ಗರ್ಭಕೋಶ ಮತ್ತು ಕಾನೂನು

ಅಂಗಾಂಗಗಳ ದಾನದ ಬಗ್ಗೆ ಇರುವ ಪ್ರತ್ಯೇಕ ಕಾನೂನಿನ ರೀತಿಯಲ್ಲಿ, ಗರ್ಭಕೋಶ ಅಥವಾ ಗರ್ಭಾಶಯವನ್ನು ಮಹಿಳೆಯ ದೇಹದಿಂದ ಶಸ್ತ್ರಚಿಕಿತ್ಸೆಯ ಮೂಲಕ ಬೇರ್ಪಡಿಸುವ ವಿಷಯಕ್ಕೆ ಸಂಬಂಧಪಟ್ಟಂತೆ ನಮ್ಮಲ್ಲಿ ಯಾವುದೇ ಪ್ರತ್ಯೇಕ ಕಾನೂನು ಇರುವುದಿಲ್ಲ. ಈ ವಿಷಯಕ್ಕೆ ಸಂಬಂಧಪಟ್ಟ ಅಪರಾಧಗಳನ್ನು ಸಂವಿಧಾನದ ಪರಿಚ್ಛೇಧ ೨೧, ಭಾರತೀಯ ದಂಡ ಸಂಹಿತೆ, ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಕರಾರು ಕಾಯಿದೆಗಳ ಅಡಿಯಲ್ಲಿ ಪ್ರಕ್ರಿಯೆಗೆ ಒಳ ಪಡಿಸಲಾಗುತ್ತದೆ.

ಜೊತೆಗೆ ವೈದ್ಯಕೀಯ ನಿರ್ಲಕ್ಷ್ಯ ಕಾನೂನು ಮತ್ತು ಭಾರತೀಯ ವೈದ್ಯಕೀಯ ಗರ್ಭಪಾತ ಕಾನೂನು ೧೯೭೨ ರ ಅನ್ವಯ ತೀರ್ಮಾನಿಸಲಾಗತ್ತದೆ. ಅಲ್ಲದೆ ಇಂತಹ ಪ್ರಕರಣಗಳನ್ನು ತೀರ್ಮಾನ ಮಾಡುವಾಗ ಭಾರತೀಯ ವೈದ್ಯಕೀಯ ಮಂಡಳಿ  ಈಗಾಗಲೇ ರೂಪಿಸಿರುವ ನಿಯಮಾವಳಿಗಳನ್ನು ಮತ್ತು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪರಿಗಣಿಸಲಾಗುತ್ತದೆ.

ಭಾರತೀಯ ವೈದ್ಯಕೀಯ ಗರ್ಭಪಾತ ಕಾನೂನು, ೧೯೭೨ ಮತ್ತು ೧೯೭೫ ರ ತಿದ್ದುಪಡಿ ಹಾಗು ಭಾರತೀಯ ವೈದ್ಯಕೀಯ ಗರ್ಭಪಾತ ತಿದ್ದುಪಡಿ ಕಾನೂನು ೨೦೦೨ ಅಧಿನಿಯಮಗಳ ಪ್ರಕಾರ ಗರ್ಭಕೋಶವನ್ನು ಮಹಿಳೆಯ ದೇಹದಿಂದ ಶಸ್ತ್ರಚಿಕಿತ್ಸೆಯ  ಮೂಲಕ ತೆಗೆದು ಹಾಕುವ ಅವಕಾಶವನ್ನು ವೈದ್ಯರಿಗೆ ನೀಡಲಾಗಿದೆ ಆದರೆ ಅಂತಹ ಸಂದರ್ಭವನ್ನೂ ವಿವರಿಸಲಾಗಿದೆ. ಅಪರೂಪದಲ್ಲಿ ಅಪರೂಪ ಎನ್ನುವ ಪರಿಸ್ಥಿಯಲ್ಲಿ ಗರ್ಭಿಣಿಗೆ ಸಹಜ ಹೆರಿಗೆ ಸಾಧ್ಯವಾಗದಾದಗ, ಕೇವಲ ಸಿಜೇರಿಯನ್ ಮೂಲಕವೂ ಮಗುವನ್ನು ಹೊರ ತೆಗೆಯಲು ಸಾಧ್ಯವೇ ಇಲ್ಲದ್ದಾಗ, ಮಹಿಳೆಯ ಕಿಬ್ಬೊಟ್ಟೆಯನ್ನು ಶಸ್ತ್ರಚಿಕಿತ್ಸಯ ಮೂಲಕ ಕತ್ತರಿಸಿ ಮಗು ಮತ್ತು ತಾಯಿ ಇಬ್ಬರನ್ನೂ ಪ್ರಾಣಾಪಾಯದಿಂದ ರಕ್ಷಿಸಲು ಗರ್ಭಾಶಯದ ಜೊತೆಯಲ್ಲಿಯೇ ಮಗುವನ್ನು ಹೊರ ತೆಗೆಯುವ ಒಂದೇ ಆಯ್ಕೆ ಉಳಿದುಕೊಂಡಾಗ ಈ ರೀತಿ ಮಾಡಬಹುದಾಗಿರುತ್ತದೆ.

ಇಂತಹ ದೇಹ ಪರಿಸ್ಥಿತಿ ಉಂಟಾಗುವ ಸಾಧ್ಯತೆಯನ್ನು ವೈದ್ಯರು ಮೊದಲೇ ಮನಗಂಡಿದ್ದರೆ ಗರ್ಭಿಣಿ ಹೆಂಗಸಿನ ಒಪ್ಪಿಗೆಯನ್ನು ಲಿಖಿತ ರೂಪದಲ್ಲಿ ಪಡೆದಿರಬೇಕಿರುತ್ತದೆ. ಅಕಸ್ಮಾತಾಗಿ ಕೊನೆಯ ಘಳಿಗೆಯಲ್ಲಿ ಇಂತಹ ಪರಿಸ್ಥಿತಿ ಎದುರಾದರೂ ಸಹ ಗರ್ಭಿಣಿಯ ಒಪ್ಪಿಗೆ ಇಲ್ಲದೆ ಅವಳ ಗರ್ಭಾಶಯವನ್ನು ತೆಗೆಯುವುದು ಅಪರಾಧವಾಗಿರುತ್ತದೆ.

ಸಮೀರಾ ಕೋಹ್ಲಿ Vs ಡಾ.ಪ್ರಭಾ ಮನ್ಚಂದಾ ಎನ್ನುವ ಕೇಸಿನಲ್ಲಿ ೨೦೦೮ ರಲ್ಲಿ ಸರ್ವೋಚ್ಚ ನ್ಯಾಯಾಲಯವು ಇದನ್ನು ಎತ್ತಿ ಹಿಡಿದಿದ್ದು, ಗರ್ಭಕೋಶವನ್ನು ಎಂತಹ ವಿಪತ್ತಿನ ಸ್ಥಿತಿಯಲ್ಲಿಯೂ ಮಹಿಳೆಯ ‘ಒಪ್ಪಿಗೆ ‘ ಇಲ್ಲದೆಯೇ ತೆಗೆಯುವುದನ್ನು ಕ್ರಿಮಿನಲ್ ಅಪರಾಧ ಎಂದು ಸ್ಪಷ್ಟವಾಗಿ ಹೇಳಿದೆ.

ಭಾರತೀಯ ಕರಾರು ಕಾಯಿದೆ ಮತ್ತು ಭಾರತೀಯ ವೈದ್ಯಕೀಯ ಮಂಡಳಿಯ ನಿಯಮಾವಳಿಗಳು ‘ಒಪ್ಪಿಗೆ’ ಎನ್ನುವುದನ್ನು ನಿಚ್ಛಳ, ನಿಖರ, ಸ್ಪಷ್ಟ ಮತ್ತು ಲಿಖಿತ ರೂಪದ್ದು ಎನ್ನುವುದಾಗಿ ವ್ಯಾಖ್ಯಾನಿಸಿದೆ. ಈ ರೀತಿಯ ಒಪ್ಪಿಗೆ ಪಡೆಯಲು ಸಂಬಂಧಪಟ್ಟ ವೈದ್ಯರು ಆಕೆಗೆ ಹೀಗೆ ಗರ್ಭಾಶಯವನ್ನು ಆಕೆಯ ದೇಹದಿಂದ ತೆಗೆಯ ಬೇಕಾದ ಪರಿಸ್ಥಿತಿಯ ಬಗ್ಗೆ ವಿಷದವಾಗಿ ತಿಳಿಸಿರ ಬೇಕಿರುತ್ತದೆ. ಹಾಗೆ ಒಪ್ಪಿಗೆ ಕೊಡುವ ಮಹಿಳೆಯು ೧೮ ವರ್ಷಕ್ಕೂ ಮೇಲ್ಪಟ್ಟವಳಾಗಿರ ಬೇಕು. ಬುದ್ಧಿ ಸ್ಥಿಮಿತವನ್ನು ಹೊಂದಿದವಳಾಗಿರಬೇಕು. ಯಾವುದೇ ಭಯ, ಒತ್ತಡ ಮತ್ತು ಆಮಿಷಕ್ಕೆ ಒಳಗಾಗಿ ಕೊಟ್ಟಿರ ಬಹುದಾದ ಒಪ್ಪಿಗೆಯನ್ನು ಕಾನೂನು ರೀತ್ಯದ ಒಪ್ಪಿಗೆ ಎಂದು ಪರಿಗಣಿಸಲಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ವೈದ್ಯರನ್ನು ಅಪರಾಧಿ ಎಂದು ಪರಿಗಣಿಸಿ ಶಿಕ್ಷೆ ನೀಡಬಹುದಾಗಿರುತ್ತದೆ.

ಸಂವಿಧಾನವು ಪರಿಚ್ಚೇಧ ೨೧ರಲ್ಲಿ ನೀಡಿರುವ ಮೂಲಭೂತ ಹಕ್ಕು ಎನಿಸಿಕೊಂಡ ಘನತೆಯುಳ್ಳ ಬಾಳು ಮತ್ತು ದೈಹಿಕ  ಸಮಗ್ರತೆಯನ್ನು ಉಳಿಸಿಕೊಳ್ಳುವ ಸ್ವಾತಂತ್ರ್ಯವನ್ನು  ಮಹಿಳೆಯ ಒಪ್ಪಿಗ ಇಲ್ಲದೆ ವೈದ್ಯರುಗಳು, ಯಾವುದೇ ಆಪತ್ಕಾಲದಲ್ಲೂ ಉಲ್ಲಂಘಿಸುವಂತಿಲ್ಲ.
ತಪ್ಪಿಸತಸ್ಥ ವೈದ್ಯರುಗಳನ್ನು ಸಿವಿಲ್ ಕಾನೂನುಗಳ ಅಡಿಯಲ್ಲಿ ಪರಿಹಾರಕ್ಕಾಗಿ ನ್ಯಾಯಾಲಯದಲ್ಲಿ ಪ್ರಕ್ರಿಯೆಗೆ ಒಳಪಡಿಸಬಹುದಾಗಿರುತ್ತದೆ ಹಾಗೆಯೇ ಕ್ರಿಮಿನಲ್ ಕಾನೂನುಗಳ ಪ್ರಕಾರ ಕೂಡ ಶಿಕ್ಷೆಗೆ ಒಳಪಡಿಸ ಬಹುದಾಗಿರುತ್ತದೆ. ಅಪರಾಧ ಸಾಬೀತಾದರೆ ಅಂತಹ ವೈದ್ಯರಿಗೆ ೩ ರಿಂದ ೧೦ ವರ್ಷಗಳ ಕಾಲದ ಕಠಿಣ ಜೈಲುವಾಸವನ್ನು ನ್ಯಾಯಾಲಯವು ವಿಧಿಸಬಹುದಾಗಿರುತ್ತದೆ.

ಇಂತಹ ಅಪರಾಧಗಳನ್ನು ತೀರ್ಮಾನ ಮಾಡುವಾಗ ನ್ಯಾಯಾಲಯಗಳು ಸರ್ವೋಚ್ಛ ನ್ಯಾಯಾಲಯವು ೨೦೦೮ರಲ್ಲಿ ನೀಡಿರುವ ತೀರ್ಪನ್ನು ಮುಖ್ಯವಾದ ಅಡಿಪಾಯವಾಗಿ ಬಳಸಿಕೊಳ್ಳುತ್ತಿವೆ.

ಅಂಜಲಿ ರಾಮಣ್ಣ


Comments

Popular posts from this blog

ನೂರು ಮಕ್ಕಳು ನೂರು ಪುಸ್ತಕ

Police Notice in ಪ್ರಜಾವಾಣಿ

ಹೊಸ ಅಪರಾಧ ಕಾನೂನುಗಳ Implementaion ವ್ಯಾಪ್ತಿ