Solo Travel ವಿಜಯಕರ್ನಾಟದಲ್ಲಿ


 ಒಬ್ಬಂಟಿ ಪ್ರಯಾಣವೇ ಅತ್ಯದ್ಭುತ ಶಿಕ್ಷಕ. ಅದರಲ್ಲೂ ಪ್ರಯಾಣವು ನಾವು ಬಯಸುವಂತಹ ಪ್ರವಾಸವಾದರೆ ಅನುಭವದ ಅಗಾಧತೆಗೆ ಮಿತಿ ಇಲ್ಲ.

ಎಷ್ಟೋ ಬಾರಿ ಒಂಟಿಯಾಗಿ ಪ್ರಯಾಣ ಮಾಡಿದ್ದರೂ, ಸ್ನೇಹಿತರ ಮತ್ತು ಕುಟುಂಬದ ಜೊತೆ ಪ್ರವಾಸ ಹೋದಾಗಲೂ ಸಹ ನನಗಾಗಿ ಸ್ವಲ್ಪ ಸಮಯವನ್ನು ಎತ್ತಿಟ್ಟುಕೊಳ್ಳುತ್ತೇನೆ.

ಎಲ್ಲರ ಅಭಿರುಚಿ, ಆಸಕ್ತಿಯು ಒಂದೇ ಆಗಿರುವುದಿಲ್ಲ ಹಾಗಾಗಿ ನನಗೆ ವೈಯಕ್ತಿಕವಾಗಿ ಆಸಕ್ತಿ ಇರುವ ಜಾಗಗಳನ್ನು ನೋಡಲು ವಿಷಯಗಳನ್ನು ತಿಳಿದುಕೊಳ್ಳಲು ಕುಟುಂಬದ ಜೊತೆಯೊಳಗೂ ಸೋಲೋ ಪ್ರವಾಸವೊಂದು ಇದ್ದೇ ಇರುತ್ತದೆ.

ಇದಕ್ಕೆ ನಾನಿಟ್ಟ ಹೆಸರು "ಜೊತೆಯೊಳಗೂ ಒಂದು ಸೋಲೋ ಟೈಮ್" .ಇಂತಹ ಒಂದು ಪ್ರವಾಸದಲ್ಲಿ ಸಿಕ್ಕ ಮರೆಯಲಾರದ ನೆನಪು ಎಂದರೆ ಅಲೆಕ್ಸ್ ಎನ್ನುವ ಪೊಲೀಸ್ ಅಧಿಕಾರಿ. ಆತ ಇಂಗ್ಲೆಂಡಿನ ಕೇಂಬ್ರಿಡ್ಜ್ ನಲ್ಲಿ ಪೊಲೀಸ್ ಅಧಿಕಾರಿ. ಮಕ್ಕಳ ಹಕ್ಕುಗಳ ಬಗ್ಗೆ ಪಿ.ಎಚ್‌ಡಿ ಕೂಡ ಮಾಡುತ್ತಿದ್ದರು.

ಎಲ್ಲಿ ಹೋದರೂ ಮಕ್ಕಳ ಮತ್ತು ಮಹಿಳೆಯರ ಬಗ್ಗೆ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ತಿಳಿದುಕೊಳ್ಳುವುದು ಅದರ ಬಗ್ಗೆ ಕೆಲಸ ಮಾಡಿದವರನ್ನು, ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡುವುದು, ವೃತ್ತ ಪತ್ರಿಕೆಗಳನ್ನು ಓದುವುದು, ಸ್ಥಳೀಯ ಜನರನ್ನು ಮಾತನಾಡಿಸುವುದು, ಪುಸ್ತಕದಂಗಡಿಗೆ ಹೋಗುವುದು ನನ್ನ ಇಷ್ಟದ ಹವ್ಯಾಸ.

ಆ ದಿನ ಲಂಡನ್ನಿನ ಬೀದಿಯಲ್ಲಿ ಪ್ಲಾಸ್ಟಿಕ್ ಕವರ್ನಲ್ಲಿ ಸುತ್ತಿಟ್ಟಿದ್ದ ನವಜಾತ ಶಿಶುವಿನ ವಿಷಯವನ್ನು ಪತ್ರಿಕೆಯಲ್ಲಿ ಓದಿದ್ದೆ. ನಿತ್ಯವೂ ಓಡಾಡುತ್ತಿದ್ದ ರಸ್ತೆಯಲ್ಲಿ ನಿಂತಿದ್ದ ಪೊಲೀಸ್ ಅಧಿಕಾರಿಯನ್ನು ಮಾತನಾಡಿಸುತ್ತಾ ಈ ವಿಷಯ ಪ್ರಸ್ತಾಪಿಸಿದೆ.

ಆತ ನನ್ನನ್ನು ತಮ್ಮ ಕಚೇರಿಗೆ ಬರಲು ಹೇಳಿದರು. ಮರ್ಯಾದಾ ಹತ್ಯೆ ವಿದೇಶಗಳಲ್ಲೂ ಹೇಗೆ ನಡೆಯುತ್ತದೆ ಮತ್ತು ವಿಶೇಷವಾಗಿ ಅದು ಯಾವ ದೇಶದವರಿಂದ ಯಾಕಾಗಿ ನಡೆಯುತ್ತದೆ ಎನ್ನುವುದರ ಬಗ್ಗೆ ಅಂಕಿ ಅಂಶಗಳ ಜೊತೆ ಸುದೀರ್ಘವಾಗಿ ವಿಷಯ ತಿಳಿಸಿಕೊಟ್ಟರು.

ಹಿಂದಿರುಗಿ ಬಂದು ಮೂರ್ನಾಲ್ಕು ವಾರಗಳು ಕಳೆದು ಯಾವುದೇ ಪ್ರವಾಸಕ್ಕೆ ಸಿದ್ಧತೆ ಮಾಡಿಕೊಳ್ಳದಿದ್ದರೆ ಶಕ್ತಿಯೆಲ್ಲಾ ಸೋರಿಹೋಗುವ ಅನುಭವ.ಬದುಕನ್ನು ಚಟದಂತೆ ಆವರಿಸಿಕೊಂಡಿದೆ ಪ್ರವಾಸ. "ಜೀವನದಲ್ಲಿ ಅಭದ್ರತೆ ಕಾಡುವಾಗ ಜಗತ್ತು ಸುತ್ತಲು ಹೊರಡಬೇಕು ಧೈರ್ಯಕ್ಕೆ ಮತ್ತು ಬದುಕಿಗೆ" ಎನ್ನುವುದು ಅಲೆದಾಟ ಕಲಿಸಿರುವ ಪಾಠ.

ಒಂಟಿ ಪ್ರವಾಸದ ಮತ್ತೊಂದು ಸುಂದರ ಅನುಭವ ಆಗಿದ್ದು ಅರುಣಾಚಲ ಪ್ರದೇಶದಲ್ಲಿ. ಈ ಸ್ಥಳ ಭಾರತ ಮತ್ತು ಚೀನಾ ದೇಶದ ಗಡಿ, 'ಅಪತಾನಿ' ಎಂಬ ಹಳ್ಳಿಯಲ್ಲಿ ಅಪರೂಪದ ಬುಡಕಟ್ಟು ಜನಾಂಗವನ್ನು ಭೇಟಿ ಮಾಡುವ ಆಸೆಯಿಂದ ಹೊರತ್ತಿಟಿದ್ದೆ.

ಸಂಜೆ 4 ಗಂಟೆಯ ನಂತರ ಅಲ್ಲೆಲ್ಲಾ ಪ್ರಯಾಣ ಮಾಡುವ ಹಾಗಿಲ್ಲ. ಅದಕ್ಕೆ ಕಾನೂನೇ ಇದೆ. ಒಂದು ವೇಳೆ ಪ್ರಯಾಣ ಮಾಡಿದರೆ ಜಾಮೀನು ರಹಿತ ಅಪರಾಧವಾಗುತ್ತದೆ. ಸಂಜೆ 6 ಗಂಟೆಗೆ ಸರಿಯಾಗಿ ರಿಜಿಸ್ಟರ್ಡ್ ಮೊಬೈಲ್‌ಗೆ ಪ್ರಯಾಣದ ಅವಧಿ ಮುಗಿದಿದೆ ಎಂದು ಸಂದೇಶ ಬರುತ್ತದೆ. ಆ ಪ್ರದೇಶದಲ್ಲಿ ಯಾವುದೇ ಗೂಗಲ್ ನೆಟ್‌ವರ್ಕ್ ಸಿಗುವುದಿಲ್ಲ. ಗಡಿಭಾಗವಾದ್ದರಿಂದ ಹೆಜ್ಜೆಹೆಜ್ಜೆಗೂ ಪರಿಶೀಲನೆ ಮಾಡಲಾಗುತ್ತಿತ್ತು.

ಎಷ್ಟರಮಟ್ಟಿಗೆ ಎಂದರೆ, ಪರಿಶೀಲಿಸಲು ಕಾ‌ರಿನ ಒಳಗೆ ತಲೆ ಹಾಕಿದ ವ್ಯಕ್ತಿಯಿಂದ ಬರುತ್ತಿದ್ದ ಮದ್ಯದ ವಾಸನೆ ಮುಂದೆ ಸಾಗಿದರೂ ಕಾರಿನಿಂದ ಹೊರಹೋಗದಷ್ಟರ ಮಟ್ಟಿಗೆ ತಪಾಸಣೆ ನಡೆಯುತ್ತಿತ್ತು.

ವಾಸ್ತವ್ಯ ಹುಡುಕುತ್ತ ರಸ್ತೆ ತಪ್ಪಿ ನಿರ್ಬಂಧಿತ ಪ್ರದೇಶಕ್ಕೆ ಹೋಗಿಬಿಟ್ಟಿದ್ದೆ. 2-3 ನಿಮಿಷದಲ್ಲಿ ಸೈನಿಕರು ಸುತ್ತುವರಿದರು. ಏನು ಹೇಳಿದರೂ ಕೇಳದೆ, ಮೈ ಮೇಲಿನ ಬಟ್ಟೆ ಒಂದನ್ನು ಬಿಟ್ಟು ಎಲ್ಲವನ್ನು ವಶಕ್ಕೆ ಪಡೆದುಕೊಂಡರು.

ಭಾಷೆಯ ತೊಂದರೆಯಿಂದ ನಾನು ಹೇಳಿದ್ದು ಅವರಿಗೆ ಅರ್ಥವಾಗುತ್ತಿರಲಿಲ್ಲ. ಅವರ ಮಾತು ನನಗೆ ತಿಳಿಯುತ್ತಿರಲಿಲ್ಲ.

ಅಷ್ಟರಲ್ಲಿ ದೂರದಲ್ಲಿದ್ದ ಮತ್ತೊಬ್ಬ ಸೈನಿಕ ನನ್ನನ್ನು ನೋಡಿ, ಅಂದು ಇಟ್ಟಿದ್ದ ದೊಡ್ಡ ಬಿಂದಿಯನ್ನು ನೋಡುತ್ತಾ 'ಸೌತ್ ಇಂಡಿಯನ್ ಹೋ' ಎಂದು ಗುರುತಿಸಿ, ವಾಸ್ತವ್ಯಕ್ಕೂ ವ್ಯವಸ್ಥೆ ಮಾಡಿ ಕಳುಹಿಸಿಕೊಟ್ಟರು.

ಪ್ರವಾಸದ ನೆನಪುಗಳು ಆದ್ಯಂತ ರಹಿತವೇ. ಸೋಲೋ ಟೂರ್ ಗೆ ಒಂದು ಮಟ್ಟಿನ ಪೂರ್ವತಯಾರಿ ಬೇಕೇ ಬೇಕು. ಆದರೆ ಎಲ್ಲವೂ ನಿಗದಿತವಾಗಿ ನಡೆಯುವುದಿಲ್ಲ ಎನ್ನುವ ಸತ್ಯದ ಅರಿವೂ ಇರಬೇಕು ಮತ್ತು ಅದನ್ನು ನಿಭಾಯಿಸುವ ಚಾಕಚಕ್ಯತೆಯ ಕೈಯನ್ನೂ ಹಿಡಿದಿರಬೇಕು. ಇಷ್ಟಿದ್ದರೆ ಸೋಲೋ ಪ್ರವಾಸ ಒಬ್ಬ ನುರಿತ ಆಪ್ತಸಮಾಲೋಚಕನಂತೆ ಒದಗಿ ಬರುತ್ತದೆ.

†*************




Comments

Popular posts from this blog

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್