ಪುರುಷರ ದಿನ - Men Day
1.
ಗಂಡು ಮಕ್ಕಳೇನ್ ಮೇಡಂ ಹೆಂಗಿದ್ರೂ ಆಗತ್ತೆ -
ಅವನು ಗಂಡು ಹುಡುಗ ಅವನ್ ಮಾಡಿದ್ದೆಲ್ಲಾ ಇವಳೂ ಮಾಡ್ತೀನಿ ಅಂದ್ರೆ ಆಗತ್ತಾ -
ಮನೆ ಹತ್ರ ಸೇಫ್ಟಿ ಇಲ್ಲ ಅದಕ್ಕೆ ಮಗಳನ್ನು ಹಾಸ್ಟೆಲ್ ಗೆ ಹಾಕಿದ್ದೀನಿ ಮೇಡಂ , ಮಗನ್ನ ಮನೇಲೇ ಇಟ್ಟ್ಕೊಂಡಿದ್ದೀನಿ -
ಮಗನಿಗೆ ಸ್ಕೂಲ್ ಹೋಗದಿದ್ರೂ ಆಗತ್ತೆ ಮೇಡಂ ಗಂಡು ಹುಡುಗ ಅಲ್ಲವಾ ಜೀವನ ಹೇಗೋ ನಡೆಯತ್ತೆ ಆದರೆ ಮಗಳಿಗೆ ಹಂಗಾಗತ್ತಾ ಮೇಡಂ -
ಈ ರೀತಿಯ ಮಾತುಗಳನ್ನು ಆಡುತ್ತಾ ಮುಂದೆ ನಿಲ್ಲುವ ತಾಯಂದಿರನ್ನು ಕಂಡಗೆಲ್ಲಾ ಅನುಭವದಿಂದ ಕಂಡುಕೊಂಡ ಮಾತುಗಳನ್ನು ಅವರಿಗೆ, ಇವರಿಗೆ ಹೇಳಬೇಕು ಅನ್ನಿಸತ್ತೆ!
ಇವತ್ತು ಯಾವುದೇ ದೌರ್ಜನ್ಯ ಆದರೂ ಗಂಡಸೇ ಕಾರಣ ಎಂದು ಕೈತೋರಿಸಿ ಕಣ್ಣೊರೆಸಿಕೊಳ್ಳುತ್ತೇವೆ ಆದರೆ ಅವನು ಹಾಗಾಗಲು ಇವಳೇ ಕಾರಣ ಎನ್ನುವ ಮರೆವಿಗೆ ಬಲು ವೇಗ!
ವಾಸ್ತವದಲ್ಲಿ ಭಾವನಾತ್ಮಕ ಭದ್ರತೆ ತುಸು ಹೆಚ್ಚು ಬೇಕಿರುವುದು ಗಂಡಸಿಗೆ, ಆದರೆ ಮಗಳಿಗೆ ರಕ್ಷಣೆ ಬೇಕು ಎನ್ನುವ ತಾಯಿ ಮಗ ಹೇಗಿದ್ದರೂ ಆಗತ್ತೆ ಎನ್ನುವ ಮನೋಭಾವ ಇಟ್ಟುಕೊಂಡಿರುವುದು ಅವನನ್ನು ಮನುಷ್ಯನನ್ನಾಗಿ ಮಾಡುವಲ್ಲಿ ದಾರಿ ತಪ್ಪುತ್ತಿದೆ.
ಹೆಚ್ಚು ಪ್ರೀತಿ ಎನ್ನುವ ಸೋಗಿನಲ್ಲಿ ಗಂಡು ಮಕ್ಕಳಿಗೆ ಶಿಸ್ತು, ಮಾರ್ಗದರ್ಶನ, ನಡವಳಿಕೆ ಕಲಿಸುವಲ್ಲಿ ಸೋತು ಅವನು ಸ್ಪಷ್ಟ ರೂಪದಲ್ಲಿ ಬೆಳೆಯುವುದಕ್ಕೆ ತಾಯಿತಂದೆಯರೇ ಮುಳುವಾಗಿದ್ದಾರೆ.
ಭಾವನಾತ್ಮಕ ಸಂಬಂಧ ಸಿಗದೆ ಅವನು ಭಾವನೆಗಳ ಸರಿವ್ಯಕ್ತದಲ್ಲಿ ಎಡುವುತ್ತಿದ್ದಾನೆ. ನೀ ಮಾಡಿದ್ದೆಲ್ಲಾ ಸರಿ ಎನ್ನುವ ಮಾತನ್ನು ಅವನು ನಂಬಿಕೊಳ್ಳುವಂತೆ ಮಾಡಿದ್ದು ಹೆಂಗಸರೇ, ಪಾಪ, ಅದು ಅವನ ವ್ಯಕ್ತಿತ್ವವನ್ನು ಅವನೇ ಗುರುತಿಸಿಕೊಳ್ಳುವಲ್ಲಿ ಅವನನ್ನು ಹಳ್ಳ ಹಿಡಿಸಿದೆ.
ಅತೀ ಭಾವುಕತೆಯ ನರಳಾಟ ಇಲ್ಲವೇ ನಿರ್ಭಾವುಕ ಒರಟಾಟ ಇವೆರಡೇ ಗಂಡಸರ ಅಂಚುಗಳು! ಅಳುವಾಗ ಅತ್ತು ನಗುವಾಗ ನಗಿಸಿ, ಸುಖಿಸಿ, ಸಂತೋಷದ ಗoಧವಾಗುವ ಪರಿ ಅವನಿಗೆ ಕಲಿಸದೇ ವಂಚಿತನನ್ನಾಗಿಸಿದ್ದೇವೆ.
' ಅವನು ಗಂಡಸು ' ಎನ್ನುವುದು ಸುಲಭ ' ಅವನು ಮನುಷ್ಯ ' ಎನ್ನಲು ಉಹುಂ, ಇನ್ನೂ ಮಾಗಿಲ್ಲ ಕಾಲ, ಸ್ವಭಾವ ಎರಡೂ.
ಒಂದಷ್ಟು ಪ್ರೀತಿ, ಅದಕ್ಕಿಂತ ಒಂಚೂರು ಮುಂದಾದ ಶಿಸ್ತಿನ ಪಾಠ, ಇವೆರಡರ ನಡುವಿನ ಪ್ರಮಾಣದ ಮುದ್ದು ಕೊಟ್ಟು ಬೆಳೆಸಿದ ಮಗ ಮನೆಯ, ಮನದ, ಬೀದಿಯ ಬೆಳಕು ಮತ್ತು ನಿಜದ ದೀಪ ಆಗುವುದರಲ್ಲಿ ಅನುಮಾನವೇ ಇಲ್ಲ....
ಇವತ್ತು ಪುರುಷರ ದಿನವಂತೆ, ಅವನೊಳಗಿನ ಮನುಷ್ಯನನ್ನು ಗುರುತಿಸೋಣ, ಗೌರವಿಸೋಣ ಮತ್ತು ಪ್ರೀತಿಸೋಣ, ಇದೊಂದೇ ಬದುಕಿನ ಹೊರೆಹಂಚಿಕೆಯ ದಾರಿ!ಎಂದು ಹೇಳೋಣ ಎಂದುಕೊಂಡೆ ಅಷ್ಟೇ!
#FamilyCourtಕಲಿಕೆ
19-11-2024
Comments
Post a Comment