Section 66 BNSS on Summons
ಪಪ್ಪ ಮೈಸೂರಿನ ಶಂಕರಮಠ ರಸ್ತೆಯಲ್ಲಿ ಒಂದು ಮನೆ ಕಟ್ಟಿದ್ದರು. (ಇಬ್ಬರು ಮೂವರು ಬಾಡಿಗೆದಾರರು ಕೊಟ್ಟ ಕಷ್ಟ ಅಷ್ಟಿಷ್ಟಲ್ಲ). ಒಬ್ಬ ಬಾಡಿಗೆ ದಾರ ಸಂಸಾರಸ್ಥ. ಮನೆಭರ್ತಿ ವಯಸ್ಕ ಹೆಂಗಸರು, ಯುವತಿಯರು, ಮಕ್ಕಳು ಇದ್ದ ದೊಡ್ಡ ಸಂಸಾರ. ಬಾಡಿಗೆ ಕೊಡದ ಆಟ ಮಿತಿ ಮೀರಿದಾಗ, ಮನೆಯೂ ಬಿಡದಾದಾಗ ಪ್ರಕರಣ ಕೋರ್ಟಿಗೆ ಹೋಯಿತು.
ವರ್ಷವರ್ಷ ವರ್ಷಗಳ ನಂತರ ಅಂತೂ ಪಪ್ಪನದೇ ಮನೆ ಅಂತಾಗಿ ಆತ ಮನೆ ತೆರವು ಮಾಡಿಕೊಡಬೇಕು ಎನ್ನುವ ಆದೇಶ ಆಯಿತು. (ಆತ ಮನೆ ಬಿಟ್ಟ ನಂತರ ಒಳಹೊಕ್ಕರೆ ಹೊರಗಿನ ಆವರಣ ಬಿಟ್ಟು ಒಳಗಿನ ಎಲ್ಲಾ ಬಾಗಿಲುವಾಡಗಳನ್ನು, ಮರಗೆಲಸವನ್ನು ಕಿತ್ತು ಎಲ್ಲಿಗೋ ಸಾಗಿಸಿ ಬಿಟ್ಬಿಟಿದ್ತ್ಗಿದರು. ಗೋಡೆಗಳ ಪ್ಲಾಸ್ಟರ್ ಅನ್ನು ಕಿತ್ತು ನೆಲವನ್ನೆಲ್ಲಾ ಅಗೆದು ಬಿಟ್ಟಿದ್ದರು)
ನ್ಯಾಯಾಲಯದ ಪ್ರಕ್ರಿಯೆ ವೇಗದಲ್ಲಿ ಆಗಿದ್ದಿದ್ದರೆ ಪರಿಸ್ಥಿತಿ ಬೇರೆ ಇರುತ್ತಿತ್ತೇನೋ !!!!
ನ್ಯಾಯಾಲಯದ ನೋಟಿಸ್ ಮತ್ತು ಸಮನ್ಸ್ ಅನ್ನು ಯಾವಾಗ ನೀಡಲು ಪೋಲೀಸರು ಹೋದರೂ ಮನೆಯ ಹೆಬ್ಬಾಗಿಲಿನಲ್ಲಿ ಹೆಂಗಸರು ಸಾಲಾಗಿ ಕುಳಿತು ಮನೆಯಲ್ಲಿ ಯಾರೂ ಗಂಡಸರಿಲ್ಲ ಎಂದು ಸಬೂಬು ಹೇಳಿ ಹಿಂದುಗಿಸುತ್ತಿದ್ದರು. ಮನೆಯನ್ನು ವಶ ಪಡಿಸಿಕೊಳ್ಳುವ ಆದೇಶ ಪ್ರತಿಯನ್ನು ತೆಗೆದುಕೊಂಡು ಹೋದಾಗಲೂ ಇದ್ದಬದ್ದ ಹೆಂಗಸರೆಲ್ಲಾ ಹೊಸಿಲ ಮೇಲೇ ಕುಳಿತು ಗಂಡಸರು ಇಲ್ಲ ಎಂದು ಎಷ್ಟು ರಭಸದಲ್ಲಿ ಹೇಳಿದ್ದರು ಎಂದರೆ ಅದೆಷ್ಟೊ ದಿನಗಳು ಪೋಲೀಸರು ನಡುಗುತ್ತಿದ್ದರು.
ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ (Criminal Procedure Code) 1973 ಈ ಕಾನೂನಿನ ಸೆಕ್ಷನ್ 64 ರಲ್ಲಿ ಸಮನ್ಸ್ ನೀಡಲಾಗಿರುವ ವ್ಯಕ್ತಿ ಮನೆಯಲ್ಲಿ ಇರದಿದ್ದ ಸಂದರ್ಭದಲ್ಲಿ ಸಮನ್ಸ್ ಅನ್ನು ಕುಟುಂಬದ ವಯಸ್ಕ ’ಪುರುಷ’ ಸದಸ್ಯನಿಗೆ ತಲುಪಿಸಿ ಬರಬೇಕು, ಎಂದಿದೆ. ಹೀಗಾಗಿ ಬಹಳ ಪ್ರಕರಣಗಳಲ್ಲಿ ಮಹಿಳೆಯರನ್ನು ಗುರಾಣಿಯಂತೆ ಬಳಸಿಕೊಳ್ಳಲಾಗುತ್ತಿತ್ತು.
ತ್ವರಿತಗತಿಯ ನ್ಯಾಯ ಎನ್ನುವ ಉದ್ದೇಶವನ್ನು ಹೊಂದಿರುವ, 1 ಜುಲೈ 2024 ರಂದು ಜಾರಿಗೆ ಬರುತ್ತಲಿರುವ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 2023 ಸೆಕ್ಷನ್ 66 ರಲ್ಲಿ ಇನ್ನು ಮುಂದೆ ಸಮನ್ಸ್ ನೀಡಲಾಗಿರುವ ವ್ಯಕ್ತಿ ಮನೆಯಲ್ಲಿ ಇಲ್ಲದಾಗ, ಕುಟುಂಬದ ’ಯಾವುದೇ’ ವಯಸ್ಕ ಸದಸ್ಯರಿಗೆ ತಲುಪಿಸಬೇಕು ಎನ್ನುವ ಬದಲಾವಣೆ ತರಲಾಗಿದೆ. ಲಿಂಗ ಸಮಾನತೆಯನ್ನು ಸಾಧಿಸುವತ್ತ ತಂದಿರುವ ಹತ್ತಾರು ಬದಲಾವಣೆಗಳಲ್ಲಿ ಇದೂ ಒಂದು.
#BNSS
#ಭಾರತೀಯನಾಗರೀಕಸುರಕ್ಷಾಸಂಹಿತೆ2023
ನಿಮ್ಮಿಂದ ಎಷ್ಟೊಂದು ವಿಷಯ ವಿಚಾರಗಳು ತಿಳಿಯುತ್ತಿವೆ... ಧನ್ಯವಾದಗಳು...🙏
ReplyDeleteನಿಮ್ಮ ಶಂಕರಮಠ ರಸ್ತೆಯ ಮನೆಗೆ ನಾನೊಂದು ಬಾರಿ ಬಂದಿದ್ದೆ😊