Reaction on state budget 2023

 




           ಬಜೆಟ್ ಎಂದರೆ ಹಾಗೆ, ಬಾಯಿ ಹೊಲೆದು ಮೂಗಿಗೆ ತುಪ್ಪ ಸವರೋದು, ಕೈಬೆರಳುಗಳ ತುದಿಗೆ  ಚಾಕಲೇಟನ್ನೂ ಮೆತ್ತುವುದು. ಆದರಲ್ಲೂ ಚುನಾವಣೆ ಎನ್ನುವ ನರಸಿಂಹ ಹೊಸಲಿನ ನಡುವಲ್ಲಿ ಕುಳಿತಿರುವಾಗ ಮಂಡಿತವಾಗುವ  ಬಜೆಟ್ ಕಶ್ಯಪ ಬ್ರಹ್ಮನ ಸುಕುಮಾರನೇ ಸರಿ.

   ಎಂದಿನಂತೆ, ಈ ವರ್ಷದ ರಾಜ್ಯ ಆಯವ್ಯಯದಲ್ಲೂ ಹೊಸಹೊಸ ಘೋಷಣೆಗಳಾಗಿವೆ. ಅದು ಎಷ್ಟರ ಮಟ್ಟಿಗೆ ಅನುಮೋದನೆ ಪಡೆದು ಸಮಯಕ್ಕೆ ಸರಿಯಾಗಿ ಜಾರಿಗೆ ಬರಲಿದೆ ಎನ್ನುವುದು ಉತ್ತರವಿಲ್ಲದ ಪ್ರಶ್ನೆ. ಮೊನ್ನೆ ಸಿದ್ದರಾಮಯ್ಯನವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 10 ಕೆಜಿ ಉಚಿತ ಅಕ್ಕಿ ಎಂದ ಧ್ವನಿ ಮುಗಿಯುವ ಮೊದಲೇ ಮುಖ್ಯಮಂತ್ರಿಗಳು 6 ಕೆಜಿ ಕೊಡಲು ಮುಂದಾಗಿದ್ದಾರೆ. ಆದರೆ ಕೊನೆ ಮನೆಯ ಒಲೆಯ ಮೇಲೆ ಅಕ್ಕಿ ನೆಮ್ಮದಿಯ ಕುದಿಯಾಗುವವರೆಗೂ ಇದು ರಾಜಕೀಯವಾಗಿ ಬೇಯುವ ಬೇಳೆಯೇ ಹೊರತು ನಿಜಾರ್ಥದ ಸಾಮಾಜಿಕ ನ್ಯಾಯ ಅಲ್ಲ.

ಆಸ್ಪತ್ರೆಯಲ್ಲಿ ಮಗು ಹೆತ್ತು ತಮ್ಮತಮ್ಮ ಮನೆಗೆ ಹೋಗಲು ನಲುಗುವ ಬಾಣಂತಿ ಮಗುವಿಗೆ ’ನಗು ಮಗು ವಾಹನ’ ಎನ್ನುವ ಯೋಜನೆ ಅತ್ಯಾವಶ್ಯಕವಾದದ್ದು. ಇದಿಲ್ಲದೆ ಕರೋನಾ ಸಮಯದಲ್ಲಿ ಒದ್ದಾಡಿದ ಜನರನ್ನು ಮರೆಯಲು ಸಾಧ್ಯವೇ ಇಲ್ಲ. ~ಆಸಿಡ್ ಧಾಳಿಯಿಂದ ನೊಂದವರಿಗೆ 3 ಸಾವಿರ ಮಾಸಾಶನವನ್ನು 10 ಸಾವಿರಕ್ಕೆ ಏರಿಸಿರುವುದು ಸ್ವಾಗತಾರ್ಹ ಆದರೆ ಅವರುಗಳ ಶಸ್ತ್ರಚಿಕಿತ್ಸೆಗೆ ನೀಡುತ್ತಿರುವ ಹಣವನ್ನು ಪೂರ್ತೀ ಸರ್ಕಾರ ವಹಿಸಿಕೊಂಡಿದ್ದಿದ್ದರೆ ಈ ಏರಿಕೆಗೆ ಪರಿಹಾರ ಎನ್ನಬಹುದಿತ್ತು.

ಬಿಪಿಎಲ್ ಕುಟುಂಬದ ಹೆಣ್ಣು ಮಗುವಿಗೆ ತಿಂಗಳಿಗೆ 500 ರೂ, ಗೃಹಶಕ್ತಿ ಯೋಜನೆಯಲ್ಲಿ ಮಹಿಳೆಗೆ 2 ಸಾವಿರ ನೀಡಿಕೆ, ಭೂರಹಿತ  ಮಹಿಳಾ ಕೃಷಿಕಾರ್ಮಿಕರಿಗೆ ತಿಂಗಳಿಗೆ 500 ರೂ, ಅಸಂಘಟಿತ ಕಾರ್ಯವಲಯದ ಮಹಿಳಾ ಕೆಲಸಗಾರರಿಗೆ ತಿಂಗಳಿಗೆ 500 ರೂ,  ವಿವಾಹಿತ ಮಹಿಳೆಗೆ ’ಆರೋಗ್ಯ ಪುಷ್ಠಿ’ಯೋಜನೆ, ಗ್ರಾಮೀಣ ಭಾಗದ 6 ವರ್ಷಗಳೊಳಗಿನ ಮಕ್ಕಳಿಗೆ ವಾರ್ಷಿಕ 2 ಬಾರಿ ವೈದ್ಯಕೀಯ ತಪಾಸಣೆ, ಮಹಿಳೆಯರಲ್ಲಿನ ರಕ್ತ ಹೀನತೆ, ಅಪೌಷ್ಠಿಕತೆ ನಿವಾರಣೆಗಾಗಿ 100 ಕೋಟಿ ಮೀಸಲು ಇವುಗಳು ಕೇಳಲು ಹಿತವೆನಿಸಿದರೂ ಜಾರಿಗೆ ಬರುವುದರ ಬಗ್ಗೆ ಚುನಾವಣೆಯ ಫಲಿತಾಂಶ ನಿರ್ಧರಿಸಲಿದೆ.

   ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಲಿರುವ ಯುವಕರಿಗೆ 2 ಸಾವಿರ ರೂ ಮಾಸಾಶನ ಎಂದಿದ್ದಾರೆ. ಶಿಕ್ಷಕರ ಗುಣಮಟ್ಟಕ್ಕೆ ಒತ್ತು ಕೊಡದೆ ಶಿಕ್ಷಣ ಕ್ಷೇತ್ರಕ್ಕೆ ಕೋಟಿಕೋಟಿ ಮೀಸಲಿಟ್ಟರೇನು ಪ್ರಯೋಜನ. ನಿರುದ್ಯೋಗಿ ಯುವಕರಿಗೆ ಬೆಂ’ಬಲ’ ಯೋಜನೆ ಒಪ್ಪಿತವಾದದ್ದೇ ಆದರೆ ಅದರ ಕಾಲಾವಧಿಯನ್ನು ನಿರ್ಣಯಿಸದಿದ್ದರೆ ಯುವಶಕ್ತಿಯಲ್ಲಿ ಹುಮ್ಮಸ್ಸು ಉಳಿಯದು. 150 ಕೋಟಿಯಲ್ಲಿ ರಾಜ್ಯದಾದ್ಯಂತ ಜಿಮ್ ಆರಂಭ ಮಾಡುತ್ತೇವೆ ಎಂದವರು 27 ರಿಂದ 45 ವರ್ಷಗಳ ವಯಸ್ಸಿನಲ್ಲಿ ನಿಂತಲ್ಲೇ ಕುಳಿತಲ್ಲೇ ಹೃದಯಾಘಾತದಿಂದ ಸಾಯುತ್ತಿರುವವರ ಸಂಖ್ಯೆ ಹೆಚ್ಚಿದೆಯಲ್ಲ ಅದರ ಬಗ್ಗೆ ಸಂಶೋಧನೆಗೆ ಹಣ ಮೀಸಲಿಟ್ಟಿದ್ದರೆ ’ಮನೆಮನೆಗೆ ಆರೋಗ್ಯ’ ಎನ್ನುವ ಯೋಜನೆ ಅರ್ಥಗರ್ಭಿತವಾಗಿರುತ್ತಿತ್ತು.

       ಸರ್ಕಾರೀ ಪದವಿಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ ಓದುವ ಗ್ರಾಮೀಣ ಯುವ ವಿದ್ಯಾರ್ಥಿಗಳಿಗೆ ಶುಲ್ಕವಿರುವುದಿಲ್ಲ ಮತ್ತು ’ಗ್ರಾಮೀಣ ಮುತ್ತು’ ಯೋಜನೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಚೆನ್ನಾಗಿ ಓದುವ ಗ್ರಾಮೀಣ ವಿದ್ಯಾರ್ಥಿಗಳ ಸಂಪೂರ್ಣ ವಿದ್ಯಾಭ್ಯಾಸದ ಖರ್ಚು ಸರ್ಕಾರದ್ದಂತೆ. ಯುವಮಹಿಳಾ ಉದ್ಯಮಿಯರಿಗೆ ಬಡ್ಡಿರಹಿತ 5 ಕೋಟಿ ಗರಿಷ್ಠ ಸಾಲ ಯೋಜನೆಯೂ ಆತ್ಮನಿರ್ಭರ ಭಾರತದೆಡೆಗೆ ಕೊಂಡೊಯ್ಯುವ ಆಶಯ  ಹೊಂದಿದೆ. ಈ ಬಜೆಟ್ ನಿಜಕ್ಕೂ ’ಸಂವಿಧನಾತ್ಮಕ ಪ್ರೋಟೊಕಾಲ್’ ಆಗಿದೆಯೇ ಹೊರತು, ಜಾರಿಗೆ ಬರುವವರೆಗೂ ಯಾರ ಹಿಡಿತದಲ್ಲೂ ಇರದ ಘೋಷಣೆಯಾಗಿದೆ.

ಅಂದಹಾಗೆ, ಬೆಂಗಳೂರಿನ ಜನನಿಬಿಢ ಪ್ರದೇಶಗಳಲ್ಲಿ 50 ಕೋಟಿಯಲ್ಲಿ 250 SHE ಟಾಯ್ಲೆಟ್ ನಿರ್ಮಿಸುತ್ತಾರಂತೆ. HE ಗೆ ಏನು ಎಂದರೆ ಇದೆಯಲ್ಲ ಬೀದಿ ಬದಿ ಎನ್ನಬೇಕೇ?!

 

 


Comments

  1. ಚಂದದ ವಿಶ್ಲೇಷಣೆ ಮ್ಯಾಡಮ್

    ReplyDelete
  2. ಅರ್ಥಪೂರ್ಣವಾದ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ತಮಗೆ ಅಭಿನಂದನೆಗಳು ಮೇಡಂ.

    ReplyDelete
  3. ಸರಿಯಾದ ವಿಶ್ಲೇಷಣೆ.

    ReplyDelete
  4. ರಾಜಕೀಯ ನಾಟಕ

    ReplyDelete
  5. ಕರ್ನಾಟಕರಾಜ್ಯದ ಬಜೆಟ್ ನೈಜವಾಗಿ ವಿಶ್ಲೇಷಣೆ ಮಾಡಿದ್ದಿರಿ ಮೆಡಮ್ ನಿಮಗೆ ಅಭಿನಂದನೆಗಳು. ಸಾರ್ವಜನಿಕರಿಗೆ ಸರಳವಾಗಿ, ಸುಗಮವಾಗಿ ತಿಳಿಯುವಂತೆ ಹೇಳಿದ್ದಿರಿ. ಬಹಳಷ್ಟು ಜನರು ಬಜೆಟ್ ಅರ್ಥಮಾಡಿಕೊಳ್ಳಲು ಇಷ್ಟ ಪಡುವುದಿಲ್ಲ.ಕಾರಣ ಕಬ್ಬಿಣದ ಕಡಲೆ ಅಂತ.

    ReplyDelete

Post a Comment

Popular posts from this blog

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್