ಮಕ್ಕಳ ಅನುಸರಣಾ ಸಂಸ್ಥೆಗಳು ಮತ್ತು ಮಕ್ಕಳ Family Rights ಹಾಗೂ. . .
ಮ್ಕಕಳ ಅನುಸರಣಾ ಸಂಸ್ಥೆಗಳ ಪ್ರಸ್ತುತ ಸ್ಥಿತಿಗತಿ ಮತ್ತು ಮಾಡಿಕೊಳ್ಳಬೇಕಿರುವ ಸುಧಾರಣೆಗಳು
ಎಲ್ಲರಿಗೂ ನಮಸ್ಕಾರ!
ನೀನಾ ನಾಯಕ್ ಮೇಡಮ್ ಅವರು ಹೇಳಿದಂತೆ ಬದುಕನ್ನು ಕಟ್ಟಕಡೆಯ ಮಗುವಿಗೆ ತಲುಪಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ನಾವುಗಳು ಈ ಕೆಲಸ ಮಾಡುವುದರಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬಾಲಕಿಯರಿಗಾಗಿ ಇರುವ ಮಕ್ಕಳ ಕಲ್ಯಾಣ ಸಮಿತಿಯ, ಅಂದರೆ ನನ್ನ ಸಮಿತಿಯ ಸದಸ್ಯರುಗಳಾದ ಆಶಿಕಾ ಶೆಟ್ಟಿ, ಬಿಂದಿಯಾ ಶಾಜಿಥ್, ಸರಿತಾ ವಾಜ಼, ಲಕ್ಷ್ಮೀಪ್ರಸನ್ನ ಇವರುಗಳ 24 ಗಂಟೆಗಳೂ ಕೆಲಸ ಮಾಡುತ್ತಿದ್ದಾರೆ ಅದಕ್ಕಾಗಿ ಅವರುಗಳನ್ನು ಅಭಿನಂದಿಸುತ್ತೇನೆ. ನಾವುಗಳು ಎರಡ ದಿನಕ್ಕೊಮ್ಮೆ ಡಿಸಿಪಿಓ ಅವರೊಡನೆ, ಪಿಓಗಳೊಡನೆ ಹಾಗೂ ಸುಪರಿಡೆಂಟ್ ಅವರುಗಳೊಡನೆ ಪರಿಶೀಲಾನ ವರದಿಯನ್ನು ತರಿಸಿಕೊಳ್ಳುತ್ತಿದ್ದೇವೆ.
ಈಗ ನಾನು ಮಾತನಾಡಲಿರುವ ವಿಷಯ ಮಕ್ಕಳ ಅನುಸರಣಾ ಸಂಸ್ಥೆಗಳ ಸ್ಥಿತಿಗತಿ ಮತ್ತು ಮಾಡಿಕೊಳ್ಳಬೇಕಿರುವ ಬದಲಾವಣೆಗಳು. ಮಕ್ಕಳ ವಿಷಯದಲ್ಲಿ ಯಾವ ವರ್ತಮಾನವೂ ಅಮುಖ್ಯವಲ್ಲ. ಹಾಗೆಯೇ ಯಾವ ಬದಲಾವಣೆಯೂ ಕೊನೆಯೂ ಅಲ್ಲ. ಮನುಷ್ಯನ ಮೂಲಭೂತ ಗುಣಲಕ್ಷಣಗಳು ಹಾಗೆಯೇ ಉಳಿದಿದ್ದರೂ ಜಾಗತೀಕರಣದ ಪ್ರಭಾವದಿಂದಾಗಿ, ಸಿಗುತ್ತಿರುವ ಎಕ್ಸ್ಪೋಷರ್ ನಿಂದಾಗಿ ಮಕ್ಕಳು ಬದಲಾಗುತ್ತಿದ್ದಾರೆ. ಅವರ ಅವಶ್ಯಕತೆಗಳಿಗೆ ತಕ್ಕಂತೆ ನಾವುಗಳು ಬೆಳೆಯದಿದ್ದರೆ ಮಕ್ಕಳ ಹಕ್ಕುಗಳ ರಚನೆಯ ಆಶಯವನ್ನೇ ಬುಡಮೇಲು ಮಾಡಿದಂತೆ ಆಗುತ್ತದೆ.
ಅದಕ್ಕೇ ರಾಜ್ಯದಲ್ಲಿರುವ ಎಲ್ಲಾ ಮಕ್ಕಳ ಪಾಲನಾ ಸಂಸ್ಥೆಗಳು ಹೀಗೆಯೇ ಇರಬೇಕು ಎನ್ನುವ ಏಕಮುಖದ ಮಾರ್ಗಸೂಚಿ ನೀಡುವುದಾಗಲೀ ಅಥವಾ ಒಂದೆರಡು ಸಂಸ್ಥೆಗಳ ಕಳಪೆ ಗುಣಮಟ್ಟದ ಸೇವೆಯನ್ನು ಗಮನದಲ್ಲಿ ಇಟ್ಟುಕೊಂಡು ಎಲ್ಲಾ ಸಂಸ್ಥೆಗಳು ಹೀಗೆಯೇ ಎಂದು ಹೇಳುವುದು ಉಚಿತವಲ್ಲ.
ಹಾಗಾಗಿ ನಾನು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬಾಲಕಿಯರಿಗಾಗಿ ಇರುವ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷಳಾಗಿ ಸ್ವತಃ ಕಂಡಿರುವ ಸಂಸ್ಥೆಗಳ ಪರಿಸ್ಥಿತಿಯ ಬಗ್ಗೆ ಮತ್ತು ತಂದುಕೊಳ್ಳಬೇಕಿರುವ ಬದಲಾವಣೆ ಬಗ್ಗೆ ಮಾತ್ರ ಹೇಳುತ್ತೇನೆ.
ಮಕ್ಕಳ ನ್ಯಾಯ ರಕ್ಷಣೆ ಮತ್ತು ಪೋಷಣೆ ಕಾನೂನಿನ ಅಡಿಯಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬಾಲಕರು, ಬಾಲಕಿಯರು ಮತ್ತು ವಿಶೇಷ ಅವಶ್ಯಕತೆಗಳು ಇರುವ ಮಕ್ಕಳಿಗಾಗಿ ನೊಂದಾಯಿತವಾಗಿರುವ ಸಂಸ್ಥೆಗಳು 143 ಇರುತ್ತವೆ.
ನಮ್ಮ ಸಮಿತಿಯು ಭೇಟಿಯ ಮತ್ತು ಸಭೆಯ ಕ್ರಮ ತೆಗೆದುಕೊಂಡ ವಿವರ ಈ ಕೆಳಕಂಡಂತೆ ಇದೆ.
ಇಷ್ಟೆಲ್ಲಾ ಸಂಸ್ಥೆಗಳನ್ನು ಸ್ವತಃ ಪರಿಶೀಲಿಸಿದ ನಂತರ ಅಲ್ಲಿ ಏನೇನು ಇದೆ ಎನ್ನುವುದಕ್ಕಿಂತ ಏನೇನು ಇಲ್ಲ ಎಂದು ಹೇಳುತ್ತಲೇ ಆಗಬೇಕಿರುವ ಬದಲಾವಣೆಗಳ ಬಗ್ಗೆ ಗಮನ ಸೆಳೆಯುವುದು ಸೂಕ್ತ ಎನ್ನುವುದು ನನ್ನ ಭಾವನೆ. ಹಾಗಾಗಿ ನನ್ನ ಮಾತುಗಳಲ್ಲಿ ಋಣಾತ್ಮಕ ಅಂಶಗಳು ಹೆಚ್ಚು ಕಂಡು ಬರುವಾಗ ಸರಿಯಾದ ಹಾದಿಯಲ್ಲಿ
ನಡೆಯುತ್ತಿರುವ ಸಂಸ್ಥೆಗಳು ಬೇಸರ ಪಟ್ಟುಕೊಳ್ಳುವ ಅಗತ್ಯ ಇಲ್ಲ.
ಏಕೆಂದರೆ :
ಎಲ್ಲೋ ಒಂದು ಕಡೆ ನಡೆಯುವ ಅನ್ಯಾಯ ಉಳಿದೆಲ್ಲೆಯೆಡೆಯಲ್ಲಿಯೂ ದೊರಕುವ ನ್ಯಾಯಕ್ಕೆ ಇರುವ ಅಭದ್ರತೆ ಎನ್ನುವ ಮಾರ್ಟಿನ್ ಲೂಥರ್ ಕಿಂಗ್‍ನ ಮಾತನ್ನು ನಂಬುವವಳು ನಾನು. ಹಾಗಾಗಿ ಎಲ್ಲಿ ಏನು ಕೊರತೆ ಇದೆ ಅನ್ನುವುದು ನನಗೆ ಮುಖ್ಯ ಆಗುತ್ತೆ. ಮತ್ತು ಕೊರತೆಗಳನ್ನು ಗುರುತಿಸಿಕೊಳ್ಳುವುದು ಸುಧಾರಣೆಗಳನ್ನು ತಂದುಕೊಳ್ಳಲು ಸಹಾಯ ಆಗುತ್ತದೆ.
ಮಕ್ಕಳನ್ನು ಸಾಂಸ್ಥೀಕರಣಗೊಳಿಸುವುದು ಕೊನೆಯ ಆಯ್ಕೆ ಆಗಿರಬೇಕು ಎನ್ನುವುದು ಮಕ್ಕಳ ಹಕ್ಕುಗಳ ಮೂಲಭೂತ ಆಶಯ ಆದರೂ ಮಕ್ಕಳ ಅನುಸರಣಾ ಸಂಸ್ಥೆಗಳಲ್ಲಿ ಇರುವ ಮಕ್ಕಳ ಸಂಖ್ಯೆಗಳನ್ನು ಮತ್ತು ಅವರು ಅಲ್ಲಿರುವ ಕಾರಣಗಳನ್ನು ನೋಡಿದಾಗ, ಮಕ್ಕಳನ್ನು ಸಂಸ್ಥೆಯಲ್ಲಿ ಇರಿಸುವುದೇ ಮೊದಲ ಆಯ್ಕೆ ಮತ್ತು ಅದೇ ಮಕ್ಕಳ ಬದುಕಿನ ಕೊನೆಯ ನಿಲ್ದಾಣ ಎನ್ನುವಂತೆ ಆಗಿದೆ.
ಬಹುಪಾಲು ಮಕ್ಕಳ ಅನುಸರಣಾ ಸಂಸ್ಥೆಗಳಿಗೆ ಮಕ್ಕಳ ನ್ಯಾಯ ಕಾಯಿದೆ ಸೆಕ್ಷನ್ 2 ರ ಪ್ರಕಾರ CNCP ಅಂದರೆ ರಕ್ಷಣೆ ಪೋಷಣೆ ಅಗತ್ಯ ಇರುವ ಮಕ್ಕಳು ಯಾರು ಎನ್ನುವುದರ ಬಗ್ಗೆ ಸರಿಯಾದ ತಿಳವಳಿಕೆ ಇರುವುದು ಕಂಡು ಬರುತ್ತಿಲ್ಲ.
ಎಲ್ಲಾ ಸಂಸ್ಥೆಗಳು ಬಡತನ, ಸಿಂಗಲ್ ಪೇರೆಂಟ್ ಮತ್ತು ಒಳ್ಳೆಯ ವಿದ್ಯಾಭ್ಯಾಸ ನೀಡಬೇಕು ಎನ್ನುವ ಆಶಯ ಇವುಗಳನ್ನು ಮಕ್ಕಳನ್ನು ಸಾಂಸ್ಥೀಕರಣಗೊಳಿಸಲು ಇರುವ ಕಾರಣಗಳು ಎಂದು ತಿಳಿದು ಕೊಂಡಿರುತ್ತಾರೆ.
ಮೂಲಭೂತವಾಗಿ ಮಕ್ಕಳ ಬಗ್ಗೆ ಕಾಳಜಿ ವಹಿಸುವುದು ಎಂದರೆ ಒಟ್ಟಾರೆ ಸಮಾಜವಾಗಿ ನಾವುಗಳು ಕುಟುಂಬಕ್ಕೆ ತನ್ನ ಕರ್ತವ್ಯದ ಬಗ್ಗೆ ಎಚ್ಚರಿಸುವುದು ಮತ್ತು ಕೆಲವು ಸಂದರ್ಭಗಳಲ್ಲಿ ಕುಟುಂಬದ ಕರ್ತವ್ಯವನ್ನು ಹಂಚಿಕೊಳ್ಳುವುದು ಎನ್ನುವುದನ್ನು ಅರ್ಥ ಮಾಡಿಕೊಂಡಿಲ್ಲ.
ಹಾಗಾಗಿ ನಾವುಗಳು ಅಂದರೆ ಮಕ್ಕಳ ಅನುಸರಣಾ ಸಂಸ್ಥೆಗಳು ಮಕ್ಕಳು ಕುಟುಂಬದೊಡನೆ ಉಳಿಯುವ ಪರ್ಯಾಯ ಮಾರ್ಗದ ಬಗ್ಗೆ ಸರಿಯಾಗಿ ವಿಚಾರ ಮಾಡುತ್ತಿಲ್ಲ.
ಬಹುಪಾಲು ಸಂಸ್ಥೆಗಳಲ್ಲಿ ಮಕ್ಕಳ ಫೈಲ್ ಗಳಲ್ಲಿ ಕಾನೂನು ರೀತ್ಯ ಇರಬೇಕಾದ ಯಾವ ದಾಖಲೆಗಳೂ ಇರುವುದಿಲ್ಲ. ಕಾರಣ ದೂರದಲ್ಲಿ ಎಲ್ಲೋ ಇರುವ ಸಂಸ್ಥೆಗಳ ಸಂಸ್ಥಾಪಕರು ಮತ್ತು ಸಂಸ್ಥೆಯ ಆವರಣದಲ್ಲಿ ಅದರ ಜವಾಬ್ದಾರಿ ಹೊತ್ತವರಿಗೆ ಮಕ್ಕಳ ನ್ಯಾಯ ಕಾನೂನಾಗಲೀ ಮತ್ತು ಅದರ ಜೊತೆಯಲ್ಲಿಯೇ ಬರುವ ರೂಲ್ಸ್ ಬಗ್ಗೆಯಾಗಲೀ, ಫಾರ್ಮೇಟ್ಸ್‍ಗಳ ಬಗ್ಗೆಯಾಗಲೀ ತಿಳುವಳಿಕೆಯೇ ಇಲ್ಲ. ಇದರಿಂದಾಗಿ ಮಕ್ಕಳ ಭವಿಷ್ಯದ ಯೋಜನೆ ವಿಳಂಬ ಆಗುತ್ತಿದೆ ಮತ್ತು ಪೋಸ್ಟ್‍ಪೋನ್ ಆಗುತ್ತಿದೆ.
ಮಕ್ಕಳನ್ನು ಕುಟುಂಬದ ಜೊತೆಗೆ ಪುನರ್ಸ್ಥಾಪಿಸಲು ಯಾವ ಅನುಸರಣಾ ಸಂಸ್ಥೆಗಳು ಯಾವುದೇ ರೀತಿಯ ಕ್ರಮ ವಹಿಸುತ್ತಿಲ್ಲ. ಕೆಲವು ಸಂಸ್ಥೆಗಳಲ್ಲಿ ಮಕ್ಕಳಿಗೆ ಕುಟುಂಬದ ಸದಸ್ಯರೊಡನೆ ದೂರವಾಣಿಯಲ್ಲಿ ಮಾತನಾಡಲೂ ನಿರ್ಬಂಧ ಇದೆ. ನಿಗಧಿತ ಪೋಷಕರೊಡನೆ ಬಿಟ್ಟು ಉಳಿದ ಸದಸ್ಯರೊಡನೆ ಸಂಪರ್ಕ ಸಾಧ್ಯವೇ ಇಲ್ಲ.
ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಬಗ್ಗೆ ಯಾವುದೇ ಯೋಜನೆಗಳು ಅವರಲ್ಲಿ ಇಲ್ಲ (ಹೆಣ್ಣು ಮಕ್ಕಳು ಅಂದರೆ ಟೈಲರಿಂಗ್ ತರಬೇತಿ ಇಲ್ಲವೇ ಬ್ಯೂಟೀ ಪಾರ್ಲರ್ ತರಬೇತಿ ಅದು ಬಿಟ್ಟರೆ ಮದುವೆ ಇವಿಷ್ಟೇ ನಿಗಧಿತ ಪ್ಯಾಟರ್ನ ನಲ್ಲಿ ಕೆಲಸ ಮಾಡುತ್ತಿವೆ)
ಕೆಲವು ಸಂದರ್ಭಗಳಲ್ಲಿ ಮಕ್ಕಳಿಗೆ ಬೇಕಾದ ಕಾನೂನು ನೆರವು ಕೊಡಲು ಸಂಸ್ಥೆಗಳಿಗೆ ಸಾಧ್ಯವಾಗುತ್ತಿಲ್ಲ. ಪಾಕ್ಸೊ ಪ್ರಕರಣಗಳಲ್ಲಿ ನೊಂದ ಮಕ್ಕಳಿಗೆ ಬೇಕಾದ ಬೆಂಬಲವನ್ನು ನೀಡಲು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಇರುವ ಒಂದೇ ಒಂದು ಸಂಸ್ಥೆಯಿಂದ ಬೆಂಬಲ ವ್ಯಕ್ತಿಗಳನ್ನು ಸಮಿತಿ ಕರೆಸಿಕೊಳ್ಳುತ್ತಿದೆ. ಆದರೆ ಅದು ಸಾಲುತ್ತಿಲ್ಲ. ಮತ್ತು ಯಾವ ಸಂಸ್ಥೆಯೂ ತಮ್ಮಲ್ಲಿ ಇರುವ ಪಾಕ್ಸೊ ಅಡಿಯಲ್ಲಿ ನೊಂದ ಬಾಲಕಿಗೆ ಪಾಕ್ಸೊ ಅಭಯನಿಧಿ ಫಂಡ್ ಅನ್ನು ದೊರಕಿಸಿಕೊಡುವ ಪ್ರಕ್ರಿಯೆ ಮಾಡತ್ತಿಲ್ಲ ಮತ್ತು ಅದರ ಬಗ್ಗೆ ಮಾಹಿತಿಯನ್ನು ಅವರುಗಳು ಹೊಂದಿಲ್ಲ.
ಮಕ್ಕಳ ಅನುಸರಣಾ ಸಂಸ್ಥೆಗಳಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಮತ್ತು ಊಟ, ಬಟ್ಟೆ ಕೊಡುವುದು ಎರಡು ಮುಖ್ಯವಾದ ಕ್ರಿಯೆಗಳಾಗಿ ಕಂಡು ಬರುತ್ತಿದೆ. ಕೆಲವು ಸಂಸ್ಥೆಗಳು ವರ್ಷಾನುಗಟ್ಟಲೆ ಮಕ್ಕಳನ್ನು ಅನುಸರಣೆಗಾಗಿ ಸಮಿತಿಯ ಮುಂದೆ ಹಾಜರು ಪಡಿಸುವುದಿಲ್ಲ. ಕೇಳಿದರೆ ಸಿಬ್ಬಂದಿಗಳ ಕೊರತೆ ಎನ್ನುವ ಕಾರಣ ನೀಡುತ್ತಾರೆ ಹಾಗೂ ಕೆಲವು ಸಂಸ್ಥೆಗಳ ಸಿಬ್ಬಂದಿಗಳು ಮಕ್ಕಳ ಫೈಲ್ ಅನ್ನು ಓದುವುದೇ ಇಲ್ಲ.
ಫಾರ್ಮ್ 46 ರಲ್ಲಿ ನಮೂದಾಗಿರುವ ಇರಲೇ ಬೇಕಾದ ಸಿಬ್ಬಂದಿಗಳ ಕೊರತೆ ಎದ್ದು ಕಾಣುತ್ತಿದೆ ( ಕೆಲವು ಸಂಸ್ಥೆಗಳಲ್ಲಿ ಅಡುಗೆಯವರೇ ಆಪ್ತಸಮಾಲೋಚಕರಾಗಿ ಕೆಲಸ ಮಾಡುತ್ತಿದ್ದಾರೆ) ರೂಲ್ 19(9)ರಲ್ಲಿ ಹೇಳಿರುವಂತೆ ಮಗು ಮತ್ತು ಕುಟುಂಬ ಇಬ್ಬರನ್ನೂ ಒಟ್ಟಿಗೆ ಸೇರಿಸಿ ಆಪ್ತಸಮಾಲೋಚನೆ ನಡೆಸುವ ಯಾವುದೇ ಪರಿಪಾಠ ಕಂಡುಬರುತ್ತಿಲ್ಲ.
ಫಾರ್ಮ್ -46 ನಮೂದಾಗಿರುವ ರಿಜಿಸ್ಟರ್ಗಳನ್ನೂ ನಿರ್ವಹಿಸುತ್ತಿಲ್ಲ ಹಾಗೆಯೇ ಯಾವುದೇ ರೀತಿಯ ವ್ಯಕ್ತಿತ್ವ ನಿರ್ಮಾಣ ತರಬೇತಿಗಳು, ಮಕ್ಕಳ ಹಕ್ಕುಗಳ ಬಗ್ಗೆ ತರಬೇತಿ, ಪಾಕ್ಸೋ ಕಾಯಿದೆ ಬಗ್ಗೆ ತಿಳವಳಿಕೆ ಮತ್ತು ಲೈಂಗಿಕ ದೌರ್ಜನ್ಯದ ಬಗ್ಗೆ ತರಬೇತಿ ಬಹುಪಾಲು ಸಂಸ್ಥೆಗಳಲ್ಲಿ ಇಲ್ಲ.
ಬಿಡ್ಜ್ ಶಿಕ್ಶಣ ವ್ಯವಸ್ಥೆಯ ಬಗ್ಗೆ ಬಹಳಷ್ಟು ಸಂಸ್ಥೆಗಳು ಕೇಳಿಯೇ ಇಲ್ಲ. ಹಾಗಾಗಿ ಶಾಲೆ ಹೋಗಲು ಅಥವಾ ಅಕ್ಷರಾಭ್ಯಾಸದಲ್ಲಿ ಕೊಂಚವೇ ನಿರಾಸಕ್ತಿ ತೋರಿಸಿದ ಮಕ್ಕಳನ್ನು ಸಂಸ್ಥೆಗಳಲ್ಲಿ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಕರೋನ ಹಿನ್ನಲೆಯಲ್ಲಿ ಈಗ ಇರುವ ಮತ್ತು ಮುಂದೆ ಬರಲಿರುವ ಸಂದರ್ಭಗಳಲ್ಲಿ ಆನ್ಲೈನ್ ಶಿಕ್ಶಣ ವ್ಯವಸ್ಥೆ, ಬ್ರಿಡ್ಜ್ ಶಿಕ್ಶಣ ವ್ಯವಸ್ಥೆಯನ್ನು, ಆರೋಗ್ಯದ ಬಗೆಗಿನ ಕಾಳಜಿ ಮತ್ತು ಸ್ವಚ್ಚತೆಯ ಜೊತೆಗೆ ಅಳವಡಿಸಿಕೊಂಡರೆ ಬಹಳ ಒಳ್ಳೆಯದು
ಕರೋನ ಹಿನ್ನಲೆಯಲ್ಲಿ ಅನುಸರಣಾ ಸಂಸ್ಥಗಳನ್ನು ಈಗಿರುವಂತೆ ದೊಂಬಿ ಮಾಡಿಕೊಳ್ಳದೆ ಕೇವಲ ರಕ್ಶಣೆ ಮತ್ತು ಪೋಷಣೆ ಅಗತ್ಯ ಇರುವ ಮಕ್ಕಳನ್ನು ಮಾತ್ರ ಇಟ್ಟುಕೊಳ್ಳುವ ಒಂದು ವ್ಯವಸ್ಥೆ ಆಗಬೇಕಿದೆ.
ಪದೇಪದೇ ಬದಲಾಗುವ ಸಿಬ್ಬಂದಿಗಳಿಂದ ಮಕ್ಕಳ ವಿಷಯಯದಲ್ಲಿ ನಿರಂತರತೆ ಕಾಪಾಡಿಕೊಂಡು ಅವರನ್ನು ಭವಿಷ್ಯಕ್ಕೆ ಸಜ್ಜುಗೊಳಿಸಲು ಸಂಸ್ಥೆಗಳಿಗೆ ಸಾಧ್ಯವಾಗುತ್ತಿಲ್ಲ.
ಸರಿಸುಮಾರು ಎಲ್ಲಾ ಸಂಸ್ಥೆಯವರಿಗೂ ಬಹಳವೇ ವಿಧೇಯ ಮಕ್ಕಳು ಮಾತ್ರ ಬೇಕಾಗಿರುತ್ತದೆ. ಅವರುಗಳಿಗೆ ಮಕ್ಕಳ ಕಲ್ಯಾಣ ಸಮಿತಿಗ ಬರುವ ವೈವಿಧ್ಯ ಸ್ವಭಾವಗಳನ್ನು ಹೊಂದಿರುವ ಮಕ್ಕಳನ್ನು ನೋಡಿಕೊಳ್ಳುವ ಮತ್ತು ನಡೆಸಿಕೊಳ್ಳುವ ಬಗ್ಗೆ ಯಾವುದೇ ತರಬೇತಿ ಇರುವುದಿಲ್ಲ. ಹಾಗಾಗಿ ಅವರ ರಕ್ಷಣೆ ಎನ್ನುವ ಹೆಸರಿನಲ್ಲಿ ಕಟ್ಟದ ಗೋಡೆಗಳನ್ನು ಎತ್ತರಿಸುವ ಬಗ್ಗೆ ಮಾತ್ರ ಯೋಚಿಸಬಲ್ಲವರು ಆಗಿರುತ್ತಾರೆ. (ಒಂದು ಸಂಸ್ಥೆಯಲ್ಲಿ ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಎಂದು ಕಟ್ಟಡದಲ್ಲಿ ಇರುವ ಎಲ್ಲಾ ಕಿಟಕಿಗಳನ್ನು ದಪ್ಪನಾದ ಪ್ಲಾಸ್ಟಿಕ್ ಶೀಟುಗಳಿಂದ ಮುಚ್ಚಿದ್ದರು ಕೂಡ)
ತಾವುಗಳು ಖುದ್ದಾಗಿ ಸೇರಿಸಿಕೊಂಡಿರುವ ಮಕ್ಕಳು ಹಾಗೂ ಸಮಿತಿಯಿಂದ ಕಳುಹಿಸಿರುವ ಮಕ್ಕಳ ನಡುವೆ ಬಹಳಷ್ಟು ಬೇಧಭಾವ ನಡೆಯುತ್ತಿದೆ
ಮತ್ತೊಂದು ಬಹು ಮುಖ್ಯವಾದ ವಿಷಯ ಎಂದರೆ ತಂದೆತಾಯಿ ಇಲ್ಲದ ಮಕ್ಕಳನ್ನು ಸರ್ಕಾರದ ಅಥವಾ ಮಕ್ಕಳ ಕಲ್ಯಾಣ ಸಮಿತಿಗಳ ಗಮನಕ್ಕೆ ತರದೆ ತಮ್ಮ ಸಂಸ್ಥೆಗೆ ಸೇರಿಸಿಕೊಳ್ಳಬಾರದು ಎನ್ನುವ ವಿಷಯವೂ ಸುಮಾರು ಸಂಸ್ಥೆಗಳಿಗೆ ತಿಳಿದಿಲ್ಲ. “ಸಂಬಂಧಿಕರು ಕರೆದುಕೊಂಡು ಬಂದರು, ಮಗುವಿಗೆ ತಂದೆ ತಾಯಿ ಇಲ್ಲವಂತೆ ಅದಕ್ಕ ಸೇಇಸಿಕೊಂಡೆವು” ಎನ್ನುವ ಸಿದ್ಧ ಉತ್ತರ ಸಂಸ್ಥೆಗಳಲ್ಲಿ ಸಿಗುತ್ತದೆ.ಇದರ ಬಗ್ಗೆ ತುರ್ತಾಗಿ ಅವರುಗಳಿಗೆ ಒಂದು ತರಬೇತಿ ನೀಡಬೇಕಿರುತ್ತದೆ.
ಇನ್ನು ಮುಂದೆ ಸಂಸ್ಥೆಗಳಿಗೆ ಬರುವ ದಾನಿಗಳ ಸಂಖ್ಯೆಯೂ ಕಡಿಮೆ ಇನ್ನು ಮುಂದೆ ಸಂಸ್ಥೆಗಳಿಗೆ ಬರುವ ದಾನಿಗಳ ಸಂಖ್ಯೆಯೂ ಕಡಿಮೆ ಯಾಗಲಿದೆ. ಇದನ್ನೇ ಕಾರಣವನ್ನಾಗಿ ಇಟ್ಟುಕೊಂಡು ಸಂಸ್ಥೆಗಳು ಮಕ್ಕಳನ್ನು ಕುಟುಂಬದ ಜೊತೆಗೆ ಇರಿಸುವ ಯೋಜನೆಗಳನ್ನು ಹಾಕಿಕೊಂಡು ಅದನ್ನು ತಾವುಗಳೇ ಅನುಸರಣೆ ಮಾಡಬೇಕು. ಫಾಸ್ಟರ್ ಕೇರ್, ಸ್ಪಾನ್ಸರ್ಶಿಪ್ ಮುಂತಾದ ಪರ್ಯಾಯ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಬೇಕು. ಮಕ್ಕಳಿಗೆ ಕಾನೂನು ಬೆಂಬಲ ನೀಡುವುದರ ಬಗ್ಗೆ, ಮತ್ತು ಅವರ ಒಟ್ಟಾರೆ ವ್ಯಕ್ತಿತ್ವನ್ನು ನಿರ್ಮಾಣ ಮಾಡುವುದರ ಬಗ್ಗೆ ಸಾಧ್ಯವಿರುವ ತರಬೇತಿಗಳನ್ನು ನೀಡಬೇಕು.
ಮಕ್ಕಳನ್ನು ಸಂಸ್ಥೆಗಳಿಗೆ ಕರೆದುಕೊಂಡುಬರುವ ಬದಲಿಗೆ ಸಂಸ್ಥೆಯ ಸವಲತ್ತುಗಳನ್ನು ಮಕ್ಕಳು ಇರುವ ಕಡೆಗೇ ತೆಗೆದುಕೊಂಡು ಹೋಗುವ ಕೆಲಸವನ್ನು ಸಂಸ್ಥೆಗಳು ಮಾಡಬೇಕಾದ ಕಾಲ ಬಂದಿದೆ.
ಹಾಗೆಯೇ ಕೆಲವು ಅನುಸರಣಾ ಸಂಸ್ಥೆಗಳಿಗೆ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಒಮ್ಮೆಯೂ ಭೇಟಿ ನೀಡದೆಯೇ ನೊಂದಾವಣಿ ಪತ್ರ ನೀಡಿರುತ್ತಾರೆ. ಇದು ನಿಲ್ಲಬೇಕು. “ ಸಮಾಜ ಸೇವೆ” ಎನ್ನುವ ಹೆಸರಿನಲ್ಲಿ ಬರುವ ಎಲ್ಲರಿಗೂ ನಾಯಿಕೊಡೆಗಳಂತೆ ನೊಂದಾವಣೆ ಪತ್ರ ನೀಡುವುದನ್ನು ಸರ್ಕಾರ ನಿಲ್ಲಿಸಬೇಕು. ಈಗಾಗಲೇ ಇರುವ ಅನರ್ಹ ಸಂಸ್ಥೆಗಳನ್ನು ತರಬೇತಿ ನೀಡುವುದರ ಮೂಲಕ, ಕೂಡಲೇ ಯೋಗ್ಯ ಸಂಸ್ಥೆಯನ್ನಾಗಿ ಮಾಡಬೇಕು, ಅದು ಸಾಧ್ಯವಾಗದೇ ಹೋದಾಗ ಯಾವುದೇ ಪ್ರಭಾವಕ್ಕೆ ಒಳಗಾಗದೆ ಸರ್ಕಾರ ಅಂತಹ ಸಂಸ್ಥೆಗಳನ್ನು ಮುಚ್ಚಿಸಬೇಕು.
ಹೆಚ್ಚು ಹೆಚ್ಚು ಸಂಸ್ಥೆಗಳನ್ನು ಹುಟ್ಟು ಹಾಕುವುದರ ಜೊತೆಯಲ್ಲಿಯೇ ಬೇಜವಾಬ್ದಾರಿ ಪೋಷಕರನ್ನು ನಾವೇ ಸೄಷ್ಟಿಸುತ್ತೇವೆ. ಹಾಗೇ ಸಾಂಸ್ಥೀಕರಣಾಗೊಂಡಾ ಮಕ್ಕಳನ್ನು ಭವಿಶ್ಯದಲ್ಲಿ ಬೇಜವಾಬ್ದಾರಿಯುತ ಪೋಶಕರಾಗಲು ನಾವೇ ಕಾರಣ ಆಗಬಾರದು.
ಬಡತನ ಸಿರಿತನ ಯಾವುದೇ ಕಾರಣದಿಂದ ಕುಟುಂಬದಿಂದ ದೂರವಾಗಿ ಬೆಳೆದ ಮಕ್ಕಳು ಹಲವಾರು ಕಾರಣಗಳಿಗಾಗಿ ಮುಖ್ಯವಾಹಿನಿಗೆ ಎಂದೂ ಭಾರವಾಗಿರುತ್ತಾರೆ. ಹಾಗಾಗಿ ಅವರ ಜೀವನವನ್ನು ರೂಪಿಸುವಲ್ಲಿ ಮಕ್ಕಳ ಅನುಸರಣಾ ಸಂಸ್ಥೆಗಳು ಹಾಗು ಮಕ್ಕಳ ಕಲ್ಯಾಣ ಸಮಿತಿಗಳು ಕಾನೂನು ಎಲ್ಲಿ ಇದೆ ಎಂದು ನೋಡುವುದಕ್ಕಿಂತ ಇರುವ ಕಾನೂನು ಏನು ಹೇಳುತ್ತಿದೆ ಮತ್ತು ಎಲ್ಲಿ ಮತ್ತು ಹೇಗೆ ಬಳಸಿಕೊಳ್ಳ ಬೇಕು ಎನ್ನುವುದನ್ನು ಅರ್ಥ ಮಾಡಿಕೊಳ್ಳುವ ಕಾಲ ಬಂದಿದೆ.
ನಮಸ್ಕಾರಗಳು.
****************************************
27th May 2020
ಸಮರ್ಪಕವಾಗಿದೆ. ಅಭಿನಂದನೆ.
ReplyDeleteಮಕ್ಕಳ ಪಾಲನಾ ಸಂಸ್ಥೆಗಳು ಸ್ಥಾವರ ಭಾವವನ್ನೇ ಹಿಡಿದಿಟ್ಟುಕೊಳ್ಳುವುದಕ್ಕಿಂತಾ ಜಂಗಮ ಮನಸ್ಸನ್ನೂ ಬೆಳೆಸಿಕೊಳ್ಳುವ ಆವಶ್ಯಕತೆ ಇದೆ.