ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

 




ಬಯಲು ಸೀಮೆಯ ಎಲ್ಲರ ಬಾಯಲ್ಲೂ ಕುಂದಾಪುರ ಹೆಸರು ಹೊರಳುವಂತೆ ಮಾಡಿದ್ದ ಚೈತ್ರ ಕುಂದಾಪುರ ಈಗ ವಂಚನೆ ಪ್ರಕರಣದಲ್ಲಿ ಆರೋಪಿ. ಆಕೆ ಅಪರಾಧಿ ಹೌದೋ ಅಲ್ಲವೋ ಎನ್ನುವುದನ್ನು ನ್ಯಾಯಾಲಯ ತೀರ್ಮಾನ ಮಾಡಲು ಸಮಯವಿದೆ. ಆದರೆ ಆಕೆಯ ಮಾತುಗಾರಿಕೆ ಮತ್ತು ಅದರ ವಿಷಯ ಎಲ್ಲವನ್ನೂ ಕಂಡ ಜನಮಾನಸ ಆಗಲೇ ಅವಳನ್ನು ಅಪರಾಧಿ ಸ್ಥಾನದಲ್ಲಿ ಅನಾಯಸವಾಗಿ ನೋಡುತ್ತಿದೆ. ವಿದ್ಯುನ್ಮಾನ ಮಾಧ್ಯಮಗಳು ಆಗಲೇ ನ್ಯಾಯಾಲಯಕ್ಕೆ ಸಡ್ಡು ಹೊಡೇದ ಪ್ರಕ್ರಿಯೆಯನ್ನು ಶುರು ಮಾಡಿವೆ. ಇವೆಲ್ಲದರ ನಡುವೆ ಚೈತ್ರ ಎನ್ನುವ ಹೆಣ್ಣು ಮಗಳು ಹಲವಾರು ಯುವತಿಯರಿಗೆ ಪಾಠದ ಹಾದಿ ತೋರಿದ್ದು ಮಾತ್ರ ಸುಳ್ಳಲ್ಲ.

ಈಗ್ಗೆ ನಾಲ್ಕು ವರ್ಷಗಳ ಹಿಂದೆ ಸಮಿತಿಯ ಟೇಬಲ್ ಮುಂದೆ ಬಂದು ನಿಂತ ಯುವತಿಗೆ ಇನ್ನೂ 18 ತುಂಬಬೇಕಿತ್ತು. ಕೈ ಪೂರ್ತೀ ಸಿಂಹದ ಮುಖವುಳ್ಳ ಹನುಮಂತನ ಚಿತ್ರದ ಹಚ್ಚೆ. ಸ್ಪಷ್ಟ, ಸುಲಲಿತ ಕನ್ನಡ ಮಾತು. ಧರ್ಮ ಸಂರಕ್ಷಣೆ ಎನ್ನುವ ಅಫೀಮು ಕುಡಿಸಿದ್ದು ಅವಳ ದೊಡ್ಡಪ್ಪನ ಮಗ. ಇವಳೂ ಎಲ್ಲರ ಜೊತೆ ಊರೂರು ಸುತ್ತಿದಳು. ಹುಡುಗರ ಜೊತೆ ಜೈಕಾರ ಕೂಗುತ್ತಿದ್ದವಳಿಗೆ ಹೊತ್ತುಗೊತ್ತು ಇಲ್ಲದ ಜೀವನ ಅಭ್ಯಾಸ ಆಯಿತು. ತಂದೆ ಇದನ್ನು ವಿರೋಧಿಸಿ 10ನೆಯ ತರಗತಿಯನ್ನಾದರೂ ಓದಲಿ ಎನ್ನುವ ಆಸೆಯಿಂದ ಕೋಣೆಯೊಳಗೆ ಕೂಡಿ ಹಾಕುತ್ತಿದ್ದ. ಇವಳ ಧರ್ಮದಮಲು ಇಳಿಯಲೊಲ್ಲದು, ಅದಕ್ಕೆ ಸಾಥ್ ಕೊಡುತ್ತಿದ್ದ ಹುಡುಗರು. ಪದೇಪದೇ ಮನೆ ಬಿಟ್ಟು ಅವರೊಡನೆ ಹೋಗುತ್ತಿದ್ದಳು. ಮನೆಯವರು ಸೇರಿಸಿಕೊಳ್ಳದಾದರು. ಪ್ರೀತಿ ಮಾಡುತ್ತೇನೆ ಎಂದು ಹೇಳಿ ಭಾಷಣಕ್ಕೆ ಇಳಿಸಿದ್ದ ಹುಡುಗ ಇವಳನ್ನು ಮುಚ್ಚಟ್ಟೆ ಮಾಡಲಿಲ್ಲ. ಯಾರಿಗೂ ತಾನು ಬೇಡವಾದೆ ಎನ್ನುವ ಸತ್ಯ ತಿಳಿದ ಹುಡುಗಿ ಅಲ್ಲಿಂದಿಲ್ಲಿಗೆ ಅಲೆದಾಡುತ್ತಿದ್ದಾಗ ಪೋಲಿಸರ ಕೈಗೆ ಸಿಕ್ಕಿಬಿದ್ದಿದ್ದಳು. ಅವಳಿಗೆ ಭವಿಷ್ಯದ ಯೋಜನೆ ರೂಪಿಸುವ ಸಲುವಾಗಿ ಆಪ್ತಸಮಾಲೋಚನೆಗೆ ಕಳುಹಿಸುವಾಗ ಆ ಹುಡುಗಿ ನನ್ನಲ್ಲಿ ಹೇಳಿದ್ದು “ ಎಲ್ಲರಿಗೂ ಭಾಷಣ ಮಾಡಲು ಹೆಣ್ಣು ಬೇಕು ಪ್ರೀತಿ ಮಾಡಲು ಅಲ್ಲ ಮೇಡಂ” ಹೆಚ್ಚಿನ ತೊಂದರೆ ಆಗುವ ಮೊದಲೇ ಈ ಹುಡುಗಿಗೆ ಇಷ್ಟು ದೊಡ್ಡ ಸತ್ಯ ತಿಳಿದಿದೆ ಎಂದು ಸಮಾಧಾನ ಪಟ್ಟುಕೊಳ್ಳುವಾಗಲೇ ಅವಳು ಒಂದು ಸಹಾಯ ಕೇಳಿದಳು. “ನನ್ನ ಕೈ ಮೇಲಿನ ಹಚ್ಚೆಗಳನ್ನು ತೆಗೆಸಿಕೊಡುತ್ತೀರಾ” ಎಂದು.

ಸಾರ್ವಜನಿಕ ಜೀವನದಲ್ಲಿ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಬೇಕು ಎಂದು ಆಶಿಸುವ ಹೆಣ್ಣುಮಕ್ಕಳ ನಡವಳಿಕೆ ಹೇಗಿರಬೇಕು ಎನ್ನುವುದನ್ನು ಪದೇಪದೇ ಎಲ್ಲರೂ ಮಾತನಾಡುತ್ತೇವೆ ಆದರೆ ಅದೆಷ್ಟೋ ಯುವತಿಯರಿಗೆ ಮನವರಿಕೆ ಆಗದೆಯೇ ಉಳಿದು ಬಿಡುವುದು ದುರಂತ. ಒಂದಾರು ವರ್ಷಗಳ ಹಿಂದೆ ದೂರದರ್ಶನಕ್ಕೆ ಕಾಂಗ್ರೆಸ್ಸಿನ ಹಿರಿಯ ನಾಯಕಿ ಮತ್ತು ಮಾಜಿ ಸಚಿವೆ ಮೋಟಮ್ಮ ಅವರನ್ನು ಇಂಟರ್ವ್ಯೂ ಮಾಡಿದ್ದೆ. ಎಲ್ಲತರಲ್ಲೂ ಹಿರಿತನ ಗಳಿಸಿದ್ದ ಆ ಜೀವ ಹೇಳಿದ್ದು “ನಾವೆಲ್ಲಾ ರಾಜಕಾರಣಕ್ಕೆ ಬಂದಾಗ ಗಂಡಸರು ಹೇಳಿದ್ದಷ್ಟನ್ನೇ ಮಾಡಿಕೊಂಡು ಮೇಲೆ ಬಂದೆವು. ಮಾತು ಕಮ್ಮಿ ಮಾಡಿ ನಿಜವಾದ ಜನಸೇವೆ ಮಾಡುತ್ತಿದ್ದೆವು. ನಂತರದಲ್ಲಷ್ಟೇ ಮಹಿಳೆಗೆ ಸೀಟು ಕೊಡಲು ಪಕ್ಷಗಳು ಆರಂಭಿಸಿದವು. ಈಗಲೂ ಅಷ್ಟೇನು ಕಾಲ ಬದಲಾಗಿಲ್ಲ” ಎಂದು ಆಗ ಜೊತೆಯಲ್ಲಿಯೇ ಇದ್ದ ಮತ್ತೊಬ್ಬ ಹಿರಿಯ ನಾಯಕಿ ಲೀಲಾವತಿ ಆರ್ ಪ್ರಸಾದ್ ಅವರು ಹೇಳಿದರು “ ನಾವೆಲ್ಲಾ ರಾಜಕೀಯಕ್ಕೆ ಬಂದ ಮೇಲೂ ಅವಕಾಶ ಕೊಟ್ಟಾಗ ವಿಷಯದ ಮೇಲೆ ಹಿಡಿತ ಇಟ್ಟೂಕೊಂಡೇ ಭಾಷಣ ಮಾಡುತ್ತಿದ್ದೆವು ಆದರೆ ಈಗಿನ ಹೆಣ್ಣು ಮಕ್ಕಳು ಹಾಗಲ್ಲ, ರಾಜಕೀಯಕ್ಕೆ ಬರುವ ಮೊದಲೇ ಜನಸೇವೆಗಿಂತ ಹೆಚ್ಚಿನ ಮಾತು ಆಡುತ್ತಿರುತ್ತಾರೆ. ಹಾಗಾಗಿಯೇ ನಾವಿನ್ನೂ ಸಮಾಜದ ಪೂರ್ಣ ವಿಶ್ವಾಸ ಗಳಿಸಲು ಸಾಧ್ಯ ಆಗಿಲ್ಲ” ಎಂದು.

ಹಿಂದಿನ ತಲೆಮಾರಿನ ಯಾವುದೇ ಪಕ್ಷದ ಮಹಿಳಾನಾಯಕಿಯರ ಮಾತನ್ನು ಕೇಳಿದಾಗ ಈಗಿನವರಂತೆ ತೂಕತಪ್ಪಿದ್ದು ಕಾಣುವುದಿಲ್ಲ. ಅವರಲ್ಲಿ ತಲೆಗೆ ಬಂದದ್ದೆಲ್ಲಾ ಬಾಯಿಗೆ ಬಂದು ಮಾತು ಎನಿಸಿಕೊಳ್ಳುತ್ತಿರಲಿಲ್ಲ. ಒಮ್ಮೆ ಸ್ನೇಹಿತೆ ತನ್ನ ಕುಟುಂಬದ ಕಷ್ಟ ಹೇಳಿಕೊಂಡಾಗ ’ಜಾಣೆಯಾಗಿರು’ ಎನ್ನುವ ಮಾತು ಹೇಳಿದ್ದೆ. ಅದಕ್ಕೆ ಆಕೆ ’ನಿನ್ನಷ್ಟು ಜಾಣೆ ಆಗಿರುವುದು ನನಗೆ ಬೇಡ ನನ್ನದೇನಿದ್ದರೂ ನೇರಾನೇರಾ’ ಎಂದು ಮುನಿಸಿಕೊಂಡು ಎದ್ದು ನಡೆದಿದ್ದಳು. ಈಗ ನೆನಪಾಗುತ್ತಿದ್ದಾರೆ ನನ್ನ ಸಹೋದ್ಯೋಗಿಯೊಬ್ಬರು. ಆಕೆ ವಿಪರೀತ ಅಸಂಬದ್ಧ ಮಾತುಗಾರ್ತಿ ಇದ್ದರು. ಅವರು ಆಪ್ತಸಮಾಲೋಚನೆ ತೆಗೆದುಕೊಳ್ಳಲು ಆರಂಭಿಸಿದ್ದರು. ಆಪ್ತಸಮಾಲೋಚಕರು ಅವರಿಗೆ ಹೇಳಿದ್ದರಂತೆ ಯಾರೊಡನೆಯೂ ಮಾತುಗಳನ್ನು ಆರಂಭಿಸುವ ಮುನ್ನ ಅವರನ್ನು ಏನಾದರೂ ಹೊಗಳಬೇಕು ಆಗ ಒಂದು ಧನಾತ್ಮಕ ವಾತಾವರಣ ಉಂಟಾಗುತ್ತದೆ ಎಂದು. ಸರಿ ಈಕೆ ಎಗ್ಗುಸಿಗ್ಗಿಲ್ಲದೆ ಅರ್ಥ ಮೊದಲೇ ಇಲ್ಲದಂತೆ ಎಲ್ಲರನ್ನೂ ಹೊಗಳಲು ಆರಂಭಿಸಿದ್ದರು. ಅವರ ಮಾತುಗಳನ್ನು ಕೆಲಸಗಾರರೂ ನಂಬದೆ ಬೆನ್ನ ಹಿಂದೆ ಮುಸಿಮುಸಿ ನಗುತ್ತಿದ್ದರು. ಒಮ್ಮೆ ಮಗಳನ್ನು ಕಳೆದುಕೊಂಡ ಒಬ್ಬ ಬಡ ಹೆಂಗಸು ಪರಿಹಾರ ಕೇಳಿಕೊಂಡು ಬಂದಳು. ಆಕೆಯ ತಲೆಗೂದಲು ಸಿಕ್ಕಟ್ಟಿಗೆಯಾಗಿತ್ತು. ಬೂದಿಗುಡ್ಡೆಯಾಗಿದ್ದ ಸೀರೆ ಕಣ್ಣೀರು ಒರೆಸಿಒರೆಸಿ ಜಡ್ಡುಗಟ್ಟಿತ್ತು. ಸಹೋದ್ಯೋಗಿಯಾಕೆ ಅಳುತ್ತಿದ್ದ ತಾಯಿಯನ್ನು ’ವಾವ್, ನಿಮ್ಮ ಸೀರೆ ಎಷ್ಟು ಚೆನ್ನಾಗಿದೆ. ಬನ್ನಿ ಕುಳಿತುಕೊಳ್ಳಿ’ ಎಂದಾಗ ಆಫೀಸಿಗೆ ಆಫೀಸೇ ಕಕ್ಕಾಬಿಕ್ಕಿ ಆಗಿ ಹೋಯಿತು. ಆಳುತ್ತಿದ್ದ ಆ ಪಾಪದ ಹೆಂಗಸಂತೂ ನಂತರದಲ್ಲಿ ತುಟಿಕ್‍ಪಿಟಿಕ್ ಎಂದಿದ್ದರೆ ನನ್ನಾಣೆ. ಕೊನೆಗೂ ಆ ವಿದ್ಯಾವಂತೆಗೆ ತಾನು ಏನು ಮಾಡಿದೆ ಎಂದು ತಿಳಿಯಲೇ ಇಲ್ಲ ಎನ್ನುವುದು ಇಂದಿಗೂ ಬೇಸರ ತರಿಸುವ ವಿಷಯ.

ಗಂಡಸರು ಎನಿಸಿಕೊಂಡ ಹುಚ್ಚ ವೆಂಕಟ್, ಪ್ರಥಮ್ ಇವರುಗಳನ್ನು ಮಾಧ್ಯಮಗಳು ಕರೆದು ತಮ್ಮ ಬೇಳೆ ಬೇಯಿಸಿಕೊಳ್ಳುತ್ತವೆ. ಹಗುರವಾಗಿ ಅನಾವಶ್ಯಕವಾಗಿ ಮಾತನಾಡಿದರೂ ಪ್ರದೀಪ್ ಈಶ್ವರ್ ತರದವರು ಶಾಸಕರಾಗುತ್ತಾರೆ. ಹದತಪ್ಪಿ ಮಾತನಾಡದಿರಲಿ ಎಂದೇ ಚುನಾವಣೆಗೆ ಮುನ್ನ ನಲ್ಪಾಡ್‍ನನ್ನು ಮಾತಿನಿಂದ ದೂರವಿಟ್ಟು ಪಕ್ಷ ಕಾಪಾಡಿಕೊಂಡಿತು. ಆದರೆ ಅದೇ ಅಮೂಲ್ಯ, ಚೈತ್ರ ಇಂತಹ ಹೆಣ್ಣುಮಕ್ಕಳ ಪರ ವಹಿಸಿಕೊಳ್ಳಲು ಮುಂದಾಗದ ಸಮಾಜ ಅವರುಗಳನ್ನು ಜೈಲು ಸೇರಿಸುತ್ತದೆ. ಕಳೆದವಾರ ಬೆಂಗಳೂರಿನಲ್ಲಿ ಖಾಸಗೀ ವಾಹನ ಚಾಲಕರ ಸ್ಟ್ರೈಕ್ ಆಯಿತು. ಮಾರನೆಯ ದಿನ ಊಬರ್ ಚಾಲಕನೊಬ್ಬನನ್ನು “ಏನಪ್ಪ ಹೇಗಿತ್ತು ಮೊನ್ನೆ ಪ್ರತಿಭಟನೆ” ಅಂತ ಕೇಳಿದೆ. “ಹೋಗಲಿಲ್ಲ ಮೇಡಮ್” ಅಂದ. “ಯಾಕೆ” ಅಂದೆ. “ಈ ಸಂಘ ಸಂಘಟನೆ ಎಲ್ಲಾ ಸುಮ್ಮನೆ ಒಟ್ಟಿಗೆ ಸೇರಿಸಿ ತಮ್ಮ ಟೈಮ್ ಪಾಸ್ ಮಾಡಿಸಿಕೊಳ್ಳುತ್ತಾರೆ ಮೇಡಂ, ಪೊಲೀಸ್ ಕೇಸ್ ಆದಾಗ ಒಬ್ಬರು ಅಂದರೆ ಒಬ್ಬರು ಕೂಡ ಸಹಾಯಕ್ಕೆ ಬರಲ್ಲ” ಅಂದ! ಇದು ಎಲ್ಲರಿಗೂ ತಿಳಿದ ಸತ್ಯ ಆದರೂ ಇಂದಿನ ಹೆಣ್ಣುಗಳು ಮರೆತಂತೆ ಮಾಡುತ್ತಿರುವ ವಾಸ್ತವ. ಮಾಜಿ ಸಚಿವರೊಬ್ಬರ ಮೇಲೆ ಪ್ರೀತಿಪ್ರೇಮದ ಆರೋಪ ಮಾಡಿದ್ದ ಪ್ರೇಮ ಎನ್ನುವಾಕೆ ಈಗ ಏನಾದರು? ಕೆಲಸ ಕೊಡಿಸುತ್ತೇನೆ ಎಂದು ತನ್ನನ್ನು ಬಳಸಿಕೊಂಡರು ಎಂದು ಸಚಿವರ ವೀಡಿಯೋ ಬಿಡುಗಡೆ ಮಾಡಿದ್ದ ಯುವತಿ ಈಗ ಎಲ್ಲಿಗೆ ಹೋದಳು? ಮಾಜಿ ಮುಖ್ಯಮಂತ್ರಿಯೊಬ್ಬರ ಮಗನೊಡನೆ ತನಗೆ ಮದುವೆಯಾಗಿದೆ ಎನ್ನುತ್ತಾ ರಂಪ ಮಾಡಿಕೊಂಡ ನಟಿಯನ್ನು ಈಗ ಎಲ್ಲಿಯಾದರೂ ಕಂಡಿದ್ದೀರಾ? ಹೀಗೆ ಮರೆಯಾಗಿ ಹೋದ ಸಾಲುಸಾಲು ಹೆಂಗಸರನ್ನು ಹೆಸರಿಸಬಹುದು. ಆರೋಪ ಹೊತ್ತವರು ಮಾತ್ರ ನಮ್ಮ ಕಣ್ಣೆದುರೇ ಇರುವುದನ್ನು ಕಂಡರೂ ಹೆಣ್ಣುಗಳು ರಾತ್ರಿ ಕಂಡ ಭಾವಿಗೆ ಹಗಲು ಬೀಳುವ ತವಕ ತೋರುವುದು ಯಾಕೋ!

ಫೇಸ್‍ಬುಕ್ಕಿನಲ್ಲಿ ಒಬ್ಬಾಕೆ ತಮ್ಮ ಗಂಡನನ್ನು ’ನಮ್ಮನೇದು’ ಎನ್ನುತ್ತಾ ಸಂಭೋದಿಸುತ್ತಿದ್ದರು. ’ನಮ್ಮನೇದಕ್ಕೆ ಇವತ್ತು ಪಲಾವ್ ಬೇಕಂತೆ’ ’ನಮ್ಮನೇದು ಇವತ್ತು ಆಫೀಸ್ ಕೆಲಸದ ಮೇಲೆ ಬಾಂಬೆಗೆ ಹೋಗಿದೆ’ ಹೀಗೆ ಯಾವಾಗಲೂ ಆತನ ಎಲ್ಲಾ ವಿಷಯಗಳನ್ನು ನಾಲ್ಕು ಸಾಲುಗಳಲ್ಲಿ ಬರೆಯುತ್ತಿದ್ದರು. ಆಕೆಗೆ ಅದು ಹಾಸ್ಯ ಎನಿಸುತ್ತಿತ್ತು. ಆಕೆಯ ಮಗಳು ಮೊದಲು ಅದನ್ನು ವಿರೋಧಿಸಿದಳು ಆದರೂ ಆಕೆಯ ತಲೆಗೆ ಹೋಗಲೇ ಇಲ್ಲ. ಗಂಡನ ಕಿವಿಗೆ ಬಿದ್ದಾಗ ಆತ ಬಹಳವೇ ನೊಂದು ಕೊಂಡರು. ನಂತರ ಆಕೆ ಹಾಗೆ ಬರೆಯುವುದನ್ನು ನಿಲ್ಲಿಸಿದರು. ಆದರೆ ಅವರ ಮಾತುಗಳಿಗೆ ಪ್ರತಿಕ್ರಿಯೆ ಕೊಡುತ್ತಿದ್ದವರೆಲ್ಲಾ ನಂತರವೂ ’ನಿಮ್ಮನೇದು ಇವತ್ತು ಏನು ತಿನ್ನ ಬೇಕಂತೆ?’ ’ನಿಮ್ಮನೇದು ಈಗ ಯಾವ ಊರಿಗೆ ಹೋಗಿದೆ?’ ಹೀಗೆಲ್ಲಾ ಕೇಳುವುದನ್ನು ಮುಂದುವರೆಸಿದಾಗ ಆಕೆ ಒತ್ತಡ ತಡೆಯಲಾರದೆ ಖಿನ್ನತೆಗೆ ಒಳಗಾದರು. ಅಚಾತುರ್ಯದಿಂದ ಆಡಿದ ಮಾತುಗಳ ಪರಿಣಾಮವೂ ಹತ್ತಾರು ವರ್ಷಗಳು ಬೆನ್ನು ಬಿಡುವುದಿಲ್ಲ. ಇನ್ನು ಯಾರದೋ ಕೈಗೊಂಬೆಯಾಗಿ ಅಧ್ಯಯನವಿಲ್ಲದ ಮಾತುಗಳು ಹೆಂಗಸರನ್ನು ಎಲ್ಲಿಯವರೆಗೂ ಕಾಯಬಹುದು. ಯಾವ ಕ್ಷೇತ್ರದಲ್ಲಿಯೇ ಆಗಲೀ ಮಹಿಳೆ ತನ್ನನ್ನು ಗುರುತಿಸಿಕೊಳ್ಳಲು ತನ್ನ ಪುರುಷ ಸಹೋದ್ಯೋಗಿಗಿಂತ ದುಪ್ಪಟ್ಟು ಕೆಲಸ ಮಾಡುವ ಪರಿಸ್ಥಿತಿ ಇಂದೂ ಇದೆ. ಅದರಲ್ಲೂ ಸಡಿಲ ಮತ್ತು ತಮ್ಮದಲ್ಲದ ಮಾತುಗಳನ್ನು ಆಡುವ ಹೆಂಗಸರಿಗೆ ಎಲ್ಲೂ ಗೌರವ ಇರುವುದಿಲ್ಲ ಎನ್ನುವುದೂ ವಾಸ್ತವ.

ಹಿಂದೆ ದಾರಿ ತೋರಲು ಒಬ್ಬ ಗುರುವಿನ ಅವಶ್ಯಕತೆ ಇತ್ತು ಆದರೆ ಈಗ ಬದಲಾಗಿದೆ ಕಾಲ. ತನ್ನ ಗುರಿಯನ್ನು ನಿರ್ಧರಿಸಿಕೊಳ್ಳುವ ಹೆಂಗಸಿಗೆ ಆಯ್ಕೆ ಸಾಮರ್ಥ್ಯ ಗಳಿಸಿಕೊಳ್ಳಲು ಹತ್ತಾರು ಸರಿ ದಾರಿ ಇದೆ. ಆದರೂ ಹೀಗೆ ದಾರಿಯನ್ನೇ ತಿರುವಿಕೊಳ್ಳುವ ಹೆಣ್ಣುಗಳನ್ನು ಕಂಡಾಗ ದ್ವಂದ್ವ ಕಾಡದಿರದು. ಭಾವನೆಗಳಿಗೂ ಭಾವುಕತೆಗೂ ನಡುವಿನ ಅಂತರ್ಪಟವನ್ನು ಸರಿಸಿಕೊಂಡು ಬಿಟ್ಟಾಗ ಹೆಂಗಸರು ಕನ್ಫ್ಯೂಷನ್‍ಗೆ ಒಳಗಾಗುತ್ತಾರೆ. ಒಮ್ಮೆ ಹೀಗಾಯ್ತು. ತಾಯ್ತಂದೆಯರ ಜೊತೆ ಕಳುಹಿಸಲಾಗದ ಸಂದರ್ಭದಲ್ಲಿ ಬಾಲಕಿಯೊಬ್ಬಳನ್ನು ಸರ್ಕಾರಿ ಸಂಸ್ಥೆಯಲ್ಲಿ ದಾಖಲಿಸಲಾಗಿತ್ತು. ಮಗಳನ್ನು ಮನೆಗೆ ಕೂಡಲೇ ಕರೆದುಕೊಂಡು ಹೋಗಬೇಕು ಎನ್ನುವುದು ತಂದೆಯ ಹಠವಾಗಿತ್ತು. ದೊಡ್ಡವರು ಎನಿಸಿಕೊಂಡವರಿಂದೆಲ್ಲಾ ನನಗೆ ಫೋನ್ ಮಾಡಿಸಿ ಬಿಡುಗಡೆಗೆ ಒತ್ತಡ ಹಾಕಿದ್ದರು. ಮಣಿಯದಾದ ನನ್ನನ್ನು ಬಡಿಯುವುದಾದರೂ ಹೇಗೆ ಎಂದು ಆತ ಯೋಚಿಸುವಾಗಲೇ ವಕೀಲರೊಬ್ಬರು ಕೊಟ್ಟ ಸಲಹೆಯ ಮೇರೆಗೆ ಸ್ಪಷ್ಟವಾಗಿ ಕಾನೂನು ಭಾಷೆ ಬಳಸಿ ಟೈಪ್ ಮಾಡಿದ ಅರ್ಜಿಯೊಂದನ್ನು ತಂದು ನನ್ನ ಮುಂದಿಟ್ಟರು. ಅದರಲ್ಲಿ ಆತನ ಮಗಳನ್ನು ಮನೆಗೆ ಕಳುಹಿಸಲು ನಾನು 80 ಸಾವಿರ ರೂಪಾಯಿಗಳ ರಕಂ ಕೇಳಿದ್ದೇನೆ ಎಂದು ಅದಕ್ಕೇ ಮಹಿಳಾ ಮತ್ತು ಮಕ್ಕಳ ಇಲಾಖೆ ನ್ಯಾಯ ಒದಗಿಸಿಕೊಡಬೇಕು ಎಂದಾಗಿ ಇತ್ತು. ಆತ ಎಷ್ಟು ಮೂಢರಿದ್ದರು ಎಂದರೆ ಒಮ್ಮೆಯೂ ನನ್ನನ್ನು ಭೇಟಿಯಾಗಿರದಿದ್ದ ಕಾರಣ ಅವರು ಆರೋಪ ಮಾಡುತ್ತಿರುವುದು ನನ್ನ ಮೇಲೆ ಎನ್ನುವ ಅರಿವೂ ಇಲ್ಲದ ದಡ್ಡರು. ಆತನನ್ನು ದೂರು ಸಲ್ಲಿಸಬೇಕಾದ ಅಧಿಕಾರಿಯ ಬಳಿ ನಾನೇ ಕಳುಹಿಸಿಕೊಟ್ಟೆ. ಗಂಡಸಿನ ಮೂಢತೆಗೆ ಸಿಗುವ ಮಾಫಿ ಈ ವ್ಯವಸ್ಥೆಯಲ್ಲಿ ಹೆಂಗಸಿನ ಮುಗ್ಧತೆಗೂ ಸಿಗುವುದಿಲ್ಲ. ಅದಕ್ಕೇ ’ಪ್ರಾಪರ್ ಚ್ಯಾನೆಲ್’ ಎನ್ನುವ ಪದಕ್ಕೆ ಎಲ್ಲಿಲ್ಲದ ಬೆಲೆ.

ನಮ್ಮ ಮನೆಗೆ ದೂರದೂರಿನ ನೆಂಟರೊಬ್ಬರು ಬರುತ್ತಿದ್ದರು. ಆಕೆ ಬಂದಕೂಡಲೇ ಬಾಗಿಲು ತೆಗೆಯುತ್ತಿದ್ದ ಸಹಾಯಕಿ ರಾಜಮ್ಮನಿಂದ ಹಿಡಿದು ಮನೆಯ ಯಜಮಾನಿ ನನ್ನ ಮುತ್ತಜ್ಜಿ ಪಾರ್ವತಮ್ಮನವರೆಗೂ ತಮ್ಮ ಎಲ್ಲಾ ಕಷ್ಟ ಮತ್ತು ಸುಖವನ್ನೂ ಕೂಡ ಬಿರಡೆ ಇಲ್ಲದೆ ಹಂಚಿಕೊಳ್ಳುತ್ತಿದ್ದರು. ಅವರು ಊರಿಗೆ ಹೋದ ನಂತರ ಅವರದ್ದೇ ಕಥೆ ಅವಿಭಕ್ತ ಕುಟುಂಬದ ಹತ್ತಾರು ಸದಸ್ಯರು , ನಾಲ್ಕಾರು ಸಹಾಯಕರು ಇವರುಗಳ ಬಾಯಿಂದ ಬೇರೆಬೇರೆಯಾಗಿ ಕೇಳಲು ಸಿಗುತ್ತಿತ್ತು ನಮಗೆ. ಯಾರು ಎಲ್ಲಿ ಯಾವ ಕಾರಣಕ್ಕೆ ಪರಿಚಯ ಆಗಿರುತ್ತಾರೋ ಅವರನ್ನು ಅಲ್ಲಿನ ಪರಿಚಯಕ್ಕೆ ಮಾತ್ರ ಸೀಮಿತವಾಗಿ ನೋಡಲು ಬಾರದ ಹೆಂಗಸರುಗಳಿಗೆ ’ನನ್ನನ್ನು ಬಳಸಿಕೊಂಡರು’ ಎಂದು ಅಳುವ ಅವಕಾಶವನ್ನೂ ಕೊಡದು ಈ ಸಮಾಜ.

ಮರುಳಾಗುವ ಮನಸ್ಸು ಇರುವವರೆಗೂ ಮಾಯಾಜಿಂಕೆ ಸುತ್ತಲೂ ಓಡುತ್ತಿರುತ್ತದೆ. ತಾನು ನೊಂದವಳು, ತಾನು ಬಡವಳು, ತಾನು ಗ್ರಾಮೀಣ ಪ್ರದೇಶದಿಂದ ಬಂದವಳು, ತಾನು ಮುಗ್ಧಳು, ಅಥವಾ ತಾನು ಬುದ್ಧಿವಂತಳು, ತಾನು ಸುಂದರಿ, ತಾನು ಅರ್ಹಳು ವಗೈರೆ ವಿಶೇಷಣಗಳನ್ನು ವೈಭವೀಕರಿಸಿಕೊಂಡು ಓಡಾಡುವ ಹೆಣ್ಣುಗಳು ಗಂಡು ವ್ಯವಸ್ಥೆಗೆ ಆಟಿಕೆಯಂತೆ. ದೇಹದ ತೂಕ ಏರಲು ವಯಸ್ಸು ಸಾಕು ಆದರೆ ಮಾತಿಗೆ ನಡತೆಗೆ ತೂಕ ತಂದುಕೊಳ್ಳಲು ಅಭ್ಯಾಸ ಬೇಕು. ನಮ್ಮ ಸಾಮರ್ಥ್ಯಕ್ಕೂ ಆಸೆಗೂ ಒಂದು ಸಮಾನಾಂತರ ಅನುಪಾತ ಇಟ್ಟುಕೊಳ್ಳಲು ಕಲಿತ ಹೆಣ್ಣುಗಳು ಮಾತ್ರ ಗೆಲ್ಲುತ್ತಾರೆ ಈ ರೇಸಿನಲ್ಲಿ ಉಳಿದವರು ಪಾಲಾಗುತ್ತಾರೆ ಜೈಲಿನಲ್ಲಿ, ಅವರಿವರ ಅಳ್ಳಕ ಮಾತುಗಳಲ್ಲಿ, ಆಸ್ಪತ್ರೆಗಳಲ್ಲಿ. “ ನಿನ್ನ ಹಣ ನನ್ನ ಕೈಯಲ್ಲಿ ನನ್ನ ಬುದ್ಧಿ ನಿನ್ನ ಕೈಯಲ್ಲಿ” ಎನ್ನುವ ಹೆಂಗಸರು ಇನ್ನಾದರೂ ಸಬಲರಾಗಲಿ. ಸಂಸತ್ತಿನಲ್ಲಿ ಇನ್ನೇನು ಮತ್ತೊಮ್ಮೆ ಚರ್ಚೆಗೆ ಬರಲಿರುವ ಮಹಿಳಾ ಮೀಸಲಾತಿ ಕರಡು ಜಯಗಳಿಸಲಿ. ಸಾರ್ವಜನಿಕ ಕ್ಷೇತ್ರದಲ್ಲಿ ನಿಜಾರ್ಥದ ಕೆಲಸ ಮಾಡುತ್ತಿರುವ ಮಹಿಳೆಯರ ಘನತೆ ಉಳಿಯಲಿ.

*****************


Comments

  1. ಸೃಜನ್ ರಾಘವೇಂದ್ರSeptember 17, 2023 at 8:31 AM

    ಮನಮುಟ್ಟುವ ಲೀಖನ

    ReplyDelete
  2. ವಂಚನೆಯಲ್ಲೂ ಇವಳು ಪುರುಷ ಸಮಾನತೆ ಸಾಧಿಸಿದ್ದುದು ಏನು ಕಡಿಮೆಯೆ? ಹಣದ ಆಸೆಯ ಎದುರಿಗೆ ತತ್ವಾದರ್ಶ ಮಣ್ ತಿಂದು ಹೋಗಿದೆ‌

    ReplyDelete
  3. uttama margadarshi lekhana

    ReplyDelete
  4. ತುಂಬಾ ವಿಚಾರಯುತ , ವಾಸ್ತವ ಅರಿವು ನೀಡುವ ಮತ್ತು ವಿಶ್ಲೇಷಣೆಪ್ರೇರಕ ಲೇಖನ...🙏

    ReplyDelete
  5. ಎಲ್ಲರಿಗೂ ಭಾಷಣ ಮಾಡಲು ಹೆಣ್ಣು ಬೇಕು ಪ್ರೀತಿ ಮಾಡಲು ಅಲ್ಲ

    ಸಡಿಲ ಮತ್ತು ತಮ್ಮದಲ್ಲದ ಮಾತುಗಳನ್ನು ಆಡುವ ಹೆಂಗಸರಿಗೆ ಎಲ್ಲೂ ಗೌರವ ಇರುವುದಿಲ್ಲ ಎನ್ನುವುದೂ ವಾಸ್ತವ.

    ದೇಹದ ತೂಕ ಏರಲು ವಯಸ್ಸು ಸಾಕು ಆದರೆ ಮಾತಿಗೆ ನಡತೆಗೆ ತೂಕ ತಂದುಕೊಳ್ಳಲು ಅಭ್ಯಾಸ ಬೇಕು. ನಮ್ಮ ಸಾಮರ್ಥ್ಯಕ್ಕೂ ಆಸೆಗೂ ಒಂದು ಸಮಾನಾಂತರ ಅನುಪಾತ ಇಟ್ಟುಕೊಳ್ಳಲು ಕಲಿತ ಹೆಣ್ಣುಗಳು ಮಾತ್ರ ಗೆಲ್ಲುತ್ತಾರೆ

    ReplyDelete
  6. ವಿಚಾರಯುತ ; ಜಿಜ್ಞಾಸಾತ್ಮಕ ಬರಹ...

    ReplyDelete
  7. ವಾಸ್ತವತೆ ಅನಾವರಣ ಮಾಡುವ ಲೇಖನ

    ReplyDelete

Post a Comment

Popular posts from this blog

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್