Sakshigopala in VK
ಹಳ್ಳಿಯಲ್ಲೊಬ್ಬ ವೃದ್ಧನಿಗೆ ಮಥುರೆಯ ಕೃಷ್ಣನ ದರ್ಶನ ಮಾಡಬೇಕೆನ್ನುವ ಹೆಬ್ಬಯಕೆ. ಹೋಗಲು ಕೈಲಾಗುವುದಿಲ್ಲ. ಕೇರಿಯ ಯುವಕನೊಬ್ಬ ದರ್ಶನ ಮಾಡಿಸಿಕೊಂಡು ಬರುತ್ತೇನೆ ನಿನ್ನ ಮಗಳನ್ನು ಕೊಟ್ಟು ಮದುವೆ ಮಾಡೆನ್ನುತ್ತಾನೆ. ಹಿರಿಯ ಒಪ್ಪಿ ಭಾಷೆ ಕೊಡುತ್ತಾನೆ. ಯುವಕ ಆತನನ್ನು ಭುಜದಲ್ಲಿ ಹೊತ್ತು ಕಾಲ್ನಡಿಗೆಯಲ್ಲಿ ಒಡಿಶಾದ ಪುರಿಯಲ್ಲಿರುವ ಹಳ್ಳಿಯಿಂದ ಮಥುರೆಗೆ ಕರೆದುಕೊಂಡು ಹೋಗಿ ದೇವದರ್ಶನ ಮಾಡಿಸುತ್ತಾನೆ. ನಂತರ ವೃದ್ಧ ಮಗಳನ್ನು ಕೊಡಲು ನಿರಾಕರಿಸುತ್ತಾನೆ ತಾನು ಹಾಗೆ ಮಾತು ಕೊಟ್ಟಿದ್ದಕ್ಕೆ ಸಾಕ್ಷಿಯೇನಿದೆಯೆಂದು ಸವಾಲು ಹಾಕುತ್ತಾನೆ. ನೊಂದ ಯುವಕ ಸೀದಾ ಮಥುರೆಗೆ ಬಂದು ಕೃಷ್ಣ ನೀನೇ ತಾನೆ ನಮ್ಮ ನಡುವಿನ ಮಾತಿಗೆ ಸಾಕ್ಷಿಯಾಗಿದ್ದವನು ಈಗ ತನ್ನ ಹಳ್ಳಿಗೆ ಬಂದು ಸಾಕ್ಷಿ ನುಡಿಯೆನ್ನುತ್ತಾನೆ. ಯುವಕನ ಶ್ರದ್ಧಾ ಭಕ್ತಿಗೆ ಮೆಚ್ಚಿದ ಭಗವಂತ ನಿನ್ನ ಹಿಂದೆಯೇ ಬರುತ್ತಿರುತ್ತೇನೆ, ನೀನು ಹಿಂದಿರುಗಿ ನೋಡದೆ ಊರು ಸೇರಬೇಕು. ನಡುವಿನಲ್ಲಿ ಹಿಂದಿರುಗಿ ನೋಡಿದರೆ ನಾನಲ್ಲಿಯೇ ನಿಂತು ಬಿಡುತ್ತೇನೆ ಎನ್ನುವ ಷರತ್ತು ತೋರುತ್ತಾನೆ. ಗೋಪಾಲನ ಹೆಜ್ಜೆ ಸದ್ದನ್ನಾಲಿಸುತ್ತಾ ಯುವಕನ ಪಯಣ ಆರಂಭವಾಗುತ್ತದೆ. ಊರು ತಲುಪಲು ಒಂದಿಷ್ಟೇ ದೂರವಿದೆಯೆನ್ನುವಾಗ ಯುವಕ ಹಿಂದಿರುಗಿ ನೋಡುತ್ತಾನೆ. ಗೋಪಾಲಕೃಷ್ಣ ಅಲ್ಲಿಯೇ ಮೂರ್ತಿಯಾಗಿ ನಿಂತು ಬಿಡುತ್ತಾನೆ. ದು:ಖಿತನಾದ ಯುವಕ ಗ್ರಾಮಸ್ಥರಿಗೆ ಕಲ್ಲಾದ ದೇವರನ್ನು ತೋರಿದಾಗ ಅವನ ಸತ್ಯಸಂಧತೆಯನ್ನು ಒಪ್ಪಿ ವೃದ್ಧನ ಮಗಳನ್ನು ಅವನಿಗೆ ಮದುವೆ ಮಾಡಿಸುತ್ತಾರೆ.
ಇಂತಹ ಹಲವು ಕಥೆಗಳನ್ನು ತನ್ನ ಸುತ್ತಲೂ ಹೆಣೆದುಕೊಂಡು ಐದುವರೆ ಅಡಿಯ ಮಿರಮಿರಮಿಂಚುವ ಕರಿಕಲ್ಲಿನ ವಿಗ್ರಹವಾಗಿ ನಿಂತುಕೊಂಡಿದ್ದಾನೆ ಕೃಷ್ಣ ಒಡಿಶಾದ ಪುರಿಜಗನ್ನಾಥನಿಗೆ 40 ನಿಮಿಷಗಳ ದೂರದಲ್ಲಿ, ಭುವನೇಶ್ವರಕ್ಕೆ 57 ಕಿಲೋಮೀಟರ್ಗಳ ಅಂತರದಲ್ಲಿ. ಸಾಕ್ಷಿ ಗೋಪಾಲ, ಸಖೀ ಗೋಪಾಲ, ಸತ್ಯಬಾದಿ ಗೋಪಾಲ ಅಂತೆಲ್ಲಾ ಕರೆಸಿಕೊಳ್ಳುವ ಇವನ ಪಕ್ಕದಲ್ಲಿ ಐದಡಿಯ ಕಂಚಿನ ವಿಗ್ರಹವಾಗಿ ನಿಂತಿದ್ದಾಳೆ ರಾಧೆ. ಸಾಕ್ಷಾತ್ ಕೃಷ್ಣ ಪರಮಾತ್ಮನ ಮರಿಮೊಮ್ಮಗನಾದ ವಜ್ರನಾಭನು ಸ್ಥಾಪಿಸಿರುವ ವ್ರಜಮಂಡಲ ಎನ್ನುವ ಕೃಷ್ಣನ ಹದಿನಾರು ವಿಗ್ರಹಗಳಲ್ಲಿ ಸಾಕ್ಷಿಗೋಪಾಲನೂ ಒಬ್ಬ ಎಂದು ಹೇಳುತ್ತದೆ ಪುರಾಣದ ಪುರಾವೆ.
ಕಳಿಂಗ ಶೈಲಿಯಲ್ಲಿರುವ ಮಂದಿರದ ಗೋಡೆಗಳ ತುಂಬೆಲ್ಲಾ ಕೃಷ್ಣಲೀಲೆಗಳ ಶಿಲ್ಪವಿದೆ. ದೊಡ್ಡ ಪ್ರಾಂಗಣದಲ್ಲಿ ಚಿಕ್ಕಚಿಕ್ಕ ಕಲಾಕೃತಿಗಳನ್ನು ನಿಲ್ಲಿಸಲಾಗಿದೆ. ವೈಷ್ಣವ ಸಂಪ್ರದಾಯದ ಪೂಜಾ ಪದ್ಧತಿಯನ್ನನುಸರಿಸಿದರೂ ಆ ಸಂಪ್ರದಾಯದ ದೇವಾಲಯಗಳಲ್ಲಿರುವ ಕ್ರಮದಂತಿಲ್ಲಿ ಅಕ್ಕಿಯಿಂದ ಮಾಡಲಾದ ಖಾದ್ಯಗಳ ನೇವೇದ್ಯ ಮಾಡುವುದಿಲ್ಲ. ಗೋಧಿಯಿಂದ ತಯಾರಾದ ಪೋಡಿ ಪೀತಾ, ಫೇಣಿ ಇಲ್ಲಿನ ಮುಖ್ಯ ಪ್ರಸಾದ. ದೇವಸ್ಥಾನದ ಒಳಹೊರಗೆಲ್ಲಾ ಹಸು ಕರುಗಳ ಗುಂಪುಗುಂಪು. ಸುತ್ತಲೂರಿನವರೆಲ್ಲಾ ಮದುವೆ ಮತ್ತಿತರ ಶುಭ ಕಾರ್ಯಕ್ರಮಗಳಿಗೆ, ಬಾಯ್ಮಾತಿನ ವ್ಯವಹಾರಗಳಿಗೆ ಇಲ್ಲಿಗೆ ಬಂದು ಗೋಪಾಲನನ್ನು ಸಾಕ್ಷಿಯಾಗಿರಿಸಿಕೊಂಡು ಕೆಲಸ ಮಾಡಿಕೊಳ್ಳುತ್ತಾರೆ. ಬರುವವರೆಲ್ಲಾ ಅಲ್ಲಿರುವ ರೆಜಿಸ್ಟರ್ ಒಂದರಲ್ಲಿ ತಾವು ದೇವಸ್ಥಾನಕ್ಕೆ ಬಂದಿದ್ದಕ್ಕೆ ಸಾಕ್ಷಿಯಾಗಿ ವಿವರಗಳನ್ನು ಬರೆಸುತ್ತಾರೆ. ಅಲ್ಲಿನವರು ಹೇಳುವ ಹಾಗೆ ಪುರಿಯ ಜಗನ್ನಾಥನ ದರ್ಶನ ಮಾಡಿದ್ದಕ್ಕೆ ಸಾಕ್ಷಿ ಕೊಡುತ್ತಾನಂತೆ ಈ ಗೋಪಾಲ.
ಕೃಷ್ಣ ಜನ್ಮಾಷ್ಠಮಿಗಿಂತ ರಾಧಾಷ್ಟಮಿಯನ್ನಿಲ್ಲಿ ವೈಭವವಾಗಿ ಆಚರಿಸುತ್ತಾರೆ. ಆಂವ್ಲಾ ನವಮಿ (ಆಮ್ಲ , ಬೆಟ್ಟದ ನಲ್ಲಿಕಾಯಿ) ಎನ್ನುವ ವಾರ್ಷಿಕಾಚರಣೆಯಿಲ್ಲಿ ದೊಡ್ಡ ಹಬ್ಬ. ಕಾರ್ತಿಕ ಮಾಸದ ಶುಕ್ಲಪಕ್ಷದ ನವಮಿಯಂದಾಚರಿಸುವ ಹಬ್ಬದಲ್ಲಿ ಸಾವಿರಾರು ಬೆಟ್ಟದನಲ್ಲಿಕಾಯಿಗಳನ್ನು ಬಳಸಬಹುದೇನೋ ಎನ್ನುವ ಕುತೂಹಲದಿಂದ ಪುರೋಹಿರತನ್ನು ಕೇಳಿದಾಗ ಅವರು ಹೇಳಿದ ಕಥೆ ಮತ್ತಷ್ಟು ರೋಚಕವೆನಿಸಿತು.
ರಾಧೆಯಿಲ್ಲದೆ ಕೃಷ್ಣನಿಗೆ ಅಸ್ತಿತ್ವವಿಲ್ಲ. ಮಥುರೆಯಿಂದ ಬರುವಾಗ ಒಬ್ಬನೇ ಬಂದಿಲ್ಲಿ ನಿಂತವನು ದೈವತ್ವಕ್ಕೇರಬೇಕಿದ್ದರೆ ರಾಧೆಯ ಜೊತೆಯಾಗಲೇ ಬೇಕಿತ್ತು. ಹಾಗಾಗವಳ ಅವಳ ಕಂಚಿನ ಪ್ರತಿಮೆಯನ್ನು ಉತ್ತರಭಾರತದಿಂದ ತರಿಸಿಲ್ಲಿ ಪ್ರತಿಷ್ಠಾಪಿಸಲಾಯಿತು. ಅಲ್ಲಿನ ಸಾಂಪ್ರದಾಯಿಕ ಗಾಘ್ರಾ ಚೋಲಿಯಲ್ಲಿ ತಲೆಯಿಂದ ಕಾಲಿನವರೆಗೂ ಮುಚ್ಚುಡೆಗೆಯಲ್ಲಿ ಬಂದಿದ್ದ ರಾಧಾಳಿಗೆ ಇಲ್ಲಿ ಒಡಿಶಾದ ಪಾರಂಪರಿಕ ಸೀರೆಯನ್ನುಡಿಸಿದಾಗ ಅವಳ ಪಾದ ಕಾಣತೊಡಗಿತು. ಇದನ್ನು ಶುಭ ಸೂಚನೆ ಎಂದೆಣಿಸಿ ಅಂದಿನಿಂದ ಆಂವ್ಲಾ ನವಮಿಯಂದು ಹೆಂಗಳೆಯರು ಉಪವಾಸವಿದ್ದು ವ್ರತಾಚರಣೆ ಮಾಡಿ ಬೆಟ್ಟದ ನಲ್ಲಿಕಾಯಿಯ ಮರಕ್ಕೆ ಪ್ರದಕ್ಷಿಣೆ ನಮಸ್ಕಾರ ಹಾಕಿ ತಮ್ಮ ಸಂಸಾರದಲ್ಲಿ ಗಂಡನೊಡನೆಯ ಅನ್ಯೋನ್ಯತೆಗಾಗಿ ಪ್ರಾರ್ಥಿಸುತ್ತಾರೆ. ಒಟ್ಟಿನಲ್ಲಿ ಸಂಭ್ರಮಕ್ಕೊಂದು ಕಾರಣ, ಸಡಗರಕ್ಕೊಂದು ಉತ್ಸವ ಈ ನೆಲದಲ್ಲಿ.
ಒಡಿಶಾಕ್ಕೆ ಹೋಗಿರುವವರು ಸಾಕ್ಷಿಗೋಪಾಲನನ್ನು ದರ್ಶಿಸದೆ ಹಿಂದಿರುಗಲಾರರು, ಜನರ ನಂಬಿಕೆಯನ್ನೇ ತಮ್ಮ ಹೊಟ್ಟೆ ಪಾಡಾಗಿಸಿಕೊಂಡಿರುವ ಪಾಂಡಾಗಳು ದಂಡು ಕಟ್ಟಿಕೊಂಡು ಪ್ರವಾಸಿಗರಿಗೆ ಸಾವಿರಾರು ರೂಪಾಯಿಗಳ ಪೂಜೆಗಾಗಿ ಆತಂಕ ಹುಟ್ಟಿಸುವ ಮೂಲಕ ವಿಪರೀತ ಒತ್ತಡ ಹೇರುತ್ತಾರೆ. ವ್ಯವಹಾರ ಈ ಜಗತ್ತಿನ ನಿಯಮ. ಗೌಜುಗದ್ದಲದ ನಡುವೆಯೂ ಅರಳುಕಂಗಳ ಸುಂದರಾಂಗ ತ್ರಿಭಂಗಿಯಲ್ಲಿ ವೇಣುಗೋಪಾಲ ಮನಸ್ಸಿಗೆ ಮುದ ನೀಡುತ್ತಾ ನೋಟಕ್ಕೆ ನೆಮ್ಮದಿಯಾಗುತ್ತಾ ಅಲ್ಲಿದೆ ನನ್ನ ಮನೆ ಇಲ್ಲಿ ಬಂದೆ ಸುಮ್ಮನೆ ಎನ್ನುವ ನಗುಬೀರುತ್ತಿದ್ದಾನೆ.
*************************
Well written. Good information.
ReplyDelete