನು ಕ್ಷೇಮ’

****************************

Comments

Popular posts from this blog

ಆತ್ಮಹತ್ಯೆ ಬೆದರಿಕೆ - Law Point

ಸವಾಲು ದಾಟುವ ಸಂಭ್ರಮ in VK

Police Notice in ಪ್ರಜಾವಾಣಿ