Marriage registration - ವಿವಾಹ ನೋಂದಾವಣೆ

 

ವಿವಾಹ ನೋಂದಣಿ: ಯಾಕೆ? ಹೇಗೆ?

ಭಾರತದಂತಹ ಸಾಂಪ್ರದಾಯಿಕ ನೆಲೆಯಲ್ಲಿ ನಿಂತು ನೋಡಿದಾಗ ವಿವಾಹ ನೋಂದಣಿಯ ಅಗತ್ಯವಿದೆಯೇ ಎನ್ನುವ ಪ್ರಶ್ನೆ ಅನೇಕರನ್ನು ಕಾಡುವುದುಂಟು. ಸಾವಿರಾರು ಜನರ ಸಮ್ಮುಖದಲ್ಲಿ ವಿವಾಹವಾಗುತ್ತದೆ. ಬಂಧು–ಮಿತ್ರರನ್ನೆಲ್ಲಾ ಆಹ್ವಾನಿಸಲಾಗುತ್ತದೆ. ಹೀಗಿದ್ದ ಮೇಲೆ ವಿವಾಹದ ನೋಂದಣಿ ಯಾಕೆ ಬೇಕು ಎನ್ನುವ ಪ್ರಶ್ನೆ ಸಾಮಾನ್ಯ.


ಎಲ್ಲವೂ ಸರಿ ಇದ್ದಾಗ ವಿವಾಹ ನೋಂದಣಿಯ ಪ್ರಶ್ನೆಯೇ ಬರುವುದಿಲ್ಲ ನಿಜ. ಆದರೆ, ಕೆಲವೊಮ್ಮೆ ಎಲ್ಲೋ ಏನೊ ಸಮಸ್ಯೆ ತಲೆದೋರಿದಾಗ ವಿವಾಹ ನೋಂದಣಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಮದುವೆಗಳು ಹಳಿ ತಪ್ಪುವ ಪ್ರಕರಣಗಳು ಹೆಚ್ಚಾಗಿ ಘಟಿಸುತ್ತಿರುವ ಈ ಕಾಲದಲ್ಲಿ ಸುರಕ್ಷತೆಗಾಗಿ, ಅದರಲ್ಲೂ ಹೆಣ್ಣುಮಕ್ಕಳ ರಕ್ಷಣೆಗಾಗಿ ವಿವಾಹ ನೋಂದಣಿ ಬಹಳ ಸಹಾಯಕಾರಿ.

ವಿವಾಹ ನೋಂದಣಿ ಎಂದರೇನು? ಅದು ಯಾಕೆ ಬೇಕು? ಯಾವ ಪ್ರಕಾರದ ವಿವಾಹಗಳನ್ನು ನೋಂದಣಿ ಮಾಡಿಸಬಹುದು?

ಅರ್ಹತೆಗಳೇನು? ನಿಯಮಗಳೇನು? ಯಾವ ದಾಖಲೆಗಳು ಬೇಕು? ಮದುವೆಯಾಗಿ ವರ್ಷಗಳ ನಂತರವೂ ನೋಂದಣಿ ಮಾಡಿಸಬಹುದೇ? ಎನ್ನುವ ಕುರಿತು ವಕೀಲೆ ಅಂಜಲಿ ರಾಮಣ್ಣ ಇಲ್ಲಿ ಮಾತನಾಡಿದ್ದಾರೆ.


ಯಾಕೆ ಬೇಕು ವಿವಾಹ ನೋಂದಣಿ: ಮದುವೆ ಪ್ರಮಾಣ ಪತ್ರ ಒಂದು ಸರ್ಕಾರಿ ದಾಖಲೆಯಾಗಿದ್ದು, ವಿಶೇಷವಾಗಿ ಮಹಿಳೆಯರಿಗೆ ಸಾಮಾಜಿಕ ರಕ್ಷಣೆ, ಸಾಮಾಜಿಕ ಭದ್ರತೆ ಹಾಗೂ ಇತರ ಸವಲತ್ತುಗಳನ್ನು ಪಡೆಯಲು ಅಗತ್ಯವಾಗಿದೆ. ವಿದೇಶಗಳಿಗೆ ಪತಿ/ಪತ್ನಿಯನ್ನು ಕರೆದೊಯ್ಯಬೇಕಾದ ಸಂದರ್ಭದಲ್ಲಿ ವಿಸಾ ಪಡೆಯುವ ಸಲುವಾಗಿ ಮದುವೆ ನೋಂದಣಿ ಪ್ರಮಾಣ ಪತ್ರ ಸಹಾಯಕವಾಗುತ್ತದೆ. 


ಪತಿ/ಪತ್ನಿ ಇವರ ಪೈಕಿ ಯಾರಾದರೊಬ್ಬರು ಬ್ಯಾಂಕ್ ಡಿಪಾಸಿಟ್ ಅಥವಾ ವಿಮಾ ಪಾಲಿಸಿಯಲ್ಲಿ ನಾಮ ನಿರ್ದೇಶನ ಮಾಡಿಯೂ ಮರಣ ಹೊಂದಿದರೆ ಅವರ ಹೆಸರಿನಲ್ಲಿದ್ದ ಬ್ಯಾಂಕ್ ಡಿಪಾಸಿಟ್ ಅಥವಾ ವಿಮಾ ಪಾಲಿಸಿಯ ಹಣ ಪಡೆಯಲು, ಅನುಕಂಪದ ನೌಕರಿ ಪಡೆಯಲು ಖಡ್ಡಾಯವಾಗಿ ವಿವಾಹ ನೋಂದಣಿ ಪ್ರಮಾಣಪತ್ರವನ್ನು ಸಲ್ಲಿಸಲೇಬೇಕು.


ಸರ್ಕಾರೀ ಕೆಲಸಕ್ಕೆ ಸೇರುವಾಗ ವಿವಾಹಿತ ಹೆಂಗಸು ಅಥವಾ ಗಂಡಸು ತಮ್ಮ ತಮ್ಮ ಪತಿ ಅಥವಾ ಪತ್ನಿಯ ಹೆಸರನ್ನು ಪಿಂಚಣಿ ದಾಖಲೆಗೆ ಮೊದಲೇ ನೀಡಬೇಕಿರುತ್ತದೆ. ಆಗಲೂ ಸಹ ವಿವಾಹ ನೋಂದಾವಣೆ ಸರ್ಟಿಫಿಕೇಟ್ ಬೇಕಿರುತ್ತದೆ.


ಸರ್ಕಾರವು ಕೌಟುಂಬಿಕ ಕಲ್ಯಾಣ ಯೋಜನೆಗಳನ್ನು ರೂಪಿಸಿ ಅದಕ್ಕಾಗಿ ನಿಧಿಯನ್ನು ನಿಗದಿಪಡಿಸಲು ವಿವಾಹಿತ ದಂಪತಿಗಳ ಅಂಕಿಅಂಶ ಬೇಕಿರುತ್ತದೆ. ಅದು ದೊರೆಯುವುದು ವಿವಾಹಗಳು ನೊಂದಾವಣೆಯಾಗಿದ್ದಾಗ ಮಾತ್ರ.

ಬಾಲ್ಯ ವಿವಾಹವನ್ನು ತಡೆಗಟ್ಟಲು ವಿವಾಹ ನೋಂದಾವಣೆ ಒಂದು ಮುಖ್ಯವಾದ ಸಾಧನ.


ಎಲ್ಲಿ ಮತ್ತು ಹೇಗೆ ನೋಂದಾಯಿಸಿಕೊಳ್ಳಬಹುದು: ಮದುವೆ ನಡೆದ ಸ್ಥಳದ ವ್ಯಾಪ್ತಿ ಅಥವಾ ವಧು-ವರರು ವಾಸಿಸುವ ಪ್ರದೇಶದ ನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ನೋಂದಾಯಿಸಬಹುದು. ಅಲ್ಲದೇ ಇದೀಗ ಆನ್‌ಲೈನ್‌ನಲ್ಲಿಯೂ ವಿವಾಹ ನೋಂದಣಿ ಮಾಡಬಹುದಾಗಿದ್ದು, ಅದಕ್ಕಾಗಿ https://kaveri.karnataka.gov. in/landing-page ವೆಬ್‌ಸೈಟ್‌ಗೆ ಭೇಟಿ ನೀಡಬಹುದು.


ಎರಡು ವಿಧದಲ್ಲಿ ವಿವಾಹ ನೋಂದಣಿ ಮಾಡಲಾಗುತ್ತದೆ: ಆಯಾ ಧರ್ಮದ ಪದ್ಧತಿಯ ಪ್ರಕಾರ ಮದುವೆಯಾದ ನಂತರ ನಿಗದಿತ ಮದುವೆ ನೋಂದಣಿ ಫಾರ್ಮ್ ನಲ್ಲಿ ವರ, ವಧು ಮತ್ತು ವಧುವಿನ ತಂದೆ ಅಥವಾ ತಾಯಿ ಅಥವಾ ಮೂರು ಜನರ ಸಾಕ್ಷಿಗಳು ತಮ್ಮ ಹೆಸರು, ಪೂರ್ತಿ ವಿಳಾಸ ನೀಡಿ   ಸಹಿ ಮಾಡಿ, ವಧೂ ವರರ ಜೋಡಿ ಫೋಟೊ ಹಾಗೂ ವಿಳಾಸ ಮತ್ತು ವಯೋಮಾನ ದೃಢೀಕರಣ ದಾಖಲೆಗಳ ಸಹಿತ ನಿಗದಿತ ನಮೂನೆಯ ಅರ್ಜಿಯೊಂದಿಗೆ ವಿವಾಹ ನೋಂದಣಾಧಿಕಾರಿಗೆ ದ್ವಿ ಪ್ರತಿಯಲ್ಲಿ ಖುದ್ದಾಗಿ ಇಲ್ಲವೆ ರಿಜಿಸ್ಟರ್ಡ್ ಅಂಚೆ ಮೂಲಕ ಸಲ್ಲಿಸಬೇಕು.


ವಿಶೇಷ ವಿವಾಹ ಅಧಿನಿಯಮದ ಅಡಿಯಲ್ಲಿ ನೋಂದಣಿ ಮಾಡುವವರು ನಿಗದಿತ ಅರ್ಜಿ ಫಾರಮ್‌ ಭರ್ತಿ ಮಾಡಿ , ವಯಸ್ಸಿನ ದಾಖಲೆಯ ಜೊತೆಗೆ ನೋಂದಣಿ ಅಧಿಕಾರಿಗೆ ಸಲ್ಲಿಸಬೇಕು. ಮದುವೆ ನೋಟೀಸನ್ನು ಅವರ ಕಚೇರಿಯ ನೋಟಿಸ್ ಬೋರ್ಡಿನಲ್ಲಿ  30 ದಿನಗಳ ಕಾಲ ಪ್ರಕಟಿಸಲಾಗುತ್ತದೆ.  ಯಾವುದೇ ಆಕ್ಷೇಪಣೆಗಳು ಬಾರದ್ದಿದ್ದಲ್ಲಿ ನಂತರದ 30 ದಿನಗಳ ಒಳಗಾಗಿ ವಧು ವರರಿಬ್ಬರೂ ಮೂರು ಜನ ಸಾಕ್ಷಿಗಳೊಂದಿಗೆ ಮದುವೆ ಅಧಿಕಾರಿಯ ಮುಂದೆ ಹಾಜರಾಗಿ ಅಧಿಕಾರಿಯ ಸಮಕ್ಷಮದಲ್ಲಿ ಸಹಿ ಮಾಡಬೇಕು.

ಆಧಾರ್ ಕಾರ್ಡ್ ಅನ್ನು ವಯಸ್ಸಿನ ದಾಖಲೆ ಎಂದು ಪರಿಗಣಿಸುವುದಿಲ್ಲ. ಅದು ಈ ನಾಡಿನಲ್ಲಿ ನಮ್ಮ ವಾಸದ ನೆಲೆಯನ್ನು ಮಾತ್ರ ಖಚಿತ ಪಡಿಸುವ ದಾಖಲೆ. ಹಾಗಾಗಿ ವಿವಾಹ ನೋಂದಾವಣೆಗೆ ಜನನ ಪ್ರಮಾಣ ಪತ್ರ ಅಥವಾ ಹತ್ತನೆಯ ತರಗತಿಯ ಅಂಕಪಟ್ಟಿ ಅಥವಾ ಪಾಸ್ಪೋರ್ಟ್ ಗಳನ್ನು ನೀಡಬೇಕೋರುತ್ತದೆ. ಇವುಗಳು ಇಲ್ಲವಾದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅರ್ಜಿ ಹಾಕಿ ಅಲ್ಲಿಂದ ಘೋಷಣಾ ತೀರ್ಪು ಪಾತ್ರವನ್ನು ತರಬೇಕಿರುತ್ತದೆ.


ಯಾರೆಲ್ಲಾ ವಿವಾಹ ನೋಂದಣಿ ಮಾಡಿಸಬಹುದು: ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಇತ್ಯಾದಿ ಯಾವುದೇ ಧರ್ಮೀಯರು, ತಮ್ಮ ಧರ್ಮದ ಸಂಪ್ರದಾಯದಂತೆ ವಿವಾಹವಾದ ದಂಪತಿಗಳು , ಈಗಾಗಲೇ ಮದುವೆಯಾಗಿ ಕೆಲವು ವರ್ಷಗಳು ಕಳೆದಿದ್ದರೂ ಸಹ ಕಾನೂನಿನ ಪ್ರಕಾರ ಮದುವೆಗಳನ್ನು ನೋಂದಾಯಿಸಬೇಕಿರುತ್ತದೆ. ಹೆಂಗಸು ಅಥವಾ ಗಂಡಸರಲ್ಲಿ ಇಬ್ಬರಲ್ಲಿ ಒಬ್ಬರಾದರೂ ಕಡ್ಡಾಯವಾಗಿ ಭಾರತೀಯ ಪ್ರಜೆ ಆಗಿರಬೇಕಿರುತ್ತದೆ. ಮಸೀದಿ ಹಾಗೂ ಚರ್ಚ್ ಗಳಲ್ಲಿ ನೋಂದಾವಣೆ ಮಾಡಿದ್ದರೂ ವಿವಾಹ ನೋಂದಣಾಧಿಕಾರಿ ಯವರ ಬಳಿ ನೋಂದಾಯಿಸಿಕೊಳ್ಳುವುದು ಅವಶ್ಯಕವಿರುತ್ತದೆ.


ಹಿಂದೂ ವಿವಾಹ ಕಾಯ್ದೆ 1955 ಮತ್ತು ವಿಶೇಷ ವಿವಾಹ ಕಾಯ್ದೆ 1954ರ ಅಡಿ ವಿವಾಹವಾಗಲು ಬಯಸುವ ವರ ಅಥವಾ ವಧುವಿಗೆ ಈ ಮುಂಚೆಯೇ ಮದುವೆ ಆಗಿರುವ ಜೀವಿತ ಪತಿ ಅಥವಾ ಪತ್ನಿ ಇದ್ದಲ್ಲಿ ಅವರು ವಿವಾಹಕ್ಕೆ ಅರ್ಹರಲ್ಲ. ಸ್ವ ಇಚ್ಚೆಯಿಂದ ಮದುವೆಗೆ ಒಪ್ಪಿಗೆ ಕೊಡಲು

ಅಸಮರ್ಥರಾದ ಮಾನಸಿಕ ಅಸ್ವಸ್ಥರು, ಬುದ್ಧಿಬ್ರಮಣೆಗೆ ಒಳಗಾದವರು ವಿವಾಹಕ್ಕೆ ಅರ್ಹರಲ್ಲ. 18 ವರ್ಷ ತುಂಬದ ಹೆಣ್ಣು, 21 ವರ್ಷ ವಯಸ್ಸು ತುಂಬದ ಗಂಡು ವಿವಾಹ ಮಾಡಿಕೊಳ್ಳುವಂತಿಲ್ಲ.

2006ರಲ್ಲಿ ಸೀಮಾ ಅಶ್ವಿನ್‌ಕುಮಾರ್‌ ಎನ್ನುವ ದಂಪತಿಯ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯ ಯಾವುದೇ ಧರ್ಮದ ಮದುವೆಗಳನ್ನು ಖಡ್ಡಾಯವಾಗಿ ನೋಂದಣಿ ಮಾಡಬೇಕು ಎಂದು ತೀರ್ಪು ನೀಡಿತು. ಈ ತೀರ್ಪನ್ನು ಅನುಸರಿಸಿ 2008ರಲ್ಲಿ ಕರ್ನಾಟಕದಲ್ಲಿ ಕರ್ನಾಟಕ ರೆಜಿಸ್ಟ್ರೇಶನ್‌ ಆ್ಯಕ್ಟ್‌ ಪರಿಚಯಿಸಿದ್ದು, ಯಾರೆಲ್ಲಾ ಸಾಂಪ್ರದಾಯಿಕವಾಗಿ ವಿವಾಹವಾಗಿ, ಈವರೆಗೂ ನೋಂದಣಿ ಮಾಡಿಲ್ಲವೋ ಅವರು ಅಗತ್ಯ ದಾಖಲೆಗಳೊಂದಿಗೆ ಮದುವೆ ನೋಂದಣಿ ಮಾಡಿಕೊಳ್ಳಲು ಸಾಧ್ಯವಿರುತ್ತದೆ.

ಗಂಡ–ಹೆಂಡಿರ ನಡುವಿನ ಸಂಬಂಧ ತೊಡರಿದಾಗ ವಿವಾಹವನ್ನೇ ಅಲ್ಲಗಳೆಯುವ, ಮಕ್ಕಳನ್ನೂ ತನ್ನವಲ್ಲ ಎಂದು ಹೇಳುವ ಗಂಡಸರಿದ್ದಾರೆ. ಜೀವನಾಂಶ ಅಥವಾ ಆಸ್ತಿಯ ಪಾಲನ್ನು ಉಳಿಸಿಕೊಳ್ಳಲು ಕೆಲವರು ಈ ಕುತಂತ್ರ ಅನುಸರಿಸುವುದೂ ಇದೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಗಂಡ ಮರಣ ಹೊಂದಿದಾಗ ಆತನ ಮನೆಯವರು ಸೊಸೆಯನ್ನು ತಮ್ಮ ಸೊಸೆ ಎಂದು ಒಪ್ಪಿಕೊಳ್ಳದ ಸಂದರ್ಭವೂ ಎದುರಾಗುತ್ತದೆ.  ತಮ್ಮ ಮಗಳನ್ನು ವಂಚಿಸಿ ಕದ್ದೊಯ್ದಿದ್ದಾನೆ ಎಂದು ಗಂಡಸಿನ ಮೇಲೆ ದೂರು ದಾಖಲಿಸುವ ತಂದೆತಾಯಿಯರು ಇದ್ದಾರೆ. ಇಂತಹ ಸಂದರ್ಭಗಳಲ್ಲೆಲ್ಲಾ ವಿವಾಹ ನೋಂದಣಿ ಆಪತ್ಬಾಂಧವನಂತೆ ಕೆಲಸ ಮಾಡುತ್ತದೆ. ಹೀಗಾಗಿ, ಪ್ರತಿಯೊಬ್ಬರೂ ವಿವಾಹವನ್ನು ನೋಂದಣಿ ಮಾಡಿಸುವುದು ಅಗತ್ಯ.

-------

ಪ್ರಜಾವಾಣಿ, 11-01-2025

Comments

Popular posts from this blog

ಆತ್ಮಹತ್ಯೆ ಬೆದರಿಕೆ - Law Point

ಸವಾಲು ದಾಟುವ ಸಂಭ್ರಮ in VK

Police Notice in ಪ್ರಜಾವಾಣಿ