ಹೆಜ್ಜೇನು

 



ಪುಸ್ತಕದ ಹೆಸರು: ಹೆಜ್ಜೇನು

ನಿರೂಪಕರು : ರವೀಂದ್ರ ಭಟ್ಟ ಐನಕೈ  

ಪ್ರಕಾಶಕರು: ಡೀಡ್ ಸಂಸ್ಥೆ ಮೊದಲ ಮುದ್ರಣ: 2೦೦6 


ಕೆಲವು ಪುಸ್ತಕಗಳು ಓದಿ ಮುಗಿಸಿಕೊಳ್ಳುವುದೇ ಇಲ್ಲ. ಆಗಾಗ್ಗೆ ಮನಸ್ಸು ಬಯಸುತ್ತಲೇ ಇರುತ್ತದೆ ಓದಲು ಇನ್ನೊಮ್ಮೆ, ಮತ್ತೊಮ್ಮೆ. ನನ್ನ ಸಂಗ್ರಹದಲ್ಲಿ ಇರುವ ಅಂತಹ ಪುಸ್ತಕಗಳಲ್ಲಿ ಹೆಜ್ಜೇನು ಒಂದು.


ಹೆಜ್ಜೇನು ಆದಿವಾಸಿ ಮಹಿಳೆ ಜಾಜಿಯವರ ಆತ್ಮಕಥೆಯಾಗಿದೆ ಕನ್ನಡ ಸಾಹಿತ್ಯ ಸಂಸ್ಕೃತಿ ಹಾಗೂ ಭಾಷೆಯಲ್ಲಿ ಸಮುದಾಯಗಳ 'ವಾಕ್ ಇತಿಹಾಸ'ದ ದಾಖಲೆಯಾಗಿದೆ. ಇತಿಹಾಸವನ್ನು ಬರೆದಿಡಲು ಅಸಾಧ್ಯವಾದ ಸಮುದಾಯದ, ಜನಾಂಗದ ಪ್ರತಿನಿಧಿಯ ಇತಿಹಾಸವನ್ನು ಕಟ್ಟುವ ಪ್ರಯತ್ನ ಈ ಪುಸ್ತಕದಲ್ಲಿ ಇದೆ. 


ನಾಗರಹೊಳೆಯ ಕಾಡಿನ ಮೂರ್ಕಲ್ ಎನ್ನುವಲ್ಲಿ ತಾಜ್ ಒಡೆತನದ ಪಂಚತಾರಾ ಹೋಟೆಲ್ ನಿರ್ಮಾಣವಾಗುತ್ತಿದ್ದಾಗ ಅದನ್ನು ವಿರೋಧಿಸಿ ಆದಿವಾಸಿಗಳು ಚಳುವಳಿಯಲ್ಲಿ ನಿರತರಾಗಿದ್ದರು. ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಪಂಚತಾರಾ ಹೋಟೆಲ್ ನಿರ್ಮಾಣ ಕಾಡಿನಲ್ಲಿ ಬೇಡ ಎಂದು ಹೇಳಿದ್ದರು.


 ಆದಿವಾಸಿಗಳನ್ನು ಆಲಕ್ಷಿಸಿ, ಹೋಟೆಲ್ ನಿರ್ಮಾಣ ಕಾರ್ಯ ಮುಂದುವರೆದಿತ್ತು. ಒಂದು ದಿನ ಚಳುವಳಿ ನಿರತ ಆದಿವಾಸಿ ಮಹಿಳೆಯರನ್ನು ಮಹಿಳಾ ಪೊಲೀಸ್ ಪೇದೆಗಳು ದಸ್ತಗಿರಿ ಮಾಡಲು ಎಳೆದಾಡುತ್ತಿದ್ದರು.ಒಬ್ಬ ಹೆಣ್ಣುಮಗಳು ಧರಣಿ ಸ್ಥಳದಲ್ಲಿ ಮಲಗಿ ಬಿಟ್ಟಿದ್ದಳು. ಈಕೆಯನ್ನು ಪೇದೆಗಳು ಎಬ್ಬಿಸಲಾಗಲಿಲ್ಲ . ಆಕೆಯ ಕೈಕಾಲು ಜುಟ್ಟು ಹಿಡಿದು ಮೇಲೆತ್ತಿ ದಸ್ತಗಿರಿ ಮಾಡಲು ಪೊಲೀಸ್ ವ್ಯಾನಿಗೆ

ಕೊಂಡೊಯ್ಯುತ್ತಿದ್ದರು. ಇದನ್ನು ಆದಿವಾಸಿ ಮಹಿಳೆಯರು ತಡೆದಾಗ, ಆ ಕಾಡಿನ ಪರಿಸರದಲ್ಲಿ ಒಬ್ಬರಿಗೊಬ್ಬರು ನೂಕಾಟ ಆಗಿ ಕೆಳಗೆ ಬಿದ್ದರು. ತರಬೇತಿ ಪಡೆಯಲು ಆಯ್ಕೆಯಾಗಿದ್ದ ಪೊಲೀಸ್ ಪೇದೆಗಳು ಬಿಳಿ ಬಟ್ಟೆಗಳನ್ನು ಕೊಚ್ಚೆ ಮಾಡಿಕೊಂಡು ಮೈ ಕೈ ತುರಿಸಿಕೊಂಡು ಪರದಾಡುತ್ತಿದ್ದರು. ಆ ಹೆಣ್ಣು ಮಗಳು ಮಾತ್ರ ಪುನ: ಹಾಗೆ ಮಲಗಿದ್ದಳು.


 ಆದಿವಾಸಿಗಳು ಮೈ ಕೈ ಕಡಿಯುವಂತೆ ಏನನ್ನೋ ಎರೆಚಿದ್ದಾರೆಂದು ಪೊಲೀಸ್ ಪೇದೆಗಳಲ್ಲಿ ಗುಸು-ಗುಸು ಪ್ರಾರಂಭವಾಯಿತು. ಕೊಡಗಿನ ಎಸ್ ಪಿ ಅವರ ಆದೇಶದಂತೆ ಮಲಗಿದ್ದ ಆದಿವಾಸಿ ಹೆಣ್ಣುಮಗಳನ್ನು ಹೊತ್ತುಕೊಂಡು ಹೋಗಿ ಪೊಲೀಸ್ ಠಾಣೆಗೆ ಹಾಕಿ ಇತರ ಮಹಿಳೆಯರೊಂದಿಗೆ ದಸ್ತಗಿರಿ ಮಾಡಲಾಯಿತು. ಹೀಗೆ ಮಲಗಿದ್ದ ಹೆಣ್ಣು ಮಗಳೇ ಜಾಜಿ.

 

"ಜಾಜಿ ತಿಮ್ಮಯ್ಯ ಅದೊಂದು ಹಿಮ ಪರ್ವತ. ಅಲ್ಲಿ ಭಾವನೆಗಳು ಕರಗಿ ನೀರಾಗುವುದಿಲ್ಲ . ಜಲಪಾತದಂತೆ ಹರಿದು ಬರುವುದಿಲ್ಲ. ಭಾವನೆಯನ್ನು ಕೆರಳಿಸಲು ಆಳಕ್ಕಿಳಿಯಬೇಕು. ಭಾವನೆಯ ಅಂತರ್ಜಲ ಮುಟ್ಟುವುದು ಭಾರಿ ಕಷ್ಟ. ಕಾಡಿನ ಸಹಜ ಕೃಷಿಯಲ್ಲಿ ಬೆಳೆದವರು ಅವರು. ಅಲ್ಲಿ ಎಲ್ಲವೂ ಸಹಜ" ಹೀಗೆ ಆರಂಭವಾಗುವ ಪುಸ್ತಕದಲ್ಲಿ 10 ಅಧ್ಯಾಯಗಳಲ್ಲಿ ಸವಿಸ್ತಾರವಾಗಿ ಜಾಜಿ ತಿಮ್ಮಯ್ಯ ಎನ್ನುವ ಹೋರಾಟಗಾರ್ತಿಯ ಬದುಕಿನ ಕಥೆಯನ್ನು ಕಟ್ಟಿಕೊಟದ್ದಾರೆ ಲೇಖಕರು. 


ಯಾವುದೇ ಸಾಮಾಜಿಕ ಹೋರಾಟದ ಉದ್ದೇಶವನ್ನು ತಲುಪಲು, ನಾವು ಕೂಡ ಹೋರಾಟಗಾರರು ಆಗುವ ಮೊದಲು ಆ ಹೋರಾಟದ ಬೇರನ್ನು ಮುಟ್ಟಬೇಕು, ಇತಿಹಾಸವನ್ನು ತಿಳಿಯಬೇಕು. ಹಾಗಿದ್ದಾಗ ಮಾತ್ರ ನಮ್ಮ ಗುರಿ ಮುಟ್ಟಲು ಸಾಧ್ಯ. ಈ ನಿಟ್ಟಿನಲ್ಲಿ ಆದಿವಾಸಿ ಮಹಿಳೆಯರ ಹೋರಾಟದ ಬದುಕನ್ನು ದಾಖಲೆ ಮಾಡಿರುವ ಹೆಗ್ಗಳಿಕೆ ಈ ಪುಸ್ತಕದ್ದು.

 

ಪುಸ್ತಕದ ತುಂಬೆಲ್ಲ ಇರುವ ಕೆಲವು ವಾಕ್ಯಗಳನ್ನು ಗಮನಿಸಿದಾಗ ಪುಸ್ತಕದ ಘನತೆ, ಮಹಿಳೆಯೊಬ್ಬಳ ಗಟ್ಟಿಗೊಳ್ಳುವ ಜೀವನ ಯಾತ್ರೆ ಮತ್ತು ಅದನ್ನು ಎಲ್ಲರೂ ತಿಳಿದುಕೊಳ್ಳುವ ಅವಶ್ಯಕತೆ ನಿಚ್ಚಳವಾಗುತ್ತದೆ.  


 ಈ ಪುಸ್ತಕದಲ್ಲಿ ನನ್ನನ್ನು ಹಿಡಿದಿಟ್ಟ ಕೆಲವು ವಾಕ್ಯಗಳು ಎಂದರೆ 'ನಾಗರಿಕ ಪ್ರಪಂಚದಲ್ಲಿ ಹೆಣ್ಣು ಯಾವಾಗಲೂ ಕಥೆ ಆಗುತ್ತಾಳೆ ' 'ಕಾಡಿನ ಗುಣ ಎಂದರೆ ಸಹಜ ಗುಣ ಅಲ್ಲಿ ಅತ್ಯಂತ ಸಂತೋಷವಾಗಿದ್ದಾಗಲಿ ಅತ್ಯಂತ ದುಃಖವಾಗಿದ್ದಾಗಲಿ ನೆನಪಿಗೆ ಬರುವುದಿಲ್ಲ ಎನ್ನುವುದಕ್ಕಿಂತ ಅದು ಅನುಭವಕ್ಕೆ ಬರುವುದಿಲ್ಲ ಎನ್ನುವುದು ಸೂಕ್ತ'  

'ಕಾಡಿನ ಶಿಸ್ತು ಎಲ್ಲರಿಗೂ ಕಾಣುವಂತದ್ದಲ್ಲ ನಾಡಿನ ಶಿಸ್ತು ಮಾತ್ರ ಬಹಿರಂಗ'  

'ಕಾಡು ಯಾರಿಗೂ ಮೋಸ ಮಾಡುವುದಿಲ್ಲ ನಾಡಿನಂತೆ' 

'ಅಳುವುದು ಆದಿವಾಸಿಗಳ ಗುಣ ಅಲ್ಲ ಬದುಕನ್ನು ಅತ್ಯಂತ ಸಹಜವಾಗಿ ಸ್ವೀಕರಿಸುವ ಆ ಮಂದಿಗೆ ಎಲ್ಲಾ ಕಾಲವು ಸುಖ' 

'ಕಾಡಿನಲ್ಲಿ ಮದುವೆ ಎನ್ನುವುದು ಸಮಸ್ಯೆಗೆ ಅಲ್ಲ ಅಲ್ಲಿ ಬದುಕು ಎಂಬುದು ಬಟಾ ಬಯಲು ಬಿಳಿ ಹಾಳೆ, ಯಾರು ಯಾರನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು. ಅಪ್ಪ ಅಮ್ಮನ ಇಷ್ಟಕ್ಕೆ ಸಹೋದರರ ಒತ್ತಡಕ್ಕೆ ಮದುವೆಯಾಗ ಬೇಕಿಲ್ಲ ಮದುವೆ ಎನ್ನುವುದು ಹೆಣ್ಣಿನ ಮುಕ್ತ ಆಯ್ಕೆ' ಇಂತಹ ಹತ್ತಾರು ಸಾಲುಗಳೊಂದಿಗೆ ಸಂವೇದನೆಯನ್ನು ಮೀಟಿಕೊಳ್ಳುವಾಗಲೇ ಜಾಜಿಯವರ ಶಾಲಾ ಪಯಣದ ಅಧ್ಯಾಯ ಅವರ ಹಿನ್ನೆಲೆಯನ್ನು ಸ್ಪಷ್ಟಪಡಿಸುತ್ತದೆ.


ಶಾಲೆ ಎಂದರೆ ಜಾಜಿಗೆ ಸಂಕೋಲೆಗಳನ್ನು ಬಿಚ್ಚಿಕೊಳ್ಳುವ ತಾಣವಲ್ಲ. ಅರಿವಿನ ಲೋಕದ ಹೆಬ್ಬಾಗಿಲು ಅಲ್ಲ. ದೀಪ ಹಚ್ಚುವ ಎಣ್ಣೆಯೂ ಅಲ್ಲ. ಹಣತೆಯು ಅಲ್ಲ. ಶಾಲೆ ಎಂದರೆ ಆಕೆಗೆ ನೆನಪಾಗುವುದು ಮಧುರ ನೆನಪುಗಳಲ್ಲ. ಶಾಲೆ ಅವರ ಪಾಲಿಗೆ ಕತ್ತಲೆಯ ಕೂಪ ಅಷ್ಟೇ. ಅಲ್ಲಿ ಬೆಳಕಿಂಡಿಗಳನ್ನು ಅವರು ಕಾಣುವುದೇ ಇಲ್ಲ. ಆ ಕಾಲದಲ್ಲಿ ಅವರು ಅನುಭವಿಸಿದ ನೋವು 

ಪುಸ್ತಕದುದಕ್ಕೂ ಮಡುಗಟ್ಟುತ್ತದೆ.

ಶಾಲೆಗೆ ಹೋಗುವಾಗ ಅವರ ಸಹಪಾಠಿಗಳಿರಲಿ ಶಿಕ್ಷಕರು ಕೂಡ ಇವರನ್ನು ಕಾಡಿನ ಕೋತಿಗಳು ಎಂದೇ ಕರೆಯುತ್ತಿದ್ದರಂತೆ. 


ತಾಲೂಕಿನ 13 ಹಾಡಿಗಳ ರಾತ್ರಿ ಶಾಲೆಗೆ ಸುಮಾರು 29೦ ಜನ ಬರುತ್ತಿದ್ದರು. ಅವರಿಗೆಲ್ಲ ಒಂದು ಪರೀಕ್ಷೆ ಮಾಡಿದರು ಅದರಲ್ಲಿ 60 ಮಂದಿ ಪಾಸಾದರು. ಹಾಗೆ ಪಾಸಾದವರಲ್ಲಿ ಜಾಜಿ ಕೂಡ ಒಬ್ಬರು. ಇದು ಕೂಡ ಜಾಜಿ ಶಿಕ್ಷಕಿಯಾಗಲು ಕಾರಣವಾಯಿತು. ಅಂತೂ ಪದವಿಯಾಗದಿದ್ದರೂ ನಾನೊಬ್ಬಳು ಶಿಕ್ಷಕಿಯಾಗಿಬಿಟ್ಟಿ ಎಂದು ಹೇಳಿಕೊಳ್ಳುತ್ತಾ ಅವರು ಶಿಶು ಪಾಲನಾ ಕೇಂದ್ರದಲ್ಲಿ ಶಿಕ್ಷಕಿಯಾಗಿ ನಿಯೋಜಿತಗೊಳ್ಳುತ್ತಾರೆ. "ಮೊದಮೊದಲು ಬೇರೆ ಮಕ್ಕಳ ಸಿಂಬಳ ತೆಗೆಯುವುದು ಕಕ್ಕ ಸ್ವಚ್ಛ ಮಾಡುವುದು ನನಗೆ ಮುಜುಗರವಾದರೂ ನಂತರ ಅದು ರೂಢಿ ಆಯಿತು. ಸ್ವಚ್ಛ ಮಾಡುವ ಕೆಲಸವನ್ನು ಹೆಣ್ಣು ಬಹಳ ಕಾಲದಿಂದಲೂ ಮಾಡುತ್ತಲೇ ಬಂದಿದ್ದಳಲ್ಲ ಆ ಮಹಿಳಾ ಸಹಜ ಗುಣ ನನ್ನನ್ನು ಇಲ್ಲಿ ಗೆಲ್ಲಿಸಿತು. ಅಲ್ಲದೆ ಎಲ್ಲ ತಾಯಂದಿರಿಗೂ ಸ್ವಚ್ಛತೆಯ ಬಗ್ಗೆ ಪಾಠ ಮಾಡುತ್ತಿದೆ ಹೀಗೆ ಮೂರು ವರ್ಷಗಳ ಕಾಲ ನನ್ನ ಶಿಕ್ಷಕ ವೃತ್ತಿ ಮುಂದುವರಿಸಿದೆ ಎನ್ನುತ್ತಾರೆ. 


ತಿಂಗಳಿಗೆ 100 ರೂಪಾಯಿಯ ಸಂಬಳ. "80 ರೂಪಾಯಿಯನ್ನು ಮಾತ್ರ ತೆಗೆದುಕೊಂಡು ಉಳಿದ

20 ರೂಪಾಯಿಯನ್ನು ಬ್ಯಾಂಕಿನಲ್ಲಿಯೇ ಬಿಡುತ್ತಿದ್ದೆ.ಉಳಿತಾಯ ಎನ್ನುವುದು ಆದಿವಾಸಿಗಳ ಪರಂಪರೆ ಅಲ್ಲ" ಎನ್ನುವ ಜಾಜಿ "ಆದಿವಾಸಿಗಳಿಗೆ ವೈಯಕ್ತಿಕ ಸಂತೋಷ ಎನ್ನುವುದೇ ಇಲ್ಲ ಆನಂದವಾದರೂ ಅದನ್ನು ಅವರು ಸಾಮೂಹಿಕವಾಗಿಯೇ ಅನುಭವಿಸುತ್ತಾರೆ" ಎನ್ನುತ್ತಾರೆ. 


ಜೀತ ಪದ್ಧತಿಯನ್ನು ವಿರೋಧಿಸಿ ರಾಜಕೀಯ ಹುನ್ನಾರವನ್ನು ಎದುರಿಸಿ, ಎಷ್ಟೋ ಬಾರಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿ, ಬಡತನವನ್ನು ಸಹಜವೆನ್ನುವಂತೆ ಅನುಭವಿಸಿ ದೇಹಕ್ಕೆ ಏಟು ಬಿದ್ದರೂ ಮನಸ್ಸು ನೋವಿನಿಂದ ಜಡ್ಡು ಕಟ್ಟಿದರೂ, ಶ್ರೇಣಿಕೃತ ಜಾತಿ ವ್ಯವಸ್ಥೆ ಬಲವಾಗಿರುವ ನಾಡಿನಲ್ಲಿ ಆದಿವಾಸಿ ಮಹಿಳೆಯೊಬ್ಬಳು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆಯಾಗುವುದು ಸುಲಭವಲ್ಲ. ಅಂತಹ ಸಾಧನೆಯನ್ನು ಮಾಡಿ ಅವರ ಜನಾಂಗವನ್ನು ಮೇಲೆ ತರಲು ಶ್ರಮಿಸಿದ ಹೋರಾಟಗಾರ್ತಿ ಜಾಜಿ ತಿಮ್ಮಯ್ಯ.

 

ಅರಣ್ಯ ಕಾಯ್ದೆ ಜಾರಿಗೆ ಬಂದ ನಂತರ ಆದಿವಾಸಿಗಳ ಬದುಕನ್ನು ನಿರ್ನಾಮ ಮಾಡಿದ ಘಟ್ಟದಲ್ಲಿ ಎದ್ದುನಿಂತು ಹೋರಾಟಕ್ಕೆ ಮುಂದಾದ ಜಾಜಿ ಅವರ ಹಸಿವು ಮತ್ತು ಕನಸು ಎರಡು ದೊಡ್ಡದು.   


ಇಂತಹ ದಿಟ್ಟ ಮಹಿಳೆಯ ಹೋರಾಟವನ್ನು ಧೈರ್ಯಗಾಥೆಯನ್ನು ಓದುತ್ತಿರುವಾಗಲೇ ಆದಿವಾಸಿಗಳು ಕೂಲಿ ಕೆಲಸಕ್ಕಾಗಿ ನಾಡಿಗೆ ಬಂದಾಗ ಹೆಂಗಸರ ದೇಹದ ತೂಕವನ್ನು ನೋಡಿ ತೂಕಕ್ಕೆ ಅನುಸಾರವಾಗಿ ಕೂಲಿಯನ್ನು ನಿಗದಿಪಡಿಸಲಾಗುತ್ತಿತ್ತು. ದೇಹದ ತೂಕ ಹೆಚ್ಚಿದ್ದಷ್ಟು ಕಡಿಮೆ ಕೂಲಿ ದೇಹದ ತೂಕ ಕಡಿಮೆ ಇದ್ದಷ್ಟು ಸ್ವಲ್ಪ ಹೆಚ್ಚು ಕೂಲಿ ಎನ್ನುವ ನಿಯಮವನ್ನು ಪಾಲಿಸಲಾಗುತ್ತಿತ್ತು ಎನ್ನುವ ಹೃದಯಛೇದಿ ವಿಷಯ ಒಂದಷ್ಟು ಹೊತ್ತು ಪುಸ್ತಕವನ್ನು ಮುಂದೆ ಓದಲು ಬಿಡುವುದಿಲ್ಲ.


ತೂಕವನ್ನು ನೋಡುವ ಬದಲು ಅದರ ಸಾಮರ್ಥ್ಯವನ್ನು ನೋಡಿ ಕೂಲಿ ನೀಡಬಾರದೇ ಎಂದು ಕೇಳುವ ಧ್ವನಿಯೂ ಇಲ್ಲದ ಕಾಲದಲ್ಲಿ ಜಾಜಿ ಎದ್ದು ಬಂದು ಹೋರಾಟದ ಬದುಕನ್ನು ರೂಪಿಸಿಕೊಂಡು ಇಂದಿನ ಯುವ ಜನತೆಗೂ ಮಾದರಿಯಾಗಿ ನಿಂತದ್ದು ಹೇಗೆ ಎಂದು ತಿಳಿದುಕೊಳ್ಳಲು ಈ ಪುಸ್ತಕವನ್ನು ಓದಲೇಬೇಕು

*******

Comments

Popular posts from this blog

ಆತ್ಮಹತ್ಯೆ ಬೆದರಿಕೆ - Law Point

ಸವಾಲು ದಾಟುವ ಸಂಭ್ರಮ in VK

Police Notice in ಪ್ರಜಾವಾಣಿ