Constitution ಮತ್ತು ಮಹಿಳೆ

 

 ಆ ಶಾಲೆಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತರಬೇತಿ ನಡೆಸಿದ್ದ ಮೂರನೆಯ ದಿನಕ್ಕೆ ಅಲ್ಲಿನ ಜೀವಶಾಸ್ತ್ರ ವಿಷಯದ ಅಧ್ಯಾಪಕಿ ಫೋನ್ ಮಾಡಿ ತಮ್ಮ ಶಾಲೆಯ ಐದನೆಯ ತರಗತಿಯ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಆಗಿರುವ ವಿಷಯ ತಿಳಿಸಿ ಆ ಬಾಲಕಿಯನ್ನು ಕರೆದುಕೊಂಡು ಬಂದರು. ಅವಳೊಡನೆಯ ದೀರ್ಘ ಮಾತುಕತೆಯಿಂದ ತಿಳಿದು ಬಂದ ವಿಷಯ ತಂದೆಯಿಲ್ಲದ ಅವಳ ತಾಯಿಯ ಎರಡನೆಯ ಗಂಡ ( ಇಟ್ಟುಕೊಂಡವನು) ಕಳೆದ ಮೂರು ವರ್ಷಗಳಿಂದ ನಿತ್ಯವೂ ಇವಳ ಮೇಲೆರಗುತ್ತಿದ್ದಾನೆ. ಮಾಹಿತಿ ಶಿಬಿರದಲ್ಲಿ ಭಾಗವಹಿಸುವವರೆಗೂ ಈ ಹುಡುಗಿಗೆ ಅದು ತನ್ನ ಮೇಲೆ ನಡೆಯುತ್ತಿರುವ ಅಪರಾಧ ಎನ್ನುವುದೇ ತಿಳಿದಿರಲಿಲ್ಲ.

 ನ್ಯಾಯಾಲಯದಲ್ಲಿ ಗಂಡನೇ ಹಾಕಿರುವ ವಿಚ್ಚೇಧನ ಪ್ರಕರಣದಲ್ಲಿ ತನ್ನ ಮಗುವನ್ನು ತಾನು ಪಡೆದುಕೊಳ್ಳುವ ಹಾಗಿಲ್ಲ ಯಾಕೆಂದರೆ ತಂದೆಯೇ ಅದರ ಯಜಮಾನ ಎಂದು ವಕೀಲರು ಹೇಳಿಬಿಟ್ಟಿದ್ದಾರೆ. ಹಾಗಾಗಿ ಅವಳೀಗ ಮಾನಸಿಕ ರೋಗಕ್ಕೆ ತುತ್ತಾಗಿದ್ದಾಳೆ. ಹೆಣಗಾಡುತ್ತಿದ್ದಾಳೆ. ಹೀಗೆ ತಾವು ಅಸಮಾನ ಸಮಾಜದಲ್ಲಿ ಇದ್ದೇವೆ, ತಮ್ಮನ್ನು ಕನಿಷ್ಠ ಮನುಷ್ಯರನ್ನಾಗಿಯೂ ಕಾಣುತ್ತಿಲ್ಲ ಎನ್ನುವ ಅರಿವೂ ಇಲ್ಲದ ಸ್ವಾತಂತ್ರ್ಯ ಪೂರ್ವದ ಮಹಿಳೆಯರಲ್ಲಿ ಸಮಾನತೆ, ಮಾನವ ಹಕ್ಕುಗಳು ಎನ್ನುವ ಪ್ರಜ್ಞೆಯನ್ನು ಮೊದಲ ಬಾರಿಗೆ ಮೂಡಿಸಿದ್ದು ನಮ್ಮ ಸಂವಿಧಾನ. ಸೂಕ್ಷ್ಮತೆಯುಳ್ಳ ಕೆಲವೇ ಮಹಿಳೆಯರು ದನಿಯೆತ್ತುವಾಗ ಅವುಗಳು ಪುರುಷಮನದ ಸಮಾಜದಲ್ಲಿ ಉಡುಗಿ ಹೋಗದಂತೆ ಗಟ್ಟಿಸಿಕೊಳ್ಳಲು ವೇದಿಕೆ ಒದಗಿಸಿದ್ದು ಸಂವಿಧಾನ.

 ಜಗತ್ತಿನ ಮತ್ತ್ಯಾವುದೇ ಸಂವಿಧಾನದಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಎಂದು ಪ್ರತ್ಯೇಕವಾದ ಅಧ್ಯಾಯವನ್ನು ಮೀಸಲಿಟ್ಟಿಲ್ಲ. ಅಕ್ಷರ ಕಲಿತರೆ, ಕಲಿಸಿಕೊಟ್ಟರೆ ಛಡಿಯೇಟಿನ ಶಿಕ್ಷೆಗೆ ಒಳಗಾಗಬೇಕಿದ್ದ ಮಹಿಳೆಯರು ಇಂದು ಶೇಕಡಾ 54ರಷ್ಟು ಸಾಕ್ಷರರಾಗಿರುವುದು ಮತ್ತು ಹದಿನಾಲ್ಕು ವರ್ಷದವರೆಗೂ ಶಿಕ್ಷಣ ಪಡೆಯುವುದು ಮೂಲಭೂತ ಹಕ್ಕು ಎನ್ನುವವರೆಗೂ ನಮ್ಮನ್ನು ಕೈಹಿಡಿದು ನಡೆಸಿದ ಪಂಜಿನ ಬೆಳಕು ಸಂವಿಧಾನ. ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಇಂದು ಜಾತಿ, ಪಂಥಗಳಿಗೆ ಸೀಮಿತಗೊಳಿಸಿ, ಕೇವಲ ಪೂಜೆಗೆ ಒದಗಿ ಬರುವ ಮೂರ್ತಿಯನ್ನಾಗಿಸಿರುವ ನಮ್ಮ ಬೌದ್ಧಿಕ ದಾರಿದ್ರ್ಯಕ್ಕೆ ಅರ್ಥ ಮಾಡಿಸಬೇಕಿದೆ ಪ್ರಸ್ತುತ ಅವರು ಒಂದು ವರ್ಗಕ್ಕೆ ಸೇರುವುದು ಅನಿವಾರ್ಯವೇ ಆದರೆ ಅದು ಮಹಿಳಾ ವರ್ಗಕ್ಕೆ ಮಾತ್ರವೆಂದು. ಅಂಬೇಡ್ಕರ್ ಅಂದಿನ ಮಹಿಳೆಯರ ಪರಿಸ್ಥಿತಿಯ ಬಗ್ಗೆ ಅಧ್ಯಯನ ನಡೆಸಿ ( The Rise and Fall of Hindu Women) ಹಿಂದು ಕೋಡ್ ಬಿಲ್‍ಅನ್ನು ಸಿದ್ಧಗೊಳಿಸಲು ಮುಂದಾಳತ್ವ ವಹಿಸದಿದ್ದರೆ ಇಂದಿನ ಮಹಿಳೆ ಜೀವಂತ ಶವದಂತಾಗುತ್ತಿದ್ದಳು ಎನ್ನುವುದು ಉತ್ಪ್ರೇಕ್ಷೆಯ ಮಾತಲ್ಲ. ಕುಟುಂಬದ ಒಳಗೆ ಮತ್ತು ಹೊರಗಿನ ಬದುಕಿನಲ್ಲಿ ಮಹಿಳೆಯರು ಪುರುಷರಿಗೆ ಸಮಾನರು ಎನ್ನುವುದನ್ನು ಮೊದಲ ಬಾರಿಗೆ ಸಂವಿಧಾನ ರಚನಾ ಸಮಿತಿಯಲ್ಲಿ ಹೇಳಿದ್ದು ಅಂಬೇಡ್ಕರ್ ಅವರು. ಫಲಿತಾಂಶವೇ ಇಂದಿನ ಸಂವಿಧಾನವು ಮಹಿಳೆಯರ ಅಸ್ತಿತ್ವವನ್ನು ಗುರುತಿಸಿರುವುದು. 

 ಭಾರತೀಯ ಸಂವಿಧಾನದ 14, 15, 16, 39 (ಎ), 39 (ಬಿ), 39 (ಸಿ), ಮತ್ತು 42, 47, 51ನೆಯ ಪರಿಚ್ಛೇಧಗಳು ಮಹಿಳೆಯರಿಗೆ ಸಮಾನತೆಯನ್ನು, ಸಮಾನ ಅವಕಾಶಗಳನ್ನು ನೀಡುತ್ತಲೇ ಲಿಂಗ, ಧರ್ಮ, ಜನಾಂಗ, ಜಾತಿ, ಅಥವಾ ಹುಟ್ಟಿದ ಸ್ಥಳದ ಆಧಾರದಲ್ಲಿ ಮಹಿಳೆಯರ ವಿರುದ್ಧ ತಾರತಮ್ಯವನ್ನು ನಿಷೇಧಿಸುತ್ತದೆ. ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಉದ್ಯೋಗ ಮತ್ತು ಸಾರ್ವಜನಿಕ ನೇಮಕಾತಿಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶವನ್ನು ಖಚಿತಪಡಿಸುತ್ತವೆ. ಮಹಿಳೆಯರಿಗೆ ಆರ್ಥಿಕ ಸಮಾನತೆಯನ್ನು, ಜೀವನೋಪಾಯದ ಆಯ್ಕೆಯ ಹಕ್ಕನ್ನು, ಸಮಾನ ಕೆಲಸಕ್ಕೆ ಸಮಾನ ವೇತನವನ್ನು, ಸುರಕ್ಷಿತ ಮತ್ತು ಮಾನವೀಯ ಉದ್ಯೋಗದ ವಾತಾವರಣ, ಹೆರಿಗೆ ಪರಿಹಾರ ಇವುಗಳನ್ನು ಒದಗಿಸಿಕೊಡಲು ರಾಜ್ಯಗಳನ್ನು ನಿರ್ದೇಶಿಸುತ್ತದೆ ಸಂವಿಧಾನ. 

 ಅವಳ ಸೌಂದರ್ಯವೇ ಅವಳಿಗೆ ಮುಳಿವು ಎನ್ನುವ ಹುಸಿ ನಂಬಿಕೆಯನ್ನು ಢಾಳಾಗಿ ಬಿತ್ತಲು ಕಿವಿಯ ಹಲ್ಲೆಗೆ ಕಬ್ಬಿಣದ ಹಾಳೆಗಳನ್ನು ತೂಗುಬಿಡುತ್ತಿದ್ದ ಅಮಾನವೀಯತೆಯಿಂದ, ಯಾರೇ ಉಡುಗೊರೆ ಕೊಟ್ಟಿರಲಿ ಅವಳು ಧರಿಸಿರುವ ಒಡವೆಗಳೆಲ್ಲಾ ಅವಳದ್ದೇ ಸ್ತ್ರೀಧನ ಎನ್ನುವ ಆಸ್ತಿ ಹಕ್ಕಿನವರೆಗೂ, ದಾಖಲೆಗಳಲ್ಲಿ ತಂದೆಯ ಹೆಸರು ನಮೂದಿಸುವುದು ಆಯ್ಕೆ ಮಾತ್ರ, ಒಂಟಿ ಮಹಿಳೆಯು ಮಗುವನ್ನು ದತ್ತು ಪಡೆದುಕೊಳ್ಳಬಹುದು ಎನ್ನುವ ಆಧುನಿಕ ಮಾತೃತ್ವದವರೆಗೂ ಮಹಿಳೆಯರಿಗೆ ಇರುವ ವೇದಿಕೆ ನಮ್ಮ ಸಂವಿಧಾನ. ದೇವದಾಸಿ ಪದ್ಧತಿ ನಿರ್ಮೂಲನೆಗೆ ಬೆಂಬಲಕೊಟ್ಟಷ್ಟೇ ಉತ್ಕಟವಾಗಿ ಲೈಂಗಿಕ ಕಾರ್ಯಕರ್ತರಿಗೂ ಮಾನವ ಹಕ್ಕುಗಳನ್ನು ಕೊಟ್ಟಿರುವ ಕಾನೂನುಗಳ ತಾಯಿಬೇರು ಸಂವಿಧಾನ. ಅಷ್ಟೇ ಏಕೆ ಈಗ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಸಿಗುವ ಅಸಂಖ್ಯ ಮಹಿಳಾ ಸಾಧ್ವಿಗಳೂ ಸಂವಿಧಾನ ನೀಡಿರುವ ಆಯ್ಕೆ ಸ್ವಾತಂತ್ರ್ಯದ ಫಲವೇ ಹೌದು.  

ಇಂತಹ ಸಂವಿಧಾನವನ್ನು ಭಾರತೀಯರು ಚಾಲ್ತಿಗೆ ತಂದುಕೊಂಡ ಗಣರಾಜ್ಯೋತ್ಸವ ದಿನವನ್ನು ನಿಜಾರ್ಥದಲ್ಲಿ ಭಾರತೀಯ ಮಹಿಳೆಯರ ದಿನಾಚರಣೆಯನ್ನಾಗಿಸಿ ಹಬ್ಬದಂತೆ ಆಚರಿಸಿಕೊಳ್ಳಬೇಕು. ನಮ್ಮ ದೃಷ್ಟಿಯಿಂದ ಜಗತ್ತು ತನ್ನನ್ನು ನೋಡಿಕೊಳ್ಳುವಂತೆ ಮಾಡುತ್ತಿರುವ ಗಣರಾಜ್ಯದ ಉತ್ಸವಕ್ಕೆ ಸಹಬಾಳ್ವೆಯನ್ನು ಸಂಗಾತಿಯನ್ನಾಗಿಸಿಕೊಟ್ಟ ಸಂವಿಧಾನವನ್ನೇ ಸಿಂಗಾರವಾಗಿಸಿಕೊಳ್ಳೋಣ, ಸಂತಸಗೊಳ್ಳೋಣ.

 ’ಜಗತ್ತಿನ ಎಲ್ಲೋ ಒಂದೆಡೆ ನಡೆಯಬಹುದಾದ ಅನ್ಯಾಯವೂ ಜಗತ್ತಿನ ಎಲ್ಲೆಡೆಯಲ್ಲಿಯೂ ಇರಲೇ ಬೇಕಾದ ನ್ಯಾಯಕ್ಕೆ ಒಡ್ಡುವ ಬೆದರಿಕೆ’ ಎನ್ನುವ ಮಾರ್ಟಿನ್ ಲೂಥರ್ ಕಿಂಗ್‍ನ ಮಾತುಗಳನ್ನು ಸಾಕಾರಾಗೊಳಿಸಿಕೊಳ್ಳಲು ಸಂವಿಧಾನವೆನ್ನುವ ಸೋಜಿಗದೊಡನೆ ಸಾಗುತ್ತಲೇ ಸ್ತ್ರೀಯರು ಸಮಾನರಾಗಬೇಕಿದೆ, ಸಬಲರಾಗಬೇಕಿದೆ ಮತ್ತಷ್ಟು. 

*****************************

26 ಜನವರಿ 2025

ಆಂದೋಲನ ಪತ್ರಿಕೆಯಲ್ಲಿ

Comments

Popular posts from this blog

ಆತ್ಮಹತ್ಯೆ ಬೆದರಿಕೆ - Law Point

ಸವಾಲು ದಾಟುವ ಸಂಭ್ರಮ in VK

Police Notice in ಪ್ರಜಾವಾಣಿ