Live - in Relationship
20-11-2022 ರ ಉದಯವಾಣಿಯಲ್ಲಿ ಲಿವಿನ್ ರೆಲೇಶನ್ಶಿಪ್ ಬಗ್ಗೆ ಬರಹ ;
ಇತ್ತು ಆ ಸಮಯ ಒಮ್ಮೆ, ಪ್ರೀತಿಸುವುದೆಂದರೆ ಮದುವೆಯಾಗುವುದು ಎಂದು. ಈಗ ಹಾಗಲ್ಲ, ಪ್ರೀತಿಸುವುದೆಂದರೆ ವಯೋಬೇಧವಿಲ್ಲದೆ ಪೋಷಕರನ್ನು ಧಿಕ್ಕರಿಸುವುದು, ಮನೆ ಬಿಟ್ಟು ಓಡಿಹೋಗುವುದು, ಕಾಮಾಕರ್ಷಣೆ ಮುಗಿದ ನಂತರ ಬೀದಿಪಾಲಾಗುವುದು. ಆಗೆಲ್ಲಾ, ಇಷ್ಟು exposure ಇರಲಿಲ್ಲ. ಮಕ್ಕಳು ಕುಟುಂಬದಂತೆ ಎನ್ನುವ ವ್ಯಕ್ತಿಗಳಾಗುತ್ತಿದ್ದರು. ಈಗ ಹಾಗಲ್ಲ, ಹೊಟ್ಟೆಯಿಂದಲೂ ಅವರ ನಿರ್ಧಾರ ಅವರದ್ದು.
ಕೆಲವಾರು ವರ್ಷ ಮದುವೆಯಿಲ್ಲದ ಕೂಡುವಿಕೆಯಲ್ಲಿ ಇದ್ದು, ಮಕ್ಕಳನ್ನು ಹೆತ್ತ ನಂತರ ಗಂಡಸು ಬಿಟ್ಟೆದ್ದು ಹೋಗಿರುವ ಏಕಪೋಷಕಿಯರು ಇದ್ದಾರೆ. ಸ್ನೇಹಿತೆಯರ ತಂದೆಯರ ಜೊತೆ ಎಲ್ಲವನ್ನು ತಿಳಿದೂ ಲಿವಿನ್ ರೆಲೇಷನ್ಷಿಪ್‍ನಲ್ಲಿರುವ ಯುವತಿಯರೂ ಇದ್ದಾರೆ. ಯಾಕೆ ಹೀಗೆ, ಹೌದು ಇದು ಎಲ್ಲರೂ ಈಗ ಕೇಳಿಕೊಳ್ಳುತ್ತಿರುವ ಪ್ರಶ್ನೆ. ಒಂದೊಮ್ಮೆ ಪ್ರೀತಿ ಎನ್ನುವ ಹೆಸರಿನಿಂದ ಒಂದಾಗಿ, ಒಪ್ಪಿ ಜೊತೆಯಲ್ಲಿ ನಡೆಸುವ ಜೀವನ, “ತನಗೆ ಬದುಕಲು ಬರುವುದಿಲ್ಲ, ನಿನ್ನನ್ನು ಬಾಳಲು ಬಿಡುವುದಿಲ್ಲ” ಎನ್ನುವ ಹಂತ ಯಾಕಾಗಿ ತಲುಪುತ್ತಿದೆ?
ಮೊನ್ನೆಮೊನ್ನೆ ಓದಿದ 32 ಹದಿಹರೆಯದವರ ಬರಹಗಳಲ್ಲಿ ಬಹುಪಾಲು ಕುಟುಂಬದ ಪ್ರೀತಿಗಾಗಿ ಹಪಾಹಪಿಕೆಯದ್ದೇ ಆಗಿತ್ತು. ಆದರೆ ಅದನ್ನು ಮೀರಿದ್ದು ವಾಸ್ತವದಲ್ಲಿ ಯುವಜನರಲ್ಲಿ ಹೆಚ್ಚುತ್ತಿರುವ ಕಾಮಾತುರ ಮತ್ತು ಅಸಹನೆ. ಯಾವುದರ ನಿರಂತರತೆಯೂ ಅವರಿಗೆ ಅಸಹಜ ಎನ್ನುವಂತಾಗಿದೆ. ಹೀಗೇ ಇರಬೇಕು ಎನ್ನುವುದರಿಂದ, ಹೀಗೂ ಇರಬಹುದು ಎನ್ನುವವರೆಗೂ ಬಂದು ಈಗ ಹೇಗೋ ಒಂದು ಇದ್ದರಾಯ್ತು ಎನ್ನುವ ಮನೋಭಾವ ಹೆಚ್ಚಾಗಿದೆ. ಆರ್ಥಿಕ ಸಬಲತೆಯೆಂದರೆ ಸಂಬಂಧಗಳ ಗೊಡವೆಯೇ ಬೇಡವೆನ್ನುವ ಅರ್ಥೈಸುವಿಕೆ, ನಾನು, ನನ್ನದು ಮತ್ತು ನನ್ನದು ಮಾತ್ರ ಎನ್ನುವ “ದ್ವೀಪಾರಾಧನೆ” ಪರಸ್ಪರರ ನಡುವಿನ ಬಿಸುಪನ್ನು ಬೇಗನೇ ತಣ್ಣಗಾಗಿಸುತ್ತಿದೆ ಮತ್ತು ಅದೇ ಗೆಡ್ಡೆಗಟ್ಟಿದ ಕ್ರೌರ್ಯವಾಗಿ ಮಾರ್ಪಾಡಾಗುತ್ತಿದೆ.
ದೌರ್ಜನ್ಯದನುಭವಕ್ಕೆ ಸಿಕ್ಕ ದಾಂಪತ್ಯವೂ ಬೇರಾಗುವ ಮೊದಲು ಉಳಿದುಕೊಳ್ಳಲು ನೂರು ಪ್ರಯತ್ನ ನಡೆಸುತ್ತದೆ. ಅದಕ್ಕೆ ಒಂದೇ ಕಾರಣ ಮದುವೆಗಿರುವ ಸಾಮಾಜಿಕ ಮಾನ್ಯತೆ ಮತ್ತು ಸಾಮುದಾಯಿಕ ಉತ್ತರದಾಯಿತ್ವ ಎನ್ನುವ ಹೊಣೆ. ಆದರೆ ಸಾಮಾಜಿಕ ಬದ್ಧತೆ ಎನ್ನುವುದಿಲ್ಲದ ಲಿವಿನ್ ರಿಲೇಷನ್‍ಶಿಪ್‍ನಲ್ಲಿ ಒಬ್ಬರಿಗೊಬ್ಬರು ಹೇಗೋ ಹೊಂದಿಕೊಂಡು ತೂಗುವ ಮಾತೆಲ್ಲಿ?!
Comments
Post a Comment