ಸುಖ ಸಂಸಾರಕ್ಕೆ ನೂರು ಎಂಟು ಮಾತುಗಳು
ಈಗಿನ ಎಲ್ಲಾ ಅನಿಷ್ಟಗಳಿಗೂ ಕುಟುಂಬ ವ್ಯವಸ್ಥೆ ಶಿಥಿಲಗೊಳ್ಳುತ್ತಿರುವುದೇ ಕಾರಣ ಎಂದು ಬಲವಾಗಿ ನಂಬಿಕೆ ಬರುತ್ತಿರುವ ಈ ಹೊತ್ತಿನಲ್ಲಿ ಓದಲು ಸಿಕ್ಕ ಪುಸ್ತವಿದು. ಸಂಸಾರ ಮುರಿದು ಹೋಗಲು ಕಾರಣಗಳು ಏನು ಎಂದು ಯಾರನ್ನೇ ಕೇಳಿದರೂ ದೊಡ್ಡ ಪಟ್ಟಿಯೇ ನೀಡುತ್ತಾರೆ. ಆದರೆ
ಪ್ರಖ್ಯಾತ ಹಿರಿಯ ವಕೀಲರು ಮತ್ತು ಮಧ್ಯಾಸ್ಥಿಕೆಗಾರರು ಆಗಿರುವ ಲೇಖಕಿ ಎಸ್ ಸುಶೀಲ ಚಿಂತಾಮಣಿ ಅವರು ತಮ್ಮ ಅನುಭವದ ಮೂಸೆಯಿಂದ ಬಂದ ನೂರೆಂಟು ಕಾರಣಗಳನ್ನು ವಿಸ್ತರಿಸಿರುವುದನ್ನು ಓದಿದಾಗ ನಮ್ಮದೇ ನಡವಳಿಕೆಗಳಿಗೆ ಕನ್ನಡಿ ಹಿಡಿದಂತೆ ಎನ್ನಿಸುತ್ತದೆ.
"ನನ್ನ ಸಂಸಾರದಲ್ಲಿ ನಾನು ಸರಿ" ಎಂದುಕೊಳ್ಳುವ ಪ್ರತೀ ಮನಸ್ಸು "ನನ್ನ ಸಂಸಾರದಲ್ಲಿ ನಾವು ಸರಿ" ಎಂದುಕೊಳ್ಳಲು ದೊಡ್ಡ ಪ್ರೇರೇಪಣೆಯೆಂತಿದೆ ಇದರಲ್ಲಿನ ಸಾಲುಗಳು. ನೂರೆಂಟು ಮಾತುಗಳು ಎನ್ನದೆ ನೂರು ಎಂಟು ಎಂದು ವಿಭಜಿಸಿ ನೀಡಿರುವ ಶೀರ್ಷಿಕೆ ಬಹಳ ಅರ್ಥಗರ್ಭಿತ. ನಮ್ಮನಮ್ಮ ಸoಸಾರದ ವಿಫಲತೆಗೆ ನೂರು ಕಾರಣ ಇಲ್ಲದೆ ಕೇವಲ ಎಂಟು ಸ್ವಭಾವವೂ ಇರಬಹುದು ಎನ್ನುವ ಯೋಚನೆಗೆ ತಾವು ನೀಡುತ್ತದೆ 108 ಸಂಕ್ಷಿಪ್ತ ಅಧ್ಯಾಯಗಳು.
ಗಂಡ ಹೆಂಡತಿಯ ಸಂಬಂಧ ಎಂದರೆ ಇಬ್ಬರೂ ಸೇತುವೆಯ ಮೇಲೆ ನಿತಂತೆ. ಒಬ್ಬರು ಆಕಾಶ ನೋಡುವಾಗ ಮತ್ತೊಬ್ಬರು ಕೆಳಗೆ ಹರಿಯುವ ನೀರನ್ನು ನೋಡುತ್ತಿರಬಹುದು. ಆದರೆ ಇಬ್ಬರೂ ನಿಂತಿರುವುದು ಸೇತುವೆಯ ಮೇಲೆ ಎನ್ನುವುದನ್ನು ಮರೆಯಲಾಗದು ಎಂಬರ್ಥದ ಮಾತುಗಳು ಯಾವ ಅಧ್ಯಾಯದಲ್ಲೂ ಬುದ್ಧಿವಾದದಂತೆ ತೋರದೆ " ವಿಷಯ ಹೀಗಿದೆ, ಆಯ್ಕೆ ನಿಮ್ಮದು " ಎನ್ನುವಂತಿದೆ.
ಹೌದು, ಗಂಡ ಹೆಂಡತಿ ಇಬ್ಬರಿಗೂ ಯಾವುದೇ ಹವ್ಯಾಸಗಳಿಲ್ಲದೆ ಅಥವಾ ಇಬ್ಬರ/ ಒಬ್ಬರ ಸೋಮಾರಿತನದಿಂದ ಕುಟುಂಬಗಳು ಒಡೆದುಹೋಗಿರುವುದನ್ನು ನಾನೂ ಕಂಡಿದ್ದೇನೆ. ಹವ್ಯಾಸ ಮತ್ತು ಸೋಮಾರಿತನ ಸಂಬಂಧಗಳ ಕೂಡುವಿಕೆಯಲ್ಲಿ ಎಷ್ಟು ಮುಖ್ಯ ಎಂದು ಲೇಖಕಿ ಹೇಳುವಾಗ ನಾ ಕಂಡ ಮುಗಿದುಹೋದ ಕುಟುಂಬಗಳು ಈ ಪುಸ್ತಕ ಓದಬಾರಾದಿತ್ತೆ ಎನ್ನಿಸಿತು.
ಅಂದಹಾಗೆ ಈ ಪುಸ್ತಕದಲ್ಲಿ ಸಂಬಂಧಗಳ ವಿಘಟನೆಗೆ ನೂರೆಂಟು ಕಾರಣಗಳನ್ನು ಪಟ್ಟಿ ಮಾಡಿ ಅವುಗಳನ್ನು ಸರಿಪಡಿಸಿಕೊಳ್ಳಲು ಒಂದು ಕಾರಣಕ್ಕೆ ಎಂಟು ಮಾರ್ಗಗಳನ್ನು ನೀಡಿದ್ದಾರೆ ಇದೇ ಕ್ಷೇತ್ರದ ಆಳ ಅಗಲವನ್ನು ದೂರ್ಬೀನಿನಲ್ಲಿ ಕಂಡಿರುವ ಬರಹಗಾತಿ.
*"********
Comments
Post a Comment