Post Valentine's day


 18th February 2024

 ’ನೀನಲ್ಲ ನೀನಲ್ಲಾ ಈ ಕರಿಮಣಿ ಮಾಲೀಕ ನೀನಲ್ಲಾ. . .’ ಎನ್ನುವ ರೀಲ್ಸ್‍ಗಳು ಅಂತರ್ಜಾಲದಲ್ಲಿ ಕೊರಳು ಕೊಂಕಿಸಿ, ಬೆರಳು ತಿರುಗಿಸಿ ಹಾಡಾಗುತ್ತಿರುವ ಹೊತ್ತಿನಲ್ಲಿ ಮತ್ತೊಂದು ವ್ಯಾಲೆಂಟೈನ್ ದಿವಸ ಬಂದು, ಮುಗಿದೂ ಹೋಗಿದೆ. ಮಾರನೆಯ ದಿನ ಕಸದ ಗಾಡಿಯಲ್ಲಿ ಬಗ್ಗಿ ನೋಡಿದಾಗ ಅಷ್ಟೊಂದು ಗುಲಾಬಿ ಶವಗಳು ಕಾಣಲಿಲ್ಲ. ಪ್ರೇಮಿಗಳು ಕಡಿಮೆಯಾಗಿಬಿಟ್ಟರೇನು!


ಕ್ರಿಸ್ಮಸ್ ಮತ್ತು ವ್ಯಾಲೆಂಟೈನ್ ದಿವಸಗಳಲ್ಲಿ ಅವುಗಳದ್ದೇ ಕಥೆ ಹೊತ್ತು ತಯಾರಾಗುತ್ತವೆ ಹಲವಾರು ಇಂಗ್ಲೀಷ್ ರೋಮ್ಯಾಂಟಿಕ್ ಸಿನೆಮಾಗಳು. ಅರ್ಧ ವರ್ಷ ಅವುಗಳನ್ನು ನೋಡುತ್ತಾ ನಾ ಕೂಡ ಅದೇ ಭಾವದಲ್ಲಿ ಉಕ್ಕುತ್ತಿರುತ್ತೇನೆ. ಆದರೆ ಈ ಬಾರಿ ಅಂತಹ ಸಿನೆಮಾಗಳೂ ಬಂದಿಲ್ಲ. ಪ್ರೇಮಿಗಳು ರಜೆಯ ಮೇಲೆ ಹೋಗಿ ಬಿಟ್ಟರೋ ಏನೋ!


ಒಂದಾನೊಂದು ಕಾಲದಲ್ಲಿ  ವ್ಯಾಲೆಂಟೈನ್ ಎನ್ನುವ ಹೆಸರಿನ ಸಂತ ಇದ್ದನಂತೆ. ಅವನೂರಿನಲ್ಲಿ ರೋಮನ್ನರು ಆಳುತ್ತಿರುವಾಗ ಸೈನಿಕರಿಗೆ ಮದುವೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇರಲಿಲ್ಲವಂತೆ. ಆದರೆ ಈ ಸಂತ ಕದ್ದು ಮುಚ್ಚಿ ಅವರಿಗೆಲ್ಲಾ ಮದುವೆ ಮಾಡಿಸುತ್ತಿದ್ದನಂತೆ. ಇದು ರೋಮಿನ ಸಾಮ್ರಾಟನಿಗೆ ಗೊತ್ತಾಗಿ ಸಂತ ವ್ಯಾಲೆಂಟೈನಿಗೆ ಮರಣದಂಡನೆ ವಿಧಿಸಿಬಿಟ್ಟನಂತೆ. 


ಕೊನೆಯ ಉಸಿರು ನಿಲ್ಲುವಾಗ ಈತ ಜೈಲರ್ನ ಮಗಳಿಗೆ ’your valentine’ ಎಂದು ಬರೆದಿರುವ ಒಂದು ಚೀಟಿ ಕೊಟ್ಟನಂತೆ. ಅವತ್ತಿನಿಂದ ಸಂತನ ಹುಟ್ಟುಹಬ್ಬವಾದ 14ನೆಯ ಫೆಬ್ರವರಿಯನ್ನು ಕ್ರಿಶ್ಚಿಯನ್ನರು ಪ್ರೇಮಿಗಳ ದಿನ ಎಂದು ಶುರುವಿಟ್ಟುಕೊಂಡರಂತೆ.

ಕಾಲನ ಜೊತೆಗೆ ವ್ಯಾಲೆಂಟೈನ್‍ನ ಅರ್ಥವೇ ಪ್ರೇಮಿಯೇನೋ ಎನ್ನುವ ಹಾಗಾಗುವವರೆಗೂ ನಡೆದು ಬಂದಿದ್ದಾನೆ ಹೀಗೊಬ್ಬ ಸಂತ. 


ಹರೆಯ ಜಗತ್ತಿಗೆ ತಾನು ಬರುತ್ತಿದ್ದೇನೆ ಎಂದು ಮೆಲುದನಿಯಲ್ಲಿ ಹೇಳುತ್ತಿದ್ದಾಗ ಈ ಕಥೆ ಓದಿದ್ದೆ. ದೂರದರ್ಶನದ ಏಕವಾಹಿನಿ ಸಹಸ್ರಪದಿಯಂತೆ ಬೆಳೆದು ಮನೆ ಭರ್ತೀ ಟಿವಿ ಚ್ಯಾನಲ್‍ಗಳಾಗಿ ನಿಂತಾಗ ಗೊತ್ತಾಯ್ತು ವ್ಯಾಲೆಂಟೈನ್ ಸಂತ ಈಗ ಸಂತೆಯಾಗಿದ್ದಾನೆ ಅಂತ.

 

ವರ್ಷಗಳ ಹಿಂದೆ ಮುಂಬೈನಿಂದ ಒಂದು ಕೇಸ್ ಬಂದಿತ್ತು. ಇಪ್ಪತ್ತೈದು ವರ್ಷದ ಅವರಿಬ್ಬರ ಪ್ರೇಮಕ್ಕೆ ನಾಲ್ಕು ವರ್ಷ ವಯಸ್ಸು. ವರ್ಷವಿಡೀ ಮನಸ್ತಾಪ, ಜಗಳ, ಕುಡಿತ ಹೊಡೆತದಲ್ಲಿ ಕಳೆಯುತ್ತಿದ್ದ ಅವರ ಸಂಬಂಧ ಪ್ರೇಮಿಗಳ ದಿನದಂದು ಅವನು ಕೊಡುತ್ತಿದ್ದ ಕೆಂಪು ಗುಲಾಬಿ ಗುಚ್ಛ ಮತ್ತು ವೈನ್ ಬಾಟಲಿಯೊಂದರಿಂದ ಮತ್ತೊಂದು ವರ್ಷಕ್ಕೆ ರಿನ್ಯೂಗೊಳ್ಳುತ್ತಿತ್ತು. ಅಷ್ಟರ ಮಟ್ಟಿಗೆ ಸಂತತನ ಉಳಿಸಿಕೊಂಡಿದ್ದ ಹುಡುಗ. 


ಹಾಂ, ಕನಕಪುರದ ವರುಣಿ ನೆನಪಾಗುತ್ತಿದ್ದಾಳೆ. 7 ವರ್ಷಗಳಿಂದ ಅವನ ಜೊತೆ ಸಿನೆಮಾಕ್ಕೆ ಹೋಗುತ್ತಾಳೆ, ಗೋಬಿ ಗಾಡಿಯ ಕತ್ತಲಲ್ಲಿ ನುಲಿಯುತ್ತಾಳೆ, ಪ್ರತೀ ವ್ಯಾಲೆಂಟೈನ್ ದಿನಕ್ಕೂ ಹದಿನಾಲ್ಕು ಮುತ್ತುಗಳನ್ನೂ ಕೊಡುತ್ತಿದ್ದಾಳೆ ಆದರೆ ಅವನನ್ನು ಮದುವೆ ಆಗಲು ಒಲ್ಲೆ ಎನ್ನುತ್ತಿದ್ದಾಳೆ. ಈಗವಳಿಗೆ ಮನೆಯಲ್ಲಿ ಸಂಬಂಧ ಕುದುರಿಸುತ್ತಿದ್ದಾರಂತೆ.

 

ಬಂಡವಾಳದಾರರ ಒಂದು ಕಾರ್ಯಕ್ರಮದಲ್ಲಿ ಅಕ್ಕತಂಗಿಯರಿಬ್ಬರು ತಮ್ಮ ಒಡವೆ ವ್ಯಾಪಾರಕ್ಕೆ ಬಂದಿದ್ದರು. ಅವರ ಪಟ್ಟಿಯಲ್ಲಿ ಅತೀ ಕಡಿಮೆ ದರವಿದ್ದ ’ವ್ಯಾಲೆಂಟೈನ್ ಉಂಗುರ’ವನ್ನು ನೋಡಿ ಬಂಡವಾಳದಾರರು ವಿವರ ನೀಡಲು ಕೇಳಿದ ಪ್ರಶ್ನೆಗೆ ಅವರು ಹೇಳಿದ್ದು ’ವ್ಯಾಲೆಂಟೈನ್ಸ್ ಡೇ ಎಂದರೆ ಮೋಜಿಗಾಗಿ ಮಾತ್ರ ಆಗ ಯಾರೂ ದುಬಾರಿ ಉಡುಗೊರೆ ಕೊಡುವುದಿಲ್ಲ. ಮದುವೆಯ ಉಂಗುರವಾದರೆ ಒಳ್ಳೆಯ ದರದ್ದು ಇರುತ್ತದೆ’ ಎಂದು. 


ಮೈಸೂರಿನ ಕಟ್ಟಾ ಸಾಹಿತಿ, ಅಚ್ಚಪತ್ರಕರ್ತರ ಮಗಳು ನಾನು ವ್ಯಾಲೆಂಟೈನ್ ಎಂದರೆ ಇಂಗ್ಲೀಷ್ ನಿಘಂಟಿನಲ್ಲಿ ’Strong’ ಮತ್ತು ’Healthy’ ಎನ್ನುವುದನ್ನು ಓದಿದ್ದೆ. ಕಾಲೇಜು ಬಿಟ್ಟ ಎಷ್ಟೋ ವರ್ಷಗಳಾದರೂ ನೆನಪಿನ ಗಾಳದಲ್ಲೇ ಸಿಕ್ಕಿಕೊಂಡಿದ್ದೆ. ಹ್ಯಾಪಿ ವಲೆಂಟೈನ್’ಸ್ ಡೇ ಅಂತ ಇದ್ದ ಒಂದು ಕಾರ್ಡನ್ನು ನನ್ನ ನೆಚ್ಚಿನ ಲೆಕ್ಚರರ್ ಒಬ್ಬರಿಗೆ ಕಳುಹಿಸಿದೆ. ಆವರೆಗೂ ಸಂಪರ್ಕದಲ್ಲಿ ಇದ್ದ ಅವರು ಅಂದಿನಿಂದ ರಸ್ತೆಯ ತುದಿಯಲ್ಲಿ ನಾ ಕಂಡರೂ ದಿಕ್ಕು ಎಳೆದು ಹೋಗಿಬಿಡುತ್ತಿದ್ದರು. ಪಾಪ, ಅದೆಷ್ಟು ತಳಮಳಗೊಂಡಿದ್ದರೋ ಏನೋ ಸಂತೆಪೇಟೆಯಲ್ಲಿ ವ್ಯಾಲೆಂಟೈನ್‍ನನ್ನು ಕಂಡವರು.

 

ಸರಿ, ಈ ಬಾರಿ ಯಾಕೆ ಅಬ್ಬರಿಸಿ ಬೊಬ್ಬಿರಿಯಲಿಲ್ಲ ಮಾರ್ಕೇಟಿನಲ್ಲಿ ಪ್ರೇಮಿ ಮತ್ತವನ ಪ್ರೇಮ ಎಂದು ಯೋಚಿಸುವಾಗಲೇ ’ಅವನವಳ ಆಕರ್ಷಣೆಗಿಂತ ಬಲವಾದದ್ದು ಗುರುತ್ವಾಕರ್ಷಣೆ’ ಸಂತನಿರಲಿ ಪ್ರೇಮಿಯಿರಲಿ ಮಾರುಕಟ್ಟೆಯಲ್ಲಿ ಮೇಲೆ ಹೋದವನು ಕೆಳಗಿಳಿಯಲೇ ಬೇಕು’ ಎನ್ನುವ ಸತ್ಯ ತಲೆಯಮೇಲೆ ಮೊಟಕುತ್ತದೆ. ದೂರದಲ್ಲಿ ನನ್ನ ವ್ಯಾಲೆಂಟೈನ್ ಕೊಳಲಲಿ ಉಲಿಯುತ್ತಿದ್ದಾನೆ ’ನಿಲ್ಲಿಸಲಾರೆ ನಾ ವನಮಾಲೀ. . .ಕೊಳಲ ಗಾನವ ನಿಲ್ಲಿಸಿದರೆ. . .ಕಳೆವುದುಂಟೇ ಭವಭೀತಿಯ. . .’ 

*****************************

Comments

Popular posts from this blog

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್