ಬಳಸುವ ಭಾಷೆ - words used by women
ಇವತ್ತಿನ ಆಂದೋಲನ ಪತ್ರಿಕೆಯಲ್ಲಿ ಹೀಗೆ ಬರೆದಿದ್ದೇನೆ. ದಯವಿಟ್ಟು ಓದಿ 🙏😊
-------
ಅದೊಂದು ಜಾಹೀರಾತು. ಹರೆಯದವರು ಮೋಜಿನಲ್ಲಿ ಹೊಟೆಲ್ಲೊಂದರಲ್ಲಿ ಇರುತ್ತಾರೆ. ನಡುವೆ ಯುವತಿಯೊಬ್ಬಳು ತಲೆ ನರೆತ, ಕಟ್ಟುಮಸ್ತಾದ ಗಂಡಸಿನ ಜೊತೆ ಬೈಕ್‍ನಲ್ಲಿ ಬಂದು ಇಳಿಯುತ್ತಾಳೆ. ಕೂಡಲೇ ಅಲ್ಲಿದ್ದ ಸ್ನೇಹಿತೆ ’ ವಾವ್ ನಿನ್ನ ತಂದೆ ಎಷ್ಟು ಹಾಟ್ ’ ಎನ್ನುತ್ತಾ ಆತನತ್ತ ಸೆಳೆತದ ನೋಟ ನೆಡುತ್ತಾಳೆ. ಸ್ವಲ್ಪ ಹೊತ್ತಿನ ನಂತರ ಈ ಯುವತಿ ಆತ ತನ್ನ ತಂದೆಯಲ್ಲವೆಂದು ಬಾಯ್ ಫ್ರೆಂಡ್ ಎಂದೂ ಹೇಳುತ್ತಾಳೆ. ತಮ್ಮ ಪಾನೀಯ ಕುಡಿದು ದಿಲ್ ಖೋಲ್ ಕೆ ಬೋಲೋ ಎನ್ನುವ ಕಂಪನಿಯ ಜಾಹೀರಾತು ಮುಗಿಯುತ್ತದೆ.
ಇದರ ಗುಂಗಿನಲ್ಲೇ ಪೂರ್ತೀ ದಿನ ಕಳೆದು ಹೋಗಿದ್ದಾಗ ಒಮ್ಮೆಗೆ ಎನಿಸಿದ್ದು ಈ ಜಾಹೀರಾತಿನಲ್ಲಿ ಪಾತ್ರ ಪಲ್ಲಟ ಮಾಡಿದರೆ ಹೇಗಿರುತ್ತದೆ?!
ನಡುವಯಸ್ಸಿನಲ್ಲಿಯೂ ಮೈಕಟ್ಟು ಸುಂದರವಿರುವ ಹೆಣ್ಣೊಬ್ಬಳ ಜೊತೆ ಯುವಕನೊಬ್ಬ ಬಂದಿಳಿದಾಗ ಆತನ ಸ್ನೇಹಿತ ಆಕೆಯನ್ನೇ ದಿಟ್ಟಿಸುತ್ತಾ ’ ಹೇ ನಿನ್ನ ತಾಯಿ ಎಷ್ಟು ಹಾಟ್ ’ ಎಂದರೆ ಹೇಗಿರುತ್ತದೆ? ಆಗ ಬಹುಶಃ ಅದನ್ನು ಲಿಂಗಾಧಾರಿತ ಹೇಳಿಕೆ ಎಂದು ಗುಲ್ಲೆಬ್ಬಿಸುತ್ತಾ ಮಹಿಳೆಯ ಘನತೆಗೆ ಚ್ಯುತಿ ತಂದ ಜಾಹೀರಾತು ಎಂದು ಅದನ್ನು ತಡೆಹಿಡಿಯಲು ನಾವೆಲ್ಲರೂ ಒಗ್ಗಟ್ಟಾಗಿ ಕೂಗುತ್ತಿದ್ದೆವು. ಹಾಗಾದರೆ ಗಂಡಸಿನ ಬಗ್ಗೆ ಹೆಣ್ಣು ಯಾವ ಪದಗಳನ್ನೇ ಉಪಯೋಗಿಸಬಹುದೇ? ಮಾತುಗಳಲ್ಲಿ ಆತನ ಘನತೆ ಅಡಗಿಲ್ಲವೇ ಅವಳದರ ಹಾಗೆ?
ಹಿಂದೊಮ್ಮೆ ಗಂಡಸರು ಮಾತ್ರ ಅವಾಚ್ಯ ಅಸಭ್ಯ ಮತ್ತು ಅಶ್ಲೀಲ ಪದಗಳನ್ನು ಹೀಗೆ ಸಾರ್ವಜನಿಕದಲ್ಲಿ ಎಗ್ಗುಸಿಗ್ಗಿಲ್ಲದೆ ಬಳಸುತ್ತಾರೆ ಎಂದಿತ್ತು ಆದರೀಗ ಮಹಿಳೆಯರು ತಾವು ಇದರಲ್ಲೂ ಸಮಾನರು ಎನ್ನುವುದನ್ನು ತೋರಿಸಿ ಕೊಡಲು ಹತ್ತು ಹೆಜ್ಜೆ ಮುಂದ್ದಿದ್ದಾರೇನೋ ಎನ್ನಿಸುತ್ತದೆ.
ಪದವಿ ಕಾಲೇಜೊಂದರಲ್ಲಿ ಅತಿಥಿ ಉಪನ್ಯಾಸಕಳಾಗಿ ಹೋಗುತ್ತಿದ್ದೆ. ನಿತ್ಯದ ಶೈಲಿ ಬದಲಿಸಿ ಅಪರೂಪಕ್ಕೆ ಚೊಕ್ಕಟವಾಗಿ ಅಲಂಕಾರ ಮಾಡಿಕೊಂಡು ಹೋಗಿದ್ದಾಗ ವಿದ್ಯಾರ್ಥಿಯೊಬ್ಬ ಬಾಗಿಲಿನಲ್ಲೇ ’ ವಾವ್ ಮ್ಯಾಮ್ ಯು ಆರ್ ಲುಕಿಂಗ್ ಸೆಕ್ಸಿ ’ ಎಂದ. ಆ ಕ್ಷಣದಲ್ಲಿ ಯಾವುದೇ ಪ್ರತಿಕ್ರಿಯೆ ನೀಡದೆ ಅಂದಿನ ಪೀರಿಯಡ್‍ನ ಕೊನೆಯ ಹತ್ತು ನಿಮಿಷ ಆ ಸಂದರ್ಭದಲ್ಲಿ ಆ ಹುಡುಗನ ಉದ್ದೇಶಕ್ಕೆ ಸರಿ ಹೊಂದುವ ಸೆಕ್ಸಿ ಪದಕ್ಕೆ ಪರ್ಯಾಯವಾದ ಪದಗಳ ಪಟ್ಟಿ ಮಾಡಿಸಿದೆ. ವಿದ್ಯಾರ್ಥಿಗಳು ಒಟ್ಟು 12 ಪದಗಳ ಹೆಕ್ಕಿ ತೆಗೆದಿದ್ದರು.
ಭಾಷೆಯ ಬಳಕೆಯನ್ನು ಒಂದೆರಡು ಪದಗಳಿಗೆ ಸೀಮಿತಗೊಳಿಸಿಕೊಂಡಾಗ ಮೆದುಳಿನ ಸಾಮರ್ಥ್ಯ ಕುಗ್ಗುತ್ತದೆ ಎನ್ನುತ್ತದೆ ವಿಜ್ಞಾನ. ಆದರೆ ಇಲ್ಲಿ ಹೇಳಬೇಕಿರುವುದು ಪುರುಷರೆಡೆಗೆ ಮಹಿಳೆಯರೂ ಸಸಾರವಾದ ಪದ ಬಳಕೆಯನ್ನು ನಿಲ್ಲಿಸಿದಾಗ ಅವಳ ಘನತೆ ಹೆಚ್ಚಿ ಸಮಾನತೆ ಎನ್ನುವುದು ಇಬ್ಬರ ನಡುವೆ ಸಹಜವಾದ ಉತ್ಪನ್ನವಾಗುತ್ತದೆ. ಅವನು ಅವಳನ್ನು ಅಸಭ್ಯವಾಗಿ ಸಂಭೋದಿಸಬಾರದು ಎನ್ನುವ ನಿರೀಕ್ಷೆ ಇದ್ದರೆ ಅವಳೂ ಅದನ್ನು ಪಾಲಿಸಬೇಕು. ಎನ್ನುವುದು ಪ್ರಕೃತಿ ಸಹಜ ನಿರೀಕ್ಷೆ ತಾನೇ?
ನಿಶಬ್ಧ್ ಎನ್ನುವ ಹಿಂದಿ ಸಿನೆಮಾವೊಂದರಲ್ಲಿ ಮಧ್ಯವಯಸ್ಸಿನ ಅಮಿತಾಬ್ ತನ್ನ ಮಗಳ ಸ್ನೇಹಿತೆಯೊಡನೆ ಪ್ರೀತಿಗೆ ಬೀಳುತ್ತಾನೆ. ಆ ಕಥೆಯನ್ನೇ ನಮ್ಮ ಸಮಾಜ ನಿರಾಕರಿಸಿ ಸಿನೆಮಾವನ್ನು ಸೋಲಿಸಲಾಗಿತ್ತು. ಹೀಗೆಲ್ಲಾದರು ಆಗತ್ತಾ ಎನ್ನುವ ಸೋಜಿಗವನ್ನೇ ತಲೆ ಮೇಲೆ ಹೊತ್ತಿದ್ದವರು ಬಹುಪಾಲು ಜನರು ಆಗ. ಈಗ ದಿನದಿಂದ ದಿನಕ್ಕೆ ತಂದೆಯೇ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಅಪ್ಪನು ಮಗಳ ಸಹಪಾಠಿಯನ್ನೇ ಪ್ರತ್ಯೇಕ ಮನೆ ಮಾಡಿಟ್ಟು ಅವಳೊಡನೆ ಸಂಸಾರ ನಡೆಸುತ್ತಿದ್ದಾನೆ. ಮಗುವನ್ನೂ ಬಿಡದೆ ಕಾಮವನ್ನು ಕಂಡಕಂಡಲ್ಲಿ ಹರಿಸುತ್ತಿದ್ದಾನೆ. ಇಂತಹ ಕಾಡ್ಗಿಚ್ಚಿಗೆ ಹುಡುಗಿಯರು ಹೀಗೆ ಬಳಸುವ ಭಾಷೆ, ಮಾತುಗಳೂ ಪೆಟ್ರೋಲಿನಂತೆ ಕೆಲಸ ಮಾಡಬಾರದು ಅಲ್ಲವೇ?
ಭಾವ ಎನ್ನುವುದು ನೋಡುವವರ ಕಣ್ಣಲ್ಲಿ, ಕೇಳುವವರ ಕಿವಿಯಲ್ಲಿ ಮಾತ್ರವಲ್ಲ ಆಡುವವರ ಭಾಷೆಯಲ್ಲಿಯೂ ಅಡಗಿರುತ್ತದೆ. ಸಲುಗೆ ಎನ್ನುವ ತಲೆಬರಹದಡಿಯಲ್ಲಿ ಉದ್ದೇಶ ಇಲ್ಲದೆಯೂ ನಾವುಗಳು ಆಡುವ ಮಾತುಗಳು, ಬಳಸುವ ಪದಗಳು ಮಹಿಳಾ ಸಮುದಾಯದ ಘನತೆಯನ್ನೇ ಕುಗ್ಗಿಸಿ ಎಲ್ಲರೂ ಹೀಗೇ ಎನ್ನುವ ಷರಾ ಬರೆಸಿಬಿಡಬಾರದು.
ನಾವು ಯುವಕರು ಏನು ಮಾಡಿದರೂ ಅದೇ ’ ಸ್ಟೈಲ್ ಸ್ಟೇಟ್‍ಮೆಂಟ್ ’ ಎನ್ನುವ ಗುಂಗಿಗೆ ಬಿದ್ದ ನಡವಳಿಕೆ ನಿಜಾರ್ಥದಲ್ಲಿ ನೋಯುತ್ತಿರುವ ಮಹಿಳೆಯರು ಅವರ ಪಾಲಿನ ನ್ಯಾಯಯುತವಾದ ಪಾಲು ಪಡೆಯಲು ತೊಡಕಾಗಬಾರದು. ಅದೇ ಜಾಹೀರಾತಿನಲ್ಲಿ ’ ವಾವ್ ನಿಮ್ಮ ತಂದೆ ಎಷ್ಟು ಹಾಟ್ ’ ಎನ್ನುವ ಬದಲು ’ ವಾವ್ ನಿಮ್ಮ ತಂದೆ ಎಷ್ಟು ಕೂಲ್ ’ ಎಂದಿದ್ದರೆ ಎನ್ನುವ ಪ್ರಶ್ನೆಯನ್ನು ಹಾಕಿಕೊಂಡೇ ಸಹಬಾಳ್ವೆಗೆ ಹೊಸ ಭಾಷ್ಯ ಭಾಷೆಯಿಂದಲೂ ಬರೆಯಬೇಕಿದೆ.
**************************
Comments
Post a Comment