Online ದೌರ್ಜನ್ಯ ಮತ್ತು ವರ್ಕ್ from home

ಉದ್ಯೋಗಸ್ಥ ಸ್ಥಳಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ತಡೆ ಕಾನೂನು 2013 ಇದರ ಅಡಿಯಲ್ಲಿ ಮನೆಯಿಂದ ಕೆಲಸ ಮಾಡುವ ಉದ್ಯೋಗಸ್ಥ ಮಹಿಳೆಯರಿಗೆ ರಕ್ಷಣೆ ಇದೆಯೋ ಇಲ್ಲವೋ ಎನ್ನುವ ಬಹು ಮುಖ್ಯ ಪ್ರಶ್ನೆ ಈಗಿನ ದಿನಗಳಲ್ಲಿ ಚರ್ಚೆಗೆ ಬಂದಿದೆ.
ಪ್ರಕೃತಿ ಒಡ್ಡುತ್ತಿರುವ ಸವಾಲುಗಳಿಗೆ ಮನುಷ್ಯ ಅದೆಷ್ಟು ಪ್ರಮಾಣದಲ್ಲಿ ಬದುಕುವ ವಿಧಾನವನ್ನು ಹುಡುಕಿ ಕೊಳ್ಳುತ್ತಿದ್ದಾನೋ ಅಷ್ಟೇ ಸಂಖ್ಯೆಯಲ್ಲಿ ದೌರ್ಜನ್ಯದ ಹೊಸ ಮುಖಗಳನ್ನೂ ಅವಿಷ್ಕರಿಸಿಕೊಳ್ಳುತ್ತಿದ್ದಾನೆ. ಅದಕ್ಕೆ ಹೊಸ ಸೇರ್ಪಡೆ ಆನ್ಲೈನ್‍ನಲ್ಲಿ ಕೆಲಸ ಮಾಡುವ ಉದ್ಯೋಗಸ್ಥ ಮಹಿಳೆಯರಿಗೆ ಆನ್ಲೈನ್‍ನಲ್ಲಿಯೇ  ದೌರ್ಜನ್ಯ.
ಇಷ್ಟು ದಿನ ಉದ್ಯೋಗಸ್ಥ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಆಗುತ್ತಿದ್ದ ಲೈಂಗಿಕ ಮತ್ತು ಮಾನಸಿಕ ದೌರ್ಜನ್ಯಕ್ಕೆ ಅದೆಷ್ಟೋ ಸಂಘರ್ಷದ ನಂತರ ಪರಿಹಾರ ರೂಪದಲ್ಲಿ ಕಾನೂನನ್ನು ರೂಪಿಸಿಕೊಂಡಿದ್ದೇವೆ. ಆದರೆ ಈಗ ಅಂತಹ ದೌರ್ಜನ್ಯ ತನ್ನ ಸ್ವರೂಪವನ್ನೇ ಬದಲಾಯಿಸಿಕೊಂಡಿದೆ.
ಕರೋನ ನಮ್ಮೊಳಗೆ ಬಂದು ಸೇರಿಕೊಳ್ಳಲು ಹೇಗೆ ಯಾವ ದಿಕ್ಕು ದೆಸೆಗಳ ಮಿತಿಯಿಲ್ಲವೋ ಹಾಗೇ ಮಹಿಳೆಯರ ಕುಲಕ್ಕೆ ಹಿಂಸೆ ಬಂದು ಎರಗಲು ಹೊತ್ತು, ಸ್ಥಳ ಯಾವುದರ ಸೀಮೆಯೂ  ಇಲ್ಲದಂತಾಗಿರುವುದು ನಾಗರೀಕತೆಯ ದೊಡ್ಡ ದುರಂತವೇ ಸರಿ.
ಜಗತ್ತಿನಲ್ಲಿ ಈಗಿರುವ ಪರಿಸ್ಥಿತಿಯಲ್ಲಿ ಸಾಕಷ್ಟು ಉದ್ಯೋಗ ದಾತರು ತಮ್ಮ ಕಚೇರಿಗಳನ್ನು, ಫ್ಯಾಕ್ಟರಿಗಳನ್ನು ಮುಚ್ಚಿರುವುದರಿಂದ ವಿದ್ಯಾವಂತ, ಅವಿದ್ಯಾವಂತ ಎನ್ನುವ ಬೇಧವಿಲ್ಲದೆ ಮಹಿಳೆಯರು ಕೆಲಸಗಳನ್ನು ಕಳೆದುಕೊಂಡಿದ್ದಾರೆ. ಹಾಗೂ ಹೀಗೂ ಹೆಣಗಾಡಿ ಕೆಲಸ ಉಳಿಸಿಕೊಂಡವರಿಗೆ ಮತ್ತೊಬ್ಬ ರಾಕ್ಷಸ ಎದುರಾಗುತ್ತಿದ್ದಾನೆ ಆನ್ಲೈನ್‍ನಲ್ಲಿ.
ನನ್ನ ಆಫೀಸಿಗೆ ಬರುವ ಹೆಣ್ಣು ಮಗಳೊಬ್ಬಳು  ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸದಲ್ಲಿ ಇದ್ದಾಳೆ. ಇವಳ ಜೊತೆ ಈ ವರೆಗೂ ಕೆಲಸ ಮಾಡುತ್ತಿದ್ದ ಒಟ್ಟು 40 ನಲವತ್ತು ಹೆಂಗಸರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಉಳಿದುಕೊಂಡಿರುವ  ಮಹಿಳೆಯರಿಗೆ, ಸೂಪರ್ವೈಸರ್ ಗೊತ್ತು ಪಡಿಸಿದ ಒಂದು ರಾಶಿ ಬಟ್ಟೆಯನ್ನು ಅವರುಗಳ ಮನೆಗೆ ತಲುಪಿಸುತ್ತಾನೆ. ಅವುಗಳಿಗೆ ಗುಂಡಿ ಕಾಜ ಹಾಕುವ ಕೆಲಸ ಇವರುಗಳದ್ದು. ಈಗ ಕೆಲಸ ಕಳೆದುಕೊಂಡರೆ ಊಟಕ್ಕೂ ತತ್ವಾರ ಇರುವ ಸಂದರ್ಭ. ಹಾಗಾಗಿ ಈ ಹೆಣ್ಣು  ಮಕ್ಕಳಿಗೆ ಇರುವ ಕೆಲಸದ ಅನಿವಾರ್ಯತೆಯನ್ನು ತಿಳಿದುಕೊಂಡಿರುವ ಸೂಪರ್ವೈಸರ್ ಕೆಲಸ ಬೇಕು ಎಂದರೆ ದಿನಾ ರಾತ್ರಿ ತನ್ನ ಜೊತೆ ವಾಟ್ಸ್ಯಾಪ್‍ನಲ್ಲಿ ಅವನಿಗೆ ಇಷ್ಟವಾಗುವ ಹಾಗೆ ಚ್ಯಾಟ್ ಮಾಡಬೇಕು ಎನ್ನುವ ಷರತ್ತು ವಿಧಿಸಿದ್ದಾನೆ. ಇದು ವಾರದ ಕೂಲಿಗೆ ದುಡಿಯುವ ಹೆಂಗಸರ ಅಸಹಾಯಕತೆಯ ಒಂದು ಮುಖ.
ಇನ್ನೊಬ್ಬಾಕೆ ಸಾಫ್ಟ್‍ವೇರ್ ತಂತ್ರಜ್ಞೆ. ಆಕೆಯ ಕಂಪನಿಯ ಉದ್ಯೋಗಸ್ಥರೆಲ್ಲಾ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಇವಳ ಪ್ರಾಜೆಕ್ಟ್ ಮ್ಯಾನೇಜರ್ನ ಡಿಮ್ಯಾಂಡ್ ಏನೆಂದರೆ ಇವಳು ಆನ್ಲೈನ್ ಇರುವಾಗಲೆಲ್ಲಾ ವೆಬ್ ಕ್ಯಾಮೆರಾವನ್ನು ಅವಳ ಎದೆ ಭಾಗದ ಮೇಲೆ ಫೋಕಸ್ ಮಾಡಿಕೊಂಡಿರಬೇಕು. ಅದಕ್ಕೆ ಇವಳು ವಿರೋಧ ವ್ಯಕ್ತ ಪಡಿಸಲು ಹೆದರುತ್ತಿದ್ದಾಳೆ , ಏಕೆಂದರೆ ಆತ ಇವಳ ಮಾಜಿ ಪ್ರೇಮಿ ಮತ್ತು ಇವಳಿಗೆ ಈಗ ತಾನೆ ಮದುವೆ ಆಗಿದೆ.
ಹೀಗೆ ಇನ್ನೊಂದು ಪ್ರಕರಣದಲ್ಲಿ ಆನ್ಲೈನ್ ಮೀಟಿಂಗ್‍ನಲ್ಲಿ ಇರುವಾಗಲೆಲ್ಲಾ ತನ್ನ ಬಾಸ್‍ಗೆ ಕಾಣುವಂತೆ ಅವಳ ಒಳ ಉಡುಪುಗಳನ್ನು ಬ್ಯಾಕ್‍ಗ್ರೌಂಡ್ನಲ್ಲಿ ಕಾಣುವಂತೆ ಹಾಕಿರಬೇಕು,, ಅಸಭ್ಯ ಪದಗಳನ್ನು ಅವನು ಬಳಸಿದಾಗ ಅದಕ್ಕೆ ಪ್ರತಿಕ್ರಿಯಿಸಬೇಕು, ಆತ ಅಶ್ಲೀಲ ಸಂಜ್ಞೆಗಳನ್ನು ಮಾಡಿದಾಗ ಇವಳು ವಿರೋಧಿಸಬಾರದು, ಪೋಲ್ಯಾತಿ ಪೋಲಿ ಜೋಕ್ಸ್ ಮಾಡಿದಾಗ ಸಹಿಸಿಕೊಂಡಿರಬೇಕು, ಕೆಲಸ ಮಾಡುವುದರ ಜೊತೆಯಲ್ಲಿಯೇ, ಲ್ಯಾಪ್‍ಟಾಪ್‍ನಲ್ಲಿ ಮತ್ತೊಂದು ವಿಂಡೋ ತೆರೆದಿಟ್ಟುಕೊಂಡು ಅವನ ಜೊತೆ ಸೆಕ್ಸ್ ಚ್ಯಾಟ್ ಮಾಡುತ್ತಿರಬೇಕು ಹೀಗೆಲ್ಲಾ ಮಹಿಳೆಯರನ್ನು ಸಂಕಷ್ಟಕ್ಕೆ ಸಿಲುಕಿಸುವುದು ಒಂದು ದೊಡ್ಡ ಅಪರಾಧ ಎನ್ನುವ ಪರಿವೆಯೇ ಇಲ್ಲದೆ ಹೆಚ್ಚಾಗುತ್ತಿದೆ.
ಆಫೀಸಿಗೆ ಹೋಗಿ ಕೆಲಸ ಮಾಡದೇ ಮನೆಯಿಂದಲೇ ಕೆಲಸ ಮಾಡುವುದರಿಂದ ಸ್ಪರ್ಷ ಕಿರುಕುಳ ಮಾತ್ರ ಇರುವುದಿಲ್ಲ ಎನ್ನುವುದನ್ನು ಬಿಟ್ಟರೆ ಅವಳ ಮಾನಸಿಕ, ಭಾವನಾತ್ಮ, ಮತ್ತು ಘನತೆಯ ಮೇಲಿನ ಅತ್ಯಾಚಾರ ಅವ್ಯಾಹತವಾಗಿ ಮುಂದುವರೆಯುತ್ತಿದೆ ಮತ್ತು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.  ಎಷ್ಟೇ ವಿದ್ಯಾವಂತ ಮಹಿಳೆಯರೂ ಇನ್ನೂ ಸಮಾಜ ತಮ್ಮನ್ನೇ ಬೊಟ್ಟು ಮಾಡಿ ತೋರಿಸುತ್ತದೆ ಎನ್ನುವ ಭಯ ಮಿಶ್ರಿತ ಒತ್ತಡದಿಂದ ತಮ್ಮ ಮೇಲೆ ಆಗುವ ದೌರ್ಜನ್ಯಗಳನ್ನು ಅವುಡುಗಚ್ಚಿ ತಡೆದುಕೊಳ್ಳುತ್ತಾರೆ.
ನಮ್ಮ ಕಣ್ಣಿಗೆ ಕಾಣುವ ಕಿವಿಗೆ ಕೇಳಿಸುವ ಪ್ರತಿಭಟನೆ ಕೇವಲ ಶೇಕಡಾ  ಅಷ್ಟೇ. ಬಾಕಿಯಂತೆ ನೋವುಗಳನ್ನು ನುಂಗುವುದು ಅವಳ ವರ್ಣತಂತುಗಳಲ್ಲೇ  ಬಲವಂತವಾಗಿ ಸೇರಿಸಿಬಿಟ್ಟಿದ್ದೇವೆ. ಈಗಂತೂ ಆಫೀಸಿನಿಂದ ಆಗುತ್ತಿರುವ ಕಿರುಕುಳದ ಬಗ್ಗೆ ಸೊಲ್ಲೆತ್ತಿದರೆ ಕೂಡಲೇ ಮನೆಯಲ್ಲಿ ಗುಲ್ಲಾಗುವ ಹೆದರಿಕೆ, ಮನೆಯವರ ನಿಂದನೆ, ಮೂದಲಿಕೆಯನ್ನು ಎದುರಿಸಬೇಕು ಎನ್ನುವ ಭಯ ಹಾಗಾಗಿ ದೌರ್ಜನ್ಯವನ್ನು ಕದ್ದು ಮುಚ್ಚಿ ತಡೆದುಕೊಳ್ಳುತ್ತಿದ್ದಾರೆ.
ಕೇಂದ್ರ ಸರ್ಕಾರಿ ಉದ್ಯೋಗಸ್ಥ ಮಹಿಳೆಯೊಬ್ಬರು ಹೇಳಿಕೊಳ್ಳುತ್ತಿದ್ದರು “ ಮೇಡಂ ಆಫೀಸಿನಲ್ಲಿ ಸ್ವಲ್ಪ ಏರು ಪೇರಾದರೂ ಒಂದು ಕಮಿಟಿ ಇರುತ್ತೆ. ತಡೆಯಲು ಅಸಾಧ್ಯ ಎನಿಸಿದಾಗ ಆ ಕಮಿಟಿಗೆ ದೂರು ಕೊಡಬಹುದು ಎನ್ನುವ ಧೈರ್ಯನಾದರೂ ಇರುತ್ತೆ. ಆದರೆ ಈಗ ವರ್ಕ್ ಫ್ರಂ ಹೋಮ್ ನಲ್ಲಿ ಅಗುವ ಕಷ್ಟಕ್ಕೆ, ಕಮಿಟಿಗೆ  ದೂರು ಕೊಡಲು ಆಗೋಲ್ಲ. ಹೇಗೂ ದೂರು ಕೊಡಲ್ಲ ಎನ್ನುವ ಭಂಡ ಧೈರ್ಯದಲ್ಲಿ ಗಂಡಸರೂ ಇನ್ನೂ ಒರಟು ಬೀಳುತ್ತಿದ್ದಾರೆ”
ಬಹಳಷ್ಟು ಉದ್ಯೋಗಸ್ಥ ಮಹಿಳೆಯರಿಗೆ ಮನೆಯಿಂದಲೇ ಕೆಲಸ ಮಾಡುವಾಗ ತಮ್ಮ ಆಫೀಸಿನ ದೂರು ಘಟಕದಲ್ಲಿ ದೂರು ದಾಖಲಿಸಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯ ಬಂದು ಹೋಗಿದೆ.
ಈಗ ಅವರೆಲ್ಲರಿಗೂ ನಾವು ತಿಳಿಸಿಕೊಡಲೇ ಬೇಕಾದ ವಿಷಯ ಎಂದರೆ ಕಾರ್ಯಸ್ಥಾನದಲ್ಲಿ ಮಹಿಳೆಯರ ಲೈಂಗಿಕ ದೌರ್ಜನ್ಯ, ನಿರೋಧ, ನಿರ್ಬಂಧನೆ ಹಾಗೂ ನಿವಾರಣೆ ಕಾಯಿದೆ 2013 ಈ ಕಾನೂನಿನ ಅಡಿಯಲ್ಲಿ  ಕೆಲಸ ಮಾಡುವ ಜಾಗ ಯಾವುದೇ ಇದ್ದರೂ, ಕೆಲಸ ಕೊಟ್ಟವರಿಂದ ಅಥವಾ ಸಹೋದ್ಯೋಗಿಗಳಿಂದ , ಯಾವ ವೇದಿಕೆಯ ಮೂಲಕವೇ ಆಗಲಿ ಕಿರುಕುಳ ಆದಾಗ  ಆ ಕಚೇರಿಯ ಆಂತರಿಕ ದೂರು ಸಮಿತಿಗೆ ದೂರು ಸಲ್ಲಿಸಲು ಸಾಧ್ಯವಿದೆ.
ಈ ಕಾನೂನಿನ ಸೆಕ್ಷನ್ 2(o)(vi) ರಲ್ಲಿ “ಕಾರ್ಯಸ್ಥಾನ” ಎನ್ನುವುದಕ್ಕೆ ನೀಡಿರುವ ವ್ಯಾಖ್ಯಾನದಲ್ಲಿ “ವಾಸಿಸುವ ಮನೆ ಅಥಾ ಸ್ಥಾನ” ಎನ್ನುವುದನ್ನೂ ಉಲ್ಲೇಖಸಲಾಗಿದೆ.
ಯಾವ ಸ್ಥಾನ ಅಥವಾ ಸ್ಥಳ ಅಥವಾ ಜಾಗದಿಂದಲೇ ಆಗಿರಲಿ , ಕೆಲಸದ ಅವಧಿಯಲ್ಲಿ , ಉದ್ಯೋಗದಾತ ಮತ್ತು ಉದ್ಯೋಗಸ್ಥ ಎನ್ನುವ ಸಂಬಂಧದ ಅಡಿಯಲ್ಲಿ ಕೆಲಸ ಮಾಡುತ್ತಿರುವಾಗ ಆಗುವ ಎಲ್ಲಾ ರೀತಿಯ ದೌರ್ಜನ್ಯಗಳಿಗೂ ದೂರು ದಾಖಲಿಸಲು ಸಾಧ್ಯವಿರುತ್ತದೆ.
ಇದು ಈ ಮೊದಲೇ ಹೇಳಿದ ಗಾರ್ಮೆಂಟ್ ಫ್ಯಾಕ್ಟರಿಯ ಕೆಲಸಗಾರರ ಉದಾಹರಣೆಯಲ್ಲೂ ಸಾಧ್ಯವಿದೆ, ಸಾಫ಼ಟ್‍ವೇರ್ ಉದ್ಯೋಗಿಗಳಿಗೂ ಲಭ್ಯ ಇದೆ. ಅಷ್ಟೇ ಅಲ್ಲ ಈಗ ಆನ್ಲೈನ್ ಮುಖೇನ ಪಾಠ ಮಾಡುತ್ತಿರುವ ಉಪಾಧ್ಯಾಯರುಗಳು ತಮ್ಮ ಸಹೋದ್ಯೋಗಿಗಳಿಂದ ಅಥವಾ ತಮ್ಮ ವಿದ್ಯಾರ್ಥಿಗಳ ಪೋಷಕರಿಂದ ಈ ರೀತಿಯ ತೊಂದರೆ ಆದರೆ ದೂರು ಸಲ್ಲಿಸಬಹುದು. ಹಾಗೆಯೇ ಈಗ ಅಂತರ್ಜಾಲದ ಮೂಲಕ ಸಂಘಟಿತ ವಲಯದಲ್ಲಿ  ಕೆಲಸ ಮಾಡುತ್ತಿರುವ ತರಬೇತಿದಾರರು, ವಿಜ್ಞಾನಿಗಳು, ಭಾಷಾಂತರಕಾರರು, ಸರ್ಕಾರಿ ಉದ್ಯೋಗಿಗಳು ಇವರುಗಳೂ ದೂರು ಸಲ್ಲಿಸಬಹುದು. ಮಹಿಳಾ ಸಹಾಯವಾಣಿ, ಹಿರಿಯ ನಾಗರೀಕರ ಸಹಾಯವಾಣಿ ಮತ್ತು ಮಕ್ಕಳ ಸಹಾಯವಾಣಿಯ ಸಿಬ್ಬಂದಿಗಳೂ ಸಹ ಅವರ ಕಚೇರಿಯ ಆಂತರಿಕ ದೂರು ಸಮಿತಿಯಲ್ಲಿ ತಮ್ಮ ಅಹವಾಲನ್ನು ದಾಖಲಿಸಬಹುದು.
ಉದ್ಯೋಗಸ್ಥ ಸ್ಥಳದಿಂದ ದೂರು ಸಲ್ಲಿಸಿದರೆ ಯಾವ ರೀತಿಯಲ್ಲಿ ತನಿಖೆ ನಡೆಯುವುದೋ ಈಗಲೂ ಅದೇ ರೀತಿಯ ತನಿಖೆ ಮಾಡಬೇಕಿರುತ್ತದೆ ಮತ್ತು ವರದಿಯನ್ನು ಸ್ಥಾನಿಕ ದೂರು ಸಮಿತಿಗೆ ಸಲ್ಲಿಸಲೇ ಬೇಕಿರುತ್ತದೆ.
ಆನ್ಲೈನ್‍ನಲ್ಲಿ ಯಾವ ರೀತಿಯ ದೌರ್ಜನ್ಯ ಆಗಬಹುದು?
ಲೈಂಗಿಕ ದೌರ್ಜನ್ಯ ಎಂದರೆ ಕೇವಲ ಸ್ಪರ್ಷ ಮುಖೇನ ಮಾತ್ರ ಆಗಲು ಸಾಧ್ಯ ಎನ್ನುವುದು ಮಿಥ್ಯೆ. ಮಹಿಳೆಯ ಘನತೆಗೆ ಕುಂದು ತರುವ ಉದ್ದೇಶದಿಂದ ಮಾಡಿದ ಯಾವ ಕೆಲಸವೂ ಲೈಂಗಿಕ ದೌರ್ಜನ್ಯ ಎನಿಸಿಕೊಳ್ಳುತ್ತದೆ.  ಚಲನವಲನ, ಹಾವಭಾವ, ಬಳಸುವ ಭಾಷೆ, ಸಂಜ್ಞೆಗಳ ಮೂಲಕವೂ ಇದು ಸಾಧ್ಯ. ಹಾಗೆಯೇ ಅಸಭ್ಯ ಟೀಕೆ, ಹಾಸ್ಯದ ಮಾತುಗಳು ಸಹ ಲೈಂಗಿಕ ದೌರ್ಜನ್ಯ ಎನಿಸಿಕೊಳ್ಳುತ್ತವೆ.
ಸಭ್ಯ ಭಾಷೆಯಲ್ಲಿಯೂ ಕೆಲವು ತೀರಾ ವೈಯಕ್ತಿಕ ವಿಷಯಗಳನ್ನು ಕೇಳುವುದು, ಮಹಿಳೆಯ ಒಪ್ಪಿಗೆ ಇಲ್ಲದೆ ಆ ವಿಷಯಗಳನ್ನು ಚರ್ಚಿಸುವುದು, ಸಲಹೆ ನೀಡುವುದು ಸಹ ಲೈಂಗಿಕ ಕಿರುಕುಳ ಎನಿಸಿಕೊಳ್ಳುತ್ತದೆ. ಸೆಕ್ಸ್ ಟಾಯ್ಸ್ ಬಗ್ಗೆ ಮಾತನಾಡುವುದು,  ಅವುಗಳ ಚಿತ್ರ ತೋರಿಸುವುದು ಅಥವಾ ಉದ್ದೇಶಪೂರ್ವಕವಾಗಿ ಅವುಗಳನ್ನು ಸಹೋದ್ಯೋಗಿ ಮಹಿಳೆಗೆ ಕಾಣಿಸುವಂತೆ ಪ್ರದರ್ಶಿಸುವುದು ಮತ್ತು ಒಳ ಉಡುಪುಗಳ ಬಗ್ಗೆ ವರ್ಣಿಸುವುದು, ಆಕೆ ಬಳಸುವ ಒಳ ಉಡುಪುಗಳ ಬ್ರ್ಯಾಂಡ್, ಬಣ್ಣ , ದರ ಇವುಗಳ ಬಗ್ಗೆ ಸಾಂಕೇತಿಕವಾಗಿ ಕೇಳುವುದು ಸಹ ಲೈಂಗಿಕ ದೌರ್ಜನ್ಯ ಎನಿಸಿಕೊಳ್ಳುತ್ತದೆ.
ಮಹಿಳೆಯ ಖಾಸಗೀ ವಿಷಯಗಳಾದ ದಾಂಪತ್ಯದ ಬಗ್ಗೆ ಮಾತಿಗೆಳೆಯುವುದು, ಲೇವಡಿ ಮಾಡುವುದು, ಮುಟ್ಟಿನ ಬಗ್ಗೆ ಮತ್ತು ಅದಕ್ಕೆ ಸಂಬಂಧಪಟ್ಟ ಭಾವನೆ, ಏರುಪೇರು ಪರಿಸ್ಥಿಗಳ ಬಗ್ಗೆ ಮಹಿಳೆಯ ಒಪ್ಪಿಗೆ ಇಲ್ಲದೆ ಅವಳೊಡನೆ ಮಾತನಾಡುವುದು ಅಪರಾಧ.
ಮಹಿಳೆಯ ಒಪ್ಪಿಗೆ ಇಲ್ಲದೆ  ಆಕೆಯ ಕುಟುಂಬವನ್ನು ಮಾತುಗಳಲ್ಲಿ ಅನಾವಶ್ಯಕವಾಗಿ ತರುವುದು, ಅವರ ಬಗ್ಗೆ ತಪ್ಪು ಭಾಷೆಗಳನ್ನು ಬಳಸುವುದು ಅಥವಾ ಯಾವುದೇ ರೀತಿಯ ಬೆದರಿಕೆ ಒಡ್ಡುವುದು ಇವು ಕೂಡ ಕಾರ್ಯಸ್ಥಾನದಲ್ಲಿ ಮಹಿಳೆಯರ ಲೈಂಗಿಕ ದೌರ್ಜನ್ಯನಿರೋಧನಿರ್ಬಂಧನೆ ಹಾಗೂ ನಿವಾರಣೆ ಕಾಯಿದೆ 2013 ಇದರ ಅಡಿಯಲ್ಲಿ ಅಪರಾಧ ಆಗಿರುತ್ತದೆ.
ಆಕೆ ತಾನು ಹೇಳಿದಂತೆ ಕೇಳಿದರೆ ಇನ್ಕ್ರಿಮೆಂಟ್ ಕೊಡುವುದಾಗಿಯೋ ಅಥವಾ ಪ್ರೊಮೋಷನ್ ಕೊಡಿಸುವುದಾಗಿ ಆಮಿಷ ಒಡ್ಡುವುದು ಕೂಡ ಅಪರಾಧ.
ಇಲ್ಲಿ ಇನ್ನೊಂದು ವಿಷಯ ಪ್ರಸ್ತಾಪ ಮಾಡಲೇ ಬೇಕಿರುತ್ತದೆ. ಕೆಲವು ಕಡೆ ಮೇಲಧಿಕಾರಿ ಅಥವಾ ಸಹೋದ್ಯೋಗಿಗಳು ಮಹಿಳಾ ಉದ್ಯೋಗಿಯನ್ನು ಸಾಲ ಕೊಡಲು ಒತ್ತಾಯ ಮಾಡುವುದು, ಅಥವಾ ಕೊಟ್ಟ ಸಾಲವನ್ನು ಹಿಂದಿರುಗಿ ಕೇಳಿದಾಗ  ಅಸಭ್ಯವಾಗಿ ವರ್ತಿಸುವುದು ಇವುಗಳು ಕೂಡ ಸೆಕ್ಷನ್ ರ ಅಡಿಯಲ್ಲಿ ಅಪರಾಧ ಎಂದು ಪರಿಗಣಿಸಲಾಗುತ್ತದೆ.
ದೈಹಿಕ ಕೋರಿಕೆಗಳನ್ನು, ಅಶ್ಲೀಲ ಮತ್ತು ಅಸಭ್ಯ ಮನವಿ, ಒತ್ತಡಗಳನ್ನು  ಪ್ರತ್ಯಕ್ಷ ಇಲ್ಲವೇ ಪರೋಕ್ಷವಾಗಿ ಪೂರೈಸದೇ ಇದ್ದಲ್ಲಿ ನಿನ್ನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಒಡ್ಡುವುದೂ ಶಿಕ್ಷಾರ್ಹ ಅಪರಾಧ.
ಮಹಿಳೆ ಮಾಡುವ ಕೆಲಸವನ್ನು ದುರುದ್ದೇಶಪೂರ್ವಕವಾಗಿ ಅಲ್ಲಗೆಳೆಯುವುದು, ಅವಳ ಕೆಲಸದಲ್ಲಿ ವೃಥಾ ತಲೆ ಹಾಕುವುದು, ಅವಳ ಮಾನಸಿಕ ಆರೋಗ್ಯಕ್ಕೆ ಧಕ್ಕೆ ಬರುವ ರೀತಿಯಲ್ಲಿ ಅವಮಾನಕರವಾಗಿ ನಡೆದುಕೊಳ್ಳುವುದು ಅಪರಾಧ.
ಉದ್ಯೋಗದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳದಿಂದ ಮಹಿಳೆಯರಿಗೆ ರಕ್ಷಣೆ ಕೊಡುವ ಕಾನೂನು  ಕೇವಲ ನೇರವಾಗಿ  ಉದ್ಯೋಗ ಪಡೆದುಕೊಂಡವರಿಗೆ ಮಾತ್ರವಲ್ಲ, ಗುತ್ತಿಗೆದಾರರ ಮೂಲಕ ಕೆಲಸ ಪಡೆದುಕೊಂಡು ಅಸಂಘಟಿತ ವಲಯದಲ್ಲಿ ಮನೆಯಿಂದಲೇ ಕೆಲಸ ಮಾಡುತ್ತಿರುವ ಮಹಿಳಾ ಉದ್ಯೋಗಿಗಳಿಗೂ ಅನ್ವಯ ಆಗುತ್ತದೆ.
ಈ ರೀತಿಯ ಯಾವುದೇ ತೊಂದರೆ ಉಂಟಾದರೆ, ತೊಂದರೆ ಆದ ಮೂರು ತಿಂಗಳುಗಳ ಒಳಗಾಗಿ ಲಿಖಿತ ರೂಪದಲ್ಲಿ, ಈಮೇಲ್ ಮೂಲಕ ಸಮಿತಿಗೆ ದೂರು ಸಲ್ಲಿಸಬೇಕಿರುತ್ತದೆ. ದೂರುದಾರಳ ಮತ್ತು ಸಾಕ್ಷಿಗಳ ಗುರುತನ್ನು ಗೋಪ್ಯವಾಗಿ ಇಡಬೇಕು ಎಂದು ಕಾನೂನಿನಲ್ಲಿ ಹೇಳಲಾಗಿದೆ. ರಾಜಿ ಸಂಧಾನ, ಅಪರಾಧಿಯನ್ನು ಕೆಲಸದಿಂದ ತೆಗೆದು ಹಾಕುವುದು, ದಂಡ ವಿಧಿಸುವುದು ಇವುಗಳು ಪ್ರಾಥಮಿಕ  ಶಿಕ್ಷೆಗಳು. ಆದರೆ ತೀವ್ರತರವಾದ ಅಪರಾಧಗಳನ್ನು ಭಾರತೀಯ ಅಪರಾಧ ದಂಡ ಸಂಹಿತೆಯ ಹಲವು ಸೆಕ್ಷನ್‍ಗಳ ಅಡಿಯಲ್ಲಿ ಪರಿಗಣಿಸಿ  ತಿಂಗಳಿಂದ 10 ವರ್ಷಗಳ ಕಾಲ ಜೈಲು ಶಿಕ್ಷೆಯನ್ನೂ ನೀಡಲಾಗುತ್ತದೆ.
ಕಾರಣಾಂತರಗಳಿಂದ ಆಂತರಿಕ ಸಮಿತಿಗೆ ದೂರು ಕೊಡಲು ಸಾಧ್ಯವಾಗದಿದ್ದರೆ ಆನ್ಲೈನ್ ಉದ್ಯೋಗದ ಸಮಯದಲ್ಲಿ ಉದ್ಯೋಗದಾತರು, ಸಹೋದ್ಯೋಗಿಗಳು ಇವರಿಂದ ದೌರ್ಜನ್ಯ, ಕಿರುಕುಳಕ್ಕೆ ಒಳಗಾಗಿ ನೊಂದ ಮಹಿಳೆಯರು   ಮಿನಿಸ್ಟ್ರಿ ಆಫ್ ಹೋಮ್ ಅಫೇರ್ಸ್ ಅವರ Cyber Crime Reporting Portal     ನಲ್ಲಿ ಆನ್ಲೈನ್ ನಲ್ಲಿಯೇ ದೂರು ದಾಖಲಿಸಬಹುದಾಗಿರುತ್ತದೆ. 
ಇದರಲ್ಲಿ ಅನಾಮಿಕರಾಗಿಯೂ ದೂರು ದಾಖಲಿಸಬಹುದು. ಆ ಪೋರ್ಟಲ್‍ಗೆ ಹೋದರೆ ಅಲ್ಲಿ ಸರಳವಾದ ಮಾರ್ಗದರ್ಶನ ಇದೆ. ಇದರಲ್ಲಿ ಒಮ್ಮೆ ದರ್ಜಿಸಿದ ದೂರನ್ನು ಯಾವುದೇ ಕಾರಣಕ್ಕೂ ಹಿಂಪಡೆಯಲು ಸಾಧ್ಯ ಇರುವುದಿಲ್ಲ. ಅಷ್ಟೇ ಅಲ್ಲದೆ ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೂ ಸಹಾಯವಾಣಿ 155260  ಇದನ್ನು ದೂರವಾಣಿ ಮೂಲಕ ಸಂಪರ್ಕ ಮಾಡಿ ದೂರು ಸಲ್ಲಿಸಬಹುದು.
ಕಾನೂನು ಬೆಂಬಲಕ್ಕೆ ಇರುವಾಗ ಮನೆಯಿಂದ ಕೆಲಸ ಮಾಡುತ್ತಿರುವ ಮಹಿಳೆಯರು ದೌರ್ಜನ್ಯಕ್ಕೆ ಹೆದರುವ ಅವಶ್ಯಕತೆ ಇಲ್ಲ ಹಾಗೆಯೇ ಮನೆಯವರುಗಳು ಸಹ ಈಗ ನೇರವಾಗಿ ಆಕೆಯ ಪರಿಸ್ಥಿತಿಯನ್ನು ಕಾಣಲು ಸಾಧ್ಯ ಇರುವುದರಿಂದ ಆಕೆಯೆಡೆಗೆ ಸೂಕ್ಷ್ಮತೆಯಿಂದ ವರ್ತಿಸಿ ಸಹಾನುಭೂತಿಯಿಂದ ನಡೆದುಕೊಳ್ಳುವುದು, ಬೆಂಬಲ ನೀಡುವುದು ಅವಶ್ಯಕವಾಗಿದೆ.
ಸರ್ಕಾರವು ಈಗ ಎದುರಾಗಿರುವ ಹೊಸ ಪರಿಸ್ಥಿತಿಯಲ್ಲಿ ಮಹಿಳೆಯರು ಎದುರಿಸಲಿರುವ ಕಷ್ಟಗಳನ್ನು ಅರ್ಥ ಮಾಡಿಕೊಂಡು ಕಾನೂನುಗಳಲ್ಲಿ ಮತ್ತಷ್ಟು ಖಚಿತತೆ ತರುವಂತಹ ತಿದ್ದುಪಡಿಯನ್ನು ಈ ಕೂಡಲೇ ಜಾರಿಗೆ ತರಬೇಕು ಮತ್ತು ಜಾರಿಗೆ ತರಬೇಕಾದಂತಹ ಅಧಿಕಾರಿಗಳಿಗೆ ಅದರ ಬಗ್ಗೆ ತಿಳಿವಳಿಕೆ ಮತ್ತು ತರಬೇತಿ ನೀಡಬೇಕು. ಇಂತಹ ಮಹಿಳೆಯರಿಗೇ ಒಂದು ಪ್ರತ್ಯೇಕವಾದ ಸಹಾಯವಾಣಿ  ಆರಂಭಿಸಬೇಕು.
ಮನೆಯಿಂದಲೇ ಉದ್ಯೋಗ ಮಾಡಬೇಕಿರುವ ಈ ಅನಿವಾರ್ಯ ಪರಿಸ್ಥಿತಿ ಸಹಬಾಳ್ವೆ ಎನ್ನುವುದರ ನಿಜಾರ್ಥವನ್ನು ಕುಟುಂಬಕ್ಕೆ ಮತ್ತು ಉದ್ಯೋಗದಾತರಿಗೆ ಹೊಸ ಆಯಾಮದಲ್ಲಿ ಅರ್ಥ ಮಾಡಿಸಿಕೊಡಲಿ ಎನ್ನುವ ಆಶಯ ಈ ಹೊತ್ತಿನದು.
**********

Comments

  1. ತುಂಬಾ ಒಳ್ಳೆಯ ಲೇಖನ, ಇಂತಹ ವಿಚಾರಗಳು ಹೆಚ್ಚಿನ ಜನರನ್ನು ತಲುಪುವಂತಾಗಬೇಕು ಮೇಡಂ.

    ReplyDelete
  2. ಅಂಜಲಿ online ಮೂಲಕವೂ ಹಿಂಸಿಸುತ್ತಾರೆ ಎಂದು ಗೊತ್ತಿರಲಿಲ್ಲ ಛೇ 😥

    ReplyDelete

Post a Comment

Popular posts from this blog

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್