Child Rights Week 2019 - ಬನ್ನಿ ಮನುಷ್ಯರಾಗೋಣ!
ಇವತ್ತು ರಾಷ್ತ್ರೀಯ ಮಕ್ಕಳ ದಿನಾಚರಣೆ. ೨೦ ನವೆಂಬರ್
ಅಂತರಾಷ್ಟ್ರೀಯ ಮಕ್ಕಳ ದಿನಾಚರಣೆ. ಮಕ್ಕಳ ಹಕ್ಕುಗಳ ವಿಷಯದಲ್ಲಿ ಈ ವರ್ಷಕ್ಕೆ ತನ್ನದೇ ಆದ ಮಹತ್ವ
ಇದೆ. ೧೯೫೯ ರ ನವೆಂಬರ್ ೨೦ರಂದು ವಿಶ್ವಸಂಸ್ಥೆಯ ಜೆನೆರಲ್ ಅಸೆಂಬ್ಲಿಯಲ್ಲಿ ಮಕ್ಕಳ ಹಕ್ಕುಗಳ
ಘೋಷಣೆ ಮಾಡಿತ್ತು. ನಂತರ ೧೯೮೯ರಲ್ಲಿ ಹಲವಾರು
ರಾಷ್ಟ್ರಗಳು ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿ ಹಾಕಿದವು. ಒಡಂಬಡಿಕೆ ಸಹಿ ಹಾಕಿರುವ
ರಾಷ್ಟ್ರಗಳು, ಈ ವರ್ಷ ೧೪ ರಿಂದ ೨೦ನೆಯ ತಾರೀಕಿನವರೆಗೂ ಪ್ರಪಂಚದಾದ್ಯಂತ ಮಕ್ಕಳ ಹಕ್ಕುಗಳ ಬಗ್ಗೆ
ಸಮಾಜದಲ್ಲಿ ಪ್ರಜ್ಞ್ನೆ ಮೂಡಿಸಲು ಹಲಾವರು
ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಮಕ್ಕಳ ಸಹಾಯವಾಣಿಯ ಬಗ್ಗೆ ಸಾಮಾನ್ಯರಿಗೆ ತಿಳುವಳಿಕೆ
ಮೂಡಿಸುವುದು, ಮಕ್ಕಳಿಗಾಗಿಯೇ ಇರುವ ಕಾನೂನುಗಳ ಜಾಗೃತಿ ಶಿಬಿರಗಳನ್ನು ಆಯೋಜಿಸುವುದು, ಮಕ್ಕಳಿಗೆ
ಮನೋರಂಜನೆಯ ಮೂಲಕ ಅವರ ಹಕ್ಕುಗಳ ಅರಿವು
ಮೂಡಿಸುವುದು ಹೀಗೆ ಸಾಲು ಸಾಲು ಕಾರ್ಯಕ್ರಮಗಳು ನಮ್ಮ ಕರ್ನಾಟಕದಾದ್ಯಂತ ನಡೆಯುತ್ತಿವೆ. ಈ ಎಲ್ಲಾ
ಕಾರ್ಯಕ್ರಮಗಳು “ UNCRC30 “ ಎನ್ನುವ ಉಪಸಾಲನ್ನು ಹೊತ್ತಿರುವುದು ಎಲ್ಲರ ಗಮನ
ಸೆಳೆಯುತ್ತಿದೆ.
ವಿಶ್ವಸಂಸ್ಥೆಯು ಈ ಬಾರಿಯ ಮಕ್ಕಳ ಹಕ್ಕುಗಳ
ಸಪ್ತಾಹಕ್ಕಾಗಿ ಆಯ್ಕೆ ಮಾಡಿರುವ ಬಣ್ಣ ನೀಲಿ. ’GO BLUE ‘ ಈ
ಘೋಷವಾಕ್ಯ ವಾರವಿಡೀ ಎಲ್ಲಾ ವಯಸ್ಕರು ನೀಲಿ ಬಣ್ಣದ ಬಟ್ಟೆಗಳನ್ನು ಹಾಕಿಕೊಳ್ಳಲು ಮನವಿ
ಮಾಡಲಾಗಿದೆ. ಕಚೇರಿಗಳನ್ನು, ಮನೆಗಳನ್ನು, ಸರ್ಕಾರಿ ಕಟ್ಟಟಗಳನ್ನು, ಮಾರುಕಟ್ಟೆಗಳನ್ನು ನೀಲಿ
ಬಣ್ಣ ದೀಪಗಳಿಂದ ಅಲಂಕರಿಸಲು ಕೇಳಿಕೊಳ್ಳಲಾಗಿದೆ. ಸುತ್ತಮುತ್ತಲೂ ತಮ್ಮ ಕಣ್ಣುಗಳಿಂದ ನೀಲಿನೀಲಿ
ನೋಡುವ ಅಪ್ರಾಯಸ್ಥರು ’ಯಾಕೆ ಹೀಗೆ?’ ಎಂದು ಪ್ರಶ್ನಿಸುವಾಗ ಅವರುಗಳಿಗೆ ತಮ್ಮ ಹಕ್ಕುಗಳ ಬಗ್ಗೆ
ತಿಳಿಸಿಕೊಡುವ ಕೆಲಸವಾಗಲಿ ಎನ್ನುವ ಉದ್ದೇಶವಿದೆ ಈ ನೀಲಿ ಬಣ್ಣದ ಆಯ್ಕೆಗೆ. ಈ ವಾರವಿಡೀ ವಯಸ್ಕರೂ
ಮಕ್ಕಳೆಡೆಗೆ ಸಂವೇದನಾಶೀಲರಾಗಲಿ, ಮಕ್ಕಳ ಸಮಾಜದೆಡೆಗೆ ಎಚ್ಚರಗೊಳ್ಳಲಿ ಎನ್ನುವ ನಿರೀಕ್ಷೆಯಿದೆ ಈ
ನೀಲಿ ಬಣ್ಣಕ್ಕೆ.
ನೀಲಿಯೇ ಯಾಕೆ ? ಬಣ್ಣಗಳ ಅಧ್ಯಯನದಲ್ಲಿ ನೀಲಿ ಬಣ್ಣ
ನಂಬಿಕೆ ಮತ್ತು ವಿಶ್ವಾಸದ ಧ್ಯೋತಕವಾಗಿದೆ. ಧ್ವನಿಯ ಬಣ್ಣ ನೀಲಿ ಎಂದು ಗುರುತಿಸಲಾಗಿದೆ.
ನಿಷ್ಠೆ, ಬುದ್ಧಿವಂತಿಕೆ, ಸತ್ಯ ಸಂಧತೆಗೆ ನೀಲಿ ಬಣ್ಣವನ್ನು ಪ್ರತಿನಿಧಿಸಲಾಗಿದೆ. ವೈದ್ಯಕೀಯವಾಗಿ
ನೀಲಿ ಬಣ್ಣವು ಮನಸ್ಸು ಹಾಗು ದೇಹವು ಹೊಂದಾಣಿಕೆ ಸಾಧಿಸಲು ಸಾಕ್ಷ್ಟು ಸಹಾಯಕಾರಿ ಎಂದು
ಹೇಳಲಾಗಿದೆ. ಆಕಾಶ್ ನೀಲಿ, ಶಧಿ ನೀಲಿ. ಅದಕ್ಕೇ ಆಳ ಮತ್ತು ಧೃಢತೆಯ ಸಂಕೀತವಾಗಿದೆ ನೀಲಿ. ಬೈಬಲ್‍ನಲ್ಲಿ
ನೀಲಿ ಬಣ್ಣವನ್ನು ದೈವ ವಾಣಿಯ, ಸ್ವರ್ಗದ ಬಣ್ಣ ಎಂದು ಬಣ್ಣೀಸಲಾಗಿದೆ. ಯಹೂದಿಗಳು ನೀಲಿ
ಬಣ್ಣವನ್ನು ದೈವತ್ವದ ಬಣ್ಣವೆಂದು ಭಾವಿಸುತ್ತಾರೆ. ಚಿತ್ತಸ್ಥಿಮಿತಕ್ಕೆ ನೀಲಿಯಾಕಾರ
ಎನ್ನುತ್ತಾರೆ ಅವರು. ಹಿಂದು ದೇವರುಗಳಿಗೆ ನೀಲಿ ಬಣ್ಣವನ್ನು ಪರಿಕಲ್ಪಿಸಲಾಗಿದೆ.
ಮಕ್ಕಳು ನರಳುತ್ತಿದ್ದಾರೆ. ಅವರ ನೋವಿನ ಕೂಗನ್ನು ಕೇಳಿಸಿಕೊಳ್ಳಲು ಸ್ವಲ್ಪವೇ
ಸೂಕ್ಷ್ಮತೆಯೂ ಸಾಕು. UNCRC30 ಎನ್ನುತ್ತಾ ವಿಶ್ವಸಂಸ್ಥೆಯು ಕೊಟ್ಟಿರುವ ನೀಲಿ ಬಣ್ಣದಲ್ಲಿ ನಾವುಗಳೂ
ತೊಡಗಿಕೊಳ್ಳೋಣ. ನಾವೂ ಎಲ್ಲೆಡೆಯಲ್ಲಿಯೂ ನೀಲಿಯಾಗೋಣ. ನಾವೇ ನಿರ್ಮಿಸಿದ ಧರ್ಮ, ಆಚರಣೆ,
ನಂಬಿಕೆಗಳಿಂದ ನೀಲಿಗಟ್ಟುತ್ತಿರುವ ಮಕ್ಕಳಿಗೆ ಉಸಿರು ತುಂಬೋಣ. ಮನುಷ್ಯರಾಗೋಣ. ಜಗತ್ತನೆಲ್ಲಾ ’GO BLU” ಮಾಡೋಣ
*******************************
ಶಾಲೆಗಳಲ್ಲಿ ’ ಬಿಸಿಯೂಟ ’ ನೀಡುವ ವಿಷಯ ನಮ್ಮೆಲ್ಲರಿಗೂ ತಿಳಿದಿದೆ.
ಸರ್ಕಾರಗಳು ಮಕ್ಕಳಿಗಾಗಿ ಮಾಡುತ್ತಿರುವ ದೊಡ್ಡ ದಾನ ಇದು ಎಂದುಕೊಂಡು ಬೀಗುತ್ತಿವೆ. ಒಂದೊಮ್ಮೆ
ಮಿಡ್ ಡೇ ಮೀಲ್ಸ್ ಎನಿಸಿಕೊಳ್ಳುತ್ತಿದ್ದ, ಮಕ್ಕಳ ಹೊಟ್ಟೆ
ತುಂಬಿಸಬೇಕು ಎನ್ನುವ ಈ ಕರ್ತವ್ಯ ಪ್ರಜ್ಞೆ ಜೀವ ಪಡೆದು ಇಂದಿಗೆ ನೂರು ವರ್ಷಗಳು.
ಮೊದಲ ಬಾರಿಗೆ ಮಕ್ಕಳ ಬಗ್ಗೆ ಜಗತ್ತಿನ ಸಂವೇದನೆಯನ್ನು
ಜಾಗೃತಗೊಳಿಸಿ ನಾವುಗಳು ಮೃಗಗಳಾಗಿಯೇ ಕೊನೆಗೊಳ್ಳುವುದನ್ನು ತಪ್ಪಿಸಿದ್ದು ಎಗ್ಲಾಂಟೈನ್ ಜೆಬ್
ಎನ್ನುವ ಹೆಣ್ಣು-ಕಣ್ಣು. ಸೂಕ್ಷ್ಮ ಹೃದಯಿ, ಚುರುಕು ಮೆದುಳಿನ ಜೆಬ್ ಆಕ್ಸ್ಫರ್ಡ್
ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆದು ಶಿಕ್ಷಕಿಯಾಗಿದ್ದವಳು. ಮೊದಲನೆಯ ಮಹಾಯುದ್ಧದ
ಸಂದರ್ಭದಲ್ಲಿ ತನ್ನ ಶಾಲೆಗೆ ಬರುತ್ತಿದ್ದ ಮಕ್ಕಳ ಮನೆಗಳನ್ನು ಭೇಟಿ ಮಾಡಿದ ಕಾರಣದಿಂದ ಮಕ್ಕಳ ಲೋಕಕ್ಕೆ
ಅಡಿಯಿಟ್ಟು ಅವರ ಲೋಕವೇ ನಿಜದ ಲೋಕ ಎನ್ನುವ ಸತ್ಯವನ್ನು ಜಗತ್ತಿಗೆ ನೀಡುತ್ತಾಳೆ. ಬಡತನ,
ಅನಕ್ಷರತೆ, ಬಾಲ್ಯವಿವಾಹ, ಅಪೌಷ್ಟಿಕತೆ, ಬಾಣಂತಿ ಸಾವು, ಮದ್ಯವ್ಯಸನಿ ಅಪ್ಪಂದಿರು, ಕೌಟುಂಬಿಕ
ದೌರ್ಜನ್ಯದಿಂದ ಜರ್ಝರಿತಗೊಂಡ ಮಕ್ಕಳನ್ನು ಹತ್ತಿರದಿಂದ ಕಂಡು ಮಮ್ಮಲ ಮರುಗುತ್ತಾಳೆ. ಇಂತಹ
ಕ್ರೂರ ಬದುಕಿನ ಆಚೆಯಲ್ಲಿ ಮಕ್ಕಳಿಗೆ ಸಾಮಾನ್ಯ ಬದುಕು ಕೊಡಲು ಸಾಧ್ಯವೇ ಎಂದು ಯೋಚಿಸುತ್ತಾಳೆ.
೧೯೧೯ರಲ್ಲಿ ಸೇವ್ ದ ಚಿಲ್ಡ್ರೆನ್ ಎನ್ನುವ ಸಂಸ್ಥೆಯನ್ನು ಆರಂಭಿಸಿ ಕಾರ್ಯತತ್ಪರಳಾಗುತ್ತಾಳೆ
ಎಗ್ಲಾಂಟೈನ್ ಜೆಬ್.
ಕರಾಳ ಯುದ್ಧ ಕೊನೆಗೊಳ್ಳುವ ಸಮಯದಲ್ಲಿ ಅದರ ಫಲವಾಗಿ
ನಿರಾಶ್ರಿತರಾದವರು, ಅನಾಥರಾದವರು, ನಿರುದ್ಯೋಗಿಗಳು, ಅಂಗವಿಕಲರು ಇವರುಗಳ ದಟ್ಟಣೆಯ ನಡುವೆ
ಶಾಲೆಗೆ ಬರಲಾರದೆ ತತ್ತರಿಸಿಹೋಗುವ ಮಕ್ಕಳನ್ನು ಕಂಡು ಜೆಬ್ ಶಾಲೆಗೆ ಬರುವ ಮಕ್ಕಳಿಗೆ ಮಧ್ಯಾಹ್ನದ ವೇಳೆ ಪೌಷ್ಟಿಕ
ಆಹಾರವನ್ನು ಒದಗಿಸುವಂತಾದರೆ ಅವರ ಜೀವನ ಮಟ್ಟ ಏರುತ್ತದೆ ಎನ್ನುವ ಖಚಿತ ನಂಬಿಕೆಯಿಂದ ಸತತ
ಒಂಭತ್ತು ವರ್ಷಗಳ ಹೋರಾಟ ನಡೆಸಿ ೧೯೪೪ರಲ್ಲಿ ಮೊದಲ ಬಾರಿಗೆ ಬ್ರಿಟೀಷ್ ಸರ್ಕಾರ ಮಿಡ್ ಡೇ ಮೀಲ್
ಯೋಜನೆಯನ್ನು ಜಾರಿಗೆ ತರುವಲ್ಲಿ ಸಫಲಳಾಗುತ್ತಾಳೆ. ಹೀಗೆ ಆರಂಭವಾಗಿದ್ದು ಶಾಲ ಮಕ್ಕಳಿಗೆ ಇಂದು
ಸಿಗುತ್ತಿರುವ ’ ಬಿಸಿಯೂಟ ’. ಹೀಗೆ ಎಲ್ಲಾ ಮಕ್ಕಳ ಹಕ್ಕುಗಳ ಪರಿಕಲ್ಪನೆಯನ್ನು
ಜಗತ್ತಿಗೆ ಮೊದಲಬಾರಿಗೆ ಪರಿಚಯಿಸಿದ ಜೆಬ್ ಬಗ್ಗೆ ಭಾರತದಲ್ಲಿ ಕನ್ನಡ ಭಾಷೆಯಲ್ಲಿ ಮಾತ್ರ ಪುಸ್ತಕ
ಪ್ರಕಟವಾಗಿದೆ. ಇದೊಂದು ಎಲ್ಲರೂ ಓದಲೇ ಬೇಕಾದ ಮಾನವಗಾಥೆ.
ತುಂಬಿದ ಹೊಟ್ಟೆ ವಿಶ್ವದ ಮತ್ತು ಬದುಕಿನ ದಿಕ್ಕನ್ನೇ
ಬದಲಿಸಬಲ್ಲುದು. ಮಾನವ ಜಗತ್ತಿನ ಗುಣಮಟ್ಟವನ್ನು ಹೆಚ್ಚಿಸಬಲ್ಲುದು. ಮಕ್ಕಳ ಹೊಟ್ಟೆ
ತುಂಬಿಸುವುದು ನಮ್ಮ ಉದಾರತೆ ಅಲ್ಲ. ನಮ್ಮ ಕರ್ತವ್ಯವೂ ಅಲ್ಲ. ಅದು ನಮಗೆ ನಾವೇ ಕೊಟ್ಟುಕೊಳ್ಳುವ
ಜೀವದಾನ. ನಾವು ಮನುಷ್ಯರಾಗುವ ಒಂದು ವಿಧಾನ.
**********************
ಮಕ್ಕಳ ಹಕ್ಕುಗಳ ಪರಿಕಲ್ಪನೆಯ ಮೂಲ ಉದ್ದೇಶವೇ,
ಅನಿವಾರ್ಯ ಕಾರಣಗಳಿಗೆ ಹೊರತಾಗಿ, ಪ್ರತೀ ಮಗುವು ತನ್ನ ಕುಟುಂಬದೊಡನೆಯೇ ಬೆಳೆಯಬೇಕು.
ಅದಕ್ಕಾಗಿಯೇ ಮಕ್ಕಳ ಹಕ್ಕುಗಳ ಒಡಂಬಡಿಕೆಯು ಹಲವಾರು ಪರಿಚ್ಛೇಧಗಳಲ್ಲಿ ಮಕ್ಕಳು ತಂದೆ-ತಾಯಿ,
ಪೋಷರೊಡನೆ ಇರುವಂತೆ ಮಾಡಲು ಪೂರಕವಾಗಿ ಸರ್ಕಾರಗಳು ಕಾಯಿದೆಗಳ ಮೂಲಕ ಕೆಲವು ನಿರ್ಧಾರಗಳನ್ನು
ತೆಗೆದುಕೊಳ್ಳಬೇಕು ಮತ್ತು ಯೋಜನೆ ಹಾಗು ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಹೇಳಿದೆ. ಮೂವತ್ತು
ವರ್ಷಗಳ ಹಿಂದೆ ವಿಶ್ವಸಂಸ್ಥೆಯೊಡನೆ ಮಕ್ಕಳ ಹಕ್ಕುಗಳಿಗೆ ಸಹಿ ಹಾಕಿದ ನಂತರ ನಮ್ಮ ದೇಶದಲ್ಲಿ
ಮಕ್ಕಳ ರಕ್ಷಣೆ, ಪೋಷಣೆ ಮತ್ತು ಬೆಳವಣಿಗೆಗಾಗಿಯೇ ಒಂದಷ್ಟು ಕಾನೂನುಗಳನ್ನು ಜಾರಿಗೆ
ಗೊಳಿಸಲಾಗಿದೆ. ಅದರಲ್ಲಿ ಒಂದು ಮಕ್ಕಳ ನ್ಯಾಯ ಕಾಯಿದೆ (ಪೋಷಣೆ ಮತ್ತು ರಕ್ಷಣೆ) ಕಾಯಿದೆ, ೨೦೧೫
ಬಡತನ ಎನ್ನುವ ಒಂದೇ ಕಾರಣಕ್ಕಾಗಿ ಮಕ್ಕಳನ್ನು
ಕುಟುಂಬದಿಂದ ದೂರ ಇರಿಸಿ ಹಾಸ್ಟೆಲ್ ಅಂತಹ ವ್ಯವಸ್ಥೆಯಲ್ಲಿ ಬೆಳೆಸುವ ಪರಿಪಾಠ ಇತ್ತೀಚಿನ
ದಿನಗಳಲ್ಲಿ ಹೆಚ್ಚಾಗಿದೆ. ಮಕ್ಕಳ ಆರೋಗ್ಯ, ವಿದ್ಯಾಭ್ಯಾಸಕ್ಕೆ ತಗುಲುವ ವೆಚ್ಚವನ್ನು ಭರಿಸಲಾರದೆ
ಕುಟುಂಬಗಳು ಮಕ್ಕಳನ್ನು ಹೊರಗೆ ಹಾಕುತ್ತಿದ್ದಾರೆ. ಇದು ಮಕ್ಕಳ ಹಕ್ಕುಗಳ ಉಲ್ಲಂಘನೆ ಮಾತ್ರವಲ್ಲ,
ಮನುಷ್ಯನೊಬ್ಬನ ಸಾಮಾಜಿಕ ಅಸ್ತಿತ್ವವನ್ನೇ ನಾಶಗೊಳಿಸಿದಂತೆ. ಅದಕ್ಕಾಗಿಯೇ ಮೇಲೆ ಹೇಳಿದ ಕಾನೂನಿನ
ಅಡಿಯಲ್ಲಿ ’ಪ್ರಾಯೋಜಕತ್ವ’ ಎನ್ನುವ ಯೋಜನೆಯೊಂದನ್ನು ರೂಪಿಸಲಾಗಿದೆ.
ಪತಿಯಿಂದ ದೂರಾದ ಅಥವಾ ಆತ ಮೃತನಾಗಿರುವ ಒಂಟಿ
ತಾಯಿ, ಮಾರಣಾಂತಿಕ ಖಾಯಿಲೆಗೆ ತುತ್ತಾಗಿರುವ
ತಾಯ್ತಂದೆಯರು, ದುಡಿಯಲು ಸಾಧ್ಯವಿರದಂತಹ ಶಾಶ್ವತ ಅಂಗವೈಕಲ್ಯ ಹೊಂದಿರುವ ಪೋಷಕರು, ವಾರ್ಷಿಕ
ಮೂವತ್ತು ಸಾವಿರಗಳಿಗೆ ಕಡಿಮೆ ಆದಾಯ ಇರುವ ಹೆತ್ತವರು ತಮ್ಮ ಮಕ್ಕಳನ್ನು ಸಾಕುವ ಸಲುವಾಗಿ ಈ
ಪ್ರಾಯೋಜಕತ್ವದ ಪ್ರಯೋಜನ ಪಡೆಯಬಹುದು.
ಇಂತಹ ಕುಟುಂಬದ ಮಕ್ಕಳಿಗೆ ತಮ್ಮ ಮನೆಯಲ್ಲಿಯೇ
ಇದ್ದುಕೊಂಡು ವಿಧ್ಯಾಭ್ಯಾಸ ಪಡೆಯುವುದಕ್ಕಾಗಿ, ವೈದ್ಯಕೀಯ ವೆಚ್ಚಕ್ಕಾಗಿ ಅಥವಾ ಇನ್ನಿತರ
ತತ್ಸಮಾನವಾದ ಖರ್ಚಿಗಾಗಿ ಸರ್ಕಾರವು ಮೂರುವರ್ಷಗಳ ಕಾಲ ತಿಂಗಳಿಗೆ ಒಂದು ಸಾವಿರ ರೂಪಾಯಿಗಳನ್ನು
ನೀಡುತ್ತದೆ. ಅವಶ್ಯಕತೆ ಇರುವ ಕುಟುಂಬದವರು ಅವರ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಯನ್ನು
ಸಂಪರ್ಕಿಸಬೇಕಿರುತ್ತದೆ
ಪ್ರಾಯೋಜಕತ್ವದ ಮೊತ್ತ ಮೇಲ್ನೋಟಕ್ಕೆ ಕಡಿಮೆ ಎನಿಸಿದರೂ
ಬೇರೆ ಬೇರೆ ಕಾರ್ಯಕ್ರಮಗಳ ಅಡಿಯಲ್ಲಿ ಮಕ್ಕಳ ನೆರವಿಗೆ ಇದೆ ಸರ್ಕಾರ. ಭಾಗ್ಯಲಕ್ಷ್ಮಿ ಯೋಜನೆ,
ಕಿಶೋರಿ ಯೋಜನೆ, ಬಾಣಂತಿ ಪೌಷ್ಟಿಕತೆ, ಮಕ್ಕಳಿಗೆ ಶಾಲೆಗಳಲ್ಲಿ ಲಸಿಕೆಗಳನ್ನು ನೀಡುವುದು,
ವಿಟಮಿನ್ ಗುಳಿಗೆಗಳನ್ನು ಕೊಡುವುದು, ಅಂಗವಿಕಲ ಮಕ್ಕಳಿಗೆ ತಕ್ಕುದಾದ ಸಲಕರಣೆಗಳನ್ನು ನೀಡುವುದು
ಹೀಗೆ ಹತ್ತು ಹಲವು ಸವಲತ್ತುಗಳನ್ನು ಸರ್ಕಾರ ನೀಡುತ್ತಿದೆ.
ವಿಪರ್ಯಾಸ ಎಂದರೆ ಈ ಅನುಕೂಲಗಳು ಅರ್ಹ ಮಕ್ಕಳನ್ನು
ತಲುಪುತ್ತಿಲ್ಲ, ಸೌಲಭ್ಯ ಸೊಲಭ್ಯ ವಂಚಿತ ಮಕ್ಕಳು ಕುಟುಂಬದಿಂದ ದೂರಾಗುತ್ತಿದ್ದಾರೆ. ಇದಕ್ಕೆ ಕಾರಣ ನಾವುಗಳು ಧ್ವನಿ ಎತ್ತುತ್ತಿಲ್ಲ.
ಅವರಿಗೆ ಸಲ್ಲಬೇಕಾದ್ದನ್ನು ನಾವುಗಳು
ದೊರಕಿಸಿಕೊಡುತ್ತಿಲ್ಲ. ಸರ್ಕಾರಕ್ಕೆ ಮಕ್ಕಳ ಕೊರಗನ್ನು ನಾವುಗಳು ತಲುಪಿಸುತ್ತಿಲ್ಲ. ಬನ್ನಿ
ಮಕ್ಕಳ ಹಕ್ಕುಗಳ ಸಪ್ತಾಹದಲ್ಲಿ, ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿಹಾಕಿದ ಮೂವತ್ತು ವರ್ಷಗಳ ಈ
ಸಮಯದಲ್ಲಿಯಾದರೂ ಮಕ್ಕಳಿಗಾಗಿ ಮಾತಾಡೋಣ. ಬದುಕಿಗೂ ಅವರಿಗೂ ನಡುವಿನ ಸೇತುವೆಯಾಗೋಣ. ಮನುಷ್ಯರಾಗೋಣ.
ಗುಬ್ಬಚ್ಚಿ ದೇಹದ ಒಂಭತ್ತರ ಹರೆಯದ ಅವಳು ನನ್ನ ಮುಂದೆ
ಕುಳಿತಾಗ ಆತಂಕದ ಮುಖದಲ್ಲಿ ಸಣ್ಣಗೆ ಅಳುತ್ತಿದ್ದಳು, ಭಯದಿಂದ ಸ್ವಲ್ಪವೇ ನಡುಗುತ್ತಿದ್ದಳು.
ಏನಾಯ್ತು ಮಗು ಎನ್ನುತ್ತಾ ಅವಳ ಹತ್ತಿರ ಹೋದಾಗ
ಅವಳ ಉಸಿರು ನಿಲ್ಲುತ್ತದೆಯೇನೋ ಎನ್ನಿಸಿತು. ಅದು ಆ ದಿನದ ಮೊದಲ ಕೇಸ್. ಮಕ್ಕಳ ಸಹಾಯವಾಣಿಯವರು
ತಮಗೆ ಬಂದ ಕರೆಯನ್ನು ಆಧರಿಸಿ ಯಾರದ್ದೋ ಮನೆಯಲ್ಲಿ ಮನೆಗೆಲಸಕ್ಕೆ ಇದ್ದ ಸಲ್ಮಾಳನ್ನು ರಕ್ಷಿಸಿ
ಹೀಗೆ ಇಲ್ಲಿ ಕರೆತಂದಿದ್ದರು. ಅವಳ ಕತ್ತು ಹಣೆಯ ಮೇಲೆ ಬಾಯ್ದೆರೆದು ನಿಂತ್ತಿದ್ದ ಗಾಯಗಳಲ್ಲಿ
ನನ್ನ ರಕ್ತ ಕುದಿಯುತಿತ್ತು. ಬಾಲ ಕಾರ್ಮಿಕ ನಿಷೇಧ ಕಾನೂನಿನ ಅಡಿಯಲ್ಲಿ ದೂರು ದಾಖಲಿಸಲು
ವೈದ್ಯಕೀಯ ಪರೀಕ್ಷೆ ಮಾಡಿಸಬೇಕಿತ್ತು. ಸಲ್ಮಾಳನ್ನು ಸಮಾಧಾನ ಪಡಿಸಿ ವೈದ್ಯರ ಬಳಿ
ಕಳುಹಿಸಿದ್ದಾಯ್ತು.
ಹತ್ತೇ ನಿಮಿಷದಲ್ಲಿ ಮೊಬೈಲ್ ರಿಂಗುಣಿಸಿತು. ಅತ್ತ ಕಡೆಯಿಂದ ಡಾಕ್ಟರ್ ’ಏನು
ಮೇಡಮ್ ಇದು, ಯಾವ ರಾಕ್ಷಸರ ಮನೆಯಲ್ಲಿ ಇತ್ತು ಈ ಮಗು? ಛೇ, ನನಗೇ ತಡೆದುಕೊಳ್ಳಲು ಆಗುತ್ತಿಲ್ಲ”
ಎಂದು ಖಿನ್ನರಾಗಿದ್ದರು. “ನಮ್ಮ ವೃತ್ತಿಯಲ್ಲಿ ಇದೆಲ್ಲಾ ಸಾಮಾನ್ಯ ಅಲ್ಲ್ವಾ ಡಾಕ್ಟರ್, ಏನು
ಮಾಡೋದು ಹೇಳಿ. ನೀವೊಂದು ರೆಪೋರ್ಟ್ ಮಾಡಿಕೊಟ್ಟರೆ ಈಗಲೇ FIR ಹಾಕಿಸಲಾಗುತ್ತೆ ’ ಎಂದೆ. ಅದಕ್ಕಾತ “ ಬರೀ ಕಂಪ್ಲೇಂಟ್
ಅಲ್ಲ ಮೇಡಮ್ ಅವರನ್ನು ನೇರವಾಗಿ ನೇಣುಗಂಭಕ್ಕೇ ಹಾಕಬೇಕು “ ಎಂದು ಉದ್ವೇಗಗೊಂಡರು. ಆ ಮಗುವಿನ
ಮೇಲ್ಭಾಗದ ಶರೀರದ ಮೇಲೆ ೩೨ ಹಸಿ ಗಾಯಗಳು ಇವೆ ಎಂದು ಡಾಕ್ಟರ್ ಹೇಳಿದಾಗ ನನ್ನೊಳಗಿನ ಮನುಷ್ಯ
ಇಂಚಿಂಚೇ ಸಾಯುತ್ತಿರುವುದು ಅನುಭವ ಆಯ್ತು. ಮುಂದೆ ಏನು ಹೇಳಲಿ ? ಸಲ್ಮಾ ತನ್ನ ತಂದೆಗೆ ೧೩ನೆಯ ಮಗಳು ಎನ್ನುವುದೂ ನನ್ನನ್ನು ಅಷ್ಟೇ ಥಣ್ಣಗೆ
ಮಾಡಿತ್ತು.
ಇವಳಿಗೆ ೧೧ ವರ್ಷ ವಯಸ್ಸು ಅಷ್ಟೇ. ರಿಂಕಿ ದೂರದ
ರಾಜ್ಯದಿಂದ ಮೂರು ವರ್ಷಗಳ ಹಿಂದೆಯೇ ಇಲ್ಲಿಗೆ ಬಂದವಳು. ಉಹುಂ, ಬಂದವಳು ಅಲ್ಲ ಕರೆತಂದವಳು. ಹಾಗೆ
ಕರೆತಂದವರು ಯಾರೋ ಅನಾಮಧೇಯರಲ್ಲ. ನಮ್ಮೆಲ್ಲರಿಗೂ ಪರಿಚಯ ಇರುವ ಗಣ್ಯ ವ್ಯಕ್ತಿಗಳೇ ಆಗಿದ್ದರು
ಎನ್ನುವುದು ಗಾಯಕ್ಕೆ ಸುರಿದ ಉಪ್ಪಿನಂತೆ. ಇವಳು ಕೂಡ ಮಕ್ಕಳ ಸಹಾಯವಾಣಿಯವರಿಂದ ರಕ್ಷಿಸಲ್ಪಟ್ಟು
ನನ್ನ ಮುಂದೆ ಕುಳಿತ್ತಿದ್ದಳು. ಮುದ್ದು ಮುಖದ ಮೇಲೆಲ್ಲಾ ಉಗುರೂರಿದ ಗುರುತುಗಳು. ಕೆಲವು ನೋವು ಹಂಚಲು ಬಾಯಿ
ತೆರೆದುಕೊಂಡಿದ್ದರೆ, ಮತ್ತೆ ಕೆಲವುಗಳು ಅಸಹಾಯಕತೆಯಿಂದ ಅರ್ಧ ಕಣ್ಣು ಮುಚ್ಚಿದ್ದವು. ಅವಳು ಅಳುತ್ತಿರಲಿಲ್ಲ. ಗಾಬರಿ, ಭಯ
ಎಲ್ಲದರಿಂದ ದೂರವಿದ್ದಳು. ಮೂರು ವರ್ಷಗಳ ದಿನಚರಿ ಆಕೆಯ ಭಾವಕೋಶಗಳನ್ನು ಸ್ಥಬ್ಧ
ಗೊಳಿಸಿದ್ದವೇನೋ?! ತಳಮಳವನ್ನು ಒಳಗೆ ತಳ್ಳುತ್ತಾ ಅವಳೊಡನೆ ಮಾತನಾಡಿದೆ. ಮಕ್ಕಳನ್ನು
ಹೆರುವುದಷ್ಟೇ ತಮ್ಮ ಕೆಲಸ ಎಂದುಕೊಂಡ ಗಂಡು ಹೆಣ್ಣುಗಳು ಇವಳ ತಾಯ್ತಂದೆಯರಾಗಿದ್ದರು. ಒಂಭತ್ತು
ಮಕ್ಕಳೂ ಹೀಗೆ ಎಲ್ಲೆಲ್ಲೋ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವು. ಹೆತ್ತವರು ಕುಡಿದು ಅಮಲಿನಲ್ಲಿ ರಾಜಕಾರಣಿಯೊಬ್ಬರಿಗೆ ಜೈಕಾರ ಹಾಕುವ
ಕೆಲಸ ಮಾಡುತ್ತಿದ್ದರು. ಅದಕ್ಕೇ ಆ ಹುಡುಗಿ ಹೀಗೆ
ಇಲ್ಲಿ. ಎರಡು ಹೊತ್ತಿನ ಊಟ ಕೊಟ್ಟರೆ ತಾನು ಎಲ್ಲಿ ಬೇಕಾದರೂ ಇರುತ್ತೇನೆ ಎಂದವಳು ಭೂಮಿಗೆ ಬಂದು
ಕೇವಲ ಹನ್ನೊಂದು ವರ್ಷಳು ಎನ್ನುವುದು ನನ್ನನ್ನು ವಿಪರೀತ ಘಾಸಿಗೊಳಿಸಿತ್ತು.
“ಏನೋ
ನಿನ್ನ ಹೆಸರು” ಅಂದೆ. “ಕಾಲಿಯಾ” ಅಂದ. “ಬಾ ಇಲ್ಲಿ ಕೂತ್ಕೋ. . . ಎಷ್ಟು ವಯಸ್ಸು” ಕೇಳಿದೆ.
“ಹದಿನಾಕೋ ಹದಿನೈದೋ ಇರಬಹುದು” ಅಂದ. ಕೇಳಿದ್ದಷ್ಟಕ್ಕೇ ಉತ್ತರ ಹೇಳುತ್ತಿದ್ದ ಹುಡುಗ ನಿರ್ಭಾವುಕನಾಗಿ
ಕುಳಿತಿದ್ದ. ನೀರು ಕೊಟ್ಟೆ , ಗಟಗಟ ಕುಡಿದ. “ ಟೀ ಕುಡೀತೀಯಾ” ಎನ್ನುವ ಪ್ರಶ್ನೆ ಮುಗಿಯುವ
ಮೊದಲೇ ಲೋಟ ಕೈಗೆತ್ತಿಕೊಂಡು ಸೊರ್ ಅಂತ ಒಂದು ಗುಟುಕು ಎಳೆದುಕೊಂಡ. ಮಾಸಲು ಕೆಂಪು ಬಣ್ಣದ
ಬನಿಯನ್ ಕೆಳಗೆ ನೀಲಿ ಪ್ಯಾಂಟ್ ಹಾಕಿಕೊಂಡಿದ್ದ ಹುಡುಗನನ್ನು ಮತ್ತೆ ಕೇಳಿದೆ “ಏನೆಲ್ಲಾ
ಮಾಡ್ತೀಯಾ?” “ನೀವು ಏನು ಹೇಳಿತೀರೋ ಅದೆಲ್ಲಾ ಮಾಡ್ತೀನಿ” ಎಂದು ಉತ್ತರಿಸಿದ ಸಣಕಲು ಬಾಲಕ.
ನಿಮ್ಮ ನಮ್ಮ ಮನೆಯ ಮಕ್ಕಳು ಈ ವಯಸ್ಸಿನಲ್ಲಿ ಟಿವಿ ನೋಡುತ್ತಾ, ಮೊಬೈಲ್ ಫೋನ್ ಚುಚ್ಚುತ್ತಾ ,
ಕುಳಿತ ಕಡೆ ತುತ್ತು ತೆಗೆದುಕೊಳ್ಳುತ್ತಾರೆ. ಆದರೆ ಕಾಲಿಯನಿಗೆ ಒಂದಿಪ್ಪತ್ತು ತರಹದ ಅಡುಗೆ ಮಾಡಲು
ಬರುತ್ತೆ. ಮನೆ ಗುಡಿಸಿ ಸಾರಿಸಿ, ಧೂಳು ತೆಗೆದು, ಬಟ್ಟೇ ಒಗೆದು ಇಸ್ತ್ರೀ ಮಾಡಿ, ಶೂಝ್ ಪಾಲಿಷ್
ಮಾಡಿ, ಶೌಚಾಲಯ ಸ್ವಚ್ಛಗೊಳಿಸಲು ಬರುತ್ತೆ. ಆ ಊರಿನ ಅವನು ನಾಲು ವರ್ಷಗಳಿಂದ ಈ ಊರಿನ ಒಬ್ಬರ
ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದ. ಕಾಲಿಯಾ ಅವನಿಗೆ ಕೆಲಸದ ಮನೆಯ ಯಜಮಾನಿ ನೀಡಿದ್ದ ಹೆಸರು.
ಅಪ್ಪ ಅಮ್ಮನನ್ನು ಮರೆತಿದ್ದ. ಅವರಿಟ್ಟ ಹೆಸರನ್ನು ಕೆರೆಯುವವರನ್ನು ಕಳೆದು ಕೊಂಡಿದ್ದ. ಈ
ಹುಡುಗನನ್ನು ಭೇಟಿ ಆಗುವವರೆಗೂ ಅಪ್ರಾಯಸ್ಥ ಹೆಣ್ಣು ಮಕ್ಕಳನ್ನು ಮಾತ್ರ ಈ ರೀತಿಯ ಮನೆಗೆಲಸದಲ್ಲಿ
ನೋಯುತ್ತಿರುತ್ತಾರೆ ಎಂದುಕೊಂಡಿದ್ದವಳಿಗೆ ಬೇರೆಯದೇ ಜಗತ್ತನ್ನು ತೋರಿಸಿದ್ದ ಕಾಲಿಯ. ಮಕ್ಕಳು
ಎಂದರೆ ಲಿಂಗಬೇಧವಿಲ್ಲ ಒಂದು ಪರಿಮಳ ಅಷ್ಟೇ ಎನ್ನುವ ನನ್ನ ನಂಬಿಕೆಯನ್ನು ಬಲಗೊಳಿಸಿದ ಹುಡುಗ.
ಬಾಲ ಕಾರ್ಮಿಕ ಪದ್ಧತಿ ಬಲು ಕೆಟ್ಟದ್ದು. ಅದರ
ನಿಷೇಧಕ್ಕಾಗಿ ಕಾನೂನು ಬಂದಿದೆ. ಅದಕ್ಕೇ ಗ್ಯಾರೇಜುಗಳಲ್ಲಿ, ಹೋಟೆಲು ಅಂಗಡಿಗಳಲ್ಲಿ ಬಾಲ
ಕಾರ್ಮಿಕರು ಕಾಣುತ್ತಿಲ್ಲ ಎಂದುಕೊಂಡು ನಾಗರಿಕರಂತೆ ಬದುಕುತ್ತಿದ್ದೇವೆ. ಹೀಗೆ ಮನೆಗೆಲಸದ
ಕ್ಷೇತ್ರಗಳಲ್ಲಿ ದುಡಿಯುತ್ತಾ, ಸವೆದುಹೋಗುತ್ತಾ ಬಾಲಕಾರ್ಮಿಕತೆ ಇನ್ನೂ ಜೀವಂತವಾಗಿದೆ ಎನ್ನುವ
ಸತ್ಯವನ್ನು ಹೊರಹಾಕುತ್ತಿದ್ದರೂ ’ ಅಯ್ಯೋ ಪಾಪ’
ಎನ್ನುವ ಉದ್ಗಾರದಿಂದ ಆಚೆಗೆ ಮಕ್ಕಳನ್ನು ಕೊಂಡೊಯ್ಯಲು ಸೋಲುತ್ತಿದ್ದೇವೆ.
ಮಕ್ಕಳ ಹಕ್ಕುಗಳ ಒಡಂಬಡಿಕೆಯಲ್ಲಿ ೧೮ ವರ್ಷದ ಒಳಗಿನ
ಎಲ್ಲರನ್ನೂ ಮಕ್ಕಳು ಎಂದು ವ್ಯಾಖ್ಯಾನಿಸಿದ್ದರೂ ನಮ್ಮ ದೇಶ ಅದನ್ನು ಒಪ್ಪದೆಯೇ ಆಕ್ಷೇಪಣೆಯನ್ನು
ಇಟ್ಟುಕೊಂಡೇ ಒಡಂಬಡಿಕೆಗೆ ಸಹಿ ಹಾಕಿತ್ತು. ಅಂತರಾಷ್ಟ್ರೀಯ ಮಟ್ಟದಲ್ಲಿ ಇದೇ ವಿಷಯಕ್ಕಾಗಿ
ಸಾಕಷ್ಟು ಟೀಕೆಗಳನ್ನು ಎದುರಿಸಿಯೂ ತನ್ನ ನಿಲುವಿಗೆ ಅಂಟಿಕೊಂಡಿತ್ತು ಭಾರತ. ಮಕ್ಕಳೆಡೆಗೆ ಕಾಳಜಿ
ಹೊಂದಿದ್ದವರ ಒತ್ತಡಕ್ಕೆ ಮಣಿದು ಕೊನೆಗೂ ಮಕ್ಕಳ ಮತ್ತು ಕಿಶೋರ ಕಾರ್ಮಿಕ ಪದ್ಧತಿ (ನಿಷೇಧ ಮತ್ತು
ನಿಯಂತ್ರಣ) ಕಾಯಿದೆ ೧೯೮೬ ಇದಕ್ಕೆ ೨೦೧೬ರಲ್ಲಿ ತಿದ್ದುಪಡಿ ತಂದು ೧೮ ವರ್ಷದ ಒಳಗಿನ ಎಲ್ಲರೂ
ಮಕ್ಕಳೇ ಅಂತಹ ಮಕ್ಕಳನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ದುಡಿಸಿಕೊಳ್ಳುವ ಹಾಗಿಲ್ಲ ಎನ್ನುವ
ಕಾನೂನು ಜಾರಿಗೆ ಆಯ್ತು.
ಹದಿನಾಲ್ಕು ವರ್ಷ ವಯಸ್ಸಿನ ಒಳಗಿರುವ ಎಲ್ಲಾ ಮಕ್ಕಳಿಗೂ
ಖಡ್ಡಾಯವಾಗಿ ಶಿಕ್ಷಣ ಕೊಡಬೇಕಿರುತ್ತದೆ. ೧೫ ರಿಂದ ೧೮ ವರ್ಷದ ಒಳಗಿನವರು ಯಾವುದೇ ಒತ್ತಡ ಇಲ್ಲದೆ
ತೊಡಗಿ ಕೊಳ್ಳಬಹುದಾದ ಕೆಲವು ಕೆಲಸಗಳನ್ನು ಮತ್ತು ಮಾಡಲೇ ಬಾರದ ಕೆಲಸಗಳನ್ನು ಕಾನೂನು ಶೆಡ್ಯುಲ್
ಏ ಮತ್ತು ಶೆಡ್ಯೂಲ್ ಬಿ ಯಲ್ಲಿ ನಿಗಧಿ ಮಾಡಿದೆ. ನೀವು ಮಧ್ಯಾಹ್ನ ಊಟ ಮಾಡುವ ನಿಮ್ಮ ಆಫೀಸಿನ
ಕ್ಯಾಂಟೀನ್ ಅಥವಾ ಊಟ ತರುವವರ ಜಾಗವನ್ನು ಒಮ್ಮೆ ಗಮನಿಸಿ ೧೫ ವರ್ಷ ಒಳಗಿನ ಮಕ್ಕಳು ಪಾತ್ರೆ
ತೊಳೆಯುತ್ತಿರಬಹುದು. ನಿಮ್ಮ ಅಪಾರ್ಟ್ಮೆಂಟಿನ ಬಾಲ್ಕನಿಯಲ್ಲಿ ಸ್ವಲ್ಪ ಹೊತ್ತು ಕುಳಿತು ನೋಡಿ ಪಕ್ಕದ
ಮನೆಯ ಬಾಲ್ಕನಿಯಲ್ಲಿ ಬಾಲಕಿಯೊಬ್ಬಳು ಬಟ್ಟೆ ಒಣಗಿ ಹಾಕುತ್ತಿರಬಹುದು. ನೀವುಗಳು ಇರುವ ಪಿಜಿ
(ಪೇಯಿಂಗ್ ಗೆಸ್ಟ್) ಗಳಲ್ಲಿ ಗಮನಿಸಿ ೧೨ ವರ್ಷದ
ಹುಡುಗನೊಬ್ಬ ನೆಲ ಸಾರಿಸುತ್ತಿರಬಹುದು. ಗ್ಯಾರೇಜಿನಲ್ಲಿ, ಹೋಟೆಲಿನಲ್ಲಿ, ಮಾಲ್‌ಗಳಲ್ಲಿ ನಿಮಗೆ
ಮಕ್ಕಳು ಕಾಣಿಸುತ್ತಿಲ್ಲ ಎಂದ ಮಾತ್ರಕ್ಕೆ ಬಾಲಕಾರ್ಮಿಕರು ಇಲ್ಲ ಅಂತಲ್ಲ. ಅಲ್ಲಿ ನೋಡಿ ನೀವು
ಪೆಟ್ರೋಲ್ ಹಾಕಿಸಿಕೊಳ್ಳುವ ಬಂಕ್‍ನ ಪಕ್ಕದಲ್ಲಿ ಏಳುತ್ತಿರುವ ಕಟ್ಟಡಕ್ಕೆ ೧೫ ವರ್ಷದ
ಹುಡಿಗಿಯೊಬ್ಬಳು ಇಟ್ಟಿಗೆಯನ್ನು ತಲೆ ಮೇಲೆ ಹೊತ್ತು ಸಾಗಿಸುತ್ತಿದ್ದಾಳೆ.
ಈ ರೀತಿ ಮಕ್ಕಳಿಂದ ಕೆಲಸ ಮಾಡಿಸುವವರು ಮಾತ್ರವಲ್ಲ ಅದನ್ನು ನೋಡಿ
ಸುಮ್ಮನಾಗುವ, ಏನೂ ಮಾಡದೆ ಮುಂದೆ ಹೋಗುವ ನಾವೂ ಅಪರಾಧದಲ್ಲಿ ಪಾಲುದಾರರು. ಇಂತಹ ಸಂದರ್ಭದಲ್ಲಿ
೧೦೯೮ ಗೆ ಒಂದು ಕರೆ ಮಾಡಿದರೂ ಸಾಕು ನಾವುಗಳು ಒಂದು ತಲೆಮಾರಿಗೆ ಜೀವನ ಕಟ್ಟಿಕೊಡುತ್ತಾ ನಮ್ಮದೇ
ನಾಳೆಗಳನ್ನು ಬೆಳಕಾಗಿಸಿಕೊಳ್ಳಬಹುದು. ಬನ್ನಿ, ಮಕ್ಕಳ ಲೋಕದ ಕಡೆಗೆ ತುಸುವೇ ಮಿಡಿಯೋಣ, ಹೆಚ್ಚಿನ
ಮನುಷ್ಯರಾಗೋಣ.
ಜಗತ್ತಿನ ೪೫ ರಾಷ್ಟ್ರಗಳು ಇವತ್ತು ಪುರುಷರ ದಿನ ಆಚರಿಸುತ್ತಿವೆ.
ಎಲ್ಲಾ ತೆರನಾದ ಅನ್ಯಾಯಗಳು ಮಹಿಳೆಯರಿಗೆ ಮಾತ್ರ ಆಗುವುದು, ಶೋಷಣೆ ಮತ್ತು ದೌರ್ಜನ್ಯಗಳು ಹೆಣ್ಣು
ಮಕ್ಕಳಿಗೆ ಮಾತ್ರ ತಾಗುವುದು ಎನ್ನುವ ಭಾವನೆ
ಪ್ರಚಲಿತದಲ್ಲಿದೆ. ಆದರೆ ಇದು ಭಾವನೆ ಮಾತ್ರ.
ವಾಸ್ತವದಲ್ಲಿ ಅಂಕಿ ಅಂಶಗಳ ಪ್ರಕಾರ ಬಾಲಕಿಯರಷ್ಟು ಅಲ್ಲದಿದ್ದರೂ ಗಂಡು ಮಕ್ಕಳು ಕೂಡ
ಬಾಲ್ಯವಿವಾಹ, ಕಿಶೋರ ಕಾರ್ಮಿಕತೆ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗುತ್ತಿದ್ದಾರೆ.
ಪುರುಷ ದಿನಾಚರಣೆ ಎಂದರೆ ಕೇವಲ ವಯಸ್ಕರಿಗೆ ಸಂಬಂಧಪಟ್ಟ
ವಿಷಯ ಅಲ್ಲ. ವಯಸ್ಕ ಮತ್ತು ಅಪ್ರಾಯಸ್ಥ ಗಂಡಸರುಗಳನ್ನು ಒಳಗೊಂಡಿದ್ದಾಗಿದೆ. ಈ ದಿನದ ಮುಖ್ಯ ಉದ್ದೇಶ ಸಮಾಜಕ್ಕೆ ಧನಾತ್ಮಕ ಪುರುಷ
ಮಾದರಿಗಳನ್ನು ನೀಡುವುದು. ೨೦೧೯ರಲ್ಲಿ ಈ ಮೂರು ವಿಷಯಗಳ ಬಗ್ಗೆ ಹೆಚ್ಚಿನ ಗಮನ ನೀಡಲು
ನಿರ್ಧರಿಸಲಾಗಿದೆ. ಗಂಡಸರ ಮಾನಸಿಕ ಆರೋಗ್ಯವನ್ನು ಉತ್ತಮ ಪಡಿಸುವುದು, ವಿಷಕಾರಕ ವಸ್ತುಗಳ
ಸೇವನೆಯಿಂದ ಪುರುಷತ್ವವನ್ನು ಹೆಚ್ಚಿಸಿಕೊಳ್ಳುವುದರ ಬಾಧಕಗಳ ಬಗ್ಗೆ ಅರಿವು ಮೂಡಿಸುವುದು ಮತ್ತು
ಗಂಡಸರಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆಯ ಬಗ್ಗೆ ಗಮನ ನೀಡುವುದು.
ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪರಿಚ್ಛೇಧ ೩೪ರಲ್ಲಿ
ಮಕ್ಕಳನ್ನು ಲೈಂಗಿಕ ಶೋಷಣೆಯಿಂದ ರಕ್ಷಿಸಬೇಕು ಎಂದು ಹೇಳಲಾಗಿದೆ. ಇದಕ್ಕೆ ಪೂರಕವಾಗಿ ನಮ್ಮ ದೇಶದಲ್ಲಿ
೨೦೧೨ರಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ
ಕಾಯಿದೆಯನ್ನು ಜಾರಿಗೆ ತಂದಿದೆ. ಇದರಲ್ಲಿ ೧೮ ವರ್ಷ ಒಳಗಿನ ಗಂಡು ಮತ್ತು ಹೆಣ್ಣು ಇಬ್ಬರಿಗೂ
ಲೈಂಗಿಕ ದೌರ್ಜನ್ಯದ ವಿರುದ್ಧ ರಕ್ಷಣೆ ಒದಗಿಸಲಾಗಿದೆ. ಹತ್ತು ವರ್ಷಗಳ ಕಾಲ ಕಠಿಣ ಜೈಲುವಾಸದ
ಶಿಕ್ಷೆ ನೀಡಲಾಗುತ್ತದೆ. ಈ ಕಾಯಿದೆಯಡಿಯಲ್ಲಿ ದಾಖಲಾದ ಪ್ರಕರಣಗಳು ಬಹುಪಾಲು ಹೆಣ್ಣು ಮಕ್ಕಳ ಮೇಲೆ ನಡೆದ ದೌರ್ಜನ್ಯವೇ ಆಗಿರುತ್ತದೆ.
೨೦೧೭ರಲ್ಲಿ
ಕರ್ನಾಟಕದಲ್ಲಿ ತೀವ್ರತೆರನಾದ ಲೈಂಗಿಕ ದೌರ್ಜನ್ಯ ವಿಭಾಗದಲ್ಲಿ ೧೯೫೬ ಪ್ರಕರಣಗಳು ದಾಖಲಾಗಿವೆ. ದೇಶದಾದ್ಯಂತ
ದಾಖಲಾಗಿರುವ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಗಳಲ್ಲಿ ಶೇಕಡ ೫೨.೯೪% ಅಷ್ಟು ಗಂಡು ಮಕ್ಕಳ ಮೇಲೆ ನಡೆದಂತಹ
ಪ್ರಕರಣಗಳೇ ಆಗಿವೆ. ಸಲಿಂಗ ಕಾಮಕ್ಕೆ ದುರ್ಬಳಕೆ
ಆಗುತ್ತಿರುವ ಮಕ್ಕಳಲ್ಲಿ ಶೇಕಡ ೬೪.೧೩% ಗಂಡು ಮಕ್ಕಳು. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ
ಮಕ್ಕಳಲ್ಲಿ ಶೇಕಡ ೫೦%ಕ್ಕೂ ಹೆಚ್ಚು ಗಂಡು ಮಕ್ಕಳು.
ಪುರುಷರ ಮತ್ತು ಗಂಡು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ,
ಅತ್ಯಾಚಾರಗಳು ಆಗುತ್ತವೆ ಎನ್ನುವ ಬರ್ಬರ ಜಗತ್ತಿಗೆ ನನ್ನನ್ನು ಪರಿಚಯಿಸಿದವರು ರಾಕೇಶ್ ಮತ್ತು
ದಿಲೀಪ. ವಿದ್ಯಾವಂತ ರಾಕೇಶ ಲಕ್ಷಾಂತರ ಸಂಬಳ ಬರುವ ಕೆಲಸದಲ್ಲಿ ಇದ್ದವನು. ಆತನ ಹೆಂಡತಿ
ರಾಜಕಾರಣಿಗಳ ಕುಟುಂಬದವಳು. ರಾತ್ರಿಗಳಲ್ಲಿ ತಪ್ಪದೇ ಗಂಡನ ಸಂಪರ್ಕಕ್ಕಾಗಿ ಪಟ್ಟು
ಹಿಡಿಯುತ್ತಿದ್ದವಳು. ಒಲ್ಲೆ ಎಂದವನಿಗೆ ಬಲಶಾಲಿ ತವರು ಮನೆಯ ಬೆದರಿಕೆ ಒಡ್ಡುವುದು, ವಿಚಿತ್ರ
ಬಗೆಯ ಲೈಂಗಿಕ ದೌರ್ಜನ್ಯವನ್ನೂ ನೀಡುತ್ತಿದ್ದಳು. ಅದೆಷ್ಟೋ ವರ್ಷಗಳು ಸಹಿಸಿಕೊಂಡವನು ಕೊನೆಗೂ
ಹೇಳಿಕೊಂಡ ಆದರೆ ಬೇರೆ ಯಾರಿಗೂ ತಿಳಿಯಕೂಡದು ಮತ್ತು ಕೋರ್ಟಿನಲ್ಲಿ ’ಇನ್ ಕ್ಯಾಮೆರ’ ಪ್ರಕ್ರಿಕೆ
ನಡೆಸಿಕೊಡಿ ಎಂದು ಕೇಳಿಕೊಂಡಿದ್ದ.
ಎಲ್ಲವೂ ಸರಿ ಇದ್ದ ೧೬ ವರ್ಷದ ದಿಲೀಪನ ಮೈಮೇಲೆ ಆರು
ತಿಂಗಳಿನಿಂದ ದೇವರು ಬರುತ್ತಿತ್ತು. ಆ ದೇವರು
ಯಾರನ್ನೂ ನಿಂದಿಸಿ, ಶಾಪ ಕೊಡುವುದು, ಎಳೆದಾಡುವುದು ಮಾಡುತ್ತಿರಲಿಲ್ಲ. ಕುಣಿದು ಕುಪ್ಪಳಿಸುತ್ತಾ
ಎಲ್ಲರೆದುರು ತನ್ನ ಖಾಸಗೀ ಅಂಗಕ್ಕೆ , ಎದೆ ಭಾಗಗಳಿಗೆ ಗಾಯ ಮಾಡಿಕೊಳ್ಳುತ್ತಿತ್ತು. ಝಲ್ಲನೆ
ಚಿಮ್ಮುವ ರಕ್ತವನ್ನು ಎಲ್ಲರು ನೋಡುವಂತೆ ಆಗ್ರಹಿಸುತ್ತಿತ್ತು ಆ ದೇವರು. ಕೊನೆಗೆ ತಿಳಿದು ಬಂದದ್ದು
ಅವನಿಗೆ ಹತ್ತು ವರ್ಷ ವಯಸ್ಸಿನಿಂದ , ಕೂಡುಕುಟುಂಬದಲ್ಲಿ ಇದ್ದ ಚಿಕ್ಕಪ್ಪನೇ ತನ್ನ ಸಲಿಂಗ
ಕಾಮಕ್ಕೆ ದಿಲೀಪನನ್ನು ಬಳಸಿಕೊಳ್ಳತ್ತಿದ್ದ.
ಗಂಡಸು ಅಳಬಾರದು, ಮರ್ದ್ ಕೋ ದರ್ದ್ ನಹೀ ಹೋತ, ಹೆಣ್ಣಿಗ
ರಾಮ, ಗಂಡು ಹೇಗಿದ್ದರೂ ನಡೆದೀತು, ಗಂಡಸಿಗೆ ಅಂಕೆಶಿಕ್ಷೆಗಳಿಲ್ಲ, ಕಾಮ ಅವನೊಬ್ಬನದೇ ಸ್ವತ್ತು
ಇಂತಹ ಮನೋಭಾವಗಳು ಸೃಷ್ಟಿಯಾಗಿರುವುದು ಕೂಡ ಪಿತೃ ಪ್ರಧಾನ ವ್ಯವಸ್ಥೆಯ ಫಲವೇ. ಅದಕ್ಕೇ ಗಂಡು
ಮಕ್ಕಳು ತಾವು ಸಹಜವಾದ ಮನುಷ್ಯರು ಎನ್ನುವುದನ್ನು ಪರಿಭಾವಿಸಿಕೊಳ್ಳದೆಯೇ ತಮ್ಮ ನೋವು, ನಿಜದ
ಭಾವಗಳನ್ನು ಹೊರಹಾಕದೆ, ತಮಗೆ ಅರಿವಿಲ್ಲದಂತೆ ಹಲವಾರು ಖಾಯಿಲೆಗಳನ್ನು ಮೈಮೇಲೆ
ಎಳೆದುಕೊಳ್ಳುತ್ತಿದ್ದಾರೆ. ಅವರ ಸ್ಥಿತಿಗೆ ಅವರದ್ದೇ ಅಹಂ ಅನ್ನು ಕಾರಣವಾಗಿಸಿಕೊಂಡಿದ್ದಾರೆ.
ಹುಡುಗನೂ ಹುಡುಗಿಯಷ್ಟೇ ಮನುಷ್ಯ. ಅವನಿಗೂ ಭಾವನಾತ್ಮಕ,
ದೈಹಿಕ ರಕ್ಷಣೆ ಬೇಕು. ಹೇಳುವವರು ಮತ್ತು ಕೇಳುವವರು ಇಬ್ಬರ ಅವಶ್ಯಕತೆ ಅವಳಂತೆ ಅವನಿಗೂ ಇದೆ.
ಎಲ್ಲಾ ರೀತಿಯಿಂದಲೂ ಸಂರಕ್ಷಣೆ ಪಡೆದುಕೊಳ್ಳುವುದು ಅವನದ್ದೂ ಹಕ್ಕು. ಬನ್ನಿ ಗಂಡು ಮಕ್ಕಳ
ಮನಸ್ಸಿನ ಕನ್ನಡಿಯಾಗೋಣ, ಅಲ್ಲಿ ಮನುಷ್ಯರಾಗಿ ಪ್ರತಿಫಲಿಸೋಣ.
ಎಷ್ಟೇ ಆದರೂ ನಾನು ತಾಯಿ ಅಗುವವಳು ಅಲ್ಲ್ವಾ ಅದಕ್ಕೇ
ತಾಳ್ಮೆಯಿಂದ ಇರಬೇಕು ಅಲ್ಲ್ವಾ, ಎಂದಿದ್ದು ಕೇವಲ ಒಂಭತ್ತು ವರ್ಷದ ಹುಡುಗಿ. ಪಕ್ಕದ ಮನೆಯ ವಯಸ್ಕ
’ಅಣ್ಣ’ನಿಂದ ನಾಲ್ಕಾರು ಬಾರಿ ಅತ್ಯಾಚಾರಕ್ಕೆ ಒಳಗಾಗಿದ್ದಳು. ಯಾರಿಗೂ ಸುಳಿವು ಕೊಡದೆ ನೋವುಂಡವಳಿಗೆ
ಈ ಬುದ್ಧಿಮಾತು ಮನನವಾಗಿತ್ತು.
೧೬ ವರ್ಷದ ರೀಮ ಪಕ್ಕದ ಮನೆಯ ದಿನೇಶನನ್ನು ತನ್ನನ್ನು
ಪ್ರೀತಿ ಮಾಡು ಎಂದು ಬಲವಂತ ಮಾಡುತ್ತಿದ್ದಳು.
ಅವನಿಗೆ ಬೇಡವೆನಿಸಿತ್ತು. ಇವಳು ಬಗ್ಗದೆ ನಿನ್ನ ಹೆಸರು ಚೀಟಿಯಲ್ಲಿ ಬರೆದಿಟ್ಟು ಆತ್ಮಹತ್ಯೆ
ಮಾಡಿಕೊಂಡು ಬಿಡುತ್ತೇನೆ ಎಂದು ಹೆದರಿಸಿದಾಗ, ಅವಳ ಆಸೆಯಂತೆ ಮನೆ ಬಿಟ್ಟು ಅವಳ ಜೊತೆ ಓಡಿ ಹೋದ.ಎಂಟ್ಹತ್ತು
ದಿನಗಳ ನಂತರ ಕಾಸಿಲ್ಲ, ಕೊಸರಿಲ್ಲ ಎನ್ನುವಂತಾದಾಗ,
ಬಸ್ ಸ್ತ್ಯಾಂಡಿನಲ್ಲಿ ಪೊಲೀಸರ ಕೈಗೆ
ಸಿಕ್ಕಿ ಬಿದ್ದು ನನ್ನ ಮುಂದೆ ಕುಳಿತಾಗ, ೨೦ ವರ್ಷದ ಆ ಹುಡುಗ ಹೇಳಿದ್ದು “ ನಾನೇನು ಮೇಡಮ್
ಒಂದೆರಡು ದಿನ ಇವಳ ಜೊತೆ ಇದ್ದು ಎಲ್ಲಿಗೆ ಬೇಕಾದರೂ ಹೋಗಿ ಜೀವನ ಮಾಡ್ಕೋಬಹುದು. ಆದರೆ ಇವಳು ತಾನೆ
ಮಗುವನ್ನು ಬೆಳೆಸಬೇಕಾದವಳು?’ ನನಗಾಗ ಆ ಹುಡುಗಿಗಿಂತ ಬಾಲಕನ ಬಗ್ಗೆ ಚಿಂತೆಯಾಯ್ತು. ಅವನಲ್ಲಿ ಆ
ರೀತಿಯ ಆಲೋಚನೆಯನ್ನು ಬಿತ್ತಿರುವ ನಮ್ಮ ಬಗ್ಗೆಯೇ ಅಸಹ್ಯವೆನಿಸಿತು.
ಮಕ್ಕಳ ಎಲ್ಲಾ ಜಾವಾಬ್ದಾರಿಯೂ ತಾಯಿಯದ್ದೇ ಎನ್ನುವ
ಅಲಿಖಿತ ನಿಯಮ ಮಾಡಿರುವುದು, ತಾಯ್ತನವನ್ನು ವೈಭವೀಕರಿಸಿರುವುದು, ತಂದೆಯೆಂದರೆ ಬೇಜವಾಬ್ದಾರಿಯ
ಮತ್ತೊಂದು ರೂಪ ಎನ್ನುವ ಚಿತ್ರಣ ಕಟ್ಟಿರುವುದು ಇವೆಲ್ಲವೂ ಮಕ್ಕಳ ಮೇಲೆ ನಡೆಯುತ್ತಿರುವ ಎಲ್ಲಾ
ರೀತಿಯ ದೌರ್ಜನ್ಯಗಳಿಗೂ ಪ್ರತ್ಯಕ್ಷ ಮತ್ತು ಪರೋಕ್ಷ ಕಾರಣವಾಗಿದೆ.
ಮಹಿಳೆ ಮತ್ತು ಮಕ್ಕಳು ಎನ್ನುವ ಜೋಡಿ ಪದಗಳ ಬಳಕೆ
ಪ್ರತ್ಯೇಕಗೊಂಡು ಚಾಲ್ತಿಗೆ ಬಂದಾಗ ಸಮೂಹ ಒಂದು ಒಟ್ಟು
ಸಮಾಜವಾಗಿ ಮಕ್ಕಳ ಜವಾಬ್ದಾರಿ ಹೊಂದಲು ಸಾಧ್ಯವಾಗುತ್ತದೆ. ಸೇವ್ ದ ಚಿಲ್ಡ್ರೆನ್
ಕೂಗಾಗಲೀ, ಕುಟುಂಬಗಳನ್ನು ರಕ್ಷಿಸಿ ಎನ್ನುವ ದನಿಯಾಗಲೀ ತಂದೆಯನ್ನು ಹೊರತು ಪಡಿಸಿ
ಕಂಡುಕೊಳ್ಳಬಹುದಾದ ಗುರಿ ಅಲ್ಲ. ಮಕ್ಕಳ ಹಕ್ಕುಗಳ ಒಡಂಬಡಿಕೆಯ ೫ನೆಯ ಪರಿಚ್ಛೇಧವು ಮಕ್ಕಳ
ಬೆಳವಣಿಗೆ, ರಕ್ಷಣೆ, ಪೋಷಣೆ ಮಾಡಲು ತಾಯಿ, ತಂದೆ, ಪೋಷಕರು ಮಾರ್ಗದರ್ಶ್ ಮಾಡುವ ಜವಾಬ್ದಾರಿ
ತೆಗೆದುಕೊಳ್ಳಬೇಕು ಎಂದು ಹೇಳುತ್ತದೆ. ಇದಕ್ಕೆ ಅನುಗುಣವಾಗಿ ರಚನೆಗೊಂಡು ಜಾರಿಗೆ ಬಂದಿರುವ
ಎಲ್ಲಾ ಕಾನೂನುಗಳೂ ಸಹ ತಾಯಿ, ತಂದೆ, ಪೋಷಕರು ಎಂದು ಹೇಳುತ್ತದೆಯೇ ಹೊರತು ಎಲ್ಲಿಯೂ ತಾಯಿ ಮಾತ್ರ
ಎನ್ನುವುದಿಲ್ಲ.
ಇವತ್ತು ಅಂತರಾಷ್ಟ್ರೀಯ ಮಕ್ಕಳ ದಿನ. ಮೂವತ್ತು
ವರ್ಷಗಳಿಂದ ಆಚರಣೆಯಲ್ಲಿ ಇದ್ದು ಸಮಾಜವನ್ನು ಮಕ್ಕಳೆಡೆಗೆ ’ಗಮನ ಕೊಡಿ’ ಎಂದು ಎಚ್ಚರಿಸುತ್ತಿರುವ
ದಿನ. ಹಾಗಾದರೆ ಇವತ್ತಿಗೆ ೩೦ ವರ್ಷಗಳಿಂದೀಚೆಗೆ ಮಕ್ಕಳ ಸ್ಥಿತಿ ಸುಧಾರಿಸಿದೆಯೇನು? ಹೌದು,
ಖಂಡಿತ ಬಹುಶಃ ಮಕ್ಕಳನ್ನು ನಾವು ಪ್ರೀತಿಸಲು ತೊಡಗಿದ್ದೇ ೩೦ ವರ್ಷಗಳ ಈಚೆಗೆ ಎನಿಸುತ್ತೆ. ಮಕ್ಕಳ
ಬಗ್ಗೆ ಕಾಳಜಿ ಮಾಡಬೇಕು ಎನ್ನುವ ಅರಿವು ಮೂಡಿದ್ದೇ ಈ ಕಾಲಾವಧಿಯಲ್ಲಿ ಎನ್ನಿಸುತ್ತೆ. ಇವತ್ತಿಗೆ
೩೦ ವರ್ಷಗಳ ಹಿಂದೆ ಅಂತರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಡಂಬಡಿಕೆ ಜಾರಿಗೆ ಬರದಿದ್ದರೆ ನಮ್ಮ ಸಮಾಜ
ಇಷ್ಟಾದರೂ ಸಹನೆಯಿಂದ ಇರಲು ಸಾಧ್ಯವಾಗುತ್ತಿರಲಿಲ್ಲ.
ಇದನ್ನು ಗಮನದಲ್ಲಿ ಇಟ್ಟುಕೊಂಡೇ ಮಕ್ಕಳ ಬಗ್ಗೆ ಇರುವ
ಎಲ್ಲಾ ಕಾನೂನುಗಳು, ಯೋಜನೆ, ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ. ದೈನಂದಿನ ಜೀವನದಲ್ಲಿ
ಅವರೆಡೆಗೆ ಹೊಣೆಗಾರಿಕೆ ತೋರೋಣ. ಮಕ್ಕಳ ವಿಷಯದಲ್ಲಿ ಫಲಾಯನವಾದಿಗಳಾಗದಿರೋಣ. ಸಮಸ್ಯೆಗಳನ್ನು
ಎದುರಿಸುವಾಗ ಕ್ಷೇತ್ರತಜ್ಞರುಗಳ ಸಲಹೆ ಸಹಕಾರ ಪಡೆದುಕೊಳ್ಳೋಣ. ಜಗತ್ತಿನ ಎಲ್ಲಾ ಮಕ್ಕಳಿಗೂ
ತಾಯ್ತಂದೆಯರಾಗೋಣ.ಕೊನೆಯ ಬಾರಿಗೆ ಮನುಷ್ಯರಾಗಿಬಿಡೋಣ.
Comments
Post a Comment