Gandhi in Gadag

 




ಇಳಿದುಕೊಂಡಿದ್ದ ಅತಿಥಿಗೃಹದಿಂದ ಕಾರ್ಯಕ್ರಮ ನಡೆಯುತ್ತಿದ್ದ ಸಭಾಂಗಣಕ್ಕೆ ಹತ್ತಿರ ಹತ್ತಿರ ಒಂದೂವರೆ  ಕಿಲೋಮೀಟರ್ಗಳ ದೂರ. ಸುತ್ತಲೂ ಕೆಮ್ಮಣ್ಣಿನ ಒಣ ಬಯಲು, ನೆತ್ತಿಯ ಬೈತಲೆಯಂತೆ ಕಡೆದಿದ್ದ ಮಣ್ಣಿನ ಡೊಂಕು ಸಪೂಟು ರಸ್ತೆ.  ಹೆಜ್ಜೆಗಳು ನೀರೆತ್ತುವ ಏತದಂತೆ ಏರಬೇಕಿತ್ತು ಅಷ್ಟೇ. ಬೆಂಗಳೂರಿನಲ್ಲಿ ಆಗತಾನೆ ಹುಟ್ಟುತ್ತಿದ್ದ ಸೂರ್ಯ ಅಲ್ಲಾಗಲೇ ಶಾಖವಾಗಿಬಿಟ್ಟಿದ್ದ. ಸೆರಗ ಹೊದ್ದು ಸರಸರನೆ ನಡೆವಾಗ ಸಭಾಂಗಣಕ್ಕೆ ಇಪ್ಪತ್ತು ಹೆಜ್ಜೆ ಮೊದಲೇ ಕಂಡ ಬೋರ್ಡಿನಲ್ಲಿತ್ತು ’ಸಾಬರಮತಿ ಆಶ್ರಮ’. ಹೆತ್ತೂರಿಂದ ವಿದೇಶದವರೆಗೂ ಕಂಡಿದ್ದ ಪುಣ್ಯಾತ್ಮ ಇಲ್ಲೂ ಕಂಡಿದ್ದ. ಆಸಕ್ತಿ ಬಿಸಿಲಿನಂತೆಯೇ ಏರುತ್ತಿತ್ತು. ಕಾರ್ಯಕ್ರಮದ ಸಮಯ ಬಂದಿತ್ತು. ಹಿಂದಿರುಗುವ ಮೊದಲು ಇಲ್ಲಿನ ಗಾಂಧಿಯ ಭೇಟಿ ಆಗಲೇ ಬೇಕು ಎಂದುಕೊಂಡು ಮುಂದೆ ಹೋದೆ.

         ಆ ದಿನ ಮಕ್ಕಳ ಹಕ್ಕುಗಳ ಗ್ರಾಮಸಭೆ, ಪರಿಣಾಮಕಾರಿ ಆಯೋಜನೆ ಮತ್ತು ಜಾರಿ ಕುರಿತು ಕರ್ನಾಟಕ  ರಾಜ್ಯ ಮಟ್ಟದ ಸಮ್ಮೇಳನವನ್ನು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ ಇವರು ಆಯೋಜಿಸಿದ್ದರು. ಉಪಸ್ಥಿತಿಗಾಗಿ ಹೋಗಿದ್ದೆ. ಮಾತುಕತೆಗಳಲ್ಲಿ ಕುಲಪತಿ ಪ್ರೊ.ವಿಷ್ಣುಕಾಂತ್ ಎಸ್ ಚಟಪಲ್ಲಿ ಅವರು “ಬೆಳಗಿನ ಭಜನೆಗೆ ನೀವು ಬರುತ್ತೀರ ಎಂದುಕೊಂಡಿದ್ದೆ” ಎಂದಾಗ ಅಲ್ಲಿನ ಸಾಬರಮತಿಯ ಬಗೆಗಿನ ಕುತೂಹಲ ಮತ್ತಷ್ಟು ಹೆಚ್ಚಿತ್ತು. ವಿಷ್ಣುಕಾಂತ್ ಅವರು “ಮಹಾತ್ಮ ಗಾಂಧಿಯವರು ನಮ್ಮಲ್ಲಿಗೆ ಬಂದು ನೂರು ವರ್ಷಗಳ ನೆನಪಿನಲ್ಲಿ ನಾವು ಸಾಬರಮತಿ ಆಶ್ರಮ ಕಟ್ಟಿದ್ದೇವೆ. ನಿತ್ಯವೂ ಎರಡು ಹೊತ್ತೂ ಭಜನೆ ನಡೆಯುತ್ತದೆ. ಸಾಯಂಕಾಲದ ಆರತಿಗೆ ಬನ್ನಿ” ಎಂದಿದ್ದರು.

         11 ನವೆಂಬರ್ 1920ರಂದು ಮಹಾತ್ಮ ಗಾಂಧಿಯವರು ಗದಗ ಜಿಲ್ಲೆಗೆ ಭೇಟಿ ಇತ್ತು ಭಾಷಣ ಮಾಡಿದ್ದರು. ಅದರ ಕುರುಹಾಗಿ 2020ರಲ್ಲಿ ತಮ್ಮ ವಿಶ್ವವಿದ್ಯಾಲಯದ ಆವರಣದಲ್ಲಿ ಆಶ್ರಮ ನಿರ್ಮಿಸಲಾಗಿದೆ ಎನ್ನುವ ಮಾಹಿತಿ ನೀಡಿ  ಹೆಚ್ಚಿನ ಮಾಹಿತಿಯುಳ್ಳ ’ಗದಗ ಜಿಲ್ಲೆಯಲ್ಲಿ ಗಾಂಧಿಜಿ’ ಶೀರ್ಷಿಕೆಯ ಕಿರುಹೊತ್ತಿಗೆಯನ್ನು ಕೈಗಿತ್ತರು ಅಲ್ಲಿಯೇ ಸಮಾಜಕಾರ್ಯ ವಿಭಾಗದಲ್ಲಿ ಉಪನ್ಯಾಸಕರು ಆಗಿರುವ ಡಾ.ಲಿಂಗರಾಜ ನಿಡುವಣಿ.

ಗಾಂಧೀಜಿ ಗದಗ ಜಿಲ್ಲೆಯ ಜಕ್ಕಲಿ ಗ್ರಾಮಕ್ಕೆ ಗಾಂಧಿ ಬಂದಾಗ ಸಂಜೆಯಾಗಿತ್ತು. ಎಲ್ಲೆಂಲಿಂದಲೋ ಎತ್ತಿನ ಗಾಡಿ ಕಟ್ಟಿಕೊಂಡು ಬಂದಿದ್ದ 25 ಸಾವಿರಕ್ಕೂ ಹೆಚ್ಚಿನ ಜನ ಗಾಂಧಿಯನ್ನು ನೋಡಲು ಮಾತ್ರ ತವಕಿಸುತ್ತಿದ್ದರಂತೆ. ಅಲ್ಲಿ ಹೀಗೆ ಸೇರುವ ಜನಸಂಖ್ಯೆ ಅಗಾಧತೆಯನ್ನು ಊಹಿಸಿಯೇ ಕುಡಿಯುವ ನೀರಿನ ವರ್ತಿಗಳನ್ನು ತೋಡಲಾಗಿತ್ತಂತೆ. ಹಳ್ಳೀಗಳನೆಲ್ಲಾ ಹಬ್ಬಕ್ಕಿರುವಂತೆ ಸಿಂಗರಿಸಿದ್ದರಂತೆ. 1915ರ ಮೇ ತಿಂಗಳ 8ನೆಯ ದಿನಾಂಕಂದಂದು ಕರ್ನಾಟಕ ರಾಜ್ಯಕ್ಕೆ ಗಾಂಧಿಜಿಯ ಮೊದಲ ಭೇಟಿ. ಅಲ್ಲಿಂದ 1937ರವರೆಗೆ ಒಟ್ಟು 18 ಬಾರಿ ಇಲ್ಲಿಗೆ ಬಂದಿದ್ದರಂತೆ.

ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ “ಗ್ರಾಮೀಣ ಬೇರು; ಜಾಗತಿಕ ಮೇರು” ಎಂಬ ಧ್ಯೇಯ ವಾಕ್ಯದೊಂದಿಗೆ ತನ್ನ ಶೈಕ್ಷಣಿಕ, ಸಂಶೇಧನೆ, ತರಬೇತಿ ಹಾಗೂ ವಿಸ್ತರಣಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ ಗದಗಿನ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ. ಗದಗಿಗೆ ಗಾಂಧಿಯ ಭೇಟಿಯನ್ನು ಅವಿಸ್ಮರಣೀಯ ಮಾಡುವ ಉದ್ದೇಶದಿಂದ ಅಹಮದಬಾದಿನಲ್ಲಿ ಇರುವ ಸಾಬರಮತಿ ಆಶ್ರಮದ ಮಾದರಿಯಲ್ಲಿಯೇ ಇಲ್ಲಿನ ವಿಶ್ವವಿದ್ಯಾಲಯದ ಆವರಣದಲ್ಲೂ ಸಾಬರಮತಿ ಆಶ್ರಮವನ್ನು ಕಟ್ಟಲಾಗಿದೆ. ಇದರ ಮುಖ್ಯ ಉದ್ದೇಶ ರಾಜ್ಯದ ಜನರಿಗೆ ಗ್ರಾಮೀಣಾಭಿವೃದ್ಧಿಯಲ್ಲಿ ಆಸಕ್ತಿ ಹುಟ್ಟಿಸುವುದು ಮತ್ತು ತೊಡಗಿಕೊಳ್ಳುವಂತೆ ಪ್ರೇರೇಪಿಸುವುದು. ಈ ನಿಟ್ಟಿನಲ್ಲಿ ಹದಿನೆಂಟು ರಚನಾತ್ಮಕ ಯೋಜನೆಗಳನ್ನು ಹಾಕಿಕೊಂಡು ಕಾರ್ಯೋನ್ಮುಖವಾಗಿದೆ ವಿಶ್ವವಿದ್ಯಾಲಯ. ಈ ವಿಷಯಗಳನೆಲ್ಲಾ ಆ ಪುಸ್ತಕದಲ್ಲಿ ಓದಿಕೊಂಡು ಆಶ್ರಮದ ಬಾಗಿಲಲ್ಲಿ ನಿಂತಿದ್ದೆ.

       ಆಶ್ರಮದ ಮುಖ್ಯದ್ವಾರದೊಳಗಿನಿಂದ ಕಾಣುತ್ತಿತ್ತು ಅಸೀಮ ಆಕಾಶ ಮತ್ತು ಚುಕ್ಕಿಯಲ್ಲಿ ಕರಗಿಹೋಗುತ್ತಿದ್ದ ಸೂರ್ಯ.  ಬಲಭಾಗದಲ್ಲಿ  ಧ್ಯಾನಸ್ಥನಾಗಿ ಇರುವ ಗಾಂಧಿಯ ದೊಡ್ಡ ಪ್ರತಿಮೆ, ಎಡಕ್ಕೆ ವಸ್ತು ಸಂಗ್ರಹಾಲಯ, ಬಾಗಿಲವಾಡದೊಳಗೆ ಹೆಜ್ಜೆ ಇಟ್ಟರೆ ಒಂದು ಬದಿ ಗ್ರಂಥಾಲಯ ಮತ್ತೊಂದು ತುದಿಯಲ್ಲಿ ಅಡುಗೆ ಕೋಣೆ. ಬಾಕಿಯಂತೆ ವಿಸ್ತಾರವಾಗಿ ಆವರಿಸಿಕೊಂಡಿದ್ದ ಬಯಲು, ಮೌನ, ಬೆಳಕು. ಎಲ್ಲವೂ ಒಬ್ಬ ವ್ಯಕ್ತಿ ಸಾಮಾನ್ಯತೆಯಲ್ಲೇ ತನ್ನನ್ನು ಕಂಡುಕೊಳ್ಳುತ್ತಾ, ಅದರಲ್ಲೇ ತೆರೆದುಕೊಳ್ಳುತ್ತಾ , ಅಸಾಮಾನ್ಯದಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾ, ಉದಾತ್ತತೆಯಲ್ಲಿ ತನ್ನನ್ನು ಆವಿಷ್ಕರಿಸಿಕೊಂಡ ಒಂದು ಪಯಣವೇ  ಗಾಂಧಿ” ಎನ್ನುವ ಒಳಗಿನ ನಂಬಿಕೆಯನ್ನು ಭದ್ರಗೊಳಿಸುವಂತಿವೆ. ’ಗಾಂಧೀಜಿ ಜಗತ್ತಿಗೆ ಅನಿವಾರ್ಯ’ ಎನ್ನುವ ಮಾರ್ಟಿನ್ ಲೂಥರ್ ಕಿಂಗ್‍ನ ಮಾತನ್ನು ಮೆಲುಕು ಹಾಕುತ್ತಾ ಒಮ್ಮೆ ಇಲ್ಲಿನ ಸಾಬರಮತಿ ಆಶ್ರಮಕ್ಕೆ ಹೋಗಿ ಬರಬೇಕು, ಗಾಂಧಿ ಮತ್ತೊಮ್ಮೆ, ಮಗದೊಮ್ಮೆ ಎನ್ನುತ್ತಾ ಜಗತ್ತನ್ನು ಆವಾಹಿಸಿಕೊಳ್ಳುತ್ತಿರಲು.














******************************

 

Comments

  1. ಅದ್ಭುತವಾಗಿದೆ .. ಆ ಮಹಾನ್ ವ್ಯಕ್ತಿಯ ಜೀವನವೇ ಒಂದು ಸಂದೇಶ ಅದರ ಜೊತೆಗೆ ಮಹಾ ಸಂದೇಶ ಕಾರಣ ಈ ನೆಲಕ್ಕೆ ಬಂದು ಹೋಗಿದಾನೆಂದರೆ ಈ ನೆಲದವರು ನಾವೆಲ್ಲರೂ ಪುಣ್ಯವಂತರು ಎಂದು ಹೇಳಿ ಪಾಲಿಸಬೇಕು ಅವನ ದೇಹದೊಂದಿಗೆ ಈ ನಾಡು ಅಭಿವೃದ್ಧಿಯಾಗಲಿ... ಸಹೋದರಿಗೆ ಸಮಸ್ತ ಗದಗ್ ಜಿಲ್ಲೆಯ ಜನತೆಯ ಪರವಾಗಿ ಅಭಿನಂದನೆಗಳು

    ReplyDelete
  2. ನನಗೆ ಈ ಆಶ್ರಮ ನೋಡಬೇಕೆಂದಾಗಿದೆ. ಒಳ್ಳೆಯ ಮಾಹಿತಿ. ಕಾವ್ಯಾತ್ಮಕ ಶೈಲಿಯಲ್ಲಿ ಬರೆದಿದ್ದಾರೆ ಅಂಜಲಿ ರಾಮಣ್ಣ. ಅಭಿನಂದನೆಗಳು

    ReplyDelete
  3. Very nice!. Did not know that this ashram was there in Gadag too!. Beautiful pictures. Felt connected to the simplicity of the great man through the article.

    ReplyDelete

Post a Comment

Popular posts from this blog

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್