On Period leave

 



ಅವತ್ತು ಎವಿಡೆನ್ಸ್ ಆಕ್ಟ್ ನ ಅಂತಿಮ ಪರೀಕ್ಷೆ. ಈ ಬಾರಿ ಅವನಿಗಿಂತ ಎರಡಾದರೂ ಮಾರ್ಕ್ಸ್ ಹೆಚ್ಚು ತೆಗೆಯಲೇ ಬೇಕು ಎಂದುಕೊಂಡು ಓದಿದ್ದೆ. ಆತ್ಮವಿಶ್ವಾಸ ತುಂಬಿ ತುಳುಕುತ್ತಿತ್ತು. ವಿಸ್ಪರ್ ಧರಿಸಿಯೇ ಹೋಗಿದ್ದೆ. ಅದು ಶುರುವಾಗುವಷ್ಟರಲ್ಲಿ ಪರೀಕ್ಷೆ ಮುಗಿದಿರತ್ತೆ ಎನ್ನುವ ಹರೆಯದ ಹುಮ್ಮಸ್ಸಿನ ನಂಬಿಕೆ. ಬರೆಯಲು ಶುರು ಮಾಡಿ 20 ನಿಮಿಷವೂ ಇಲ್ಲ ಶುರುವಾಯ್ತು ಬೊಳಕ್ಬೊಳಕ್!

ಆ ದಿನಗಳಲ್ಲಿ ಬಹಳ ಹೊಟ್ಟೆನೋವು ಬರುತ್ತಿತ್ತು, ಕಣ್ಣ್ಕತ್ತಲಿಡುತ್ತಿತ್ತು. ಕೈಕಾಲು ತಣ್ಣಗಾಗುತ್ತಿದ್ದವು, ಒದ್ದಾಡಿ ಒದ್ದಾಡಿ ಒದ್ದಾಡಿದ ನಂತರ ವಾಂತಿ ಆಗುತ್ತಿತ್ತು. ಕೂಡಲೇ ನಾನಾಗ ಪೊರೆ ಕಳಚಿದ ಹಾವು, ಸರಬರನೆ ನನ್ನ ಬಿಟ್ಟರೆ ಜಗತ್ತಿಲ್ಲ ಎಂದು ಎದ್ದು, ಕೂತು, ಓಡಿ ಹಾರಾಡುತ್ತಿದ್ದೆ.

ಬರೆಯುತ್ತಿದ್ದ ಹಾಳೆ ಮೇಲೆ ಪೆನ್ನು ದಬಕ್ ಅಂತು. ಕಣ್ಣು ಮೇಲ್ಮೇಲಾಗುತ್ತಿದೆ. “ಸರ್, ನನಗೆ ಬ್ರೇಕ್ ಬೇಕು “ ಎಂದಿದ್ದಷ್ಟೇ ಧೊಪ್ಪ್ ಅಂತ ಬಿದ್ದೆ. ಮುಂದಿನ ಕ್ಷಣದಲ್ಲಿ ಪಕ್ಕದಲ್ಲಿಯೇ ಇದ್ದ ಸ್ಟ್ಯಾಫ್ ರೂಮ್‍ನ ನೆಲದ ಮೇಲಿನ ಹಾಸಾಗಿದ್ದೆ. ಸಹಾಯಕ ಪ್ರಭುಸ್ವಾಮಿ ನೀರು ಕೊಡುತ್ತಿದ್ದ. ಸಿದ್ದ್ಲಿಂಗು ಪಪ್ಪನಿಗೆ ಫೋನ್ ಮಾಡುತ್ತಿದ್ದ. ಪೊಲಿಟಿಕಲ್ ಸೈನ್ಸ್ ಅಧ್ಯಾಪಕ ರಾಜಣ್ಣ ಅವರು “ಈಗಿನ ಕಾಲದ ಹುಡುಗೀರು ಪೀರಿಯಡ್ಸ್ ಮುಂದೂಡಲು ಏನೇನೋ ಮಾತ್ರೆ ತೊಗೋತಾರೆ ಅದಕ್ಕೆ ನೋಡಿ ಹೀಗೆಲ್ಲಾ ಆಗತ್ತೆ” ಎಂದು ಹೇಳುತ್ತಿರೋದು ಕೇಳಿಸುತ್ತಿದೆ. “ಇಲ್ಲಾ ಇಲ್ಲಾ ಇಲ್ಲ ನಾನು ಮಾತ್ರೆ ಗೀತ್ರೆ ತೊಗೊಂಡಿಲ್ಲ. ನೀರು ಬೇಡ. ಪಪ್ಪನಿಗೆ ಫೋನ್ ಮಾಡಬೇಡಿ. 10 ನಿಮಿಷ ಟೈಂ ಕೊಡಿ ಎಲ್ಲಾ ಸರಿಹೋಗತ್ತೆ” ಎಂದು ಹೇಳಬೇಕು ಎನ್ನುತ್ತಿದೆ ಬುದ್ಧಿ ಆದರೆ ದೇಹ ಉಹುಂ ಸಾಥ್ ಕೊಡುತ್ತಿಲ್ಲ. ಎಲ್ಲಾ ಮುಗಿಸಿ ಎದ್ದು ಪರೀಕ್ಷಾ ಕೊಠಡಿಗೆ ಬರುವಷ್ಟರಲ್ಲಿ 50 ನಿಮಿಷ ಕಳೆದು ಹೋಗಿದೆ. ಬಾಕಿ ಸಮಯದಲ್ಲಿ ತೊಟ್ಟ ಪಣ ನೆರವೇರಿಸಿಕೊಳ್ಳಬೇಕಿದೆ. ವಿಶ್ವವಿದ್ಯಾಲಯದಲ್ಲಿ ಯಾರ ಬಳಿ ಅಧಿಕಾರವಿತ್ತೋ ಅವರೇ ಆ ದಿನದ ನಿರೀಕ್ಷಕರು. “ಸರ್ ಅರ್ಧ ಗಂಟೆ ಹೆಚ್ಚು ಸಮಯ ಕೊಡಿ” ಕೇಳಿಕೊಂಡೆ. “ಹತ್ತು ನಿಮಿಷ ಹೆಚ್ಚು ಕೊಡುತ್ತೇನೆ” ಎಂದವರು ನನ್ನ ಪೊಗರಿಗೆ ಉಗುರು ಸೋಕಿಸಿದರು. ಅವರ ದಾನ ಬೇಡ ಎಂದುಕೊಂಡವಳು ಎಲ್ಲರಿಗಿದ್ದ ಸಮಯದಲ್ಲಿಯೇ ಬರೆದು ಮುಗಿಸಿ ಪೇಪರ್ ಕೊಟ್ಟೆ. 100 ಗ್ಯಾರೆಂಟಿ ಎಂದುಕೊಂಡು ಓದಿದ್ದವಳಿಗೆ ಬಂದಿದ್ದು 62! ಅಂದಮೇಲೆ ಮುಟ್ಟಿನ ರಜೆ ನನ್ನನ್ನು ಪುಳಕಗೊಳಿಸಬೇಕಿತ್ತು.

ಅಭಿಪ್ರಾಯ ರೂಢಿಸಿಕೊಳ್ಳುವ ವಯಸ್ಸಿನಲ್ಲಿ ಪ್ರಸಿದ್ದ ಮ್ಯಾಗಝೀನ್ ಒಂದರಲ್ಲಿ ಇಂದಿರಾಗಾಂಧಿಯ ಹಳೆಯ ಇಂಟರ್ವ್ಯೂ ಒಂದು ಪ್ರಕಟವಾಗಿತ್ತು. ಆಗೆಲ್ಲಾ ಈಗಿನಂತೆ ನಯಾ ನಾಜೂಕಿನ ಪತ್ರಕರ್ತರಲ್ಲ ಬಳುಕಿಬಾಗಲು. ತೀಕ್ಷ್ಣ ಆಡಳಿತ ನೀಡಬೇಕಾದಾಗ ಅವರು ಆ ದಿನಗಳನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವ ಪ್ರಶ್ನೆಯನ್ನು ನೇರವಾಗಿ ಕೇಳಿದ್ದರು. ಆಕೆ “ ಅಂತಹ ದಿನಗಳಲ್ಲೂ ನನ್ನ ಧೃಢತೆಗೇನೂ ಕೊರತೆಯಾಗಿಲ್ಲ” ಎಂದಿದ್ದರು. ನಂತರ ಪಿ.ಟಿ ಊಷಾ ಕೂಡ ಇದನ್ನೇ ಹೋಲುವ ಮಾತು ಹೇಳಿದ್ದನ್ನು ಕೇಳಿದ್ದೆ. ಹಾಗಾಗಿ ನಂತರದ ದಿನಗಳಲ್ಲಿ ಎಂದೂ ಮುಟ್ಟು ಅಸಹಜವಾಗಿ ನನ್ನನ್ನು ತಟ್ಟಲೇ ಇಲ್ಲ. ಅವಿಭಕ್ತ ಕುಟುಂಬದಲ್ಲಿ ಅಮ್ಮ, ದೊಡ್ಡಮ್ಮಂದಿರು, ಅಜ್ಜಿ, ಅಕ್ಕಂದಿರು ಯಾವಾಗ ಆಗುತ್ತಿದ್ದರು ಎನ್ನುವ ಗಮನವೂ ಇಲ್ಲದಷ್ಟು ಸಹಜ ಸಹಜ.

ಒಂದಷ್ಟು ವರ್ಷಗಳ ಹಿಂದೆ ಮದುವೆಗೆ ನಾಲ್ಕು ವರ್ಷಗಳಾಗಿದ್ದ ದಂಪತಿ ಎದುರು ಕುಳಿತಿದ್ದರು. ಹೋ ಎನ್ನುತ್ತಿದ್ದ ಮಾತುಗಳ ನಡುವೆ ಅವಳ ದನಿ ಜೋರಾಗಿದ್ದು “ನಾನು ಏನು ಹೇಳಿದರೂ ಇವನು ಪಿಎಂ‍ಎಸ್ಸಾ (PMS) ಎಂದು ಕೇಳಿ ವ್ಯಂಗ್ಯ ಮಾಡುತ್ತಾನೆ. ಸಾಕಾಗಿದೆ ಇವನ ಸಹವಾಸ. ನಾನೇನು ಹುಚ್ಚೀನಾ?” ಎಂದಾಗ ಮೊದಲ ಬಾರಿಗೆ ಸಂಸಾರದಲ್ಲಿ ಮುಟ್ಟು ಹುಳಿ ಹಿಂಡತ್ತೆ ಎನ್ನುವ ಪರಿಚಯ ಆಗಿತ್ತು. ನಂತರದ ದಿನಗಳಲ್ಲಿ ಸಾಮಾಜಿಕ ಜಾಲತಾಣ, ಫ಼್ಯಾಮಿಲಿ ಕೋರ್ಟಿನ ಕಾರಿಡಾರ್, ರೀಲ್ಸ್, ಕಥೆ ಪುಸ್ತಕಗಳು ಎಲ್ಲೆಲ್ಲೂ ಮುಟ್ಟು ಎಂದರೆ ಅವಳು ಮಾನಸಿಕ ಅಸ್ವಸ್ಥೆಯಾಗುವ ದಿನ ಎಂತಲೇ ಬಿಂಬಿತವಾಗಿರುವುದನ್ನು ವಾಕರಿಕೆ ಬರುವಷ್ಟು ಕಂಡಿದ್ದೇನೆ.

ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿ ಮನೆಗೆಲಸಕ್ಕೆ ಬರುವ ಹೆಂಗಸರಿಗೆ ಒಂದು ಕಾರ್ಯಾಗಾರ ನಡೆಸುವಾಗ ಅವರುಗಳ ಆ ದಿನಗಳ ಬಗ್ಗೆ ಮಾತನಾಡಿಸಲಾಯ್ತು. ಬಹುಪಾಲು ಜನ ಅದರಪಾಡಿಗೆ ಅದು ತಮ್ಮ ಪಾಡು ತಮ್ಮದು ಎಂದು ಹಾಡಿದರು. ಇನ್ನೊಂದಷ್ಟು ಜನರು “ಮೇಡಂದಿರು ಆ ದಿನಗಳಲ್ಲಿ ರಜಾ ಮಾಡಲು ಮೊದಲೇ ಹೇಳಿ ಬಿಟ್ಟಿದ್ದಾರೆ. ಆದರೆ ಮನೆಯಲ್ಲಿ ಕೊರಲು ಆಗಲ್ಲ ಅದಕ್ಕೇ ಬೇರೆ ಯಾರದ್ದಾದ್ರು ಮನೆಯಲ್ಲಿ ಹೆಚ್ಚಿನ ಕೆಲಸ ಮಾಡಿ ಹೇಗೋ ದುಡ್ಡು ಹೊಂದಿಸಿಕೊಳ್ಳುತ್ತೀವಿ” ಎನ್ನುತ್ತಾ ಭೇಷಾದರು.

ಸ್ಯಾನಿಟರಿ ಪ್ಯಾಡ್ ಹಂಚುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹೋಗಿದ್ದಾಗ ಅಲ್ಲಿದ್ದವರೆಲ್ಲಾ ಕಟ್ಟಡ ಕಾರ್ಮಿಕ ಮಹಿಳೆಯರು, ನಗರ ಸ್ವಚ್ಛಿಗರು ಮತ್ತು ಇತರೆ ಅಸಂಘಟಿತ ಕೆಲಸಗಾರರು. 300 ಜನ ಸೇರಿದ್ದ ಗುಂಪಿನಲ್ಲಿ ಒಬ್ಬಿಬ್ಬರು ಹೊಟ್ಟೆ ನೋವು ಬಂದಾಗ ಡಾಕ್ಟ್ರ್ ಹತ್ತಿರ ಹೋಗಿ ಇಂಜೆಕ್ಷನ್ ಹಾಕಿಸಿಕೊಳ್ಳುತ್ತೀವಿ ಎಂದದ್ದು ಬಿಟ್ಟರೆ ಎಲ್ಲರಿಗೂ “ಅದು ಬರತ್ತೆ ಹೋಗತ್ತೆ” ಎನ್ನುವುದಷ್ಟೇ. ಅವರ ಗಂಡಂದಿರಿಗೆ ಪಿಎಂ‍ಎಸ್ ಎನ್ನುವ ಪದದ ಪಳಿಯುಳಿಕೆಯೂ ಗೊತ್ತಿರಲಿಲ್ಲ.

ಅಂದರೆ ಇದೆಲ್ಲಾ ಕಲಿತವರ ಪಾಡೇನು?! ಇರಲೇಬೇಕು ಏಕೆಂದರೆ ಮುಟ್ಟು ಎನ್ನುವುದನ್ನು ಅಸ್ತ್ರವನ್ನಾಗಿ ಬಳಿಸಿಕೊಂಡ ಎಲ್ಲಾ ಹೆಂಗಸಿಗೂ ತಿಳಿದಿದೆ ಅದೊಂದು ಪ್ರಾಕೃತಿಕವಾಗಿ ಒದಗಿ ಬಂದಿರುವ ಗುರಾಣಿ ಎಂದು. ವೈದ್ಯರ ಬಳಿ ಮಾತನಾಡುವಾಗ ಅವರೇ ತಿಳಿಸಿದಂತೆ ವೈಜ್ಞಾನಿಕವಾಗಿ ಮುಟ್ಟು ದೈಹಿಕ ಮತ್ತು ಮಾನಸಿಕವಾಗಿ ಹಿಂಸಾತ್ಮಕವಾಗಿ ಕಾಡುವುದು 3% ಜನರನ್ನು. ಆದರೆ ಋತುಸ್ರಾವದ ಆರೋಗ್ಯ ಬಗ್ಗೆ ಖಾಸಗೀ ಸಮೀಕ್ಷೆಗಳ ಪ್ರಕಾರ ಭಾರತದಲ್ಲಿ 50% ಹೆಂಗಸರಿಗೆ ಮುಟ್ಟೆಂಬ ಮೋಹಿನಿ ಮೈಮೇಲೆ ಬರುತ್ತಾಳೆ ಮನಬಂದಂತೆ ಆಟವಾಡಿಸಲು. ಈಗೀಗ ಸಮೀಕ್ಷೆಗಳ ಪ್ರಾಯೋಜಕರು ಯಾರು ಎನ್ನುವುದರ ಮೇಲೆ ಫಲಿತಾಂಶ ಏನಿರತ್ತೆ ಎನ್ನುವುದನ್ನು ಮೊದಲೇ ಹೇಳಿ ಬಿಡಬಹುದು.

ಪ್ರೀತಿಸಿದ ಹುಡುಗ ತಂದುಕೊಡುವ ಚಾಕಲೇಟ್, ಸೋಮಾರಿತನಕ್ಕೊಂದು ನೆವ ಹುಡುಕುವ ಗಂಡನ ಮಾತು, ಅತ್ತೆ ಮನೆಯ ಕಡೆ ಸತ್ಯನಾರಾಯಣನ ಪೂಜೆಗೆ ಹೋಗಬಾರದು ಎನ್ನುವ ಅವಳ ನಿರ್ಧಾರದಲ್ಲಿ, ಆ ದಿನಗಳೇನು ಎಂದು ಅವಳನ್ನು ಮೂದಲಿಸುವ ಸಹೋದ್ಯೋಗಿಯ ಹೊಟ್ಟೆಯುಲಿಯಲ್ಲಿ ಮಾತ್ರವಲ್ಲ ಈ ಮುಟ್ಟು ಇಣುಕಿರುವುದು, ಪಾರ್ಲಿಮೆಂಟಿನಲ್ಲೂ ಸ್ರವಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 20% ಮಹಿಳೆಯರು ದೋಷಭರಿತ ಮುಟ್ಟಿನಿಂದ ನರಳುತ್ತಿದ್ದಾರೆ ಇದರಿಂದ ಮಹಿಳಾ ಉದ್ಯೋಗಿಗಳ ಸಂಖ್ಯೆ ಕ್ಷೀಣಿಸುತ್ತಿದೆ ಎನ್ನುವ ವರದಿ ಕೊಟ್ಟಂದಿನಿಂದ Menstruation Benefit Bill ಸಂಸತ್ತಿನಲ್ಲಿ ಚರ್ಚೆಗೆ ಕಾಯುತ್ತಿದೆ. ಆದರೆ ಸಂಬಳ ಸಹಿತ ಮುಟ್ಟಿನ ರಜೆಯನ್ನು ಎಂದಿನಿಂದಲೋ ನೀಡುತ್ತಿರುವ ಜಪಾನ್ ದೇಶದಲ್ಲೂ ಮಹಿಳಾ ಉದ್ಯೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವ ಅಂಶವನ್ನು ನಮ್ಮಲ್ಲಿನ ಚರ್ಚೆ ಮರೆತಂದಿದೆ.

1992ರಲ್ಲಿ ಬಿಹಾರ ಸರ್ಕಾರ ತನ್ನ ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆ ಘೋಷಿಸಿದಾಗ ಪಾಟ್ನ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ನಿವೃತ್ತ ಮುಖ್ಯಸ್ಥೆ ಮಾಧ್ಯಮಗಳಲ್ಲಿ ಹೇಳಿದ್ದು “2-3 ತಿಂಗಳ ಸತತ ಹೋರಾಟದಿಂದ ಲಾಲು ಪ್ರಸಾದ್ ಅವರ ಮುಷ್ಟಿಯಿಂದ ಮುಟ್ಟಿನ ರಜೆಯನ್ನು ನಾವು ಕಸಿದುಕೊಂಡಿದ್ದೇವೆ” ಸಹಜಗಳನ್ನು ಸಂಕೀರ್ಣಗೊಳಿಸಿ ಅವರಿವರ ಬೊಗಸೆಗೆ ನಮ್ಮ ಬಾಳನ್ನು ಹಾಕಿ, ಹೋರಾಟದ ಮೂಲಕ ಹಕ್ಕು ಸ್ಥಾಪಿಸಿಕೊಳ್ಳುವ ವೇದಿಕೆಯೇನು ನಾಗರೀಕತೆ ಎಂದರೆ?!

ಈಗ ಕೇರಳ ಸರ್ಕಾರ ಉನ್ನತ ವ್ಯಾಸಂಗದ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ 25% ಹಾಜರಾತಿಯನ್ನು ಮುಟ್ಟಿನ ರಜೆಯೆಂದು ತೆಗೆದುಕೊಳ್ಳಬಹುದಾದ ಸವಲತ್ತು ಒದಗಿಸಿಕೊಟ್ಟಿದೆ. ಅಲ್ಲಿನ ಸರ್ಕಾರದ ಪ್ರಕಾರ ಇದು ಲಿಂಗಸಮಾನತೆಯ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಇಟ್ಟಿರುವ ಹೆಜ್ಜೆ. ಗರ್ಭಿಣಿಗೆ ಕೊಡುವ ಹೆರಿಗೆ ರಜೆಗೆ ತತ್ಸಮಾನವಾಗಿ ಪುರುಷರಿಗೆ ತಂದೆತನದ ರಜೆ ಕೊಡಬೇಕು ಎನ್ನುವ ಚರ್ಚೆ ಲೋಕಸಭೆಯಲ್ಲಿ ನಡೆದಾಗ ಆಗಿನ ಸಂಸದೆ ಕನಿಮೋಳಿ ಇದನ್ನು ವಿರೋಧಿಸಿ “ಭಾರತ ಇದಕ್ಕೆ ಇನ್ನೂ ತಯಾರಾಗಿಲ್ಲ. ಗಂಡ ಕೆಲಸಕ್ಕೆ ಹೋದಾಗ ಉಸಿರಾಡುವಷ್ಟು ಸ್ವಾತಂತ್ರ್ಯ ಮತ್ತು ಸಮಯ ಸಿಗುವ ಹೆಂಗಸರೇ ಹೆಚ್ಚಿರುವ ನಮ್ಮಲ್ಲಿ, ತಂದೆತನದ ರಜೆ ಎನ್ನುವುದನ್ನು ತೆಗೆದುಕೊಂಡು ಆತ ಮನೆಯಲ್ಲಿ ಹೆಂಡತಿಯನ್ನು ಮತ್ತಷ್ಟು ಗೋಳುಗುಟ್ಟಿಸುತ್ತಾನೆ ಅದಕ್ಕಾಗಿ ಇದು ಬೇಡ” ಎಂದಿದ್ದರು. ಈಗ ಮುಟ್ಟಿನ ರಜೆಯೂ ಬಂದರೆ ತಿಂಗಳಿಗೊಮ್ಮೆ ಬರುವುದನ್ನು ಒತ್ತಡ ಹಾಕಿ ಎರಡು ಬಾರಿ ಹೆಚ್ಚಿಗೆ ಬರುವಂತೆ ಮಾಡುವ ಗಂಡಂದಿರಿಗೆ ಕೊರತೆ ಇದೆಯೇ?!

ಅಂದಹಾಗೆ, ಕೆಲವು ಹೆಂಗಸರಿಗೆ ತಿಂಗಳಿಗೆ ಸಹಜವಾಗಿ ಎರಡು ಬಾರಿ ಮುಟ್ಟು ಬರುವ ಆವೃತ್ತಿ ಇರುತ್ತದೆ ಹಾಗಾದರೆ ಅವರಿಗೆ ಒಟ್ಟು ರಜೆ ಎಷ್ಟು ಎಂದು ಲೆಕ್ಕಿಸಬೇಕಿದೆ.

ಈಗಾಗಲೇ ಜ಼್ಯೊಮ್ಯಾಟೊ ಕಂಪನಿಯವರು ತಮ್ಮ ಉದ್ಯೋಗಿಗಳಿಗೆ ಮುಟ್ಟಿನ ರಜೆ ಘೋಷಿಸಿದ್ದಾರೆ. ಆದರೂ ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚೇನಾಗಿಲ್ಲ, ಗುಣಮಟ್ಟವೂ ಎಂದಿನಂತೆಯೇ ಇದೆ ಎಂದಿದ್ದಾರೆ. ಯಾವುದೇ ಉದ್ಯೋಗದಾತರು ಮಹಿಳೆಗೆ ಕೊಡಬೇಕಾದ ರಕ್ಷಣೆ, ಸೌಲಭ್ಯ ಒದಗಿಸಿಕೊಡದೆ ರಜೆ ನೀಡುವುದನ್ನು ಜವಾಬ್ದಾರಿ ವರ್ಗಾವಣೆ ಮಾಡುವ ಪಾಸಿಂಗ್ ದ ಪಿಲ್ಲೋ ಆಟ ಎಂದುಕೊಳ್ಳುತ್ತಾರೆ ಮುಟ್ಟಿನ ರಜೆಯನ್ನೂ ಮತ್ತು ಅವಳನ್ನು ಕೆಲಸಕ್ಕೆ ತೆಗೆದುಕೊಳ್ಳಲೇ ಇನ್ನೂ ತಗಾದೆ ತೆಗೆಯುತ್ತಾರೆ.

ಹೆರಿಗೆ ರಜೆ, ಮಕ್ಕಳಿಗೆ 18 ತುಂಬುವವರೆಗೂ ಅವರ ಪಾಲನೆ ಪೋಷಣೆಗಾಗಿ ಇರುವ ರಜೆ, ಅನಾರೋಗ್ಯದ ರಜೆ ಮತ್ತು ನಿರ್ಬಂಧ ರಜೆ, ನಿರ್ಧಾರಿತ ರಜೆ ಇಷ್ಟು ರಜೆಗಳ ಚಕ್ರವ್ಯೂಹದಲ್ಲಿ ಮುಟ್ಟಿನ ರಜೆಯೂ ನಿರ್ಧಾರವಾದರೆ ಗೊಂದಲದಲ್ಲಿ ಮುಟ್ಟು ಬರುವುದೇ ನಿಂತು ಹೋಗಬಹುದು!

ಆಪ್ತೆಯೊಬ್ಬಳು ವಿಜ್ಞಾನ ಪ್ರಾಧ್ಯಾಪಕಿ. ಡಾಕ್ಟರೇಟ್ ಪಡೆದು ದೇಶ ವಿದೇಶಗಳಿಗೆಲ್ಲಾ ಪ್ರಬಂಧ ಮಂಡನೆಗೆ ಹೋಗುತ್ತಿರುತ್ತಾಳೆ. ಅವಳ ಮಗಳನ್ನು ಮೂರು ದಿನ ಮೂಲೆ ಸೇರಿಸುತ್ತಾಳೆ. ಕಾರಣ ಕೇಳಿದಾಗ ಹೇಳಿದಳು “ ನನಗೆ ಇದರಲ್ಲಿ ನಂಬಿಕೆ ಇಲ್ಲ ಆದರೆ ನನ್ನ ಗಂಡ ಒಪ್ಪಲ್ಲ. ಸುಮ್ಮನೆ ಸಂಸಾರದಲ್ಲಿ ಯಾಕೆ ಮುನಿಸು ಅಂತ ನಾನು ಒಪ್ಪಿದ್ದೇನೆ” ಉನ್ನತ ವಿದ್ಯಾಭ್ಯಾಸ ಬದಲಿಸದ ಭಾವನೆ ಬುದ್ಧಿಯನ್ನು ರಜೆ ಬದಲಿಸಬಹುದೇ? ಬದಲಾವಣೆ ಆಗದ್ದು ಬೆಳವಣಿಗೆ ಹೇಗಾದೀತು.

ಗಂಡು ಬೀರಿಯಲ್ಲ ನಾ ಹಿಂದಿನಂತೆ ಇಲ್ಲ ಎನ್ನುವ ಸಾಲುಗಳನ್ನು ಪಲುಕಾಗಿಸುವ ದಿನಗಳಿಂದ ಮೂರು ಕಾಸಿನ ಕುದುರೆ ಎಂದು ಅವಳನ್ನು ನೆಲದಲ್ಲಿ ಎಳೆದಾಡುವುದನು ಹಕ್ಕೆಂದುಕೊಂಡ ಗಂಡು ದಿನಗಳವರೆಗೂ, ಬೀಡಾ ಅಂಗಡಿ ಬಾಬು ಒಂದು ಬೀಡ ಹಾಕು ಕೊಡ್ತೀನೋಡು ಇವಳಿಗೆ ಶಾಕು ಎನ್ನುತ್ತಾ ರ್ಯಾಪ್‍ಗಳಲ್ಲಿ, ರೀಲ್ಸ್ಗಳಲ್ಲಿ ಅವಳನ್ನು ಅವಳಿಗೇ ಅರಿವಿಲ್ಲದಂತೆ ಆಳಾಗಿಸಿಕೊಂಡ ಗಂಡುತನಕ್ಕೆ ಮುಟ್ಟಿನ ರಜೆ ಎನ್ನುವುದನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುವುದು ಗೊತ್ತಿದೆ. ಅವನಿಗೆ ಹೇಳಿಕೊಡುವುದೇ ಬೇಕಿಲ್ಲ, ಇವಳು ಕಲಿಯಲು ತಯಾರಿಲ್ಲ.

ಉನ್ನತ ವ್ಯಾಸಂಗದ ಯುವತಿಯರಿಗೆ, ಸರ್ಕಾರೀ ಉದ್ಯೋಗಸ್ಥರಿಗೆ ಕೊಡುವ ರಜೆಯನ್ನು ಕಸಮುಸುರೆಲ್ಲಿ ಜೀವನ ನಿರ್ವಹಣೆ ಮಾಡುವವಳಿಗೆ, ಎಲಡಿಕೆ ಜಗಿಯುತ್ತಾ ನಮ್ಮ ಮನೆಯ ಕಸವನ್ನು ಕೈಗವುಸೂ ಇಲ್ಲದೆ ಡಬ್ಬಕ್ಕೆ ಹಾಕಿಕೊಳ್ಳುವ ಅವಳಿಗೆ, ಇಟ್ಟಿಗೆ ಹೊರುವ ಇವಳಿಗೆ , ಗುಂಡಿಗೆ ಕಾಜಾ ಹಾಕುತ್ತಾ ಅವನ ಕ್ಷುಲಕ ನೋಟವನ್ನು ಮರೆಮಾಚಿಕೊಳ್ಳುವ ಮತ್ತೊಬ್ಬಳಿಗೆ ಕೊಟ್ಟು ನೋಡಿದಾಗ ತಿಳಿಯುತ್ತೆ ಮುಟ್ಟು ಎನ್ನುವುದು ಹೆಣ್ಣಿಗೆ ಇರುವ ದೊಡ್ಡ ಬಿಡುಗಡೆ ಎಂದು.

ಸಹಬಾಳ್ವೆ ಎಂದರೆ ಇವಳು ಕೋಮಲೆ ಅವನು ಟಗರು ಎನ್ನುವ ಕಂದಕ ಸೃಷ್ಟಿಸುವುದಲ್ಲ. ಈಗಾಗಲೇ ಎಲ್ಲಾ ಕಾನೂನುಗಳು ಮಹಿಳಾಪರ ಎನ್ನುವ ಮಿಥ್ಯೆಯಲ್ಲಿ ಸೊರಗುತ್ತಿದ್ದಾನೆ ಗಂಡಸು. ಬೆಳೆಯುವ ಬಾಲಕಿಯರಿಗೆ ಬೇಕಾದ ಪೌಷ್ಟಿಕಾಂಶ ಸಿಕ್ಕಲ್ಲಿ ಮುಟ್ಟೆನ್ನುವ ಹೂವು ರಜೆಯ ಹಂಗು ತೊರೆದು ತನ್ನಷ್ಟಕ್ಕೇ ತಾನು ಅರಳಿದಷ್ಟೂ ಸುಂದರ ಮತ್ತು ಸಹಜ. ಒಂದಷ್ಟು ಮಹಿಳೆಯರೇ ಅಂದಾರು “ನಿರ್ಬಂಧ ರಜೆ ಎಂದು ಘೋಷಿಸಲಿ. ಬೇಕಾದವರು ತೆಗೆದುಕೊಳ್ಳುತ್ತಾರೆ” ಕೆಲಸಕ್ಕೆ ಸೇರಲೂ ಅವಕಾಶವಿಲ್ಲದ ಹೆಂಗಸರದ್ದೇ ಬಹುಸಂಖ್ಯೆ ಇರುವಾಗ ಕುಟುಂಬದಲ್ಲಿ ನಿರ್ಬಂಧ ರಜೆ ಕಡ್ಡಾಯವಾಗಿ ಉಸಿರುಗಟ್ಟಿಸದೆ? ಚುನಾವಣಾ ಪ್ರಣಾಲಿಕೆಗಳಲ್ಲಿ ಕಾಣುವ ಜಯಂತಿಗಳಿಗೆ ನಿರ್ಬಂಧ ರಜೆ ಸೂಕ್ತ ಎನಿಸಬಹುದು ಆದರೆ ಮುಟ್ಟಿಗೆ ನಿರ್ಬಂಧ ಮತ್ತು ರಜೆ ಎರಡೂ ಅನಾರೋಗ್ಯಕರ.

************

 


ವಿಸ್ತಾರ news ನಲ್ಲಿ ಬರೆದ ಲೇಖನ

Comments

  1. ನಗದಿಕರಣಕ್ಕೆ ಅವಕಾಶ ಇರುವ ರಜೆ ಕೊಡಲಿ.

    ReplyDelete
  2. 👌👌❤❤🙏🙏💐💐

    ReplyDelete
  3. ಸರಿಯಾಗಿ ಹೇಳಿದ್ದೀರಿ

    ReplyDelete
  4. Seems so simple as well as complex

    ReplyDelete

Post a Comment

Popular posts from this blog

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್