ಆಂದೋಲನ ಪತ್ರಿಕೆಯಲ್ಲಿ

 




            “ಹುಟ್ಟಿದ ಊರನು ಬಿಟ್ಟು ಬಂದಮೇಲೆ ಇನ್ನೇನು ಬಿಡುವುದು ಬಾಕಿ ಇದೆ. . .ಪರದೇಸಿ ಎದ್ದೇಳು ಕೊನೆ ಬಸ್ಸು ಟೈಮಾಗಿದೆ”  ಅಂತ ಹಾಡಾಗುತ್ತಿದ್ದ FM ಕೆಡಿಸಿಯೇ ಬಿಟ್ಟಿತು ತಲೆಯನ್ನು.  ಮೈಸೂರಿಗೆ ನಾನು ಹೋಗಿ ಒಂದು ತಿಂಗಳಾಯ್ತು ಅಂದರೆ ನನಗೆ ಕೊನೆ ಬಸ್ಸಿನ ಟೈಮ್ ಆಯ್ತೇ ಎನ್ನುವ ಆತಂಕದಿಂದಲೇ ಹಾಡನ್ನು ಪೂರ್ತೀ ಕೇಳಿದೆ. ಅಬ್ಬಬ್ಬಾ, ಭಾವನೆಗಳ ಹೊಟ್ಟೆಯನ್ನು ಹೇಗೆ ಕಿವುಚಿ ಬಿಟ್ಟಿದ್ದಾರೆ ಎಂದರೆ ಅಪ್ಪನ ಆಲದ ಮರಕ್ಕೆ ಜೋತು ಬೀಳದಿದ್ದರೆ ಭೂಮಿಗೆ ಬಂದಿದ್ದೇ ದಂಡ ಎನ್ನುವಂತೆ. ಅದಕ್ಕೇ ಇರಬೇಕು ಈಗ ಎಲ್ಲರೂ ಮರಳಿ ಮಣ್ಣಿಗೆ ಎನ್ನುವುದನ್ನು ಅಕ್ಷರಶಃ ಪಾಲಿಸಲು ಮುಂದಾಗುತ್ತಿರುವುದು ಮತ್ತು ಒಂದಷ್ಟು ಸೋಲುತ್ತಿರುವುದು ಕೂಡ.

            ಪರಿಚಯದವನೊಬ್ಬ ತನ್ನ 20ನೆಯ ವಯಸ್ಸಿನಲ್ಲಿಯೇ ಮನೆಯವರ ವಿರೋಧದ ನಡುವೆ ಪ್ರೇಮ ವಿವಾಹ ಮಾಡಿಕೊಂಡು ಅಮೇರಿಕೆಯ ಪಾಲಾಗಿದ್ದ. ಮಾತನಾಡಿದಾಗಲೆಲ್ಲಾ ಮೈಸೂರಿನ ನೆನಪಿನಲ್ಲಿ ನರಳುತ್ತಿದ್ದ. ಇನ್ನು ತಡೆಯಲು ಆಗುತ್ತಿಲ್ಲ ಎನಿಸಿದಾಗ ಗಂಟುಮೂಟೆಯನ್ನು ಮೈಸೂರಿಗೆ ಪಾರ್ಸೆಲ್ ಮಾಡಿ ಮಂಡಿಮೊಹಲ್ಲದಲ್ಲಿ ಇರುವ ತನ್ನ ಹುಟ್ಟು ಮನೆಯನ್ನು ಕಸಮುಸರೆ ಮಾಡಿ, ಪಾಯಸದ ತಪ್ಪಲೆಯಂತಾಗಿಸಿ ಸೆಕೆಂಡ್ ಇನ್ನಿಂಗ್ಸ್ ಜೀವನ ಶುರು ಮಾಡಿಯೇ ಬಿಟ್ಟ. ನಿತ್ಯವೂ ಕುಕ್ಕರಳ್ಳಿ ಕೆರೆ ದಂಡೆಯ ವಾಕಿಂಗ್. ತನ್ನನ್ನು ಸಾಫ್ಟ್‍ವೇರ್ ಮಾಡಿ ಕಾಳಮ್ಮನಗುಡಿ ಬೀದಿಯಲ್ಲಿ ತಾವು ಹಾರ್ಡ್‍ವೇರ್ ಆಗಿಯೇ ಉಳಿದುಕೊಂಡಿದ್ದ ಬಾಲ್ಯದ ಸ್ನೇಹಿತರೊಡನೆ ಬನ್ನಿಮಂಟಪದ  ಕಬಾಬ್, ಬಲ್ಲಾಳ್  ಸರ್ಕಲ್‍ನ ಚುರುಮುರಿ ಎಲ್ಲಾ ಮೆದ್ದ.  ಮೂರು ವರ್ಷಗಳು ಪಚನಕ್ರಿಯೆಯಲ್ಲಿಯೇ ಮುಗಿದವು. “ಉಹುಂ, ಯಾಕೋ ಹೊಂದುತ್ತಿಲ್ಲ ಕಣೆ. ಮನೆಯನ್ನು ಬಾಡಿಗೆ ಕೊಟ್ಟು ಮುಂದಿನ 16ನೆಯ ತಾರೀಖು ವಾಪಸ್ಸು ಹೊರಡುತ್ತಿದ್ದೇನೆ” ಎಂದು ಫೋನ್ ಮಾಡಿದ. ಸರಿಹೋಗದ ಆ ಊರಿನ ಸತ್ಯವನ್ನು ಈ ಊರಲ್ಲಿ ಕಂಡುಕೊಂಡಿದ್ದನವ.

            “ಬೆಂಗಳೂರಿನಲ್ಲಿ ಡಾಕ್ಟರ್ ಅಂತೆ” ಎಂದು ಎಲ್ಲರೂ ಹುಬ್ಬುಗಳನ್ನು ಏರಿಸಿ ಅದಂತೆ ಇದಂತೆ ಎನ್ನುತ್ತಿರುವಾಗ ವೈಭವದಿಂದ ಮದುವೆಯಾಗಿ ಗಂಡನ ಮನೆ ಸೇರಿದ್ದಳು ಸ್ನೇಹಿತೆ ಶಿಲ್ಪ. ಅತ್ತೆ-ಮಾವಂದಿರನ್ನು ಏಗಿಸಿ, ಎರಡು ಮಕ್ಕಳ ತಿಣುಕಾಟವನ್ನು ನೀಗಿಸುತ್ತಲೇ ತಾಯಿ ಮನೆಗೆ ಹತ್ತಿರವಿರಲಿ, ಅಣ್ಣ ಅತ್ತಿಗೆಯರ ಒಡನಾಟವಿರಲಿ ಎಂದು ಬಯಸುತ್ತಾ ದೊಡ್ಡ ಸೈಟ್ ಖರೀದಿಸಿ ಅದಕ್ಕೂ ದೊಡ್ಡ ಬಂಗಲೆ ಕಟ್ಟಿ, ಸೀರೆ ಉಡುಗೊರೆ ಕೊಟ್ಟು ಗೃಹಪ್ರವೇಶ ಮಾಡಿ ಅಲ್ಲೇ ವಾಸ ಹೂಡಿದಳು. ಅಷ್ಟೇ, 8 ತಿಂಗಳೂ ಇಲ್ಲ ಗಂಡ ಇಲ್ಲಿ ಸರಿಯಾಗುತ್ತಿಲ್ಲ. ಬೆಂಗಳೂರಿಗೆ ವಾಪಸ್ಸು ಹೋಗಬೇಕು ಎಂದು ಶುರು ಮಾಡಿದ. ಮತ್ತೆ ಸೂಟ್‍ಕೇಸ್‍ಗಳು ಗಡಬಡಿಸಿ ಬಂದ ದಾರಿಯಲ್ಲಿಯೇ ಬೆಂಗಳೂರು ಸೇರಿದವು. ಒಂದು ಕನಸನ್ನು ಇಬ್ಬರು ಕಾಣುವುದು ಸಾಧ್ಯ ಆದರೆ ಒಂದೇ ನೆನಪನ್ನು ಇಬ್ಬರು ಹಂಚಿಕೊಳ್ಳಬೇಕು ಎಂದರೆ ಅವರು ಒಡಹುಟ್ಟಿದವರಾಗಿರಬೇಕು ಅಥವಾ ಬಾಲ್ಯ ಸ್ನೇಹಿತರು ಇರಬೇಕು ಅಥವಾ ಅವರ ಮದುವೆಗೆ 30 ವರ್ಷಗಳಾದರೂ ಆಗಿರಬೇಕು. ಯಾವ ಊರಿನಲ್ಲಿ ಇಬ್ಬರ ನೆನಪುಗಳ ತಂತು ಬೇರು ಆಳವಾಗಿರುವುದಿಲ್ಲವೋ ಅವರು ಆ ನೆಲದಲ್ಲಿ ಬಾಳಲು ಆಗುವುದೇ ಎಂದು ಪ್ರಶ್ನಿಸಿಕೊಂಡೆ. ಹಿಂದೆಯೇ ನುಗ್ಗಿತು ಮತ್ತೊಂದು ಸೋಜಿಗದ ಪ್ರಶ್ನಾರ್ಥಕ “ಅದು ಹೇಗೆ ಮದುವೆಯಾಗಿ ಯಾವದೇ ಊರಿಗೆ ಹೋದ ಹುಡುಗಿ ಅದೇ ಊರಿನಲ್ಲಿ ಹೆಂಗಸಾಗಿ  ಬಿಡುತ್ತಾಳೆ?!” ಥೇಟ್ ರಾಧೆಯಂತೆ. ಗೋಕುಲದಿಂದ ದ್ವಾರಕೆಗೆ ಹೊರಳಿದವನಿಗೆ ದಕ್ಕದ ಪುಣ್ಯ ನಂದನಗರದ ಮಣ್ಣಿನ ಧೂಳನ್ನು ತನ್ನ ಹಣೆಗೆ ಸವರಿಕೊಂಡ ಉದ್ಧವನ  ಪಾಲಾಯ್ತು. ಅವನು ಚೇತನ ಅನಿಕೇತನನಾದ, ಇವಳು ರಾಧೆ ಹುಟ್ಟಿದಲ್ಲೇ ಮಣ್ಣಾದಳು, ಮೂರ್ತವಾದಳು. ಥೇಟ್ ಶಿಲ್ಪಳಂತೆ, ಇನ್ನೂ ಸಾವಿರಾರು ಹುಡುಗಿಯರಂತೆ.

            ತಮ್ಮ ಪ್ರವಾಸ ಕಥೆಗಳಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಹೇಳುತ್ತಾರೆ “ಎಷ್ಟೋ  ಊರುಗಳನ್ನು ಸುತ್ತಿದ್ದರೂ ಕೆಲವು ಊರುಗಳ  ಬಗ್ಗೆ ಮಾತ್ರ ಬರೆಯುತ್ತೇವೆ. ಕೆಲವು ಮಣ್ಣಿಗೇ ಬರೆಸಿಕೊಳ್ಳುವ ಶಕ್ತಿ ಇರುತ್ತದೆ” ಎಂದು. ಎಷ್ಟು ಸತ್ಯ! ಹಾಗೆಯೇ, ತವರೂರು ಎಂದ ಮಾತ್ರಕ್ಕೆ ನಮ್ಮನ್ನು ಮತ್ತೆ ಕರೆದು ತೆಕ್ಕೆಗೆ  ಆನಿಸಿಕೊಳ್ಳುವ ಗುಣ ಇರಲೇಬೇಕು ಎಂತಿಲ್ಲ. ನೆನಪು ಬದಲಾಗದ ಸ್ಥಾವರ ಆದರೆ ಊರಿಗೆ  ಹಾವು ಪೊರೆಕಳಚಿದಂತೆ ನಿತ್ಯನೂತನೆ ಆಗುವ ಸಂಭ್ರಮ. ನಿತ್ಯವೂ ಓಡಾಡಿಸಿಕೊಂಡಿದ್ದ ಇಟ್ಟಿಗೆಗೂಡಿನ ನೆನಪು ವಾಸ್ತವಕ್ಕೆ ತಾಳೆಯೇ ಆಗುತ್ತಿಲ್ಲ. ಇವತ್ತು ಅಲ್ಲಿ ನನಗೆ ಉಚಿತವಾಗಿ ಮನೆಕೊಟ್ಟರೂ ವಾಸ ಮಾಡಲಾರೆ. ಎದುರು ಮನೆಯ ಗೀತಾ ಅಂಟಿ ಸಂಸಾರ ಬೇರೆ ಊರಿನಲ್ಲಿ ಬೀಡುಬಿಟ್ಟಿದೆ. ವಿಶಾಲಾಕ್ಶಮ್ಮನವರು ಇಲ್ಲವೇ ಇಲ್ಲ. ಫಲಾಮೃತದವರ ಮನೆಯಲ್ಲಿ ಅದೆಷ್ಟು ಬದಲಾವಣೆ. ಆಚೆ, ಈಚೆ, ಕೋನಕೋನದಲ್ಲೂ ಬದಲಾಗಿ ಹೋಗಿದೆ ನನ್ನ ಮನೆಯಿದ್ದ ರಸ್ತೆ. ಅಲ್ಲಿ ನನ್ನ ನೆನಪುಗಳೂ ಈಗಿಲ್ಲ ಎಲ್ಲವೂ ಮನಸ್ಸಿನಲ್ಲಿ ಮಾತ್ರ. ಅಂದ ಹಾಗೆ ನಾನು ಈ ಊರಿನ ಪಾಲಾಗುವವರೆಗೂ ಒಂದೇ ಆಗಿದ್ದ ವಿಜಯನಗರ ಅದು ಯಾವ ಮಾಯದಲ್ಲಿ ನಾಲ್ಕು, ಐದು ಆರು ಎನ್ನುತ್ತಾ ಹಂತಹಂತಗಳಲ್ಲಿ ಸೈಟು, ಮನೆ, ಅಪಾರ್ಟ್ಮೆಂಟುಗಳನ್ನು ಹೆತ್ತು ಬಿಟ್ಟಿತು. ಹೀಗಿರುವ ಮೈಸೂರನ್ನು ಕೊನೆಯ ನಿಲ್ದಾಣ ಆಗಿಸಿಕೊಳ್ಳುವುದು ಸುಲಭವಲ್ಲ.

            ಮೊನ್ನೆ ಒಬ್ಬ ಆರ್ಥಿಕ ತಜ್ಞರು ಮೈಸೂರಿನಲ್ಲಿ ರಿಯಲ್ ಎಸ್ಟೇಟ್ ದರ ಯದ್ವತದ್ವ  ಬೆಳೆಯುತ್ತಿದೆ., ದುಡ್ಡಿರುವ ಎಲ್ಲರೂ ಮೈಸೂರಿನಲ್ಲಿ ಮನೆ ಮಾಡುತ್ತಿದ್ದಾರೆ. ಇನ್ನು ಮುಂದೆ ಇಲ್ಲಿ ಭೂಮಿ ಖರೀದಿ ಕಷ್ಟ ಸಾಧ್ಯ ಎಂತೆಲ್ಲಾ ಮಾತನಾಡುವಾಗ, ಸದ್ಯ ಇನ್ನಾದರೂ ಮೈಸೂರಿನ, ನನ್ನಾತ್ಮತದ ನೆಲವನ್ನು ಕೊರೆಯುವ ಕೆಲಸ ನಿಲ್ಲಲಿದೆ ಎಂದು ಮನಸಿನಲ್ಲೇ ಕ್ಷಣ ಮಾತ್ರ ಸುಖಿಸಿದರೂ ಒಮ್ಮೆಲೆ ನನಗೆ ಇಲ್ಲೊಂದು ಸೂರು ಇರದಿದ್ದರೆ ಎನ್ನುವ ಭಯಾನಕ ಯೋಚನೆ ಬಂದು ಭೂಮಿಯ ಮೇಲೆ ಮತ್ತಷ್ಟು  ಭಾರ ಊರಿದೆ. ಮಗ ಮುಂಬೈ ಸೇರಿದ್ದ, ಇವರಿಗೆ ಸರಸ್ವತಿಪುರಂನಲ್ಲಿಯೇ ವಿವೃತ್ತಿ ಆಯಿತು. ಮಗನ ಬಳಿ ನೆಲೆಸಿದರು. ಆರೆಂಟು ವರ್ಷಗಳು ಅಷ್ಟೆ.” ಕಾಶ್ಮೀರ ಸುತ್ತಿನೋಡು. . .ಕಾಶೀಲಿ ಸ್ನಾನ ಮಾಡು. . . ಆದರೂ, ನಮ್ಮೂರೇ ನಮಗೆ ಮೇಲು” ಎಂದುಕೊಂಡು ತೊಣಚಿಕೊಪ್ಪಲಿನಲ್ಲಿ ಬಾಡಿಗೆ ಮನೆ ಹಿಡಿದರು. ಒಂದು ವರ್ಷಕ್ಕೇ “ಆಗಲ್ಲಪ್ಪ ಮಗನೇ”  ಎಂದು ಅತ್ತರು. ವಾರಿಗೆಯವರು ತೀರಿಕೊಂಡಿದ್ದರು. ಮೊದಲಿನ ಹಾಗೆ ಚಿಕ್ಕದಿಲ್ಲದ ಮೈಸೂರನ್ನು ಸುತ್ತಲು ದೇಹ ತ್ರಾಣ ನೀಡಲಿಲ್ಲ. ಅಕ್ಕದವರ ಪರಿಚಯವಿಲ್ಲ. ಪಕ್ಕದವರ ಭಾಷೆ ತಿಳಿಯೋಲ್ಲ. ಇದು ಮೈಸೂರು ಈಗಿನ ಊರು. ಬದುಕಿದು ಜಟಕಾ ಬಂಡಿ ಎನ್ನುತ್ತಲೇ ಕಣ್ಣೊರೆಸಿಕೊಂಡು ಮುಂಬೈ ರೈಲು ಹತ್ತಿದರು. ಟಾಟಾ ಮಾಡಲೂ ಗುರುತಿರುವವರು ಒಬ್ಬರೂ ಕಾಣಲಿಲ್ಲ.

            ಒಂದಷ್ಟು ವರ್ಷಗಳ ಹಿಂದೆ ರಾಂಘಡ್ ಪೋಸ್ಟ್-506 (ಭಾರತ-ಪಾಕಿಸ್ತಾನ ಸರಹದ್ದು) ಇಲ್ಲಿ ಭೇಟಿಯಾದ ಒಂಟೆಸವಾರಿ ಸೈನಿಕ ಮೂಲ್ಚಂದ್ “ನೋಡಿ ನಮ್ಮ ಜೀವನ ಇಷ್ಟೇ, ನೀವೆಲ್ಲಾ ಎಷ್ಟು ಸುಂದರ ಊರುಗಳಲ್ಲಿ ಇದ್ದೀರ” ಎನ್ನುತ್ತಾ ಗಜಗಾತ್ರದ ಮರಳು ದಿಮ್ಮಿಗಳತ್ತ ಕೈ ಮಾಡಿದ್ದಾಗ ಹೇಳಿದ್ದೆ “ ಭೂಮಿಯ ಮೇಲೆ ಎರಡೇ ಸುಂದರ ಸ್ಥಳ ಇರುವುದು ಒಂದು ಸೈನಿಕ ಕೆಲಸ ಮಾಡುವ ಸ್ಥಳ ಇನ್ನೊಂದು ಪ್ರತೀ ಹೆಣ್ಣೀನ ತವರೂರು”. ಈಗ ಆತ ಇದೇ ಮಾತುಗಳನ್ನು ಆಡಿದ್ದಿದ್ದರೆ ನನ್ನ ಹೇಳಿಕೆಯ ಉತ್ತರಾರ್ಧ ಏನಿರುತ್ತಿತ್ತು? ಉಹುಂ, ತಿಳಿಯುತ್ತಿಲ್ಲ. ಮೈಸೂರಿಲ್ಲಿ ನನಗೆ ಅಪ್ಪ ಕೊಟ್ಟ ಮನೆಯಿದೆ, ಅಮ್ಮ ಕೊಟ್ಟ ಬದುಕಿದೆ ಅದಕ್ಕೇ ಅದು ನನ್ನೂರು ಅದಿಲ್ಲದಿದ್ದರೆ ಅದೂ ಒಂದು ಪ್ರವಾಸೀತಾಣವಷ್ಟೇ. ಎಲ್ಲಾ ಊರುಗಳಲ್ಲೂ ಎಲ್ಲರೂ ಇರಬಲ್ಲರಾದರೆ ನಾವೆಲ್ಲರೂ  ಅಲೆಮಾರಿ ಸಂತ ಶಿಶುನಾಳರೇ ಆಗುತ್ತಿರಲಿಲ್ಲವೇ.            ಅವಕಾಶ ಸಿಕ್ಕರೆ ನಾನು ಜರ್ಮನಿಯಲ್ಲಿಯೇ ಸೆಟಲ್ ಆಗುವೆ ಎಂದು ಡಂಗೂರ ಸಾರುತ್ತಿದ್ದೆ ಒಮ್ಮೆ. ಮೊದಲ ಹುಡುಗ ಬೋರಿಸ್ ಬೆಕರ್ ಸಿಗುತ್ತಾನೆ ಎನ್ನುವ ಆಸೆಯಿಂದ ಎರಡು ಮೂರು ಬಾರಿ ಹೋಗಿಬಂದೆ. ಇಲ್ಲಿದ್ದರೆ ಹಾಗೆ ಆಹಾ, ಅಲ್ಲಿದ್ದರೆ ಹೀಗೆ ವಾಹ್ ವಾಹ್ ಎಂದುಕೊಳ್ಳುತ್ತಾ ಕಲ್ಪಿಸಿ ಬಂದೆ. ಶಾಖಾಹಾರ ಎಂದರೆ ಮುಖ್ಯ ನಗರಗಳಲ್ಲಿ ಒಂದೆರಡು ಪಂಜಾಬಿ ಹೋಟೇಲುಗಳು ಉಳಿದೆಡೆ ನಾಲ್ಕು ಬೆಂದ ~ಅಸ್ಪರ್ಯಾಗಸ್ ಮಾತ್ರ. ಆದರೇನಂತೆ ಎನ್ನುತ್ತಲೇ ಜರ್ಮನಿಯನ್ನು ಖುದ್ದು ಕನಸಿನಲ್ಲಿ ಎಳೆದೆಳೆಕೊಂಡು ಕನವರಿಸುತ್ತಿದ್ದೆ.  ವಲಸಿಗರಿಗೆ ಬಾಗಿಲು ತೆಗೆದ ನಂತರ ಮತ್ತೊಮ್ಮೆ ಜರ್ಮನಿಗೆ ಹೋದೆ. ಅಲ್ಲವೇ ಅಲ್ಲ, ಇದು  ನನ್ನ ಮನೆಯಾಗುವ ಊರಲ್ಲ. ಕಶೇರುಕದ ಮೂಳೆಯ ತುದಿಯನ್ನು ಜಗ್ಗಿಸುವ ಚಳಿಯಿತ್ತು. ರಸ್ತೆರಸ್ತೆಯಲ್ಲೂ ಭಿಕ್ಷುಕರು ಮತ್ತು ಗಲೀಜು ಇದ್ದವು. ಬೋರಿಸ್ ಬೆಕರ್ ಜೈಲು ಸೇರಿದ್ದ.  ಆಸ್ಕರ್ ವೈಲ್ಡ್ ಹೇಳುತ್ತಾನೆ “ಒಂದು ಹೆಣ್ಣಿನ ಸೌಂದರ್ಯದ ಆಳ  ಅಗಲ ಒಂದು ಗಂಡಿನ ಕಲ್ಪನೆಯಷ್ಟು” ಇದು ಊರಿಗೂ ಅನ್ವಯ ಆಗುವಷ್ಟು ಕಾಲ ಪರಿಭ್ರಮಿಸಿಬಿಟ್ಟಿದೆ. ಇರಲಾರೆ ನಾನು ಅಲ್ಲಿ. ನೆನಪಿನ ಚಂದಾದಾರಿಕೆ ಕೊಂಡಿದ್ದೇನೆ ಮೈಸೂರಿನಲ್ಲಿ.

            ಸಾಮಾಜಿಕ ಜಾಲತಾಣದಲ್ಲಿ ಒಬ್ಬರು ಕರ್ನಾಟಕದ ಮತ್ತೊಂದು ಭಾಗದವರು, ಬೆಂಗಳೂರಿನಲ್ಲಿ ಇರುವವರು “ಇದೆಂಥಾ ದರಿದ್ರದ ಊರು ಯಾರಿಗೂ ಬೇಲದ ಹಣ್ಣು ಎಂದರೇನು ಅಂದರೆ ತಿಳಿದಿಲ್ಲ “ ಎಂದು ಗೊಣಗಿ ಅದರ ಚಿತ್ರ ಹಾಕಿದ್ದರು. ಅದೆಲ್ಲಿತ್ತೋ ಕೋಪ ನೋಡಿ ಬೀದಿಬೀದಿಯಲ್ಲಿ ಬಿದ್ದಲೆಯುತ್ತಿದ್ದ ಬೇಲದ ಬಗ್ಗೆ ಫೋಟೋ ಸಮೇತ ಝಾಡಿಸಿಬಿಟ್ಟಿದ್ದೆ. ಎಲ್ಲೆಂಲ್ಲಿಂದಲೋ ಅಲ್ಲಿಗೆ ಇಲ್ಲಿಗೆ ಕೆಲಸವರಸಿ ಬಂದವರಿಗೆ ಜೋಳದ ರೊಟ್ಟಿ ಸರಿಹೋಗಲ್ಲ, ರಾಗಿ ಮುದ್ದೆ ಸಿಗಲ್ಲ, ಅನ್ನ ಒಪ್ಪಲ್ಲ ಹೀಗೆಲ್ಲಾ ಹತ್ತಾರು ದೂರುಗಳಿರುತ್ತವೆ. ಆದರೆ ಅಪಾರ್ಟ್ಮೆಂಟ್  ಖರೀದಿಸಲು ಬೆಂಗಳೂರು ಆಗಬೇಕು, ಸೈಟ್ ಎಂದರೆ ಮೈಸೂರು ಬೇಕೇ ಬೇಕು. ನಮ್ಮ ಮನೆಯ ಬಾಜೂ ಮನೆಯಲ್ಲಿ ನಡುವಯಸ್ಸಿನ ದಂಪತಿಗಳು ಮನೆಕೊಂಡಿದ್ದಾರೆ. ಅವರು ಬೇಂದ್ರೆ ಅಜ್ಜನ ಒಡನಾಟದಲ್ಲಿ ಮಿಂದೆದ್ದವರು. ಅಳಿಯ ಮಗಳು ಆಸ್ಟ್ರೇಲಿಯಾದಲ್ಲಿ ಇದ್ದಾರೆ. ಆಸ್ತಿಗಾಗಿ ಮೈಸೂರಿನಲ್ಲಿ ಮನೆ ಕೊಂಡಿದ್ದಾರೆ. ಅದಕ್ಕೇ ಮನೆ ಪಾಳು ಬೀಳದಿರಲಿ ಎಂದು ಈ ಗಂಡ ಹೆಂಡತಿ ತಿಂಗಳಿಗೆರಡು ಬಾರಿ ಬಂದು ಹೋಗುತ್ತಾರೆ ಮೈಸೂರಿಗೆ. ಈ ತ್ರಿಕೋನದ ಒಂದು ಕೋನ ಮೈಸೂರು. ವಾಸಕ್ಕೆ ಬೇಡ ಆಸ್ತಿಗೆ ಒದಗಬೇಕು ಅಷ್ಟೇ ನೆಲದ ಮಿತಿ.

            ಸ್ನೇಹಿತೆ ಮಣಿ ಮದುವೆ ಬೇಡ ಎಂದಳು. ಹುಣಸೂರಿನಲ್ಲಿ ಅಪ್ಪ ಅಮ್ಮನ ಮಡಿಲಲ್ಲೇ ವಯಸ್ಸು ಏರಿಸಿಕೊಂಡಿದ್ದಳು. ಅವರು ತೀರಿಕೊಂಡರು, ಇವಳು ಆ ಮನೆ ಮಾರಿ ಮೈಸೂರಿಗೆ ಬಂದಳು. ನಾಲ್ಕು ವರ್ಷ ಕಳೆದ ಮೇಲೆ, ಕೃಷಿ ಮಾಡುತ್ತೇನೆ ಎಂದಳು. ಮೈಸೂರನ್ನೇ ಸರಿಬರುತ್ತಿಲ್ಲ ಎಂದವಳು ತಮಿಳುನಾಡಿನಲ್ಲಿ ಹೂವು ಬೆಳೆಯಲು ಭೂಮಿಕೊಂಡು ಹೋಗಿ ಬಿಟ್ಟಳು. ಅಯೋದ್ಯೆಯನ್ನುಳಿದು ಅನ್ಯ ದೇವರ ಕಾಣೆ ಎನ್ನಲು ಅವಳೇನು ಜಾನಕಿಯೇ ಎಂದುಕೊಳ್ಳುತ್ತಾ ನಾನು ಅಲ್ಲಿ ಬೆಳೆದ ಕನಕಾಂಬರವನ್ನು ಸಂಕ್ರಾಂತಿಯಲ್ಲಿ ಮುಡಿಯುತ್ತೇನೆ. ಕಳೆದುಹೋದವರ ವಿಳಾಸಕ್ಕೆ ದಾರಿ ಯಾವುದು ಎಂದು ಹುಡುಕುತ್ತಿರುವಾಗಲೇ ಈಗಿನ ಹೊಸ ಟ್ರೆಂಡ್ ಹಾದು ಹೋಗುತ್ತದೆ ಕಣ್ಣಮುಂದೆ. ಆದೇಶ ಮತ್ತು ನವ್ಯ ಊರೂರು ಸುತ್ತಿ ಚೆನ್ನಾಗಿ ದುಡ್ಡು ಮಾಡಿಕೊಂಡು ಆರಾಮವಾಗಿ ಸ್ವಯಂ ನಿವೃತ್ತಿ ತೆಗೆದುಕೊಂಡಿರುವ ಪರಿಚಯದವರು. ಅವ ಯಾವೂರಿನವನು, ಇವಳು ಎಲ್ಲಿಂದ ಬಂದಳು ಎಂದು ಒಬ್ಬರಿಗೂ ಗೊತ್ತಿಲ್ಲ ಆದರೂ ಇವರು ಸ್ನೇಹಿತರು ಎಲ್ಲರಿಗೂ. ಇತ್ತೀಚೆಗೆ ಅವರಿಗೆ ಮೈಸೂರಿನಲ್ಲಿ ಒಬ್ಬ ಸೋದರತ್ತೆ ಹುಟ್ಟಿಕೊಂಡಿದ್ದಾರೆ. ವಾರವಾರಕ್ಕೂ ಅವರ ಮನೆಗೆ ಭೇಟಿ ಇವರಿಬ್ಬರದು. ಬೆಟ್ಟದ ಮೆಟ್ಟಿಲು ಹತ್ತಿದ್ದಾರೆ,. ಮೃಗಾಲಯದಲ್ಲಿ ಕಡ್ಲೇ ಕಾಯಿ ತಿಂದು, ಉತ್ನಳ್ಳಿ ಜ್ವಾಲಮುಖಿಯ ಪ್ರದಕ್ಷಿಣೆ ಹಾಕಿದ್ದಾರೆ. ಕರ್ನಾಟಕ ಸ್ಯಾರೀಸ್‍ನಲ್ಲಿ ಸೀರೆ ಕೊಂಡಿದ್ದಾರೆ. ಮೈಸೂರು ಅರಮನೆ ನೋಡಿ ದಂಗಾಗಿ ಹೋದವರು ಈಗ ಊರೆಲ್ಲಾ ಹೇಳಿಕೊಳ್ಳುತ್ತಿದ್ದಾರೆ “ನಾವು ನಮ್ಮ ಸೋದರತ್ತೆ ಊರಿನಲ್ಲೇ ಸೆಟಲ್ ಆಗುವುದು” ಎಂದು. “ಚಾಮುಂಡಿ ಬೆಟ್ಟ ಇದೆ, ಕನ್ನಂಬಾಡಿ ಕಟ್ಟೆ ಇದೆ . . .ಈ ಭಯ ಬಿಸ್ಹಾಕಿ. . . ಲವ್ ಮಾಡಿ ಲವ್ ಮಾಡಿ ಲವ್ ಮಾಡಿ” ಎನ್ನುವ ಹಾಡನ್ನು ನಿತ್ಯವೂ ಕೇಳಿ ಈ ನಿರ್ಧಾರಕ್ಕೆ ಬಂದಿದ್ದಾರೇನೋ ಆದೇಶ್ ಮತ್ತು ನವ್ಯ.    ಚೇತನಕ್ಕೆ ಮನೆ ಬೇಡ ನಿಜ, ಆದರೆ ಅದನ್ನು ಕಾಪಿಡುವ ದೇಹಕ್ಕೆ ನಾಲ್ಕು ಗೋಡೆಯೇ ಶ್ರೀರಕ್ಷೆ ತಾನೇ ಹಾಗಂತ ಜಲ,ಗಾಳಿ, ಬೆಳಕುಗಳೊಡನೆ ನಮ್ಮ  ಸಂಬಂಧ ಏರ್ಪಡದೆ ಊರು ನಮ್ಮದಾಗುವುದಾದರೂ ಹೇಗೆ ?

            ನನಗೆ ಆ ಊರು ಬಲು ಇಷ್ಟವಾಗಿದೆ ನಿಜ, ಆದರೆ ಆ ಊರಿಗೂ ನಾನು ಬೇಕಿರಬೇಕು ಅಲ್ಲ್ವಾ? ಬಹುಶಃ ಇದನ್ನೇ ಪ್ರಾಜ್ಞರು ಮಣ್ಣಿನ ಋಣ ಅಂತಾರೇನೋ.  ಜಗತ್ತಿಗೆ ಹೇಳುವ ಅರ್ಹತೆ ಪಡೆದುಕೊಂಡಿದ್ದೇ ಆದರೆ ಆಗ ಹೇಳಬಯಸುತ್ತೇನೆ “ಮೊದಲ ಪ್ರೇಮಿಯಂತೆ ನಿಮ್ಮ ಕನಸಿಗೆ ಅಪ್ಪಣೆ ಇಲ್ಲದೆ ಪ್ರವೇಶಿಸಿ, ಹೊರಳಿ ಹೊರಳಿ ಕಾಡಬೇಕು ಆ ಊರು.  ಅಲ್ಲಿನ ತಂಗಾಳಿ ನಿಮ್ಮ ಮೈ ವಸ್ತ್ರವಾಗದೇ ಹೋದರೆ, ಆ ಊರಲ್ಲಿ ಎಂದೋ ಕಂಡ ನಕ್ಷತ್ರ ನಿಮ್ಮ ಕಣ್ಣಲ್ಲಿ ಸಿಕ್ಕಿ ಹಾಕಿಕೊಳ್ಳದಿದ್ದರೆ, ಇದೇ ನಿಮ್ಮ ಕೊನೆಯ ನಿಲ್ದಾಣ ಎಂದು ನಿರ್ಧರಿಸದೆ, ಅಲ್ಲಿದೆ ನಮ್ಮ ಮನೆ ಇಲ್ಲಿ ಬಂದೆ ಸುಮ್ಮನೆ ಎಂದು ಹಾಡಾಗುತ್ತಾ ಪಯಣಿಸುತ್ತಿರಿ”

 



Comments

  1. A very good memoir... Telling

    ReplyDelete
  2. This comment has been removed by the author.

    ReplyDelete
  3. ಮನದ ತಲ್ಲಣಗಳ ಆಪ್ತನುಡಿರೂಪ...

    ReplyDelete
  4. The way you narrate is mind blowing.

    ReplyDelete

Post a Comment

Popular posts from this blog

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್